• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಸಂತ ಸಾಹಿತ್ಯೋತ್ಸವ : ಫಿಲಡೆಲ್ಫಿಯಾದಲ್ಲಿ ಕನ್ನಡ ವೈಭವ !

By Staff
|
 • ವರದಿ: ಶ್ರೀವತ್ಸ ಜೋಶಿ ; ವಾಷಿಂಗ್‌ಟನ್‌ ಡಿಸಿ.

srivathsajoshi@yahoo.com

 • ಚಿತ್ರಗಳು: ವಲ್ಲೀಶ ಶಾಸ್ತ್ರಿ ; ಲಾಸ್‌ಏಂಜಲಿಸ್‌.

  vshastry@yahoo.com

 • Sahithya gOshti in Picturesನಮ್ಮ ಕರ್ನಾಟಕ ರಾಜ್ಯ ‘ಕಬ್ಬಿಗರುದಿಸಿದ ಮಂಗಳಧಾಮ, ಕವಿಕೋಗಿಲೆಗಳ ಪುಣ್ಯಾರಾಮ’ ; ಮೇ 29ರ ಶನಿವಾರದಂದು ಇಲ್ಲಿ ಅಮೆರಿಕದಲ್ಲಿ ಫಿಲಡೆಲ್ಫಿಯಾದ ವಿಲನೋವಾ ವಿಶ್ವವಿದ್ಯಾಲಯದ ಸಭಾಂಗಣದಲ್ಲೂ ಕನ್ನಡ ಕಬ್ಬಿಗರ ದೊಡ್ಡ ದಂಡೇ ಮೇಳೈಸಿತ್ತು. ಕನ್ನಡಸಾಹಿತ್ಯ ಮಲ್ಲಿಗೆಹೂವಿನ ದಂಡೆ ಕಟ್ಟಿತ್ತು ! ದೂರದೇಶದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಭಿಮಾನಿಗಳೆಲ್ಲ ಸೇರಿ ‘ನೀ ಮೆಟ್ಟುವ ನೆಲ - ಅದೇ ಕರ್ನಾಟಕ’ ಎಂಬುದನ್ನು ಅಕ್ಷರಶಃ ಸಾಬೀತುಪಡಿಸಲೋ ಎಂಬಂತೆ, ಅಕ್ಷರಸರಸ್ವತಿಯ ದಿವ್ಯ ಆರಾಧನೆಯೋ ಎಂಬಂತೆ ನಡೆದ ‘ಕನ್ನಡ ವಸಂತ ಸಾಹಿತ್ಯೋತ್ಸವ’ವು ಒಂದು ಆಕರ್ಷಕವಾಗಿ, ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಮತ್ತು ಸೀಮಿತ ಚೌಕಟ್ಟಿನಲ್ಲಿ ಸಾಕಷ್ಟು ಅದ್ದೂರಿಯಾಗಿ ನಡೆದ ಕಾರ್ಯಕ್ರಮವೆನ್ನಬಹುದು. ಕವಿ-ಸಾಹಿತಿವರ್ಗಕ್ಕೆ ಅತಿ ಆಪ್ಯಾಯಮಾನವಾದ ವಸಂತಋತುವಿನಲ್ಲೇ ಹಮ್ಮಿಕೊಂಡಿದ್ದರಿಂದ ಅದಕ್ಕೆ ದೊರೆತದ್ದು ಇನ್ನೂ ಹೆಚ್ಚಿನ ಮೆರುಗು. ಇಂತಹ ಒಂದು ಸುಂದರ ಸಾಹಿತ್ಯೋತ್ಸವವನ್ನೇರ್ಪಡಿಸಿದ ‘ಕನ್ನಡ ಸಾಹಿತ್ಯ ರಂಗ’ ಬಳಗಕ್ಕೆ ಶ್ಲಾಘನೆ, ಅಭಿನಂದನೆ ಮನಃಪೂರ್ವಕವಾಗಿ ಸಲ್ಲಬೇಕು.

