ನ್ಯೂಜೆರ್ಸಿಯ ಬೃಂದಾವನ ಕನ್ನಡಕೂಟದಲ್ಲಿ 'ಸ್ಫೂರ್ತಿ'

2008-10ರ ಸಾಲಿಗೆ ನೂತನ ಅಧ್ಯಕ್ಷರು ಹಾಗು ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಈ ಕೆಳಕಂಡ ಬೃಂದಾವನದ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡರು. ಜೂನ್ 8ರಂದು ಉಷ ಪ್ರಸನ್ನ ಕುಮಾರ್ ಅವರ ಮನೆ "ಸಂತೃಪ್ತಿ"ಯಲ್ಲಿ ನಡೆದ ಚೊಚ್ಚಲ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯ ರಚನೆ ಆಯಿತು. ಬೃಂದಾವನ ಕನ್ನಡ ಕೂಟದ ಕಾರ್ಯಕಾರಿ ಮಂಡಳಿ ಇಂತಿದೆ:
ಉಷ ಪ್ರಸನ್ನಕುಮಾರ್ (ಅಧ್ಯಕ್ಷೆ) , ಡಾ. ರಾಮ್ ಬೆಂಗಳೂರ್ (ಉಪಾಧ್ಯಕ್ಷ), ಮಧು ರಂಗಯ್ಯ (ಕಾರ್ಯದರ್ಶಿ) , ಸೀಮಾ ಮೂರ್ತಿ(ಖಜಾಂಚಿ), ಬೆನ್ ಕಾಂತರಾಜ್ : ನಿರ್ದೇಶಕರು (ಧನ ಸಂಗ್ರಹಣಾ ಸಮಿತಿ) ಸಾಧನ ಶಂಕರ್ (ನಿರ್ದೇಶಕರು, ಅತಿಥ್ಯ ಹಾಗು ಉಪಚಾರ ಸಮಿತಿ), ಸಿಂಹಾದ್ರಿ ಸಂತೆಬೆನ್ನುರ್ (ನಿರ್ದೇಶಕರು, ಸಾಂಸ್ಕೃತಿಕ ಸಮಿತಿ).
ಇದಲ್ಲದೆ ಸಂಸ್ಥೆಯ ಇತರ ಚಟುವಟಿಕೆಗಳಿಗೆ ಅನುವಾಗಲೆಂದು ಈ ಮುಂದೆ ಸೂಚಿಸಿರುವ ಸದಸ್ಯರನ್ನು ಗೌರವಾನ್ವಿತ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು : ಮರ್ಲಿನ್ ಮೆಂಡೋಂಜ, ರಾಘವೇಂದ್ರ ಮೂರ್ತಿ ಹಾಗೂ ಸಂತೋಷ್ ಕುಮಾರ್ ಕಡ್ಲೆಬೇಳೆ.
ಹಬ್ಬ ಚಿತ್ರದ ಒಂದು ಹಾಡಾದ "ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಜೇನಿಲ್ಲ, ಪ್ರೀತಿಯ ಗೂಡು ನಾವೆಲ್ಲ ಬೇರೆಯಾದರೆ ಒಲವಿಲ್ಲ" ಎಂಬ ನುಡಿಯ ಹಿತೋಕ್ತಿಯಲ್ಲಿ ಬಲವಾದ ನಂಬಿಕೆಯಿಟ್ಟಿರುವ ನೂತನ ಅಧ್ಯಕ್ಷೆ ಉಷ ಪ್ರಸನ್ನ, ಹತ್ತು ಜನಗಳ ಕಾರ್ಯಕಾರಿ ಸಮಿತಿಯನ್ನು "ಸ್ಫೂರ್ತಿ" ತಂಡ ಎಂದು ಕರೆಯಲು ಇಚ್ಚಿಸಿ, ಇನ್ನೆರಡು ವರ್ಷ ನಡೆಯುವ ಎಲ್ಲ ಚಟುವಟಿಕೆಗಳೂ ಈ ಹೆಸರೇ ಸ್ಫೂರ್ತಿಯ ಸೆಲೆಯಾಗಲಿದೆ ಎಂದರು. ಬೃಂದಾವನದ ನೂತನ ಆಡಳಿತದ ಅವಧಿಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು "ಸ್ಫೂರ್ತಿ" ತಂಡದ ಸದಸ್ಯರು ಸರ್ವರೊಂದಿಗೆ ಸವಿಯಾದ ಮಾತುಗಳನ್ನಾಡುತ್ತ, ಸಿಹಿಯಾದ ಊಟವ ಬಡಿಸುತ್ತ, ಸೊಗಸಾದ ಸಂಸಾರ ಸಮೇತ ಆನಂದಿಸುವಂತಹ ಮನೋರಂಜಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತ "ಸುಮಧುರ ಸ್ನೇಹ ಸಮ್ಮಿಲನ" ನಮ್ಮಿ ಬೃಂದಾವನದ ಕೀರ್ತಿ ಪತಾಕೆಯನ್ನು "ಸ್ಫೂರ್ತಿ"ಯಿಂದ ಇನ್ನಷ್ಟು ಉತ್ತುಂಗಕ್ಕೆ ಹಾರಿಸಲಿದ್ದಾರೆ ಎಂದು ನುಡಿದರು.
ಇದೆ ಸಂದರ್ಭದಲ್ಲಿ "ಸ್ಫೂರ್ತಿ" ತಂಡದವರು, 2006-08ರಲ್ಲಿ ವಸಂತ ಶಶಿ ನೇತೃತ್ವದಲ್ಲಿ ಹಿಂದಿನ ಕಾರ್ಯಕಾರಿ ಸಮಿತಿಯವರು ಬೃಂದಾವನದ ಏಳಿಗಿಗೆ ಅವಿರತವಾಗಿ ದುಡಿದು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಿದ್ದಕ್ಕಾಗಿ ಹೃತ್ಪೂರ್ವಕವಾಗಿ ಅಭಿನಂದಿಸಿದರು. ನೂತನ ಕಾರ್ಯಕಾರಿ ಸಮಿತಿಯ ಆಶ್ರಯದಲ್ಲಿ ನಡೆಯುವ ಮೊದಲ ಕಾರ್ಯಕ್ರಮ ಶನಿವಾರ ಆಗಸ್ಟ್ 2ರ "ಬೃಂದಾವನ ವಿಹಾರ". ಇದಾದ ನಂತರ ಭಾನುವಾರ ಸೆಪ್ಟೆಂಬರ್ 14ರಂದು ಗಣೇಶ ಹಬ್ಬದ ಕಾರ್ಯಕ್ರಮದಲ್ಲಿ ಸಾಮೂಹಿಕ ಗಣೇಶ ಪೂಜೆ, ಸಂಸ್ಥೆಯ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಹಾಗೂ ಕರ್ನಾಟಕದಿಂದ ಆಗಮಿಸಲಿರುವ ಕಲಾವಿದರಿಂದ ವಿಶೇಷ ಕಾರ್ಯಕ್ರಮ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಳಿಗೆ ದಟ್ಸ್‌ಕನ್ನಡ ನೋಡುತ್ತಿರಿ, ಓದುತ್ತಿರಿ.
ಮಾಹಿತಿ : ಪ್ರವಾಸ, ನ್ಯೂಜೆರ್ಸಿ (ಪ್ರವಾಸ - ಪ್ರಚಾರ, ವಾರ್ತೆ, ಸಂಪರ್ಕ ಸಮಿತಿ)












Click it and Unblock the Notifications