ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂತಿ ಹರಿದ ವೀಣೆಯಿಂದ ನಾದ ಹರಿಯ ಬಲ್ಲುದೆ ?

By Staff
|
Google Oneindia Kannada News

ಮನುಷ್ಯನ ಆಸೆಗಳೆ ಹಾಗೇನೊ ಅನ್ನಿಸಿಬಿಡುತ್ತದೆ. ಮನೆಯಲ್ಲಿ ಆಡುವಾಗ ಯೂನಿಫಾರ್ಮ್‌ ಹಾಕಿಕೊಂಡು ಸ್ಕೂಲಿಗೆ ಹೋಗುವ ಆಸೆ, ಸ್ಕೂಲಿಗೆ ಸೇರಿದಮೇಲ್‌ ಹೈಸ್ಕೂಲ್‌ ಹುಡುಗರ ಪುಂಡಾಟಿಕೆ ನೋಡಿ ಅವರ ತರಹ ಶರ್ಟ್‌ನ ಕಾಲರ್‌ ಎತ್ತಿ ಪ್ಯಾಂಟ್‌ ಹಾಕಿಕೊಳ್ಳುವ ಆಸೆ. ಹೈಸ್ಕೂಲಿಗೆ ಹೋದಮೇಲೆ ಕಾಲೇಜಿನ ಹುಡುಗ-ಹುಡುಗಿಯರ ನೋಡಿ ಅವರ ತರಹ ಹಂಗಿಲ್ಲದ ಬದುಕಿನ ಆಸೆ. ಕಾಲೇಜಿಗೆ ಹೋದಮೇಲೆ ದುಡಿಯುವರ ದುಂದು ವೆಚ್ಚನೋಡಿ ಕೆಲಸ ಮಾಡುವ ಆಸೆ. ಸಮಯಕ್ಕೆ ಸರಿಯಾದ, ಅರ್ಹತೆಗೆ ತಕ್ಕ ಕೆಲಸವನ್ನು ಮಾಡುವುದೇ ಇಲ್ಲ. ನಮಗಿಂತ ಬೇರೆಯವರೆ ಯಾವಾಗಲೂ ಸುಖವಾಗಿ ಕಾಣುತ್ತಾರೆ. ನಮಗೆ ಯಾವಾಗಲೂ ನಮ್ಮ ಕೆಲಸಕ್ಕಿಂತ ಬೇರೆಯವರ ಕೆಲಸ ಸುಲಭವಾಗಿ ಕಾಣಿಸುತ್ತದೆ. ಅದೇ ರೀತಿ ನಮ್ಮ ಕೆಲಸ ಬಿಟ್ಟು ಮತ್ತೊಬ್ಬರ ಕೆಲಸದಲ್ಲಿ ತಲೆ ಹಾಕುತ್ತೇವೆ. ಅಲ್ಲೂ ಸೋತಮೇಲೆ ಮತ್ತೊಬ್ಬರ ತಲೆಗೆ ಇಣುಕುತ್ತೇವೆ. ಏಕೆ ಹೀಗೆ ?

