ಕುವೆಂಪು ಕೃತಿಗೆ ಪ್ರಭುಶಂಕರರ ಸಾಕ್ಷಿ
- ವಲ್ಲೀಶ ಶಾಸ್ತ್ರಿ ; ಲಾಸ್‌ಏಂಜಲಿಸ್.
[email protected]
ಕುವೆಂಪು ಜನ್ಮಶತಾಬ್ಧಿಯ ಸಂದರ್ಭಕ್ಕೆ ಅನಿವಾಸಿ ಕನ್ನಡಿಗರು ಕೊಟ್ಟ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಒಂದು ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಪುಸ್ತಕದ ಬಿಡುಗಡೆ ಮಾಡಿದವರು ಡಾ। ಪ್ರಭು ಶಂಕರ್. ಸಂದರ್ಭ: ಅಮೇರಿಕೆಯ ಸಾಹಿತ್ಯ ರಂಗ ನಡೆಸಿದ ವಸಂತೋತ್ಸವ.
‘ಅನಿವಾಸಿ ಕನ್ನಡಿಗರ ಈ ಕೊಡುಗೆ ಕುವೆಂಪುರವರಿಗೆ ಅರ್ಪಿಸಿದ ಒಂದು ದೊಡ್ಡ ನಮನ...’ ಹೀಗೆ ಹೇಳಿದವರು ಡಾ।ಪ್ರಭು ಶಂಕರ್‌ರವರು. ‘ನಾನು ಈ ಪುಸ್ತಕದ ಎಲ್ಲ ಲೇಖನಗಳನ್ನೂ ಓದಿದ್ದೇನೆ. ಕರ್ನಾಟಕದ ಸಮಕಾಲೀನ ಲೇಖಕರ ಮಟ್ಟಕ್ಕೂ ಮೀರಿ ಲೇಖನಗಳು ಹೊರಬಂದಿವೆ ಎಂದು ಹೇಳಲು ಹೆಮ್ಮೆಯಾಗುತ್ತದೆ’ ಎಂದರು. ಈ ಹೊತ್ತಿಗೆಯನ್ನು ಹೊರತರಲು ಶ್ರಮಪಟ್ಟಿದ್ದ ಆಹಿತಾನಲ(ನಾಗ್ ಐತಾಳ್)ರನ್ನೂ, ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದ ಮೈ ಶ್ರೀ ನಟರಾಜ್, ನಳಿನಿ ಮೈಯ, ಹೆಚ್ ಕೆ ಚಂದ್ರಶೇಖರ್ ಮತ್ತು ಹೆಚ್. ವೈ ರಾಜಗೋಪಾಲ್ ರವರನ್ನೂ ಹಾಗೂ ಲೇಖಕರನ್ನೂ ಕೊಂಡಾಡಿದರು.
ಬಹಳ ಶ್ರಮವಹಿಸಿ ಎಲ್ಲ ಅನಿವಾಸಿ ಲೇಖಕರಿಂದ ಬರೆಸಿ ಈ ಹೊತ್ತಿಗೆಯನ್ನು ಹೊರತಂದ ಐತಾಳರ ಕಾರ್ಯ ಸ್ತುತ್ಯಾರ್ಹ. ಕಾರಂತರ ಚಿಂತನವನ್ನೂ ಹೀಗೆಯೇ ಹೊರತಂದಿದ್ದ ಐತಾಳರ ಸಂಪಾದಕೀಯ ಕಾರ್ಯ ಅಮೇರಿಕನ್ನಡಿಗರಿಗೊಂದು ಮಹತ್ತರ ಹೆಮ್ಮೆಯ ವಿಚಾರ. ಲೇಖಕರನ್ನು ಹುರಿದುಂಬಿಸಿ ಅವರ ಹಿಂಬಾಲು ಬಿದ್ದು ಲೇಖನ, ಕಥೆ ಕವನಗಳನ್ನು ಬರೆಸುವುದರಲ್ಲಿ ಐತಾಳರದ್ದು ಎತ್ತಿದ ಕೈ. ದಷ್ಟಿ ಮಂದದಿಂದ ಬಳಲುತ್ತಿದ್ದರೂ ಖುದ್ದಾಗಿ ಇವರು ಬರೆಯುವ ಲೇಖನಗಳಿಗೂ ಹೆಗಲು ಕೊಟ್ಟು ನಿಲ್ಲುವವರು ಇವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿಐತಾಳ್. ಇವರ ಸಹಾಯ ಯಾವಾಗಲೂ ತಪ್ಪದೇ ನೆನಸುತ್ತಾರೆ ನಾಗ್ ಐತಾಳರು. ಇವರ ಕುವೆಂಪುರವರ ರಾಮಾಯಣದರ್ಶನಂನ ಶಬರಿಯ ಚಿತ್ರಣದ ಮೇಲಿನ ಲೇಖನ ಈ ಹೊತ್ತಿಗೆಯಲ್ಲಿ ಪ್ರಕಟವಾಗಿದೆ.
