• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲಿ ನಗೆ ಮಿಂಚು ಗುಡುಗು ಬಾಂಬು

By * ಸುರೇಶ ಎಚ್.ಸಿ., ಸಿಂಗಪುರ
|
Suresh HC, Singapore
ಹಬ್ಬಗಳ ನಿಮಿತ್ತ ಸದ್ಯ ಸರ್ಕಾರೀ ರಜೆಗಳಿರುವ ಕರ್ನಾಟಕದಲ್ಲಿ ಸಿಹಿ ತಿಂಡಿ ತಿನ್ನದವರು ಕಡಿಮೆ. ಆದರೆ ಅದೇ ಸಿಹಿಯನ್ನು ಸಿಂಗಪುರದಲ್ಲಿ ತಿನ್ನಲು ನಾವು ಒಂದೋ ಮನೆಯಲ್ಲಿ ಮಾಡಬೇಕು ಅಥವಾ ಭಾರತೀಯ ಉಪಾಹಾರ ಮಂದಿರಕ್ಕೆ ಹೋಗಿ ಅಲ್ಲಿ ಸಿಕ್ಕಿದ್ದನ್ನು ತಿಂದು ತೃಪ್ತಿಪಡಬೇಕು! ಹೀಗಿರುವಾಗ ಕರ್ನಾಟಕದ ಏಳು ರೀತಿಯ ಸಿಹಿ ತಿಂಡಿಗಳನ್ನು ಒಂದೇ ಡಬ್ಬದಲ್ಲಿ ಹಾಕಿ, ವಿಮಾನದ ಮೂಲಕ ತರಿಸಿದರೆ, ಇಲ್ಲ, ಬೇಡ ಎನ್ನಲಾದೀತೇ?

ಭಾರತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿಂಗಪುರದ ಕನ್ನಡಿಗರನ್ನು ಹಾಸ್ಯದ ಹೊಳೆಯಲ್ಲಿ ಮುಳುಗಿಸಲು ಕನ್ನಡ ಸಂಘ(ಸಿಂಗಪುರ)ವು ಕರ್ನಾಟಕದಿಂದ "ಹಾ! ಸಿಹಿ" ಕವಿಗಳನ್ನು, ಅದೇರೀ - ಹಾಸ್ಯದ ಮಾತಿನ ಮಲ್ಲರನ್ನು ಆಹ್ವಾನಿಸಿತ್ತು. ಆಗಸ್ಟ್ 15ರಂದು ನಮ್ಮನ್ನು ನಗಿಸಲು ಸಿಂಗಪುರ್ ಪಾಲಿಟೆಕ್ನಿಕ್ ಸಭಾಂಗಣಕ್ಕೆ ಬಂದವರು ಕರ್ನಾಟಕದ ಖ್ಯಾತ ಹಾಸ್ಯ ಕಲಾಕಾರರಾದ ಮುಖ್ಯಮಂತ್ರಿ ಚಂದ್ರು, ರಿಚರ್ಡ್ ಲೂಯಿಸ್, ಮೈಸೂರ್ ಆನಂದ್, ಕಿರ್ಲೋಸ್ಕರ್ ಸತ್ಯ, ಬಸವರಾಜ ಮಹಾಮನಿ, ಗುಂಡೂರಾವ್ ವೈ.ವಿ. ಹಾಗೂ ಅಸಾದುಲ್ಲಾ ಬೇಗ್.

ಸಿಂಗಪುರದ ಕನ್ನಡಿಗರಿಗೆ ಹಾಸ್ಯದ ಕಾರ್ಯಕ್ರಮಗಳು ಏನೂ ಹೊಸತಲ್ಲ. ಕಳೆದ 3 ವರ್ಷಗಳಲ್ಲಿ ವರ್ಷಕ್ಕೊಂದು ಹಾಸ್ಯೋತ್ಸವ ನಡೆಯುತ್ತಿದೆ. ಒತ್ತಡದ, ಸ್ಪರ್ಧಾತ್ಮಕ ವಾತಾವರಣದ ನಡುವೆ ಇರುವ ಸಿಂಗನ್ನಡಿಗರು ಈ ರೀತಿಯ ಹಾಸ್ಯ ಪ್ರಧಾನ ಕಾರ್ಯಕ್ರಮಗಳಿಗೆ ಪ್ರತೀ ಬಾರಿಯೂ 400ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಬಾರಿಯ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಹಾಸ್ಯ ಕಲಾಕಾರರನ್ನು ಕಲೆ ಹಾಕಿ ಇಡೀ ದಿನ ಹಾಸ್ಯದ ಹೊಳೆ ಹರಿಸಿದ್ದು.

