• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಂಚ : ತಿರುಪತಿ ಹುಂಡಿಗೆ ಉಂಗುರ ಬಿದ್ದಂತೆ

By Staff
|
  • ಪ್ರಶಾಂತ್‌ ಬೀಚಿ, ತಾನ್ಜಾನಿಯ

prashanth@bol.co.tz

Prashanth Beechiಪಾಸ್‌ ಪೋರ್ಟ್‌ ಮಾಡಿಸಬೇಕಾದರೆ 5 ಸಾವಿರ, ಲರ್ನಿಂಗ್‌ ಲೈಸೆನ್ಸ್‌ಗೆ 5 ನೂರು, ಡ್ರೈವಿಂಗ್‌ ಲೈಸೆನ್ಸ್‌ಗೆ ಪೂರ್ತಿ ಒಂದು ಸಾವಿರ. ಮನೆ ಖಾತೆ ತೆಗೆಸಬೇಕಾದರೆ 3 ಸಾವಿರ, ಆದಾಯ ಕಡಿಮೆ ಇದ್ದರೂ ಅದರ ಪ್ರಮಾಣ ಪತ್ರ ಬೇಕೆಂದರೆ 1 ಸಾವಿರ, ಆದಾಯ ಜಾಸ್ತಿ ಇದ್ದವರಿಗೆ ಅದು ಫ್ರೀ. SSLC ಒಂದು ಪೇಪರ್‌ ಪಾಸು ಮಾಡಲು 5 ಸಾವಿರ, ಎಲ್ಲ ಪೇಪರ್‌ ಪಾಸು ಮಾಡಲು 25 ಸಾವಿರ. PUC ಪಾಸು ಮಾಡಲು ಒಂದು ಪೇಪರ್‌ ಗೆ 10 ಸಾವಿರ. ಡಿಗ್ರಿ certificate ಬೇಕಾದರೆ ದೂಸರಾ ಮಾತಿಲ್ಲದೆ 50 ಸಾವಿರ !

ಈ ಮೇಲಿನೆ ದುಡ್ಡಿಗೆ ರಶೀದಿ ಇಲ್ಲ. ಹಾಗಾದರೆ ಈ ದುಡ್ಡು ಏತಕ್ಕೆ ಎಂದು ಚಿಕ್ಕ ಮಕ್ಕಳನ್ನು ಕೇಳಿದರೂ ತಡವರಿಸದೆ, ಯೋಚಿಸದೆ ಪಟಕ್ಕನೆ ಹೇಳುತ್ತಾರೆ ‘ಲಂಚ’. ಅಷ್ಟರ ಮಟ್ಟಿಗೆ ಬೆಳೆದಿದ್ದಾನೆ ಈ ಲಂಚಾಧಿಪತಿ. ‘ಹೊಟ್ಟೆಗೆ ಹಿಟ್ಟಿಲ್ಲ, ಮಗಳ ಮದುವೆ ಮಾಡಬೇಕು, ಸರ್ಕಾರದಿಂದ ಬಂದಿರುವ ನನ್ನ ಪಿಂಚಣಿ ಕೊಡಿ’ ಎಂದರೆ, ಏನೂ ಇಲ್ಲದಿದ್ದರೆ ರಕ್ತ ಕಕ್ಕಿಯಾದರೂ ಲಂಚ ಕೊಡು ಎನ್ನುತ್ತಾನೆ ಗುಮಾಸ್ತ. ಪ್ರೈವೇಟ್‌ ಆಸ್ಪತ್ರೆಗೆ ಹೋಗಲು ದುಡ್ಡಿಲ್ಲ ಎಂದು ಸರ್ಕಾರಿ ಆಸ್ಪತ್ರೆಗೆ ಹೋದರೆ, ಚೀಟಿ ಬರೆಯುವನಿಗೆ 2 ರೂಪಾಯಿ, 10 ರೂಪಾಯಿ ಡಾಕ್ಟರಿಗೆ, ಮತ್ತೆರಡು ರೂಪಾಯಿ ಮಾತ್ರೆ ಕೊಡುವವನಿಗೆ. ಇವ್ಯಾವುದಕ್ಕೂ ಲೆಕ್ಕ ಇಲ್ಲ, ರಸೀದಿ ಇಲ್ಲ. ತಿರುಪತಿ ಹುಂಡಿಗೆ ಉಂಗುರ ಬಿದ್ದಂತೆ. ಹೇಳಿಕೊಳ್ಳಲಾಗದು, ಹೇಳಿಕೊಂಡರೂ ವಾಪಸ್ಸು ಬಾರದು. ಲಂಚ ಎನ್ನುವುದು ನೋಡುವುದಕ್ಕೆ ಸಣ್ಣದಾಗಿ ಕಂಡರೂ ನಮ್ಮ ದೇಶದ ಬಡತನಕ್ಕೆ ಬೆನ್ನೆಲುಬಾಗಿ ನಿಂತಿರುವ ಭೂತ. ಸರ್ಕಾರ ಬಡವರಿಗೆಂದು ಘೋಷಿಸುವ ಎಲ್ಲಾ ದುಡ್ಡು ಬರುವ ದಾರಿಯಲ್ಲೆ ಮಂತ್ರಿಗಳ, ಶಾಸಕರ ಹಾಗು ಅಧಿಕಾರಿಗಳ ಜೋಬಿಗೆ ಸೇರಿಹೋಗುತ್ತದೆ, ಸೋರಿಹೋಗುತ್ತದೆ. ಈ ವಿಷಯವೆಲ್ಲ ಯಾರಿಗೂ ತಿಳಿದಿಲ್ಲವೆಂದಲ್ಲ , ಯಾರಿಗೂ ತಮ್ಮ ಗಡ್ಡಕ್ಕೆ ಬೆಂಕಿ ಬೀಳುವವರೆಗೂ ನೀರಿನ ಬಗ್ಗೆ ಯೋಚನೆ ಬರುವುದಿಲ್ಲ.

