ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಕುಮಾರನನ್ನು ಮಾಡಿಸುವುದು ಜೋಕಲ್ಲ

By Staff
|
Google Oneindia Kannada News

Jokumaraswamy troup in US, courtesy : Rangadhwani, America
ಜೋಕುಮಾರಸ್ವಾಮಿ ತಂಡ (ಚಿತ್ರಕೃಪೆ : ರಂಗಧ್ವನಿ, ಅಮೆರಿಕ)
ಕನ್ನಡ ರಂಗಸ್ಥಳದ ಹೆಗ್ಗಳಿಕೆ, ಬೆನಕ ತಂಡ ಹೆತ್ತ ಕೂಸು ಜೋಕುಮಾರಸ್ವಾಮಿ. ಈ ಮಹೋನ್ನತ ನಾಟಕವನ್ನು ಅಮೆರಿಕೆಯಲ್ಲಿ ರಂಗಕ್ಕಿಳಿಸುವುದು ಸುಲಭದ ಮಾತಲ್ಲ. ಆದರೆ, ಛಲದಂಕಮಲ್ಲ ವಲ್ಲೀಶಶಾಸ್ತ್ರಿ ಕಡೆಗೂ ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿದ್ದಾರೆ. ನಾಟಕ ಈಗಾಗಲೆ ಉತ್ತರ ಅಮೆರಿಕಾದಲ್ಲಿ ಎರಡು ಪ್ರದರ್ಶನಗಳನ್ನು ಕಂಡಿದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಓದಿ : The Making of jokumaraswamy.

ಬಿವಿ ಕಾರಂತರ ನಿರ್ದೇಶನದಲ್ಲಿ ಪ್ರಥಮ ಬಾರಿಗೆ “ಬೆನಕ" ತಂಡದಿಂದ “ಜೋಕುಮಾರಸ್ವಾಮಿ" ನಾಟಕ ಪ್ರದರ್ಶನಗೊಂಡಾಗ ನನ್ನ ಕನಸು ಮನಸ್ಸಿನಲ್ಲೂ ನಾನು ಅದೇ ನಾಟಕದಲ್ಲಿ, ಅದರಲ್ಲೂ ಬೆನಕತಂಡದೊಂದಿಗೆ ನಟಿಸುವೆ ಎಂದೂ ಎಣಿಸಿರಲಿಲ್ಲ. ಅದೇ ನಾಟಕವನ್ನು ಅಮೆರಿಕದಲ್ಲಿ ರಂಗದ ಮೇಲೆ ತರುತ್ತೇನೆ ಎನ್ನುವ ವಿಚಾರವಂತೂ ನನ್ನ ತಲೆಯಲ್ಲಿ ಯಾವ ಮೂಲೆಯಲ್ಲೂ ಇರಲಿಲ್ಲ. 1972 ನಾಟಕ ಪ್ರದರ್ಶನಗೊಂಡಾಗ ನಾನು ಬೆಂಗಳೂರಿಗೆ ಹೊಸಬ. ನಾಟಕದ ಬಗ್ಗೆ, ಪ್ರೌಢಶಾಲೆಗಳ ನಾಟಕಗಳನ್ನು ಬಿಟ್ಟರೆ, ಅಷ್ಟಾಗಿ ತಿಳಿದೂ ಇರಲಿಲ್ಲ.

ನಂತರ 1977ರಲ್ಲಿ ಬೆನಕ ತಂಡದೊಂದಿಗೆ ಪರಿಚಯವಾಗಿ ಇದೇ “ಜೋಕುಮಾರಸ್ವಾಮಿ"ಯ ನಾಟಕದ 50ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಗೌಡರ ಆಳುಗಳಲ್ಲಿ ಒಬ್ಬನಾಗಿ, ರಂಗಸಜ್ಜಿಕೆಯಲ್ಲಿ ಭಾಗಿಯಾಗಿ ಈ ನಾಟಕದ ಮೇಲಿನ ಪ್ರಭಾವ ನನ್ನ ಮೇಲೆ ಬಹಳ ಇತ್ತು. ಅಮೆರಿಕೆಗೆ ಬಂದ ಮೇಲೆ 'ಹಾಲಿವುಡ್ನಲ್ಲಿ ಯಮ", 'ಯಮನ ಕಾಲ್ ಸೆಂಟರ್" ಎಂಬ ಎರಡು ಹಾಸ್ಯ ನಾಟಕಗಳು ಅಮೆರಿಕೆಯ ಕನ್ನಡಿಗರಲ್ಲಿ ಬಹಳ ಜನಪ್ರಿಯಗೊಂಡು ನನಗೆ ಅಮೆರಿಕೆಯ ಯಮ ಎಂದು ಕರೆಯಲ್ಪಟ್ಟಾಗಲಂತೂ ಬಹಳ ಖುಷಿಯನ್ನು ತಂದಿತ್ತು.

