ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲಂಬಿಯ ಕನ್ನಡ ಮಕ್ಕಳ ಕನ್ನಡೋತ್ಸಾಹ

By Staff
|
Google Oneindia Kannada News

Kannada Knowledge competition for columbia kidsಅಮೇರಿಕದ ಮೇರಿಲ್ಯಾಂಡ್ ದೇಶದ ಕೊಲಂಬಿಯಾ ನಗರದ ಸುತ್ತಮುತ್ತಲಲ್ಲಿ ವಾಸಿಸುತ್ತಿರುವ ಕನ್ನಡಿಗರ (ಮತ್ತು ಇತರ ಉತ್ಸುಕರ) ಮಕ್ಕಳಿಗೆ ಸುಮಾರು ಮೂರುವರ್ಷಗಳಿಂದ ನಮ್ಮ ಕನ್ನಡನಾಡಿನ ಭಾಷೆ ಮತ್ತು ಸಂಸೃತಿಗಳನ್ನು ಪರಿಚಯಮಾಡಿಕೊಡುತ್ತಿರುವ ಸಂಸ್ಥೆ"ಡಿವೈನ್ ಸ್ಪಾರ್ಕ್" (Divine Spark). ಈ ಸಂಸ್ಥೆಯು ನಡೆಸುತ್ತಿರುವ ಕನ್ನಡ ಶಾಲೆಯನ್ನು ಶ್ರೀಮತಿ ಶಾಂತಿ ತಂತ್ರಿಯವರು ಸೇವಾಮನೋಭಾವದಿಂದ ನಡೆಸುತ್ತಿರುವುದು ಬಹಳ ಶ್ಲಾಘನೀಯ. ಮಕ್ಕಳಲ್ಲಿ ಕನ್ನಡ ಭಾಷೆಯ ಜ್ಞಾನ ಹೆಚ್ಚಿಸುವುದು ಹಾಗೂ ತನ್ಮೂಲಕ ಕನ್ನಡ ಪರಿಸರಕ್ಕೆ ಅವರು ಹೊಂದಿಕೊಳ್ಳುವಂತೆ ಪ್ರೇರೇಪಿಸುವುದು ಆಶಯ.

ಎಚ್. ಕೆ. ರಾಮಪ್ರಿಯನ್, ಮೇರಿಲ್ಯಾಂಡ್

ಅವರು ಈ ಶಾಲೆಯ ಅಂಗವಾಗಿ ಆಗಾಗ ಮಕ್ಕಳಿಗಾಗಿ ಸ್ಪರ್ಧೆಗಳನ್ನೂ ಏರ್ಪಡಿಸುತ್ತಾರೆ. ಫೆಬ್ರವರಿ 10ರಂದು (ಭಾನುವಾರ) ಬೆಳಿಗ್ಗೆ, ಅವರು ಮಕ್ಕಳಿಗಾಗಿ ಎರಡು ಸ್ಪರ್ಧೆಗಳನ್ನು ನಡೆಸಿದರು. ಸ್ಪೆಲಿಂಗ್ ಬೀ (Spelling bee) ಮತ್ತು ಕನ್ನಡ ಐಡಲ್ (Kannada Idol) . ಸುಮಾರು 30 ಮಕ್ಕಳು ಎರಡು ಸ್ಪರ್ಧೆಗಳಲ್ಲೂ ಉತ್ಸಾಹದಿಂದ ಭಾಗವಹಿಸಿದ್ದರು. ಈ ಸ್ಪರ್ಧೆಗಳಿಗಾಗಿ "ಅಳಿಲ ಭಕ್ತಿ ಮರಳ ಸೇವೆ" ಎಂಬಂತೆ ಸ್ವಲ್ಪ ಸೇವೆ ಮಾಡಲು ನನಗೂ ಮತ್ತು ನನ್ನ ಪತ್ನಿ ಶುಭಾಳಿಗೂ ಇವರು ಅವಕಾಶಕೊಟ್ಟಿದ್ದರು. ನಮ್ಮನ್ನು ಸ್ಪರ್ಧೆಗಳ ತೀರ್ಪುಗಾರರಾಗಿ ನಿಯಮಿಸಿದ್ದರು. ಈ ರೀತಿಯ ಸ್ಪರ್ಧೆಗಳನ್ನು ನಾನು ಕನ್ನಡದಲ್ಲಿ ನಡೆಸಿದ್ದುದನ್ನು ನೋಡಿದ್ದು ಇದೇ ಮೊದಲ ಬಾರಿ. ಆದ್ದರಿಂದ ಬಹಳ ಕುತೂಹಲದಿಂದಲೇ ಹೋಗಿ ತೀರ್ಪುಗಾರರ ಕುರ್ಚಿಯಲ್ಲಿ ಕುಳಿತಿದ್ದೆ. ಈ ಸ್ಪರ್ಧೆಗಳು ಈ ದೇಶದಲ್ಲಿ ನಡೆಯುವ ಇಂಗ್ಲಿಷ್ ಭಾಷೆಯ ಸ್ಪರ್ಧೆಗಳನ್ನು ಅನುಕರಿಸಿದ್ದರೂ ಕನ್ನಡದ ವೈಶಿಷ್ಟವನ್ನು ಉಪಯೋಗಿಸಲು ನಿಯಮಗಳನ್ನು ಸ್ವಲ್ಪ ಬದಲಾಯಿಸಿದ್ದರು.

