ಕೌನ್‌ ಬನೇಗ ರಾಷ್ಟ್ರಪತಿ ?!


ದೇವೇಗೌಡ, ನಾರಾಯಣಮೂರ್ತಿ, ಅಮಿತಾಭ್‌ ಬಚ್ಚನ್‌ -ಈ ಗಣ್ಯರು ರಾಷ್ಟ್ರಪತಿಯಾದರೆ ಹೇಗೆ? ಓದಿ; ಒಂದು ಹಾಸ್ಯ ಲೇಖನ.

Sharath Yalandooruಶನಿವಾರ ಬೆಳಗ್ಗೆ ಆರಾಮವಾಗಿ ಎದ್ದು ಕಾಫಿ ಕುಡಿಯುತ್ತಾ ನ್ಯೂಸ್‌ ಪೇಪರ್‌ ಮೇಲೆ ಕಣ್ಣಾಡಿಸುತ್ತಾ, ಕೂತಿದ್ದಾಗ ಜಿಗ್ರಿಯ ಸವಾರಿ ಆಗಮಿಸಿತು ಅರ್ಥಾತ್‌ ವಕ್ಕರಿಸಿತು. ಜಿಗ್ರಿ ಉರುಫ್‌ ಜಗನ್ನಾಥ ಬಾಲ್ಯದ ಗೆಳೆಯ. ಬೆಳಗ್ಗೆ ಬೆಳಗ್ಗೆ ಹೀಗೆ ವಕ್ಕರಿಸಿದ ಅಂದರೆ ಯಾವುದೋ ಗಹನವಾದ ವಿಷಯದ ಚರ್ಚೆಗೆ ಬಂದಿರಬೇಕೆಂದು ಊಹಿಸಿದೆ.

ಒಳಗೆ ಬರುತ್ತಿದ್ದಂತೆ ನನ್ನ ಮಡದಿಯ ಕಡೆ ನೋಡಿ ‘ಅತ್ತಿಗೆ ಒಂದು ಲೋಟ ಕಾಫಿ ಕೊಡಿ. ತಲೆ ಸಿಡಿತಾ ಇದೆ’ ಅಂದ ಬಾಲ್ಯದ ಗೆಳೆಯನಾದ್ದರಿಂದ ನಮ್ಮ ಮನೆಯಲ್ಲಿ ಬಹಳ ಸಲುಗೆ ಅವನಿಗೆ. ಅವನ ಮುಖ ನೋಡಿ ನಾನು ‘ಏನಪ್ಪಾ ಜಿಗ್ರಿ ಬಹಳ ದಿನಗಳಾದ ಮೇಲೆ ದರ್ಶನ ? ಜೊತೆಗೆ ಏನೋ ದೊಡ್ಡ ಸಮಸ್ಯೆ ತಲೆ ಮೇಲೆ ಬಿದ್ದಂಗೆ ಇದೆ’ ಎಂದು ಕೇಳಿದೆ ಅದಕ್ಕವನು ಉತ್ತರಿಸುವಷ್ಟರಲ್ಲಿ ಕಾಫಿ ಬಂತು, ಅರ್ಧ ಲೋಟ ಕಾಫಿ ಕುಡಿದವನೆ ನನ್ನ ಕಡೆ ನೋಡಿ ‘ಕೌನ್‌ ಬನೇಗ ರಾಷ್ಟ್ರಪತಿ?’ ಎಂದ ‘ಇದ್ಯಾವ ಚಾನೆಲ್ಲಿನ ಪ್ರೋಗ್ರಾಮಯ್ಯಾ’ ಎಂದು ಕೇಳಿದೆ ಅದಕ್ಕವನು ‘ಇದು ನಮ್ಮ ದೇಶದ ಮೈನ್‌ ಚಾನೆಲ್ಲಿನ ಅಂದರೆ ಜನತೆಯ ಇವತ್ತಿನ ಪ್ರಶ್ನೆ, ಹೇಳು ನಮ್ಮ ಮುಂದಿನ ರಾಷ್ಟ್ರಪತಿ ಯಾರಾಗಬಹುದು ?’

