ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ಭೂಕಂಪ;ಬದುಕಿದೆಯಾ ಬಡಜೀವ?

By ಮಾಲಾರಾವ್ , ಬೇಏರಿಯಾ
|
Google Oneindia Kannada News


map courtsey: USGS ಉತ್ತರ ಕ್ಯಾಲಿಫೋರ್ನಿಯ, ಅ. 31 : ನಮ್ಮ ಐದು ತಿಂಗಳ ಮಗ ಅಮರ್ತ್ಯ ನೆಲದ ಮೇಲೆ ಉದ್ದೋ ಉದ್ದ ಮಲಗಿದ್ದ. ಅವರಪ್ಪ ಬಲವಂತವಾಗಿ ಅವನ ಬಾಯಿಗೆ ತುರುಕುತ್ತಿದ್ದ ಹಾಲಿನ ಬಾಟಲನ್ನು ಎರಡೂ ಕೈಯಿಂದ ನೂಕುತ್ತಾ ಆಟವಾಡುತ್ತಿದ್ದ. ನಾನು ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುತ್ತಿದ್ದೆ. ಆಗ ಮಂಗಳವಾರ ರಾತ್ರಿ(ಅ.30)ಎಂಟು ಗಂಟೆ ನಾಕು ನಿಮಿಷ(ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗ್ಗೆ 8ಗಂಟೆ). ಆಗ ಕೇಳಿಸಿದ್ದು.....ಧಭ್ ದಭಾ ದಭ್ !

ಏನಿದು... ಶಬ್ದ...? ನಾನು ಅಡುಗೆ ಮನೆಯಿಂದ ಹೊರಬರುತ್ತಾ ಕೇಳಿದೆ. 'ಅರ್ಥ್ ಕ್ವೇಕ್ ಓಡು...ಓಡು..." ನಾನು ಬರಿದೇ ಕಣ್ಣು ಪಿಳುಕಿಸುತ್ತಾ ನಿಂತುಬಿಟ್ಟೆ. ಕಾಲು ಕೆಳಗಡೆ ಇನ್ನೂ ಭೂಮಿ ಕಂಪಿಸುತ್ತಿತ್ತು.

ಮರು ನಿಮಿಷದಲ್ಲೇ ಉಟ್ಟ ಬಟ್ಟೆಯಲ್ಲೇ ಬರಿಯ ಬನಿಯನ್ ನಲ್ಲಿದ್ದ ಮಗುವನ್ನೂ ಎತ್ತಿಕೊಂಡು ಹೆಪ್ಪುಗಟ್ಟಿಸುವ ಚಳಿಯಲ್ಲಿ ಬಯಲಲ್ಲಿ ನಿಂತಿದ್ದು... ಮೂರು ವಾರದ ಹಸುಳೆ ಎತ್ತಿಕೊಂಡು ಹಸಿ ಬಾಣಂತಿಯೊಂದಿಗೆ ಹೊರಗಡೆ ಓಡಿ ಬಂದವರನ್ನು ನೋಡಿದಾಗ ಏನೆಂದು ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ.

ನಮ್ಮನೆಯನ್ನು ಯಾರೋ ಎತ್ತಿ ಎತ್ತಿ ಕುಕ್ಕಿದರು ಎಂದು ಆಘಾತದಿಂದ ಅಳುತ್ತಿದ್ದ ನಾಲ್ಕರ ಪೋರ. ಭಾರತದಿಂದ ಮಗನ ಮನೆಗೆ ಬಂದ ಹಿರಿಯ ದಂಪತಿಗಳ ಕಣ್ಣಲ್ಲಿ ಕಂಡಿದ್ದು ಯಾವ ಭಾವ...? ಅಂದ ಹಾಗೇ ಸಾಕ್ರಮೊಂಟೊ, ಸೊನಾಮ ಮತ್ತು ಲಾಸ್ ಬಲೋಸ್ ಪ್ರದೇಶಗಳಲ್ಲಿ ಭೂಕಂಪದ ಬಿಸಿ ಮುಟ್ಟಿದೆ. ಈ ರಾಜ್ಯದಲ್ಲಿ ಸುಮಾರು 60.000 ಭಾರತೀಯರು ನೆಲೆಸಿದ್ದಾರೆ.

***

ಕ್ಯಾಲಿಪೋರ್ನಿಯ ಯಾವತ್ತಿಗೂ ಅರ್ಥ್ ಕ್ವೇಕ್ ಪ್ರೋನ್ ಏರಿಯಾ ಎಂದೇ ಹೇಳಲ್ಪಡುತ್ತದೆ. ಅದರಲ್ಲೂ ಬೇ‌ಏರಿಯಾ ನೂರಾರು ಇಂಥಾ ಕಂಪಿಸುತ್ತಿರುವ ಫಾಲ್ಟ್ ಗಳ ಮೇಲೇ ನಿಂತಿದೆ. ಈ ನೂರಾರು ಫಾಲ್ಟ್ ಗಳಲ್ಲಿ ಕೇವಲ ಏಳೆಂಟು ಫಾಲ್ಟ್ ಗಳಿಗೆ ಮಾತ್ರ ಭಾರೀ ಭೂಕಂಪ ಉಂಟು ಮಾಡುವ ಸಾಮರ್ಥ್ಯವಿದೆ. ಇವುಗಳಲ್ಲಿ ಹೇವರ್ಡ್ ಫಾಲ್ಟ್ ಮೊದಲು ನಂತರದ ಸಸ್ಪೆಕ್ಟ್ ಸ್ಯಾನ್ ಅಂಡ್ರಿಯಾಸ್. ಆದರೆ ನೆನ್ನೆ 5.6ಮಟ್ಟದ ಭೂಕಂಪಕ್ಕೆ ಕಾರಣವಾಗಿದ್ದು ಕೆಲವೆರಾಸ್ ಎಂಬ ಫಾಲ್ಟ್!

***

ಕಳೆದ ವಾರವಷ್ಟೇ ಬೇ ಏರಿಯಾದ ಪ್ರಮುಖ ಪತ್ರಿಕೆಯಲ್ಲಿ ಭೂಕಂಪ ಸಿದ್ದತೆ ಬಗ್ಗೆ ಬಂದ ಮುಖಪುಟ ಲೇಖನ ಓದಿ, ಹೌದೌದು ನಾವೂ ತಯಾರಾಗಿರಬೇಕು ಅಂತ ಮಾತಾಡಿಕೊಂಡಿದ್ದೆವು. ಮರುಘಳಿಗೆಯಲ್ಲೇ ಮರೆತೂ ಬಿಟ್ಟಿದ್ದೆವು. ಹೇವರ್ಡ್ ಫಾಲ್ಟ್ ಪ್ರತಿ ನೂರಾನಲವತ್ತು ವರ್ಷಗಳಿಗೊಮ್ಮೆ ಮೇಜರ್ ಭೂಕಂಪಕ್ಕೆ ಕಾರಣವಾಗಿದೆಯಂತೆ. ಅಂದಹಾಗೆ ಕಳೆದ ಭಾನುವಾರಕ್ಕೆ ಪೂರಾ ನೂರಾ ಮೂವತ್ತೊಂಭತ್ತು ವರ್ಷ ಕಳೆಯಿತಂತೆ..!!

ನೋಡಿ : http://www.mercurynews.com/breakingnews/ci_7327905

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X