• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಡು ಕುದುರೆಯೇರಿ ಸಿಂಗಪುರಕ್ಕೆ ಬಂದ ಸುಬ್ಬಣ್ಣ!

By Staff
|

ಹಣತೆ ಬೆಳಗುವ ದೀಪಾವಳಿ ಈ ಬಾರಿ ಸಿಂಗಪುರ ಕನ್ನಡಿಗರ ಪಾಲಿಗೆ ವೈಶಿಷ್ಟತೆಯಿಂದ ಕೂಡಿತ್ತು. ಕವನಗಳ ಹಣತೆ, ಭಾವಗಳ ಎಣ್ಣೆ, ಗಾನವೆಂಬ ಜ್ಯೋತಿ ಬೆಳಗಿದ ಅಪೂರ್ವ ದೀಪಾವಳಿ. ಈ ವಿಶಿಷ್ಟ ದೀಪಾವಳಿಯನು ಸಿಂಗಡಿಗನ್ನರಿಗೆ ಇತ್ತವರು ಕರ್ನಾಟಕ ಕಲಾತಿಲಕ ಶಿವಮೊಗ್ಗ ಸುಬ್ಬಣ್ಣ ಹಾಗೂ ಝೀ ಟಿವಿಯ ಸಾರಿಗಮಾ(1999) ವಿಜೇತೇ, ಆರ್ಯಭಟ ಪ್ರಶಸ್ತಿ ಪಡೆದ ಅರ್ಚನಾ ಉಡುಪ. ದೀಪಾವಳಿ ಊರಲ್ಲಿ ಢಂ, ಢಮಾರ್ ಪಟಾಕಿ ಸಿಡಿಸುವ ಹಬ್ಬವಾದರೆ, ಶಾಂತಿಪ್ರಿಯರಾದ ಸಿಂಗಡಿಗನ್ನರಿಗೆ ಭಾವ-ಸಂಗಮಗಳ ದೀಪರಾಜ್ಯೋತ್ಸವ.

  • ವಾಣಿ ರಾಮದಾಸ್, ಸಿಂಗಪುರ

ಕಾಡು ಕುದುರೆಯೇರಿ ಸಿಂಗಪುರಕ್ಕೆ ಬಂದ ಸುಬ್ಬಣ್ಣ!ಬದುಕು ಹೊಸೆಯುವ ಹಂಗಿನಲಿ ತೌರೂರಿನ ಬಂಧನಗಳ ತೊರೆದು ವಿಶ್ವದ ಯಾವುದೇ ಎಲ್ಲೆಯಲಿ ನೆಲವೂರಿದರೂ ದೀಪಾವಳಿಯಂದು ಹಣತೆಗಳ ಹಚ್ಚಿ ಬೆಳಗುವೆವು ಮನ-ಮನೆಯ ದೀಪ. ಆ ಸಾಲುದೀಪ ಬೆಳಗಿದಂತೆ ತೆರೆಯುವುದು ಮನದ ಬನದಲಿ ಹರಡಿರುವ ನೆನಪಿನ ಜಾಲ, ಹೊರ ಹೊಮ್ಮುವುದು ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು ಎಂಬ ಕವನಗಳ ಸಾಲು.

ಶನಿವಾರ ನವೆಂಬರ್ 10ರ ಸಂಜೆ ಜಿ.ಐ.ಎಸ್.ಎಸ್. ಸಭಾಂಗಣ ತುಂಬಿತ್ತು. 6ಗಂಟೆಗೆ ಸರಿಯಾಗಿ ನಿರೂಪಣೆಯ ಕಾರ್ಯ ಹೊತ್ತರು ರಮೇಶ್. ಪ್ರತಿಮಾ ಅವರ ಗಜವದನಾ ಬೇಡುವೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಲಾವಿದರಿಗೆ ಸ್ವಾಗತ ನೀಡಿದರು ಪ್ರಕಾಶ್ ಹಂದೆ.