ನಮ್ಮ ಕೆಲಸ ನಮ್ಮದು ! ಕಸ ಗುಡಿಸುವವನು ಕಸ ಗುಡಿಸಬೇಕು, ಕಸಬರೆಕೆ ಹಿಡಿದ ತಕ್ಷಣ ಅವನ ಕೆಲಸ ಆಗಲಿಲ್ಲ. ‘ಉಪಾದ್ಯಾಯರುಗಳು ಸ್ಕೂಲಿಗ ಹೋಗಿ ಪಾಠ ಮಾಡಬೇಕು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಪ್ರತಿ ದಿನ ಸ್ಕೂಲಿಗೆ ಹೋಗುವುದು, ಪಾಠ ಮಾಡದೆ ಕುಳಿತು ಬರುವುದೆ ಅವರ ಕಾಯಕವಾದರೆ ಅವರನ್ನು ಯಾವುದಕ್ಕೆ ಹೋಲಿಸಬೇಕು. ಅವರಿಗಿಂತ ಸುಮ್ಮನೆ ಸುತ್ತಾಡಿ ಮೇಯ್ದುಕೊಂಡು ಬರುವ ಎಮ್ಮೆಗಳೆ ವಾಸಿ, ಅವುಗಳು ಸಂಜೆ ಮನೆಗೆ ಬಂದ ಮೇಲೆ ಹಾಲಾನ್ನಾದರೂ ಕೊಡುತ್ತವೆ’ ಎಂದು ನಮ್ಮ ಮಹಾನ್‌ ರಾಜಕಾರಣಿಯಾಬ್ಬರು ಹೇಳಿದ್ದ ನೆನಪು. ನನಗೆ ಗೊತ್ತಿರುವ ಹಾಗೆ ಯಾವ ಉಪಾಧ್ಯಾಯರೂ ಕೂಡ ದಿನದಲ್ಲಿ ಒಂದು ಘಂಟೆಯಾದರೂ ಪಾಠಮಾಡದೆ ಬರುವುದಿಲ್ಲ. ಅವರಿಗೆ ಬರುವ ಕಡಿಮೆ ಸಂಬಳಕ್ಕೆ ದೇಶಕ್ಕೆ ಉನ್ನತ ಪ್ರಜೆಗಳನ್ನು ನೀಡುವಂತಹ ಮಹತ್ಕಾರ್ಯ ಮಾಡುತ್ತಾರೆ. ಕೇವಲ ಹಣದ ಬಲದಿಂದ ಗೆದ್ದು, ಅವರಿವರ ಕಾಲು ಹಿಡಿದು ವಿದ್ಯಾಮಂತ್ರಿ ಆದ ತಕ್ಷಣ ಬಾಯಿಗೆ ಬಂದಂತೆ ಮಾತಾಡುವ ಮಂತ್ರಿಮಹಾಶಯರು ಮಾಡುತ್ತಿರುವುದಾದರೂ ಏನು?

ರಾಷ್ಟ್ರ ರಾಜಕಾರಣವಾಗಲಿ, ರಾಜ್ಯ ರಾಜಕಾರಣವಾಗಲಿ ಮೂರು ಕಾಸಿನ ಅಭಿವೃದ್ದಿ ಮಾಡದಿದ್ದರೂ ನೂರು ದಿನ ಪೂರೈಸಿದ್ದಕ್ಕೆ ಆಚರಣೆ ಮಾಡಿಕೊಳ್ಳುತ್ತಾರೆ. ಸಮ್ಮಿಶ್ರ ರಾಜಕಾರಣ ಮಾಡಿ ನಡೆಯುವುದೆ ಕಷ್ಟ, ಅಂತಹ ಪ್ರಸಂಗದಲ್ಲಿ ನೂರುದಿನ ತಳ್ಳಿರುವುದು ಮಹಾನ್‌ ಸಾಧನೆ ಎಂದು ಬೀಗುತ್ತಾರೆ. ದೇಶವನ್ನು ಮುನ್ನಡೆಸಿ ಎಂದು ಅವರನ್ನು ಆರಿಸಿದರೆ, ದೇಶದ ಬಗ್ಗೆ ಚಿಂತಿಸಲು ಸಮಯವಿಲ್ಲದಷ್ಟು ರಾಜಕಾರಣ ಅವರದು. ತಮಿಳುನಾಡಿನಲ್ಲಿ ಕರುಣಾನಿಧಿ ಅಧಿಕಾರಕ್ಕೆ ಬಂದರೆ ಜಯಲಲಿತಾಳ ಸೀರೆ ಎಳೆಸುವುದರಲ್ಲಿ ಬ್ಯುಸಿ ಆದರೆ, ಜಯಲಲಿತ ಅಧಿಕಾರಕ್ಕೆ ಬಂದರೆ ಕರುಣಾನಿಧಿಯ ಪಂಚೆ ಇಳಿಸುವುದರಲ್ಲಿ ಚಿಂತನೆ. ಇಂತಹ ನೀಚರನ್ನು ನಾವು ನಾಯಕರೆಂದು ಕರೆಯುವುದೆ? ಇವರು ಯಾವತ್ತಾದರೂ ದೇಶವನ್ನು ಅಥವ ರಾಜ್ಯವನ್ನು ಮುಂದುವರೆಸುವರೆ? ಇದೇ ರೀತಿಯ ಪ್ರಸಂಗಗಳು ಈಗ ರಾಷ್ಟ್ರ ರಾಜಕಾರಣದಲ್ಲು ಕಾಣಿಸುತ್ತಿವೆ. ದೇಶ ನಡೆಸಿ ಎಂದು ಗದ್ದುಗೆಗೆ ಕೂರಿಸಿದರೆ, ಶತ್ರುತ್ವ ತೋರಿಸುವುದರಲ್ಲಿ ಅವರ ಶೂರತ್ವ ತೋರಿಸುತ್ತಿದ್ದಾರೆ.

