• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮಾಜ ವಿಕಾಸ ಮತ್ತು

By Staff
|

‘ಸಮಾಜದ ವಿಕಾಸ ಬರೇ ಮಹಾನ್‌ ವ್ಯಕ್ತಿಗಳಿಂದ ಸಾಧ್ಯವಾಗುವುದಿಲ್ಲ; ನಾವು ನೀವುಗಳು ಬದಲಾದಾಗಷ್ಟೆ ಸಮಾಜದ ವಿಕಾಸ ಸಾಧ್ಯ’.

‘.. ಇನ್ನೂ ಐನೂರು ವರ್ಷ ಆದ್ರೂ ನನ್ನ ಸಂದೇಶ ಬದಲಾಗೊಲ್ಲ..’ ಅನ್ನೋ ಅರ್ಥದಲ್ಲಿ ಕುವೆಂಪು ತಮ್ಮ ವಿಶ್ವ ಮಾನವ ಸಂದೇಶದ ಬಗ್ಗೆ ಜನರಿಗೆ ಹೇಳಿದ್ದರು. ತಮ್ಮನ್ನು ಜನ ಪದೇ ಪದೇ ಪೀಡಿಸುತ್ತಿದ್ದ ರೀತಿಯಿಂದ ರೇಜಿಗೆಯಾಗಿ ಪುಟ್ಟಪ್ಪನವರು ಆ ರೀತಿ ಹೇಳಿರಬೇಕು. ಇಂದಿನ ಸಮಾಜದ ಮನಸ್ಥಿತಿ ನೋಡಿದರೆ, ರಸ ಋಷಿಯ ಹೇಳಿಕೆಗಳು ಈಗಲೂ ಎಷ್ಟು ಸಮಂಜಸವಾಗಿ ಕಾಣುತ್ತಿದೆಯಲ್ಲ ಎನ್ನಿಸುತ್ತದೆ. ಜೊತೆಗೇ, ರಸಋಷಿಯ ಒಂದು ಸರಳ ಸೂತ್ರದಿಂದಲೂ ನಾವಿನ್ನೂ ನೂರು ವರ್ಷ ಹಿಂದುಳಿದಿರುವುದರ ಬಗ್ಗೆ ಖೇದವೆನಿಸುತ್ತದೆ.

‘ನೀನು ಬ್ರಾಹ್ಮಣ್ಯ ಬಿಟ್ರೂ, ಬ್ರಾಹ್ಮಣ್ಯ ನಿನ್ನನ್ನು ಬಿಡಲಿಲ್ಲ..’ ಎನ್ನುವ ಸಂಸ್ಕಾರದಲ್ಲಿ ನಾರಣಪ್ಪನ ಬಗ್ಗೆ ಹೇಳೊ ಮಾತುಗಳಿಂದ, ಲೇಖಕ ಯು.ಆರ್‌.ಅನಂತಮೂರ್ತಿ ಧ್ವನಿಸಿದ ವಸ್ತುಸ್ಥಿತಿ ಈ ಕಾಲಕ್ಕೆ ಅಪ್ರಸ್ತುತ ಆಗಿದ್ರೆ ಎಷ್ಟು ಚೆನ್ನಾಗಿರ್ತಿತ್ತೆಂದು ಮನಸ್ಸು ಆಶಿಸುತ್ತದೆ. ಆದರೆ, ಒಮ್ಮೊಮ್ಮೆ ನಮ್ಮ ಸಮಾಜದ ನಡತೆಗಳಿಂದ ಆ ಮಾತಿನ ಸತ್ಯ ಗೋಚರವಾಗಿ ದಿಗ್ಭ್ರಮೆಯಾಗುತ್ತದೆ !

