ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶವಂತ ಸರದೇಶಪಾಂಡೆ ಎಂಬ ನಗೆಯಹಂಡೆ!

By Staff
|
Google Oneindia Kannada News


ಜ್ಯೋತಿಷ್ಯ ಕೇಳೋದರಲ್ಲಿ ಮತ್ತು ನಂಬೋದರಲ್ಲಿ ಸಿಂಗಪುರದವರೇನು ಹಿಂದೆ ಉಳಿದಿಲ್ಲ! ಹೀಗಾಗಿ ಮೊನ್ನೆ ‘ರಾಶಿ ಚಕ್ರ’ದ್ದೇ, ಅಲ್ಲಿ ಮಾತು. ಆದರೆ ಈ ‘ರಾಶಿ ಚಕ್ರ’ ಹಿಡಿದು ನಿಂತವರು ಜ್ಯೋತಿಷಿಯಲ್ಲ, ನಮ್ಮ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ!

Humor in Astrology by Sirdeshpandeಕೆಲ ವರುಷಗಳ ಹಿಂದೆ ಅಮೆರಿಕದಲ್ಲಿ ಓದಲು ಹೋದ ಭಾರತೀಯ ವಿದ್ಯಾರ್ಥಿಯೋರ್ವ ಪಾದಚಾರಿಗಳಿಗೆಂದೇ ಮೀಸಲಾದ ದಾರಿಯಲ್ಲಿ ಎಂದಿನಂತೇ ತನ್ನ ರೂಮಿನತ್ತ ನಡೆದಿದ್ದ. ಆ ದಿನ ಎದುರಿಗೆ ಕಂಡದ್ದು; do not walk ಎಂಬ ಫಲಕ. ರಸ್ತೆ ದಾಟಿದರೆ ತನ್ನ ರೂಮ್‌ ಸಿಗುತ್ತದೆ ಅನ್ನಿಸಿತು.

ತಕ್ಷಣ ಏನೊಂದೂ ಯೋಚಿಸದೆ ಅತ್ತಿತ್ತ ನೋಡಿದ. ಯಾವ ವಾಹನದ ಸುಳಿವೂ ಕಾಣಲಿಲ್ಲ. ಸುಯ್ಯನೆ ರಿkುೕಬ್ರಾ ಕ್ರಾಸಿಂಗ್‌ ಮೇಲೆ ಓಡಿದ. ಇನ್ನೇನು ರಿkುೕಬ್ರಾ ಕ್ರಾಸಿಂಗ್‌ ದಾಟಿ ಆ ಕಡೆ ಹೆಜ್ಜೆ ಇಡಬೇಕು ಎದುರಿಗೆ ಪ್ರತ್ಯಕ್ಷನಾದ; ಕಪ್ಪನೆಯ ಸಿಟ್ಟಿನ ಮುಖದ ಧಡೂತಿಯ ಪೋಲೀಸಪ್ಪ.

ಮೂತಿ ಸೊಟ್ಟ ಮಾಡಿ ಇವನ ಕೈ ಹಿಡಿದು ಡು ನಾಟ್‌ ವಾಕ್‌ ಫಲಕ ತೋರಿಸಿದ. ಕ್ರಾಸ್‌ ಮಾಡಿದ ಆ ವ್ಯಕ್ತಿ sorry sir, I saw the board. That’s why I didnt walk, I ran this side ಎಂದ. ಈ ಮಾತಿಗೆ ಜೋರಾಗಿ ನಕ್ಕ ಆ ಪೋಲಿಸಪ್ಪ ಡೋಂಟ್‌ ಡೂ ದಿಸ್‌ ನೆಕ್ಸ್ಟ್‌ ಟೈಮ್‌ ಎಂದು ಗದರಿಸಿ ಕೈಬಿಟ್ಟ.