ಹಾಗೆ ನೋಡಿದರೆ ಈ ಲಂಚ ಎನ್ನುವುದು ನಾವೇ ಸೃಷ್ಟಿಸಿಕೊಂಡ ಕರ್ಮಕಾಂಡ. ನಮ್ಮ ಕೆಲಸ ಬೇಗ ಆಗಲಿ ಎಂದು ನಾವೇ ದುಡ್ಡು ಕೊಡುತ್ತೇವೆ, ಅದರ ಅಭ್ಯಾಸಕ್ಕೆ ಬಿದ್ದ ಗುಮಾಸ್ತ ಎಲ್ಲರಲ್ಲೂ ಕೇಳುತ್ತಾನೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಜನ ಹೊಟ್ಟೆಗೆ ತಿನ್ನಲು ಒದ್ದಾಡುತ್ತಿರುವಾಗ ಲಂಚಕ್ಕೆಲ್ಲಿಂದ ದುಡ್ಡು ತರಬೇಕು? ಸರ್ಕಾರಿ ಕೆಲಸಕ್ಕೆ ಸೇರಲು ಲಂಚ, ಸರ್ಕಾರಿ ಕಛೇರಿಗಳಲ್ಲಿ ಎಲ್ಲಾ ಕೆಲಸಕ್ಕೂ ಲಂಚ ಲಂಚ ಲಂಚ.

ಭಾರತ ಹಳ್ಳಿಗಳ ರಾಷ್ಟ್ರ, ಹಳ್ಳಿ ಜನ ಮುಗ್ಧರು. ಅವರಿಗೆ ಸರ್ಕಾರದ ಕಾಯಿದೆ ಕಾನೂನು ಅಷ್ಟಾಗಿ ತಿಳಿದಿರುವುದಿಲ್ಲ . ತಾಲ್ಲೂಕು ಕಛೇರಿಗಳಂಥ ಎಡೆಯಲ್ಲಂತೂ ಸಾರ್ವಜನಿಕರ ಹಗಲು ದರೋಡೆ ನಡೆಯುತ್ತದೆ. ಛಾಪಾ ಕಾಗದ, ಖಾತೆ ಬದಲಾವಣೆ, ಆಸ್ತಿ ಹಕ್ಕು ಪತ್ರ, ನಿವೇಶನ ಪತ್ರ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಬಡವರ ರಕ್ತ ಹಿಂಡುತ್ತಾರೆ. ಯಾರಿಗೂ ಬಿಟ್ಟಿಯಾಗಿ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿ ಮರದ ಕುರ್ಚಿಯಲ್ಲಿ ಹೊಟ್ಟೆಯುಬ್ಬಿಸಿ ನಿದ್ರೆಯಲ್ಲೆ ಅರ್ಧ ಜೀವನ ಕಳೆಯುತ್ತಾರೆ ಸರ್ಕಾರದ ತಿಮಿಂಗಲಗಳು. ಒಂದು ಸೈಟನ್ನು ಕರ್ನಾಟಕ ಗೃಹ ಮಂಡಲಿ ಯಿಂದ ತೆಗೆದುಕೊಂಡು ಅದರ ರಿಜಿಸ್ಟ್ರೇಶನ್‌ ಮಾಡಿಸಿದ ನಿಜ ಸಂಗತಿ ತಿಳಿಸುತ್ತೇನೆ :