  ಕುವೆಂಪು ಜನ್ಮಶತಾಬ್ಧಿಯ ಸಂದರ್ಭದಲ್ಲಿ ನಡೆದ ಈ ಸಾಹಿತ್ಯಸಮಾರಾಧನೆಗೆ ಮುಖ್ಯ ಅತಿಥಿ ಕುವೆಂಪು ಅವರ ಮಾನಸಪುತ್ರರೆಂದೇ ಖ್ಯಾತರಾದ, ಕುವೆಂಪು ಸಾಹಿತ್ಯ ವಿಚಾರದಲ್ಲಿ ಅಧಿಕೃತ ಸಂಪನ್ಮೂಲ ವ್ಯಕ್ತಿಯಾದ ಡಾ।ಪ್ರಭುಶಂಕರ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೇ ‘ಸಾಹಿತ್ಯ ರಂಗ’ದ ಅಕ್ಕರೆಯ ಆಹ್ವಾನಕ್ಕೆ ಓಗೊಟ್ಟು ಅಮೆರಿಕ ಪ್ರವಾಸ ಕೈಗೊಂಡಿರುವ ಡಾ।ಪ್ರಭುಶಂಕರರ ಉಪಸ್ಥಿತಿ, ಉತ್ಸವದ ಒಟ್ಟಂದವನ್ನು ಬಹುಮಟ್ಟಿಗೆ ಎತ್ತರಕ್ಕೇರಿಸಿತ್ತೆಂದರೆ ಅದು ಉತ್ಪ್ರೇಕ್ಷೆಯಲ್ಲ .

  ಉತ್ಸವದ ಸಾಫಲ್ಯದ ಹಿಂದೆ ಅಷ್ಟೇ ಪ್ರಮುಖವಾಗಿರುವ ಇನ್ನೊಂದಂಶವೆಂದರೆ ‘ಸಾಹಿತ್ಯ ರಂಗ’ವನ್ನು ಹುಟ್ಟುಹಾಕಿ, ಅಖಿಲ ಅಮೆರಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಒಂದು ಅರ್ಥಪೂರ್ಣ ಉತ್ಸವವನ್ನು ನಡೆಸಬೇಕೆಂದು ಯೋಚಿಸಿ-ಯೋಜಿಸಿ, ಕಳೆದೊಂದು ವರ್ಷದಿಂದಲೂ ತಾದಾತ್ಮ್ಯತೆಯಿಂದ ಯೋಜನೆಯನ್ನು ರೂಪುಗೊಳಿಸುತ್ತ ಬಂದಿರುವ ಬಳಗದ ಎಚ್‌ ವೈ ರಾಜಗೋಪಾಲ್‌, ಎಚ್‌ ಕೆ ಚಂದ್ರಶೇಖರ್‌, ನಾಗ ಐತಾಳ್‌, ನಳಿನಿ ಮೈಯ ಮತ್ತು ಇನ್ನೂ ಅನೇಕ ಸಾಹಿತ್ಯಾರಾಧಕರ ಅವಿರತ ಶ್ರಮ.

  ಕನ್ನಡವೆಂದರೆ ಬರಿ ನುಡಿ ಅಲ್ಲ...

  ಕವಿ ಕೆ.ಎಸ್‌. ನಿಸಾರ್‌ ಅಹ್ಮದ್‌ ಬರೆದ ಸುಮಧುರ ಗೀತೆಯ ಈ ಪ್ರಾರ್ಥನೆಯಾಂದಿಗೆ (ಪ್ರಸ್ತುತಿ: ವಸಂತವೃಂದ ಕಲಾವಿದರು) ಉತ್ಸವದ ಶುಭಾರಂಭ. ಎಚ್‌.ವೈ ರಾಜಗೋಪಾಲ್‌ ಅವರಿಂದ ಸ್ವಾಗತದ ಮಾತುಗಳ ನಂತರ, ನಾಗ ಐತಾಳ ಅವರ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಡಾ।ಪ್ರಭುಶಂಕರರಿಂದ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಗ್ರಂಥದ ವಿಧ್ಯುಕ್ತ ಬಿಡುಗಡೆ. ಗ್ರಂಥ ನಿರ್ಮಾಣಕ್ಕೆ ಕಾರಣಕರ್ತರಾದವರಿಗೆಲ್ಲ ಕೃತಜ್ಞತೆಯ ಮಾತುಗಳು ನಳಿನಿ ಮೈಯ ಅವರಿಂದ. ಅದಾದ ಮೇಲೆ ಮುಖ್ಯ ಅತಿಥಿಗಳ ಭಾಷಣ ‘ಕನ್ನಡಕ್ಕೆ ಕುವೆಂಪು ನೀಡಿದ ಕಾಣಿಕೆ’. ಅನನ್ಯವೂ ಅಮೂಲ್ಯವೂ ಆದ ಕೃತಿಗಳಿಂದ ಬಾನೆತ್ತರಕ್ಕೆ ಬೆಳೆದು ಒಂದು ಇಡೀ ಶತಮಾನವನ್ನು ತುಂಬಿ ನಿಂತ ಸಾಹಿತ್ಯ ಗೊಮ್ಮಟ ಕುವೆಂಪು. ಅವರ ಶಕ್ತಿಮೂಲವನ್ನೂ ಉಕ್ತಿವೈವಿಧ್ಯವನ್ನೂ ಒಂದು ಗಂಟೆಯ ಕೇಳ್ವಿಕೆಯ ರಸಗವಳವನ್ನಾಗಿ ಉಣಬಡಿಸಿದ ಪ್ರಭುಶಂಕರರ ನಿರರ್ಗಳ ಮಾತುಗಳನ್ನು ತದೇಕಚಿತ್ತರಾಗಿ ಆಲಿಸಿದ ಸಭಿಕರು ಮನದಲ್ಲೇ ರಸಋಷಿಯ ಜೀವನಚರಿತ್ರವನ್ನೆಲ್ಲ ಫ್ರೇಮ್‌-ಬೈ-ಫ್ರೇಮ್‌ ಚಿತ್ರಿಸಿಕೊಂಡದ್ದು ದಿಟ.

