• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗೆ ಬರಹ : ಅಮೇರಿಕ ಅಳಿಯ

By Staff
|

ಸುಮಾರು 20 - 30 ವರ್ಷಗಳ ಹಿಂದೆ ಇಂಗ್ಲೆಂಡ್‌ಗೆ ಹೋಗುವದು ಒಂದು ಹೆಮ್ಮೆಯ ವಿಷಯವಾಗಿತ್ತು. ಆದರೆ ಈಗ ಅಮೇರಿಕಾ ಆ ಸ್ಥಾನವನ್ನು ಇಂಗ್ಲೆಂಡ್‌ನಿಂದ ಕಸಿದುಕೊಂಡಿದೆ. ಇಂಗ್ಲೆಂಡ್‌ನಲ್ಲಿ ನಿರುದ್ಯೋಗ ಹೆಚ್ಚಿರುವದೂ ಇದಕ್ಕೆ

ಕಾರಣವಿರಬಹುದೋ ಏನೋ! ಅಮೆರಿಕ ಈಗ ವಿಶ್ವದಲ್ಲೇ ಅತಿ ಬಲಶಾಲಿ, ಆಧುನಿಕ ಮತ್ತು ಸಂಪದ್ಭರಿತ ದೇಶವಾದ್ದರಿಂದ ಇಲ್ಲಿಗೆ ಲಗ್ಗೆ ಹಾಕುವ ಜನರ (ಅಥವ ಕುರಿಗಳ, ಉರ್ಫ್ಹ್‌ ನಮ್ಮಂಥವರ !!) ಸಂಖ್ಯೆಯೂ ಜಾಸ್ತಿ ಅಲ್ಲವೆ. ನೀವೆಲ್ಲ ನಿಮ್ಮ ಗಡಿಯಾರಗಳನ್ನು 6 ವರ್ಷ ಹಿಂದೆ ಹಾಕಬೇಕೆಂದು ವಿನಂತಿ. ಏಕೆಂದರೆ, ಇದು ಅಮೇರಿಕೆಯ ಕಂಪನಿಗಳು dot coms and not dot gones !!! ಆಗಿದ್ದ ಕಾಲ (ಅಂದರೆ, ಗುಪ್ತ ಪೀರಿಯಡ್‌, ಉರ್ಫ್ಹ್‌ ಸಾಫ್ಟ್‌ವೇರ್‌ ಸುವರ್ಣಯುಗದ ಕಥೆ. ಪ್ರಕೃತಿ ನಿಯಮದಂತೆ ಗಂಡು ಹೋದಲ್ಲಿ ಹೆಣ್ಣೂ ಹಿಂಬಾಲಿಸಬೇಕಲ್ಲವೆ (or voice versa)? ಈ ಹಿಂಬಾಲಕತ್ವವೇ ಇಂದಿನ ಚರ್ಚೆಯ ವಿಷಯವಾಗಿದೆ.

‘ಗೆದ್ದ ಎತ್ತಿನ ಬಾಲ ಕಟ್ಟುವ’ ಬಗ್ಗೆ ನೀವೆಲ್ಲಾ ಕೇಳಿರಬಹುದು. ಅಮೇರಿಕೆಯಲ್ಲಿ ನೆಲೆಸಿರುವ ವಿವಾಹಯೋಗ್ಯ ಎತ್ತು ಅಥವ ಹಸು (ಅಥವ ‘ಗೋಮುಖ’...!?) ಅಲಿಯಾಸ್‌ ವಧು ವರರನ್ನು ಗೆದ್ದ ಎತ್ತು/ಹಸುವಿನಂತೆ ಭಾವಿಸುವದರಲ್ಲಿ ತಪ್ಪೇನಿದೆ ಸ್ವಾಮಿ?? ಆಫ್ಟರ್‌ ಆಲ್‌, ಇವರೆಲ್ಲಾ ಎನ್‌.ಆರ್‌.ಐ. ಹಣೆಪಟ್ಟಿ ಹೊತ್ತು ‘ಆರ್‌.ಬಿ.ಐ’ ನಿಂದ ವಿಶೇಷ ಸವಲತ್ತು ಪಡೆದವರಲ್ಲವೇ (ಅಲ್ಲಿ ಸಲ್ಲುವರು ಇಲ್ಲಿಯೂ ಗೆಲ್ಲುವರು!) .