ಸಾಧಾರಣವಾಗಿ ಸೈಟ್‌ಗಳನ್ನು ಗೃಹ ಮಂಡಲಿಯವರು ಹಂಚುತ್ತಾರೆ, ತಿರುವಿನಲ್ಲಿ ಬರುವ ಸೈಟ್‌ಗಳನ್ನು ಹರಾಜಿಗೆ ಹಾಕುತ್ತಾರೆ. ಯಾರು ಜಾಸ್ತಿ ಕೂಗುತ್ತಾರೊ ಅವರಿಗೆ ಅದನ್ನು ನೀಡುತ್ತಾರೆ. ನಮ್ಮ ಊರಿನ ಗೃಹ ಮಂಡಲಿಯಲ್ಲಿ ಹರಾಜಿತ್ತು. ದಿನಾಂಕವನ್ನು ಎಲ್ಲರಿಗೂ ತಿಳಿಸಿರಲಿಲ್ಲ, ಆದುದರಿಂದ ಬಹಳ ಕಡಿಮೆ ಜನ ಹರಾಜಿನ ಸ್ಥಳಕ್ಕೆ ಆಗಮಿಸಿದ್ದರು. ಎಲ್ಲರೂ ಅವರವರಿಗೆ ಬೇಕಾದ ಜಾಗವನ್ನು ಆರಿಸಿಕೊಳ್ಳಿ ಎಂದು ಅಲ್ಲಿಗೆ ಬಂದಿದ್ದ ಅಧಿಕಾರಿ ಹೇಳಿದ. ಎಲ್ಲರಿಗೂ ಖುಷಿಯಾಯಿತು. ಬಂದಿದ್ದ 6 ಜನ, 6 ಕಾರ್ನರ್‌ ಸೈಟ್‌ಗಳನ್ನು ತೋರಿಸಿದರು. ಎಲ್ಲರಿಗೂ ಸೈಟ್‌ ನಂಬರ್‌ ಹೇಳಿ ಎಲ್ಲರ ಹತ್ತಿರ ಹರಾಜಿಗೆ ಕಟ್ಟಬೇಕಿದ್ದ 1 ಸಾವಿರ ಪಡೆದು, ಸೈಟ್‌ ಬೆಲೆಯ ಮೇಲೆ ಒಬ್ಬೊಬ್ಬರಿಂದ 5-7 ಸಾವಿರ ಪಡೆದುಕೊಂಡ. ಅದು ಯಾಕೆ ಎಂದು ಕೇಳಿದ್ದಕ್ಕೆ, ‘ಈ ಊರಿನಲ್ಲಿ ಸೈಟ್‌ಗೆ ಡಿಮ್ಯಾಂಡ್‌ ಇಲ್ಲ, ಹಾಗಾಗಿ ಕಡಿಮೆ ಹರಾಜಿನ ಮೊತ್ತಕ್ಕೆ ಸೈಟನ್ನು ನೀಡಬೇಕಾಯಿತು ಎಂದು ಹೆಡ್‌ ಆಫೀಸ್‌ಗೆ ಲೆಟರ್‌ ಬರಿಯಬೇಕು, ಹಾಗು ಅಲ್ಲಿಗೆ ಹೋಗಿ ಇದನ್ನು ಸಾಬೀತು ಪಡಿಸಬೇಕು. ನಿಮಗೆ ದುಡ್ಡು ಕೊಡಲು ಮನಸ್ಸಿಲ್ಲದಿದ್ದರೆ, ನೀವು ಹೋಗಬಹುದು, ನಿಮಗೆ ಈಗ ಕೊಟ್ಟಿರುವ ಹಣಕ್ಕೆ ಸೈಟ್‌ ನೀಡಲಾಗುವುದಿಲ್ಲ. ನಿಮಗೆ ಸಿಕ್ಕಿರುವ ಸೈಟ್‌ನ ನಿಜವಾದ ಬೆಲೆ ಈಗ ಸಿಕ್ಕಿರುವುದಕ್ಕಿಂತ ಎರಡು ಪಟ್ಟು ಜಾಸ್ತಿ’ ಎಂದು ಬೆದರಿಕೆಯ ಮಾತುಗಳನ್ನಾಡಿದ. ಅಲ್ಲಿ ಬಂದಿದ್ದ ಜನರಿಗೆ ಗೊತ್ತಿತ್ತು, ಇವನು ಲಂಚ ತೆಗೆದುಕೊಂಡು ಕಡಿಮೆ ಹಣಕ್ಕೆ ಸೈಟ್‌ ಕೊಡುತ್ತಾನೆ ಎಂದು. ಅವರ ಅಪ್ಪನ ಮನೆಯದಾಗಿದ್ದರೆ ಹೀಗೆ ಮಾಡುತ್ತಿದ್ದನ? ಎಲ್ಲರೂ ಅವನಿಗೆ 5-7 ಸಾವಿರ ಜಾಸ್ತಿ ಕೊಟ್ಟು ಅವರವರ ಸೈಟನ್ನು ಕನ್ಫರ್ಮ್‌ ಮಾಡಿದರು. ಅಲ್ಲಿಗೆ ಹದಿನೈದು ದಿನದ ಒಳಗೆ ಸೈಟ್‌ನ ಪೂರ್ತಿ ಹಣ ಕಟ್ಟಿ ನಂತರದ ಒಂದು ತಿಂಗಳಿಗೆ ಎಲ್ಲರಿಗೂ ಕಚೇರಿಗೆ ಬಂದು ಪೇಪರ್ಸ್‌ ತೆಗೆದುಕೊಂಡು ರಿಜಿಷ್ಟ್ರೇಶನ್‌ ಮಾಡಿಸಿಕೊಳ್ಳಿ ಎಂದು ಹೇಳಿ ಹೊರಟುಹೋದ.

