ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕೇತಿಸಂಘದ ದ್ವಿದಶಮಾನೋತ್ಸವದಿ ನಾ ಪಾಲ್ಗೊಂಡೆ!

By Staff
|
Google Oneindia Kannada News
  • ವಸಂತ ಮಾಧವಿ; ಬೆಂಗಳೂರು
Vasanta Madhaviಉತ್ತರ ಅಮೆರಿಕ ನಿವಾಸಿಗಳಾದ ಸಂಕೇತಿಜನರ ಕೂಟದಲ್ಲಿ ಭಾಗವಹಿಸಲು ನನಗೆ ಆಮಂತ್ರಣ ದೊರೆತಾಗ, ಸಂತೋಷ, ಕುತೂಹಲ, ಉತ್ಸಾಹಗಳ ಅಲೆಗಳು ಒಂದರಮೇಲೊಂದು ತೇಲಿಹೋದುವು. ಈ ಸಂಭ್ರಮ ಯಾವಾಗಲೂ ಜುಲೈ ತಿಂಗಳ ನಾಲ್ಕನೇ ತಾರೀಖಿನ ಆಸುಪಾಸಿನಲ್ಲಿ, ವಾರಾಂತ್ಯವನ್ನು ಸೇರಿಸಿಕೊಂಡು ಜರುಗುತ್ತದೆ. ಈ ವರ್ಷ ಜುಲೈ 2, 3, 4 ನೇ ದಿನಾಂಕಗಳಲ್ಲಿ ಈ ಉತ್ಸವವು ಜರುಗಿತು.

ಮೂರು ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸ್ಥೂಲ ಮಾಹಿತಿ ಪಡೆದಿದ್ದೆನಾದರೂ, ವಾಸ್ತವವಾಗಿ ಈ ಕಾರ್ಯಕ್ರಮಗಳು ನಡೆಯುವ ರೀತಿ, ಅವುಗಳಲ್ಲಿ ಪಾಲ್ಗೊಳ್ಳುವ ಜನರ ಬಗ್ಗೆ ಸಹಜವಾಗಿಯೇ ನನಗೆ ಬಹಳ ಆಸಕ್ತಿ ಇತ್ತು. ಮುಂದೆಂದೋ, ಕಾರ್ಯಕ್ರಮಗಳು ನಡೆದ ಬಗ್ಗೆ ವರದಿ ಓದುವುದಕ್ಕೂ, ಅಲ್ಲಿ ಸೇರಿದ ಜನರೊಡನೆ ಒಬ್ಬಳಾಗಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿಲ್ಲವೇ?

Hearty Welcome to Sankethi Community
Music Concert
NASA Presidents Gallery
Music Maestro R. K. Srikhantan flanked by Senior Sankethees
ಜುಲೈ 1ರಂದು, ಸ್ಯಾನ್‌ ಹ್ಯೂಸೆಯಿಂದ (ಕ್ಯಾಲಿಫೋರ್ನಿಯ) ಹೊರಟು, ಸಂಜೆಯ ವೇಳೆಗೆ ಬಾಲ್ಟಿಮೋರ್‌ ವಿಮಾನನಿಲ್ದಾಣದಲ್ಲಿ ಇಳಿದ ನಮ್ಮನ್ನು(ನಾನು ಮತ್ತು ನನ್ನ ಪತಿ), ನ್ಯೂ ವಿಂಡ್ಸರ್‌ಗೆ ಮಯಾಂಕ್‌ ಮತ್ತು ಅವರ ತಂದೆ ಕರೆದೊಯ್ದರು. ಜನ ಜಂಗುಳಿಯಿಂದ, ಗಲಭೆಯಿಂದ ದೂರವಾದ ಪ್ರಶಾಂತ ಸ್ಥಳ. ಎಲ್ಲೆಲ್ಲಿ ಕಣ್ಣು ಹಾಯಿಸಿದರೂ ಹಸಿರುಡುಗೆ ತೊಟ್ಟ, ಬಣ್ಣ ಬಣ್ಣದ ಹೂವುಗಳಿಂದ ನಲಿಯುವ ರಮ್ಯ ನೋಟ. ಮೂರುದಿನಗಳ ಸಂಭ್ರಮದಲ್ಲಿ ಭಾಗವಹಿಸಲು ಬಂದವರಲ್ಲಿ, ಅಲ್ಲಿಗೆ ಮೊದಲು ತಲುಪಿದವರು ನಾವೆ. ನಂತರ ತಂಡ ತಂಡವಾಗಿ ಸದಸ್ಯರುಗಳು ಬರತೊಡಗಿದರು. ಯಾವ ಬಿಂಕ ಬಿಗುಮಾನಗಳೂ ಇಲ್ಲದೆ ಪರಸ್ಪರ ಪರಿಚಯ ಮಾಡಿಕೊಂಡು ಮಾತನಾಡಲು ಆರಂಭಮಾಡಿದಾಗ, ಅಲ್ಲಿಯವರೆಗೆ ಮನಸ್ಸಿನ ಒಂದು ಮೂಲೆಯಲ್ಲಿ ಹೆಡೆಯೆತ್ತಲು ಮುಂದಾಗಿದ್ದ ಸಂಕೋಚವೂ ಕರಗಿ, ಕೇವಲ ಸಂತಸ ತುಂಬಿ, ಮುಂದಿನ ಕಾರ್ಯಕ್ರಮಗಳನ್ನು ಎದುರುನೋಡುವಂತಾಯಿತು.