‘ಅಳಿಯ ಮನೆ ತೊಳೆಯ’ ಎಂಬ ಗಾದೆ ಮಾತನ್ನು ಕೇಳಿದ್ದರೂ ಎಲ್ಲರೂ ತಮ್ಮ ಮಗಳಿಗೆ ಸಂಬಂಧ ನೋಡುವಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ‘ಅಳಿಯ ಮನೆ ಬೆಳಗ’ ಎಂದು ಬದಲಾಯಿಸಿಕೊಳ್ಳುವದು ಬಹಳ ಸಾಮಾನ್ಯ. ಕೆಲವು ಉದಾಹರಣೆಗಳನ್ನು ನೋಡೋಣವೇ...

ಯುವಕನೋರ್ವ ಟಿ.ವಿ. ಮುಂದೆ - ಮುರುಕು ಅಪಾರ್ಟ್ಮೆಂಟಿನ ಸೋಫಾದಲ್ಲಿ - ಒರಗಿರುತ್ತಲೊಂದು ಕನಸ ಕಾಣುತಿರ್ದನು ! ಹೀಗೊಂದು ಅಮೇರಿಕಾ ಖಂಡದಲ್ಲಿರುವ ಒಂದೂರಿನಲ್ಲಿ ವಾಸ ಮಾಡುತ್ತಿದ್ದ ಪರದೇಶಿ (ಉರ್ಫ್‌ ಭಾರತೀಯ) ಯುವಕ (ತಿರುಕ ?) ನೋರ್ವ ತನ್ನ ಮದುವೆಯ ಕನಸು ಕಾಣುತ್ತಿದ್ದ. ತನ್ನ ಜೀತದ ಮಧ್ಯಂತರದಲ್ಲಿ (ಅಂದರೆ, ಎಚ್‌ - 1 ವೀಸಾ ಸಿಕ್ಕು, ಕೈಯಲ್ಲಿ ಸ್ವಲ್ಪ ಕಾಸು ಉಳಿದು, ಮಾಲೀಕ ರಜಾ ಕೊಡಲು ಒಪ್ಪಿಕೊಂಡ ಸಮಯದಲ್ಲಿ ) ತಾಯ್ನಾಡ ಭೇಟಿಗೆ (ಸಂಯುಕ್ತಾಪಹರಣದ ಧಾಳಿಗೆ ?) ಬಂದನು.

ಅವನು ಭಾರತದಿಂದ ಪಲಾಯನಗೈದು ಆಗಲೇ 5 ವರ್ಷಗಳಾಗಿದ್ದರಿಂದ ಇಲ್ಲಿಯ ಪ್ರಗತಿ (?) ಯನ್ನು ನೋಡಿ ‘ಬೆಂಗ್ಳೂರಿಗೆ ಬಂದ ಬೋರೇಗೌಡ’ನಂತಿತ್ತು ಅವನ ಪರಿಸ್ಥಿತಿ. ಅವನು ಎಮ್‌. ಜಿ .ರೋಡ್‌ಗೆ ಹೋದಾಗ ಅಲ್ಲಿಯ ಬಹಳಷ್ಟು ಪಡ್ಡೆ ಹುಡುಗ ಹುಡುಗಿಯರು ಅರ್ಧ ಕಾಲು ಯುರೋಪಿನಲ್ಲಿ, ಅರ್ಧ ಕಾಲು ಅಮೇರಿಕೆಯಲ್ಲಿ ಇಟ್ಟಂತೆ ಆಡುವದನ್ನು ನೋಡಿ ಇವನಿಗೆ ಒಂಥರ ಕೀಳರಿಮೆ ಬಂತು ಎಂದರೂ ಅಶ್ಚರ್ಯವಿಲ್ಲ. ಅಲ್ಲಿಯ ಬಹಳಷ್ಟು ಅಂಗಡಿಗಳ ಡೋರ್‌ಮ್ಯಾನ್‌ಗಳು ಇವನು ಕನ್ನಡದಲ್ಲಿ ಮಾತನಾಡಿದಾಗ ಇವನು ಮಂಗಳ ಗ್ರಹದಿಂದ ಬಂದ ಮಂಗನೋ ಎನ್ನುವ ಹಾಗೆ ಇವನನ್ನು ತಿರಸ್ಕಾರ, ಅನುಕಂಪದಿಂದ ನೋಡಿದಾಗ ಇವನ ಕರುಳಿನಲ್ಲಿ 5 ನೇ ಸಲ ಕಬ್ಬಿನ ಗಾಣದಲ್ಲಿ ಹೋಗುತ್ತಿರುವ ಒಣಗಿದ ಕಬ್ಬಿನ ಜಲ್ಲೆಯಂತೆ ಕಸಿವಿಸಿ ಪ್ರಾರಂಭವಾಯಿತು.

