• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾ.ಮು.ಗಳಾದ ನಂಬರ್‌ ಒನ್‌ಗಳು ಮತ್ತು ಸದ್ಯದ ಅಗತ್ಯಗಳು

By Super
|

ಈ ವರ್ಷದ ಸಾರ್ವತ್ರಿಕ ಚುನಾವಣೆ ಹಲವಾರು ಆಶ್ಚರ್ಯಗಳನ್ನು ಹುಟ್ಟಿಸಿದ್ದರ ಜೊತೆಗೆ ಹೊಸ ಹೊಸ ಸಾಧ್ಯತೆಗಳ ಲೆಕ್ಕಾಚಾರಗಳ ಬಾಗಿಲನ್ನೂ ತೆರೆದಿದೆ. ಬಹಳಷ್ಟು ಕಡೆ ಭಾವನಾತ್ಮಕ ವಿಷಯಗಳಿಗೆ ಬೆಲೆ ಸಿಗದೆ ಕೇವಲ ಅಭಿವೃದ್ಧಿ ಮತ್ತು ನಿತ್ಯ ಬದುಕಿನ ಸಂಗತಿಗಳೇ ಮೇಲುಗೈ ಸಾಧಿಸಿದ್ದು ಮೆರೆಯುವ ಅಹಂಕಾರಿ ಅಧಿಕಾರಸ್ಥರನ್ನು ಹಣವಂತರನ್ನು ತಿರಸ್ಕರಿಸುವ ರೊಚ್ಚೂ ಕಾಣಿಸಿದೆ. ಜನರ ಯೋಗ್ಯ ಪ್ರತಿನಿಧಿಗಳಾಗಲು ಪ್ರಯತ್ನಿಸದೆ ಮದ್ಯ-ನೋಟು ಚೆಲ್ಲಿ , ಬಾಡೂಟದ ಸರಬರಾಜುದಾರರಾಗಲು ಪ್ರಯತ್ನಿಸಿದವರು ವಿಷಯಾಧಾರಿತ ಕಾರಣವಾಗಿ ನೆಲಕಚ್ಚಿದ್ದಾರೆ. ಚುನಾವಣೆ ಎಂದರೆ ಎಲ್ಲಾ ಸಮಯದಲ್ಲಿಯೂ ಕೆಟ್ಟ ಮತ್ತು ಅಶಿಷ್ಟ ರೀತಿಯ ನಡವಳಿಕೆಯವರ ವಿಜಯ; ರಾಜಕೀಯ ಕೇವಲ ಪುಂಡರ ಆಶ್ರಯ ತಾಣ ಎಂದು ಭಾವಿಸುವವರಿಗೆ, ಸಿನಿಕರಿಗೆ ಅಘಾತವಾಗಿಯೂ ಪರಿಣಮಿಸಿದೆ.