ಇಂಗ್ಲೀಷಿನ ಸ್ಪೆಲಿಂಗ್ ಬೀಗಳಲ್ಲಿ ತೀರ್ಪುಗಾರರೊಬ್ಬರು ಪದಗಳನ್ನು ಉಚ್ಚರಿಸುತ್ತಾರೆ ಮತ್ತು ಮಕ್ಕಳು ಆ ಪದದ ಅಕ್ಷರಗಳನ್ನು ಕ್ರಮವಾಗಿ ಹೇಳಬೇಕು. ತಪ್ಪಾಗಿ ಹೇಳಿದ ಮಕ್ಕಳನ್ನು ಮುಂದುವರೆಯುವುದಕ್ಕೆ ಬಿಡುವುದಿಲ್ಲ. ಹೀಗೇ ಒಬ್ಬೊಬ್ಬರನ್ನಾಗಿ ಸ್ಪರ್ಧೆಯಿಂದ ಹೊರಗೆ ಕಳುಹಿಸಿದ ಮೇಲೆ ಇಬ್ಬರು ಮಕ್ಕಳು ಉಳಿದಿರುತ್ತಾರೆ. ಅವರಲ್ಲಿ ಒಬ್ಬ ಮಗು ತಪ್ಪುಮಾಡಿ ಇನ್ನೊಬ್ಬ ಸರಿಯಾಗಿ ಹೇಳಿದರೆ, ತಪ್ಪುಮಾಡಿದ ಮಗುವಿಗೆ ಎರಡನೆಯ ಬಹುಮಾನ ಮತ್ತು ಸರಿಯಾಗಿ ಹೇಳಿದ ಮಗುವಿಗೆ ಮೊದಲನೆಯ ಬಹುಮಾನ ದೊರೆಯುತ್ತದೆ.