ನಾನು ಸ್ವಲ್ಪ ಅವನನ್ನು ರೇಗಿಸುವ ಅಂತ ‘ನಾನಂತೂ ಆಗೊಲ್ಲ ಬಿಡು’ ಅಂದೆ ಅವನು ನನ್ನನ್ನು ರೇಗಿಸುವದರಲ್ಲಿ ಏನೂ ಕಡಿಮೆ ಇಲ್ಲವೆನ್ನುವಂತೆ ‘ನಿನ್ನಂತವರು ರಾಷ್ಟ್ರಪತಿ ಆದ್ರೆ ದೇಶ ಉದ್ಧಾರ ಆದಂಗೆ’ ಅಂದ. ನಾನು ಇನ್ನೂ ಪಟ್ಟು ಬಿಡದವನಂತೆ ‘ಇನ್ಯಾರಪ್ಪಾ ನೀನೇನಾದರು ಆಗ್ತೀಯ?’ ಅಂದೆ. ಇದು ನಿಲ್ಲದ ವಾಗ್ವಾದ ಅಂತ ಅವನೇ ‘ನೋಡು ಗುರು ನಮ್ಮಂತೋರು ಯಾರು ಅಗಲ್ಲಾ ಬೇರೆ ಯಾರಾದ್ರೆ ಒಳ್ಳೆಯದು ಅಂತ ಯೋಚಿಸಿ ಹೇಳು ನೋಡೋಣ’ ಅಂದ.

ಸರಿ ಇವನಿಗೆ ಉತ್ತರ ಹೇಳದಿದ್ದರೆ ಸುಮ್ಮನೆ ತಲೆ ತಿಂತಾನೆ ಅಂತ ‘ಯಾರಾದರು ನಮ್ಮ ಕರ್ನಾಟಕದವರು ಆದ್ರೆ ಚೆಂದ, ನಮ್ಮ ಕಾವೇರಿ ಸಮಸ್ಯೆ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಎಲ್ಲಾ ದೊರೆಯಬಹುದು’ ಅಂದೆ ಅದಕ್ಕೆ ‘ಸರಿಯಾಗಿ ಹೇಳಿದೆ ನೋಡು ನಮ್ಮ ದೇವೇಗೌಡ್ರೆ ಆದ್ರೆ ಹೆಂಗೆ’ ಅಂದ.

ನಾನು: ದೇವೇಗೌಡರು ಆಗಲ್ಲಾ ಅಂತ ಹೇಳಿ ಬಿಟ್ಟಿದ್ದಾರಲ್ಲಪ್ಪಾ

ಜಿಗ್ರಿ: ಅಯ್ಯಾ ಮಂಕೆ ಗೌಡ್ರ ವರಸೆನೇ ಹಂಗೆ ಅವ್ರು ಆಗಲ್ಲ ಅಂದ್ರೆ ಆಗ್ತದೆ, ಆಗ್ತದೆ ಅಂದ್ರೆ ಆಗಲ್ಲಾ ಅಂತ

ನಾನು: ಅದು ಹೇಗಯ್ಯಾ ಸಾಧ್ಯ?

ಜಿಗ್ರಿ: ನೋಡು ಗುರು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡೋದು ನನ್ನ ಹೆಣದ ಮೇಲೆ ಮಾತ್ರ ಅಂತ ಹೇಳಿದ್ರು ಇವಾಗೇನಾಗಿದೆ ?

ನಾನು: ಇವಾಗ ಮತ್ತೆ ಕಾಂಗ್ರೆಸ್ಸಿನವರ ಜೊತೆ ಸೇರಿ ರೇವಣ್ಣನ್ನ ಮುಖ್ಯ ಮಂತ್ರಿ ಮಾಡ್ತಾರೆ ಅಂತ ಸುದ್ದಿ ಇದ್ಯಲ್ಲಾ ಅದಕ್ಕೆ ದೇವೇಗೌಡರು ಸಾಧ್ಯವಿಲ್ಲಾ ಅಂತ ಹೇಳಿದಾರೆ, ಹಂಗಂದ್ರೆ ಇದು ಕೂಡ ಸಾಧ್ಯ ಆಗಬಹುದು ಅಂತ್ಯಾ ?