ಕೇಂದ್ರದಲ್ಲಿ NDA ಅಧಿಕಾರ ಕಳೆದುಕೊಳ್ಳುವುದನ್ನು ಸ್ವತಃ ಅತಿವಿಶ್ವಾಸದ ಕಾಂಗ್ರೆಸ್ಸಿನವರೂ ಸಹ ಊಹಿಸಲಾರದೇ ಹೋಗಿದ್ದರೂ ಕರ್ನಾಟಕ ಮತ್ತು ಆಂಧ್ರದಲ್ಲಿ ಆಗಿದ್ದನ್ನು ಊಹಿಸಲು ಅಷ್ಟು ಕಷ್ಟ ಪಡಬೇಕಾಗಿರಲಿಲ್ಲ. ಸರಿಯಾಗಿ ಒಂದು ವರ್ಷದ ಹಿಂದೆ thatskannada.comನಲ್ಲಿ ಪ್ರಕಟವಾದ ಲೇಖನದಲ್ಲಿ ಈ ಎರಡೂ ನೆರೆಯ ರಾಜ್ಯಗಳಲ್ಲಿ ಕೇಂದ್ರಿಕೃತ ಅಭಿವೃದ್ಧಿ, ಬರಗಾಲ, ಜನಸಾಮಾನ್ಯರು ಮತ್ತು ಗ್ರಾಮಾಂತರದವರು ಆಡಳಿತದ ಬಗ್ಗೆ ಅಷ್ಟೇನೂ ಉತ್ಸಾಹಿಗಳಾಗಿಲ್ಲದ್ದರ ಬಗ್ಗೆ ವಿಶ್ಲೇಷಿಸಲಾಗಿತ್ತು. ತಕ್ಷಣ ಕಾರ್ಯೋನ್ಮುಖವಾಗದಿದ್ದಲ್ಲಿ ಜನಾದೇಶ ಪ್ರಭುತ್ವ ವಿರೋಧಿಯಾಗುವ, ಪತ್ರಿಕೆಗಳಿಂದ ನಂಬರ್‌ ಒನ್‌ ಎಂದು ಬಿಂಬಿಸಲ್ಪಟ್ಟ ಮುಖ್ಯಮಂತ್ರಿಗಳಿಬ್ಬರೂ ಮಾಜಿಗಳಾಗುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಲಾಗಿತ್ತು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಕರ್ನಾಟಕ ಮತ್ತು ಆಂಧ್ರದಲ್ಲಿ ಒಂದೇ ಸಾರಿಯ ಅಪವಾದ ಬಿಟ್ಟರೆ ಪ್ರತಿಸಲದ ವಿಧಾನಸಭಾ ಚುನಾವಣೆಗಳಲ್ಲಿ ಅಧಿಕಾರ ಎರಡೇ ಪಕ್ಷಗಳ ಮಧ್ಯೆ ಅದಲು ಬದಲಾಗುತ್ತಿದೆ. ಅದೇ ದೂರದ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು ಸರಿಸುಮಾರು ಮುವ್ವತ್ತು ವರ್ಷಗಳಿಂದಲೂ, ಒರಿಸ್ಸಾದಲ್ಲಿ ಜನತಾದಳ ಮತ್ತು ಅದರದೇ ಕವಲಾದ ಬಿಜು ಜನತಾ ದಳ ಹತ್ತು ವರ್ಷಗಳ ಮೇಲ್ಪಟ್ಟು (ಈಗ ಮತ್ತೆ ಐದು ವರ್ಷಗಳ ಜನಾದೇಶ ಪಡೆದಿದೆ) ಯಾವುದೇ ಸ್ಥಿತ್ಯಂತರಗಳಿಲ್ಲದೆ ಅಧಿಕಾರದಲ್ಲಿವೆ. ಅಲ್ಲಿ ಯಾಕೆ ಬದಲಾವಣೆ ಇಲ್ಲ ? ಅಲ್ಲಿನ ಮುಖ್ಯಮಂತ್ರಿಗಳು ಕೃಷ್ಣ ಅಥವಾ ನಾಯ್ಡು ತರಹ ನಂಬರ್‌ ಒನ್‌ ಎಂದೇನೂ ಎನಿಸಿಕೊಳ್ಳುತ್ತಿಲ್ಲವಲ್ಲ ? ನವೀನ್‌ ಪಟ್ನಾಯಕರಿಗಂತೂ ಸರಿಯಾಗಿ ಒಡಿಸ್ಸಿ ಮಾತನಾಡಲೂ ಬರುವುದಿಲ್ಲವಲ್ಲ ? ಒರಿಸ್ಸಾದಲ್ಲಿನ ಬರಗಾಲವಂತೂ ಕರ್ನಾಟಕ ಮತ್ತು ಆಂಧ್ರಕ್ಕಿಂತ ಹೆಚ್ಚೇ ಹೊರತು ಕಮ್ಮಿಯಿಲ್ಲ ಮತ್ತು ನೆರೆ ಹಾವಳಿಯಿಂದಲೂ ರಾಜ್ಯ ತಪ್ಪಿಸಿಕೊಳ್ಳುತ್ತಿಲ್ಲವಲ್ಲ ?