ಪ್ರತಿ ಸಮಾಜದ ಅತ್ಯುತ್ತಮ ಪ್ರಜೆಗಳ ಚಿಂತನೆಗಳು ಮತ್ತು ಬಾಳ್ವೆಯ ರೀತಿಗಳು ಉಳಿದವರಿಗಿಂತ ಮೇಲ್ಮಟ್ಟದಲ್ಲಿದ್ದು, ಉಳಿದವರಿಗೆ ದಾರಿದೀಪವಾಗುತ್ತದೆ. ಸಾಮಾಜಿಕ ವಿಕಾಸದ ಮುಂಚೂಣಿಯಲ್ಲಿರುವ ಈ ವ್ಯಕ್ತಿಗಳ ನಡೆ ನುಡಿಗಳ ಪಾಲಿಸಲು ಸಮಕಾಲೀನ ಸಮಾಜಕ್ಕೆ ಕಷ್ಟ ಸಾಧ್ಯವಾದರೂ, ಮುಂದಿನ ಜನಾಂಗಕ್ಕೆ ಅದು ಪಾಲಿಸಲು ಸುಲಭವಾಗುತ್ತಾ ಹೋಗಬೇಕು. ಹಾಗಾದಾಗಲೇ ಸಮಾಜ ಹಾಗೂ ಸಂಸ್ಕೃತಿಯಾಂದರ ನಿಜವಾದ ವಿಕಾಸ ಸಾಧ್ಯ.

ಒಬ್ಬ ರಾಮನೂ ಇಲ್ಲದ ನಾಡಿನಲ್ಲಿ ರಾಮರಾಜ್ಯದ ಕನಸೂ ಇರುವುದಿಲ್ಲ. ರಾಮ ಜನಿಸಿ ಹೋದ ನಾಡಿನ ಜನತೆ ಅವನ ನಡವಳಿಕೆಗಳ ಪಾಲನೆ ಮಾಡಿದಾಗಷ್ಟೇ ರಾಮರಾಜ್ಯ ಸ್ಥಾಪನೆಯಾದೀತು. ರಾಮ ಬುದ್ಧ ಬಸವರ ಸಾಲಿಗೆ ಇತ್ತೀಚೆಗೆ ಸೇರ್ಪಡೆಯಾದ ಗಾಂಧೀಜಿ ಸಹಾ ಮಾನವ ಮಾತ್ರರು ಏರಬಹುದಾದ ಎತ್ತರವನ್ನು ನಮಗೆ ತೋರಿಸಿ ಗತಿಸಿ ಹೋಗಿದ್ದಾರೆ. ನಾವು ಮಾತ್ರ ನಮಗೆ ರುಚಿಸದೆ ಹೋದದ್ದನ್ನೆಲ್ಲ ಬಿಡುತ್ತಾ, ಅನುಕೂಲ ಶಾಸ್ತ್ರವನ್ನಷ್ಟೆ ಪಾಲಿಸುತ್ತ ಬರುತ್ತಿದ್ದೇವೆ. ಗಾಂಧಿಯವರ ಮಾರ್ಗ ನಮಗೆ ಬೇಕಿಲ್ಲವೆನ್ನುವುದನ್ನು ಸಿದ್ಧ ಮಾಡಿ ತೋರಿಸಲು ನಾವು ಮಾಡುವ ವ್ಯರ್ಥ ಪ್ರಯತ್ನದ ಬದಲು, ಅವರ ಮಾರ್ಗವನ್ನು ಅನುಸರಿಸಲು ಪ್ರಯತ್ನ ಪಟ್ಟು ನೋಡಿದ್ದರೆ ನಮ್ಮ ಎಷ್ಟೊ ಸಮಸ್ಯೆಗಳು ಸುಲಭವಾಗಿ ಬಗೆಹರಿದಾವು.