ಜಿಗ್ರಿ: ನೋಡೂ ನೀನು ವಿಷಯ ಬದ್ಲಾಯಿಸೋದರಲ್ಲಿ ಎಕ್ಸ್ಪರ್ಟೂ ಅಂತ ನನ್ಗೊತ್ತು ಈವಾಗ ದೇವೇಗೌಡ್ರು ಮುಂದಿನ ರಾಷ್ಟ್ರ ಪತಿ ಯಾಕಾಗಲ್ಲ ಅಂತ ಸ್ವಲ್ಪ ಬಿಡಿಸಿ ಹೇಳ್ತಿಯಾ

ನಾನು ಓಳಗೆ ಹೋಗಿ ಫೆಬ್ರವರಿ-28ರ ಕನ್ನಡಪ್ರಭ ಪತ್ರಿಕೆ ಹಿಡಿದು ಬಂದು ತೋರಿಸಿದೆ ‘ನೋಡಪ್ಪಾ ಇಲ್ಲಿ ಪತ್ರಿಕಾ ಸಂದರ್ಶನದಲ್ಲಿ ಅವ್ರೇ ಹೇಳಿದ್ದಾರೆ - ರೈತನಾಗಿ ಹುಟ್ಟಿದ್ದೇನೆ ರೈತನಾಗೆ ಮಣ್ಣಾಗುತ್ತೇನೆ, ಆತ್ಮ ಗೌರವ ಕಳೆದು ಕೊಂಡು ಸ್ವಾಭಿಮಾನ ಬಿಟ್ಟು ಮಾಡಬೇಕಾದ ರಾಜಕಾರಣದಲ್ಲಿ ನನಗೆ ನಂಬಿಕೆ ಇಲ್ಲಾ ನೋಡಿದೆಯಾ ಇದಕ್ಕೇನಂತ್ಯಾ ?’

ಜಿಗ್ರಿ: ಇದೊಂದು ಗಂಭಿರವಾದ ವಿಷಯ ದೇವೇಗೌಡರಂತವರು ಆಡಬಾರದ ಮಾತು

ನಾನು: ಯಾಕ್ಲೆ ತಮ್ಮಾ ಇದರಲ್ಲಿ ಅಂತ ತಪ್ಪು ಏನಿದೆ ?

ಜಿಗ್ರಿ: ಅಯ್ಯಾ ಮಂಕೆ ಆತ್ಮ ಗೌರವ ಕಳೆದು ಕೊಂಡು ಸ್ವಾಭಿಮಾನ ಬಿಟ್ಟು ಮಾಡಬೇಕಾದ ರಾಜಕಾರಣ ಅಂದ್ರೆ ಏನರ್ಥ ? ಅಂದ್ರೆ ನಮ್ಮ ಇಲ್ಲೀವರೆಗಿನ ರಾಷ್ಟ್ರಪತಿಗಳು ಅದನ್ನೆಲ್ಲಾ ಬಿಟ್ಟವರು ಅಂತನಾ ? ನಾವೆಲ್ಲ ಇದನ್ನು ಖಂಡಿಸಿ ಪ್ರತಿಭಟಿಸಬೇಕು

ನಾನು: ಲೇ ಕಮಂಗಿ ನನ್ಗೆ ಹೇಳ್ತೀಯಾ ವಿಷಯ ಬದಲಾಯಿಸ್ತೀನಿ ಅಂತ ಈಗ ನೋಡು ನೀನೆ ಎಲ್ಲಿಗೆಲ್ಲಿಗೋ ಹೋಗ್ತಿದೀಯಾ, ಹೋಗಲಿ ಬಿಡು ಗೌಡ್ರು ಅಗದಿದ್ದರೆ ಬೇರೆ ಯಾರಾಗಬಹುದು ಯೋಚಿಸುವ. ಹಾನ್‌ ಅಮಿತಾಭ್‌ ಬಚ್ಚನ್‌ ಆದ್ರೆ ಹೆಂಗೆ ?

