ಕಿವಿ: ವಿದ್ಯಾಭೂಷಣರ ಕರ್ಣಾನಂದಕರ ಸಂಗೀತ

*ವರದಿ: ಪ್ರಕಾಶ್ ರಾಜರಾವ್, ಆಕ್ಲೆಂಡ್

“ನಮ್ಮೆಲ್ಲರ ಕಂಗಳಲ್ಲಿ ಆನಂದ ಬಾಷ್ಪ, ಕಿವಿಯಲ್ಲಿ ನಿಮ್ಮ ಗಾಯನದ ಗಾನಾಮೃತ ಮತ್ತು ಹೃದಯದಲ್ಲಿ ಭಕ್ತಿಭಾವ ತುಂಬಿದೆ“ ಎಂದು ಎಲ್ಲಾ ಶೋತೃಗಳ ಭಾವನೆಗೆ ದನಿಯಾದರು ಪ್ರೊ.ಎಂ.ಕೆ.ವಾಮನ ಮೂರ್ತಿ. ಮೇ 24 ರ ಶನಿವಾರ ಅಕ್ಲೆಂಡಿನ ಎಪ್ಸಮ್ ಬಡಾವಣೆಯ ನಾರ್ಮನ್ ಇಂಟರ್ ಮೀಡಿಯಟ್ ಶಾಲೆಯ ಸಭಾಂಗಣದಲ್ಲಿ ಭಜನ್ ಸತ್ಸಂಗದವರಿಂದ ಆಯೋಜಿಸಲ್ಪಟ್ಟ ಸಂಗೀತ ಕಲಾನಿಧಿ ಶ್ರೀ ವಿದ್ಯಾಭೂಷಣ ಅವರ ಸಂಗೀತ ಕಛೇರಿಯ ನಂತರ ವಂದನಾರ್ಪಣೆ ಮಾಡುತ್ತಾ ಅವರು ಹೇಳಿದ ಮಾತುಗಳಲ್ಲಿ ಯಾವುದೇ ಉತ್ಪ್ರೇಕ್ಷೆ ಇರಲಿಲ್ಲ.

ಅಕ್ಲೆಂಡ್ ಭಜನ್ ಸತ್ಸಂಗದವರ ಆಹ್ವಾನದ ಮೇರೆಗೆ ಆಗಮಿಸಿದ್ದ ಶ್ರೀ ವಿದ್ಯಾ ಭೂಷಣ ಅವರು ಗಾಯನ ಪ್ರಾರಂಭಿಸುವ ಮೊದಲೇ ಸಭಾಂಗಣದಲ್ಲಿ ಸಂಗೀತಮಯ ವಾತಾವರಣ ತುಂಬಿತ್ತು. ಸುಮಾರು ಮೂರು ಗಂಟೆಗಳ ಕಾಲ ಹಾಡಿದ ಶ್ರೀ ವಿದ್ಯಾ ಭೂಷಣರು ಮತ್ತು ಅವರಿಗೆ ಅತ್ಯಂತ ಸಮರ್ಪಕವಾಗಿ ವಾದ್ಯ ಸಂಗೀತದ ನೆರವು ನೀಡಿದ ಸ್ಥಳೀಯ ಕಲಾವಿದರು ಶೋತೃಗಳಿಗೆ ಮಧುರ ಹಾಗೂ ಭಕ್ತಿಪೂರಿತ ಗಾಯನದ ಅನಿರ್ವಚನೀಯ ಆನಂದವನ್ನುಂಟುಮಾಡಿದರು.