ಚೆನ್ನೈನ ಯು.ಎಸ್‌. ಕೊನ್ಸುಲೇಟ್ನಲ್ಲಿ ಮೂರು ದಿನ ಕ್ಯೂ ನಿಂತು ಕಷ್ಟ ಪಟ್ಟು ವೀಸಾ ಸಂಪಾದಿಸಿದ್ದ ನಮ್ಮ ಧೀರ ಯುವಕ ಅಧೀರನಾಗಲಿಲ್ಲ. ‘ಬಾ ಬಾರೋ ಬಾರೋ ರಣಧೀರ ’ ಎಂದು ಅವನ ಹೀರೋಯಿನ್‌ (ಅವನ ಭಾವಿ - ಗೆ ತಳ್ಳುವ! ಹೆಂಡತಿ) ಅವನನ್ನು ಹಗಲಿರುಳೂ ಕರೆಯುತ್ತಿದ್ದಾಗ ಇವನು ಪಾಂಡುವಿನಂತೆ ಜಡವಾಗಿ ಇರಲು ಸಾಧ್ಯವೇ? ತನ್ನ ಕನ್ಯಾನ್ವೇಷಣೆಯನ್ನು ಪ್ರಾರಂಭ ಮಾಡಿಯೇ ಬಿಟ್ಟ.

ಮೊದಲ ಕನ್ಯೆಯ ಮನೆಯಲ್ಲಿ ಕೃಷ್ಣ ಬೇಕರಿಯ ಒಣ ತಿಂಡಿಗಳನ್ನು ಪೌಲ್ಟ್ರಿ ಕೋಳಿಯಂತೆ ಕುಟುಕಿದ ನಂತರ ಇಂಟರ್ವ್ಯೂ ಪ್ರಾರಂಭವಾಯಿತು. ಸಂದರ್ಶನ ಮಾಡಿದ್ದು ನಮ್ಮ ಯುವಕನಲ್ಲ, ಆ ಹುಡುಗಿ ಮತ್ತು ಅವಳ ಮನೆಯವರು!

ಹುಡುಗಿಯ ತಂದೆ ಕೇಳಿದರು : ‘ಯಾವ ಕಂಪನಿಯಲ್ಲಿ ಕೆಲ್ಸ ಮಾಡ್ತೀರಿ? ಎಷ್ಟು ಜನ ಎಮ್ಪ್ಲೊಯೀಸ್‌ ಇದ್ದಾರೆ ? ವಾರ್ಷಿಕ ಟರ್ನ್‌ ಓವರ್‌ ಎಷ್ಟು?’ ಇತ್ಯಾದಿ. ಯುಧಿಷ್ಠಿರನು ಯಕ್ಷ ಪ್ರಶ್ನೆಗಳಿಗೆ ಉತ್ತರಿಸಿ ಸುಸ್ತಾದ ಹಾಗೆ ನಮ್ಮ ಯುವಕನೂ ಕೂಡ ಈ ಪ್ರಶ್ನೆಗಳಿಗೆ ಉತ್ತರಿಸಿ ಏ. ಸಿ. ಇದ್ದರೂ ಬೆವರೊಡೆದ. ಸ್ವಲ್ಪ ಸುಧಾರಿಸಿಕೊಳ್ಳಲು ನೀರು ಕುಡಿಯುವಂತೆ ನಾಟಕ ಮಾಡಿದ. ಅವನು ಲೋಟವನ್ನು ಕೆಳಗಿಡುತ್ತಿದ್ದಂತೇ ಹುಡುಗಿ ತನ್ನ ಪ್ರಶ್ನಾ ಬಾಣಗಳನ್ನು ಏಕಲವ್ಯನಂತೆ ಇವನ ಮೇಲೆ ಪ್ರಯೋಗಿಸತೊಡಗಿದಳು. ‘ನೀವು ಯಾವ ಪ್ಲಾಟ್ಫೊರ್ಮ್ನಲ್ಲಿ ಕೆಲ್ಸಾ ಮಾಡೋದು? ಯಾವ ಯಾವ ಸಾಫ್ಟ್‌ವೇರ್‌ ಬರುತ್ತೆ? ಎಷ್ಟು ವರ್ಷದ ಜೆನ್ವಿನ್‌ (ಅಸಲಿ) ಎಕ್ಸ್ಪೀರಿಯೆನ್ಸ್‌ ಇದೆ? ಕಂಪನಿ ವೆಬ್‌ ಸೈಟ್‌ ಯು. ಆರ್‌. ಎಲ್‌. ಏನು ? ನೀವು ಯಾವ ಊರು/ಸ್ಟೇಟ್ನಲ್ಲಿ ಕೆಲ್ಸಾ ಮಾಡೋದು ? ಯಾವ ಯಾವ ಊರಿನಲ್ಲಿ ಬ್ರಾನ್ಚಸ್‌ ಇವೆ? ಬಿಸಿನೆಸ್ಸ್‌ ಟ್ರಾವೆಲಿಂಗ್‌ ಇದೆಯಾ?’ ಇತ್ಯಾದಿ. ಯುವಕನ ಪೋಷಕರು ಮಧ್ಯೆ ಬಾಯಿ ಹಾಕಿದರೂ ಅವರನ್ನು ಇಗ್ನೋರ್‌ ಮಾಡಿ ಇವನ ಮೇಲೆ ಪ್ರಶ್ನೆಗಳ ಶರಾವಳಿಯನ್ನೇ ಬಿಟ್ಟರು.