ಒಂದು ತಪ್ಪನ್ನೂ ಮಾಡದೆ ಕೊನೆಯವರೆಗೂ ಉಳಿದಿರುವ ಮಗುವಿಗೆ ಮೊದಲನೆಯ ಬಹುಮಾನ ದೊರೆಯುತ್ತದೆ. ಆದರೆ ಕನ್ನಡದಲ್ಲಿ ಅಕ್ಷರಗಳ ಹೆಸರೂ ಮತ್ತು ಉಚ್ಚಾರಣೆಯೂ ಒಂದೇ ಆಗಿರುವುದರಿಂದ ಈ ರೀತಿಯ ನಿಯಮಗಳು ಅನ್ವಯಿಸುವುದಿಲ್ಲ. ಆದ್ದರಿಂದ ಮಕ್ಕಳು ಅಕ್ಷರಗಳ ಹೆಸರುಗಳನ್ನು ಹೇಳುವ ಬದಲಾಗಿ ಕಪ್ಪು ಹಲಗೆಯ ಮೇಲೆ ಬರೆಯಬೇಕು. ತಪ್ಪಾಗಿ ಬರೆದರೆ ಅವರು ಮುಂದುವರೆಯದೆ ತಮ್ಮ ಜಾಗಕ್ಕೆ ಹಿಂತಿರುಗಿ ಕುಳಿತುಕೊಳ್ಳಬೇಕು. ಈ ಸ್ಪರ್ಧೆಯ ಮೊದಲ ಕೆಲವು ಹಂತಗಳನ್ನು (preliminary stages) ಮೊದಲೇ ಶಾಲೆಯಲ್ಲೇ ಉಕ್ತಲೇಖನಗಳ ಮೂಲಕ ಮುಗಿಸಿದ್ದರು. ನಂತರ ಭಾನುವಾರ ಬೆಳಿಗ್ಗೆಯ ಸ್ಪರ್ಧೆಯಲ್ಲಿ ಕೇವಲ 6 ಜನ ಮಕ್ಕಳು ಉಳಿದಿದ್ದರು. ಇವರಲ್ಲಿ ಮೂವರು ಕನ್ನಡದ ಮೊದಲನೆಯ ತರಗತಿಯವರು ಮತ್ತು ಉಳಿದ ಮೂವರು ಎರಡನೆಯ ತರಗತಿಯವರು.

ಈ ಸ್ಪರ್ಧೆಯ ಫಲಿತಾಂಶ ಈ ರೀತಿ ಇದೆ :

ಮೊದಲನೆಯ ತರಗತಿಯವರು : ಮೊದಲನೆಯ ಬಹುಮಾನ , ಕುಮಾರಿ ಧಾತ್ರಿ ಸಾಮಕ್; ಎರಡನೆಯ ಬಹುಮಾನ , ಕುಮಾರಿ ಸ್ಮಿತಾ ಶೈಲನ್;
ಮೂರನೆಯ ಬಹುಮಾನ , ಕುಮಾರಿ ಚಂದನ ಶಿವಸ್ವಾಮಿ

ಎರಡನೆಯ ತರಗತಿಯವರು : ಮೊದಲನೆಯ ಬಹುಮಾನ , ಕುಮಾರಿ ಲೇಖಾ ತಂತ್ರಿ;ಎರಡನೆಯ ಬಹುಮಾನ , ಚಿರಂಜೀವಿ ಚಿನ್ಮಯ್ ಶಿವಸ್ವಾಮಿ;
ಮೂರನೆಯ ಬಹುಮಾನ, ಕುಮಾರಿ ನಿತ್ಯಾ ಪ್ರಕಾಶ್.

ಕನ್ನಡ ಐಡಲ್ ಸ್ಪರ್ಧೆಯನ್ನು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಎರಡು ವಿಭಾಗಗಲ್ಲಿ ಆಯೋಜಿಸಿದ್ದರು. 4ರಿಂದ 8 ವರ್ಷ ವಯಸ್ಸಿನ ಮಕ್ಕಳದು ಮೊದಲನೆಯ ವಿಭಾಗ ಮತ್ತು 8ರಿಂದ 12 ವರುಷದ ವಯಸ್ಸಿನ ಮಕ್ಕಳದು ಎರಡನೆಯ ವಿಭಾಗ. ಪ್ರತಿ ವಿಭಾಗದಲ್ಲಿಯೂ 10 ಮಂದಿ ಮಕ್ಕಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಪ್ರತಿಯೊಬ್ಬರಿಗೂ ಹಾಡಲು 3 ನಿಮಿಷಗಳ ಅವಧಿಯನ್ನು ಕೊಟ್ಟಿದ್ದರು. ಮಕ್ಕಳು ಮೂರು ರೀತಿಯ ಸಾಮರ್ಥ್ಯವನ್ನು ತೋರಿಸಬೇಕಾಗಿತ್ತು . ಪ್ರದರ್ಶನ (presentation), ಹಾಡುಗಾರಿಕೆ (melody), ಮತ್ತು ಉಚ್ಚಾರಣೆ (pronunciation). ತೀರ್ಪುಗಾರರು ಮತ್ತು ಸಭಾಸದರು ಸ್ಪರ್ಧಿಗಳಿಗೆ ಈ ಮೂರು ಸಾಮರ್ಥ್ಯಗಳಿಗೂ ಅಂಕಗಳನ್ನು ಕೊಟ್ಟು ಬಹುಮಾನ ಸ್ಥಾನಗಳನ್ನು ನಿರ್ಧರಿಸಿದಲು ನೆರವಾದರು.

