ನಗೆಗನ್ನಡದ ನಗಾರಿ ನುಡಿಸಿದ ಚಿಕಾಗೊ ಸಾಹಿತ್ಯೋತ್ಸವ


ನಗೆಗನ್ನಡಂ ಗೆಲ್ಗೆ... ಎಂಬ ಸರಸಮಯ ಸದುದ್ದೇಶದಿಂದ ಸೇರಿದ್ದ ಕನ್ನಡ ಸಾಹಿತ್ಯಾಭಿಮಾನಿಗಳು ಈ ಸಮ್ಮೇಳನದ ದೆಸೆಯಿಂದ ನಗೆಗಡಲಲ್ಲಿ ತೇಲಿದ ಧನ್ಯತಾಭಾವವನ್ನು ಹೊಂದಿದರು. ಓದಿ, ವಸಂತ ಸಾಹಿತ್ಯೋತ್ಸವದ ವರದಿ.

Prof. A.R. Mitra speaking at Vasantha Sahitytotsava, Chicagoಅಮೆರಿಕದ ಕನ್ನಡ ಸಾಹಿತ್ಯರಂಗವು ಮೇ 19 ಮತ್ತು 20 ಶನಿ/ಭಾನುವಾರಗಳಂದು ಚಿಕಾಗೊದ ಅರೋರಾ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಸಂತ ಸಾಹಿತ್ಯೋತ್ಸವ’ ಕಾರ್ಯಕ್ರಮವು ಸಾಂಗವಾಗಿ ನೆರವೇರಿತು.

ಕ.ಸಾ.ರಂ ಆಶ್ರಯದಲ್ಲಿ ಇದು ಮೂರನೆಯ ಸಮ್ಮೇಳನ - ಫಿಲಡೆಲ್‌ಫಿಯಾ (2004), ಲಾಸ್‌ಏಂಜಲೀಸ್‌ (2005) ಮತ್ತೀಗ ಚಿಕಾಗೊ (2007). ಈ ವರ್ಷದ ಸಮಾವೇಶದಲ್ಲಿ ಹಾಸ್ಯಸಾಹಿತ್ಯಕ್ಕೆ ವಿಶೇಷ ಒತ್ತು.

ಸಮ್ಮೇಳನದ ಮುಖ್ಯ ಅತಿಥಿ ಕನ್ನಡದ ಹಿರಿತಲೆಮಾರಿನ ಹಾಸ್ಯಸಾಹಿತಿ ಪ್ರೊ।ಅ.ರಾ.ಮಿತ್ರ ಅವರು ವಿದ್ವತ್ಪೂರ್ಣ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ಸಾಹಿತ್ಯದಲ್ಲಿ ಹಾಸ್ಯರಸ ಹರಿದುಬಂದಿರುವ ಪಥವನ್ನು ಗುರುತಿಸಿದರು. ಅಮೆರಿಕನ್ನಡಿಗರು ಬರೆದ, ಲೇಖನಗಳ ‘ನಗೆಗನ್ನಡಂ ಗೆಲ್ಗೆ’ (ಸಂಪಾದಕರು: ಡಾ।ಎಚ್‌.ಕೆ.ನಂಜುಂಡಸ್ವಾಮಿ ಮತ್ತು ಎಚ್‌.ವೈ.ರಾಜಗೋಪಾಲ್‌) ಸಂಕಲನಗ್ರಂಥವನ್ನು ಪ್ರೊ।ಮಿತ್ರ ಬಿಡುಗಡೆ ಮಾಡಿದರು.

ಕರ್ನಾಟಕದಿಂದ ಬಂದಿರುವ ಇನ್ನೋರ್ವ ಅತಿಥಿ ಉಪನ್ಯಾಸಕ, ವಿಮರ್ಶಕ ಎಚ್‌. ಎಸ್‌. ರಾಘವೇಂದ್ರ ರಾವ್‌ ಅವರು ‘ಕನ್ನಡದಮರ ಚೇತನ ಮಾಸ್ತಿ’ (ಸಂಪಾದಕ : ನಾಗ ಐತಾಳ) ಗ್ರಂಥವನ್ನು ಬಿಡುಗಡೆ ಮಾಡಿದರು.

