ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತ್ಯಕ್ಷ ವರದಿ: ಅಮೆರಿಕಾದಲ್ಲೊಂದು ದನದ ಜಾತ್ರೆ!

By Staff
|
Google Oneindia Kannada News

ಆದರೆ ಈ ವಾರಾಂತ್ಯಕ್ಕೂ ಮತ್ತೊಂದು ಸಲಹೆಯನ್ನು ತೆಗೆದುಕೊಂಡು ಬಂದರು. ಕಾನ್‌ಸಾಸ್‌ ಪಟ್ಟಣದಿಂದ ಕೊಂಚ ದೂರದಲ್ಲಿ ದನಗಳನ್ನು ರಸ್ತೆಗಳಲ್ಲಿ ಓಡಿಸಿಕೊಂಡು ಹೋಗುತ್ತಾರೆಂದೂ, ಅದನ್ನು ನಾನು ತಪ್ಪಿಸಿಕೊಳ್ಳಬಾರದೆಂದು ಹೇಳಿ, ಹೋಗುವುದಕ್ಕೆ ಎಲ್ಲಾ ಮಾರ್ಗದರ್ಶನಗಳನ್ನು ಕೊಟ್ಟರು. ಈ ಬಾರಿ ಮತ್ತೆ ಹೋಗದಿದ್ದರೆ ಮನಸ್ಸಿಗೆಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಎಂಬ ಅಂಜಿಕೆಯಲ್ಲಿಯೇ ಅಲ್ಲಿಗೆ ಹೋದೆ. ಹೆಂಗಸರು, ಮಕ್ಕಳು, ಮರಿಗಳು, ಮುದುಕರು, ಯುವಕರು ಎಲ್ಲರೂ ಉತ್ಸಾಹದಿಂದ ಅಲ್ಲಿ ಸೇರಿದ್ದರು. ಬಗೆ ಬಗೆಯ ಉಡುಪುಗಳನ್ನು ಧರಿಸಿದ್ದರು. ತಲೆಗೆ ತರಹೇವಾರಿ ಟೊಪ್ಪಿಗೆಗಳನ್ನು ಹಾಕಿಕೊಂಡು ಕೌ ಬಾಯ್‌ ಎನ್ನುವಂತೆ ನಡೆದುಕೊಳ್ಳುತ್ತಿದ್ದರು.

ರಸ್ತೆಯಲ್ಲಿ ಓಡಿಸಿಕೊಂಡು ಹೋಗಬೇಕಾದ ದನಗಳನ್ನು ಅಲ್ಲಿಯೇ ಒಂದು ಕೃತಕ ದೊಡ್ಡಿಯನ್ನು ನಿರ್ಮಿಸಿ ಅದರೊಳಗೆ ಬಂಧಿಸಿದ್ದರು. ಅವುಗಳ ಸುತ್ತಲೂ ಜನರು ತಮ್ಮ ಮಕ್ಕಳ ಜೊತೆ ನಿಂತಿದ್ದರು. ಕ್ಯಾಮೆರಾಗಳಿಂದ ಅವುಗಳ ಫೋಟೋಗಳನ್ನು ತೆಗೆದುಕೊಂಡರು. ಮಕ್ಕಳ ಕೈಯಲ್ಲಿ ಹಸುಗಳನ್ನು ಮೃದುವಾಗಿ ಮುಟ್ಟಿಸಿದರು. ಆ ಮೃದುತ್ವಕ್ಕೆ ಪುಳಕಗೊಂಡ ಮಕ್ಕಳು ಖುಷಿಯಿಂದ ಕೇಕೆ ಹಾಕುತ್ತಿದ್ದರು. ಹಿರಿಯರೂ ಅವುಗಳನ್ನು ಮುಟ್ಟಿ ಹಿಗ್ಗಿದರು. ಆ ದನಗಳು ತಮ್ಮ ಸಗಣಿ, ಗಂಜಲಗಳಿಂದ ಆ ಜಾಗವನ್ನೆಲ್ಲಾ ಗಬ್ಬೆಬ್ಬಿಸಿದ್ದವು. ಕೆಲವರು ಆ ಗಲೀಜನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದರು! ಅಷ್ಟೊಂದು ಜನಸಂದಣಿಯನ್ನು ಕಂಡರಿಯದ ದನಗಳು ಕಕ್ಕಾಬಿಕ್ಕಿಯಾಗಿದ್ದವು.

