ಶಿವಶಂಕರ ಭಟ್ ಬಣಕ್ಕೆ ಕಾವೇರಿ ಅಧಿಪತ್ಯ
ಸಕ್ರಿಯ ಚಟುವಟಿಕೆಗಳಲ್ಲಿ ತಣ್ಣಗೆ ತೊಡಗಿಸಿಕೊಳ್ಳುವ ಕಾವೇರಿ ಸಂಘಟನೆ, ಚುನಾವಣೆ ವೇಳೆಗೆ ತುಸು ಕಾವೇರುತ್ತದೆ. ಕಾವೇರಿ ಚುನಾವಣೆ ತೀವ್ರ ಪೈಪೋಟಿಯಿಂದಾಗಿಯೇ ಈ ಸಲ ಗಮನ ಸೆಳೆದಿತ್ತು. ಅಂತಿಮವಾಗಿ ಕಾವೇರಿ ಸಂಘದ ನೂತನ ಅಧ್ಯಕ್ಷರಾಗಿ ಯುವಕ ಶಿವಶಂಕರ ಭಟ್ ಆಯ್ಕೆಯಾಗಿದ್ದಾರೆ. ಪೋಟಿ ಪೈಪೋಟಿ ಎಲ್ಲೆಡೆ ಇದ್ದದ್ದೇ. ಅದು ಆಕ್ಷಣಕ್ಕೆಷ್ಟೇ ಸೀಮಿತವಾದರೆ ಚೆಂದ. ಈ ಸತ್ಯ ಕಾವೇರಿ ಬಳಗಕ್ಕೂ ಗೊತ್ತಿದೆ. ಹೊಸ ಅಧ್ಯಕ್ಷರಿಂದ ಕಾವೇರಿ ಮತ್ತಷ್ಟು ಸಮೃದ್ಧವಾಗಲಿ ಎಂಬುದು ಸದ್ಯದ ಆಶಯ.
- ಎಸ್ಕೆ. ಶಾಮಸುಂದರ, ಬೆಂಗಳೂರು.
ಕನ್ನಡನಾಡಿನ ಗಡಿಯಾಚೆಗಿನ ಅತ್ಯಂತ ಹಳೆಯದೂ,ಚಲನಶೀಲವೂ, ಪ್ರಭಾವಿಯೂ ಆದ ಕನ್ನಡ ಕೂಟಗಳಲ್ಲಿ ವಾಷಿಂಗ್ ಟನ್ ಡಿಸಿ ಪ್ರದೇಶದಲ್ಲಿರುವ ಕಾವೇರಿ ಕನ್ನಡ ಸಂಘವೂ ಒಂದು. ಈ ಕೂಟದಲ್ಲಿ ಕನ್ನಡ ಜನಸೇವೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತುಕೊಳ್ಳುವವರ ಪಟ್ಟಿ ತುಂಬ ಉದ್ದವುಂಟು. ಇದೇ ಕಾರಣದಿಂದಾಗಿ ಈ ಬಾರಿಯ ವಾರ್ಷಿಕ ಸದಸ್ಯರ ಸಭೆ ಮತ್ತು ಪದಾಧಿಕಾರಿಗಳ ಚುನಾವಣೆ ಅತ್ಯಂತ ಸ್ಪರ್ಧಾತ್ಮಕವಾಗಿತ್ತು, ಬಿರುಸಾಗಿತ್ತು, ಕಾವೇರಿತ್ತು.
ಇಲ್ಲಿನ ಸ್ಥಳೀಯ ಶಿವವಿಷ್ಣು ದೇವಸ್ಥಾನದಲ್ಲಿ ಡಿಸೆಂಬರ್ 15ರ ಶನಿವಾರ ನಡೆದ ಚುನಾವಣೆಯಲ್ಲಿ ಯುವಕ ಶಿವಶಂಕರ ಭಟ್ ಮೂರನೆ ಎರಡರಷ್ಟು ಮತಗಳನ್ನು ಗಳಿಸಿ ಅಧ್ಯಕ್ಷರಾಗಿ ಜಯಮಾಲೆ ಧರಿಸಿದರು. ಕಳೆದ ಸಾಲಿನ ಆಡಳಿತ ಮಂಡಳಿಯಲ್ಲಿ ಶಿವು ಅವರು ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಕಣದಲ್ಲಿದ್ದ ಇತರ ಅಭ್ಯರ್ಥಿಗಳೆಂದರೆ 2006ರ ಬಾಲ್ಟಿಮೋರ್ ಅಕ್ಕ ಸಮ್ಮೇಳನದ ಆಹಾರ ಸಮಿತಿ ಮುಖ್ಯಸ್ಥರಾಗಿ ಸೇವೆಸಲ್ಲಿಸಿದ್ದ ವಿಜಯೇಂದ್ರನ್. ಅವರಿಗೆ ಮೂರನೇ ಒಂದು ಭಾಗದಷ್ಟು ಮತಗಳು ದಕ್ಕಿದವು.