ಇರಲಿ, ಬಸವಣ್ಣ, ಗಾಂಧೀಜಿ ಎಲ್ಲ ತುಂಬ ದೊಡ್ಡ ಮಾತಾಯಿತು. ಅವರನ್ನು ಮನ್ನಿಸಿ ಅನುಸರಿಸಿದ ಕುವೆಂಪು ಅವರಂತಹ ಸಾಹಿತಿಗಳನ್ನೂ ನಾವು ದೇವರಂತೆ ಚೌಕಟ್ಟಿನಲ್ಲಿಟ್ಟು ಪೂಜಿಸುವುದಷ್ಟಕ್ಕೇ ಸೀಮಿತಗೊಳಿಸಿದಂತಿದೆ. ನಮ್ಮ ಹಾಗೆಯೆ ಉಪ್ಪು ಖಾರ ತಿಂದು ಬದುಕಿದ ಶ್ರೇಷ್ಠ ಜೀವವೊಂದನ್ನು ಬರೇ ಪೂಜಿಸಿ ಅವರ ಜೀವನ ರೀತಿಯನ್ನು ಪಾಲಿಸದೇ ಹೋದರೆ ಅದು ಅವರಿಗೆ ನಿಜವಾಗಿ ಅಪಚಾರ ಎಸಗಿದಂತೆ. ಅಷ್ಟಕ್ಕೂ ಈ ಮಹಾತ್ಮರುಗಳು ಭೋದಿಸಿದ್ದೆಲ್ಲ ಜನ ಸಾಮಾನ್ಯರ ಜೀವನದ ಸಮಸ್ಯೆಗಳ ಉತ್ತರವನ್ನೆ. ಪರ ಸ್ತ್ರೀ ವ್ಯಾಮೋಹದಿಂದ ಉಂಟಾಗಬಹುದಾದ ಸಂಕಟಗಳ ನಿವಾರಣೆಗೆ ಉತ್ತರವೆಂಬಂತೆ ಸ್ವತಹ ಏಕ ಪತ್ನೀ ವ್ರತಸ್ತನಾದ ರಾಮನ ರೀತಿನೀತಿಗಳು ಯುಗಗಳ ನಂತರವೂ ಮನುಷ್ಯರು ಇನ್ನೂ ಹೆಣಗುತ್ತಿರುವ ಆದರೆ ಸಾಧಿಸುತ್ತಿರುವ ಮಾನದಂಡ; ಒಂದು ಸಮಾಜಕ್ಕೆ ಅಗತ್ಯವಾದ ನಡತೆಗಳಲ್ಲೊಂದು. ಬಸವಣ್ಣನವರ ಕಾಲಕ್ಕೆ ಅಗತ್ಯವಾಗಿದ್ದ ಸಾಮನ್ಯರ ಬದುಕಿನ ಕ್ರಾಂತಿ, ಜಾತಿಯ ತ್ಯಾಗ ಸಾವಿರಾರು ವರ್ಷಗಳ ನಂತರವೂ ನಮಗೇಕೆ ಪಾಲಿಸಲು ಕಷ್ಟವೋ ಅರ್ಥವಾಗುವುದಿಲ್ಲ. ಬಸವಣ್ಣನವರನ್ನು ಮತ್ತೆ ಕಂಡುಕೊಂಡು ಸಮಾಜಕ್ಕೆ ತೋರಿಸುವ ಕುವೆಂಪು ಅವರ ಪ್ರಯತ್ನವೂ ಈಗ ಕೆಲವರಿಗೆ ದೈವ ಸಮಾನ - ಅಂದರೆ ಮನುಷ್ಯರು ಪಾಲಿಸಬೇಕಿಲ್ಲದ ನಡತೆ - ಆಗಿರೋದು ನಿಜಕ್ಕೂ ಶೋಚನೀಯ.

