ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುಗಳೇ, ಮಡಿಯಾವುದು ಮೈಲಿಗೆ ಯಾವುದು?

By Staff
|
Google Oneindia Kannada News


ವಿದೇಶಗಳಲ್ಲಿ ಪುತ್ತಿಗೆ ಶ್ರೀಗಳ ಭಾಷಣಗಳಿಂದ ಪ್ರೇರಿತರಾದ ಜನರು ಕೃಷ್ಣನನ್ನು ಕಾಣಲು, ಉಡುಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಶ್ರೀಗಳವರು ತಮ್ಮ ಪರ್ಯಾಯ ಕಾಲದಲ್ಲಿ ಕಾರ್ಯಗತಗೊಳಿಸಲು ಯೋಜಿಸಿರುವ ಸುಂದರ ಉಡುಪಿ ಕೃಷ್ಣನ ಉಡುಪಿ ಮೊದಲಾದ ಹಲವಾರು ಅಪೂರ್ವ ಯೋಜನೆಗಳಿಗೆ ಸಂಪೂರ್ಣ ಸಹಕಾರನೀಡಲು ಇಲ್ಲಿನ ಅನೇಕ ಸಂಘಟನೆಗಳು ಸಜ್ಜಾಗಿ ನಿಂತಿವೆ. ಈ ನಡುವೆ ಸುಮ್ಮನೆ ಗೊಂದಲ ಸೃಷ್ಟಿಸಿ ಈ ಜನರಿಗೆ ಉಡುಪಿಯೆಂದರೆ ಅಸಹ್ಯ ಹುಟ್ಟಿಸುವಂತೆ ಮಾಡಬೇಡಿ.

  • ವಿಶ್ವನಾಥ್ ಭಟ್, ಐಸಲಿನ್, ನ್ಯೂಜರ್ಸಿ
  • ಗುರುಗಳೇ, ಮಡಿಯಾವುದು ಮೈಲಿಗೆ ಯಾವುದು? ಪೂಜ್ಯ ಪೇಜಾವರ ಶ್ರೀಗಳೇ, ತಮ್ಮ ಮೇಲೆ ನಮಗೆ ಅಪಾರ ಗೌರವವಿದೆ. ತಾವು ಹಿರಿಯರು, ಶಾಸ್ತ್ರವೇತ್ತರು ಮಾತ್ರವಲ್ಲದೆ ಸಮಾಜದಲ್ಲಿ ಅಪೂರ್ವ ಸುಧಾರಣೆಗಳನ್ನು ತಂದು ಜನರಿಗೆ ಹತ್ತಿರವಾದವರೆಂದು ಭಕ್ತಜನತೆ ತಮ್ಮನ್ನು ಗೌರವಿಸುತ್ತಾ ಬಂದಿದೆ. ಆದರೆ ಉಡುಪಿ ಪರ್ಯಾಯ ವಿಷಯದಲ್ಲಿನ ತಮ್ಮ ಈಗಿನ ಪೂರ್ವಾಗ್ರಹ ಪೀಡಿತ ಧೋರಣೆ, ತಮ್ಮ ಅದ್ಭುತ ವ್ಯಕ್ತಿತ್ತ್ವಕ್ಕೆ ವ್ಯತಿರಿಕ್ತವಾದ ವರ್ತನೆಯಾಗಿದ್ದು ಭಕ್ತಸಮುದಾಯವನ್ನು ಗೊಂದಲಕ್ಕೀಡುಮಾಡುತ್ತಿದೆ. ಅನೇಕ ಸಂದೇಹಗಳನ್ನು ಹುಟ್ಟಿಸುತ್ತಿದೆ. ಅದರಲ್ಲೂ ತಾಯ್ನಾಡಿನಿಂದ ಬಹು ದೂರವಿದ್ದರೂ ನಮ್ಮ ದೇಶ, ಭಾಷೆ, ಧರ್ಮ, ಸಂಸ್ಕೃತಿ ಎಂದು ಹಪಹಪಿಸುತ್ತಿರುವ ಅನಿವಾಸಿ ಭಾರತೀಯರಾದ ನಮಗೆ ತಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ. ದಯವಿಟ್ಟು ಉತ್ತರಿಸಿ. ಇವತ್ತೇ, ಈಗಲೇ !

