ಕಿರಾನಾಘರಾನಾ ಸಂಗೀತದಲ್ಲಿ ಮಿಂದೆದ್ದ ಸಂಜೆ

Pt Madhava gudi adn team performingಕಿರಾನಾಘರಾನಾ ಶೈಲಿಯ ಸಂಗೀತ ರಾಯಭಾರಿ ಪಂಡಿತ್ ಮಾಧವ ಗುಡಿ ಮೊನ್ನೆ ಸಿಂಗಪುರಕ್ಕೆ ಆಗಮಿಸಿದ್ದರು. ಯಮನ್, ಪೀಲೂ, ಅಭಂಗ್, ಮೀರಾಭಜನ್, ಭೈರವಿ ರಾಗಗಳಲ್ಲಿ ಮಿಂದೇಳುವ ಸಂತಸ ಸಿಂಗಪುರದ ಶಾಸ್ತ್ರೀಯ ಸಂಗೀತ ಪ್ರೇಮಿಗಳ ಪಾಲಾಯಿತು.

ವರದಿ: ವಾಣಿ ರಾಮದಾಸ್

ಧಾರವಾಡ ಎಂದಾಕ್ಷಣ ಛಟ್ಟನೆ ಫೇಡೆಯ ಸಿಹಿ ನೆನೆದು ಬಾಯಿ ಚಪ್ಪರಿಸಿದಂತೆ, ಸಾಧನಕೇರಿಯ ಸಾಹಿತ್ಯ ಸಂಪತ್ತಿನ ಖನಿ ಬೇಂದ್ರೆ, ಹೆಸರಾಂತ ನಟ, ನಾಟಕಕಾರ ಗಿರೀಶ್ ಕಾರ್ನಾಡ್, ಹಿಂದೂಸ್ತಾನಿ ಸಂಗೀತದ ಶಿಖರಗಳೆನಿಸಿದ ಸವಾಯಿ ಗಂಧರ್ವ, ಪಂಡಿತ್ ಬಸವರಾಜ್ ರಾಜಗುರು, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ವಿದುಷಿ ಗಂಗೂಬಾಯಿ ಹಾನಗಲ್, ಪಂಡಿತ ಭೀಮಸೇನಜೋಶಿ ನೆನಪಾಗುತ್ತಾರೆ.

ಕಿರಾನಾ-ಘರಾನಾ ಶೈಲಿಯಲಿ ಭೀಮಸೇನ ಜೋಶಿಯವರಿಂದ ಪರಿಣಿತಿ ಪಡೆದಿರುವ ಪಂಡಿತ ಮಾಧವಗುಡಿಯವರ ಹುಟ್ಟೂರು ಕೂಡ ಧಾರವಾಡ. ಕಿರಾನಾ ಎಂಬುದು ಹಿಂದೂಸ್ತಾನಿ ಸಂಗೀತದ ಒಂದು ಶೈಲಿ. ಈ ಶೈಲಿಯ ಮೂಲ ಪುರುಷ 20ನೇ ಶತಮಾನದ ಹಿಂದೂಸ್ತಾನಿ ಶೈಲಿಯ ಹೆಸರಾಂತ ಸಂಗೀತಗಾರ ಉಸ್ತಾದ್ ಅಬ್ದುಲ್ ಕರೀಂ ಖಾನ್. ಅವರ ಹುಟ್ಟೂರು ಕುರುಕ್ಷೇತ್ರ(ಹರಿಯಾಣ) ಬಳಿಯ ಹಳ್ಳಿಯ ಕಿರಾನಾ. ಅವರಿಂದ ಪ್ರಾರಂಭಗೊಂಡ ಈ ಶೈಲಿಗೆ ಕಿರಾನಾ ಘರಾನ ಎಂದು ಹೆಸರಾಯಿತು.

ಇತ್ತೀಚೆಗೆ ಸಿಂಗಪುರ ಕನ್ನಡಸಂಘ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಿಯೋಜಕರಾದ ಸೂರ್ಯ ಸಂಸ್ಥೆಯವರ ನೇತೃತ್ವದಲ್ಲಿ ಸಿಂಗಪುರದ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಕಿರಾನಾ ಘರಾನಾದ ಪಂಡಿತ ಮಾಧವಗುಡಿಯವರ ಸಂಗೀತ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಬರೀ ಕನ್ನಡಿಗರೇ ಅಲ್ಲದೆ ಕನ್ನಡೇತರರೂ ಆಹ್ವಾನಿತರಿದ್ದರು. ಮೊದಲಿಗೆ ನೆರೆದಿದ್ದ ಕನ್ನಡಿಗರೆಲ್ಲರನೂ ಕಂಡು ಹರ್ಷಿಸಿ "ನನ್ನ ಸಂಗೀತ ಕೇಳ್ಲಿಕ್ಕೆ ಇಲ್ಲಿ ನನ್ನನ್ನು ಕರೆಸಿದರಲ್ಲಾ ಅದಕ್ಕಾ ಎಲ್ರಿಗೂ ನನ್ನ ವಂದನಾ ಸಲ್ಲಿಸುತ್ತೇನೆ" ಎಂದು ವಂದಿಸಿ ರಾಗ ಯಮನ್ ಕಲ್ಯಾಣಿಯಲಿ ಸಂಗೀತ ಪ್ರಾರಂಭ ಮಾಡಿದರು ಗುಡಿಯವರು.