ನೂರು ದಿನದಲ್ಲಿ ಏನೂ ಸಾಧಿಸಲಾಗದಿದ್ದರೂ ಮಕ್ಕಳಿಗಿಂತ ಕಡೆಯಾಗಿ ಒಬ್ಬರ ಮೇಲೊಬ್ಬರು ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಆಂಧ್ರದಲ್ಲಿ ತೆಲಂಗಾಣ ಬೇಕು ಎಂದು ಕೂಗುತ್ತಿದ್ದರೆ, ಅವರ ಕೂಗು ಯಾರಿಗೂ ಕೇಳಿಸುತ್ತಿಲ್ಲ. ಚುನಾವಣೆಗೆ ಮುಂಚೆ ಅವರನ್ನೇ ಒಂದು ದಾಳವನ್ನಾಗಿ ಉಪಯೋಗಿಸಿದರು, ಈಗ ಅವರು ಒರೆಸಿ ಬಿಸಾಡಿದ ಕಾಗದ. ವಿದೇಶಿಯರಿಂದ ಭಾರತವನ್ನು ಬಿಡಿಸಿಕೊಳ್ಳಲು ಹೋರಾಡಿ, ತಮ್ಮದೆ ಪಕ್ಷ ಕಟ್ಟಿದ ಕಾಂಗ್ರೆಸ್ಸ್‌, ಇವತ್ತು ಒಂದು ವಿದೇಶಿ ಮೂಲದ ಹೆಣ್ಣಿನ ಸೂತ್ರದ ಗೊಂಬೆ. ಆಕೆ ಬಯಸಿದವರು ಪ್ರಧಾನಮಂತ್ರಿಯಾಗುತ್ತಾರೆ, ಆಕೆ ತಿಳಿಸಿದವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ನಂತರ ಮುಖ್ಯಮಂತ್ರಿಯಾಗಲಿ, ಪ್ರಧಾನ ಮಂತ್ರಿಯಾಗಲಿ ಅವರಿಡುವ ಪ್ರತಿಯಾಂದು ಹೆಜ್ಜೆಯನ್ನೂ ಆಕೆ ನಿರ್ಧರಿಸುತ್ತಾಳೆ. ಪ್ರಚಂಡ ಭಾರತದ ಭವಿಷ್ಯವನ್ನು ವಿದೇಶಿ ಮಹಿಳೆಯಾಬ್ಬಳು ತನ್ನ ಮನಸ್ಸಿಗೆ ಬಂದಂತೆ ತಿರುಚಿ ಬಿಸಾಡಬಹುದೆನ್ನುವಂತಿದೆ ಈಗಿನ ಪರಿಸ್ಥಿತಿ. ಹತ್ತು ವರ್ಷ ಹಳೆಯದಾದ ವಿಷಯವನ್ನು ಮತ್ತೆ ಕೆದಕುವುದು, ಅದರಿಂದ ಯಾರಿಗೆ ಏನೂ ಪ್ರಯೋಜನವಾಗದೆ ಇದ್ದರೂ ಸಾರ್ವಜನಿಕರಿಗಂತೂ ಬಹಳ ತೊಂದರೆ ಆಗಿದೆ, ರಾಜಕಾರಣಿಗಳು ಜನರ ಹಣದಿಂದ ಉತ್ತರದಿಂದ ದಕ್ಷಿಣಕ್ಕೆ, ದಕ್ಷಿಣದಿಂದ ಉತ್ತರಕ್ಕೆ ಹಾರಾಡಿದರು. ಲಲ್ಲೂ ವಿರುದ್ದವಾಗಿ ಭಾಜಪ ಕೂಗಾಡಿದರೆ, ಆರೆಸ್ಸೆಸ್‌ ವಿರುದ್ದವಾಗಿ ಕಾಂಗ್ರೆಸ್ಸ್‌ ಕಿರುಚಾಡುತ್ತದೆ. ಇವರ ದೊಂಬರಾಟದಲ್ಲಿ ಜನಸಾಮಾನ್ಯರ ಅಹವಾಲುಗಳನ್ನು ಕೇಳುವರು ಯಾರು?