ಜಿಗ್ರಿ: ಆಗಲ್ಲ ಬಿಡು ಬಚ್ಚನ್‌ ಸಾಹೇಬ್ರು ತಮ್ಮ ಹೊಸ ಕಾರ್ಯಕ್ರಮದಲ್ಲಿ ಶ್ಯಾನೆ ಬ್ಯುಸಿಯಾಗಿದ್ದಾರೆ

ನಾನು: ಯಾವುದಪ್ಪ ಅಂತಹ ಹೊಸ ಕಾರ್ಯಕ್ರಮ ?

ಜಿಗ್ರಿ: ‘ಅಭಿಷೇಕ್‌ ಬನ್ಗಯ ಐಶ್ವರ್ಯ ಪತಿ !’ ಅಂತ ಹೊಸ ಕಾರ್ಯಕ್ರಮ. ಐಶ್‌ ಹಾಗು ಅಭಿ ಮದುವೆ ಮುಂಚಿನ ಹಾಗು ಮದುವೆಯ ನಂತರದ ಜೀವನದ ಮೇಲೆ ಒಂದು ಟೀವಿ ಶೊ ಮಾಡ್ತಾ ಇದ್ದಾರೆ. ಈಗಾಗ್ಲೆ ಕೋಟ್ಯಾಂತರ ರುಪಾಯಿ ವ್ಯವಹಾರದ ಮಾತುಕತೆ ನಡೆದಿದೆ. ಬಚ್ಚನ್‌ ಬಿಟ್ಟು ಬೇರೆ ಯಾರನ್ನಾದರು ಸೂಚಿಸು.

ನಾನು: ನಮ್ಮ ನಾರಾಯಣ್‌ ಮೂರ್ತಿಗಳು ಆದ್ರೆ ಹೆಂಗೆ

ಈ ಸಲ ಖಂಡಿತ ಇವನು ಒಪ್ಪಲೇ ಬೇಕು ಅಂತ ಹೇಳಿದೆ ನನ್ನ ಹೆಂಡತಿ ಹಾಗು ಆಗ ತಾನೆ ಎದ್ದು ಬಂದ ಮಗಳು ತಮಾಷೆ ನೋಡುತ್ತಿದ್ದರು

ಜಿಗ್ರಿ: ಗುರು ನಿನ್ನ ತಲೆ ತಗೊಂಡು ಹೋಗಿ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಇಡಬೇಕು

ನಾನು: ಯಾಕಪ್ಪಾ ಅದು ಇರೋ ಜಾಗದಲ್ಲೇ ಇದ್ರೆ ಏನಾದ್ರು ತೊಂದ್ರೇನಾ ?

ಜಿಗ್ರಿ: ಇನ್ನೇನು ಮತ್ತೆ ಗುರು ಮೂರ್ತಿಗಳನ್ನು ರಾಷ್ಟ್ರಪತಿ ಮಾಡಿಬಿಟ್ಟರೆ ಅವರ ಮೊದಲನೆ ಪ್ರಕಟನೆ ಹೇಗಿರುತ್ತೆ ಅಂತ ಹೇಳ್ತೀನಿ ಕೇಳು

1. ಇನ್ನುಮುಂದೆ ನಮ್ಮ ದೇಶದಲ್ಲಿ ಯಾರೂ ರಾಷ್ಟ್ರ ಗೀತೆಯನ್ನು ಹಾಡುವಂತಿಲ್ಲ ರಾಷ್ಟ್ರಗೀತೆಯನ್ನು ಕೇವಲ ವಾದ್ಯದಲ್ಲಿ ಮಾತ್ರ ನುಡಿಸತಕ್ಕದ್ದು ಏಕೆಂದರೆ ನಮ್ಮ ದೇಶದ ತುಂಬೆಲ್ಲಾ ಭಹಳಾ ವಿದೇಶಿಯರಿದ್ದಾರೆ ರಾಷ್ಟ್ರಗೀತೆಯನ್ನು ಹಾಡಿ ಅವರಿಗೆ ಮುಜುಗರ ಉಂಟು ಮಾಡುವುದು ನಮ್ಮ ಸಂಸ್ಕೃತಿಗೆ ತರವಲ್ಲಾ.