ಕಾರ್ಯಕ್ರಮವು ಸಂಘದ ಅಧ್ಯಕ್ಷ ವಿಜಯಕುಮಾರ್ ಅವರ ಸ್ವಾಗತ ಭಾಷಣದಿಂದ ಹಾಗೂ ಕಲಾವಿದರ ಕಿರುಪರಿಚಯದಿಂದ ಆರಂಭವಾಯಿತು. ಮುಖ್ಯ ಅತಿಥಿಗಳಾದ ಲೇಖಕಿ ಹಾಗೂ ಸಮಾಜ ಸೇವಕಿ ಮಾಲತಿ ಪಟ್ಟಣಶೆಟ್ಟಿ ಅವರು ಕನ್ನಡ ಸಂಘ (ಸಿಂಗಪುರ)ಕ್ಕೆ ಸೇವೆ ಸಲ್ಲಿಸಿದ ಎಲ್ಲಾ ಮಾಜಿ ಪದಾಧಿಕಾರಿಗಳನ್ನೂ ಅಭಿನಂದಿಸಿ, "ದೇಶ ಹಾಗೂ ಭಾಷೆಯ ರಕ್ಷಣೆ ಸ್ವಾತಂತ್ರ್ಯ ಭಾರತದ ಪ್ರಜೆಗಳ ಕರ್ತವ್ಯ" ಎಂದು ನೆನಪಿಸಿದರು. ನಂತರ ಸಂಘದ ಖಜಾಂಚಿ ವಿಜಯರಂಗ ಅವರು ವಿವಿಧ ದೇಶಗಳ ರಾಷ್ಟ್ರಗೀತೆಗಳ ಇತಿಹಾಸದ ಕಿರುಮಾಹಿತಿ ನೀಡಿದರು.

ನಗು ನಗೂ : ಹಾಸ್ಯ ಯಾರಿಗೆ ಬೇಡ ಸ್ವಾಮಿ? ಎಲ್ಲರಿಗೂ ಬೇಕು. ಆದರೆ ತಮ್ಮ ಮೇಲೆ ಮಾತ್ರ ಬೇಡ, ಬೇರೆಯವರ ಮೇಲೆ ಮಾಡಿದರೆ ಚೆನ್ನಾಗಿರುತ್ತೆ ಅಲ್ವೆ? ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅವರಿವರರ ಮೇಲೆ ಆಡಿ ನಕ್ಕರೆ ಈ ಕಲಾವಿದರು ಬಹುಮಟ್ಟಿಗೆ ತಮ್ಮ ಮೇಲೇ ಹಾಸ್ಯ ಮಾಡಿಕೊಂಡು ನಕ್ಕು, ನಗಿಸುತ್ತಾರೆ. ವೈ.ವಿ.ಗುಂಡೂರಾವ್ ಅವರ ಸೂತ್ರಧಾರಣೆಯಲ್ಲಿ ಗಣೇಶ ವಂದನೆಯ ಸಮೂಹಗಾನದೊಂದಿಗೆ ಹಾಸ್ಯದ ಹೊಳೆ ಹರಿಯಲು ಶುರುವಾಯಿತು.