  ಕುವೆಂಪು ಸಾಹಿತ್ಯ ಸಮೀಕ್ಷೆ ಗ್ರಂಥ

  ನಮ್ಮ ನಾಡಿನ ಒಬ್ಬ ಚೈತನ್ಯಮಯಿ ಪ್ರತಿಭಾಶಾಲಿ ಸಾಹಿತಿಗೆ, ಜನ್ಮಶತಾಬ್ಧಿಯ ಸ್ಮರಣೀಯ ಸಂದರ್ಭದಲ್ಲಿ ಅನಿವಾಸಿ ಅಮೆರಿಕನ್ನಡಿಗರ ನಮ್ರ ಶ್ರದ್ಧಾಂಜಲಿಯ ಸಮರ್ಪಣೆಯಾಗಿ, ಅಂತೆಯೇ ತಾಯ್ನಾಡಿನಿಂದ ದೂರದಲ್ಲಿದ್ದರೂ ಸಂಸ್ಕೃತಿ, ಭಾಷೆಗಳ ಮೇಲಿನ ಅಭಿಮಾನ ತುಡಿತಗಳನ್ನು ಹೊರಹೊಮ್ಮಿಸುವ ಪ್ರಯತ್ನರೂಪವಾಗಿ ಹೊರಬಂದಿರುವ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಒಂದು ಅನನ್ಯ ಗ್ರಂಥ. ಆಹಿತಾನಲ (ನಾಗ ಐತಾಳ) ಪ್ರಧಾನ ಸಂಪಾದಕತ್ವದಲ್ಲಿ, ಪ್ರೊ।ಜಿ.ಎಸ್‌.ಶಿವರುದ್ರಪ್ಪನವರ ಮುನ್ನುಡಿಯಾಂದಿಗೆ, ಬೆಂಗಳೂರಿನ ಕಲಾವಿದ ಮೋನಪ್ಪ ರಚಿಸಿದ ಆಕರ್ಷಕ ಮುಖಪುಟದೊಂದಿಗೆ ಹೊರಬಂದಿರುವ ಈ ಗ್ರಂಥದ 350ಕ್ಕೂ ಹೆಚ್ಚಿನ ಪುಟಗಳಲ್ಲಿ ಕುವೆಂಪು ಸಾಹಿತ್ಯ ಮತ್ತು ವಿಚಾರದ ವಿವಿಧ ವಿಶ್ಲೇಷಣೆಯ 25 ಬರಹಗಳಿವೆ. ‘ಶತಮಾನದ ಶಿಖರ ಕುವೆಂಪು’ ಎಂಬ ಪ್ರೊ।ಜಿಎಸ್ಸೆಸ್‌ ಅವರ ಒಂದು ಪ್ರಬಂಧ ಮತ್ತು ಪ್ರೊ।ಲಕ್ಷ್ಮಿನಾರಾಯಣ ಭಟ್‌ ಬರೆದ ‘ಕನ್ನಡಕ್ಕೊಬ್ಬ ಕಾರಣ ಪುರುಷ’ ಲೇಖನಗಳನ್ನು ಹೊರತುಪಡಿಸಿದರೆ ಮಿಕ್ಕ ಎಲ್ಲ ಬರಹಗಳು ಅಮೆರಿಕನ್ನಡಿಗ ಲೇಖಕ-ಲೇಖಕಿಯರ ಕೊಡುಗೆಗಳು. ಅಭ್ಯಾಸಿ, ಹವ್ಯಾಸಿ, ನುರಿತ, ಅರಿತ, ಉದಯೋನ್ಮುಖ ಬರವಣಿಗೆಕಾರರ ಸಾಹಿತ್ಯಸತ್ವದ ಒಂದು ಭವ್ಯ ಮೆರವಣಿಗೆ ಈ ಗ್ರಂಥರೂಪದಲ್ಲಿ ಬಂದಿದೆ. ‘ಅಮೆರಿಕದಲ್ಲಿದ್ದೂ ಕನ್ನಡ ಭಾಷೆ ಸಂಸ್ಕೃತಿಯ ಅಭಿಮಾನದಿಂದ ಬರೆದಿದ್ದಾರೆ....’ ಎಂಬ ಬಣ್ಣದ ಕನ್ನಡಕ ದೃಷ್ಟಿಕೋನದಿಂದಲ್ಲದೆ ವಸ್ತುನಿಷ್ಠವಾಗಿ ಈ ಗ್ರಂಥದ ಲೇಖನಗಳ ವಿಮರ್ಶೆ, ವಿಶ್ಲೇಷಣೆ ಕನ್ನಡ ಸಾಹಿತ್ಯ ವಲಯದಲ್ಲಿ ನಡೆಯಬೇಕು. ಆಗ ಇಂತಹ ಗ್ರಂಥಗಳಿಗೆ, ಅದರ ಹಿಂದಿನ ‘ಕಲೆಕ್ಟಿವ್‌’ ಪ್ರಯತ್ನಕ್ಕೆ ಹೊಸ ಅರ್ಥ ಬರುತ್ತದೆ.