2. ಇನ್ನು ಮುಂದೆ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ ಇಂಗ್ಲಿಷ್‌ನಲ್ಲೇ ಮಾತನಾಡಬೇಕು ಇದರಿಂದ ನಮ್ಮ ಮಕ್ಕಳು ಇಂಗ್ಲಿಷ್‌ ಭಾಷೆಯಲ್ಲಿ ಒಳ್ಳೆ ಪ್ರಾವೀಣ್ಯತೆ ಪಡೆದು ವಿದೇಶಗಳಿಗೆ ತೆರಳಿ ಬದುಕು ನಡೆಸುವುದು ಸುಲಭವಾಗುವುದು. ಅದೂ ಅಲ್ಲದೆ ಕನ್ನಡ ಭಾಷೆಯು ನೆರೆಯ ತಮಿಳಿನಂತೆ ಶಾಸ್ತ್ರೀಯ ಭಾಷೆಗೆ ಸರಿ ಸಮಾನವಾದ ಭಾಷೆ ಅಂತಹ ಸುಂದರ ಭಾಷೆಯನ್ನು ನಾವೆಲ್ಲಾ ದಿನ ಬಳಕೆಯಲ್ಲಿ ಉಪಯಾಗಿಸಿ ಖರ್ಚು ಮಾಡಿ ಬಿಡುವಂತಿಲ್ಲಾ ಹಾಗಾಗಿ ಕನ್ನಡ ಬಾಷೆಯನ್ನು ಬಳಸದೆ ಜೋಪಾನ ಮಾಡಿಟ್ಟು ಮುಂದಿನ ಪೀಳಿಗೆಗೆ ಕೊಡಬೇಕಾಗಿದೆ.

3. ಕಾವೇರಿ ಪ್ರತಿಭಟನೆ ಮಾಡುವವರು ರೈಲು, ಕಾರು ಬಸ್ಸುಗಳಿಗೆ ಬೆಂಕಿ ಹಚ್ಚುವುದರಿಂದ ಏನೂ ಉಪಯೋಗವಿಲ್ಲಾ ಅದರ ಬದಲು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಬೇಕಾಗಿದೆ ಹೇಗೆಂದರೆ ಕರ್ನಾಟಕದಲ್ಲಿ ಪ್ರತಿಯಾಬ್ಬರು ಪ್ರತಿದಿನ ಒಂದು ಲೋಟ ನೀರು ಕಡಿಮೆ ಕುಡಿದು ಆ ನೀರನ್ನು ಸರ್ಕಾರಕ್ಕೆ ಒಪ್ಪಿಸುವುದು ಅಂತೆಯೇ ಸರ್ಕಾರವು ಸಂಗ್ರಹವಾದ ನೀರನ್ನು ತಮಿಳುನಾಡಿಗೆ ಒಪ್ಪಿಸುವುದು ಹೀಗೆ ಮಾಡುವುದರಿಂದ ಕಾವೇರಿ ಸಮಸ್ಯೆಗೆ ಒಂದು ರೀತಿ ಶಾಶ್ವತವಾದ ಪರಿಹಾರ ದೊರಕಿದಂತೆಯೂ ಆಗುವುದು.

ಹೆಂಗಿದೆ ? ಎಲ್ಲಾ ಬಿಟ್ಟು ನಿನ್ನನ್ನು ಕೇಳಲು ಬಂದೆನಲ್ಲಾ ನನಗೆ ಏನಾದ್ರು ತಗೊಂಡು ಹೊಡ್ಕೋ ಬೇಕು ಎಂದು ಹೇಳಿದವನೆ ಕಾಫಿ ಕುಡಿದು ಖಾಲಿಯಾದ ಲೋಟವನ್ನು ಕುಕ್ಕಿ ನನ್ನ ಪ್ರತಿಕ್ರಿಯೆಗೂ ಕಾಯದೆ ಹೊರಟುಹೋದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+