ಒಂದು ಸಮಾಜದ ಉನ್ನತಿ ಅದರಲ್ಲಿ ಬಂದು ಹೋದ ಮಹಾನ್‌ ವ್ಯಕ್ತಿಗಳಿಗಿಂತಲೂ ಹೆಚ್ಚಾಗಿ ಅವರನ್ನು ನಿಜಾರ್ಥದಲ್ಲಿ ಹಿಂಬಾಲಿಸಿ ಅವರ ಬೋಧನೆಗಳನ್ನು ಪಾಲಿಸುವ ಜನರನ್ನು ಅವಲಂಬಿಸಿದೆ. ಕೇವಲ ಅವರನ್ನು ಗೌರವಿಸಿ, ಪೂಜಿಸುವ ಸಮಾಜದ ದಾಸ್ಯ ವಿಮೋಚನೆ ಸುಲಭವಲ್ಲ. ರಾಮ, ಕೃಷ್ಣ, ಬುದ್ಧ, ಬಸವರನ್ನು ಪೂಜಿಸಿ ಬೇಡುವ ಪರಿಯಲ್ಲಿಯೇ ನಾವು ಸಣ್ಣವರಾಗುತ್ತಾ ಹೋಗುವ ದುರಂತವಿದೆ. ಈ ಅರ್ಥದಲ್ಲಿಯೇ ಕುವೆಂಪು, ‘ನೂರು ಮತಗಳನ್ನೆಲ್ಲಾ ನೂಕಾಚೆ ದೂರ..’ ಎಂದದ್ದು. ಕಾರಂತ, ಶಂ. ಬಾ. ಜೋಷಿ, ಎ. ಎನ್‌. ಮೂರ್ತಿರಾಯರಂತಹ ಉಳಿದವರು ಸಹ ಈ ಅಭಿಪ್ರಾಯವನ್ನು ಅದೇ ಸಮಯಕ್ಕೆ ಧ್ವನಿಸಿದ್ದರೂ, ಕುವೆಂಪು ಅವರ ಮಾತುಗಳಿಗೊಂದು ವೈಶಿಷ್ಟ್ಯತೆ ಬರುವುದು ಸ್ವತಹ ಕುವೆಂಪು ಅವರ ಆಧ್ಯಾತ್ಮಿಕ ಮತ್ತು ಆಸ್ತಿಕ ವ್ಯಕ್ತಿತ್ವದಿಂದ. ಪ್ರಕೃತಿಯ ಕೂಸಾದ ಕುವೆಂಪು ಅವರ ಮಟ್ಟಿಗೆ, ಸೃಷ್ಟಿಯ ಅದ್ಭುತ ಶಕ್ತಿಗೆ ಇನ್ನೊಂದು ಹೆಸರು ದೈವವಾಗಿತ್ತು. ಆದರೆ, ಸಾಮಾನ್ಯರ ದೈವದ ನಿಕೃಷ್ಟ ಕಲ್ಪನೆಗಳಿಂದ ಅವರಿಗೇ ಉಂಟಾಗುವ ಹಾನಿ ಕಂಡ ಕವಿಗೆ ‘.. ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬನ್ನಿ..’ ಎಂದು ಕರೆ ಕೊಡುವ ಅಗತ್ಯ ಕಂಡು ಬಂದಿತ್ತು.