ಇದೇ ಹುಮ್ಮಸ್ಸಿನಿಂದ ಅಮೆರಿಕದಲ್ಲಿ 'ಜೋಕುಮಾರಸ್ವಾಮಿ" ನಾಟಕವನ್ನು ಏಕೆ ರಂಗದಮೇಲೆ ತರಬಾರದು ಎನ್ನುವ ಹುಳು ತಲೆ ಕೊರೆಯಲು ಶುರುವಾಗಿದ್ದು 2002ರಲ್ಲಿ. ಅಂದಿನಿಂದ ಮೂರು ಬಾರಿ ನಾಟಕ ಮಾಡಬೇಕೆಂಬ ಒತ್ತಾಸೆಯಿಂದ ಗುಂಪನ್ನು ಕಟ್ಟುವುದು, ಯಾವುದಾದರೂ ಒಂದು ಕಾರಣಕ್ಕೆ ನಿಂತು ಹೋಗುವುದು ಪರಿಪಾಠವಾಗಿಬಿಟ್ಟಿತ್ತು.

ಕಳೆದ ವರ್ಷ ಬೆನಕ ತಂಡವನ್ನೇ ಅಮೆರಿಕೆಗೆ ಕರೆಸುವ ಸಾಹಸಕ್ಕೆ ಕೈಹಾಕಿದೆ. ವಿಸಾ ತೊಂದರೆಯಿಂದ ಬೆನಕ ತಂಡಕ್ಕೆ ಹಾಗೂ ಕನ್ನಡ ಹವ್ಯಾಸಿ ನಾಟಕ ತಂಡಗಳಿಗೇ ಒಂದು ನಿರಾಸೆಯನ್ನು ತಂದಿತ್ತು. ಆ ಪ್ರಯತ್ನ ಕೈಗೂಡಿದ್ದರೆ 'ಬೆನಕ" ತಂಡದ 'ಜೋಕುಮಾರಸ್ವಾಮಿ" ಅಮೆರಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿತ್ತು ಎನ್ನುವ ಹೆಮ್ಮೆಯ ವಿಷಯವೊಂದೇ ಅಲ್ಲ, ಅದೊಂದು ಕನ್ನಡ ನಾಟಕರಂಗದಲ್ಲಿ ಒಂದು ಮೈಲಿಗಲ್ಲಾಗುತ್ತಿತ್ತು. ಏಕೆಂದರೆ 'ಬೆನಕ" ತಂಡ ಬಂದಿದ್ದರೆ ಅಮೆರಿಕೆಯ ಪ್ರಮುಖ ನಗರಗಳಲ್ಲಿ 30ಕ್ಕೂ ಹೆಚ್ಚು ಪ್ರದರ್ಶನಗಳು ಒಪ್ಪಿಗೆಯಾಗಿದ್ದವು.

ಅಂತಹ ಒಂದು ಚಾರಿತ್ರಿಕ ಮೈಲಿಗಲ್ಲನ್ನು ಸಾಧಿಸಬೇಕೆಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಂತಹ ಒಂದು ಅವಕಾಶ ಕೈತಪ್ಪಿಹೋಯಿತಲ್ಲಾ ಎಂದು ಬಹಳ ನಿರಾಸೆಯೂ ಆಗಿತ್ತು. ಹೀಗಿ ಕಳೆದ 5 ವರ್ಷದಿಂದ ನಾಟಕ ಪ್ರಯೋಗ ಮಾಡಲೇಬೇಕೆಂಬ ಛಲದಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಂತಹ ಅವಕಾಶ ಸಿಕ್ಕಿದ್ದು ಈ ವರ್ಷ. ನಾಟಕದ ಬಗ್ಗೆ ನನಗೆ ಪೂರ್ಣ ಮಾಹಿತಿ ಇತ್ತು. ನನ್ನ ಬೆನಕ ತಂಡದ ಅನುಭವ ಹಾಗೂ ಅಮೆರಿಕನ್ನಡಿಗರಲ್ಲಿ ನನ್ನ ನಟನೆ ಹಾಗೂ ನಿರ್ದೇಶನದ ಬಗೆಗಿನ ಇದ್ದ ವಿಶ್ವಾಸ ನನಗೆ ಇನ್ನಷ್ಟು ಸ್ಥೈರ್ಯವನ್ನು ತುಂಬಿತ್ತು. ಅಂತೂ, ಜೋಕುಮಾರಸ್ವಾಮಿಯ ರಂಗಗೀತೆ ಅಮೆರಿಕಾದಲ್ಲಿ ಪ್ರತಿಧ್ವನಿಸಿತು.

ಮುಂದೆ ಓದಲು ಕ್ಲಿಕ್ ಮಾಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X