ಕಾರ್ಗಿಲ್‌ ಯುದ್ಧ ಮುಗಿದು ನಾಲ್ಕು ವರ್ಷಗಳು ಉರುಳಿದವು. ಹುತಾತ್ಮರಾದ ಯೋಧರ ಮನೆಕಡೆಗೆ ಕುಂಡಿ ತಿರುಗಿಸಿ ನಿಂತಿರುವ ನಮ್ಮ ರಾಜಕಾರಣಿಗಳಿಗೆ ಏನು ಹೇಳಬೇಕು. ಪಾಕಿಸ್ಥಾನದ ಜೊತೆಗೆ ಒಂದು ಒಳ್ಳೆ ಸಂಬಂದ ಬೆಳೆಸಿಕೊಳ್ಳಲು ಐವತ್ತು ವರುಷದಿಂದ ಒದ್ದಾಡುತ್ತಿದ್ದಾರೆ. ಯುದ್ಧ ಬಂದಾಗ ದೇಶಕ್ಕಾಗಿ ಪ್ರಾಣ ತೆತ್ತ ಯೋಧರನ್ನು ಮರೆತಿದ್ದಾರೆ. ದೇಶದ ಉನ್ನತಿಗೆ ಯೋಚಿಸದ, ದೇಶಕ್ಕಾಗಿ ದುಡಿದವರನ್ನು ಗುರುತಿಸದ, ದೇಶಕ್ಕಾಗಿ ಚಿಂತಿಸದ ರಾಜಕಾರಣಿಗಳು ಇದ್ದರೆಷ್ಟು ಹೋದರೆಷ್ಟು. ಎಲ್ಲಾ ರಾಜಕಾರಣಿಯು ಮಂತ್ರಿಯಾಗಬೇಕು, ಎಲ್ಲರಿಗೂ ಪದವಿ ಬೇಕು, ಯಾರಿಗೂ ಕೆಲಸ ಮಾಡಲು ಆಸಕ್ತಿ ಇಲ್ಲ. ಅವರವರ ಕ್ಷೇತ್ರದಲ್ಲಿ ಅವರು ದುಡಿದರೆ, ಅವರವರ ಪದವಿ ತಿಳಿದು ನಡೆದರೆ, ಅವರವರ ಜನರನ್ನು ಅವರು ನೋಡಿದರೆ ಎಲ್ಲವೂ ತಂತಾನೆ ಬೆಳೆಯುತ್ತದೆ. ದೇಶದ ಪ್ರಗತಿ ಅದಾಗಿಯೆ ಆಗುತ್ತದೆ. ಅವರನ್ನು ಆರಿಸಿದ ಜನರನ್ನು ಯಾವತ್ತು ಅವರು ಮರೆಯುತ್ತಾರೋ ಅಂದೇ ಅವರು ಸತ್ತಂತೆ.