ಮರುದಿನ, ಪ್ರಾತಃಕಾಲ ಪ್ರಕೃತಿಯ ಮಡಿಲಲ್ಲಿ ಸ್ವಲ್ಪಕಾಲ ಓಡಾಡಿಕೊಂಡು ಬಂದು, ಎಲ್ಲರೂ (ಆಸಕ್ತಿ ಇದ್ದವರು) ಪ್ರಾತಃವಿಧಿಗಳನ್ನು ಮುಗಿಸಿಕೊಂಡು ಲಲಿತಾಸಹಸ್ರನಾಮ ಪಾರಾಯಣ ನಡೆಸಿದರು.

ಈಗ ಮೊದಲು, ನಾವೆಲ್ಲರೂ ಸೇರಿದ್ದ ಆ ಆವರಣದ ಪರಿಚಯ ಮಾಡಿಕೊಟ್ಟರೆ ಮೇಲಲ್ಲವೇ? ಮೊದಲಿಗೆ ಅದೊಂದು ಮಹಾವಿದ್ಯಾಲಯ. ಆಧುನಿಕ ರೀತಿಯಲ್ಲಿ ಸುಸಜ್ಜಿತವಾದ ಪಾಕಶಾಲೆ, ಅದಕ್ಕೆ ಸೇರಿದಂತಿರುವ ವಿಶಾಲವಾದ ಭೋಜನಶಾಲೆ, ಕೆಳಗಿನ ಮಾಳಿಗೆಯಲ್ಲಿ ಕೆಲವು ಕೊಠಡಿಗಳು ( ಇದರಲ್ಲಿ ಒಂದು ಕೊಠಡಿಯಲ್ಲೇ ಬೆಳಗಿನ ಹೊತ್ತು ವೈದಿಕ - ಆಧ್ಯಾತ್ಮಿಕ ಗೋಷ್ಠಿಗಳು ನಡೆಯುತ್ತಿದ್ದುದು), ಮೇಲಿನ ಮಾಳಿಗೆಯಲ್ಲಿ ಹಲವು ವಾಸದ ಕೊಠಡಿಗಳು- ಇದು ಒಂದು ಕಟ್ಟಡ. ಇದಕ್ಕೆ ಸ್ವಲ್ಪ ದೂರದ ಇನ್ನೊಂದು ಕಟ್ಟಡದಲ್ಲಿ ಹಲವು ಮಹಡಿಗಳಿದ್ದು, ಬಹಳ ಜನ ಸದಸ್ಯರು ತಂಗಿದ್ದ ವಾಸದ ಕೊಠಡಿಗಳಿದ್ದವು. ಇವೆರಡು ಕಟ್ಟಡಗಳ ನಡುವೆ ಇರುವ ಕಟ್ಟಡದಲ್ಲಿ ವಾಸದ ಕೊಠಡಿಗಳೂ ಇದ್ದು, ಕಾರ್ಯಕ್ರಮಗಳು ನಡೆದ ಸಭಾಂಗಣವಿದ್ದುದು ಇಲ್ಲಿಯೇ. ಈ ಭವನಗಳಿಗೆದುರಾಗಿ ಸ್ವಲ್ಪ ದೂರದಲ್ಲಿ ವ್ಯಾಯಾಮಶಾಲೆ! ಮಕ್ಕಳಿಗೂ, ಯುವಕ-ಯುವತಿಯರಿಗೂ ಬಹು ಪ್ರಿಯವಾದ ಸ್ಥಳ. ನಮಗೂ ಸಹ. ಈ ಭವನಗಳಿಂದ ಹೊರಬಂದು ದೃಷ್ಟಿ ಹರಿಸಿದರೆ, ಎದುರಿಗೆ ಬೆಳಗಿನ ಹೊತ್ತು ಮಂಜು ಮುಸುಕಿದ ಬೆಟ್ಟಗಳು, ಮಧ್ಯಾಹ್ನದಲ್ಲಿ ಸೂರ್ಯರಶ್ಮಿಯನ್ನು ಎರಚುವ ಗುಡ್ಡಗಳು, ಹಸಿರಿಂದ ಕಂಗೊಳಿಸುವ ಜಾರು ತಪ್ಪಲು, ಪಾದಗಳನ್ನು ಸ್ಪರ್ಶಿಸುವ ಹಸಿರು ಹುಲ್ಲು ಹಾಸು! ನಮ್ಮ ಸಂಕೇತಿ ಜನಾಂಗವು ಸೇರಿ, ಆಡಿ, ಪಾಡಿ, ನಲಿದ ತಾಣದ ಪರಿಚಯ ಆಯಿತಲ್ಲವೇ? ಇನ್ನು ಅಲ್ಲಿ ನಡೆದ ಚಟುವಟಿಕೆಗಳತ್ತ ಒಂದು ಮಿಂಚುನೋಟ.