ತಿಂಗಳಾಯಿತು, ಎಲ್ಲರಿಗೂ ಹಣ ಕಟ್ಟಿದ್ದಕ್ಕೆ ಪತ್ರ ಬಂದಿತು, ಅದಾದ ಹದಿನೈದು ದಿನಕ್ಕೆ ಪೇಪರ್ಸ್‌ ತೆಗೆದುಕೊಳ್ಳಲು ಹೋದರೆ ಅಲ್ಲಿ ಇದ್ದವರಿಗೆ ಅದರ ಅರಿವಿಲ್ಲ ಹಾಗು ಮ್ಯಾನೇಜರ್‌ ಅಲ್ಲಿಲ್ಲ. ಕೆಲಸದ ಸಮಯದಲ್ಲಿ ಕಛೇರಿಯಲ್ಲಿ ಪ್ರಮುಖ ವ್ಯಕ್ತಿಗಳ್ಯಾರೂ ಇಲ್ಲ. ಮರು ದಿನ ಬರಲು ಹೇಳಿದರು. ಬೆಳಿಗ್ಗೆ 9:00 ಘಂಟೆಗೆ ಅಲ್ಲಿಗೆ ನಾನು ನನ್ನ ಸ್ನೇಹಿತ ಕಛೇರಿಗೆ ತಲುಪಿದೆವು, 9:30 ಗೆ ಬಂದ ಕಸಗುಡಿಸುವನು, ಅವನ ಹಿಂದೆ ಸುಮಾರು ಅರ್ಧ ಘಂಟೆಯ ನಂತರ ಉಳಿದ ಕೆಲ ಗುಮಾಸ್ತರು ಬಂದರು. ಎಲ್ಲಾ ಬಂದು ಸೆಟ್ಲ್‌ ಆಗೊ ಹೊತ್ತಿಗೆ 10:30. ಆದರೂ ನಮಗೆ ಬೇಕಾದ ಮ್ಯಾನೇಜರ್‌ ಹಾಗು ಅವರ ಆಪ್ತ ಗುಮಾಸ್ತ ಬರಲಿಲ್ಲ. ಅಲ್ಲಿಗೆ ಬಂದವರಿಗೆಲ್ಲಾ ಕೇಳಿದೆವು, ಯಾರಿಗೂ ಅವರು ಬರುವ ಟೈಮ್‌ ಗೊತ್ತಿಲ್ಲ. ತನ್ನದೆ ಮಾಂಸದಂಗಡಿಗೆ ಬರುವ ಕಟುಕನಂತೆ ಅಹಂ ನಿಂದ ಕೊಬ್ಬಿದ ಕೋಣದಂತೆ ಬಂದರು ಅವರಿಬ್ಬರು. ನಾವು ಗುಮಾಸ್ತನ ಹಿಂದೆ ನಡೆದು, ಅವನಿಗೆ ನಮಸ್ಕರಿಸಿದೆವು. ಗತ್ತಿನಿಂದ ಹೆದರಿಕೆಯಾಗುವಂತೆ ಕೇಳಿದ ‘ಏನು?’, ನಾವು ಅವನಿಗೆ ಬೆಳಗ್ಗೆಯಿಂದ ಕಾಯುತ್ತಿರುವ ವಿಷಯ ವಿವರಿಸಿ, ನಮ್ಮ ಸೈಟ್‌ನ ಕಾಗದ ಪತ್ರವನ್ನು ಕೇಳಿದೆವು. ಎಲ್ಲಿತ್ತೋ ಸಿಟ್ಟು, ‘ನಾನು ಈಗ ತಾನೆ ಬಂದಿದ್ದೇನೆ, ಬಹಳ ಕೆಲಸ ಇದೆ ನೀವು ನಾಳೆ ಬನ್ನಿ’ ಎಂದು ನಮ್ಮ ಕಡೆ ನೋಡದೆ ಬೊಗಳಿದ. ನಾವು ನೆನ್ನೆ ಬಂದಿದ್ದೆವು ಆದರೆ ನೀವು ಇರಲಿಲ್ಲ ಎಂದು ಹೇಳಿದ್ದೆ ತಡ, ‘ನಮಗೆ ನಿಮ್ಮದೊಂದೇ ಕೆಲಸ ಅಲ್ಲ, ಬೇರೆ ಬಹಳ ಕೆಲಸ ಇರುತ್ತದೆ. ನೀವು ಸುಮ್ಮನೆ ನಾಳೆ ಬನ್ನಿ’ ಎಂದು ಗದರಿಸಿದ. ನಾವಿಬ್ಬರು ಬಾಲ ಸುಟ್ಟ ಬೆಕ್ಕಿನಂತೆ ಮುಂದೆ ಕಟ್ಟಿದ್ದ ಕೈಯನ್ನು ಹಿಂದಕ್ಕೆ ಕಟ್ಟಿ ಅಲ್ಲಿಂದ ಕಾಲ್ತೆಗೆದೆವು.