ಮೊದಲಿಗೆ ಬಂದ "ಕಿರ್ಲೋಸ್ಕರ್ ಸತ್ಯ" ಎಂದೇ ಪ್ರಖ್ಯಾತರಾಗಿರುವ ಸತ್ಯನಾರಾಯಣ ರಾವ್ ಅಚ್ಯುತರಾವ್ ಅವರು "ಹೊಸ ಬೆಳಕೂ ಮೂಡುತಿದೇ.." ಹಾಡಿನ ಅಣಕು "ಹೊಸ ಬ್ಲೇಡೂ..ಕೆರೆಯುತಿದೆ.."ಯನ್ನು ಸೊಗಸಾಗಿ ಹಾಡಿ, ನಟಿಸಿ, ನಗಿಸಿದರು. ನಂತರ ಬಂದ ರಿಚರ್ಡ್ ಲೂಯಿಸ್‍ರವರು ತಾವು ತಮ್ಮ ತಂದೆ ಬದುಕಿದ್ದಾಗ 60 ಮಾರ್ಕ್ಸ್ ತೆಗೆಯಲಾಗದಿದ್ದರೂ ನಂತರ ಯಾವಾಗಲೂ 60, 90ನ್ನೇ (ಅದೇ, ಪೆಗ್ಗು ಲೆಕ್ಕಾ ರೀ!) ತೆಗೆದುಕೊಳ್ಳುತ್ತಿದ್ದೇನೆಂದು ತಿಳಿಸಿದರು! ರಾಮಾಯಣದ ವಾಲಿ ಹೇಗೆ ಕಲಿಯುಗದ ವಾಲಿ ಬಾಲ್ ಆದನೆಂದು, ಎಲ್ಲವನ್ನೂ ರಾಮಾಯಣಕ್ಕೆ ಜೋಡಿಸುವ "ಲಿಂಕ್ ನರಸಿಂಹಯ್ಯ"ನ ಕಥೆಯನ್ನೂ ವಿವರಿಸಿದರು.

ಗ್ಯಾಲರಿ : ಸಿಂಗಪುರದಲ್ಲಿ ಹಾಸ್ಯದ ಹೊಳೆ ಹರಿಸಿದ ಕಲಾವಿದರು
ಬಸವರಾಜ ಮಹಾಮನಿಯವರು ಉತ್ತರ ಕರ್ನಾಟಕ ಶೈಲಿಯಲ್ಲಿ ಜೋಕ್ಸ್ ಇಳಿಸಲಿಕ್ಕೆ ಹತ್ತಿದ್ರು! ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಲು ಶುರುಮಾಡುವ ಮೊದಲೇ ಸುಧೀರ್ಘ ಕರತಾಡನ ಪಡೆದರು. ತಮ್ಮ ತೆಳು ದೇಹದ ಬಗ್ಗೆ ಹಾಸ್ಯ ಮಾಡಿಕೊಂಡ ಬಸವರಾಜ ಮಹಾಮನಿಯವರು ಶುರುಮಾಡಿದ "ರಾಜಕಾರಣಿಗಳ ಅಸಂಬದ್ಧ ಮಾತಿನ ಅಭಾಸ"ದ ಹಾಸ್ಯವನ್ನು ಮುಖ್ಯಮಂತ್ರಿ ಚಂದ್ರು ಮುಂದುವರೆಸಿ, ಧಾರವಾಡ ಹಾಗೂ ಮೈಸೂರು ಕನ್ನಡ ಭಾಷೆಯ ಪದಗಳ ಬಳಕೆ ಬೇರೆಯವರಿಗೆ ಹೇಗೆ "ಹಾಸ್ಯಾಸ್ಪದವಾಗಿ ಕಾಣುತ್ತದೆ" - ಕ್ಷಮಿಸಿ, ಕೇಳುತ್ತದೆ ಎಂದು ಸೊಗಸಾದ ಉದಾಹರಣೆಗಳ ಮೂಲಕ ವರ್ಣಿಸಿದರು. ಶಾಯರಿ ದೊರೆ ಅಸಾದುಲ್ಲಾ ಬೇಗ್ ಅವರು ಕನ್ನಡ, ಉರ್ದು ಹಾಗೂ ಹಿಂದಿಯಲ್ಲಿ ಸೊಗಸಾಗಿ ಶಾಯರಿ ಹಾಡಿದರು. ಚಲನಚಿತ್ರನಟನ ಶೈಲಿಯಲ್ಲಿ ಆಗಮಿಸಿದ ಮೈಸೂರ್ ಆನಂದ್ ಅವರು ತಮ್ಮ ಹಾವ, ಭಾವ, ಹಾಡು, ನರ್ತನದ ಮೂಲಕ ಕನ್ನಡ ಚಲನ ಚಿತ್ರರಂಗದ ಅಂದು, ಇಂದು ಹಾಗೂ ಮುಂದನ್ನು ಸೊಗಸಾಗಿ ಅಭಿನಯಿಸಿದರು. ಬೆಳಗಿನಿಂದ ಸಂಜೆಯವರೆಗೆ ನಿಂತು, ಧೂಳು ಕುಡಿದು ಕಾರ್ಯ ಮಾಡುವ ಸಂಚಾರೀ ಪೋಲೀಸರ ದೈನಂದಿನ ದಯನೀಯ ಸ್ಥಿತಿಯನ್ನು ಹಾಸ್ಯದ ಮೂಲಕ ವಿವರಿಸಿದರು. ಇಲ್ಲಿಗೆ ಹಾಸ್ಯದ ಹೊಳೆಯ ಮೊದಲ ಇನ್ನಿಂಗ್ಸ್ ಮುಗಿದಿತ್ತು.