ವೇದಿಕೆ ಏರಿದ ಸುಬ್ಬಣ್ಣನವರು ಸಭಿಕರಿಗೆ ಬೆಳಕಿನ ಹಬ್ಬ ಹಾಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿ ಸಭಿಕರನ್ನುದ್ದೇಶಿಸಿ, 'ಕನ್ನಡಿಗರು ನವಂಬರ್ ಕನ್ನಡಿಗರು ಎಂತಾಗದೆ ಕವಿ ಚೆನ್ನವೀರ ಕಣವಿಯವರು ಹೇಳಿರುವಂತೆ ಹೆಸರಾಗಲಿ ಕನ್ನಡ, ಉಸಿರಾಗಲಿ ಕನ್ನಡ ಎಂಬಂತೆ ಇರಬೇಕು. ಕನ್ನಡಿಗರ ನಾಡು-ನುಡಿಯ ಪ್ರೀತಿ ನಿತ್ಯೋತ್ಸವವಾಗಬೇಕು. ಕನ್ನಡಿಗರು ಕುಡುಕೆಯಲಿ ಬೆಳೆದ ಗಿಡವಾಗಿರದೆ ಕನ್ನಡ ಸಂಸ್ಕೃತಿಯಲಿ ನೆಲೆ ಊರಬೇಕು, ಬೇರು ಬೆಳೆಯಬೇಕು. ಸತ್ತಹಾಗಿರುವವರ ಸಹವಾಸ ಬಲು ಕಷ್ಟ, ಸತ್ತಂತಿಹರನು ಬಡಿದೆಚ್ಚರಿಸು ಎಂದು ಕುವೆಂಪು ಹೇಳಿದ್ದಾರೆ' ಎಂದರು.

ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ 'ಆನೆಮೊಗದವನೆ, ಇಲಿಯನೇರಿ ಬಂದವನೆ' ಎಂಬ ಕವನದಿಂದ ಗಣಪನಿಗೆ ವಂದಿಸಿದರು. ಜಾನಪದ-ಅಜ್ಞಾತ ಕವಿಗಳ ಅನುಭವೀ ಕಾವ್ಯ-ಮುತ್ತಕಂಡೆನವ್ವಾ ತಂಗಿ ಹಾಡಿದರು. ಪ್ರತಿಯೊಂದು ಕವನ ಹಾಡುವ ಮೊದಲು ಆಯಾ ಕವನದ ಅರ್ಥ, ಬರೆದ ಕವಿಯ ಪರಿಚಯ ನೀಡಿದರು. ಕುವೆಂಪು ಅವರ ಎಲ್ಲಾದರು ಇರು, ಆನಂದಮಯ, ಓ ನನ್ನ ಚೇತನಾ, ಬೇಂದ್ರೆಯವರ ಇಳಿದು ಬಾ ತಾಯಿ ಇಳಿದು ಬಾ, ಜಿ.ಎಸ್. ಶಿವರುದ್ರಪ್ಪ ಅವರ ಶಕ್ತಿಯಕೊಡು ಶಕ್ತಿಯ ಕೊಡು, ಕೆ.ಎಸ್.ನ ಅವರ ಪಯಣಿಸುವ ವೇಳೆಯಲಿ, ಕಾವ್ಯಾನಂದರ ಏನಾದರೂ ಆಗು ಮೊದಲು ಮಾನವನಾಗು, ಶಿಶುನಾಳ ಶರೀಫರ ಕೋಡಗನ ಕೋಳಿ ನುಂಗಿತ್ತಾ, ಡಾ.ನಿಸಾರ್ ಅಹಮದ್ ಅವರ ನಿತ್ಯೋತ್ಸವ ಕವನಗಳನು ಹಾಗೂ ಜಾನಪದ ಗೀತೆಗಳನ್ನು ಸುಮಧುರ ಕಂಠದಿಂದ ಹಾಡಿ ಸಭಿಕರಿಗೆ ಕನ್ನಡದ ಕಾವ್ಯಲೋಕಕ್ಕೆ ಕರೆದೊಯ್ದರು.

