ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇತಾತ್ಮಗಳ ಹಬ್ಬ : ಎಲ್ಲವೂ ಪ್ರೇತಗಳಿಗಾಗಿ !

By Staff
|
Google Oneindia Kannada News

ಪ್ರೇತಾತ್ಮಗಳ ಹಬ್ಬವು ಬುದ್ಧನ ಅನುಯಾಯಿ ಮುಲಿಯಾನ್‌ ಎಂಬ ಶಿಷ್ಯನಿಂದ ಪ್ರಾರಂಭವಾಯಿತು ಎಂದು ಪ್ರತೀತಿ. ಗೌತಮ ಬುದ್ಧನ ಶಿಷ್ಯ ಮು ಲಿಯನ್‌ ಎಂಬ ಸನ್ಯಾಸಿಯ ತಾಯಿ ಪಾಪಕರ್ಮಗಳನ್ನು ಮಾಡಿ ನರಕದಲ್ಲಿ ಬಿದ್ದು ಪ್ರೇತವಾಗಿ ಹಸಿವಿನಿಂದ ಅಲೆಯುತ್ತಿದ್ದಳು. ಇದನ್ನು ಅರಿತ ಮು ಲಿಯಾನ್‌ ತಾಯಿಯ ಪ್ರೇತಕ್ಕೆ ಅನ್ನ ನೀರು ತೆಗೆದುಕೊಂಡು ಹೋದನು. ಅದು ಅವಳ ಕೈಗೆ ಬೀಳುವಷ್ಟರಲ್ಲಿ ಬೆಂಕಿಗೆ ಬಿದ್ದು ಆಹುತಿಯಾಯಿತು. ನಿರಾಶೆಗೊಂಡ ಮು ಬುದ್ಧನ ಮೊರೆಹೊಕ್ಕನು. ತಾಯಿಯ ಆತ್ಮಕ್ಕೆ ಮುಕ್ತಿಯನ್ನೀಯುವ ಪ್ರಯತ್ನ, ಉದ್ದೇಶವನ್ನು ಅರಿತ ಬುದ್ಧ ಚಾಂದ್ರಮಾಸದ ಏಳನೆಯ ತಿಂಗಳ ಹದಿನೈದನೇ ದಿನ ಶ್ರದ್ಧೆಯಿಂದ ಅಡಿಗೆ ಮಾಡಿ ತಾಯಿಯ ಆತ್ಮಕ್ಕೆ ಊಟವನ್ನು ನೀಡೆಂದು ಆದೇಶವನ್ನಿತ್ತ. ಮು ಲಿಯಾನಿನ ಪ್ರಯತ್ನ, ಉದ್ದೇಶ, ತಾಯಿಯ ಬಗ್ಗೆ ಇದ್ದ ಕಳಕಳಿಯನ್ನು ಅರಿತ ದೇವರು ಪ್ರೀತರಾಗಿ ಮೌ ಲಿಯಾನ್‌ ತಾಯಿಗೆ ಪ್ರೇತರೂಪದಿಂದ ಮುಕ್ತಿಯನಿತ್ತರು. ಅಂದಿನಿಂದ ಈ ಹಬ್ಬ ಸತ್ತವರ ಆತ್ಮ ಶಾಂತಿ ಮತ್ತು ತೃಪ್ತಿಗಾಗಿ. ಈ ನಂಬಿಕೆ ಹೆಚ್ಚಾಗಿ ಚೀನಿಯರಲ್ಲಿ ಬಲವೂರಿದೆ.

ಪ್ರತಿ ವರುಷ ಚಾಂದ್ರಮಾನದ ಏಳನೆಯ ತಿಂಗಳ ಮೊದಲ ದಿನ ನರಕದ ಬಾಗಿಲು ಪ್ರೇತಾತ್ಮಗಳಿಗಾಗಿ ತೆರೆಯಲ್ಪಡುತ್ತದೆ. ಹಸಿದು, ಕಂಗಾಲಾಗಿ ಅಲೆದಾಡುವ ಪ್ರೇತಾತ್ಮಗಳು ಒಂದು ತಿಂಗಳು ಭೂಲೋಕದಲ್ಲಿ ತಂಗಿದ್ದು ಮತ್ತೆ ನರಕಕ್ಕೆ ಹೋಗುತ್ತವೆ. ಹದಿನೈದನೆಯ ದಿನ ಇವುಗಳಿಗಾಗಿ Hungry GhOst Festival ಆಚರಿಸಲಾಗುತ್ತದೆ. ಸಿಂಗಪುರ, ಚೀನ, ಮಲೇಷಿಯಾ, ಹಾಂಕ್‌ಕಾಂಗ್‌, ಕಾಂಬೋಡಿಯಾ, ಮತ್ತು ಲಾವೋ ದೇಶಗಳಲ್ಲಿ ಈ ಆಚರಣೆ ನಡೆಯುತ್ತದೆ.