ಈ ಮತ್ತು ಈ ತರಹದ ಮತ್ತಿತರ ಪ್ರಶ್ನೆಗಳಿಗೆ ಉತ್ತರ ಸರಳವಂತೂ ಅಲ್ಲ ಮತ್ತು ಉತ್ತರಗಳ ಸಂಖ್ಯೆ ಕಮ್ಮಿಯೇನೂ ಇಲ್ಲ. ಅದರಲ್ಲಿ ಒಂದು ಬಹುಶಃ ಮುಂದಿನ ವಾದ ಇರಬಹುದು. ಅದೇನೆಂದರೆ; ನಮ್ಮ ಎರಡೂ ನೆರೆಯ ರಾಜ್ಯಗಳಲ್ಲಿ ಈ ಇಪ್ಪತ್ತು ವರ್ಷಗಳಲ್ಲಿ ಆಗಿರುವ ಮತ್ತು ಆಗುತ್ತಿರುವ ಅಭಿವೃದ್ಧಿ ಮತ್ತು ಜನರ ಆರ್ಥಿಕ ಮತ್ತು ಮಾನಸಿಕ ಸ್ಥಿತಿಗತಿ. ಇದಕ್ಕೆ ಮೇಲ್ಮಟ್ಟದ ಆಧಾರ ಈ ಕೆಳಗಿನ ಅಂಕಿಅಂಶಗಳು. ಈ ವಾದ ಅಂತಿಮವೇನೂ ಅಲ್ಲ ಮತ್ತು ಇದೇ ಹೊರತು ಇನ್ನಿಲ್ಲ ಎಂತಲೂ ಅಲ್ಲ.

ನಮ್ಮ ರಾಜ್ಯದಲ್ಲಿ ಸರ್ಕಾರದ ಆದಾಯದ ಶೇ. 57.4 ಭಾಗ ಸರ್ಕಾರಿ ನೌಕರರ ಸಂಬಳ-ಭತ್ಯೆಗಳಿಗೆ ಖರ್ಚಾಗಿ ಉಳಿದ ಶೇ. 42.6 ರಷ್ಟು ಹಣ ಇತರ ಅಭಿವೃದ್ಧಿ ಕೆಲಸಗಳಿಗೆ ಮೀಸಲು. ಆಂಧ್ರಪ್ರದೇಶದಲ್ಲಿ ಸಂಬಳದ ಪಾಲು ಶೇ. 64.4, ಇತರೆ ಪಾಲು ಶೇ. 35.6. ಅದೇ ಒರಿಸ್ಸಾದಲ್ಲಿ ಶೇ. 93.3 ರಷ್ಟು ಆದಾಯ ಸಂಬಳಕ್ಕೆ ಮೀಸಲಾದರೆ ಅಭಿವೃದ್ಧಿಗೆ ಉಳಿಯುವ ಹಣ ಉಳಿದ ಚಿಲ್ಲರೆ ಭಾಗ. ಇನ್ನು ಪಶ್ಚಿಮ ಬಂಗಾಳದಲ್ಲಂತೂ ಸರ್ಕಾರವನ್ನು ಸಂಬಳ ಕೊಡುವ ಏಜೆನ್ಸಿ ಎನ್ನಬಹುದು; ಅಲ್ಲಿ ಆದಾಯದ ಶೇ. 101.25 ರಷ್ಟು ಹಣ ನೌಕರರಿಗೇ ಮೀಸಲು. ಅಂದರೆ ಕೇಂದ್ರ ಸರ್ಕಾರದಿಂದ ಬರುವ ಗ್ರಾಂಟ್‌ ಮತ್ತಿತರ ಹಣವನ್ನೂ ಸಹ ಅಲ್ಲಿ ಅಭಿವೃದ್ಧಿಯೇತರ ಕೆಲಸಗಳಿಗೆ ಉಪಯೋಗಿಸುತ್ತಿದ್ದಾರೆ ಎಂದಂತಾಯಿತು.