ಸೆಕೆಂಡ್ ಇನ್ನಿಂಗ್ಸ್ : ಕಾರ್ಯಕ್ರಮದ ಎರಡನೇ ಅಂಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ದೀಪ ಬೆಳಗಿಸಿ, 7ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಲಾಂಛನ ಅನಾವರಣ ಮಾಡಿದರು. ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಬೇಕಾದ, ಹೊರದೇಶದಲ್ಲಿ ಕನ್ನಡವನ್ನು ಹರಡಿ ಬೆಳೆಸಬೇಕಾದ ನಮ್ಮ ಕರ್ತವ್ಯವನ್ನು ಮನಮುಟ್ಟುವಂತೆ ತಿಳಿಸಿದರು. ಬರೇ ಮನರಂಜನೆ, ಆಡಂಬರಕ್ಕಷ್ಟೇ ಪ್ರಾಮುಖ್ಯತೆ ಕೊಡದೆ, "15 ದಿನಕ್ಕೊಂದರಂತೆ ನಶಿಸುತ್ತಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡ ಸೇರಿಕೊಳ್ಳದಂತೆ ನಾವೆಲ್ಲ ಶ್ರಮಿಸಬೇಕು" ಎಂದು ಕರೆಯಿತ್ತರು.

ಸರಿ. ಮತ್ತೆ ಮುಂದುವರೆದ ಹಾಸ್ಯದ ಹೊಳೆಯಲ್ಲಿ, ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿರುವ, "ಹರಟೆ" ಎಂಬ ಟಿ.ವಿ.ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಖ್ಯಾತರಾದ ಗುಂಡೂರಾವ್ ಅವರು ಸಾಫ್ಟ್ ವೇರ್ ಇಂಜಿನಿಯರನ್ನು ತರಾಟೆಗೆ, ಅಂದರೆ ತಮಾಷೆಗೆ ತೆಗೆದುಕೊಂಡರು. ಎಲ್ಲರೂ ಸಾಫ್ಟ್ ವೇರ್ ಅಥವಾ ಹಾರ್ಡ್ ವೇರ್ ನಲ್ಲಿರಬೇಕು, ಇಲ್ಲವಾದರೆ ನಾವು "ನೋ-ವೇರ್" ಆಗುತ್ತೇವೆಂದ ಗುಂಡೂರಾವ್, ಮದುವೆಯ ಮೇಲೆ, "ನಾಯಿ ಇದೆ ಎಚ್ಚರಿಕೆ" ಫಲಕದ ಮೇಲೆ, ಸಂಗೀತಗಾರರ ಮೇಲೆ, ಕುಡಿಯುವ ಕಾಫಿಯ ಮೇಲೆ, ಬ್ಯಾಂಕ್ ನ "ನಗದು" ವಿಭಾಗದಲ್ಲಿ "ನಗದಿರುವ" ಅಧಿಕಾರಿಗಳ ಮೇಲೆ, ಗೋಡೆಗೆ ಹೊಡೆದ ಮೇಲೆ ರಾಮಾಯಣದ ಸಾರವನ್ನು ಅರೆದು ಕುಡಿದ ಕಾರ್ಟೂನ್ ಇಲಿ "ವಾಲ್ -ಮಿಕಿ"ಯ ಮೇಲೆ ಕೂಡ ಹಾಸ್ಯವನ್ನು ಚೆಲ್ಲಿದರಲ್ಲದೇ ಭಾಷಾನುವಾದದ ಅಭಾಸವನ್ನು ನವರಾತ್ರಿ (ನೈನ್ ನೈಟ್ಸ್) ಮತ್ತಿತರ ಉದಾಹರಣೆಗಳ ಮೂಲಕ ವಿವರಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಸಾರಿ, ಮುಳುಗಿಸಿದರು.

