ಅಮೆರಿಕಾದಲ್ಲಿ ಮನತಣಿಸಿದ ಹೇಮಂತ ಗಾನ

ಜನವರಿ 22, ಶನಿವಾರದಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಮ್ನಲ್ಲಿ ನಡೆದ ಈ ಗಾನ ಸಂಜೆಗೆ ನೂರಾರು ಹೊರನಾಡ ಕನ್ನಡಿಗರು ತಮ್ಮ ಪರಿವಾರ ಸಮೇತ ತೀವ್ರ ಚಳಿಯಲ್ಲೂ (-20 ಡಿಗ್ರಿ ಸೆಲ್ಸಿಯಸ್) ಉತ್ಸಾಹದಿಂದ ಭಾಗವಹಿಸಿದ್ದು ನೋಡಿದರೆ ಕನ್ನಡದ ಅಭಿಮಾನ ಎದ್ದು ಕಾಣುತ್ತಿತ್ತು!
ಯಶವಂತ್ ಗಡ್ಡಿಯವರು ಹೇಮಂತ ಗಾನದ ಬಗ್ಗೆ ವಿವರಣೆ ಕೊಡುತ್ತ ಎಲ್ಲರನ್ನು ಸ್ವಾಗತಿಸಿದ ಮೇಲೆ.. ಶ್ರುತಿ ನಾಗರಾಜ್ ಅವರು ಹಾಡಿದ ಕನ್ನಡ ಭಕ್ತಿ ಗೀತೆಯೊಂದಿಗೆ ಈ ಗಾನ ಸಂಜೆ ಸರಿಯಾಗಿ 5 ಗಂಟೆಗೆ ಪ್ರಾರಂಭವಾಯಿತು. ನಂತರ ಸಮೂಹ ಗಾನ "ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ" ಕೇಳಿಬರುತ್ತಿದ್ದಂತೆ ಸಭಿಕರೆಲ್ಲ ಎದ್ದು ನಿಂತು ತಾವೂ ಹಾಡತೊಡಗಿದರು. [ಚಿತ್ರಪಟ ನೋಡಿರಿ]
ಈ ಬಾರಿಯ ವಿಶೇಷವೇನೆಂದರೆ.. ಹಾಡು ಹೇಳಲು ಮಕ್ಕಳಿಗೂ ಹಾಗೂ ದೊಡ್ಡವರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದು. ಮಕ್ಕಳ ಹಾಡು ಆದಮೇಲೆ ದೊಡ್ಡವರ ಹಾಡು.. ಹೀಗೆ ಸರಿಸಮನಾಗಿ ನಡೆದ ಈ ಸಮಾರಂಭದಲ್ಲಿ ಮಕ್ಕಳೂ ನಾವೇನೂ ಕಡಿಮಯಿಲ್ಲ ಎಂಬಂತೆ ಅಚ್ಚ ಕನ್ನಡದಲ್ಲಿ ಶುಶ್ರಾವ್ಯವಾಗಿ ಹಾಡಿದ್ದು ಎಲ್ಲರ ಮನಸೆಳೆಯಿತು.
6ರ ಪೋರ ಮಾ| ಕಶ್ಯಪ್ ಹಾಡಿದ (ಬಾಲನಟ ಪುನೀತ್ ರಾಜಕುಮಾರ್ ಅವರ) "ಕಾಣದಂತೆ ಮಾಯವಾದನು... ನಮ್ಮ ಶಿವ ಕೈಯ ಕೊಟ್ಟು ಓಡಿಹೋದನು" ನಂತರ 3 ವರ್ಷದ ಮಾ| ಅನಿಕೇತ್ (ಈಗಿನ ಪವರ್ ಸ್ಟಾರ್ ಪುನೀತ್ ರವರ ) "ಶಿವ ಅಂತಾ ಹೋಗುತ್ತಿದ್ದೆ ರೋಡಿನಲಿ... ಮೈ ತುಂಬಾ ಸಾಲ ಇತ್ತು ಲೈಫಿನಲಿ... ಅರ್ಧ ಟ್ಯಾಂಕು ಪೆಟ್ರೋಲ್ ಇತ್ತು ಬೈಕಿನಲಿ" ಅಂತ ಹಾಡತೊಡಗಿದಾಗ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂತೋಷಪಟ್ಟರು.
ಹೀಗೆ ಸಾಲು ಸಾಲಾಗಿ ಹಳೆಯ ಹಾಗು ಹೊಸ ಕನ್ನಡ ಸಿನೆಮಾ ಗೀತೆಗಳ ಜೊತೆಗೆ ಮಲ್ಲಿ ಸಣ್ಣಪ್ಪನವರಿಂದ ಹನುಮಂತನ ಮೇಲಿನ ಭಕ್ತಿಗೀತೆ, ಕನ್ನಡ ಭಾಷೆಗೆ ಅನುವಾದಮಾಡಿದ ಎಆರ್ ರೆಹಮಾನ್ ರ ಸಮೂಹ ಗಾನ "ಜೈ ಹೋ", ಪ್ರದೀಪರಿಂದ ಡಾ. ರಾಜ್ ರವರ "ಬೆಳ್ಳಿ ಮೂಡಿತೋ ಕೋಳಿ ಕೂಗಿತೊ", ಶ್ರುತಿ ನಾಗರಾಜ್ ಅವರಿಂದ ಅಮೃತವರ್ಷಿಣಿಯ "ತುಂತುರು".. ನಂತರ ಡ್ಯುಯೆಟ್ ಹಾಡುಗಳ ಸರದಿ .. ವಿಜಯ-ಶಿವಕುಮಾರ್, ಶ್ರೀವಿದ್ಯಾ-ಪ್ರಶಾಂತ್, ಸೌಮ್ಯ-ಸುಂದರೇಶ್, ಅನಿತಾ - ಕೃಷ್ಣಮೂರ್ತಿ, ಪ್ರಮೀಳ-ರಾಜೇಶ್, ಆಶಾ-ಯಶವಂತ್... ಡ್ಯುಯೆಟ್ ಹಾಡುಗಳನ್ನು ಹಾಡಿದ್ದು ಎಲ್ಲರ ಮನಸೆಳೆದವು!
ಹೀಗೆ ಸರಿಸುಮಾರು 4 ಗಂಟೆಗಳ ತನಕ ನಡೆದ ಈ ಗಾನ ಸಂಜೆ ಎಲ್ಲರ ಕಿವಿ, ಮನ ತಣಿಸಿದ್ದಲ್ಲದೆ ಎಲ್ಲರಲ್ಲೂ ಗುಪ್ತವಾಗಿ ಅಡಗಿದ್ದ ಹಾಡುವ ಕಲೆಯನ್ನು ಹೊರಹೊಮ್ಮಿಸಿದ್ದಂತು ಅಕ್ಷರಶ: ನಿಜ. ಈ ಸವಿಯಾದ ಸಂಗೀತ ಸಂಜೆಯ ಜೊತೆಗೆ ರುಚಿಯಾದ ಊಟ ಮಾಡಿ ಹೊಯ್ಸಳ ಕನ್ನಡ ಕೂಟದವರಿಗೆ ಧನ್ಯವಾದಗಳನ್ನು ಹೇಳಿ ಮೆಲ್ಲಗೆ ಮನದಲ್ಲೇ "ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು" ಅಂತ ಹಾಡುತ್ತ ಹೊರಟಾಗ ಹತ್ತರ ಮೇಲಾಗಿತ್ತು!











Click it and Unblock the Notifications