ಪರದೇಶ, ಮಾಡಿದ್ದು ತಪ್ಪು, ಸಿಕ್ಕದ್ದು ಪೊಲೀಸ್‌ ಕೈಗೆ. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ತಲೆ ಉಪಯೋಗಿಸಿ ತನ್ನ ಹಾಸ್ಯವನ್ನು ರಾಮಬಾಣವಾಗಿ ಬಳಸಿ ಪೊಲೀಸಪ್ಪನ ಮೊಗದಲ್ಲಿ ನಗೆ ತರಿಸಿದ ವ್ಯಕ್ತಿ ಯಾರಾಗಿರಬಹುದೆಂದು ಊಹಿಸಬಲ್ಲಿರಾ? ಈತ ಉತ್ತಮ ವಾಕ್ಚಾತುರ್ಯದ ವರ ಪಡೆದವ, ವಿದೂಷಕ, ಮುಂದ.. ಮುಂದ ಎಂದು ಸೊಗಡಿನ ಹುಬ್ಬಳ್ಳಿ ಭಾಷೆಯ ಸಂಭಾಷಣೆ ಬರೆದವ.. ಹೆಸರು -ಯಶವಂತ ಸರದೇಶಪಾಂಡೆ. ಹುಬ್ಬಳ್ಳಿಯವ.

ದೇಶ್‌ಪಾಂಡೆ ಮೇ 26ರ ಶನಿವಾರ ಸಂಜೆ ಸಿಂಗಪುರದ ಚೈನಾ ಟೌನಿನಲ್ಲಿರುವ ಮಾರಿಯಮ್ಮ ದೇಗುಲದ ಸಭಾಂಗಣದಲ್ಲಿ ಸಿಂಗಪುರ ಕನ್ನಡಿಗರಿಗಾಗಿ ‘ರಾಶಿಚಕ್ರ’ ಎಂಬ ನಾಟಕ ಪ್ರದರ್ಶಿಸಲು ಆಗಮಿಸಿದ್ದರು. ಸಿಂಗಪುರ ಕನ್ನಡಸಂಘದ ವತಿಯಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪ್ರಪಂಚದ ಯಾವುದೇ ಭಾಷೆಯ ಪೇಪರ್‌ ನೋಡಿ, ಅಲ್ಲಿ ಭವಿಷ್ಯದ ಕಾಲಂ ಇಲ್ಲದಿಲ್ಲ. ದಿನಪತ್ರಿಕೆ ಓದುವ ಪ್ರತಿಯೋರ್ವನೂ ನಂಬಿಕೆ ಇದೆಯೋ ಇಲ್ಲವೋ ದಿನ ಭವಿಷ್ಯದತ್ತ ಒಮ್ಮೆ ಕಣ್ಣೋಟ ಹರಿಸುತ್ತಾನೆ. ಅಲ್ಲಿ ಧನ, ಸೌಖ್ಯ, ರೊಮಾನ್ಸ್‌, ಪ್ರವಾಸ, ಪ್ರೀತಿ ಕಂಡಾಗ ಮನಕ್ಕೆ ಮುದ, ಮೊಗದಲ್ಲಿ ಮುಗುಳ್ನಗೆ. ದುಃಖ, ಮರಣ, ಶತ್ರು, ಹಾನಿ ಎಂದಿದ್ದರೆ ಛೆ, ಇದನ್ನು ಯಾರು ನಂಬ್ತಾರೆ ಎಂಬ ಟೀಕೆ.

ಮೇಷದಿಂದ-ಮೀನವರೆಗಿನ ನಮ್ಮ ಚಾಂದ್ರಮಾನದ 12 ರಾಶಿಚಕ್ರಗಳ ಅಧಿಪತಿ, ತತ್ವ, ಚಿನ್ಹೆ, ಲಿಂಗಗಳನ್ನು ಆಧರಿಸಿ ಅವುಗಳ ಸ್ವಭಾವಗಳಲ್ಲಿನ ಗುಣಾವಗುಣಗಳನ್ನು ದಿನ ನಿತ್ಯದ ಯಾಂತ್ರಿಕ ಬದುಕಿನಲ್ಲಿ ಹಾಸ್ಯಮಯವಾಗಿ ಕಾಣಬಹುದು ಎಂಬುದನ್ನು ಪ್ರಸ್ತುತ ಪಡಿಸಲು ಸರದೇಶಪಾಂಡೆಯವರು ಸಿಂಗಪುರಕ್ಕೆ ಆಗಮಿಸಿದ್ದರು.

ಮರಾಠಿ ಮೂಲ ಶರದ್‌ ಉಪಾಧ್ಯಾಯ, ಅನುವಾದ ವಿವೇಕ ಕಾತರಕಿ ಅವರ ರಾಶಿಚಕ್ರವನ್ನು ಯಶವಂತ್‌ ಅವರು ಏಕ ವ್ಯಕ್ತಿ ಹಾಸ್ಯ ರಂಗ ಪ್ರಯೋಗ ಮಾಡಿದರು.