Hungry Ghost Festival in South East Asiaಭೂತಗಳಿಗಾಗೇ ಮೀಸಲಾದ ಈ ತಿಂಗಳಿನಲ್ಲಿ ಸಂಜೆಯ ವೇಳೆ ಮನೆಯ ಮುಂದೆ ಮೇಣದಬತ್ತಿ ದೀಪ, ಅಗರ್‌ಬತ್ತಿ ಹಚ್ಚಿಡುತ್ತಾರೆ. ಮನೆ ಮತ್ತು ಅಂಗಡಿಗಳ ಆವರಣದಲ್ಲಿ ದೊಡ್ಡ ತಪ್ಪಲೆಯಾಕಾರದಲ್ಲಿ ಸಿಗುವ ಕೆಂಪು ಡಬ್ಬಿಯನ್ನಿಟ್ಟು ಈ ಹಬ್ಬಕ್ಕಾಗೇ ಸಿಗುವ ನಕಲಿ ಹಣ Hell Notes, ಬಟ್ಟೆ, ಕಾಗದದಿಂದ ಮಾಡಿದ ಟಿ.ವಿ, ರೇಡಿಯೋ, ಶೂ ಮತ್ತು ಚಪ್ಪಲಿಗಳು, ಮನೆ ಮತ್ತು ಪಾಸ್‌ಪೋರ್ಟ್‌ ಇವೆಲ್ಲವನ್ನೂ ಬೆಂಕಿಗೆ ಹಾಕುತ್ತಾರೆ. ಆವಿಯಾಗಿ ಹೊಗೆಯ ರೂಪದಲ್ಲಿ ಇವು ಪ್ರೇತಗಳಿಗೆ ಸೇರುತ್ತದೆಯಂತೆ. ಆಸೆಯೆಂಬ ಭೂತ ಭೂತಗಳನ್ನೂ ಬಿಡುವುದಿಲ್ಲ? ಇವೆಲ್ಲವನ್ನೂ ಪಡೆದು ತೃಪ್ತಿ ಹೊಂದಿದ ಆತ್ಮಗಳು ತೊಂದರೆ ಕೊಡದೆ ಅದೃಷ್ಟವ ಕೊಟ್ಟು ಹರಸುವುದೆಂದು ಚೀನಿಯರ ನಂಬಿಕೆ.

ಹಸಿದ ಆತ್ಮಗಳಿಗಾಗಿ ಕಿತ್ತಳೆ, ಬಾಳೆ, ಕೇಕ್‌, ಅನ್ನ ಇವುಗಳನ್ನು ಅಂಗಳದಲ್ಲಿ ಇಡುತ್ತಾರೆ. ಪಾಪ, ದಿಕ್ಕಿಲ್ಲದೆ ಅಲೆದಾಡುವ ಆತ್ಮಗಳಿಗಾಗಿ ಕೂಡ ಹಣ್ಣು, ಕೇಕ್‌ಗಳನ್ನು ರಸ್ತೆಗಳ ಬದಿಯಲ್ಲಿ ಕಾಣಬಹುದು. ಹದಿನೈದನೆಯ ದಿನ ಪ್ರೇತಾತ್ಮಗಳಿಗಾಗಿ ಮೃಷ್ಟಾನ್ನ ಭೋಜನ ತಯಾರಿಸಿ ಮನೆಯವರೆಲ್ಲಾ ಸೇರಿ ಒಟ್ಟಾಗಿ ಉಂಡು ಆತ್ಮಗಳನ್ನು ತೊಂದರೆ ಕೊಡಬೇಡಿರೆಂದು ಕೇಳಿಕೊಳ್ಳುತ್ತಾರೆ.