ಮಾರನೆ ದಿನ ಮತ್ತೆ ಬೆಳಗ್ಗೆ ಎಲ್ಲರಿಗಿಂತ ಮುಂಚೆ ಹಾಜರ್‌. ಎಂದಿನಂತೆ ಎಲ್ಲರೂ ತಡವಾಗಿ ಬಂದರು. ಕೊನೆಯಲ್ಲಿ ಬಂದರು ಯಮ ಕಿಂಕರರು. ನನ್ನ ಸ್ನೇಹಿತ ನನ್ನನ್ನು ಅಲ್ಲೇ ಇರಲು ಹೇಳಿ ಒಳಗೆ ಹೋದ, ಹೋಗಿ 10 ನಿಮಿಷದಲ್ಲಿ ವಾಪಸ್‌ ಗುಮಾಸ್ತನೊಂದಿಗೆ ನಗುತ್ತ ಬಂದ. ನನ್ನನ್ನು ‘ಬಾರೋ’, ಎಂದು ಏನೋ ಸಾಧಿಸಿದವನಂತೆ ಕರೆದ. ‘ನಿನ್ನ ಪತ್ರ ಸಿಕ್ಕಿತೇನೋ’ ಎಂದು ಗಾಬರಿಯಿಂದ ಕೇಳಿದ್ದಕ್ಕೆ ‘ಬಾ ಬಾ ಹೋಗೋಣ’ ಎಂದು ಅಲ್ಲಿ ನಿಂತಿದ್ದ ಗುಮಾಸ್ತನಿಗೆ ‘ಬರ್ತೀನ್‌ ಸಾರ್‌’ ಎಂದು ಜೋರಾಗಿ ಕೈ ತಿರುಗಿಸಿ ಜಗತ್ತನ್ನೆ ಗೆದ್ದವನಂತೆ ದೂರ ದೂರ ಹೆಜ್ಜೆ ಹಾಕಿ ನಾನು ಬರುತ್ತಿದ್ದೇನೊ ಇಲ್ಲವೋ ಎಂಬುದನ್ನು ಗಮನಿಸದೆ ಹೋಗುತ್ತಿದ್ದ. ನಾನು ಓಡಿ ಹೋಗಿ ಅವನನ್ನು ಹಿಡಿದು ಪತ್ರ ಎಂದೆ. ಕೈಯಲ್ಲಿದ್ದ ಪೇಪರ್‌ ತೋರಿಸಿ ‘ಎಂಗೆ’ ಅಂದ. ಹಿಂದಿನ ದಿನ ಮನೆಯಲ್ಲಿ ಅವರ ಅಪ್ಪ ಅವನಿಗೆ ಐವತ್ತು ರೂಪಾಯಿ ಕೊಟ್ಟು ‘ಇದನ್ನು ಮೊದಲು ಗುಮಾಸ್ತನಿಗೆ ಕೊಡು, ನೀನೇನು ಕೇಳದಿದ್ದರೂ ಅವನು ನಿನಗೆ ಪತ್ರ ಕೊಡುತ್ತಾನೆ’ ಎಂದು ಹೇಳಿದ್ದರಂತೆ. ಇವನು ಚಾಚು ತಪ್ಪದೆ ಹಾಗೆ ಮಾಡಿದ್ದ.

