ರಾಮಣ್ಣಿಯ ಸಿನಿಮಾ ಕ್ರೇಜು!


ನಮ್ಮ ರಾಮಣ್ಣಿದೆ ಸಕತ್ತು ಸಿನಿಮಾ ಹುಚ್ಚು. ಸಿನಿಮಾ ನಾಯಕರನ್ನು ಅನುಕರಿಸೋದು, ಗೇಲಿ ಮಾಡೋದು, ಆರಾಧಿಸೋದು ಎಲ್ಲದರಲ್ಲೂ ಎತ್ತಿದ ಕೈ. ಹೀಗೆ ಒಂದು ಸಲ ಹುಡುಗಿ ನೋಡಿಕೊಂಡು ಬರಲು ರಾಮಣ್ಣಿ ಊರಿಗೆ ಹೋದ. ಬರೋವಾಗ ಮಾತ್ರ ತಲೆಯನ್ನು ನುಣ್ಣಗೆ ಬೋಳಿಸಿಕೊಂಡಿದ್ದ! ಓದಿ, ಒಂದು ಹಾಸ್ಯ ಲೇಖನ.

ರಾಮಣ್ಣಿ ಒಂದು ಸಂಜೆ ತನ್ನ ಹಳ್ಳಿಗೆ ಹೊರಟು ಹೋಗಿದ್ದ. ‘ಹೇಳಿ ಹೋಗುವ’ ಅಭ್ಯಾಸ ಅವನಲ್ಲಿ ಮೊದಲಿಂದಲೂ ಬೆಳೆದು ಬಂದಿಲ್ಲವಾದ್ದರಿಂದ ನಾವೂ ಅಷ್ಟು ತಲೆ ಕೆಡಿಸಿಕೊಂಡಿಲ್ಲ. ಇವನು ಬಸ್ಸಿನಲ್ಲಿ ಕುಳಿತಿದ್ದನ್ನು ಸೀನ ನೋಡಿ ‘ಏನು ವಿಷಯ’ ಎಂದು ಕೇಳಿದ್ದಕ್ಕೆ ‘ಊರಿಗೆ ಹೋಗಿಬರ್ತೀನೋ.. ಅರ್ಜಂಟು’ ಅಂದಿದ್ದ. ಇವನಿಗೆ ಎಲ್ಲವೂ ಅರ್ಜಂಟೇ !

ನಮ್ಮ ರಾಮಣ್ಣಿ ಒಂದು ಥರಾ ಸ್ಪೆಶಲ್ಲು. ಬಹಳಷ್ಟು ಸಲ ಇವನು ಮಾತಾಡುವುದು ಕೇಳಿದಾಗ ಏನು ಹೇಳಹೊರಟಿದ್ದಾನೆ ಎನ್ನುವುದು ಬೇಗ ಅರ್ಥವಾಗೋದಿಲ್ಲ. ಎಲ್ಲಿಂದ ಎಲ್ಲಿಗೋ ಪೋಣಿಸಿ ಹೇಳುವುದು ಇವನ ಜಾಯಮಾನ. ಕೆಲವೊಮ್ಮೆ ಇವನು ಹೇಳುವ ಜೋಕು ಮೂರು ದಿನವಾದ ಮೇಲೆ ಅರ್ಥವಾಗಿ ನಗು ಬರುತ್ತೆ. ನಾನು ಕೇಳೋದು ಇಷ್ಟೇ, ಅದನ್ನೇ ಸುಲಭವಾಗಿ ಅರ್ಥವಾಗೋ ಭಾಷೆಯಲ್ಲಿ ಹೇಳಬಾರದೇ ಅಂತ. ಅದಕ್ಕೆ ಅವನು ‘ನಾನು ಡಿಫರೆಂಟು ಗುರೂ’ ಅಂತಾನೆ.