    ಪರ್ಯಾಯ ವಿವಾದ ಅಷ್ಟಮಠಗಳಿಗೆ ಮಾತ್ರ ಸಂಬಂಧಿಸಿದ್ದು, ಬೇರೆ ಯಾರೂ ಮೂಗು ತೂರಿಸಬಾರದು ಎಂಬ ತಮ್ಮ ಹೇಳಿಕೆಗೆ ಅಂದು ನಾವೆಲ್ಲಾ ಸಂತಸಪಟ್ಟೆವು. ಉಡುಪಿಯ ಪರ್ಯಾಯ ಬೀದಿಬದಿಯ ಚರ್ಚೆಗೆ ವಿಷಯವಾಗುವುದಿಲ್ಲ ಎಂದು ನಿಟ್ಟುಸಿರು ಬಿಟ್ಟೆವು. ಆದರೆ ಈಗ ತಾವೇ ದಿನಕ್ಕೊಂದು ರೀತಿಯ ಪತ್ರಿಕಾ ಹೇಳಿಕೆ ಕೊಡಲು ಪ್ರಾರಂಭಿಸಿದ್ದೇಕೆ? ಮತ್ತೆ ಮೊನ್ನೆ ತಾನೇ ಸಾರ್ವಜನಿಕರನ್ನು ಕರೆದು ಚರ್ಚೆಗೆ ಅಹ್ವಾನಿಸಿದ್ದು ಯಾವ ಉದ್ದೇಶದಿಂದ ?

    ಇಷ್ಟಕ್ಕೂ ಪುತ್ತಿಗೆ ಶ್ರೀಗಳ ಕೃಷ್ಣಪೂಜೆಯನ್ನು ವಿರೋಧಿಸಲು ತಾವುಕೊಡುವ ಕಾರಣಗಳಾದರೂ ಏನು? ವಿದೇಶಯಾತ್ರೆಯಿಂದ ಮೈಲಿಗೆ, ಕೃಷ್ಣಪೂಜೆಗೆ ಅರ್ಹತೆಯಿಲ್ಲ ಎನ್ನುತ್ತೀರಲ್ಲ? ಅಂದರೆ ವಿದೇಶಗಳಲ್ಲಿರುವ ನಾವು ಲಕ್ಷಾಂತರ ಭಾರತೀಯರು ಪಾವಿತ್ರ್ಯತೆ ಕಳೆದುಕೊಂಡಿದ್ದೇವೆ ಎನ್ನುವುದು ತಮ್ಮ ಅಭಿಪ್ರಾಯವೇ? ಇಷ್ಟಕ್ಕೂ ಪಾವಿತ್ರ್ಯತೆ ಉಳಿಸಿಕೊಳ್ಳುವುದು ಎಂದರೇನು?ಪುತ್ತಿಗೆ ಶ್ರೀಗಳು ವಿದೇಶದಲ್ಲೂ ಅವರ ಯತಿಧರ್ಮಕ್ಕೆ ಚ್ಯುತಿಬರದ ರೀತಿಯಲ್ಲಿ ನಿತ್ಯ ಜಪ, ಉಪವಾಸ, ಪೂಜಾದಿ ಅನುಷ್ಠಾನಗಳನ್ನು ನಿಷ್ಠೆಯಿಂದ ಚಾಚೂತಪ್ಪದೆ ನಡೆಸುತ್ತಾ ಬಂದಿರುವುದು ಇಲ್ಲಿನ ಸಾವಿರಾರು ಜನರು ಕಣ್ಣಾರೆಕಂಡ ಸತ್ಯ .

    ವಿದೇಶವೆಂದರೆ ಅಸ್ಪೃಶ್ಯರ ನಾಡು. ಇಲ್ಲಿ ಕಾಲಿಡುವುದೇ ತಪ್ಪು, ಅಲ್ಲಿ ಕಾಲಿಟ್ಟರೆ ಪಾವಿತ್ರ್ಯತೆ ಹೋಗುತ್ತದೆ ಎನ್ನುವುದಾದರೆ ವರ್ಷಗಳ ಹಿಂದೆಯೇ ಹರಿಜನರ ಕೇರಿಗೆ ಕಾಲಿಟ್ಟಾಗ ತಮ್ಮ ಪಾವಿತ್ರ್ಯತೆ ಹೋಗಿಲ್ಲವೇ? ಅಸ್ಪೃಶ್ಯರನ್ನು ಕಣ್ಣೆತ್ತಿಯೂ ನೋಡಬಾರದು ಎನ್ನುವ ಶಾಸ್ತ್ರವನ್ನು ಉಲ್ಲಂಘಿಸಿ ಅಲ್ಲಿ ಹೋಗಿ ಅವರಿಂದ ಪಾದಪೂಜೆಯನ್ನು ಸ್ವೀಕರಿಸಿ ಅವರುಕೊಟ್ಟ ಗಂಜಿಯನ್ನು ಸೇವಿಸಿದ್ದು ಅದು ಸಮಾಜ ಸುಧಾರಣೆ ! ಆಗ ಇಡೀ ನಾಡು ತಮ್ಮನ್ನು ಗೌರವಿಸಿತು. ಸಾಕಷ್ಟು ಪ್ರಚಾರವನ್ನೂ ಪಡೆದಿರಿ. ಆದರೆ ಆಗ ತಮ್ಮ ಪಾವಿತ್ರ್ಯತೆ ಹೋಗಲಿಲ್ಲ. ಪುತ್ತಿಗೆ ಶ್ರೀಗಳು ಮ್ಲೇಚ್ಛ ದೇಶಕ್ಕೆ ಕಾಲಿಟ್ಟದ್ದಕ್ಕೇ ಅವರು ಮಲಿನರಾಗಿ ಬಿಟ್ಟರೇ? ಈ ತಾರತಮ್ಯ ಏಕೆ? ತಾವು ಮಾಡಿದ್ದೆಲ್ಲಾ ಸುಧಾರಣೆ ಇತರರು ಮಾಡಿದರೆ ಅದು ಅಪರಾಧವೇ?