ಚುನಾವಣೆ ಬಗ್ಗೆ ಅಷ್ಟೇನೂ ಇಷ್ಟವಿಲ್ಲದಿದ್ದರೂ ಸಹ, ಕಾವೇರಿಯ ಕೆಲವು ಹಿರಿಯ ತಲೆಗಳ ಕುಮ್ಮಕ್ಕಿನಿಂದಾಗಿ ಸ್ಪರ್ಧಾಕಣಕ್ಕೆ ಧುಮುಕಿದ್ದ ಶ್ರೀನಾಗೇಶ್ ಶಿವಸ್ವಾಮಿ ಅವರಿಗೆ, ಅತ್ಯಲ್ಪ ಮತಗಳು ಪ್ರಾಪ್ತವಾದವು. ಹೀಗಾಗಿ ಠೇವಣಿ ಕಳೆದುಕೊಳ್ಳಬೇಕಾಯಿತು. ಉತ್ಸಾಹಿ ನಾಗೇಶ್ ಅವರು ಕಾವೇರಿ ಸಂಘದ ಆಶ್ರಯದಲ್ಲಿ ಜರುಗಿದ್ದ ಬಾಲ್ಟಿಮೋರ್ ಸಮ್ಮೇಳನದ ಸ್ವಾಗತ, ಸಾರಿಗೆ, ವಾಸ್ತವ್ಯ ವ್ಯವಸ್ಥೆ ಮಾಡುವ ಕಮಿಟಿಯಲ್ಲಿದ್ದು ಜನಮೆಚ್ಚುವ ಆದರಾಥಿತ್ಯ ನೀಡಿದ್ದರು.
ಕಾವೇರಿಯ ಉಪಾಧ್ಯಕ್ಷರಾಗಿ ಮೃತ್ಯುಂಜಯ ಮಹಾಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿ ಸ್ಥಾನವೂ ಅವಿರೋಧವಾಗಿ ನಿರ್ಣಯವಾಗಿ ಮೀನಾ ರಾವ್ ಆಯ್ಕೆಯಾದರು. ಆದರೆ, ಜಂಟಿ ಕಾರ್ಯದರ್ಶಿ ಮತ್ತು ಖಚಾಂಜಿ ಸ್ಥಾನಗಳಿಗೆ ಹಣಾಹಣಿ ಪೈಪೋಟಿ ನಡೆದು ಅಂತಿಮವಾಗಿ , ಕ್ರಮವಾಗಿ ಪ್ರದೀಪ್ ರಾಮಕೃಷ್ಣಯ್ಯ ಮತ್ತು ಮಾಯಾ ಹರಪನಹಳ್ಳಿ ಜಯಭೇರಿ ಬಾರಿಸಿದರು. ಜಂಟಿ ಖಚಾಂಜಿ ಸ್ಥಾನ ರಾಮಮೂರ್ತಿ ಅವರ ಪಾಲಾಯಿತು.
ಕಾವೇರಿ ಸಂಘ ಒಂದು ಅವಿಭಕ್ತ ಕುಟುಂಬದಂತೆ ಸಾಮರಸ್ಯ ಸಾಧಿಸಿಕೊಂಡು ಬಂದಿದೆ. ಆದರೂ ಸಹ,ಈಚಿನ ವರ್ಷಗಳಲ್ಲಿ ಚುನಾವಣೆಗಳು ತುಂಬ ಪೈಪೋಟಿಯಿಂದ ಕೂಡಿರುವುದನ್ನು ಉತ್ತರ ಅಮೆರಿಕಾ ಕನ್ನಡ ಸಂಘಗಳ ಚುನಾವಣಾ ವಿಶ್ಲೇಷಕರು ಗಮನಿಸಿದ್ದಾರೆ. ವಾರ್ಷಿಕ ಮಹಾಸಭೆ ಬಂತೆಂದರೆ ಎರಡು ಅಥವಾ ಮೂರು ಗುಂಪುಗಳು ತಲೆಎತ್ತಿ ಚುನಾವಣಾ ಪ್ರಚಾರಕ್ಕೆ ತೊಡಗುತ್ತವೆ. ಈ ಬಾರಿ ಶಿವಶಂಕರ ಭಟ್ ಗುಂಪಿನ ಗಾಳಿ ಪ್ರಬಲವಾಗಿ ಬೀಸಿದ ಕಾರಣ ಅನೇಕ ಸ್ಥಾನಗಳು ಅವರ ಗುಂಪಿನ ಪಾಲಾಗಿವೆ.
ಇತರ ಪದಾಧಿಕಾರಿಗಳ ಹೆಸರುಗಳು ಇಂತಿವೆ : ಬಸವರಾಜ್ ಮುದಿಗೌಡರ್, ಗುರು ನಾಗರಾಜ್, ಜಯಶ್ರೀ ಜಗದೀಶ್, ಪ್ರಕಾಶ್ ಭಟ್, ಶೈಲನ್ ಮಂಡ್ಯ, ಶ್ರೀನಿವಾಸ್ ಗೌಡ. ಕಾವೇರಿ ಸಂಘದ ಸಂವಿಧಾನದ ಪ್ರಕಾರ ಚುನಾವಣಾ ಪ್ರಕ್ರಿಯೆಗಳು ವಿಧಿಬದ್ಧವಾಗಿ ನಡೆಯುವಂತೆ ಚುನಾವಣಾಧಿಕಾರಿ ಸಂಜಯ್ ರಾವ್ ಮುತವರ್ಜಿ ವಹಿಸಿದ್ದರು. ಸಂಜೀವ್ ಮನಗೋಳಿ ಮತ್ತು ಸುಧೀಂದ್ರ ಅಗರ ಅವರುಗಳು ಚುನಾವಣಾ ಮೇಲ್ವಿಚಾರಣೆ ಸಮಿತಿಯಲ್ಲಿದ್ದರು.z












Click it and Unblock the Notifications