ಭೀಮನ ಗರ್ಜನೆಗೆ ವೈಶಂಪಾಯನ ಸರೋವರದಡಿ ಕುಳಿತಿದ್ದರೂ ಬೆವರಿದ ದುರ್ಯೋಧನನಂತೆ (‘ನೀರೊಳಗಿರ್ದುಮ್‌ ಬೆಮರ್ತನುರಗಪತಾಕಮ್‌ ?! ’) ನಮ್ಮ ಯುವಕ ಹತಾಶನಾದ. ಸುಂದರ ಸೇಲ್ಸ್‌ ಗರ್ಲ್‌ ನೋಡಿ ಜೋರಾಗಿ ಬೊಗಳಿ ತನ್ನ ಕರ್ತವ್ಯ ಪಾಲನೆ ಮಾಡಿದ್ದರೂ ಜೊಲ್ಲುಗಾರ ಮಾಲೀಕನಿಂದ ಪಕ್ಕೆಗೆ ಒದಿಸಿಕೊಂಡ ನಾಯಿಯಂತೆ ತನ್ನ ವಿದ್ವತ್‌, ಸಾಮರ್ಥ್ಯ ಗಳ ಮೇಲೆ ಇವನಿಗೇ ಅನುಮಾನ ಬರತೊಡಗಿತು. ಅವರ ಎಲ್ಲ ಪ್ರಶ್ನೆಗಳಿಗೆ ತನಗೆ ತಿಳಿದಂತೆ ಉತ್ತರ (ಸಮಜಾಯಿಷಿ) ಕೊಟ್ಟು ‘ಬದುಕಿದೆಯ ಬಡ ಜೀವವೇ’ಎಂದು ಅಲ್ಲಿಂದ ನಮ್ಮ ನಾಯಕ ಓಟ ಕಿತ್ತ. ಒಂದು ವಾರದ ನಂತರ ಹುಡುಗಿ ಇವನನ್ನು ತಿರಸ್ಕರಿಸಿದ್ದಾಳೆಂದು ಮಧ್ಯವರ್ತಿಗಳು ತಿಳಿಸಿದರು. ಕಾರಣ: ನಮ್ಮ ಯುವಕ ಐಡಾಹೋ ರಾಜ್ಯದ ಯಾವುದೋ ಸಣ್ಣ ಊರಿನ (ಕುಗ್ರಾಮದ)ಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಹುಡುಗಿಯ ಬಹಳಷ್ಟು ಸ್ನೇಹಿತೆಯರು ಕ್ಯಾಲಿಫೋರ್ನಿಯದ ಬೇ ಏರಿಯದಲ್ಲಿ ಸೆಟ್ಲ್‌ ಆಗಿದ್ದರು! ತನಗೆ ಕ್ಯಾಲಿಫೋರ್ನಿಯದಲ್ಲಿ ಕೆಲಸ ಮಾಡುತ್ತಿರುವ ಹುಡುಗನೇ ಬೇಕು ಎಂದು ಆಕೆ ಪಟ್ಟು ಹಿಡಿದಿದ್ದಳಂತೆ!

ಇನ್ನೊಂದು ಸಂದರ್ಶನಕ್ಕೆ ಹೋದ. ಅವನು ಬಿಸ್ಕಿಟ್‌ ಬಾಯಿಗಿಡುತ್ತಿದ್ದಂತೆಯೇ ‘ಪ್ರಶ್ನೋತ್ತರಗಳು’ ಕಾರ್ಯಕ್ರಮ ಪ್ರಾರಂಭವಾಯಿತು! ಸಂಬಳ, ಕೆಲಸ ಇತ್ಯಾದಿ ಮಾಮೂಲು ಪ್ರಶ್ನೆಗಳಾದ ನಂತರ ಕಠಿಣ ಪ್ರಶ್ನೆಗಳ ಸರದಿ. ‘ನಿಮ್ಮ ವೀಸಾ ಸ್ಟೇಟಸ್‌ ಏನು? ಗ್ರೀನ್‌ ಕಾರ್ಡ್‌ ಇದೆಯಾ? ಅಥವ ಇಮ್ಮಿಗ್ರೇಶನ್‌ಗೆ ಅಪ್ಪ್ಲೈ ಮಾಡಿದ್ದೀರಾ?