    ಪುತ್ತಿಗೆ ಶ್ರೀಗಳ ಕಠಿಣ ನಿಯಮ ಅನುಷ್ಠಾನಗಳನ್ನು ಕಂಡು ಪ್ರಭಾವಿತರಾದ ನೂರಾರು ಜನರು ಇಲ್ಲಿ ತಮ್ಮ ಜೀವನಶೈಲಿಯನ್ನೇ ಬದಲಿಸಿದ್ದಾರೆ. ಶ್ರೀ ಗಳ ಉಪನ್ಯಾಸದ ಪ್ರಭಾವದಿಂದ ಅನೇಕ ಜನಗಳು ಇಲ್ಲಿ ಶಾಸ್ತ್ರ-ಧರ್ಮಗಳಲ್ಲಿ ಆಸಕ್ತರಾಗಿದ್ದಾರೆ. ಏಕಾದಶಿ ಉಪವಾಸ, ಚಾತುರ್ಮಾಸಾದಿ ವ್ರತಗಳನ್ನು ಆಚರಿಸುತ್ತಾರೆ. ಅಲ್ಲದೇ ಅದಕ್ಕೆಲ್ಲಾ ಈಗ ಇಲ್ಲಿ ಅವಕಾಶಗಳೂ ವಿಪುಲವಾಗಿವೆ. ಇದೆಲ್ಲಾ ಏಕೆ ಇನ್ನೂ ತಮ್ಮ ಗಮನಕ್ಕೆ ಬಂದಿಲ್ಲ? ಒಂದು ವೇಳೆ ಇಷ್ಟೆಲ್ಲಾ ಆಚರಣೆಗಳಿದ್ದರೂ ವಿದೇಶದಲ್ಲಿರುವವರು ಅಪವಿತ್ರರೆನ್ನುವುದು ತಮ್ಮ ವಾದವಾದರೆ, ಅಲ್ಲಿ ಏನು ಮಾಡಿದರೂ ವ್ಯರ್ಥ, ಸುಮ್ಮನೆ ಧರ್ಮಾನುಷ್ಠಾನ ಯಾಕೆ, ಇಷ್ಟ ಬಂದಂತೆ ಬದುಕಿ ಎನ್ನುವುದು ಅನಿವಾಸಿ ಭಾರತೀಯರಿಗೆ ತಮ್ಮ ಉಪದೇಶವೇ? ಏನೆಲ್ಲಾ ಅನುಷ್ಠಾನಗಳನ್ನು ಮಾಡಿದರೂ ನಾವು ಮಲಿನರೆಂದಾದರೆ ಮತ್ತೆ ಏಕೆಮಾಡಬೇಕು?