ದೂರದರ್ಶನ, ರೇಡಿಯೋ, ವಾರ್ತಾ ಪತ್ರಿಕೆ, ಇಂಟರ್‌ನೆಟ್‌ ಪತ್ರಿಕೆಯ ಪ್ರತಿನಿಧಿಗಳೆಲ್ಲಾ ಬಂದಿದ್ದರು. ನಿರಂತರವಾಗಿ ಅಲ್ಲಿ ನಡೆಯುತ್ತಿರುವ ವರದಿಯನ್ನು ಬಿತ್ತರಿಸುತ್ತಿದ್ದರು. ಜನರೆಲ್ಲಾ ಪುಟ್ಟ ರೇಡಿಯೋಗಳನ್ನು ತಮ್ಮ ಕಿವಿಗೆ ಇಟ್ಟುಕೊಂಡು ಆ ವರದಿಯನ್ನು ಆಲಿಸುತ್ತಿದ್ದರು. ಮನೆಯಿಂದ ಪುಟ್ಟ ಪುಟ್ಟ ಕುರ್ಚಿಗಳನ್ನು ತಂದುಕೊಂಡು ಅದನ್ನು ಹಾಕಿಕೊಂಡು ರಸ್ತೆಯುದ್ದಕ್ಕೂಕುಳಿತಿದ್ದರು. ಆ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನೂರಾರು ಪೊಲೀಸರು ಮೈಕೈಗೆಲ್ಲಾ ಬಂದೂಕುಗಳನ್ನು ವಾಕಿಟಾಕಿಗಳನ್ನು ಸಿಗಿಸಿಕೊಂಡು ಸಿದ್ಧವಾಗಿದ್ದರು. ರಸ್ತೆಯ ಎರಡೂ ಬದಿ ಹಗ್ಗವನ್ನು ಹಾಕಿ, ಅದನ್ನು ದಾಟಿ ಜನರು ಬರಬಾರದೆಂದು ಹೇಳುತ್ತಿದ್ದರು.

ಒಂದಿಪ್ಪತ್ತು ಮಂದಿ ತಮ್ಮ ಕುದುರೆಯ ಮೇಲೆ ಬಂದಿದ್ದರು. ಅವರೇ ಆ ದನಗಳನ್ನು ಓಡಿಸಿಕೊಂಡು ಹೋಗುತ್ತಾರೆಂದು ಗೊತ್ತಾಯಿತು. ಹವ್ಯಾಸಿ ಕುದುರೆ ಸವಾರರು, ಹಳ್ಳಿಗರು, ಸೆಲೆಬ್ರಿಟಿಗಳು ಎಲ್ಲರೂ ಕುದುರೆಯನ್ನೇರಿದ್ದರು. ಕುದುರೆ ನಡೆಸಲು ಗೊತ್ತಿಲ್ಲದವರಿಗಾಗಿ ಸಾರೋಟುಗಳು ಸಿದ್ಧವಾಗಿದ್ದವು. ಕೆಲವರು ತಮ್ಮ ಹಳೆಯ ಕಾಲದ ಪುಟ್ಟ ಕಾರಿನಲ್ಲಿ ದನಗಳನ್ನು ಹಿಂಬಾಲಿಸಲು ಸಿದ್ಧರಿದ್ದರು.

ಸರಿಯಾಗಿ ಹನ್ನೊಂದಕ್ಕೆ ಎಲ್ಲರೂ ತಯಾರಾಗಿ ರೆಡಿ, ಸ್ಟೆಡಿ, ಗೋ ಎಂದು ಕಿರುಚಿ ಕೃತಕ ದೊಡ್ಡಿಯ ಬಾಗಿಲನ್ನು ತೆರೆದರು. ಆದರೆ ದನಗಳಿಗೆ ಅದೇನು ಮಾಡಬೇಕೋ ತೋಚದಂತಾಗಿದ್ದರಿಂದ ಅಲ್ಲಿಂದ ಹೊರ ಬರದೆ ನೆಮ್ಮದಿಯಾಗಿ ಸೆಗಣಿ, ಗಂಜಲಗಳನ್ನು ಹಾಕುತ್ತಾ ನಿಂತ ಜಾಗದಲ್ಲಿಯೇ ನಿಂತುಬಿಟ್ಟವು.