ವೀಸಾ ಹಾಗೂ ಪಾಸ್ಪೋರ್ಟ್‌ ಇನ್ನೂ ಎಷ್ಟು ವರ್ಷ್‌ ವ್ಯಾಲಿಡ್‌ ಇದೆ? ಈಗ ಮದುವೆ ಆದಲ್ಲಿ, ತಕ್ಷಣವೇ ಹೆಂಡ್ತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದು ತಾನೆ?’ ಇತ್ಯಾದಿ ಪ್ರಶ್ನೆಗಳು ನಯಾಗರಾ ಜಲಪಾತದಂತೆ ಧುಮ್ಮಿಕ್ಕಿ ಬಂದವು. ಆ ಜಲಪಾತದ ಧಾರೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವಂತಾಗಿತ್ತು ಅವನ ಪರಿಸ್ಥಿತಿ! ಅವುಗಳಿಗೆ ಹೇಗೋ ಉತ್ತರ ನೀಡಿ ಇನ್ನೇನು ಜಲಪಾತದ ಟೂರ್‌ ಮುಗಿಯಿತು ಎಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ ಚಂಡಮಾರುತದಂತೆ ಹುಡುಗಿಯ ಸವಾಲು ಬಂದಿತು: ‘ನೀವು ಕೆಲಸ ಮಾಡುತ್ತಿರುವ ಕಂಪನಿಯ recent pay slips (ಇತ್ತೀಚೆಗೆ ಬಂದ ಸಂಬಳದ ಚೆಕ್ಕಿನ ಪ್ರತಿಗಳು ) ಇವೆಯಾ?’ ಎಂದು. ಇವನು ದಾರಿಯುದ್ದಕ್ಕೂ ದಾಟಿಬಂದ ಕಸ್ಟಮ್ಸ್‌ ಹಾಗೂ ಇಮ್ಮಿಗ್ರೇಶನ್‌ ಕೌಂಟರ್‌ ಗಳಲ್ಲೇ ಕೇಳದ ಈ ಪ್ರಶ್ನೆಯನ್ನು ಆ ತರ್ಲೆ ಹುಡುಗಿ ಕೇಳಿದಾಗ ನಮ್ಮ ಯುವಕ ಕುರ್ಚಿಯಿಂದ್‌ ಹಾರಿ ಬಿದ್ದ ಎಂದರೆ ನಿಮಗೇ ಈ ಆಭಾಸದ ಅರಿವು ಮೂಡಬಹುದು. ನಮ್ಮ ಯುವಕನಿಗೆ ವಿಯೆಟ್ನಾಮಿನ ಟಾರ್ಚರ್‌ ಚೇಂಬರ್‌ನಲ್ಲಿ ಸಿಕ್ಕಿಕೊಂಡ ಹಾಗೆ, ಹಾಗೂ ಆ ಹುಡುಗಿ ಮತ್ತು ಅವಳ ಅಪ್ಪ ತನ್ನ ಉಗುರು ಹಾಗೂ ಕೂದಲುಗಳನ್ನು ಒಂದೊಂದಾಗಿ ಎಳೆದು ಕೀಳುತ್ತಿರುವ ಕನಸು ಕೂಡ ಬಿದ್ದಿತು. ಈ ಹುಡುಗಿ ಮತ್ತು ಅವಳ ಅಪ್ಪ ಬಹುಶಃ ಅಮೇರಿಕೆಯ I.N.S. (Immigration & naturalization Service) Undercover Agents ಇರಬಹುದೋ ಏನೋ ಎಂದು ಇವನಿಗೆ ತೀವ್ರ ಶಂಕೆಯಾಯಿತು. ‘ನಾನು Prodution Support Teamನಲ್ಲಿದ್ದೇನೆ. ನನ್ನ ಕಂಪನಿಗೆ ಫೋನ್‌ ಮಾಡಬೇಕು’ ಎಂದು ಅವರ ಮನೆಯಿಂದ ಜಾರಿಕೊಂಡ. ತನ್ನ ಸ್ನೇಹಿತರಿಗೆ ಈ ಮನೆಯಿಂದ ದೂರವಿರಿ ಎಂದು ಎಚ್ಚರಿಸಲು ನಿರ್ಧಾರ ಮಾಡಿ ಮನೆಯಿಂದ ಹೊರಗೆ ಬಂದಾಗ ಅವರ ವಿಳಾಸವನ್ನು ಗುರುತು ಮಾಡಿಕೊಳ್ಳಲು ಮರೆಯಲಿಲ್ಲ.