    ಇತ್ತೀಚಿನ ನಿಮ್ಮ ಪತ್ರಿಕಾ ಹೇಳಿಕೆಯಲ್ಲಿ ಪುತ್ತಿಗೆ ಶ್ರೀ ಗಳಿಗೆ ಅವಕಾಶ ಕೊಟ್ಟರೆ ಮುಂದಿನ ಪರಂಪರೆಯ ಯತಿಗಳೂ ವಿದೇಶಕ್ಕೆ ಹೋಗಿ ಮೋಜು ಮಾಡಿ ಬಂದು ತಮ್ಮ ಸರದಿಯಲ್ಲಿ ಕೃಷ್ಣಪೂಜೆಗೆ ಅವಕಾಶ ಕೇಳಬಹುದು ಎನ್ನುತ್ತೀರಲ್ಲ , ಅಮೇರಿಕಾ ಸಿಂಗಾಪುರಗಳಿಗೆ ಹೋಗುವುದೆಂದರೆ ಬರೇ ಮೋಜು ಮಾಡಿಲಿಕ್ಕೆ ಎಂಬುವುದು ತಮ್ಮ ಅಭಿಪ್ರಾಯವೇನು? ಮೋಜು ಮಾಡುವವರಿಗೆ ಅಮೇರಿಕಾ ಸಿಂಗಾಪುರಗಳೇ ಆಗಬೇಕಿಲ್ಲ . ಉಡುಪಿಯಲ್ಲೇ ಬೇಕಾದಷ್ಟು ಅವಕಾಶಗಳಿವೆ. ಅಲ್ಲೇ ಮೋಜು ಮಾಡುವವರಿಗೆ ಏನು ಕ್ರಮ ಕೈಗೊಂಡಿದ್ದೀರಿ?

    ಇನ್ನು ವಿದೇಶ ಯಾತ್ರೆಯನ್ನು ಶಾಸ್ತ್ರಗಳು ಮಹಾಭಾರತ, ಉಪನಿಷತ್ತು ನಿಷೇಧಿಸಿವೆ ಎನ್ನುತ್ತಾ ಸುಮ್ಮನೆ ಅಮಾಯಕ ಜನರನ್ನೇಕೆ ವಂಚಿಸುತ್ತೀರಿ? ಯಾವ ಶಾಸ್ತ್ರದಲ್ಲೂ ಯತಿಗಳು ವಿದೇಶಕ್ಕೆ ಹೋಗಬಾರದು ಎಂಬುದನ್ನು ಧೃಢಪಡಿಸಲು ಪುರಾವೆಗಳಿಲ್ಲ. ಇಷ್ಟಕ್ಕೂ ವಿದೇಶ ಎಂದರೆ ಯಾವುದೆಂದು ನಿರ್ಣಯಿಸಲೇ ನಮಗೆ ಸಾಧ್ಯವಾಗಿಲ್ಲ. ಶಾಸ್ತ್ರಗಳ ನಿಷೇಧಿಸುವ ದೇಶಗಳೆಂದರೆ ವಂಗ, ಕಳಿಂಗಾದಿಗಳು ಅಂದರೆ ಕೇರಳ ಬಂಗಾಳ ಇತ್ಯಾದಿರಾಜ್ಯಗಳ ಕೆಲವು ಪ್ರದೇಶಗಳು. ಅಲ್ಲೆಲ್ಲಾ ತಾವೇ ಸಂಚಾರ ಮಾಡುತ್ತಿಲ್ಲವೇ?

    ಯತಿಗಳು ಭೂಮಿ ಬಿಟ್ಟು ಹೋಗಬಾರದೆನ್ನುವ ಶಾಸ್ತ್ರಗಳ ಸ್ಪಷ್ಟ ಆದೇಶವನ್ನೂ ಉಲ್ಲಂಘಿಸಿ ಪುತ್ತಿಗೆ ಶ್ರೀಗಳಿಗಿಂತಲೂ ಮುಂಚೆ ವಿಮಾನ ಹತ್ತಿದವರು ತಾವೇ ಅಲ್ಲವೆ? ಮಂಗಳೂರಿನಿಂದ ಮುಂಬೈಗೆ ಹೋಗುವ ವಿಮಾನ ಸಮುದ್ರದಮೇಲೇ ಹಾರುತ್ತದೆ. ಅದು ಸಾಗರೋಲ್ಲಂಘನೆಯಾಗುವುದಿಲ್ಲವೆ?

    ಈಗ ಪುತ್ತಿಗೆ ಶ್ರೀಗಳನ್ನು ಚರ್ಚೆಗೆ ಅಹ್ವಾನಿಸುವ ತಮ್ಮ ಬಹಿರಂಗ ಹೇಳಿಗೆ ಬರೇ ಜನರನ್ನು ಮರುಳು ಮಾಡುವ ಉದ್ದೇಶದಿಂದ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಾಗಾದರೆ ಇಷ್ಟರತನಕ ಮೌನವಾಗಿದ್ದೇಕೆ? ಶಿಷ್ಯ ಸ್ವೀಕಾರ ಮಾಡಬೇಕೆಂದು ಆಗ್ರಹಿಸುತ್ತೀರಲ್ಲ, ಹಾಗೆ ಸ್ವೀಕಾರ ಮಾಡಿದರೂ ಶಿಷ್ಯನಿಗೆ ಪೂಜಾರ್ಹತೆ ಇರುವುದಿಲ್ಲ ಎಂಬ ಸತ್ಯವನ್ನು ಏಕೆ ಮರೆಮಾಚುತ್ತೀರಿ? ಉಡುಪಿಯ ನಿಯಮಾವಳಿಗಳ ಪ್ರಕಾರ ಚಾತುರ್ಮಾಸ್ಯ ವ್ರತ ಆಚರಿಸದ ಯತಿಗಳಿಗೆ ಕೃಷ್ಣಪೂಜೆಗೆ ಅರ್ಹತೆಯಿರುವುದಿಲ್ಲ.