ಮೊನ್ನೆ ಹೀಗೆ ಆಯಿತು, ದೇವೇಗೌಡರು ಯಾವುದೋ ಸಿನಿಮಾಕ್ಕೆ ಸಂಬಂಧಪಟ್ಟ ಭಾಷಣದಲ್ಲಿ ‘ಶ್ರೀ ಶಿವರಾಜ್‌ ಕುಮಾರ್‌ ಅವರು ತಮ್ಮ ತಂದೆಯವರ ಹಾದಿಯಲ್ಲೇ ನಡೆಯುತ್ತ ಕೀರ್ತಿಗಳಿಸುತ್ತಿದ್ದಾರೆ’ ಅಂತ ಹೇಳಿದರು. ಅದಕ್ಕೆ ಇವನು ‘ ಸುಧಾರಾಣಿ ಒಪ್ಪಿದ ಮೇಲೆ ಅದು ಕಂಪ್ಲೀಟ್‌ ಆಗುತ್ತೆ’ ಅಂದ.

ನಿಜಕ್ಕೂ ಅರ್ಥವಾಗಲಿಲ್ಲ. ಹೇಳ್ತಾ ಇರೋದು ಶಿವಣ್ಣನ ವಿಷಯ. ಇವನು ಸುಧಾರಾಣಿಯನ್ನು ಮಧ್ಯೆ ಏಕೆ ತಂದಾ ಅಂತ. ಸ್ವಲ್ಪ ಬಿಡಿಸಿ ಹೇಳಿ ‘ಕ್ಲಿಷ್ಟಭಟ್ಟರೇ’ ಎಂದಾಗ ‘ನೋಡೊ, ಅಣ್ಣಾವ್ರ ಮೊದಲ ಚಿತ್ರದಲ್ಲಿ ನಾಯಕಿ ಪಂಡರೀಬಾಯಿ. ಹಲವು ಚಿತ್ರಗಳಾದ ಮೇಲೆ ಅವರು ರಾಜ್‌ ಅವರ ತಾಯಿ ಪಾತ್ರ ಮಾಡಿದರು. ಶಿವಣ್ಣನ ಮೊದಲ ಚಿತ್ರದ ನಾಯಕಿ ಸುಧಾರಾಣಿ. ಆಕೆ ಶಿವಣ್ಣನಿಗೆ ತಾಯಿ ಪಾತ್ರ ಮಾಡಿದಾಗ, ನಿಜಕ್ಕೂ ಶಿವಣ್ಣ ರಾಜ್‌ ದಾರಿಯಲ್ಲಿ ಸಾಗುತ್ತಿದ್ದಾರೆ ಅಂತ ಅರ್ಥ’’ ಎಂದು ತನ್ನ ಮೂವತ್ತೆರಡು ಹಲ್ಲುಗಳನ್ನು ತೋರಿಸಿ ನಕ್ಕಿದ್ದ.

ಎಷ್ಟೊ ಸಾರಿ ಅನ್ನಿಸುತ್ತೆ, ಇವನು ಇಷ್ಟು ಚಿಕ್ಕ ವಿಷಯವನ್ನ ಅಷ್ಟು ದೊಡ್ಡದಾಗಿ ಯೋಚನೆ ಮಾಡೊದ್ರಿಂದಲೇ ಮದುವೆಗೆ ಮುನ್ನವೇ ತಲೆ ಮೇಲೆ ಕೂದಲು ಖಾಲೀ ಆಗಲಿಕ್ಕೆ ಶುರುವಾಗಿದೆ ಅಂತ. ಅದಕ್ಕೂ ಅವನದು ಸಮಜಾಯಿಷಿ ಇದೆ. ‘ಮದುವೆ ಆದ ಮೇಲೆ ನನ್ನ ಜುಟ್ಟು ಹಿಡೀಲಿಕ್ಕೆ ಅವಳಿಗೆ ಆಗೋಲ್ಲ ಬಿಡೋ’ ಅಂತ !