ರಾಷ್ಟ್ರಕವಿ ಕವಿ ಡಾ। ಜಿ.ಎಸ್‌.ಶಿವರುದ್ರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವಿತ್ತು; ಇತ್ತೀಚೆಗೆ ನಮ್ಮನ್ನಗಲಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರಿಗೆ ಶೃದ್ಧಾಂಜಲಿಯರ್ಪಣೆಯ ಕಾರ್ಯಕ್ರಮವೂ ಇತ್ತು. ‘ನಮ್ಮ ಬರಹಗಾರರು’ ಕಾರ್ಯಕ್ರಮದಲ್ಲಿ ಕಳೆದ ವರ್ಷದಲ್ಲಿ ಪುಸ್ತಕ ಪ್ರಕಟಣೆ ಮಾಡಿದ ಅಮೆರಿಕನ್ನಡಿಗ ಲೇಖಕರ ಕವಿ-ಕೃತಿ ಪರಿಚಯವಿತ್ತು. ಮೊದಲದಿನದ ಕಾರ್ಯಕ್ರಮದ ಕೊನೆಯಲ್ಲಿ ಡಾ।ಚಂದ್ರಶೇಖರ ಕಂಬಾರ ವಿರಚಿತ ನಾಟಕ ’ಖರೋ ಖರ’ವನ್ನು ಸ್ಥಳೀಯ ‘ಶಿಕರ’ ತಂಡದವರು ಅಭಿನಯಿಸಿದರು.

ಎರಡನೆಯ ದಿನದ ಕಾರ್ಯಕ್ರಮಗಳು ಮೊದಲ ದಿನದ್ದಕಿಂತಲೂ ಹೆಚ್ಚು ಆಕರ್ಷಕವಾಗಿದ್ದುವು. ‘ಸಾಹಿತ್ಯಗೋಷ್ಠಿಯಲ್ಲಿ’ ಹತ್ತಕ್ಕೂ ಅಧಿಕ ಕವಿ-ಕವಯಿತ್ರಿ-ಲೇಖಕರಿಂದ ಸ್ವರಚಿತ ಕೃತಿವಾಚನವಿತ್ತು. ಚಿಕಾಗೋನಿವಾಸಿ ಕಡೂರು ಮೂಲದ ತ್ರಿವೇಣಿ ಎಸ್‌ ರಾವ್‌ ಅವರ ಅಂಕಣಬರಹಗಳ ಸಂಕಲನ ‘ತುಳಸೀವನ’ ಪುಸ್ತಕವನ್ನು ಪ್ರೊ।ಅ.ರಾ.ಮಿತ್ರ ಬಿಡುಗಡೆ ಮಾಡಿದರು.

ತದನಂತರ ಎಚ್‌.ಎಸ್‌.ರಾಘವೇಂದ್ರ ರಾವ್‌ ಅವರು ವಿಚಾರಪೂರ್ಣ ಭಾಷಣದಲ್ಲಿ ಅನಿವಾಸಿ ಕನ್ನಡಿಗರ ಸಾಹಿತ್ಯರಚನೆಯಲ್ಲಿನ ಕೆಲ ಗಮನಾರ್ಹ ಅಂಶಗಳ ಕುರಿತು ಅವಲೋಕಿಸಿದರು. ಭೋಜನಾನಂತರ ಪ್ರೊ।ಅ.ರಾ.ಮಿತ್ರ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ವಲ್ಲೀಶ ಶಾಸ್ತ್ರಿಯವರು ನಡೆಸಿಕೊಟ್ಟರು.

ನಗೆಗನ್ನಡಂ ಗೆಲ್ಗೆ... ಎಂಬ ಸರಸಮಯ ಸದುದ್ದೇಶದಿಂದ ಸೇರಿದ್ದ ಕನ್ನಡ ಸಾಹಿತ್ಯಾಭಿಮಾನಿಗಳು ಈ ಸಮ್ಮೇಳನದ ದೆಸೆಯಿಂದ ನಗೆಗಡಲಲ್ಲಿ ತೇಲಿದ ಧನ್ಯತಾಭಾವವನ್ನು ಹೊಂದಿದರು. ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕೊಡುತ್ತ ಬಂದಿರುವ ಕನ್ನಡ ಸಾಹಿತ್ಯರಂಗದ ಇನ್ನೊಂದು ಯಶಸ್ವಿ ಸಾಧನೆಗೆ ಸಾಕ್ಷಿಯಾದರು.

ನಿರೀಕ್ಷಿಸಿ : ಸಮ್ಮೇಳನದ ಅದೂ-ಇದೂ / ಕಂಡದ್ದು-ಕೇಳಿದ್ದು ಸಂಗತಿಗಳ ಸಾರಸಂಗ್ರಹ!

ಚಿಕಾಗೋ ವಸಂತ ಸಾಹಿತ್ಯೋತ್ಸವದ ಚಿತ್ರಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+