  ನಮನ - ಇತ್ತೀಚೆಗೆ ಕಣ್ಮರೆಯಾದ ಸಾಹಿತಿಗಳ ಸ್ಮರಣ

  ಸಾಹಿತ್ಯೋತ್ಸವದಲ್ಲಿ ‘ಸರ್ವಂ ಕುವೆಂಪುಮಯಂ...’ ಎಂದೇನೂ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಮ್ಮನ್ನಗಲಿದ ನಾಡಿನ ಧೀಮಂತ ಸಾಹಿತಿಗಳ ದಿವ್ಯಸ್ಮರಣೆಯ ‘ಹೃದಯಸ್ಪರ್ಶಿ’ ಕಾರ್ಯಕ್ರಮವೂ ಒಂದಿತ್ತು. ಪು.ತಿ.ನ (1998) ಬಗ್ಗೆ ಮಾತನಾಡಿದವರು ಅವರ ಸುಪುತ್ರಿ ಪದ್ಮಾ ರಂಗಾಚಾರ್‌. ಹಾಸ್ಯಸಾಹಿತಿ ಎಚ್‌.ಕೆ.ರಂಗನಾಥ ರಾವ್‌ (2003) ನೆನಪುಗಳನ್ನು ಹಂಚಿಕೊಂಡವರು ಅವರ ಸಹೋದರ ಅಮೆರಿಕನ್ನಡಿಗ ಎಚ್‌.ಕೆ.ನಂಜುಂಡ ಸ್ವಾಮಿ. ಎಲ್‌.ಗುಂಡಪ್ಪ (1986)ನವರ ಸ್ಮರಣೆಮಾಡಿದವರು ಅವರ ಅಳಿಯ ಎಚ್‌.ವೈ ರಾಜಗೋಪಾಲ್‌ - ಹೀಗೆ ಆತ್ಮೀಯತೆಯ ಹೆಚ್ಚುವರಿ ಪದರ ಇದ್ದುದರಿಂದ ‘ನಮನ’ದ ಸಾರ್ಥಕತೆ ಹೆಚ್ಚಿತು. ಅದೇ ಕಾರ್ಯಕ್ರಮದಲ್ಲಿ ಮಲ್ಲಿಗೆ ಕವಿ ಕೆ.ಎಸ್‌.ನರಸಿಂಹ ಸ್ವಾಮಿ (2003)ಗೆ ಶೃದ್ಧಾಂಜಲಿಯ ಮಲ್ಲಿಗ ೆಹಾರವೇರಿಸಿದವರು ನಳಿನಿ ಕುಕ್ಕೆ. ಅಕ್ಕಿಹೆಬ್ಬಾಳು ಮೂರ್ತಿರಾಯರ (2003)ಸ್ಮರಣೆಗೈದವರು ಎಚ್‌ ಕೆ ಚಂದ್ರಶೇಖರ್‌; ಹಾಗೂ ಕೀರ್ತಿಶೇಷ ಕೀರ್ತಿನಾಥ ಕುರ್ತಕೋಟಿ(2003)ಗೆ ಕೋಟಿನಮನ ಸಲ್ಲಿಸಿದವರು ನಾಗ ಐತಾಳ.