ಚಲನಚಿತ್ರ ಹಾಗೂ ಟಿ.ವಿ. ಧಾರಾವಾಹಿಗಳಲ್ಲಿ ನಟಿಸುತ್ತಿರುವ ಕಿರ್ಲೋಸ್ಕರ್ ಸತ್ಯ ಅವರು ರಾಜರತ್ನಂ ಅವರ ಶಿಶುಗೀತೆ "ನಾಯಿ ಮರಿ ನಾಯಿ ಮರಿ.. ತಿಂಡಿ ಬೇಕೆ"ಯನ್ನು ಕರ್ನಾಟಕ ಶಾಸ್ತ್ರೀಯ ಶೈಲಿ, ಹಿಂದೂಸ್ಥಾನಿ, ಪಾಶ್ಚಾತ್ಯ ಹಾಗೂ ಕಂಸಾಳೆ ಶೈಲಿಯಲ್ಲಿ ಸೊಗಸಾಗಿ ಹಾಡಿ, ಅಭಿನಯಿಸಿದರು. ಚಲನಚಿತ್ರಗಳಿಗೆ ಸಂಭಾಷಣೆ ಬರೆದು ಹಾಗೂ "ಹರಟೆ" ಎಂಬ ಟಿ.ವಿ.ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪ್ರಖ್ಯಾತರಾದ ಲೂಯಿಸ್ ಅವರು ತಮ್ಮ ಮದುವೆಯ ಬಗ್ಗೆ ಹಾಸ್ಯ ಮಾಡಿದರೆ, ಬಿ.ಕಾಂ. ಓದಿ ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿರುವ, ಶಿವಮೊಗ್ಗದ ಅಸಾದುಲ್ಲಾ ಬೇಗ್ ಅವರು ತಮ್ಮ ಶಾಯರಿಯನ್ನು ಮುಂದುವರೆಸಿ "ನನ್ನಿಂದಾದ ತಪ್ಪು ನಿನ್ನಿಂದಾಗದಿರಲಿ" ಎಂದು ವರದಕ್ಷಿಣೆಯೆಂಬ ಪಿಡುಗಿನ ವಿರುದ್ಧ ಹೋರಾಡಲು ಸಾಮಾಜಿಕ ಸಂದೇಶ ನೀಡಿದರು.