ಜನರಿಗೂ ಏನು ಮಾಡಬೇಕೆಂದು ತೋಚದಂತಾಯ್ತು. ಮತ್ತೊಮ್ಮೆ ಗೋ ಎಂದು ಕಿರುಚಿದರು. ಊಹೂ! ಅವು ಜಪ್ಪಯ್ಯ ಎಂದರೂ ಕದಲಲಿಲ್ಲ. ಹಾಗೇ ಐದು ನಿಮಿಷ ಕಳೆಯಿತು. ಕಡೆಗೆ ಡ್ರಂ ಒಂದನ್ನು ತೆಗೆದುಕೊಂಡು ಬಂದಿದ್ದ ವಾದ್ಯಗಾರನೊಬ್ಬ ದೊಡ್ಡಿಯ ಹಿಂಭಾಗಕ್ಕೆ ಹೋಗಿ ದಬದಬನೆ ಡ್ರಂ ಬಾರಿಸಿಬಿಟ್ಟ. ದಿಗಿಲುಗೊಂಡ ದನಗಳು ಒಂದೊಂದಾಗಿ ದೊಡ್ಡಿಯನ್ನು ಬಿಟ್ಟು ಹೊರಬಂದವು. ದನಗಳೆಲ್ಲಾ ರಸ್ತೆಗೆ ಬರಲಾರಂಭಿಸಿದ್ದು ನೋಡಿ ಜನರೆಲ್ಲಾ ಕೇಕೆ ಹಾಕಿ, ಚಪ್ಪಾಳೆ ತಟ್ಟಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಮುಂದೆ ಹತ್ತು ಕುದುರೆ ಸವಾರರು, ಅವರ ಹಿಂದೆ ನೂರು ದನಗಳು, ಅವುಗಳ ಹಿಂದೆ ಮತ್ತೊಂದಿಷ್ಟು ಕುದುರೆ ಸವಾರರು, ಸಾರೋಟುಗಳು ಹೊರಟವು. ಮದುವೆಯ ಮೆರವಣಿಗೆಯ ರೀತಿಯಲ್ಲಿ ಪೇರಿ ಹೊರಟಿತು. ನನಗೋ ನಿರಾಸೆಯಾಯ್ತು. ಅವುಗಳನ್ನು ಓಡಿಸಿಕೊಂಡು ಹೋಗಲ್ವಾ? ಎಂದು ಅಲ್ಲಿದ್ದವನೊಬ್ಬನನ್ನು ಕೇಳಿದೆ. ನನ್ನ ದುರಾದಷ್ಟಕ್ಕೆ ಅವನು ಸಾಕುಪ್ರಾಣಿಗಳ ಅಭಿವೃದ್ಧಿಯ ಸಂಘಕ್ಕೆ ಸೇರಿದವನು. ಅವುಗಳನ್ನು ಹಾಗೆ ಓಡಿಸುವುದು ಮೃಗೀಯ ಪ್ರವೃತ್ತಿ. ಪ್ರೀತಿಯಿಂದ ನಡೆಸಿಕೊಂಡು ಹೋಗುವದಷ್ಟೇ ಈ ಕಾರ್ಯಕ್ರಮದ ಉದ್ದೇಶ ಎಂದು ನನ್ನನ್ನು ದುರುಗುಟ್ಟಿಕೊಂಡು