ಪುರಂದರರ 'ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮಾ' ಹಾಡಿದ ಸುಬ್ಬಣ್ಣ, ಕನಕದಾಸರು 'ನಾನು ಹೋದರೆ ಹೋದೇನು' ಎಂದರು. ನಾನು ಎಂಬ "ಅಹಂ" ತೊರೆದು ಕಾವ್ಯಾನಂದರು ಹೇಳಿರುವಂತೆ 'ಏನಾದರು ಆಗು..ಮೊದಲು ಮಾನವನಾಗು' ಎಂಬುದನು ಪರಿಪಾಲಿಸೋಣ ಎಂದು ಹೇಳಿದರು. ನಾವೆಲ್ಲರೂ ಎಂದೆಂದಿಗೂ ನೀ ಕನ್ನಡವಾಗಿರು ಎಂದು ನಮ್ಮ ಭಾಷೆ, ಸಂಸ್ಕೃತಿ, ಉಳಿಸಿ, ಬೆಳೆಸೋಣ ಎಂದು ಸುಬ್ಬಣ್ಣ ವಿನಂತಿಸಿದರು.

ಕಾವ್ಯ ಲೋಕದ ಗುಂಗಿನಿಂದ ಸಿಂಗಪುರ ಕನ್ನಡಿಗರನ್ನು ಹೊರತಂದು; ಬಾನಲ್ಲೂ ನೀನೇ, ದೋಣಿ ಸಾಗಲಿ, ಪೂಜಿಸಲೆಂದೇ, ಒಮ್ಮೆ ನಿನ್ನನ್ನೂ ಕಣ್ ತುಂಬಾ, ದೂರದಿಂದ ಬಂದಂತ, ತುಂತುರು ಅಲ್ಲಿ ನೀರ ಹಾಡು ಹೀಗೆ ಪುಂಖಾನು ಪುಂಖವಾಗಿ ಜನಪ್ರಿಯ ಕನ್ನಡ ಚಿತ್ರಗೀತೆಗಳ ಲೋಕದತ್ತ ಕರೆದೊಯ್ದರು ಅರ್ಚನಾ. ಪಟಾಕಿ-ನಿಷೇಧವಿರುವ ಸಿಂಗಪುರದಲ್ಲಿ "ಜೋಕೆ ನಾನು ಬಳ್ಳಿಯ ಮಿಂಚಿನ" ಅರ್ಚನಾ ಗಾಯನ ಸಭಿಕರನ್ನು ಕುಣಿಯುವಂತೆ ಮಾಡಿದ್ದಲ್ಲದೆ, ಒನ್ಸ್, ಒನ್ಸ್ ಮೋರ್ ಶಿಳ್ಳೆಗಳ ಸದ್ದು ಢಂ-ಢಮಾರ್ ಪಟಾಕಿಗಳ ಸಿಡಿಮದ್ದಿಗಿಂತಲೂ ಜೋರಾಗಿತ್ತು.

ಅಹಂ ಬಳಿ ಬರಲು ಬಿಡದೆ ಆತ್ಮೀಯತೆಯಿಂದ ಎಲ್ಲರೊಡನೆ ಬೆರೆವ ಅರ್ಚನಾ ಉಡುಪ ಅವರಿಗೆ ಸಿರಿಕಂಠ ಹಾಗೂ ವಿನಯ ದೈವದತ್ತ ಕೊಡುಗೆ. ಪರ ಗಾಯಕಿಯರ ಹಾಡುಗಳನು ಸುಶ್ರಾವ್ಯವಾಗಿ ಹಾಡಿ "ಹಾಡು ಹಳೆಯದಾದರೇನು ಭಾವ ನವ ನವೀನ" ನೀಡುವ ನಮ್ಮವರೇ ಆದ ಅರ್ಚನಾ ಉಡುಪ, ದಿವ್ಯಾ ರಾಘವನ್ ರಂತಹ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗವೇ ಅಲ್ಲದೆ ಪರ ಭಾಷಿಗರು ಗುರುತಿಸಿ ಪ್ರೋತ್ಸಾಹಿಸಿ, ಪೋಷಿಸಲಿ. ಮುಂಬರುವ ಕಿರಿಯ ಗಾಯಕಿಯರು ಇವರ ಗೀತೆಗಳನು ಹಾಡುವಂತಹ ಕಾಲಬರಲಿ ಎಂದು ಮನ ಹಾರೈಸಿತು.