  ಸಾಹಿತ್ಯ ಗೋಷ್ಠಿ

  ಮಧ್ಯಾಹ್ನದ ಭೋಜನಾನಂತರದ ಮೊದಲ ಕಾರ್ಯಕ್ರಮ ಸಾಹಿತ್ಯ ಗೋಷ್ಠಿ. ಡಾ।ಮೈ.ಶ್ರೀ.ನಟರಾಜ ಅವರ ದಕ್ಷ ನಿರ್ವಹಣೆಯಲ್ಲಿ 19 ಮಂದಿ ಅಮೆರಿಕನ್ನಡಿಗ ಸಾಹಿತ್ಯಪ್ರತಿಭೆಗಳ ಪ್ರೌಢಿಮೆಯ ಪ್ರದರ್ಶನಕ್ಕೊಂದು ಅವಕಾಶ. ಅಲ್ಲಿ ಲಘುಪ್ರಬಂಧಗಳಿದ್ದುವು, ಸಣ್ಣಕತೆಯಿತ್ತು, ಭಾವಪೂರ್ಣ-ಕಂಬನಿಮಿಡಿವ ಕವಿತೆಗಳ ಪ್ರಸ್ತುತಿಯಿತ್ತು, ಶೃಂಗಾರರಸದ ವರ್ಣನೆಯಿತ್ತು ; ಕಚಗುಳಿಯಿಡುವ ‘ಕೋಸುಂಬರಿ’ (ಎಚ್‌. ವಿ .ರಂಗಾಚಾರ್‌) ಯಂಥ ಹಾಸ್ಯಲಹರಿಗಳಿದ್ದುವು ಜತೆಯಲ್ಲೇ ನಾಡಗೀತೆ ವಿವಾದ, ಬಸವತತ್ವಗಳ ಬಗೆಗಿನ ಇತ್ತೀಚಿನ ವಿವಾದದಂಥ ಗಂಭೀರ ವಿಷಯಗಳ (ಸಾಹಿತ್ಯೋತ್ಸವದಲ್ಲಿ ಭಾಗವಹಿಸಲೆಂದೇ ದೂರದ ಕ್ಯಾಲಿಫೋರ್ನಿಯಾದಿಂದ ಬಂದಿದ್ದ ಮೃತ್ಯುಂಜಯ ಹರ್ತಿಕೋಟೆ ಅವರಿಂದ) ಸ್ಥೂಲ ಪರಿಶೀಲನೆಯೂ ಇತ್ತು. ಇಷ್ಟು ವೈವಿಧ್ಯ ಸಾಲದಿದ್ದವರಿಗೆ, ನ್ಯೂಜೆರ್ಸಿಯಿಂದ ಬಂದಿದ್ದ ವಸಂತಾ ಶಶಿ ಅವರ ಸುಮಧುರ ಕಂಠಸಿರಿಯಲ್ಲಿ ‘ವಸಂತ ಗೀತೆ’ (ಸ್ವಂತ ರಚನೆ) ಮತ್ತು ‘ಕಾವ್ಯರ್ಷಿಗೆ ವಿದೇಶಿ ಕನ್ನಡಿಗರ ನಮನ’ (ರಚನೆ: ಡಾ।ಮೈಶ್ರೀನ)ಗಳ ಸುಶ್ರಾವ್ಯ ಗಾಯನವೂ ಇತ್ತು ! ಕನ್ನಡದ ಪೆಂಪು - ಕಿವಿಗಳಿಗಿಂಪು - ಮನಸಿಗೆ ತಂಪು - ಆಲ್‌ ಇನ್‌ ದ ನೇಮ್‌ ಆಫ್‌ ಕುವೆಂಪು!

