ಚಿಕಾಗೊ ಉತ್ಸವದ ಮೀಡಿಯಾ ಮಸಾಲಾ : ಯಾರಿಗೂ ಹೇಳ್ಬೇಡೀ!
‘ಮಳೆ ನಿಂತರೂ ಮರದ ಹನಿ ನಿಲ್ಲದು’ ಎಂಬುದು ಗಾದೆ ಮಾತು. ಚಿಕಾಗೋದಲ್ಲಿನ ಎರಡು ದಿನಗಳ ವಸಂತೋತ್ಸವಕ್ಕೆ ತೆರೆ ಬಿದ್ದಿದೆ. ವಸಂತೋತ್ಸವದಲ್ಲಿ ಕಂಡದ್ದು-ಕೇಳಿದ್ದು, ಮೋಜು-ಗೋಜು ಇವೆಲ್ಲವುಗಳನ್ನು ಈಗ ನೆನೆಯೋಣ.
- ಶ್ರೀವತ್ಸ ಜೋಶಿ, ವರ್ಜೀನಿಯಾ
ಸಾಹಿತ್ಯೋತ್ಸವದ ಆಯೋಜಕರು ಹೆಮ್ಮೆಯಿಂದ ‘‘ನಮ್ಮ ‘ವಿಂಡಿ ಸಿಟಿ’ಯಲ್ಲೀಗ ಕನ್ನಡದ ಗಾಳಿ ಬೀಸುತಿದೆ - ಪಂಜೆ ಮಂಗೇಶರಾಯರು ತೆಂಕಣಗಾಳಿ ಬೀಸುತಿದೆ... ಎಂದಂತೆ, ಬೇಂದ್ರೆಯವರು ಉತ್ತರಧ್ರುವದಿಂ ದಕ್ಷಿಣಧ್ರುವಕೂ... ಎಂದಂತೆ’’ ಎಂದು ಹೇಳಿಕೊಳ್ಳುತ್ತಿದ್ದರು. ಸಭೆಯಲ್ಲಿ ನನ್ನಪಕ್ಕ ಕುಳಿತಿದ್ದ ಡಾ।ಮೈ.ಶ್ರೀ.ನಟರಾಜ್ ಉವಾಚ: ‘‘ಹಾಗಿದ್ದರೆ ಬಾರಿಸು ಕನ್ನಡ ‘ವಿಂಡಿ’ಮವ.... ಎನ್ನೋಣವೇ?’’
*
ಹುದಯ ಠೀವಿ : ಅಮೆರಿಕನ್ನಡಿಗರ ಕನ್ನಡಪ್ರೇಮ ನಿರ್ಮಲವಾದುದು ಮತ್ತು ಶುದ್ಧಹೃದಯದ್ದು. ಆದರೆ ಈಗೀಗ ಈ ‘ಉದಯ ಟಿವಿ’ಯು ಅಮೆರಿಕನ್ನಡಿಗರ ಶುದ್ಧ ಕನ್ನಡವನ್ನೂ ಅಪಭ್ರಂಶಗೊಳಿಸುತ್ತಿದೆಯೆನ್ನದೆ ಉಪಾಯವಿಲ್ಲ. ಅಲ್ಪಪ್ರಾಣ ಮಹಾಪ್ರಾಣಗಳ ‘ಕೇವಲ ಉದಯ ಟಿವಿಯಲ್ಲಿ ಮಾತ್ರ...’ ಅಧ್ವಾನವು ಸಾಹಿತ್ಯೋತ್ಸವದಲ್ಲಿ ರಾರಾಜಿಸುತ್ತಿದ್ದ ಎರಡು ಬ್ಯಾನರ್‌ಗಳಲ್ಲೂ ಕಂಡುಬಂದ ಬಗೆಯನ್ನು ಇಲ್ಲಿ ಮತ್ತು ಇಲ್ಲಿ ನೋಡಿ.
