ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್‌ನಲ್ಲಿ ಕುವೆಂಪು ಕನ್ನಡ ಶಾಲೆ ಪುನಾರಂಭ

By Staff
|
Google Oneindia Kannada News


ತವರಿನ ಬೇರುಗಳನ್ನು ಮರೆಯದಿರಲು, ನ್ಯೂಜಿಲೆಂಡ್‌ನಲ್ಲಿ ಕನ್ನಡ ಶಾಲೆಯನ್ನು ಸ್ಥಾಪಿಸಲಾಗಿದೆ. ಇಲ್ಲೊಂದು ಸಮಾರಂಭ ಇತ್ತೀಚೆಗೆ ನಡೆಯಿತು. ಈ ಬಗ್ಗೆ ಒಂದು ವರದಿ.

ಕರ್ನಾಟಕದಲ್ಲಿ ಮಕ್ಕಳಿಗೆ ಇನ್ನೇನು ಬೇಸಿಗೆ ರಜಾ ಬರುತ್ತಿದೆ. ಆದರೆ, ನಮ್ಮ ಆಕ್ಲೆಂಡಿನಲ್ಲಿ ರಜಾ ಮುಗಿದು ಶಾಲಾ ಕಾಲೇಜುಗಳು ಪುನಾರಂಭವಾಗಿವೆ. ನಮ್ಮ ಕನ್ನಡ ಕೂಟ ನಡೆಸುತ್ತಿರುವ ಪೂಜ್ಯ ಕುವೆಂಪು ಅವರ ಹೆಸರಿನ, ಕನ್ನಡ ಶಾಲೆ ಸಹ ಫೆ.11ರಂದು ಮತ್ತೆ ತರಗತಿಗಳನ್ನು ಆರಂಭಿಸಿತು.

ಪ್ರಾರಂಭೋತ್ಸವಕ್ಕೆ ನೆರೆದಿದ್ದ ಸಾಕಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಇತರರನ್ನು ಸ್ವಾಗತಿಸಿ ಮಾತನಾಡಿದ ಕೂಟದ ಅಧ್ಯಕ್ಷ ಡಾ.ಲಿಂಗಪ್ಪ ಕಲ್ಬುರ್ಗಿ, ಕನ್ನಡ ಶಾಲೆಯನ್ನು ಯಶಸ್ವಿಯಾಗಿ ನಡೆಸುವುದು ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳ ಪೈಕಿ ಬಲು ಮುಖ್ಯವಾದದ್ದು ಎಂದರು.

ಕನ್ನಡ ಕಲಿಯಲು ನಿಮ್ಮ ಮಕ್ಕಳನ್ನು ಪ್ರೇರೇಪಿಸಿ ಎಂದು ಸದಸ್ಯರಿಗೆ ಕರೆಯಿತ್ತ ಅವರು, ನಿಮಗೆ ಅಗತ್ಯವಾದ ನೆರವು ನೀಡಲು ಕನ್ನಡ ಕೂಟ ಸದಾ ಸಿದ್ಧ ಎಂದು ತಿಳಿಸಿದರು.

ಕೂಟದ ಉಪಾಧ್ಯಕ್ಷ ಪ್ರಕಾಶ್‌ ಬಿರಾದರ್‌ ಮಾತನಾಡಿ, ಕನ್ನಡ ಭಾಷೆ ಹಾಗೂ ಕರ್ನಾಟಕ ಸಂಸ್ಕೃತಿಯ ಬೋಧನೆಗಾಗಿ ಅನೇಕ ಯೋಜನೆಗಳಿವೆ. ದಯವಿಟ್ಟು ಇವುಗಳ ಸದುಪಯೋಗ ಮಾಡಿಕೊಳ್ಳಿ ಎಂದು ಎಲ್ಲರಿಗೂ ಮನವಿ ಮಾಡಿದರು.

ಕಾರ್ಯದರ್ಶಿ ಚಕ್ರಪಾಣಿ, ವಿದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಕನ್ನಡ ಕಲಿಯುವುದರಿಂದ ಲಭಿಸುವ ಪ್ರಯೋಜನಗಳನ್ನು ವಿವರಿಸಿದರು. ಮಕ್ಕಳನ್ನು ಪ್ರತಿವಾರ ತರಗತಿಗೆ ಕಳುಹಿಸಿ, ಇದಕ್ಕಾಗಿ ನಿಮಗೆ ಯಾವುದೇ ನೆರವು ಅಗತ್ಯವಾದಲ್ಲಿ ಕೂಟವನ್ನು ಸಂಪರ್ಕಿಸಿ ಎಂದು ತಿಳಿಸಿದರು.

ತರಗತಿಗಳನ್ನು ಪ್ರಾರಂಭಿಸುವ ಮುನ್ನ ಕೂಟದ ಸದಸ್ಯರು ಹಾಗೂ ಪಾಲಕರಲ್ಲೊಬ್ಬರೂ ಆದ ರಾಜ್‌ಕುಮಾರ್‌ ಸಾಲೀಮಠ ಸುಶ್ರಾವ್ಯವಾಗಿ ಹಾಡಿದ ಪ್ರಾರ್ಥನೆಗೆ ನೆರೆದಿದ್ದವರೆಲ್ಲರೂ ದನಿಗೂಡಿಸಿದರು. ಹಾಜರಿದ್ದ ಅನೇಕ ಪಾಲಕರು ಮಾತನಾಡಿ, ಕನ್ನಡ ಶಾಲೆಯನ್ನು ನಡೆಸುತ್ತಿರುವುದಕ್ಕಾಗಿ ಕನ್ನಡ ಕೂಟಕ್ಕೆ ಕೃತಜ್ಞತೆ ಸಲ್ಲಿಸಿ, ಶ್ರದ್ಧೆಯಿಂದ ಕಲಿಯಿರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಕೊನೆಯಲ್ಲಿ ಎಲ್ಲರೂ ಕರ್ನಾಟಕ ನಾಡಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X