ಈ ಸ್ಪರ್ಧೆಯ ಫಲಿತಾಂಶ ಈ ರೀತಿ ಇದೆ : (ಮೊದಲನೆಯ ವಿಭಾಗ)ಮೊದಲನೆಯ ಬಹುಮಾನ , ಕುಮಾರಿ ಯಾಮಿನೀ ವಿಭಾ ಅನಂತ್ (ಸ್ವಾಮಿ ದೇವನೆ ಲೋಕಪಾಲನೆ); ಎರಡನೆಯ ಬಹುಮಾನ , ಕುಮಾರಿ ಧಾತ್ರಿ ಸಾಮಕ್ (ಬೆಣ್ಣೆ ಕದ್ದ ನಮ್ಮ ಕೃಷ್ಣ - ರಚನೆ: ಪದ್ಮಶ್ರೀ ನಿಸ್ಸಾರ್ ಅಹ್ಮದ್)

ಎರಡನೆಯ ವಿಭಾಗ : ಮೊದಲನೆಯ ಬಹುಮಾನ, ಚಿರಂಜೀವಿ ಪ್ರದ್ಯುನ್ ದೀಕ್ಷಿತ್ (ಗಜವದನ ಬೇಡುವೆ - ರಚನೆ: ಪುರಂದರ ದಾಸರು);
ಎರಡನೆಯ ಬಹುಮಾನ, ಚಿರಂಜೀವಿ ಪವನ್ ರವೀಂದ್ರ (ಆನಂದ ಸಾಗರ, ಗಜಾನನ ಗಜಾನನ)

ಈ ಸ್ಪರ್ಧೆಗಳನ್ನು ಏರ್ಪಡಿಸಲು ನೇತೃತ್ವವನ್ನು ನಿಭಾಯಿಸಿದವರು: ಕಾರ್ಯಕ್ರಮನಿರ್ವಹಣೆ , ಶ್ರೀಮತಿ ಶಾಂತಿ ತಂತ್ರಿ; ಸ್ಪೆಲಿಂಗ್ ಬೀ (ಕನ್ನಡಕ್ಕೆ ಅಳವಡಿಕೆ, ಪದಗಳ ಆಯ್ಕೆ, ಇತ್ಯಾದಿ) ಶ್ರೀಮತಿ ಮಧುಶಾಲಿನಿ ಭಾಸ್ಕರ್ ; ಕನ್ನಡ ಐಡಲ್ (ನಿರ್ವಹಣೆ), ಡಾಕ್ಟರ್ ಮಮತಾ ಅನಂತ್. ಕನ್ನಡದಲ್ಲಿ ಮಾತು, ಸಂಭಾಷಣೆ, ಹಾಡು, ಸಂಗೀತಕ್ಕೆ ಮನಸೋತು ಹೆಚ್ಚು ಕಲಿಯಲು ಆಸಕ್ತಿ ತೋರಿಸುತ್ತಿರುವ ಹದಿಹರೆಯ ಮೀರದ ಕನ್ನಡ ಮಕ್ಕಳಿಗೆ ಶುಭಾಶಯಗಳು. ಹಾಗೂ ಇಂಥ ಮಕ್ಕಳನ್ನು ಪ್ರೋತ್ಸಾಹಿಸಲು ಸಮಯ ಮತ್ತು ಶ್ರದ್ಧೆ ವಿನಿಯೋಗಿಸುವ ಹಿರಿಯರಿಗೆ ಧನ್ಯವಾದಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X