ಪಂದ್ಯದ ಕೊನೆಯ ಓವರಿನಲ್ಲಿ ಆಡಲು ಬಂದ "ಮೈಸೂರ್ ಆನಂದ್" ಎಂದೇ ಪ್ರಸಿದ್ಧಿ ಪಡೆದ ಮೈಸೂರಿನ ಆನಂದ ನಾರಾಯಣರಾವ್ ಅವರು ಸಿಟಿ ಬಸ್ಸಿನೊಳಗಿನ ಕನ್ನಡವನ್ನು ವರ್ಣಿಸಿದ್ದಲ್ಲದೇ ಕ್ರಿಕೆಟ್ ಕಾಮೆಂಟರಿಯನ್ನು ಭಾರತೀಯ ಇಂಗ್ಲಿಷ್, ಪಾಶ್ಚಾತ್ಯ ಇಂಗ್ಲಿಷ್, ಗುರುರಾಜುಲು ನಾಯ್ಡು ಅವರ ಹರಿ ಕಥೆ ಶೈಲಿ, ಧಾರವಾಡ ಕನ್ನಡ, ಮೈಸೂರು ಕನ್ನಡ, ಮಂಗಳೂರು ಕನ್ನಡ, ಪೌರಾಣಿಕ ಚಿತ್ರ ಸಂಭಾಷಣೆಯ ಕನ್ನಡ, ಕಂಸಾಳೆ ಶೈಲಿ, ಕುಡುಕರ ಶೈಲಿ ಹಾಗೂ ಟಿ.ವಿ. ಕಲಾವಿದರ ಶೈಲಿಯಲ್ಲಿ ರಸವತ್ತಾಗಿ ವಿವರಿಸಿ, ಶಿಳ್ಳೆ ಗಿಟ್ಟಿಸಿದರು. ಗಂಗಾವತಿ ಪ್ರಾಣೇಶ್ ಅವರನ್ನು ತಮ್ಮ ಗುರುಗಳೆಂದು ಪರಿಗಣಿಸುವ, ಗುಲ್ಬರ್ಗದ ಮಹಾಮನಿಯವರು "ಸತ್ತ ಮೇಲೆ ನಾಲ್ಕು ಮಂದಿಗೆ ಭಾರವಾಗಬಾರದೆಂಬ ಉದ್ದೇಶದಿಂದ ನಾನು ದಪ್ಪವಾಗಿಲ್ಲ" ಎಂದು ತಮ್ಮ ಸಣಕಲ ದೇಹದ ಗುಟ್ಟನ್ನು ರಟ್ಟುಮಾಡಿದ್ದಲ್ಲದೇ, “ಗ್ಯಾರೇಜ್" ಮತ್ತು “ಮ್ಯಾರೇಜ್"ಗೆ ಇರುವ ವ್ಯತ್ಯಾಸವನ್ನು ತಮ್ಮ ಭಾಷೆಯ ಸೊಗಡಿನ ಮೂಲಕ ರವಾನಿಸಿದರು.

ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಅವರ ವಂದನಾರ್ಪಣೆ ಹಾಗೂ ಸಂಘದ ಹಿರಿಯ ಸದಸ್ಯರಾದ ವೆಂಕಟೇಶ್ ಭೈರಪ್ಪ ಅವರಿಂದ ಕಲಾವಿದರಿಗೆ ಸನ್ಮಾನದ ನೆರವೇರಿತು. ಸಂಘದ ಉಪಾಧ್ಯಕ್ಷ ರಾಮದಾಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಮುಂದುವರೆದ ಕಾರ್ಯಕ್ರಮದ ಕೊನೆಯ ಅಂಗದಲ್ಲಿ ಎಲ್ಲಾ ಹಾಸ್ಯ ಕಲಾವಿದರೂ ಸೇರಿ ಕಿರು-ಪ್ರಹಸನದ ಮೂಲಕ "ಭಾಗ್ಯದಾ ಲಕ್ಷ್ಮೀ ಬಾರಮ್ಮಾ" ಹಾಡನ್ನು ವಿವಿಧ ಅಣಕುಗಳಲ್ಲಿ ಹಾಡಿದರು. ಇದರಲ್ಲಿ ಕಲಾವಿದರ ಉತ್ಸಾಹ ಕಡಿಮೆಯಾದಂತೆ ಕಂಡರೂ ಸಭಿಕರ ಉತ್ಸಾಹ ಕಡಿಮೆಯಾಗಿರಲಿಲ್ಲ.