ರಾಮಾಣ್ಣೀಗೂ ಈ ಸಿನಿಮಾದವರ ವಿಷಯಗಳಿಗೂ ಏನೋ ನಂಟು. ಅವರ ವಿಚಾರವಾಗಿ ಬಹಳ ತಿಳಿದುಕೊಂಡಿರುತ್ತಾನೆ. ಕೆಲವೊಮ್ಮೆ ಅವರಲ್ಲಿ ತಾನೂ ಒಬ್ಬನಾಗುತ್ತಾನೆ. ಶಂಕರ್‌ನಾಗ್‌ ಸತ್ತಾಗ ಮೂರು ದಿನ ಊಟ ಬಿಟ್ಟಿದ್ದ! ಅಶ್ವಥ್‌ ಅವರ ಮಸಾಶನ ವಿಚಾರ ಓದಿ ಕಣ್ಣೇರಿಟ್ಟಿದ್ದ. ವಿಷ್ಣು ಗಡ್ಡ ಬಿಟ್ಟಾಗ ತಾನೂ ಬಿಟ್ಟಿದ್ದ. ಸದ್ಯ ಅಂಬಿ ರಾಜಕೀಯಕ್ಕೆ ಸೇರಿದಾಗ ತಾನೂ ಸೇರಲಿಲ್ಲ !!

ಮೊನ್ನೆ, ಹದಿಮೂರು ಕೋಟಿ ಮನೆ ಕಟ್ಟಿಸಿದಳು ಎಂದು ತೆರಿಗೆ ಅಧಿಕಾರಿಗಳು ರಾಧಿಕಾ ಮನೆಗೆ ದಾಳಿಯಿಟ್ಟಾಗ, ತಾನೇ ತನಿಖೆ ಮಾಡಿದವನಂತೆ ವರದಿ ಒಪ್ಪಿಸಿದ್ದ ನಮಗೆ. ಇತ್ತೀಚೆಗೆ ಹಾಲಿವುಡ್‌ ನಟ ನಟಿಯರ ಬಗ್ಗೆಯೂ ಅಲ್ಪ ಸ್ವಲ್ಪ ತಿಳಿದುಕೊಳ್ಳುವ ಸಾಹಸ ಮಾಡಿದ್ದಾನೆ.

ಅದ್ಸರೀ, ಈ ರಾಮಣ್ಣಿ ಇದ್ದಕ್ಕಿದ್ದಂತೆ ಊರಿಗೆ ಹೋಗಿದ್ದು ಯಾಕೆ? ಈವರೆಗೂ ಒಂದು ಫೋನ್‌ ಹಚ್ಚಿ ನಮಗೆ ತಿಳಿಸಲಿಲ್ಲ ಯಾಕೆ? ನಾವೇ ಅವನಿಗೆ ಫೋನ್‌ ಮಾಡಿ ವಿಷಯ ತಿಳಿದುಕೊಳ್ಳೋಣ ಎಂದರೆ ಅವನು ಯಾವಾಗಲೂ ನಮ್ಮ ಸೆಲ್‌ ಫೋನೇ ಉಪಯೋಗಿಸೋದು. ಅವನ ತಂದೆಗೆ ಇತ್ತೀಚೆಗೆ ಆರೋಗ್ಯ ಸರಿ ಇಲ್ಲ ಅಂತ ಹೇಳುತಿದ್ದ. ಇರಲಿ ನಾವ್ಯಾಕೆ ಕೆಟ್ಟದ್ದು ಯೋಚನೆ ಮಾಡಬೇಕು. ಅವನು ಬರಲಿ ಅಂತ ಸುಮ್ಮನಿದ್ದೆ. ಎರಡು ದಿನ ಕಳೆದು ಮೂರನೆ ದಿನ ರಾಮಣ್ಣಿ ಪ್ರತ್ಯಕ್ಷ.