ಮೇಷದಿಂದ-ಮೀನ ರಾಶಿಯವರೆಗೆ ಆಯಾ ರಾಶಿಯ ಅಧಿಪತಿ, ತತ್ವ, ಪ್ರಾಣಿ, ಗುಣ, ಲಿಂಗಗಳನ್ನು ಪರಿಚಯಿಸಿ ಅವುಗಳಲ್ಲಿ ಬರುವ ಸ್ವಭಾವಗಳನ್ನು ಪುಷ್ಟೀಕರಿಸಿ ಆ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಯ ಸ್ವಭಾವ ಪರಿಚಯ, ಪತಿ-ಪತ್ನಿ, ಅಪ್ಪ-ಮಗ, ಸ್ನೇಹಿತರ ಯೋಚನೆ, ಸಂಭಾಷಣೆ, ಪ್ರತಿಕ್ರಿಯೆಗಳ ರೂಪುರೇಖೆಗಳನ್ನು ಹೇಗೆ ಗುರುತಿಸಬಹುದು, ಪರಸ್ಪರ ಸಂಭಾಷಣೆಗಳಲ್ಲಿ, ಪ್ರಕ್ರಿಯೆ, ಪ್ರತಿಕ್ರಿಯೆಗಳಲ್ಲಿ ಮೂಡುವ ಹಾಸ್ಯಮಯವಾಗಿ ನಿರೂಪಿಸುವುದು ಬಹಳ ಕಷ್ಟಸಾಧ್ಯವೇ ಹೌದು. ಆದರೆ ದೇಶಪಾಂಡೆ ಸಾಧ್ಯ ಮಾಡಿದ್ದರು.

ಈ ಅಂಶಗಳನ್ನು ಗಮನಿಸಿ -

ಮೇಷ ರಾಶಿ : attack is the best policy. ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆಮುಂದೆ’ ಎನ್ನುವ ಹಾಡಿನ ಶೀರ್ಷಿಕೆ, ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ಶಿವಾಜಿ, ಕಿರಣ್‌ ಬೇಡಿ.

ವೃಷಭ ರಾಶಿ : ಪ್ರಾಣಿ ಎತ್ತು, ಸ್ವಭಾವದಲ್ಲಿ ಅಲಂಕಾರ ಪ್ರಿಯರು. ಶೀರ್ಷಿಕೆ ಹಾಡು ‘ಈ ಸಮಯ ಶೃಂಗಾರಮಯ’. ಪ್ರಮುಖ ವ್ಯಕ್ತಿಗಳು ಕೃಷ್ಣ, ಸಲ್ಮಾನ್‌ಖಾನ್‌, ಪಿ.ಬಿ.ಎಸ್‌.

ಕರ್ಕ ರಾಶಿ : ಏಡಿ, ಕಾಲಿನ ಹಿಡಿತ ದೃಢ, ಮಧ್ಯಭಾಗ ಮೃದು. ‘ಕಾಣದ ದೇವರು ಊರಿಗೆ ನೂರು’ ಹಾಡಿನ ಶೀರ್ಷಿಕೆ. ಈ ರಾಶಿಯ ಗಣ್ಯವ್ಯಕ್ತಿಗಳು -ಮಹಾತ್ಮಗಾಂಧಿ, ಸುಬ್ಬುಲಕ್ಷ್ಮಿ, ಪಂಡರೀಬಾಯಿ, ನೆಹರು. ಇವರ ಅಸ್ತ್ರ ನಗು.

-ಹೀಗೆ ಪ್ರತಿಯಾಂದು ರಾಶಿಗೂ ಅದರ ಸ್ವಭಾವಕ್ಕೆ ತಕ್ಕಂತೆ ಹಾಡಿನ ಶೀರ್ಷಿಕೆ ಇತ್ತು. ಆಯಾ ರಾಶಿಗಳಲ್ಲಿ ಜನಿಸಿದ ಪ್ರಮುಖ ವ್ಯಕ್ತಿಗಳ ಚಿತ್ರಣವನ್ನು ತೋರಿಸಿ, ನಂತರ ಬೇರೆಬೇರೆ ರಾಶಿಗಳ, ವಿಭಿನ್ನ ಸ್ವಭಾವಗಳ ವ್ಯಕ್ತಿಗಳ ಸಂಭಾಷಣೆಗಳನ್ನು ಸ್ವಾರಸ್ಯವಾಗಿ ಸಭಿಕರ ಮುಂದಿಟ್ಟು ನಗೆಲಹರಿಯಲ್ಲಿ ದೇಶಪಾಂಡೆ ತೇಲಿಸಿದರು.