ಏಳು ಮಂದಿ ಕಲಾವಿದರನ್ನು ಒಟ್ಟು ಹಾಕಿ ಒಳ್ಳೆಯ ಕಾರ್ಯಕ್ರಮವನ್ನು ನೀಡುವ ಪ್ರಯತ್ನ ಮಾಡಿದ ಸಂಘದ ಪ್ರಯತ್ನ ಶ್ಲಾಘನೀಯ. ಹಿನ್ನೆಲೆ ಸಂಗೀತದ ಧ್ವನಿಸುರುಳಿ, ಸ್ಥಿರ ಚಿತ್ರ ಹಾಗೂ ಕಲಾಕಾರರ ಹಾಡು, ಮಾತು, ನಟನೆಯ ಸಮ್ಮಿಶ್ರಣ ಚೇತೋಹಾರಿಯಾಗಿತ್ತು. ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಅಸಾದುಲ್ಲಾ ಬೇಗ್ ರವರು ಹೇಳಿದಂತೆ ಹಿಂದೂ, ಮುಸ್ಲಿಮ್ ಹಾಗೂ ಕ್ರಿಸ್ಟಿಯನ್ನರ ತ್ರಿವೇಣಿ ಸಂಗಮದಂತಿದ್ದ ಹಾಸ್ಯ ಭಾರತದ ಅನೇಕತೆಯಲ್ಲಿ ಏಕತೆಯ ಪ್ರತೀಕವಾಗಿತ್ತು. ಆದರೆ ತಡವಾಗಿ ಬಂದ ಪ್ರೇಕ್ಷಕರು, ಮುಖ್ಯ ಅತಿಥಿಗಳ ಸುಧೀರ್ಘ ಭಾಷಣ, ಪುನರಾವರ್ತನೆಗೊಂಡ ಹಾಸ್ಯಗಳು, ಈ ಮೊದಲು ಸಿಂಗಪುರಕ್ಕೆ ಬಂದಿದ್ದ ಹಾಸ್ಯ ಕಲಾವಿದರ ಹೊಸತನದ ಕೊರತೆ, ಹೆಂಗಳೆಯರ ಹಾಗೂ ಮದುವೆಯ ಮೇಲೇ ಕೇಂದ್ರೀಕೃತವಾದ ಹಾಸ್ಯಗಳು ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಆಡ್ಡ ನಿಂತವು.

ಮನಸ್ಸಿನಾಳದಲ್ಲಿ "ಸುಧಾ ಬರಗೂರ್, ಪ್ರೊ.ಕೃಷ್ಣೇಗೌಡ, ಮಾಸ್ಟರ್ ಹಿರಣ್ಣಯ್ಯ" ಇವರೆಲ್ಲರೂ ಬಂದಿದ್ದರೆ ಚೆನ್ನಾಗಿರುತ್ತಿತ್ತೆಂದು ಅನಿಸಿತು. ಮುಖ್ಯಮಂತ್ರಿ ಚಂದ್ರು ಹಾಗೂ ಗುಂಡೂರಾವ್ ತಮ್ಮ ವಾಕ್ಚಾತುರ್ಯದಿಂದ ಜನ ಮನ ಸೆಳೆದರೆ; ಮೈಸೂರ್ ಆನಂದ್ ತಮ್ಮ ಧ್ವನಿ ಹಾಗೂ ಅಭಿನಯದಿಂದ ಮನಸೂರೆಗೊಂಡರು. ಅರ್ಥಗರ್ಭಿತ, ಸಾಮಾಜಿಕ ಸಂದೇಶವುಳ್ಳ ಮಾತನಾಡಿ ಶಾಯರಿ ಹಾಡಿದ ಬೇಗ್ ಅವರು ಜನ ಮನ ಗೆದ್ದರು. ರಿಚರ್ಡ್ ಲೂಯಿಸ್ ಅವರ ಹಾಸ್ಯ ನಿರಾಶೆ ಮೂಡಿಸಿತು. ಅದೇ ದಿನ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಿದ್ದರೂ ಅದನ್ನು ನೋಡಿ ಇಲ್ಲಿಗೆ ಬಂದ, ಅಥವಾ ಅದನ್ನು ತಪ್ಪಿಸಿ ಈ ಕಾರ್ಯಕ್ರಮಕ್ಕೆ ಬಂದ ಸಿಂಗನ್ನಡಿಗರ ಅಭಿಮಾನ ಮೆಚ್ಚುವಂತದ್ದು. ಬರೇ ಹಾಸ್ಯದ ಮಾತನ್ನು ನಿರೀಕ್ಷಿಸಿ ಬಂದ ಪ್ರೇಕ್ಷಕರಿಗೆ ಹಾಡು, ಶಾಯರಿ, ಆಣಕು ಹಾಡು, ನಟನೆ, ನರ್ತನ ಅವೆಲ್ಲಾ ಬೋನಸ್. ಒಟ್ಟಿನಲ್ಲಿ "ಹಾಸ್ಯಸಾಗರ"ವಾಗಬಹುದಾಗಿದ್ದ ಕಾರ್ಯಕ್ರಮ "ಹಾಸ್ಯದ ಹೊಳೆ"ಯೆಂಬ ಹೆಸರನ್ನುಳಿಸಿಕೊಂಡಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more