ಛಲ ಬಿಡದ ಹೊಟ್ಟೆ ಪಕ್ಷದ ರಂಗಸ್ವಾಮಿಯಂತೆ ನಮ್ಮ ನಾಯಕ ಇನ್ನೊಂದು ಹುಡುಗಿಯನ್ನು ನೋಡಲು (ಅರ್ಥಾತ್‌, ಮಂಗಳಾರತಿ ಮಾಡಿಸಿಕೊಳ್ಳಲು?) ಹೋದ. ಹುಡುಗಿಯ ತಂದೆಯ ಮೊಟ್ಟ ಮೊದಲ ಪ್ರಶ್ನೆ : ‘ನಿಮಗೆ ಎಷ್ಟು ಸಂಬಳ ಬರುತ್ತದೆ ? ಕಂಪನಿಯ ಸ್ಟಾಕ್‌ ಆಪ್ಷನ್ಸ್‌ ಇದೆಯಾ? ಕ್ವಾರ್ಟರ್ಲಿ ಬೋನಸ್‌ ಕೊಡ್ತಾರಾ? ನಿಮ್ಮ ಹತ್ತಿರ ಹೋಂಡ ಅಕೋರ್ಡ್‌ ಇದೆಯ ಅಥವ ಟೊಯೋಟಾ ಕ್ಯಾಮ್ರಿ ಇದೆಯ?’ ಎಂದು. ಐ. ಆರ್‌. ಎಸ್‌. ಪ್ರಶ್ನಾವಳಿಗಳು ಕೂಡ ಇಷ್ಟು ಕಠಿಣವಾಗಿರಲಿಲ್ಲವಲ್ಲ ಎಂದು ಇವನಿಗೆ ಭಾಸವಾಯಿತು. ‘ನನ್ನ ಕುಟುಂಬವನ್ನು ಸುಖವಾಗಿ ನೋಡಿಕೊಂಡು ಹೋಗುವಷ್ಟು ಸಂಬಳ ನನಗೆ ಬರುತ್ತದೆ’ ಎಂದು ಯುವಕ ನಾನಾ ಪಾಲ್ಕೀವಾಲಾ ತರಹ ಜಾಣ ಉತ್ತರ ನೀಡಿದ. ‘ಹಾಗಾದ್ರೆ ನಿಮಗೆ ವರ್ಷಕ್ಕೆ ಕನಿಷ್ಠ 80,000 ಡಾಲರ್‌ ಆದ್ರೂ ಸಂಬಳ ಬರ್ತಾ ಇರಬೇಕಲ್ವೇ’ ಎಂದು ಹುಡುಗಿಯ ತಂದೆ leading question ಕೇಳಿದರು. ಯಾವುದೋ ಅಬ್ಬೇಪಾರಿ ಕಂಪನಿಯಲ್ಲಿ ಸಿಕ್ಕಷ್ಟು ಸಂಬಳಕ್ಕೆ ಕೆಲಸ ಮಾಡುತ್ತಿದ್ದ ನಮ್ಮ ನಾಯಕ (ಅವನ ಮ್ಯಾನೇಜರ್‌ಗೇ ಅಷ್ಟು ಸಂಬಳ ಬರ್ತಾ ಇರ್ಲಿಲ್ಲ ಎನ್ನೋದು ಇಲ್ಲಿ ಅಪ್ರಸ್ತುತ !!) ‘ಅಂಗೈ ತೋರಿಸಿ ಅವಲಕ್ಷಣ ಎನ್ನಿಸೋ ಹಾಗಾಯ್ತಲ್ಲ ’ ಎಂದು ಮಿಡುಕುತ್ತ ಮನೆಗೆ ಓಡಿ ಹೋದ - international criminal court ನಿಂದ ಓಟ ಕಿತ್ತ ಅಮೇರಿಕೆಯಂತೆ.