ಕನ್ನಡ ಭಾವುಟ ಅಂತಿದ್ದದ್ದಕ್ಕೆ ಯಾರೋ ಪುಣ್ಯಾತ್ಮರು ಪ್ಲಾಸ್ಟರ್ ಹಚ್ಚಿ ಬಾಲ ಮುದುಡಿಸಿ ಸರಿಯಾಗಿಸಿದ್ದರು; ‘ಭಾರಿಸು ಕನ್ನಡ ಡಿಂಡಿಮವ...’ ಮಾತ್ರ ಭಾರಿಯಾಗಿ ಡಿಂಡಿಮ ಬಾರಿಸುತ್ತಲೇ ಇತ್ತು!
*
ಢೋಕ್ಲಾಗೆ ಢೋಕ : ಸಾಹಿತ್ಯೋತ್ಸವದ ಮೊದಲದಿನ ಸಂಜೆ ಕಾಫಿ‚-ಚಹಾ ಉಪಾಹಾರದಲ್ಲಿ ರಾಷ್ಟ್ರೀಯ ಭಾವೈಕ್ಯ ವ್ಯಕ್ತವಾದದ್ದು ‘‘ಕನ್ನಡ ಕಾರ್ಯಕ್ರಮದಲ್ಲಿ ಗುಜರಾತಿ ತಿಂಡಿ ಢೋಕ್ಲಾ ಇದ್ದುದರಿಂದ’’. ಅದು ತುಂಬಾನೇ ರುಚಿಯಾಗಿತ್ತು, ಕೊನೆಕೊನೆಗೆ ಬಂದವರಿಗೆ ‘‘ ಢೋಕ್ಲಾ ಕೇಮ್ ಶೊ?’’ ಎಂದು ಗುಜರಾತಿಯಲ್ಲಿ ಕೇಳಿದರೂ ಢೋಕ್ಲಾ No show! ಆಮೇಲೆ ಅರೋರಾ ಟೆಂಪಲ್ ಕೆಫ‚ೆಟೆರಿಯಾದಿಂದ ವಡಾ ಚಕ್ಕುಲಿ ವಿತರಣೆ.
*
ಜೈ ಜೈ ರಾಮ್ : ಫಿಲಡೆಲ್‌ಫಿಯಾ ಸಮ್ಮೇಳನದಲ್ಲಿ ಪ್ರತಿಯಾಂದು ಕಾರ್ಯಕ್ರಮವನ್ನೂ ‘ಟು-ದ-ಮಿನಿಟ್’ ಕರಾರುವಾಕ್ಕಾಗಿ ಆರಂಭಿಸಿ ಅಂತ್ಯಗೊಳಿಸಿದ ದಕ್ಷತೆಯ ರೂವಾರಿಯಾಗಿದ್ದ ಡಾ।ಜಯರಾಮ್ ಉಡುಪ ಈಸಲ ಕಾರಣಾಂತರಗಳಿಂದ ಹಾಜರಿರಲಿಲ್ಲ. ಹಾಗಾಗಿ ಕಾರ್ಯಕ್ರಮಗಳ ಆದಿ-ಅಂತ್ಯ ಕ್ಲಪ್ತತೆಗಳೂ ಅವರಂತೆಯೇ ಗೈರುಹಾಜರಾಗಿದ್ದುವು.
ಇದ್ದುದರಲ್ಲಿ ಭಾನುವಾರದ ವೇಳಾಪಟ್ಟಿ ಹೆಚ್ಚುಕಡಿಮೆ ಸರಿಯಾಗೇ ನಡೆಯಿತು. ಶನಿವಾರ ರಾತ್ರೆ ‘ಖರೋ ಖರ’ ನಾಟಕವಾರಂಭವಾದಾಗ ಹತ್ತಿರಹತ್ತಿರ ಹತ್ತೂವರೆ! ನಮಗೆ ಪೂರ್ವಕರಾವಳಿಯಿಂದ ಹೋಗಿದ್ದವರಿಗೆ ಆಗ ಹನ್ನೊಂದುವರೆ!