    ಇದೆಲ್ಲವನ್ನೂ ಗಮನಿಸುವಾಗ ಜನರನ್ನು ಸುಮ್ಮನೆ ಗೊಂದಲಗೊಳಿಸುವ ತಮ್ಮ ಹೇಳಿಕೆಗಳು ಬರಿಯ ಪ್ರಚಾರ ತಂತ್ರ ಎನ್ನುವುದರಲ್ಲಿ ನನಗೇನೂ ಸಂಶಯವಿಲ್ಲ. ವೃಥಾರೋಪಗಳಿಂದ ಪುತ್ತಿಗೆ ಶ್ರೀಗಳ ಸಾಧನೆಯನ್ನು ಗೌಣಗೊಳಿಸುವ ಉದ್ದೇಶ ತಮಗಿದು ತರವಲ್ಲ. ಕೇವಲ ಸ್ವಪ್ರತಿಷ್ಠೆಯ ಉದ್ದೇಶದಿಂದ ಸುಮ್ಮನೆ ಹುರುಳಿಲ್ಲದ ವಿತಂಡವಾದಗಳಿಂದ ಪುತ್ತಿಗೆ ಶ್ರೀಗಳನ್ನು ಪರ್ಯಾಯ ಕೃಷ್ಣಪೂಜೆಯಿಂದ ದೂರವಿರಿಸಿದರೆ ಭಕ್ತ ಜನತೆ ಸುಮ್ಮನಿರಲು ಸಾಧ್ಯವಿಲ್ಲ. ನಮ್ಮ ಸಂಘಟನೆಯ ಸಾವಿರಾರು ಸದಸ್ಯರಲ್ಲದೇ ಅಮೇರಿಕದಾದ್ಯಂತ ಇರುವ ಎಲ್ಲ ಧಾರ್ಮಿಕ ಸಂಘಟನೆಗಳ ಜೊತೆ ಸೇರಿ ತೀವ್ರವಾಗಿ ಪ್ರತಿಭಟಿಸಲಿದ್ದೇವೆ.

    ಕೊನೆಯದಾಗಿ ಒಂದು ವಿನಂತಿ : ವಿದೇಶಗಳಲ್ಲಿ ಪುತ್ತಿಗೆ ಶ್ರೀಗಳ ಭಾಷಣಗಳಿಂದ ಪ್ರೇರಿತರಾದ ಜನರು ಕೃಷ್ಣನನ್ನು ಕಾಣಲು, ಉಡುಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಶ್ರೀಗಳವರು ತಮ್ಮ ಪರ್ಯಾಯ ಕಾಲದಲ್ಲಿ ಕಾರ್ಯಗತಗೊಳಿಸಲು ಯೋಜಿಸಿರುವ ಸುಂದರ ಉಡುಪಿ ಕೃಷ್ಣನ ಉಡುಪಿ ಮೊದಲಾದ ಹಲವಾರು ಅಪೂರ್ವ ಯೋಜನೆಗಳಿಗೆ ಸಂಪೂರ್ಣ ಸಹಕಾರನೀಡಲು ಇಲ್ಲಿನ ಅನೇಕ ಸಂಘಟನೆಗಳು ಸಜ್ಜಾಗಿ ನಿಂತಿವೆ. ಈ ನಡುವೆ ಸುಮ್ಮನೆ ಗೊಂದಲ ಸೃಷ್ಟಿಸಿ ಈ ಜನರಿಗೆ ಉಡುಪಿಯೆಂದರೆ ಅಸಹ್ಯ ಹುಟ್ಟಿಸುವಂತೆ ಮಾಡಬೇಡಿ. ಈ ಎಲ್ಲಾ ಅದ್ಭುತ ಯೋಜನೆಗಳಿಂದ ಉಡುಪಿಯ ಭಕ್ತ ಜನತೆ ವಂಚಿತರಾಗುವಂತೆ ಮಾಡಬೇಡಿ, ದಯಮಾಡಿ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X