ಅಟ್ಲಾಂಟಾದಲ್ಲಿ ಹೊತ್ತಿತೋ ಹೊತ್ತಿತು ಕನ್ನಡ ದೀಪ
- ಲಕ್ಷ್ಮೀವೆಂಕಟೇಶ್, ಅಟ್ಲಾಂಟ
"ನೃಪತುಂಗ ಕನ್ನಡ ಕೂಟ" ಇದು ಅಟ್ಲಾಂಟಾದ ಹೊರನಾಡ ಕನ್ನಡಿಗರು ಕಟ್ಟಿಕೊಂಡಂತಹ ಸಂಘ. ಕಳೆದ ಶನಿವಾರ (ನ.3) ದೂರದ ಅಟ್ಲಾಂಟಾದಲ್ಲಿ ಕನ್ನಡ ಡಿಂಡಿಮ ಡಿಮಿಗುಟ್ಟಿದೆ. ಅಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಮನರಂಜನಾ ಕಾರ್ಯಕ್ರಮಗಳು ಅಬಾಲವೃದ್ಧರಾಗಿ ಎಲ್ಲರನ್ನೂ ರಂಜಿಸಿವೆ. ಈ ಕೂಟವು ಕನ್ನಡ ನಾಡುನುಡಿಯ ಬಗ್ಗೆ ಹೊಂದಿರುವ ಕಳಕಳಿ ಹೇಳತೀರದು. ನೃಪತುಂಗ ಕನ್ನಡ ಕೂಟದ ಅಧ್ಯಕ್ಷರಾದ ರಾಮಸ್ವಾಮಿಯವರು ಪ್ರಸಕ್ತ ವರ್ಷದಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ. ಜೊತೆಗೆ ಸಂಘವು ಹಲವಾರು ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಅಭಿನಂದನೆಗಳೊಂದಿಗೆ ಶುಭಾಷಯಗಳು.
ಅಟ್ಲಾಂಟದ "ನೃಪತುಂಗ ಕನ್ನಡ ಕೂಟ" ಶನಿವಾರ (ನ.3) ರಂದು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಪ್ರಾರ್ಥನೆ ಮತ್ತು ಸ್ವಾಗತಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪುಟ್ಟ ಪುಟ್ಟ ಮಕ್ಕಳು ವಿವಿಧ ತರಕಾರಿ ಮತ್ತು ಹಣ್ಣುಗಳ ವೇಷ ಧರಿಸಿ ಇಡೀ ಮಾರುಕಟ್ಟೆಯನ್ನೇ ವೇದಿಕೆಗೆ ತಂದಿದ್ದರು. ಹಣ್ಣು, ತರಕಾರಿ ನೋಡಿ ಹಬ್ಬ ಮಾಡಲು ಬಂದ ಮತ್ತಷ್ಟು ಮಕ್ಕಳು "ಇಂದು ಬಾನಿಗೆಲ್ಲ ಹಬ್ಬ" (ನೆನಪಿರಲಿ) ಚಿತ್ರದ ಹಾಡಿಗೆ ನರ್ತಿಸಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿದರು.
ಈ ಹಬ್ಬವನ್ನು ನೋಡಿದ ನಮ್ಮ 3 ವರ್ಷದ ಪುಟಾಣಿಗಳಿಗೆ ಮಂಗಣ್ಣನನ್ನೂ ನಮ್ಮೊಂದಿಗೆ ಕರೆದುಕೊಂಡು ಹೋಗೋಣವೆನ್ನಿಸಿ ಮಂಗಣ್ಣನಿಗೆ ಪೂಸಿ ಹೊಡೆಯುತ್ತಾ "ಘೇರ್ ಘೇರ್ ಮಂಗಣ್ಣ ಕಡ್ಲೆ ಕಾಯಿ ತಿನ್ನಣ್ಣ" ಎಂಬ ಮಕ್ಕಳ ಗೀತೆಗೆ ಲವಲವಿಕೆಯಿಂದ ಪುಟ್ಟ ಪುಟ್ಟ ಹೆಜ್ಜೆ ಹಾಕಿದರು. ಇನ್ನಷ್ಟು ಮಕ್ಕಳಿಗೆ ಬಳೆ ಹಾಕಿಕೊಳ್ಳಬೇಕೆನಿಸಿ "ಸೇವಂತಿ" ಚಿತ್ರದ "ಭಾಗ್ಯದ ಬಳೆಗಾರ"ನನ್ನು ಕರೆಯುತ್ತಾ ನಲಿದರು.