ಒಂದೆರಡು ದಿನ ಸುಧಾರಿಸಿಕೊಂಡ ಮೇಲೆ (ಅಂದರೆ, ಶಾಕ್‌ನಿಂದ ಚೇತರಿಸಿಕೊಂಡ ಮೇಲೆ!) ನಮ್ಮ ನಾಯಕ ಇನ್ನೊಂದು ಸಂದರ್ಶನಕ್ಕೆ ಹೋದ. ಹುಡುಗಿಯ ಕಡೆಯವರು ಇತ್ತೀಚೆಗಷ್ಟೇ ಮಂಗ್ಳೂರಿನಿಂದ ಓಡಿ ಬಂದು ಬೆಂಗ್ಳೂರಿನಲ್ಲಿ ನೆಲೆಸಿದ್ದರು. ಕೆಲವು ಸಾಮಾನ್ಯ ಪ್ರಶ್ನೆಗಳನ್ನು ಕೇಳಿದ ಮೇಲೆ ‘ನಿಮ್ಮ ಬಳಿ ಹೊಂಡ ಇರಬೇಕಲ್ಲವೇ’ ಎಂದು ಕೇಳಿದರು. ನಮ್ಮ ನಾಯಕ ಕುಶಾಗ್ರಮತಿಯಲ್ಲದಿದ್ದರೂ, ಮುಟ್ಠಾಳನಂತೂ ಅಲ್ಲ. ‘ನಮ್ಮ ಮನೆಯ ಮುಂದೆ ಸದಾ ಹೊಂಡ ಇರುತ್ತದೆ’ ಎಂದು ಉತ್ತರಿಸಿದ. ಹುಡುಗಿಯ ಕಡೆಯವರು ಹೊಸದಾಗಿ ಬೆಂಗ್ಳೂರಿಗೆ ಬಂದು ನೆಲೆಸಿದ್ದರಿಂದ ಅವರ N.R.I. IQ ಸ್ವಲ್ಪ ಕಡಿಮೆ ಇತ್ತು ಅಂತ ಕಾಣುತ್ತೆ. ಯುವಕನಿಗೆ ಜಾಸ್ತಿ ಪ್ರಶ್ನೆಗಳನ್ನು ಕೇಳಲಿಲ್ಲ. ಯುವಕನಿಗೆ ಹುಡುಗಿ ಇಷ್ಟವಾದಳು ಹಾಗೂ ಮುಖ್ಯವಾಗಿ, ಹುಡುಗಿಯ ಕಡೆಯವರಿಗೆ ಈ ಯುವಕ (ಉರ್ಫ್‌ ಬಕ್ರಾ !!) ಹಿಡಿಸಿದನು. ‘ಶುಭಸ್ಯ ಶೀಘ್ರಂ’ ಎನ್ನುವಂತೆ ಬೇಗ ಮದುವೆ ಕೂಡ ಆಗಿ ಹೋಯಿತು. ಯುವಕ ಹಾಗೂ ಯುವತಿ ಅಮೇರಿಕೆಗೆ ಬಂದರು. ಬೆಳ್ಳಿತೆರೆಯ ಮೇಲೆ ವಿದೇಶದ ಭವ್ಯ ಚಿತ್ರಗಳನ್ನು ನೋಡಿ ಏನೇನೋ ಕನಸುಗಳನ್ನು ನಿಟ್ಟಿಸಿದ್ದ (ಅಂದರೆ ಹೆಣೆದಿದ್ದ !!) ಯುವತಿಗೆ ಆ ಕುಗ್ರಾಮದ down town ನಲ್ಲಿದ್ದ ಯುವಕನ ಮುರುಕಲು ಅಪಾರ್ಟ್ಮೆಂಟ್‌, ಹಳ್ಳ ಬಿದ್ದ ರಸ್ತೆಗಳನ್ನು ನೋಡಿ 2004 ಚುನಾವಣೆಯ ಒಪೀನಿಯನ್‌ ಪೋಲ್ಗಳನ್ನು ನೋಡಿ ಸೋನಿಯಾಗಾಂಧಿಗೆ ಆದದ್ದಕ್ಕಿಂತಲೂ ಹೆಚ್ಚು ನಿರಾಸೆಯಾಯಿತು ಎಂದರೆ ಅತಿಶಯೋಕ್ತಿಯೇನಲ್ಲ.