ನಮ್ಮ ಕಣ್ಣ ಮುಂದೆಯೇ ಬದುಕಿ ಬಾಳಿ ನಮ್ಮನ್ನು ಹರಸಿ ಹೋದ ಇವರ ಸರಳ ಬದುಕನ್ನು ಪಾಲಿಸಲೂ ಎಳಸದ ನಾವು ಕುವೆಂಪು ನಾಡಿನವರೆಂದು ಹೇಳಿಕೊಂಡರೆ ಅಪಚಾರವಾದೀತು. ಬಸವಣ್ಣ ಅಥವಾ ಕುವೆಂಪು ಅವರ ಅನುಯಾಯಿಗಳೆಂದರೆ ನಾವು ಜಾತಿಯ ಮಾತನಾಡುವುದನ್ನೇ ನಿಲ್ಲಿಸಬೇಕು. ಯಾವ ಕಾರಣಕ್ಕೂ, ಚುನಾವಣೆಗಳಲ್ಲಿ ಮತ ಹಾಕುವುದಕ್ಕಾಗಲೀ, ನಮ್ಮವರೆಂದು ಮನೆಗೆ ಕರೆಯುವುದಕ್ಕಾಗಲೀ ನಾವು ಜಾತಿಯ ಮಾನದಂಡವನ್ನು ಬಳಸಬಾರದು. ಕುವೆಂಪು ಕಾರಂತರ ಕಾಲಕ್ಕಿನ್ನೂ ಕ್ರಾಂತಿಯಂತೆ ಕಂಡು ಬರುತ್ತಿದ್ದ ಈ ವಿಷಯ, ನಮ್ಮ ಕಾಲಕ್ಕೆ ಸರ್ವೇ ಸಾಧಾರಣವಾಗಿ ಕಾಣಬೇಕು. ಇಂದಿನ ಜನಾಂಗಕ್ಕೆ ಸರ್ವೆ ಸಾಧಾರಣವಾಗಿಬಿಡುವ ಈ ವಿಷಯ ಕೆಲ ಸಂಪ್ರದಾಯ ಶರಣರಿಗೆ ನುಂಗಲಾರದ ತುತ್ತಾಗಿರಬಹುದು. ದುರಾದೃಷ್ಟವಶಾತ್‌, ನಮ್ಮ ರಾಜಕೀಯ ಮತ್ತು ಸಾಮಾಜಿಕ ಮುಖಂಡರುಗಳ ಟೊಳ್ಳುತನ ಮತ್ತು ಇಬ್ಬಂದಿತನದಿಂದಾಗಿ ಜಾತಿ, ನಮ್ಮಲ್ಲಿನ್ನೂ ಒಂದು ಶಕ್ತಿಯಾಗಿಯೇ ಉಳಿದಿದೆ. ಜಾತಿ, ಮತ, ಧರ್ಮಗಳು ಒಂದು ಶಕ್ತಿಯಾಗಿ ಉಳಿಯುವ ಯಾವುದೇ ಸಮಾಜವೂ ಸುಲಭವಾಗಿ ವಿಕಾಸವಾಗುವುದಿಲ್ಲ.

ಇಷ್ಟೆಲ್ಲ ಏಕೆ ಬರೆದೆನೆಂದರೆ, ಮೊನ್ನೆ ನನಗೆ ಯಾರೋ USBrahmins ಎಂಬ ಯಾಹೂ ಗ್ರೂಪಿನಿಂದ ಈ ಮೈಲ್‌ ಕಳಿಸಿದರು. ನಾನು ತಕ್ಷಣ unsubscribe ಮಾಡಿದೆ. ಅಲ್ಲದೆ ಆಮೇಲೆ ತಿಳಿದಂತೆ ನನ್ನ ಹೆಚ್ಚಿನ ಮಿತ್ರರುಗಳಿಗೆ ಆ ಮೈಲ್‌ ಬಂದಿದ್ದು, ನಡವಳಿಕೆಯಿಂದ ಎಲ್ಲರೂ ಬ್ರಾಹ್ಮಣರಾಗಬೇಕೆಂಬ ಸದುದ್ದೇಶದಿಂದ, ಭಾರತೀಯ ವೈದಿಕ ಸಂಸ್ಕೃತಿಯ ಪುನರುತ್ಥಾನಕಾಗಿ ಶ್ರಮಿಸುವ ಪ್ರಯತ್ನವೆಂದು ಉತ್ತರ ಬಂದರೂ, ನನಗೆ ಅದರ ಅಗತ್ಯವೆ ಕಾಣಲಿಲ್ಲ. ನಾವು ನಮ್ಮತನವನ್ನು ಉಳಿಸಿಕೊಳ್ಳುವ ಅತೀ ಖಾಸಗಿ ಪ್ರಯತ್ನವಾಗಿ ನಮ್ಮ ಮಕ್ಕಳ ಲಾಲನೆ ಪಾಲನೆಗೈದು ಅವರಿಗೆ ಸಾಕಷ್ಟು ಶಿಸ್ತಿನ ಗೋಳು ಕೊಡುವುದಕ್ಕೆ ಸೀಮಿತಗೊಳಿಸಿದರೆ ಚೆನ್ನು ಎನಿಸುತ್ತದೆ.