  ಅಮೆರಿಕದಲ್ಲಿ ಕನ್ನಡ, ಕನ್ನಡಿಗ

  ಚಹಾ ವಿರಾಮದ ನಂತರದ ಇನ್ನಿಂಗ್ಸ್‌ನಲ್ಲಿ ಮತ್ತಷ್ಟು ಕನ್ನಡ ಬೌಂಡರಿ-ಸಿಕ್ಸರ್‌ಗಳು. ‘ಅಮೆರಿಕದಲ್ಲಿ ಕನ್ನಡ’ ಬಗ್ಗೆ ಒಟ್ಟು ಎರಡು ಗಂಟೆಗಳ ಕಾರ್ಯಕ್ರಮ. ಮೊದಲ ಭಾಗದಲ್ಲಿ ‘ಅಮೆರಿಕದಲ್ಲಿ ಕನ್ನಡ ಕಲಿಕೆ’ ಎಂಬ ಬಗ್ಗೆ ಪ್ರೊ।ಹೆರಾಲ್ಡ್‌ ಶಿಫ್‌ಮನ್‌ ನಿರ್ವಹಣೆಯಲ್ಲಿ ಕೆಲವು ಪ್ರಾತ್ಯಕ್ಷಿಕೆಗಳು - ಅನುಕ್ರಮವಾಗಿ ವಲ್ಲೀಶ ಶಾಸ್ತ್ರಿ , ಸಿ.ನಟರಾಜ್‌, ವಿಮಲಾ ರಾಜಗೋಪಾಲ್‌ ಮತ್ತು ಅಲಿಸನ್‌ ಲೇಕ್‌ ಇವರಿಂದ. ಎರಡನೆಯ ಭಾಗದಲ್ಲಿ , ನಳಿನಿ ಮೈಯ ಅವರ ನಿರ್ವಹಣೆಯಲ್ಲಿ ‘ನಮ್ಮ ಬರಹಗಾರರು’ ಕಾರ್ಯಕ್ರಮ. ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪ್ರತಿನಿಧಿಸುವ ಕೆಲವು ಅಮೆರಿಕನ್ನಡಿಗ ಲೇಖಕರ ಪರಿಚಯ, ವಿಚಾರಧಾರೆ. ಮೂರನೆಯದಾಗಿ ‘ಕನ್ನಡ ಸಾಹಿತ್ಯ ಮಂಟಪಗಳು’ ಕಾರ್ಯಕ್ರಮದಲ್ಲಿ ಕ್ಯಾಲಿಫೋರ್ನಿಯಾದ ‘ಸಾಹಿತ್ಯ ಗೋಷ್ಠಿ’ (ವಿಶ್ವನಾಥ ಹುಲಿಕಲ್‌), ‘ಅಂಜಲಿ’ (ವಲ್ಲೀಶ ಶಾಸ್ತ್ರಿ) ಮತ್ತು ‘ಪ್ರಸ್ತಾಪ’ (ಶ್ರೀದೇವಿ ಚಂದ್ರಶೇಖರ್‌) ಸಾಹಿತ್ಯ ಸಂಘಟನೆಗಳ ಪರಿಚಯ.

  ಇದಾದ ಮೇಲೆ ಹೇಮಾ ರಾಮಮೂರ್ತಿ ನಿರ್ವಹಣೆಯಲ್ಲಿ ವಸಂತವೃಂದದವರಿಂದ ಅರ್ಧತಾಸಿನ ಸಂಗೀತ ಕಾರ್ಯಕ್ರಮ. ಸುಗಮ ಸಂಗೀತ ಮತ್ತು ಜನಪದ ಗೀತೆಗಳ ಲೈಟ್‌ ಎಂಟರ್‌ಟೈನ್‌ಮೆಂಟ್‌ ಆರ್ಕೆಸ್ಟ್ರಾ.

  ಏಕಮೇವಾದ್ವಿತೀಯ ಉಪನ್ಯಾಸ, ಏಕಲವ್ಯ...