ಆ ಪತ್ರವನ್ನು ರಿಜಿಸ್ಟರ್‌ ಮಾಡಿಸಬೇಕಿತ್ತು. ಅದಕ್ಕೆ ನಾವು ಹೋಗಿದ್ದು ರಿಜಿಸ್ಟರ್‌ ಕಛೇರಿಗೆ. ಅಲ್ಲಿ ಇನ್ನೊಂದು ತಿಮಿಂಗಲದ ಗುಂಪು. ‘ಸೈಟ್‌ ಎಲ್ಲಿ ತಗೊಂಡಿರಿ, ಎಷ್ಟು ದುಡ್ಡು ಕೊಟ್ಟಿರಿ’, ಎಂದು ಕೇಳಿದಳು ಅಲ್ಲಿ ಕೂತಿದ್ದ ಹೆಣ್ಣುಮಗಳು. ಪಾಪ ಏನೋ ಆಸೆ ಇಂದ ಕೇಳಿದ್ದಾಳೆ ಎಂದು ನಾವು ಹೇಳಿದೆವು- ಎಲ್ಲಾ ಸೇರಿ ಒಂದು ಲಕ್ಷ ಆಯಿತು ಮೇಡಂ. ಸೈಟ್‌ಗೆ ಆಗಿದ್ದು ಯೇ ಎಪ್ಪತ್ತೈದು ಸಾವಿರ, ಲಂಚ ಹಾಗು ಓಡಾಡಿದ ಖರ್ಚು ಎಲ್ಲಾ ಸೇರಿ ಪೂರ್ತಿ ಒಂದು ಲಕ್ಷ ಆಯಿತು. ಇನ್ನು ರಿಜಿಸ್ಟ್ರೇಶನ್‌ ಬಾಕಿ ಇದೆ ನೋಡಿ ಎಂದೆ. ‘ಸೈಟು ಯಾರದ್ದು, ನಿಮ್ಮದ’ ಎಂದು ಕೇಳಿದಳು. ನಾನು ‘ಇಲ್ಲ ನನ್ನ ಸ್ನೇಹಿತನದು’ ಎಂದು ಅವನ ಕಡೆ ತೋರಿಸಿದೆ. ಅವನನ್ನು ಒಳಗೆ ಕರೆದುಕೊಂಡು ಹೋಗಿ ಏನು ಹೇಳಿದಳೊ, ಮತ್ತೆ ಹರಳೆಣ್ಣೆ ಕುಡಿದವನ ಹಾಗೆ ಮುಖ ಮಾಡಿಕೊಂಡು ಬಂದು ನನ್ನನ್ನು ಕರೆದುಕೊಂಡು ಹೊರಟ. ಮತ್ತೆ ನಾಳೆ ಬರೊಣ ಬಾ ಎಂದಷ್ಟೆ ಹೇಳಿದ. ಮನೆಗೆ ಹೋದಮೇಲೆ ತಿಳಿಯಿತು ಅವಳು ಇವನ ಹತ್ತಿರ ಐದು ಸಾವಿರ ಲಂಚ ಕೇಳಿದ್ದಳು.