ಮೊದಲ 2-3 ದಿನ ಅವಳು ಸುಮ್ಮನೇ ಇದ್ದಳು -ಬಹುಶಃ jet lag ಇದ್ದಿದ್ದಕ್ಕೋ ಏನೋ. ಬೆಳಿಗ್ಗೆ ಗಂಡ ಯಾವುದೋ ಮುರುಕಲು ಫೋರ್ಡ್‌ ಕಾರು ಏರುವದನ್ನು ಬಾಲ್ಕನಿಯಿಂದ ನೋಡಿ ಅದುಮಿಟ್ಟ ಅಳುವೆಲ್ಲ ಹೊರಗೆ ಬಂದಿತು. ಇವತ್ತು ಹೆಂಡತಿ ಯಾವ ಸರ್‌ಪ್ರೆೃಸ್‌ ಸ್ಪೆಶಲ್‌ ಅಡಿಗೆ ಮಾಡಿರುತ್ತಾಳೋ ಎನ್ನುವ ಚಿಂತೆಯನ್ನೇ ದಾರಿಯುದ್ದಕ್ಕೂ ಮಾಡಿಕೊಂಡು ಬಂದ ನಮ್ಮ ಯುವಕನಿಗೆ ಒಂದು ದೊಡ್ಡ ಸರ್‌ಪ್ರೆೃಸೇ ಕಾದಿತ್ತು. ಸಾಯಂಕಾಲ ಯುವಕ ಮನೆಗೆ ವಾಪಸ್‌ ಬಂದಾಗ ಪತ್ನಿ ಎಂದಿನಂತೆ ಬಾಲ್ಕನಿಯಲ್ಲಿ ಕಾಯುತ್ತ ನಿಂತಿರಲಿಲ್ಲ ಹಾಗೂ ಮನೆಯೆಲ್ಲ ತಣ್ಣಗಿತ್ತು. ಎಮ್‌.ಟಿ.ಆರ್‌ ಘಮ ಘಮ ಹೋಗಲಿ, ಪಾನಿ ಪೂರಿ ಗಾಡಿಯ ವಾಸನೆ ಕೂಡ ಬರಲಿಲ್ಲ. ನಿದ್ರಾ ಕೋಣೆಗೆ ಹೋಗಿ ನೋಡಿದರೆ ಹೆಂಡತಿ ಅತ್ತು ಅತ್ತು ಸಾಕಾಗಿ ಶವಾಸನದಲ್ಲಿ ಪವಡಿಸಿದ್ದಳು. ಅವಳ ಮುಂಗುರುಳನ್ನು ಪ್ರೀತಿಯಿಂದ ನೇವರಿಸಿದಾಗ ಮೋನಾಲೀಸಾ ತರಹ ಕಣ್ಣು ತೆರೆದಳಾ ಬಾಲೆ. ‘ನಿಮ್ಮ ಹತ್ತಿರ ಹೊಂಡ (ಹೋಂಡಾ ಕಾರ್‌) ಇದೆ ಎಂದು ನಮ್ಮಪ್ಪನ ಹತ್ತಿರ ಯಾಕೆ ಸುಳ್ಳು ಹೇಳಿದ್ರಿ’ ಎಂದು ಕಪಿಲ್‌ ಸಿಬಾಲ್‌ ತರಹ ಪ್ರಶ್ನಿಸಿದಳು. ಆಗ ನಮ್ಮ ಮುದುಕ (ಮದುವೆ ಆದ ಮೂರು ವಾರಕ್ಕೇ ಅವನು ಮುದುಕ ಆಗಿದ್ದರೆ ಅದು ಅವನ ತಪ್ಪೇ ?) ಅವಳನ್ನು ಬಾಲ್ಕನಿಗೆ ಕರೆದೊಯ್ದ. ‘ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನಿನಗೆ ಏನು ಕಾಣುತ್ತದೆ’ ಎಂದು ತನ್ನ ಭಾರ್ಯೆಯನ್ನು ಕೇಳಿದ. ‘ಸಿಕ್ಕಾ ಪಟ್ಟೆ ಹಳ್ಳ ಗುಂಡಿಗಳು’ ಎಂದು ಉಲಿದಳಾ ಅಬ್ಬಕ್ಕ ರಾಣಿ. ಆಗ ನಮ್ಮ ನಾಯಕ ನುಡಿದ ‘ನಾನು ನಿಮ್ಮ ತಂದೆಗೆ ಅದನ್ನೇ ಹೇಳಿದ್ದು. ನಮ್ಮ ಮನೆಯ ಮುಂದೆ ಸದಾ ಹೊಂಡ ಇರುತ್ತದೆ ಎಂದು !’ ಆಗ ಆ ಯುವತಿಗೆ ಆ ಹೊಂಡದಲ್ಲೇ ಹಾರಿಕೊಳ್ಳುವ ಯೋಚನೆ ಬಂದಿದ್ದರೆ ಹಾಗೂ ನಮ್ಮ ಯುವಕನಿಗೆ ಮೊಟ್ಟ ಮೊದಲನೆಯ ಬಾರಿ ತನ್ನ ಮನೆಯ ಮುಂದಿನ ಹೊಂಡಗಳ ಮೇಲೆ ಗೌರವ ಭಾವನೆ ಮೂಡಿದ್ದರೆ ಅದು ಅವರ ತಪ್ಪೇ? ನೀವೇ ಹೇಳಿ ಮತ್ತೆ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more