ಸಂಪಾದಕ ಮಂಡಳಿಯಲ್ಲಿ ಅಮೇರಿಕನ್ನಡಿಗರ ಚಿರಪರಿಚಿತ ಪ್ರಸಿದ್ಧ ಲೇಖಕರೇ ಸೇರಿದ್ದಾರೆ. ಪ್ರಸಿದ್ಧ ಕವಿ ಲೇಖಕ ಮೈ ಶ್ರೀ ನಟರಾಜ್, ಲೇಖಕಿ ನಳಿನಿ ಮೈಯ, ಹೆಚ್. ವೈ. ರಾಜ್‌ಗೋಪಾಲ್ ಹಾಗೂ ಹೆಚ್. ಕೆ. ಚಂದ್ರಶೇಖರ್ ಇವರುಗಳೇ ಈ ಹೊತ್ತಿಗೆ ತರುವುದರಲ್ಲಿ ಶ್ರಮ ಪಟ್ಟ ಸಂಪಾದಕೀಯ ಮಂಡಳಿ. ತಮ್ಮ ವೃತ್ತಿಯ ಕೆಲಸದ ಭರದಲ್ಲೂ ಕನ್ನಡಕ್ಕಾಗಿ ವೇಳೆಯನ್ನು ಮೀಸಲಿಟ್ಟು ಅತಿ ಸುಂದರವಾಗಿ ಹೊರತಂದಿರುವ ಈ ಹೊತ್ತಿಗೆ ನಿಜವಾಗಲೂ ಅಮೇರಿಕನ್ನಡಿಗರಿರೇನು, ಇಡೀ ಕನ್ನಡ ಸಮೂಹಕ್ಕೆ ಕುವೆಂಪುರವರ ಶತಾಬ್ಧಿಯ ಸಮಯದಲ್ಲಿ ಕೊಟ್ಟಂತಹ ಒಂದು ದೊಡ್ಡ ಕೊಡುಗೆ.
ಮೋನಪ್ಪರವರ ರಕ್ಷಾಪುಟದ ವಿನ್ಯಾಸದೊಂದಿಗೆ ಬಹಳ ಸುಂದರ ಹೊರ ಹೊದಿಕೆಯಾಂದಿಗೆ ಮೂಡಿಬಂದಿರುವ ಈ ಪುಸ್ತಕಕ್ಕೆ ಜೀವ ತುಂಬಿರುವವರು 21 ಅಮೇರಿಕನ್ನಡ ಲೇಖಕರು. ಅದೂ ಅಲ್ಲದೆ ಜಿ ಎಸ್ ಶಿವರುದ್ರಪ್ಪರವರ ಮುನ್ನುಡಿಯಾಂದಿಗೆ ಅವರ ಲೇಖನವೂ ಇದರಲ್ಲಿದೆ. ಕುವೆಂಪುರವರ ಕವನ, ಕಥೆಗಳ ವಿಮರ್ಶಾತ್ಮಕ ಚಿತ್ರಣವೇ ಇದರ ವಿಶೇಷ. ಅಮೇರಿಕನ್ನಡಿಗರ ಸಾಹಿತ್ಯಾಸಕ್ತರ ಹಿತಾಸಕ್ತಿಯನ್ನು ಎತ್ತಿಹಿಡಿಯಲು ಜನ್ಮತಾಳಿರುವ ‘ಕನ್ನಡ ಸಾಹಿತ್ಯರಂಗ’ ತನ್ನ ಮೊದಲ ಕೊಡುಗೆಯಾಗಿ ವಸಂತೋತ್ಸವದ ಸಮಯದಲ್ಲಿ ಬಂದ ಸಾಹಿತ್ಯಾಸಕ್ತರಿಗೆಲ್ಲರಿಗೂ ಕೊಡಲಾಯಿತು.
ವಸಂತ ಸಾಹಿತ್ಯೋತ್ಸವ : ಫಿಲಡೆಲ್ಫಿಯಾದಲ್ಲಿ ಕನ್ನಡ ವೈಭವ !












Click it and Unblock the Notifications