ಮತ್ತೆ ಮಾರನೆ ದಿನ ಹೋಗಿ ಅವಳ ಎದುರಿಗೆ ನಿಂತ ತಕ್ಷಣ, ಅವಳೆ ಎದ್ದು ನಮ್ಮನ್ನು ಒಳಗೆ ಕರೆದುಕೊಂಡು ಹೋಗಿ, ಕೂರಿಸಿ, ಕಾಫೀ ತರಿಸಿ, ಕೊಡಿ ಎಂದಳು. ನಮ್ಮ ಹತ್ತಿರ ಮೂರು ಸಾವಿರ ಮಾತ್ರ ಇದೆ, ಅಡ್ಜೆಸ್ಟ್‌ ಮಾಡಿಕೊಳ್ಳಿ ಎಂದು ಬೇಡಿಕೊಳ್ಳುವುದರೊಳಗೆ ಸಾಕು ಸಾಕಾಯಿತು. ಕೊನೆಗೆ ಎಲ್ಲಾ ಮುಗಿಸಿ ಅಲ್ಲಿ ನಮ್ಮ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿದ್ದ ಜವಾನ ನಮ್ಮನ್ನು ಕರೆದ. ನಮ್ಮ ಪತ್ರ ತೆಗೆದು ಹೆಬ್ಬೆಟ್ಟು ಹಿಡಿದುಕೊಂಡ, ಒಮ್ಮೆ ಹಿಚುಕಿ, ಕರಿ ಬಣ್ಣದ ಬಟ್ಟೆಯ ಮೇಲೆ ನಮ್ಮ ಹೆಬ್ಬೆಟ್ಟು ಒತ್ತಿ ನಮ್ಮ ಮುಖ ನೋಡಿದ, ಏನು ಎಂದು ಕೇಳಿದ್ದಕ್ಕೆ ‘ನಮಗೆ ಕೊಡಬೇಕಾದ್ದು’ ಎಂದ. ಎಲ್ಲಾ ಆ ಪಿಶಾಚಿಗೆ ಕೊಟ್ಟಿದ್ದೇನೆ ಎಂದು ಹೇಳಬೇಕೆನಿಸಿದರೂ ತಡೆದುಕೊಂಡು, ‘ನಿಮ್ಮ್‌ ಮೇಡಂ ಗೆ ಕೊಟ್ಟಿದ್ದೀವಿ ಎಂದು ಹೇಳಿದೆವು’, ‘ಅದು ಅವರಿಗೆ, ನನ್ನದು’ ಎಂದು, ಕೊಡದಿದ್ದರೆ ಇನ್ನೇನು ಹೊಡದೇ ಬಿಡುತ್ತಾನೇನೊ ಎಂಬಂತೆ ಗುಡುಗಿದ. ನಾವು ದುಡ್ಡು ತೆಗೆಯುವವರೆಗೂ ನಮ್ಮ ಹೆಬ್ಬೆಟ್ಟನ್ನು ಪತ್ರದ ಮೇಲೆ ಒತ್ತಿರಲೇ ಇಲ್ಲ. ಕೊನೆಗೆ ಅವನಿಗೆ ಅಂತ ಹತ್ತು ರೂಪಾಯಿಯ ನೋಟನ್ನು ಇಟ್ಟ ಮೇಲೆ ಒತ್ತಿದ. ಅವನು ಕುಳಿತಿದ್ದದ್ದು ಅಲ್ಲಿಯ ಮುಖ್ಯಸ್ಥನ ಎದುರು. ಅದನ್ನೆಲ್ಲ ಕಂಡು ಕಾಣದಂತೆ ಕೂತಿದ್ದ ದಪ್ಪ ಹೊಟ್ಟೆಯ ದೊಡ್ಡಪ್ಪ.

ಒಂದು ಸೈಟ್‌ ತೆಗೆದುಕೊಳ್ಳಲು, ಅದೂ ಸರ್ಕಾರಿ ಜಾಗ ಕೊಂಡುಕೊಳ್ಳಲು ಸರ್ಕಾರದವರೇ ಹೀಗೆ ಮಾಡಿದರೆ, ಇನ್ನ್ಯಾರಿಗೆ ಹೋಗಿ ಹೇಳೋಣ. ಆದರೆ ನಮ್ಮ ಸೈಟ್‌ ಕತೆಯ ಅಂತ್ಯ ಸ್ವಲ್ಪ ಸುಖಾಂತ್ಯ ಎನ್ನಬಹುದು. ಎಲ್ಲಾ ಮುಗಿದ ಮೇಲೆ ನಾವು ಕರ್ನಾಟಕ ಗೃಹ ನಿರ್ಮಾಣ ಮಂಡಲಿಗೆ ಹೋದೆವು, ಅಲ್ಲಿ ನಮ್ಮ ಜಿಲ್ಲೆಗೆ ಸಂಬಂದಪಟ್ಟ ಅಧಿಕಾರಿಯನ್ನು ಕಂಡು ಅವರಿಗೆ ನಮ್ಮ ಜೊತೆಗೆ ನಡೆದ ಎಲ್ಲಾ ವಿಚಾರ ತಿಳಿಸಿದ ಒಂದು ತಿಂಗಳಿಗೆ ನಮ್ಮ ಜಿಲ್ಲೆಯಲ್ಲಿದ್ದ ಯಮಕಿಂಕರರಿಗೆ ಶಿಕ್ಷೆಯ ವರ್ಗಾವಣೆಯಂತೆ ಬೆಳಗಾಂಗೆ ವರ್ಗ ಮಾಡಿದರು. ಅಲ್ಲಿಯ ಅವರ ಪೈಶಾಚಿಕೆ ತಿಳಿಯಲಿಲ್ಲ. ಆದರೆ ನಮ್ಮ ದೂರನ್ನು ಪರಿಶೀಲಿಸಿ ಅದಕ್ಕೆ ತಕ್ಕ ಮಟ್ಟಿನ ನ್ಯಾಯ ಒದಗಿಸಿದ ಅಧಿಕಾರಿಯಾದ ಗೃಹ ಮಂಡಲಿಯ ಅಧಿಕಾರಿಯನ್ನು ನೋಡಿ ಕೆಸರ ಮಧ್ಯದಲ್ಲಿ ಕಮಲದ ನೆನಪಾಯಿತು. ಗೃಹ ಮಂಡಲಿಯ ನ್ಯಾಯ ಸಿಕ್ಕಿತು, ಆದರೆ ತಾಲ್ಲೂಕು ರಿಜಿಷ್ಟ್ರೇಶನ್‌ ಕಚೇರಿಯ ಹೊಲಸು ತೆಗೆಯುವ ಮಾರ್ಗ ತಿಳಿಯಲಿಲ್ಲ. ಏಕೆಂದರೆ ಅದನ್ನು ನೋಡಿಕೊಳ್ಳುವ ಉಸ್ತುವಾರಿ ಅಲ್ಲಿಯ ಎಮ್‌ ಎಲ್‌ ಎ ಹತ್ತಿರ ಇದೆ. ಆ ಮನುಷ್ಯನಿಗಿಂತ ಪಿಶಾಚಿ ಹೆಂಗಸೆ ಎಷ್ಟೋ ವಾಸಿ ಎನ್ನುವಂತೆ ಇದ್ದ ಅಲ್ಲಿಯ ಎಮ್‌ ಎಲ್‌ ಎ. ಆದುದರಿಂದ ಆ ಹೆಂಗಸಿನ ಬಗ್ಗೆ ದೂರು ಕೊಡಲು ಆಗಲಿಲ್ಲ. ಅಲ್ಲಿಯ ಲಂಚದ ಕರ್ಮ ಕಾಂಡ ಇನ್ನೂ ಹಾಗೇ ನಡೆಯುತ್ತಿದೆ.