ಶುಕ್ರವಾರದಿಂದ ಸೋಮವಾರದ ವರೆಗೆ, ನಾಲ್ಕು ದಿನಗಳೂ ಬೆಳಗಿನ ಹೊತ್ತು ವೇದಾಧ್ಯಾಯಗಳ ಆಯ್ದ ಭಾಗಗಳ ಪಠಣ. ಶುಕ್ರವಾರ ಹೆಣ್ಣುಮಕ್ಕಳಿಂದ ಲಕ್ಷ್ಮೀ ಪೂಜೆ. ಭಾರತ ವಾಚನ-ಪ್ರವಚನ. ಮೂರು ದಿನಗಳೂ ಮಕ್ಕಳಿಂದ ನಾನಾ ರೀತಿಯ ಆಟ-ಪಾಠ ಪ್ರದರ್ಶನ. ಯುವ ಜನಾಂಗವು ಎದುರಿಸುವ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ. ಅಮೆರಿಕೆಗೆ ಬಂದು ನೆಲೆಸಿರುವ ಮೊದಲ ಪೀಳಿಗೆಯವರಿಗೂ, ಮುಂದಿನ ಯುವಜನರಿಗೂ ಹಲವು ಹತ್ತು ವಿಷಯಗಳಲ್ಲಿ ಅಭಿಪ್ರಾಯಭೇದ ಬರುವುದು ವಿಶೇಷವೇನಲ್ಲ. ಅದರ ಪರಿಹಾರದ ಬಗ್ಗೆ, ಉಭಯತಃ ಸಮರ್ಪಕವಾಗಿರುವಂತೆ ಸೂತ್ರ ಏರ್ಪಡಿಸುವ ದಿಕ್ಕಿನಲ್ಲಿ ನಡೆದ ವಿಚಾರ ಸಂಕಿರಣ ಗಮನೀಯವಾಗಿತ್ತು. ಶನಿವಾರ ಪೂರ್ವಸಂಧ್ಯೆಯಲ್ಲಿ ನಡೆದ ಈ ಗೋಷ್ಠಿಯ ನಂತರ ಸಂಜೆ, ಉತ್ಸಾಹೀ ಯುವಕರು ನಡೆಸಿಕೊಟ್ಟ ಹಾಸ್ಯ ಪ್ರದರ್ಶನ ಮತ್ತು ಡಾ. ಎಂ.ಎಸ್‌. ನಟರಾಜ್‌ ಅವರು ಬರೆದ ನಾಟಕದ ಪ್ರದರ್ಶನ ಮನಸ್ಸಿಗೂ, ಬುದ್ಧಿಗೂ ಆಹಾರ ನೀಡಿತು.