ಮೋಹನ ರಾಗದಲ್ಲಿ “ ಸತತ ಗಣನಾಥ“ ಕೃತಿಯಿಂದ ಪ್ರಾರಂಭ ಮಾಡಿದ ಶ್ರೀ ವಿದ್ಯಾ ಭೂಷಣ ಅವರು ನಂತರ “ ಶಿವ ಶಿವ ಎನರಾದ“[ಪಂತವರಾಳಿ], “ ಕೃಪಯ ಪಾಲಯ“ [ಚಾರುಕೇಶಿ ರಾಗ], “ ಡಂಗೂರ ಸಾರಿದರು“[ ಆರಭಿ], “ ಪಾಲಿಸು ಮುದ್ದು ಶಾರದೆ“ [ ವಾಗಿಧೀಶ್ವರಿ], “ಭಜರೇ ಮಾನಸ“ [ಮೈಸೂರು ವಾಸುದೇವಾಚಾರ್ಯರ ಆಬೇರಿ], “ಪಿಳ್ಳಂಗೋವಿಯ ಚೆಲುವ ಕೃಷ್ಣನ“ [ಮೋಹನ ರಾಗ], “ರಾಧಿಕಾ ಕೃಷ್ಣಾ[ ಜಯ ದೇವ ಅಷ್ಟ ಪದಿ] , “ ನಮ್ಮಮ್ಮ ಶಾರದೇ“ [ಹಂಸ ಧ್ವನಿ], “ ವಚನದಲ್ಲಿ ನಾಮಾಮೃತವ ತುಂಬಿ“ [ಆಭೋಗಿ ರಾಗ], “ ದಯ ಮಾಡೋ ರಂಗಾ“ [ಕಲ್ಯಾಣಿ], “ ಎದ್ದು ಬರುತಾರೇ ನೋಡೇ“ [ಮೋಹನ ರಾಗ], “ಇಂದು ಎನಗೇ ಗೋವಿಂದ “ [ ಭೈರವಿ], ಇವುಗಳಲ್ಲದೆ ಭಾಗ್ಯದಾ ಲಕ್ಷ್ಮೀ ಬಾರಮ್ಮ ಮುಂತಾದ ಜನಪ್ರಿಯ ದೇವರನಾಮಗಳನ್ನು ಹಾಡಿದರು.

ಸಮಯದ ಅಭಾವದಿಂದ ಮಂಗಳ ಹಾಡಿ ಕಾರ್ಯಕ್ರಮ ಮುಕ್ತಾಯಗೊಳಿಸುವುದು ಅನಿವಾರ್ಯವಾದರೂ ಶೋತೃಗಳ ಕೋರಿಕೆ ಬೇಡಿಕೆಗಳು ಮುಗಿಯುವ ಸೂಚನೆಗಳೇ ಕಾಣಲಿಲ್ಲ. ಅವರ ದಿವ್ಯ ಗಾಯನ ಮತ್ತು ತಾವೊಬ್ಬ ಹೆಸರಾಂತ ಗಾಯಕರೆಂಬ ಹೆಮ್ಮೆ ಅಹಂಕಾರಗಳ ಸೋಂಕಿಲ್ಲದೆ ಅವರು ಸ್ಥಳೀಯ ವಾದ್ಯ ಕಲಾವಿದರನ್ನು ಮೆಚ್ಚಿ ಪ್ರೋತ್ಸಾಹಿಸಿದ ರೀತಿ ಅವರ ಮೇಲಿನ ಗೌರವವನ್ನು ನೂರ್ಮಡಿಯಾಗಿಸಿತು.ಆಕ್ಲೆಂಡಿನ ಸ್ವರ ರಾಗ ಸುಧಾ ಸಂಗೀತ ಶಾಲೆಯ ವಿದ್ವಾನ್ ದಿವಾಕರ್ ಅವರು ವೀಣೆ, ವೃತ್ತಿಯಿಂದ ಮನೋವೈದ್ಯರಾದ ಡಾ. ಅಶೋಕ್ ಮಾಲೂರ್ ಅವರು ವಯೋಲಿನ್, ಸುರೇಶ್ ರಾಮಚಂದ್ರನ್ ಅವರು ಮೃದಂಗ, ವಿದ್ವಾನ್ ಬಸಂತ ಮಾಧುರ್ ಅವರು ತಬಲಾ ಹಾಗೂ ಶ್ರೀಮತಿ ರತ್ನಾ ವಾಮನ ಮೂರ್ತಿಯವರು ತಂಬೂರಿಯೊಂದಿಗೆ ಶ್ರೀ ವಿದ್ಯಾ ಭೂಷಣರ ಗಾಯನಕ್ಕೆ ವಾದ್ಯ ಸಂಗೀತದ ಮೆರುಗು ನೀಡಿದರು. ಮೃದಂಗ-ತಬಲಾ ವಾದಕರ “ಜುಗಲ್ ಬಂದಿ“ಸೊಗಸಾಗಿತ್ತು.