ಅವರ ಹಾಡುಗಾರಿಕೆಯ ಶೈಲಿ, ಹಾವ, ಭಾವ, ಪಕ್ಕ ವಾದ್ಯದವರಿಗೆ ನೀಡುತ್ತಿದ್ದ ಸಲಹೆ, ಹಿಂದೆ ಕುಳಿತು ಧ್ವನಿಗೂಡಿಸುತ್ತಿದ್ದ ಸಂಗೀತಗಾರ ಪ್ರಸನ್ನ ಗುಡಿ ಅವರನ್ನು ತಿದ್ದುವ ರೀತಿ ನೋಡಿ ಭೀಮಸೇನ ಜೋಶಿ ಅವರ ಮತ್ತೊಂದು ರೂಪವಿದು ಎಂದನೆಸಿತು. ಅಬ್ಬಾ, ಗುರು-ಶಿಷ್ಯರಲ್ಲಿ ಇಂತಹಾ ಸಾಮ್ಯತೆಯೇ ಎಂದಚ್ಚರಿಯಾಯಿತು ಕೂಡ.

ಸುಮಾರು ಒಂದು ತಾಸು ಸಂಧ್ಯಾರಾಗ ಯಮನ್ ಕಲ್ಯಾಣ್ ದಲ್ಲಿ "ಅವಗುಣನ ಕೀಜಿಯೇ ಗುಣಿ ಸನ " ಹಾಡಿ, ಪಿಲೂ ರಾಗದಲ್ಲಿ ನದಿಯಾ ಕಿನಾರೆ ಮೊರಗಾಂವ್-ಠುಮರಿ, ರಾಗ ಮಾಂಡ್ ನಲ್ಲಿ ಮಾಝೆ ಮಾಹೆರ ಪಂಢರೀ(ನನ್ನ ತವರುಮನೆ ಪಂಢರೀ) ಸಂತ ಏಕನಾತ್ ವಿರಚಿತ ಅಭಂಗ್, ಮೀರಾ ಭಜನ್ "ತುಮ್ ಬಿನ್ ಮೋರಿ ಕೋನ್ ಖಬರ್ ಲೇ, ಗೋವರ್ಧನ್ ಗಿರಿಧಾರಿ" ನಂತರ ಭಾಗ್ಯಾದಾ ಲಕ್ಷ್ಮೀ ಬಾರಮ್ಮಾ ಎಂದು ಪ್ರಾರಂಭಿಸಿದಾಗ ಈ ಭಾಗ್ಯಕ್ಕಾಗೇ ನಾವು ಕಾಯುತ್ತಿದ್ದೆವು ಎನ್ನುತ್ತಾ ಚಪ್ಪಾಳೆಗಳ ಸುರಿಮಳೆಯಾಯಿತು. ಕಡೆಯಲ್ಲಿ ಭೈರವಿ ರಾಗದಲ್ಲಿ ನೀನೆ ದಯಾಳು, ನಿರ್ಮಲ ಚಿತ್ತ ಗೋವಿಂದ, ನಿಗಮಗೋಚರ ಮುಕುಂದಾ ಬಹಳ ಸೊಗಸಾಗಿ ಹಾಡಿದರು. ಗುಡಿಯವರ ಸಂಗೀತ ಕೇಳಿದಾಗ ಅನಿಸಿದ್ದು "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಇಂತಹ ಸಂಗೀತ ವಿದ್ಯೆ" ಎಂದು.

ಮಹಾನ್ ಗಾಯಕರೊಂದಿಗೆ ಕುಳಿತು ಅವರ ಹಾಡುಗಾರಿಕೆಗೆ ಸಾರಥ್ಯ ನೀಡುವುದು ಸುಲಭ ಸಾಧ್ಯವಲ್ಲ. ಈ ನಿಟ್ಟಿನಲ್ಲಿ ಅಂದು ಸೊಗಸಾದ ಸಂಗೀತಕ್ಕೆ ಸ್ವಲ್ಪ ಪ್ರಯಾಸವಾದರೂ ತಕ್ಕಮಟ್ಟಿಗೆ ಸಾರಥ್ಯ ನೀಡಿದರು ಪಕ್ಕವಾದ್ಯಿಗಳಾದ ಕಿರನ್ ಸಕ್ಸೇನಾ-ತಬಲಾ, ನೀಲಂ ಶರ್ಮಾ ಹಾಗೂ ಅರುಣ್ ಗುಲಾನಿ ತಂಬೂರಿ, ಸೆಬಸ್ಟಿಯನ್ ಹಾರ್ಮೋನಿಯಂ. ಮಾಧವ ಗುಡಿ ಅವರ ಗಾಯನಕ್ಕೆ ತಕ್ಕದಾಗಿ ಧ್ವನಿ ಗೂಡಿಸುತ್ತಿದ್ದರು ಮಗ ಪ್ರಸನ್ನ ಗುಡಿ. ಮನೆಯೇ ಮೊದಲ ಪಾಠಶಾಲೆ, ತಂದೆಯೇ ಗುರು, ಉತ್ತಮ ಕಂಠಸಿರಿ ಇದು ಪ್ರಸನ್ನ ಅವರಿಗೆ ದೇವರಿತ್ತ ಕೊಡುಗೆ.