  Sahithya gOshti in Picturesರಾತ್ರಿಯ ಔತಣದ ನಂತರ ಉಳಿದದ್ದು ಇನ್ನೂ ಎರಡು ಪ್ರಮುಖ ಕಾರ್ಯಕ್ರಮಗಳು. ಮೊದಲನೆಯದಾಗಿ ಡಾ।ಪ್ರಭುಶಂಕರ ಅವರಿಂದ ಇನ್ನೊಂದು ಉಪನ್ಯಾಸ - ‘ಕನ್ನಡ ಸಾಹಿತ್ಯ: ಒಂದು ಮಿಂಚು ನೋಟ’. ಸಭಿಕರನ್ನೆಲ್ಲ ಕುರ್ಚಿಗಳಿಗಂಟಿಕೊಂಡೇ ಇರಿಸುವಲ್ಲಿ ಯಶಸ್ವಿಯಾಗಿ ತಮ್ಮ ಪುಂಖಾನುಪುಂಖ ಮಾತುಗಳಿಂದ ಐದು ನಿಮಿಷಕ್ಕೊಮ್ಮೆ ನಗೆಗಡೆಲಲ್ಲಿ ತೇಲಿಸುವಂಥದೇನಾದರೂ ಚಾಟೋಕ್ತಿಗಳಿಂದ ಭಾಷಣ ಮಾಡಿದರು ಪ್ರಭುಶಂಕರ. ಅದು, ಒಂದು ಸಾವಿರ ವರ್ಷಗಳ ಕಾಲ ತುಂಬಿ ಹರಿದು ಕನ್ನಡ ಜನಜೀವನವನ್ನು ಸಂಪದ್ಭರಿತವಾಗಿ ಮಾಡಿರುವ ಸಾಹಿತ್ಯ ವಾಹಿನಿಯದೊಂದು ಕಿರು ಪರಿಚಯ. ಹಲ್ಮಿಡಿ ಶಾಸನದಿಂದ ಹಿಡಿದು ಇತ್ತೀಚಿನ ದಲಿತ-ಬಂಡಾಯ-ಪ್ರಗತಿಶೀಲದ ವರೆಗೂ ಕನ್ನಡ ಸಾಹಿತ್ಯದ ವಿವಿಧ ಹರಿವು, ಹರಹು, ಹೊಳಪುಗಳ ಸ್ಥೂಲ ಚಿತ್ರಣ. ಭಾಷಣದ ಕೊನೆಯಲ್ಲಿ ಡಾ।ಪ್ರಭುಶಂಕರ, ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಮೆರಿಕನ್ನಡಿಗರ ಬರವಣಿಗೆಯ ಮೆರವಣಿಗೆಯನ್ನು ಕಣ್ತುಂಬ ಕಂಡಾಗ ತಮಗಾದ ಪುಳಕವನ್ನು ಹೃದಯಪೂರ್ವಕವಾಗಿ ಅರುಹಿದರು; ಮನಸೂರೆಗೊಳ್ಳುವಂತೆ ಮಾತಾಡಿ, ಮಾಹಿತಿ ನೀಡಿ ಸಭಿಕರ ಹೃದಯಗೆದ್ದ ಪ್ರಭುಶಂಕರರ ಉಪನ್ಯಾಸ ಮುಗಿದಾಗ ಸಭೆಯಿಡೀ ಎದ್ದು ನಿಂತು ಕಿವಿಗಡಚಿಕ್ಕುವಷ್ಟು ಚಪ್ಪಾಳೆ. ಅಂದದ ಕಾರ್ಯಕ್ರಮದ ಸಫಲತೆಗೊಂದು ಅಳತೆಗೋಲು.