ಶ್ರೀ ವಿದ್ಯಾಭೂಷಣರು ಮಾತನಾಡಿ “ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನದಿಂದ ನೀವು ನಡೆಸುತ್ತಿರುವ ಕಾರ್ಯಕ್ರಮಗಳು ಅಭಿನಂದನೀಯವಾದದ್ದು, ಇದನ್ನು ಉಳಿಸಿಕೊಂಡು ಇತರರಲ್ಲಿಯೂ ಬೆಳೆಸಲು ಪ್ರಯತ್ನಪಡಬೇಕು“ ಎಂದು ಮನವಿ ಮಾಡಿದರು. ಕಾರ್ಯಕ್ರಮ ಆಯೋಜಿಸಿದ್ದ ಭಜನ್ ಸತ್ಸಂಗವನ್ನು ಅವರು ವಂದಿಸಿದರು. ಶ್ರೀ ವಿದ್ಯಾ ಭೂಷಣ ಹಾಗೂ ಇತರ ಕಲಾವಿದರಿಗೆ ನ್ಯೂಜಿಲೆಂಡ್ ಕರ್ನಾಟಕ ಸಂಗೀತ ಸಂಸ್ಥೆಯ ಅಧ್ಯಕ್ಷ ಡಾ. ಸೆಲ್ವ ಕುಮಾರ್ ಮತ್ತು ಹಿರಿಯ ಸದಸ್ಯರಾದ ಗುಂಡಣ್ಣ ಮಾಲೂರ್ ಅವರು ಗೌರವ ಕಾಣಿಕೆಗಳನ್ನರ್ಪಿಸಿದರು. ಶ್ರೀಧರ್ ಹೊನ್ನವಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು.


ನ್ಯೂಜಿಲೆಂಡ್ ಕನ್ನಡ ಕೂಟದಲ್ಲಿ ಪ್ರವಚನ.
ದಿನಾಂಕ ಮೇ. 25ರ ಭಾನುವಾರ ಸಂಜೆ ಅಕ್ಲೆಂಡಿನ ಮಹಾತ್ಮಾ ಗಾಂಧೀ ಕೇಂದ್ರದಲ್ಲಿ ಶ್ರೀ ವಿದ್ಯಾ ಭೂಷಣರ ಪ್ರವಚನ ಏರ್ಪಡಿಸಲಾಗಿತ್ತು. ನ್ಯೂಜಿಲೆಂಡ್ ಕನ್ನಡ ಕೂಟ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾಭೂಷಣ ಅವರು ಪ್ರವಚನಕ್ಕಾಗಿ ಆಯ್ದುಕೊಂಡದ್ದು “ಪ್ರಹ್ಲಾದ ವೃತ್ತಾಂತ “. ಮಹಾವಿಷ್ಣುವಿನ ನರಸಿಂಹಾವತಾರದ ಮಹತ್ವವನ್ನು ವರ್ಣಿಸಿ, ಭಗವಂತನಿಗೆ ನಮ್ಮ ಭಕ್ತಿಯಲ್ಲದೇ ಮತ್ತೇನೂ ಬೇಡ, ಪ್ರಹ್ಲಾದನ ಅಚಲ ಭಕ್ತಿಯೇ ಹರಿ ಅವನಿಗೊಲಿಯಲು ಕಾರಣವಾಯಿತು ಎಂದರು.