‘ಕನ್ನಡದಾಗ ನಗುವಂಥಾ, ಕನ್ನಡದಾಗ ಬದುಕೋವಂತ ಕನ್ನಡದ ಮಂದಿಗೆ ನಮಸ್ಕಾರ್ರೀ’ ಎಂಬ ಅಪ್ಪಟ ಹುಬ್ಬಳ್ಳಿ ಭಾಷೆಯಲ್ಲಿ ಸಭಿಕರನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಸಭಿಕರನ್ನು ರಾಶಿ ಭವಿಷ್ಯದ ಚಕ್ರಗಳ ಸುಳಿಯಲ್ಲಿ, ನಗೆಗಡಲಲ್ಲಿ ಮುಳುಗಿಸಿದ ಯಶವಂತ್‌ ಅವರ ಏಕವ್ಯಕ್ತಿ ಹಾಸ್ಯ-ರಂಗಪ್ರಯೋಗ ಬಹು ಶ್ಲಾಘನೀಯ.

ಕಡೆಯಲ್ಲಿ ‘ನೀವೆಲ್ಲರೂ 12 ರಾಶಿಗೆ ಸೇರಿದವರಲ್ಲ ಮತ್ತೊಂದು ರಾಶಿ ಇದೆ’ ಎಂದಾಗ ಏನಪ್ಪಾ ಅದು ಎಂಬ ಕುತೂಹಲ ಸಭಿಕರಲ್ಲಿ. ‘ಆ ರಾಶಿ ನಗುವ ರಾಶಿ. ನಾವೆಲ್ಲರೂ ಅದಕ್ಕೆ ಸೇರಿದವರು’ ಎಂದಾಗ ತುಂಬು ಚಪ್ಪಾಳೆ.

ವಿದೂಷಕ ವೃತ್ತಿ ಎಂಬುದು ಒಂದಾನೊಂದು ಕಾಲದಲ್ಲಿ ಬಹಳ ವಿಶಿಷ್ಟ, ವಿಶೇಷ ವೃತ್ತಿ. ಬೀರ್‌ಬಲ್‌, ತೆನಾಲಿ ರಾಮಕೃಷ್ಣರ ಕಥೆಗಳಲ್ಲಿ ಬರುವ ಹಾಸ್ಯ ಇಂದಿಗೂ ಜನಪ್ರಿಯ. ಅಂದು ಮಹಾರಾಜರಿಗೆಂದೇ ಮೀಸಲಾಗಿದ್ದ ಹಾಸ್ಯವೃತ್ತಿ ಮುಂದೆ ನಾಟಕ, ಚಿತ್ರರಂಗ, ದೂರದರ್ಶನ, ಮನೋರಂಜನಾ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಿಗೂ ತಲುಪಿತು. ಈ ದೈವದತ್ತವಾದ ಕೊಡುಗೆಯ ವರ ಪಡೆದಿರುವ ಕೆಲವೇ ಜನರಲ್ಲಿ ಯಶವಂತ ಸರದೇಶಪಾಂಡೆಯವರು ಒಬ್ಬರು.

ನಗೆಹೊನಲನ್ನು ಚಿಮ್ಮಿದ ಇದೇ ಕಾರ್ಯಕ್ರಮದ ಸಂದರ್ಭದಲ್ಲಿ ಸಿಂಗಪುರ ಕನ್ನಡಸಂಘದ ಉಪಾಧ್ಯಕ್ಷರಾದ ಜಗದೀಶ್‌ ಅವರು, ಕರ್ನಾಟಕದ ಹಿರಿಯ ಶಿಲ್ಪಿ, ವರ್ಣಚಿತ್ರಕಾರ, ಕಲಾವಿದ, ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿರುವ ಡಿ.ಎಂ. ಶಂಭು ಅವರನ್ನು ಸಿಂಗಪುರ ಕನ್ನಡ ಸಂಘದ ವತಿಯಿಂದ ಶಾಲು ಹೊದೆಸಿ, ಗೌರವಿಸಿ ಸನ್ಮಾನಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X