ಸುಬ್ಬಣ್ಣನವರ ಭಾವಗೀತೆಗಳಿಗೆ ಕನ್ನಡವರಿಯದ, ಸಿಂಗಪುರದ ಕಲಾವಿದರಾದ ಸೆಬಸ್ಟಿಯನ್-ಕೀ ಬೋರ್ಡ್ ಹಾಗೂ ಅಶ್ವಿನಿ ಮಾಲ್ಶೇಕರ್ ಅವರ ತಬಲಾ ಸಾರಥ್ಯ ಸಂಗೀತಕ್ಕೆ ಭಾಷೆ ಮುಖ್ಯವಲ್ಲ ಎಂಬುದನು ಸಾಬೀತು ಪಡಿಸೀತು. ಸಿಂಗಪುರದ ಕನ್ನಡ ಸಂಘದ ವತಿಯಿಂದ 2006ಸಾಲಿನ ಸಿಂಗಾರ ಪುರಸ್ಕಾರ ವಿಜೇತರಾದ ಪ್ರಣವ್ ಚೆನ್ನಕೇಶವ, ಅರ್ಚನಾ ಗಣಪತಿ, ಅಶ್ವಿನ್ ಹಲಗೇರಿ ಅವರಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಂದ ಪ್ರಶಸ್ತಿ ಪತ್ರ ವಿತರಣೆ ಆಯಿತು.

ಜತೆಗೆ, "ಈ ಭಾವಸಂಗಮ" ಕಾರ್ಯಕ್ರಮದ ಸಹ-ಪ್ರಾಯೋಜಕರಾದ XLRI, Jamshedpur(School of Business & Human Resources(Singapore Chapter") ಸಂಸ್ಥೆಯ ನಿರ್ದೇಶಕರಾದ ರಾಜಶ್ರೀ ಮೂರ್ತಿ ಅವರಿಂದ 2007ನೇ ಸಾಲಿನ ಸಿಂಗಾರ ಬ್ಯಾಡ್ಮಿಂಟನ್ ಕಪ್-ರಮ್ಯ(ಲೇಡಿಸ್ ಸಿಂಗಲ್ಸ್), ಗಾಯತ್ರಿ ಜೋಯಿಸ್ ಮತ್ತು ಶಶಿಮುಖಿ(ಲೇಡೀಸ್ ಡಬಲ್ಸ್), ಅಚ್ಚಯ್ಯ(ಮೆನ್ಸ್ ಸಿಂಗಲ್ಸ್), ಡಾ.ಶ್ರೀನಿವಾಸ್ ಮತ್ತು ಅಚ್ಚಯ್ಯ(ಮೆನ್ಸ್ ಡಬಲ್ಸ್), ಗಾಯತ್ರಿ ಜೋಯಿಸ್ ಮತ್ತು ಜಯದೇವ್(ಮಿಶ್ರ ಡಬಲ್ಸ್) ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಸಿ.ಡಿ., ಕ್ಯಾಸೆಟ್‍ಗಳ ಮೂಲಕ ಸುಬ್ಬಣ್ಣನವರ ಗಾನಸುಧೆಯನು ಸವಿಯುತ್ತಿದ್ದ ನಾವು, ಇಂದು ಪ್ರತ್ಯಕ್ಷವಾಗಿ ಕಾಡುಕುದುರೆಯೇರಿ ಬಂದ ಧೀರ ಸುಬ್ಬಣ್ಣನ ಗಾನಸುಧೆಯನು ಸವಿದು ಮನದ ಕಾಡು ಕುದುರೆ ಏರಿ ಕಾವ್ಯ-ಭಾವ ಸಾಮ್ರಾಜ್ಯದತ್ತ ನಾಗಾಲೋಟದಿ ಧಾವಿಸಿದ್ದಂತೂ ಅಕ್ಷರಶಃ ನಿಜವಾಗಿತ್ತು. ಕನ್ನಡ ಕವಿದಿಗ್ಗಜರ ಕಾವ್ಯ ಡಿಂಡಿಮವನು ತತ್ವಾರ್ಥದೊಂದಿಗೆ ಸಾರುವ ಸುಬ್ಬಣ್ಣನವರ ಶೈಲಿಯ ವೈಶಿಷ್ಟತೆಗೆ ನಮನ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more