ಅಹಂಕಾರ ಮಮಕಾರಗಳನ್ನು ಕಿತ್ತೊಗೆದು ಸದ್ಗುಣಗಳನ್ನು ಬೆಳೆಸಿಕೊಂಡರೆ ಮಾತ್ರ ನಿಜ ಭಕ್ತಿ ಮೂಡುತ್ತದೆ. ಇಲ್ಲದಿದ್ದಲ್ಲಿ ಸಾಕ್ಷಾತ್ ಭಗವಂತನೇ ನಿಮಗೆ ದರ್ಶನ ನೀಡಿದರೂ ಭಕ್ತಿ ಬಾರದು ಎಂದ ಅವರು ಅನೇಕ ಧಾರ್ಮಿಕ ಸ್ಥಳಗಳು ವ್ಯಾಪಾರಿ ಕೇಂದ್ರಗಳಾಗುತ್ತಿರುವ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿದರು. “ ನರಸಿಂಹಾವತಾರದ“ ಬಗ್ಗೆ ಸುಂದರ ಕಲ್ಪನೆ ಮೂಡಿಸಿ , ಅನೇಕ ಲೌಕಿಕ ಮತ್ತು ಆಲೌಕಿಕ ವೃತ್ತಾಂತಗಳನ್ನು ಉದಾಹರಿಸಿ “ ಮೋಕ್ಷಕ್ಕಾಗಿ ನೀವು ಸನ್ಯಾಸ ಸ್ವೀಕರಿಸಬೇಕಿಲ್ಲ, ಸಂಸಾರಿಯಾಗಿದ್ದುಕೊಂಡೇ ಉತ್ತಮ ಸಂಸ್ಕಾರ ಪಡೆಯಬಹುದು ಎಂದರು." ನಾನು ಉಪನ್ಯಾಸಕನಲ್ಲ “ ಎಂದು ಪ್ರವಚನ ಆರಂಭಿಸಿದರೂ ಮುಕ್ತಾಯಗೊಳಿಸಿದಾಗ ಅವರ ಮಾತುಗಳಲ್ಲಿದ್ದ ಸರಳತೆ ಮತ್ತು ವ್ಯಕ್ತಿತ್ವದಲ್ಲಿನ ಪ್ರಭುದ್ಧತೆ ಎಲ್ಲರಿಗೂ ಮೋಡಿ ಮಾಡಿತು.

“ಓಂಕಾರೇಶ್ವರ ವಿನಾಯಕ“ ಎಂದು ಸುಶ್ರಾವ್ಯವಾಗಿ ಸ್ಮಿತಾ ಗೌರಿಯವರು ಪ್ರಾರ್ಥನೆ ಹಾಡಿದ ನಂತರ ಕನ್ನಡ ಕೂಟದ ಅಧ್ಯಕ್ಷರಾದ ಬೆಂಗಳೂರು ಪ್ರಭಾಕರ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿದರು. ಹಿರಿಯ ಸದಸ್ಯರಾದ ಪ್ರೊ.ಎಂ.ಕೆ.ವಾಮನ ಮೂರ್ತಿಯವರು ಶ್ರೀ ವಿದ್ಯಾ ಭೂಷಣರಿಗೆ ಕನ್ನಡ ಕೂಟದ ಪರವಾಗಿ ಕಿರು ಕಾಣಿಕೆ ನೀಡಿ ಗೌರವಿಸಿದರು. ಅನೇಕ ಸದಸ್ಯರು ವಿದ್ಯಾಭೂಷಣರ ಪ್ರವಚನದಿಂದ ಪ್ರೇರಿತರಾಗಿ ಅವರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಕನ್ನಡ ಕೂಟದ ಕಾರ್ಯದರ್ಶಿ ಚಕ್ರಪಾಣಿಯವರು ವಂದನಾರ್ಪಣೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+