*
ಎಥ್‌ನಿಕ್ ರೆಡ್ಡಿ : ಅಮೆರಿಕದಲ್ಲಿ ‘ಅಕ್ಕ’ ಸಮ್ಮೇಳನಗಳೂ ಸೇರಿದಂತೆ ಯಾವುದೇ ಬೃಹತ್ ಕನ್ನಡ ಕಾರ್ಯಕ್ರಮ ನಡೆದರೂ ಅಲ್ಲಿ ಪಕ್ಕಾ ಮೈಸೂರು ಜರತಾರಿ ಕಚ್ಚೆಪಂಚೆ, ಶಾಲು, ಮೈಸೂರುಪೇಟ ಧರಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕಾಣಿಸಿಕೊಳ್ಳುವ ‘ಕನ್ನಡದಾಸ’ ರಾಘವರೆಡ್ಡಿ (ಅರಿಜೋನಾ ಪ್ರಜೆ) ಚಿಕಾಗೋ ವಸಂತ ಸಾಹಿತ್ಯೋತ್ಸವದಲ್ಲೂ ಅದೇ ಠಾಕುಠೀಕಾದ ದುಸ್ತಿನಲ್ಲಿ ವಿರಾಜಿಸುತ್ತಿದ್ದರು. ಸಾಹಿತ್ಯಗೋಷ್ಠಿಯಲ್ಲಿ ಅವರದೊಂದು ಪ್ರಸ್ತುತಿ ಸಹ ಇತ್ತು. ಇತ್ತೀಚೆಗಷ್ಟೇ ಕನ್ನಡ ಚಲನಚಿತ್ರವೊಂದನ್ನೂ ನಿರ್ಮಿಸಿದ ಖ್ಯಾತಿ ಈ ಕನ್ನಡದಾಸನದು.
*
ಅನುಪಮ-ನಿರುಪಮ :ಹಾಸ್ಯಸಾಹಿತ್ಯಗೋಷ್ಠಿಯ ನಿರ್ವಾಹಕಿಯರಾಗಿದ್ದ ಜ್ಯೋತಿಮಹಾದೇವ್ ಮತ್ತು ತ್ರಿವೇಣಿ ಎಸ್ ರಾವ್ ಗೋಷ್ಠಿಯಲ್ಲಿ ಭಾಗವಹಿಸಲಿಚ್ಛಿಸುವವರು ತಂತಮ್ಮ ಪ್ರಸ್ತುತಿಗಳನ್ನು ಮೂರು ವಾರಗಳ ಮೊದಲೇ ಸಬ್ಮಿಟ್ ಮಾಡಬೇಕೆಂದು ನಿಯಮ ವಿಧಿ-ಸಿದ್ದರು. ಶ್ರದ್ಧಾಳು ಬರಹಗಾರರು ಅದನ್ನು ಶಿರಸಾಪಾಲಿಸಿದ್ದರು ಸಹ. ಮೊದಲೇ ಯಾಕೆ ಸಬ್ಮಿಟ್ ಮಾಡಬೇಕು ಎಂಬ ಪ್ರಶ್ನೆಗೆ ನಿರ್ವಾಹಕಿಯರು/ಆಯೋಜಕರು ಕೊಟ್ಟಿದ್ದ ಸಬೂಬು - ‘‘ಮುಜುಗರ ತರುವಂಥ ಪ್ರಸ್ತುತಿಗಳು ಯಾರದಾದರೂ ಇದ್ದರೆ ಅದಕ್ಕೆ ಕಡಿವಾಣ ಹಾಕೋಕೆ’’. ಆದರೆ ಈಗ ಗೊತ್ತಾಯಿತು, ಆ ನಿಯಮವನ್ನು ಹಾಕಿದ್ದೇಕೆನ್ನೋದು! ಯಾರ್ಯಾರು ಏನೇನು ಪ್ರಸ್ತುತಪಡಿಸಲಿದ್ದಾರೆಂದು ಮೊದಲೇ ಓದಿಕೊಂಡು ಅದಕ್ಕೆ ತಕ್ಕಂತೆ ತಮ್ಮ M.C.ing ನಿರೂಪಣಾ ಸ್ಕಿೃಪ್ಟ್ ತಯಾರಿಸಿ ರಿಹರ್ಸಲ್ ಮಾಡಿ ಕಾರ್ಯಕ್ರಮ ನಡೆಸಿಕೊಡೋದು!












Click it and Unblock the Notifications