ನೋಡಿದ. ತೆಪ್ಪಗೆ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಪೇರಿ ಹೊರಟಲ್ಲೆಲ್ಲಾ ಜನರು ಸಂತೋಷದಿಂದ ದನಗಳ ಕಡೆಗೆ ಕೈಯಾಡಿಸಿದರು. ಮಕ್ಕಳನ್ನು ಹೆಗಲ ಮೇಲೆ ಕೂಡಿಸಿಕೊಂಡು ದನಗಳನ್ನು ತೋರಿಸಿದರು. ಮೊಬೈಲ್‌ ಫೋನಿನ ಕ್ಯಾಮೆರಾದಲ್ಲಿ ದನಗಳನ್ನು ಸೆರೆ ಹಿಡಿದು ತಮ್ಮ ಪ್ರಿಯರಿಗೆ ರವಾನಿಸಿ, ವರದಿಯನ್ನು ಕೊಟ್ಟರು. ವೀಡಿಯೋ ಕ್ಯಾಮೆರಾಗಳಲ್ಲಿ ಪೇರಿಯನ್ನು ಸೆರೆ ಹಿಡಿದರು. ವಾದ್ಯಗಾರರು ಖುಷಿಯಿಂದ ಬ್ಯಾಂಡ್‌ ಬಾರಿಸಿದರು. ಛದ್ಮವೇಷಗಳನ್ನು ಧರಿಸಿದವರು ಕುಣಿಯುತ್ತಾ ಪೇರಿಯ ಜೊತೆ ಸಾಗಿದರು. ಪೇರಿಯ ಹಿಂದಕ್ಕೆ ಸೊಗಸಾಗಿ ಬಟ್ಟೆಗಳನ್ನು ಧರಿಸಿದ್ದ ಮಕ್ಕಳು ಪುಟ್ಟ ಪುಟ್ಟ ರಥಗಳಲ್ಲಿ ತಮ್ಮ ಗೊಂಬೆಗಳನ್ನು ಮಲಗಿಸಿಕೊಂಡು, ಅವನ್ನು ಎಳೆಯುತ್ತಾ ಸಾಗುತ್ತಿದ್ದರು. ಹಾಗೆ ಸಾಗುವಾಗ ಚಾಕೊಲೇಟ್‌, ಪೆಪ್ಪರಮೆಂಟ್‌ಗಳನ್ನು ದಾರಿಯುದ್ದಕ್ಕೂ ತೂರುತ್ತಾ ಸಾಗಿದರು. ಪ್ರೇಕ್ಷಕರಲ್ಲಿದ್ದ ಮಕ್ಕಳು, ದೊಡ್ಡವರು ಎಲ್ಲರೂ ಕೈಗೆ ಚಿಕ್ಕ ಚಾಕೊಲೇಟ್‌ಗಳನ್ನು ಬಾಚಿಕೊಂಡರು. ತಮ್ಮ ಮಕ್ಕಳಿಗೆ ಆರಿಸಿಕೊಟ್ಟರು. ಪೇರಿ ಮುಂದೆ ಸಾಗಿದ ಕೆಲವೇ ಕ್ಷಣಗಳಲ್ಲಿ ಸುಸಜ್ಜಿತವಾದ ರಸ್ತೆ ಸ್ವಚ್ಛಗೊಳಿಸುವ ಯಂತ್ರವೊಂದು ಬಂದು ಸೆಗಣಿ, ಗಂಜಲಗಳನ್ನೆಲ್ಲಾ ನಿಮಿಷಾರ್ಧದಲ್ಲಿ ತೊಳೆದು ಸ್ವಚ್ಛ ಮಾಡಿಬಿಟ್ಟಿತು.