ಮಕ್ಕಳಿಂದ ಹಿಡಿದು ಹಿರಿಯ ವಯಸ್ಕರೂ ಪಾಲ್ಗೊಳ್ಳಬಹುದಾದ ಅನೇಕ ಆಟದ ಸ್ಪರ್ಧೆಗಳು ನಡೆದು, ವ್ಯಾಯಾಮಶಾಲೆ ಶನಿವಾರ - ಭಾನುವಾರಗಳಂದು ನಗು, ಕೇಕೆ, ಉಲ್ಲಾಸದ ಅಬ್ಬರದಿಂದ ತುಂಬಿತ್ತು. ಸಂಗೀತ ಕಚೇರಿಗಳು, ಧ್ವನಿಸುರುಳಿಯ ಬಿಡುಗಡೆ, ಸಂಕೇತಿಭಾಷೆಯ ಹಾಡು, ಯುದ್ಧದ ಪ್ರಸಂಗಗಳನ್ನು ಚಿತ್ರಸಹಿತ ವಿವರಿಸಿದ ಭಾಷಣ, ನಮ್ಮ ಧರ್ಮ-ಸಂಸ್ಕೃತಿ-ಪೂಜೆ ಇತ್ಯಾದಿ ವಿಚಾರಗಳನ್ನು ತಿಳಿಸುವ ಉಪನ್ಯಾಸಗಳು, ಕರ್ನಾಟಕದಲ್ಲಿರುವ ಸಂಕೇತಿ ಸಂಘಗಳ ಕಾರ್ಯಸ್ವರೂಪ - ನಾಸಾದಿಂದ ನಿರೀಕ್ಷಿಸುವ ನೆರವಿನ ರೀತಿ, ಇತ್ಯಾದಿ ಒಂದೇ ಎರಡೇ........ ಹಲವಾರು ವಿಷಯಗಳು, ಕಾರ್ಯಕ್ರಮಗಳು ಮೂರು ದಿನಗಳನ್ನು ಮೂರು ಕ್ಷಣಗಳಂತೆ ಓಡಿಸಿದುವು.

ಈ ಕಾರ್ಯಕ್ರಮಗಳಲ್ಲಿ ಶುಕ್ರವಾರ ಸಂಜೆ ನನ್ನ ಸಂಗೀತ ಕಚೇರಿ ನಡೆಯಿತು. ಪ್ರಾತಃಕಾಲ ಲಲಿತಾ ಸಹಸ್ರನಾಮ ಸ್ತೋತ್ರ ಪಾರಾಯಣ ಮತ್ತು ಮಧ್ಯಾಹ್ನಾನಂತರ ಮಕ್ಕಳಿಂದ ಲಕ್ಷ್ಮೀಪೂಜೆ ನಡೆದಿದ್ದರಿಂದ ನನ್ನ ಕಚೇರಿಯಲ್ಲಿ ಲಕ್ಷ್ಮೀ ಸ್ತುತಿರೂಪವಾದ ಕೃತಿಗಳನ್ನೇ ಆರಿಸಿಕೊಂಡಿದ್ದೆ. ರಾಗ-ತಾನ-ಪಲ್ಲವಿಯಲ್ಲಿನ, ಪಲ್ಲವಿ ಸಾಹಿತ್ಯವೂ ಲಕ್ಷ್ಮಿಯನ್ನು ಕುರಿತಾಗಿಯೇ ಇತ್ತು. ಸಭಿಕರೆಲ್ಲರೂ ನಮ್ಮವರೇ ಎಂಬ ಅಂಶ ನನಗೆ ಉತ್ತೇಜನ ನೀಡಿತ್ತು. ಸಂಕೇತಿ ಜನಾಂಗವೆಂದರೆ, ಸಂಗೀತ, ಸಂಸ್ಕೃತ ಮತ್ತು ಸಾಹಿತ್ಯಗಳನ್ನು ಮೆಚ್ಚುವವರು, ಅರ್ಥಮಾಡಿಕೊಂಡು ಅನುಭವಿಸಿ ಕೇಳುವವರೆನ್ನುವುದು ನನ್ನ ಸಂತೋಷವನ್ನು ನೂರ್ಮಡಿ ಮಾಡಿತ್ತು. ‘ಅರಿತವರಿರಬೇಕು, ಹರುಷ ಹೆಚ್ಚಲುಬೇಕು’ ಎನ್ನುವ ಪುರಂದರದಾಸರ ಮಾತು ಎಷ್ಟು ಅನುಭವಪೂರ್ಣವಾದುದು!

ಭಾನುವಾರದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟವರು ಆರ್‌.ಕೆ.ಶ್ರೀಕಂಠನ್‌ ಮತ್ತು ಅವರ ಪುತ್ರ ರಮಾಕಾಂತ್‌. ತ್ಯಾಗರಾಜರ, ಮುದ್ದುಸ್ವಾಮಿ ದೀಕ್ಷಿತರ, ಪುರಂದರದಾಸರ, ಶ್ರೀಪಾದರಾಯರ, ವ್ಯಾಸರಾಯರ ಅನೇಕ ರಚನೆಗಳನ್ನು ಅವರು ಪ್ರಸ್ತುತಪಡಿಸಿದರು. ಈ ಎರಡು ಕಚೇರಿಗಳಿಗೂ ಸಂಧ್ಯಾ ಶ್ರೀನಾಥ್‌ ವಯಾಲಿನ್‌ ಹಾಗೂ ಶ್ರೀನಾಥ್‌ ಅವರು ಮೃದಂಗ ವಾದನದಲ್ಲಿ ಅತ್ಯುತ್ತಮವಾಗಿ ಸಹಕರಿಸಿದರು. ಈ ಎರಡು ಸಂಗೀತ ಕಚೇರಿಗಳೂ ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಇನ್ನು ಊಟೋಪಚಾರಗಳ ಏರ್ಪಾಟು ಕೇಳಬೇಕೇ ? ಹೇಳಿ ಕೇಳಿ ನಮ್ಮ ಸಂಕೇತಿ ಜನರ ಕೂಟವೆಂದ ಮೇಲೆ, ಅದು ಅದ್ಭುತವಾಗಿತ್ತೆಂಬುದು ಸರ್ವ ವಿದಿತವೇ! ಹಾಗೆಂದು, ಅಲ್ಲಿ ಎಲ್ಲರೂ ಬರೀ ಊಟ-ತಿಂಡಿಗಳಲ್ಲಿ ಮಗ್ನರಾಗಿದ್ದರೆಂದು ತಿಳಿಯಬೇಡಿ. ಹೊತ್ತಿಗೆ ಸರಿಯಾಗಿ ಹೊಟ್ಟೆ ಪೂಜೆಯೂ ಅತಿ ಮುಖ್ಯವೇ ತಾನೇ? ಮಿಕ್ಕೆಲ್ಲ ಕಾರ್ಯಕ್ರಮಗಳಂತೆ, ಬಂದವರ ಯೋಗಕ್ಷೇಮಾರ್ಥವಾಗಿ ನಡೆಸಿದ್ದ ಏರ್ಪಾಟುಗಳೂ ಬಹಳ ಅಚ್ಚುಕಟ್ಟಾಗಿದ್ದು, ಕಾರ್ಯಕ್ರಮಗಳ ಯಶಸ್ಸಿಗೆ ಪೂರಕವಾಗಿತ್ತು.