ಕಾರ್ಯಕ್ರಮದ ನಿರೂಪಣೆ ವಿನಿತಾ ಐತಾಳ್ ಹಾಗೂ ಸಂಧ್ಯಾ ಚಂದ್ರಶೇಖರ್, ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಭಾಗ್ಯಮೂರ್ತಿ, ಕನ್ನಡ ಸಂಘದ ಅಧ್ಯಕ್ಷ ಬಿ.ಕೆ.ರಾಮದಾಸ್ ಅವರಿಂದ ಸ್ವಾಗತ ಹಾಗೂ ಸೂರ್ಯ ಸಂಸ್ಥೆಯ ಗೌರವ ಕಾರ್ಯದರ್ಶಿ ಕೃಷ್ಣಕುಮಾರ್ ಅವರಿಂದ ವಂದನಾರ್ಪಣೆ ನಡೆಯಿತು.

ಮಾಧವ ಗುಡಿ ಕಿರು ಪರಿಚಯ:

ಪಂಡಿತ್ ಮಾಧವಗುಡಿಯವರ ಹುಟ್ಟೂರು ಧಾರವಾಡ. ಮನೆಯಲ್ಲಿ ಕೀರ್ತನಕಾರರಾದ ತಾತ ಶೇಷಾಚಾರ್ಯ ಗುಡಿ ಹಾಗೂ ತಂದೆ ಗುರುರಾಜ ಗುಡಿ ಅವರಿಂದ ಮೊದಲ ಪಾಠ. ನಂತರ ಅತ್ಯಂತ ಕಿರಿಯ ವಯಸ್ಸಿನಲ್ಲೇ ಕಿರಾನಾ/ಗ್ವಾಲಿಯರ್ ಘರಾನಾ ಶೈಲಿಯಲ್ಲಿ ಪಂಡಿತ ಬಸವರಾಜ ರಾಜಗುರು ಅವರಲ್ಲಿ ಕಲಿಕೆ. ರಾಜಗುರು ಅವರಿಗೆ ಈ ಶಿಷ್ಯನಲ್ಲಿ ಪಂಡಿತ್ ಭೀಮಸೇನ್ ಜೋಶಿ ಕಂಡು ಬಂದು, ಮಾಧವಗುಡಿಯವರನ್ನು ಭೀಮಸೇನ ಜೋಶಿಯವರ ಬಳಿಗೆ ಕಳುಹಿಸಿಕೊಟ್ಟರು. 1963ರಲ್ಲಿ ಭೀಮಸೇನ್ ಜೋಶಿ ಅವರಲ್ಲಿ ಕಿರಾನ ಘರಾನಾ ಶೈಲಿಯಲ್ಲಿ ಹಾಡುಗಾರಿಕೆ ಕಲಿಯಲು ಪ್ರಾರಂಭಿಸಿದ ಇವರು ಸುಮಾರು 25 ವರುಷಗಳ ಕಾಲ ಗುರುಕುಲ ವಾಸಿಯಾಗಿದ್ದರು. ಮೊದಲ ಐದು ವರುಷಗಳಲ್ಲಿ ಗುರುವಿನಿಂದ ಕಲಿತದ್ದು ಮೂರು ರಾಗಗಳು, ಅರಿತದ್ದು ನೂರಾರು ವಿಷಯಗಳು. ಕರ್ನಾಟಕ ಸರಕಾರದ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಸವಾಯಿ ಗಂಧರ್ವ ಪ್ರಶಸ್ತಿ ಪುಣೆ ಹಾಗೂ ಕುಂದಗೋಳದ ಪ್ರಶಸ್ತಿಗಳಲ್ಲದೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಗುಡಿಯವರು ದಾಸಾಮೃತ, ದಾಸವಾಣಿ, ಅಭಂಗ್ ಹಾಗೂ ಭಜನೆಗಳನ್ನು ಕೂಡ ಹಾಡಿ ಜನರ ಮನ ಗೆದ್ದಿದ್ದಾರೆ. ಭೀಮಸೇನ ಜೋಶಿಯವರ ಪಟ್ಟ ಶಿಷ್ಯನಾಗಿ ಅವರ ಗಾಯನ ಶೈಲಿಯ ಪಕ್ಕಾ ವಾರಸುದಾರರೆನಿಸಿಕೊಂಡಿದ್ದಾರೆ ಮಾಧವ ಗುಡಿಯವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+