ಮುಖದಲ್ಲಿ ಅದೇ ಮುಗುಳ್ನಗೆ! ಮೂವತ್ತೆರಡು ಹಲ್ಲುಗಳ ಪ್ರದರ್ಶನ!! ಆದರೆ ‘ಏನಾಯ್ತು’ ಎಂದು ಕೇಳುವ ಸ್ಥಿತಿಯಲ್ಲಿ ನಾವಿರಲಿಲ್ಲ. ಮುಖದಲ್ಲಿ ನಗುವಿದ್ದರೂ ಮೀಸೆ ಹಾಗೂ ತಲೆ ಬೋಳು !!!

ಮಿರಿಮಿರಿ ಮಿಂಚುತ್ತಿದ್ದ ತಲೆಯನ್ನೇ ನೋಡುತ್ತಾ, ನನ್ನ ತಲೆಗೂದಲು ಸರಿಪಡಿಸಿಕೊಂಡು ಧೈರ್ಯ ಮಾಡಿ ಕೇಳಿಯೇ ಬಿಟ್ಟೆ. ‘ಮನೆಯಲ್ಲಿ ಎಲ್ಲಾ ಚೆನ್ನಾಗಿದ್ದಾರಾ?’ ಅಂತ. ಅದೊಂದು ಪೆದ್ದು ಪ್ರಶ್ನೆ ಎಂದು ತಿಳಿದೂ ಕೇಳಿದ್ದೆ.

ಅವನೋ ‘ಓ! ಎಲ್ಲಾ ಆರೋಗ್ಯ’. ನಾನು ಬಿಡಲಿಲ್ಲ ‘ನಿಮ್ಮ ತಂದೆಯವರು ಆರೋಗ್ಯಾನಾ?’.

ಅವನೆಂದ ‘ಓ! ಈಗ ಕೆಮ್ಮು ಕಡಿಮೆಯಾಗಿದೆ. ಸುಸ್ತು ಹಾಗೇ ಇದೆ’. ರೇಗುತ್ತಾ ಕೇಳಿದೆ ‘ಮತ್ತೆ ಅಷ್ಟು ಅರ್ಜಂಟಾಗಿ ಊರಿಗೆ ತೊಲಗಿದ್ದು ಯಾಕೆ?’. ಅವನು ಮತ್ತೆ ಹಲ್ಲು ಕಿರಿಯುತ್ತಾ ‘ಅದಾ! ಒಂದು ಹೆಣ್ಣು ನೋಡಿದ್ದೀವಿ, ನೀನು ಒಂದು ಸಾರಿ ನೋಡಿಕೊಂಡು ಹೋಗೂ ಅಂತ ಅಮ್ಮ ಹೇಳಿಕಳಿಸಿದ್ದರು ಅದಕ್ಕೇ!’.

ನಾವು ಏನೋ ಆಗಿ ಹೋಗಿದೆ ಎಂದು ಸುಮ್ಮನೆ ಕಳವಳ ಪಟ್ಟೆವಲ್ಲಾ ಎಂದು ಮನ ರೋಸಿ ‘ಮತ್ತೆ ನೀನ್ಯಾಕೆ ತಲೆ ಬೋಳಿಸಿಕೊಂಡೆ? ಮೊದಲ ಸಾರಿ ಹೆಣ್ಣು ನೋಡಿದರೆ ಕೂದಲು ಕೊಡ್ತೀನಿ ಅಂತ ಹರಕೆ ಹೊತ್ತಿದ್ಯಾ ಹೆಂಗೆ?’ . ಅವನು ಕೊಟ್ಟ ಉತ್ತರ ಕೇಳಿ ನಾನು ಕುಸಿದು ಕೂಡೋದೊಂದೇ ಬಾಕಿ.

‘ಅದೂ, ಯಾಕೆ ಅಂದರೆ ಬ್ರಿಟನಿ ಸ್ಪಿಯರ್ಸ್‌ ಇತ್ತೀಚೆಗೆ ತಲೆ ಬೋಳಿಸಿಕೊಂಡ್ಲಲ್ಲಾ ಅದಕ್ಕೇ!’

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+