ಜುಲೈ 4ನೇ ತಾರೀಖು, ರಾತ್ರಿ ಮಕ್ಕಳ ಮನರಂಜನೆಗಾಗಿ (ಅಮೆರಿಕ ಸಂಯುಕ್ತ ರಾಷ್ಟ್ರವು ಸ್ವಾತಂತ್ರ ್ಯ ಗಳಿಸಿದ ದಿನವೂ ಆದ್ದರಿಂದ) ಬಣ್ಣ ಬಣ್ಣದ ಪಟಾಕಿಗಳ ಹಾರಿಕೆಯೂ ನಡೆಯಿತು. ನಂತರ, ಜುಲೈ ತಿಂಗಳಲ್ಲಿ ಜನಿಸಿದವರ, ವಿವಾಹಿತರಾದವರ ಅಭಿನಂದನೆಯೂ ಆಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ನಡೆದು, ನಿಗದಿತವಾಗಿದ್ದ ಕಾರ್ಯಕ್ರಮಗಳು ಮುಕ್ತಾಯವಾದುವು. ಆ ದಿನ ಮಧ್ಯಾಹ್ನದಿಂದಲೇ ಅಗತ್ಯದ ಕೆಲಸವಿದ್ದವರು, ಹೊರಡಲು ಆರಂಭಿಸಿದ್ದರು. ಮರುದಿನ, ಅಂದರೆ ಸೋಮವಾರ ರುದ್ರಪ್ರಶ್ನದ ಪಠಣದ ನಂತರ ಉಪಹಾರ ಮುಗಿಸಿ, ಉಳಿದಿದ್ದವರೂ ಒಬ್ಬೊಬ್ಬರಾಗಿ ತೆರಳಲು ಉಪಕ್ರಮಿಸಿದರು. ಹೊರಟಿದ್ದವರೆಲ್ಲರೂ ಬಹು ದೂರ ಪ್ರಯಾಣ ಮಾಡುವವರಿದ್ದರಾದ ಕಾರಣ, ಊಟದ ಬುತ್ತಿಯೂ ಸಿದ್ಧವಾಗಿತ್ತು. ಮದುವೆಯ ಸಂಭ್ರಮ ಮುಗಿಸಿಕೊಂಡು ಹೊರಟ ಪರಿವಾರದವರಂತೆ ಎಲ್ಲರಿಗೂ ಅನ್ನಿಸಿತ್ತು. ಮತ್ತೆ ಮುಂದಿನ ವರ್ಷದ ಕೂಟದ ದಿನವನ್ನು ಎದುರುನೋಡುತ್ತಿರುತ್ತೇವೆ ಎಂದು, ಅಲ್ಲಿದ್ದ ಹಲವಾರು ಮಂದಿ ಮಾತಾಡುತ್ತಿದ್ದುದು ಕಿವಿಗಳಿಗೆ ಬಹಳ ಇಂಪಾಗಿತ್ತು. ಹುಟ್ಟಿದೂರುಗಳಿಂದ ದೂರವಾಗಿ, ವಿಶಾಲವಾದ ಹೊರದೇಶದಲ್ಲಿಯೂ, ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆಸೆ - ಅನುಕೂಲಗಳಿದ್ದವರು ಒಂದೆಡೆ ಸೇರಿ ನಲಿವ ಸಂದರ್ಭ ಇದೆಯಲ್ಲಾ ಎನ್ನುವ ಸಂಗತಿ ನಿಜಕ್ಕೂ ಆಪ್ತವಾದುದು.

ಇಷ್ಟೆಲ್ಲ ಸಂತೋಷದ ಮಧ್ಯೆಯೂ ನನಗೊಂದು ವಿಷಯದಲ್ಲಿ ಕೊರತೆ ಅನ್ನಿಸಿತು. ಅದೇನೆನ್ನುವಿರಾ? ಪ್ರತಿಯಾಂದು ಕಾರ್ಯಕ್ರಮದ ಘೋಷಣೆ - ನಿರೂಪಣೆ - ಮಂಡನೆ -ವಿಚಾರವಿನಿಮಯ, ಎಲ್ಲವೂ ಆಂಗ್ಲ ಭಾಷೆಯಲ್ಲಿದ್ದುದು. ಒಂದು ಜನಾಂಗದ ವಿಶಿಷ್ಟತೆ, ಸಮಗ್ರತೆ ಹಾಗೂ ಸಂಸ್ಕೃತಿಗಳ ವಿಕಾಸದಲ್ಲಿ ಭಾಷೆಯ ಪಾತ್ರ ಬಹಳ ಹಿರಿದಾದುದು. ಇದು, ನನ್ನ ಅಭಿಪ್ರಾಯ. ಸಂಕೇತಿಗಳ ಕೂಟದಲ್ಲಿ ಸಂಕೇತಿ ಭಾಷೆಗೇ ಎಡೆಯಿಲ್ಲದಿದ್ದರೆ (ಒಂದು ಹಾಡನ್ನು ಹೊರತುಪಡಿಸಿ. ಅದೂ ಕಿರಿಯರಲ್ಲಿ ಎಷ್ಟು ಮಂದಿಗೆ ಅರ್ಥವಾಯಿತೋ ತಿಳಿಯದು!) ಅದು ಪೂರ್ಣ ಸಂಕೇತಿ ಕೂಟ ಹೇಗಾದೀತು? ಇದು ನನಗೆ ಬಂದ ಸಂಶಯ. ಕೊರತೆ ಎನಿಸಿದ ಸಂಗತಿ. ಮುಂದಿನ ವರ್ಷಗಳಲ್ಲಿ, ಕ್ರಮಕ್ರಮವಾಗಿ ಸಂಕೇತಿ ಕೂಟದಲ್ಲಿ ಸ್ವಲ್ಪ ಸ್ವಲ್ಪವಾಗಿಯಾದರೂ ಸಂಕೇತಿ ಭಾಷೆ ಉಸಿರು ತುಂಬುವುದೆಂದು ನಿರೀಕ್ಷಿಸಬಹುದೇ?

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X