ದೇಶದ ಉನ್ನತಿಗಾಗಿ ಯಾರೂ ಕೂಡ ಯೋಚಿಸುತ್ತಿಲ್ಲ. ಯೋಚಿಸುವರ ಕೈಯಲ್ಲಿ ಅಧಿಕಾರ ಇಲ್ಲ . ಅಧಿಕಾರ ಇರುವವರು ದೇಶದಲ್ಲಿಲ್ಲ. ಹೊರ ದೇಶದ ಪ್ರವಾಸ, ಹೆಂಡತಿ ಮಕ್ಕಳ ಜೊತೆ ಉಚಿತ ಸುಖವಾಸ. ರಾಜಕಾರಣಕ್ಕೆ ಬಂದ ದಿನದಿಂದ ಹಣ, ಅಧಿಕಾರಗಳಿಸುವ ಒಂದೇ ಉದ್ದೇಶ ಅವರದಾಗಿರುತ್ತದೆ ಹೊರತು, ದೇಶದ ಬಗ್ಗೆ ಯಾಗಲೀ, ಜನರ ಬಗ್ಗೆಯಾಗಲೀ ಯೋಚಿಸುವುದೇ ಇಲ್ಲ. ಯೋಚಿಸಬೇಕೆಂದು ಅವರಿಗೆ ಅನ್ನಿಸುವುದೂ ಇಲ್ಲ. ರಾಜಕಾರಣಿಗಳನ್ನು ಬಿಟ್ಟರೆ ದೇಶವನ್ನು ರೂಪಿಸುವಲ್ಲಿ ನೆರವಾಗುವುದು ಮಾಧ್ಯಮಗಳು. ಕೆಲವು ಪತ್ರಿಕೆಗಳು ರಾಜಕಾರಣಿಗಳ ಜುಬ್ಬದ ಕುಂಚಗಳಾಗಿರುತ್ತವೆ. ಅವರ ಕುಂಡಿ ತಿರುಗಿದ ಕಡೆ ಇವರ ಲೇಖನಿ ತಿರುಗುತ್ತದೆ. ಮತ್ತೆ ಕೆಲವು ಪತ್ರಿಕೆಗಳು ನಿಜವಾಗಿಯೂ ಹೆಮ್ಮೆ ಪಡುವಂತ ಕೆಲಸಗಳನ್ನು ಮಾಡುತ್ತಿವೆ. ಜನರನ್ನು ಸರಿದಾರಿಗೆ ಕರೆದೊಯ್ಯುವ ಕೆಲಸದಲ್ಲಿ ಪ್ರಗತಿ ಸಾಧಿಸಿವೆ. ತಪ್ಪು ಮಾಡುವ ರಾಜಕಾರಣಿಗಳನ್ನು ಕರೆದು ಕೂರಿಸಿ ಕೆನ್ನೆಗೆ ಹೊಡೆದಂತೆ ಲೇಖನಿ ಬಳಸಿವೆ. ಲಂಕೇಶರಿಂದ ಶುರುವಾದ ಈ ಚಾಳಿ, ಈಗಲೂ ಜಾರಿಯಲ್ಲಿರುವುದು ಒಳ್ಳೆಯ ಸೂಚನೆ. ವಿಪರ್ಯಾಸವೆಂದರೆ ಅನೇಕ ಪೊಳ್ಳು ಬರಹಗಾರರು ಪತ್ರಿಕೆಗಳ ಹೆಸರಲ್ಲಿ ಹಣ ಸುಲಿಯುತ್ತಿರುವುದು.

ರಾಜಕೀಯ ಇರುವುದು ದೇಶದ ಉನ್ನತಿಗೆ ಎನ್ನುವುದನ್ನು ನೆನಪಿಸುವುದು ಎಂತಹ ವಿಪರ್ಯಾಸ. ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಬಳಸಿ ಎಂದು ಬೇಡಿಕೊಳ್ಳುವಂತಾಗಿದೆ. ನಮ್ಮ ಕೆಲಸವನ್ನು ನಾವ್ಯಾಕೆ ಮರೆಯುತ್ತಿದ್ದೇವೆ. ಹಬ್ಬಕ್ಕೆ ಬಟ್ಟೆ ತೆಗೆಯುವುದನ್ನು ಮರೆಯುವುದಿಲ್ಲ. ಪ್ರೀತಿಸಿದ ಹುಡುಗಿಯ ಹುಟ್ಟಿದ ಹಬ್ಬ ಮರೆಯುವುದಿಲ್ಲ, ತಂದೆ - ತಾಯಿ ಸಾಯುವ ಮೊದಲು ಅವರ ಆಸ್ತಿಯನ್ನು ಬರೆಸಿಕೊಳ್ಳುವುದನ್ನು ಮರೆಯುವುದಿಲ್ಲ, ಕೊಟ್ಟ ಹಣವನ್ನು ವಾಪಸ್‌ ಪಡೆಯಲು ಮರೆಯುವುದಿಲ್ಲ, ಹುಡುಗನ ಜೊತೆಗೆ ಸುತ್ತಾಡಿದ ಹುಡುಗಿ ಮನೆಯಲ್ಲಿ ಹೇಳುವ ಸುಳ್ಳನ್ನು ಮೊದಲೇ ಯೋಚಿಸುವುದನ್ನು ಮರೆಯುವುದಿಲ್ಲ, ಆದರೂ ನಮ್ಮ ಭಾಷೆಯನ್ನು, ನಾಡನ್ನು, ನುಡಿಯನ್ನು ಉಳಿಸಿಕೊಳ್ಳಬೇಕು ಅನ್ನುವುದನ್ನು ಏಕೆ ಮರೆಯುತ್ತೇವೆ? ನಾವೇ ಆರಿಸಿದ ರಾಜಕಾರಣಿಗಳು ನಮ್ಮ ಕೆಲಸ ಮಾಡದಿದ್ದಾಗ ಕರೆದು ಬುದ್ಧಿ ಹೇಳಲು ಯಾಕೆ ಮರೆಯುತ್ತೇವೆ. ಮಾತು ಕೇಳದ ನಾಯಕನನ್ನು ಕೆಡವಿ ಹಾಕಲು ಏಕೆ ಹಿಂಜರಿಯುತ್ತೇವೆ.