ಪೇರಿ ರಸ್ತೆಯ ಆ ಕೊನೆಗೆ ಮುಗಿಯಿತು. ಜನರೆಲ್ಲಾ ಮತ್ತೊಮ್ಮೆ ಚಪ್ಪಾಳೆ ತಟ್ಟಿ ಮತ್ತೊಮ್ಮೆ ಹರ್ಷವನ್ನು ವ್ಯಕ್ತಪಡಿಸಿದರು. ಈಗ ದನಗಳನ್ನೆಲ್ಲಾ ದೊಡ್ಡ ದೊಡ್ಡ ಲಾರಿಗೆ ತುಂಬಿದರು. ಲಾರಿಗಳು ಯಾವುದೋ ದಿಕ್ಕಿನಲ್ಲಿ ಹೊರಟು ಮಾಯವಾದವು. ಕುದುರೆ ಸವಾರಿ ಮಾಡಿದವರೆಲ್ಲಾ ತಮ್ಮ ಕಾರಿನ ಕೀಲಿಗಳನ್ನು ಹೊರತೆಗೆದು ಪಾರ್ಕಿಂಗ್‌ ಕಡೆಗೆ ಹೊರಟರು.

ಈ ಹೊತ್ತಿಗಾಗಲೇ ಊಟದ ಹೊತ್ತಾಗಿತ್ತು. ಅಲ್ಲಿಯೇ ಮೈದಾನದಲ್ಲಿ ಊಟ ಕೊಡುವ ಸ್ಟಾಲ್‌ಗಳು ತೆರೆದುಕೊಂಡಿದ್ದವು. ಜನರೆಲ್ಲಾ ಅಲ್ಲಿಗೆ ನುಗ್ಗಿದರು. ಪ್ರತಿಯಾಂದು ಸ್ಟಾಲ್‌ನ ಮುಂದೂ ದೊಡ್ಡ ಕ್ಯೂ ಇತ್ತು. ಹದಿನೈದು ಸಾವಿರ ಜನರ ಊಟವೆಂದರೆ ತಮಾಷೆಯೆ? ನಾನು ಒಂದು ಕ್ಯೂನಲ್ಲಿ ನಿಂತುಕೊಂಡೆ. ಎಷ್ಟೆ ೕ ಚಿಕ್ಕ ಕ್ಯೂ ಹುಡುಕಿ ನಿಂತರೂ ನನ್ನ ಸರದಿ ಬಂದಾಗ ಅರ್ಧ ಗಂಟೆಯಾಯ್ತು. ಏನಾದರೂ ವೆಜಿಟೇರಿಯನ್‌ ಇದ್ದರೆ ಕೊಡಪ್ಪ ಎಂದು ಯಥಾ ಪ್ರಕಾರ ಅಲವತ್ತುಕೊಂಡೆ.

ಅಂಗಡಿಯವ ನಕ್ಕುಬಿಟ್ಟ. ಈವತ್ತು ದನಗಳನ್ನು ಓಡಿಸಿಕೊಂಡು ಬಂದಿದ್ದೇವೆ. ದನದ ಮಾಂಸದ ಹೊರತಾಗಿ ಬೇರೇನೂ ಇಲ್ಲ ಎಂದ. ಇಲ್ಲಿರೋ ಇಷ್ಟೂ ಜನ ದನದ ಮಾಂಸ ತಿನ್ನುತ್ತಿದ್ದಾರಾ? ಎಂದೆ. ಮತ್ತೆ , ಕ್ರಿಸ್‌ಮಸ್‌ ಹಬ್ಬದ ಕೇಕಿನಂತೆ ಈವತ್ತು ದನದ ಮಾಂಸ ಎಂದು ಹೇಳಿದ. ನಿನಗೇನು ಕೊಡಲಿ? ಎಂದು ಕೇಳಿದ. ಏನೂ ಬೇಡ ಎಂದು ಹೇಳಿ ನಕ್ಕು ಮೈದಾನದಿಂದ ಹೊರಬಂದೆ.

ರಸ್ತೆಯಲ್ಲಿ ನಿಂತು ಒಮ್ಮೆ ಜನರ ಗುಂಪಿನತ್ತ ಕಣ್ಣಾಡಿಸಿದೆ. ಎಲ್ಲರೂ ಸಂತೋಷದಿಂದ ತಿನ್ನುತ್ತಿದ್ದರು. ಏನಿಲ್ಲವೆಂದರೂ ನೂರಾರು ದನಗಳ ಆಹುತಿಯಾಗಿರಬಹುದಲ್ಲವೆ ಎಂದೆನ್ನಿಸಿ ಮೈ ಜುಂ ಅಂತು. ಹಾಗೆಲ್ಲಾ ಮತ್ತೊಬ್ಬರ ಆಹಾರ ಕ್ರಮದ ಬಗ್ಗೆ ವಕ್ರವಾಗಿ ಆಲೋಚಿಸಬಾರದು ಎಂದು ಮನಸ್ಸಿನಲ್ಲಿ ತಿದ್ದಿಕೊಂಡು, ಶಾಖಾಹಾರವನ್ನು ಹುಡುಕಿಕೊಂಡು ಹೊರಟೆ.

(ಸ್ನೇಹಸೇತು: ವಿಜಯ ಕರ್ನಾಟಕ)

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X