ಕಾಲಕ್ಕೆ ಮೀರಿ ಅರ್ಥಪೂರ್ಣವಾಗಿ ಉಳಿಯುವ ಶಕ್ತಿ ಯಾವುದೇ ಸಂಪ್ರದಾಯಕ್ಕೂ ಇರಲಾರದು. ಇಲ್ಲದಿದ್ದರೆ ಪ್ರಚಂಡ ಶಕ್ತಿ ಗಳಿಸಿಕೊಂಡು ತಮ್ಮ ದಾರಿಯಲ್ಲಿ ಇದ್ದುದನ್ನೆಲ್ಲ ಕಬಳಿಸಿ ಜೀವಿಸಿದ ಡೈನಸಾರ್‌ಗಳ ಗತಿ ಹೀಗಾಗಬೇಕಿತ್ತೆ? ನಮಗಿಂದು ಏನೂ ತಿಳಿಯದಂತಹ ಪರಿಸ್ಥಿತಿಯಾಂದರಲ್ಲಿ ನಮ್ಮ ಮೊಮ್ಮಕ್ಕಳು ಮರಿಮಕ್ಕಳು ಜೀವಿಸಲಿದ್ದಾರೆ. ಆಗ ಅವರಿಗೆ ನಾವು ಅನ್ನ ಬೇಯಿಸಿ ಮದ್ದು ಮಾಡಿ ಕೊಂಡು ಆರೋಗ್ಯದಿಂದ ಜೀವಿಸುವ ಸಂದೇಶ ಕೊಡಬಹುದೇ ಹೊರತು ಸರ್ವಕಾಲಕೂ ಅನ್ವಯವಾಗುವಂತಹ ಜೀವನ ವಿಧಾನವನ್ನು ಬೋಧಿಸುವುದು ಸುಲಭವಲ್ಲ. ಬದಲಾದ ಕಾಲದ ಅಗತ್ಯಗಳಿಗೆ ಸರಿಯಾಗಿ ಜೀವಿಸುವ ಸ್ವಾತಂತ್ರ್ಯವನ್ನು ಅವರಿಗಿತ್ತಾಗಲೇ ಸಮಾಜದ ನಿಜವಾದ ವಿಕಾಸ ಸಾಧ್ಯ.

‘ಐದು ಸಾವಿರ ವರ್ಷಗಳ ಹೊರೆ ಹೊತ್ತು ನಾವು ಭಾರತದಲ್ಲಿ ಬದುಕಬೇಕು... ’ ಎಂದು ದಟ್ಸ್‌ಕನ್ನಡ ಸಂಪಾದಕರಾದ ಶಾಮಸುಂದರ್‌ ಅಮೆರಿಕದಲ್ಲ್ಲಿದ್ದಾಗ ಹೇಳಿದ ಮಾತುಗಳು ಜ್ಞಾಪಕಕ್ಕೆ ಬಂದೊಡನೆ, ಎಲ್ಲೊ ಕಂಪ್ಯೂಟರಿನ ಮೂಲೆಯಲ್ಲಿ ಕೊಳೆಯುತ್ತಿದ್ದ ಲೇಖನವನ್ನು ಒಂದು ಘಟ್ಟಕ್ಕೆ ತಲುಪಿಸಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ನಾನೂ ಸಹ ಭಾರತೀಯತೆಯ ಭಾರದಿಂದ ಅಮೇರಿಕದಲ್ಲಿಯೂ ಬಸವಳಿಯುವವರಲ್ಲೊಬ್ಬ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more