ಚುನಾವಣೆ ನಡೆದು ನೂರಾರು ದಿನವಾಯಿತು. ಅಧಿಕಾರಕ್ಕೆ ಬಂದು ನೂರು ದಿನವಾಯಿತು, ಪ್ರಗತಿ ಅನ್ನುವ ಯಾವುದಾದರೂ ಕೆಲಸವಾಗಿದೆಯೆ? ರಾಜ್ಯದಲ್ಲಿ ರಾಜಕೀಯ ಎನ್ನುವುದು ಚಿಂದಿ ಚಿತ್ರಾನ್ನ. ತನ್ನಿಷ್ಟದಂತೆ ನಡೆಯುವಂತಿಲ್ಲ, ಮನ ಬಂದಂತೆ ಕೂರುವಂತಿಲ್ಲ, ಎಲ್ಲದಕ್ಕೂ ದೆಹಲಿಗೆ ಹೋಗಬೇಕು. ಅದೂ ಸಾರ್ವಜನಿಕರ ದುಡ್ಡಲ್ಲಿ. ಇವರ ಮನವಿಗೆ ಅಪ್ಪಣೆ ಕೊಡುವ ದೇವಿ ದರ್ಶನವಾಗದಿದ್ದರೆ, ಭಕ್ತರಿಗೆ ಅದು ಧರ್ಮಸ್ಥಳ, ಅಲ್ಲೆ ಬಿಡಾರ!

ರಾಜ್ಯದಲ್ಲಿ ಇರುವ ತೊಂದರೆಗಳಿಗೆ ನೂರುದಿನದಲ್ಲಿ ಒಂದು ಸಣ್ಣ ಪರಿಹಾರ ಕೂಡ ಸಿಕ್ಕಿಲ್ಲ. ಎಲ್ಲ ತೊಂದರೆಗಳಿಗೂ ಅಶ್ವಾಸನೆಗೆ ಮಾತ್ರ ಕೊರತೆ ಇಲ್ಲ. ಕನ್ನಡಾಂಬೆ ಕೊರಗಿ ಸಾಯುತ್ತಿದ್ದಾಳೆ, ಭಾರತಾಂಬೆ ಬೆಳಲಿ ಬೆಂಡಾಗಿದ್ದಾಳೆ. ‘ಎರಡು ಕನಸು’ ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್‌ ಹಾಡಿರುವ ಹಾಗೆ ‘ತಂತಿ ಹರಿದ ವೀಣೆಯಿಂದ ನಾದ ಹರಿಯ ಬಲ್ಲದೆ’.

ರಾಜಕಾರಣಿಗಳ ಬಗ್ಗೆ ಒಂದು ಸಣ್ಣ ಆಸೆ- ಅವರ ಕೆಲಸವನ್ನು ಅವರು ಮಾಡುತ್ತಾರೆ, ನಮ್ಮ ದೇಶದ ಲಗಾಮು ಅವರ ಕೈಯಲ್ಲಿ ಕೊಟ್ಟಿದ್ದೇವೆ. ನಮ್ಮನ್ನು ಉನ್ನತಿಗೆ ಕರೆದುಕೊಂಡು ಹೋಗುತ್ತಾರೆ ಎಂದು. ಇದು ತಪ್ಪಾ ? ತಪ್ಪನು ಸರಿಪಡಿಸಿಕೊಳ್ಳದೆ ರಾಜಕಾರಣಿಗಳೆಲ್ಲ ಕಂಸರಾಗಿಯೇ ಉಳಿದರೆ, ಪ್ರತಿಯಾಬ್ಬ ಜನಸಾಮಾನ್ಯನೂ ಕೃಷ್ಣನಾಗುವ ದಿನವೂ ಬರುತ್ತದೆ, ಅಲ್ಲವೇ ?

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X