  ಸಾಹಿತ್ಯೋತ್ಸವದ ಕೊನೆಯ ಅಂಗ, ಕುವೆಂಪು ವಿರಚಿತ ‘ಬೆರಳ್‌ಗೆ ಕೊರಳ್‌’ ನಾಟಕದ ಪ್ರದರ್ಶನ, ವಾಷಿಂಗ್ಟನ್‌ ಡಿಸಿ ಪರಿಸರದ ಕಾವೇರಿ ಕನ್ನಡ ಸಂಘದ ಕಲಾವಿದರ ಪ್ರಸ್ತುತಿ. ಡಾ।ಸುಮಾ ಮುರಳೀಧರ್‌ ನಿರ್ಮಾಣ (ಮತ್ತು ಏಕಲವ್ಯನ ತಾಯಿ ‘ಅಬ್ಬೆ’ಯಾಗಿ ಅಭಿನಯ), ಡಾ।ತಾವರೆಕೆರೆ ಶ್ರೀಕಂಠಯ್ಯ ನಿರ್ದೇಶನ, ಉಷಾ ಚಾರ್‌ ಹಿನ್ನೆಲೆ ಸಂಗೀತವುಳ್ಳ ಈ ನಾಟಕ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂತು. ಸಂಭಾಷಣೆಯಷ್ಟೂ ಹಳಗನ್ನಡದಲ್ಲೇ ಇದ್ದರೂ ಭಾವಾಭಿನಯ ಮತ್ತು ಧ್ವನಿಯ ಏರಿಳಿತಗಳಿಂದಲೇ ನಾಟಕವು ‘ತಲೆಯ ಮೇಲಿಂದ’ ಹೋಗದೆ ಹೃದಯವನ್ನು ತಟ್ಟುವಂತೆ ಮಾಡಿದ ಕಲಾವಿದರೆಲ್ಲರ ಶ್ರಮಕ್ಕೊಂದು ಸಲಾಮು. ನಾಟಕ ಮುಗಿದ ಮೇಲೆ ಪ್ರಭುಶಂಕರರು ಹೇಳಿದ ಮಾತು - ‘ಇಂದು ಕುವೆಂಪು ನಮ್ಮೊಂದಿಗಿದ್ದು ಈ ನಾಟಕದ ರಂಗಪ್ರದರ್ಶನವನ್ನು ವೀಕ್ಷಿಸಿದ್ದರೆ ಅವರಿಗೆ ಖಂಡಿತವಾಗಿಯೂ ಅದ್ಭುತ ತೃಪ್ತಿ, ಪರಮಾನಂದವಾಗುತ್ತಿತ್ತೇನೊ...’ ಇನ್ನೇನು ಬೇಕು ನಾಟಕತಂಡದವರ ಮೊಗದಲ್ಲಿ ಮಂದಹಾಸ ಮಿನುಗಲು!

  ‘ಬೆರಳ್‌ಗೆ ಕೊರಳ್‌’ ನಾಟಕದಲ್ಲಿ ಏಕಲವ್ಯನ ಗುರುಭಕ್ತಿಯ ಪರಾಕಾಷ್ಠತೆಯನ್ನು ಗುರು ದ್ರೋಣಾಚಾರ್ಯರು ಮೆಚ್ಚಿ ಭೇಷ್‌ ಎಂದಷ್ಟೇ ಹೃದಯತುಂಬಿ ಎಲ್ಲರೂ ಮೆಚ್ಚಿಕೊಂಡರು ಏಕಲವ್ಯನ ಪಾತ್ರವನ್ನು ನಿರ್ವಹಿಸಿದ ಡಾ।ರವಿ ಹರಪ್ಪನಹಳ್ಳಿಯವರ ಸಮರ್ಥ ಅಭಿನಯವನ್ನು. ನಾಟಕದ ಇತರೆಲ್ಲ ಪಾತ್ರಧಾರಿಗಳು, ನಿರ್ದೇಶಕ, ತಂತ್ರಜ್ಞ, ತೆರೆಮರೆಯ ಸಹಾಯಕರೆಲ್ಲರಿಗೂ ಹಾರ್ದಿಕ ಅಭಿನಂದನೆಗಳು ಸಲ್ಲುತ್ತವೆಯಾದರೂ ಹೆಬ್ಬೆರಳು ಕಳಕೊಂಡ ಏಕಲವ್ಯನಿಗೆ ‘ಥಂಬ್ಸ್‌ ಅಪ್‌’!

  -ನಾಳೆ , ಮಂಗಳವಾರ ಓದಿ :

  * ಸಾಹಿತ್ಯೋತ್ಸವದ ಸ‘ರಸ’ ಘಳಿಗೆಗಳು...

  * ಬೆರಳ್‌ಗೆ ಕೊರಳ್‌ (ನಾಟಕ ನೋಟ)

  ವಸಂತ ಸಾಹಿತ್ಯೋತ್ಸವದ ಚಿತ್ರಗಳು

  ಮುಖಪುಟ / ಎನ್‌ಆರ್‌ಐ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more