ಈ ಸಮಯ ಚೀನಿಯರ ಸಂಗೀತ ಪ್ರಧಾನ ನಾಟಕಗಳು wayang operaಗಳು, ಆಡಂಬರದ ಊಟ ಕೂಟಗಳೂ, ದಾನ ಧರ್ಮಗಳೂ ಜೋರು. ಇದೇ ಅಲ್ಲದೆ ಮದ್ಯ, ದೇವರ ವಿಗ್ರಹಗಳು, ಇದ್ದಿಲು Black Goldಗಳ ಹರಾಜುಗಳು ಜೋರಾಗಿ ನಡೆಯುತ್ತದೆ. ಒಪೇರಾಗಳಲ್ಲಿ ಮುಂದಿನ ಸಾಲಿನ ಹಲವು ಕುರ್ಚಿಗಳನ್ನು ಆತ್ಮಗಳಿಗಾಗಿ ಖಾಲಿ ಬಿಡುತ್ತಾರೆ. ಈಜುವುದು, ಹೊರದೇಶಗಳಿಗೆ ಪ್ರಯಾಣ, ಶುಭಕಾರ್ಯ, ಮನೆ ಖರೀದಿ ಎಲ್ಲವೂ ನಿಷಿದ್ಧ. ಸಂಜೆಯ ವೇಳೆ ಮಕ್ಕಳನ್ನು ಹೆಚ್ಚಾಗಿ ಅಲೆಯಲು ಬಿಡುವುದಿಲ್ಲ. ಭೂತ ಕರೆದುಕೊಂಡು ಹೋಗುತ್ತದೆ ಎಂಬ ನಂಬಿಕೆ. ಇನ್ನೂ ಹಲವರು ಸ್ಮಶಾನಗಳಿಗೆ ಹೋಗಿ ನಮನ ಸಲ್ಲಿಸುತ್ತಾರೆ.

Hungry Ghost Festival in South East Asiaಈ ಭೂತಗಳನ್ನು ತೃಪ್ತಿಗೊಳಿಸಿದರೆ ಅದೃಷ್ಟ ಬರುತ್ತದೆಂದು ನಂಬಿಕೆ. ಹಿಂದಿನ ಕಾಲದಲ್ಲಿ ಹೊಸ ಬೆಳೆಯನ್ನು ಅರ್ಪಿಸುತ್ತಿದ್ದರಂತೆ. ಪುನರ್ಜನ್ಮದಲ್ಲಿ ನಂಬಿಕೆ, ಚಾಂದ್ರಮಾನ ಪರಿಪಾಲಿಸುವಿಕೆ, ಕೈಮುಗಿದು, ಅಡ್ಡ ಬಿದ್ದು ದೇವರಿಗೆ ನಮಸ್ಕರಿಸುವ ರೀತಿ, ಅಗರ್‌ಬತ್ತಿಗಳನ್ನು ಹಚ್ಚುವುದು, ಮಂತ್ರ ಪಠಣದಂತೆ ಬೌದ್ಧ ಚರಿತೆ, ನಾಮಗಳನ್ನು ಹೇಳುವುದು ಇವು ಹಿಂದೂ ಮತ್ತು ಬೌದ್ಧರ ಸಾಮ್ಯತೆಯ ಅರಿವಿಕೆಯನ್ನು ತಿಳಿಯುತ್ತದೆ.

ತುಳು ನಾಡಿನಲ್ಲಿ ಭೂತಾರಾಧನೆ, ಆತ್ಮ-ಶಾಂತಿ ಪೂಜೆ, ಅಮಾವಾಸ್ಯೆಗಳಲ್ಲಿ ನೀಡುವ ತರ್ಪಣ, ಶ್ರಾದ್ಧ, ಪಿತೃಪಕ್ಷದಲ್ಲಿ (ಮಹಾಲಯ) ಇಡುವ ಎಡೆ ಇವೆಲ್ಲವೂ ಪಿತೃಗಳ ಆತ್ಮ ತೃಪ್ತಿಗಾಗಿ. Halloween is for Americans, the Hungry Ghost Festival is for the Chinese ಎಂದು ಹೇಳುತ್ತಾರೆ.

ವಿಶ್ವದಾದ್ಯಂತ ಬೇರೆ ಬೇರೆ ವಿಧಾನಗಳಲ್ಲಿ ಆತ್ಮ (spirit)ಗಳನ್ನು ತೃಪ್ತಿ ಪಡಿಸುವ ಈ ಭೂಲೋಕದ ಜೀವಾತ್ಮಗಳ ಪ್ರಯತ್ನಗಳು ಬೇರೆಬೇರೆ ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಇದರಿಂದಾಗಿ ಪ್ರೇತಗಳಿಗೆ ತೃಪ್ತಿ, ಶಾಂತಿ ಸಿಗುವುದೋ ಇಲ್ಲವೋ ಬೇರೆ ಮಾತು. ಆದರೆ ಹಬ್ಬ ಮಾಡುವವರಿಗಂತೂ ಸುಗ್ರಾಸ ಭೋಜನ, ಮಾನಸಿಕ ನೆಮ್ಮದಿಯೂ ದೊರಕುತ್ತದನ್ನಿ . ಹೊಟ್ಟೆಗಾಗಿ ಹಾಗೂ ನೆಮ್ಮದಿಗಾಗಿ ಎಷ್ಟೊಂದು ವೇಷಗಳು- ಆಚರಣೆಗಳು...

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X