ಭಾರತದಲ್ಲಿ ಲಂಚಗುಳಿತನ ಎಲ್ಲಿಯ ತನಕ ಹೋಗುವುದಿಲ್ಲವೋ ಅಲ್ಲಿಯ ತನಕ ದೇಶವೂ ಮುಂದಕ್ಕೆ ಹೋಗುವುದಿಲ್ಲ. ಲಂಚದ ಬಗ್ಗೆ ಅಲ್ಲಲ್ಲಿ ಕೆಲವು ಹೊರಾಟ, ಹಾರಾಟಗಳು ಆಗುತ್ತಿರುತ್ತವೆ, ಅದು ರಾಜಕೀಯದವರದ್ದಾಗಿದ್ದರೆ ಅವರಿಗೂ ಲಂಚ ಕೂಟ್ಟ ತಕ್ಷಣ ಸುಮ್ಮನಾಗಿಸುತ್ತಾರೆ. ಕೆಲವರು ಗಿರೀಶ್‌ ತರದವರು ಉಗ್ರ ಹೆಜ್ಜೆ ಇಡುತ್ತಾರೆ. ರವಿ ಬೆಳೆಗೆರೆ, ವಿಶ್ವೇಶ್ವರ ಭಟ್‌, ಗೌರಿ ಲಂಕೇಶ್‌ ತರದವರು ಪತ್ರಿಕೆಯ ಮೂಲಕ ಹೋರಾಡುತ್ತಾರೆ, ಹಿರಣ್ಣಯ್ಯರಂತವರು ನಾಟಕ ಮಾಡಿ ಹೋರಾಡುತ್ತಾರೆ. ಯಾರು ರಾಜಕೀಯದಿಂದ ಹೊರಗಿದ್ದು ಅದರ ಹೋರಾಟ ನಡೆಸುತ್ತಾರೂ ಅವರು ಮಾತ್ರ ಇದುವರೆಗು ಶುದ್ಧರಾಗಿಯೇ ಇದ್ದಾರೆ. ಲಂಚದ ಬಗ್ಗೆ ಹೋರಾಟ ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ಹೋರಾಟ ಮಾಡುವ ಸ್ಥೈರ್ಯ ಇಲ್ಲದಿದ್ದರೆ ಅವರಿಗೆ ಬೆಂಬಲವಾದರೂ ಕೊಡಬೇಕಾಗಿದೆ. ನಿಮ್ಮ ಗಡ್ಡಕ್ಕೆ ಬೆಂಕಿ ಬೀಳುವವರೆಗೂ ನೀರಿಗಾಗಿ ಯೋಚಿಸದಿರುವುದು ಮೂರ್ಖತನ ಅನ್ನಿಸುವುದಿಲ್ಲವೆ?

ಪೂರಕ ಓದಿಗೆ-

ಬೇಕು, ಮುಚ್ಚು ಮರೆಯಿಲ್ಲದ ಸ್ವಚ್ಛ ರಾಜಕೀಯ !

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X