ಈ ವಿಶೇಷ ಹಬ್ಬದ ಸಡಗರಕ್ಕೆ ತಾಯಿ ಭುವನೇಶ್ವರಿಯನ್ನು ಸತ್ಕರಿಸಲು ಡನ್‍ವುಡಿ ಕನ್ನಡ ಶಾಲೆಯ 4 ವರ್ಷದಿಂದ 10 ವರ್ಷದ ಮಕ್ಕಳು ನಮ್ಮ ನಾಡಗೀತೆಯಾದ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಹಾಡನ್ನು ಮನದುಂಬಿ ಕ್ಯಾರಿಯೋಕಿ ಜೊತೆಗೆ ಸುಶ್ರಾವ್ಯವಾಗಿ ಹಾಡಿ, ಕನ್ನಡ ತಾಯಿಯ ಗೌರವ ಎತ್ತಿ ಹಿಡಿದಿದ್ದಲ್ಲದೆ ರಾಜ್ಯೋತ್ಸವಕ್ಕೆ ಮೆರುಗು ತಂದರು.
ಹಬ್ಬದ ಗುಂಗಿನಲ್ಲಿದ್ದ ಎಲ್ಲರನ್ನೂ ಕಾರಿನಲ್ಲಿ ಕರೆದೊಯ್ಯಲು ಬಂದ ಹುಡುಗ ಹುಡುಗಿಯರ ತಂಡ "ಕಾರ್ ಕಾರ್ ಎಲ್ನೋಡಿ ಕಾರ್" (ನನ್ನ ಪ್ರೀತಿಯ ಹುಡುಗಿ) ಎಂಬ ಹಾಡಿಗೆ ನರ್ತಿಸಿ ಎಲ್ಲರ ಮನ ತಣಿಸಿದರೆ, ಆಮೇಲೆ ಬಂದ ಮಕ್ಕಳು ಕರ್ನಾಟಕ ಶಾಸ್ತ್ರೀಯ ಸಂಗೀತ ಉಣಬಡಿಸಿದರು. ಸಂಗೀತದ ಊಟ ಮುಗಿದಿದ್ದೇ ತಡ ರೈಲಿನಂತೆ ವೇಗವಾಗಿ ಬಂದ ನಮ್ಮ ಬೆಡಗಿಯರು "ಜೋಗಿ" ಚಿತ್ರದ ಚುಕು ಬುಕು ರೈಲು ಹಾಡಿಗೆ ಲಯಬದ್ಧವಾಗಿ ಹೆಜ್ಜೆ ಹಾಕಿ ಎಲ್ಲರಲ್ಲೂ ಉತ್ಸಾಹ ತುಂಬಿ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಗಟ್ಟಿದರು. ಹಾಡಿ, ಕುಣಿದು, ನಲಿದು, ದಣಿದ ಮಕ್ಕಳನ್ನು ರಂಜಿಸಲು ಬಂದ ಯುವಕ ಯುವತಿಯರು "ಬಂಡಲೂರ ಭಂಡರೆಲ್ಲ"(ರಿಷಿ) ಚಿತ್ರದ ಹಾಡಿಗೆ ಸೊಗಸಾಗಿ ನರ್ತಿಸಿ ಎಲ್ಲರನ್ನು ಕುಣಿಯುವಂತೆ ಮಾಡಿದರು.
"ನೃಪತುಂಗ ಕನ್ನಡ ಕೂಟ"ದ ಅಧ್ಯಕ್ಷರಾದ ರಾಮಸ್ವಾಮಿಯವರು ಪ್ರಸಕ್ತ ವರ್ಷದಿಂದ ನೀಡುತ್ತಿರುವ ವಿದ್ಯಾರ್ಥಿವೇತನದ ಬಗ್ಗೆ ತಿಳಿಸಿದರು. ನಮ್ಮ ಅಟ್ಲಾಂಟದ ಡಾ. ಅನ್ನಪೂರ್ಣ ಮತ್ತು ಡಾ. ಸುಬ್ರಹ್ಮಣ್ಯ ಭಟ್ ದಂಪತಿಗಳು ಉದಾರ ಮನಸ್ಸಿನಿಂದ ಈ ವಿದ್ಯಾರ್ಥಿವೇತನವನ್ನು ಪ್ರತೀ ವರ್ಷ ನೀಡುತ್ತಿರುವುದು ಬಹಳ ಶ್ಲಾಘನೀಯ.
ಇಷ್ಟೇ ಸಾಲದೆಂಬಂತೆ ಅಟ್ಲಾಂಟದಲ್ಲಿ ಕನ್ನಡಕೂಟದಿಂದ ನಡಯುತ್ತಿರುವ ಇತರ ಚಟುವಟಿಕೆಗಳಾದ ಗ್ರಂಥಾಲಯ, ಕನ್ನಡ ಶಾಲೆಗಳ ಬಗ್ಗೆ ತಿಳಿಸಿ, ಅವುಗಳ ಸ್ವಯಂಸೇವಕರಾದ ಆನಂದ ರಾಜೇ ಅರಸ್, ವಾಣಿಶ್ರೀ ರಾವ್, ರೋಹಿಣಿ ರಾವ್ ಮತ್ತು ವೆಂಕಟೇಶ್ ಬಿಳಿಗೆರೆ ಇವರುಗಳಿಗೆ ಅಭಿನಂದಿಸಿದರು. ನಮ್ಮ ರಾಷ್ಟ್ರಗೀತೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಭೋಜನಕೂಟದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು.












Click it and Unblock the Notifications