ಇಲ್ಲಿ ಒಂದು ಕ್ಷಣ ನಿಂತು ಮೇಲಿನ ನಾಲ್ಕೂ ರಾಜ್ಯಗಳಲ್ಲಿನ ಭ್ರಷ್ಟಾಚಾರ ಮತ್ತಿತರ ಅನೈತಿಕ ಪ್ರಕರಣಗಳ ಬಗ್ಗೆ ಯೋಚಿಸಿದರೆ; ಪಶ್ಚಿಮ ಬಂಗಾಳದಲ್ಲಿ ಈ ಮುವ್ವತ್ತು ವರ್ಷಗಳಲ್ಲಿ ಯಾವುದೇ ತರಹದ ದೊಡ್ಡ ಪ್ರಕರಣ ಹೊರಗೆ ಬರಲಿಲ್ಲ. ಒರಿಸ್ಸಾದಲ್ಲಿಯೂ ಜನತಾದಳದ ಕಾಲದಿಂದಲೂ ಅದೇ ಸ್ಥಿತಿ. ಆದರೆ ದಕ್ಷಿಣದ ಈ ಎರಡೂ ರಾಜ್ಯಗಳಲ್ಲಿ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಜಾತಿವಾದ, ಪಾಳೆಗಾರಿಕೆ, ಸ್ವಜನಪಕ್ಷಪಾತದಿಂದ ಮೊದಲುಗೊಂಡು ನೈತಿಕ ಭ್ರಷ್ಟತೆಯ ಆನ್‌ಲೈನ್‌ ಲಾಟರಿ, ಅಧಿಕಾರಕ್ಕಾಗಿಯೇ ಪಕ್ಷಾಂತರದಿಂದ ಹಾದು ಭಾರಿ ಪ್ರಮಾಣದಲ್ಲಿ IMF ಮತ್ತಿತರ ಕಡೆ ಸಾಲಸೋಲ ಮಾಡಿರುವ, ಶಾಸಕ-ಮಂತ್ರಿಗಳೇ ಪಾಲುದಾರರಾಗಿರುವ ಛಾಪಾ ಕಾಗದದವರೆಗೂ ಏನಾದರೂ ತಲ್ಲಣ, ಶೋಷಣೆ, ಭ್ರಷ್ಟತೆ ಇದ್ದದ್ದೆ. ಇದಕ್ಕೆ ಒಂದು ಮೂಲಕಾರಣ ಹೇಗಾದರೂ ಮಾಡಿ ಹಣಗೂಡಿಸಬೇಕೆಂಬ ಹಪಹಪಿ (ಪ್ರಜೆ ಮತ್ತು ಪ್ರಭುತ್ವಗಳಿಗೆ ಸಮಾನವಾಗಿ) ಮತ್ತು ಸಂಬಳೇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲು ಉಳಿಯುತ್ತಿರುವ ಹತ್ತಾರು ಸಾವಿರ ಕೋಟಿ ರೂಪಾಯಿಗಳು.

ಸಮಾಜದಲ್ಲಿ ನೈತಿಕತೆ, ಪೌರನೀತಿಯ ಪ್ರಜ್ಞೆ, ಹಣಕಾಸಿನ ಶಿಸ್ತು ಇಲ್ಲದ ಸಮಯದಲ್ಲಿ ಹಣ ಮತ್ತು ಯೋಜನೆಗಳ ಜೊತೆಜೊತೆಗೇ ಬರುತ್ತದೆ ಭ್ರಷ್ಟಾಚಾರ. ಆಗ ಸಹಜವಾಗಿಯೆ ಸುಲಭ ರೀತಿಯಲ್ಲಿ ಹಣಗಳಿಸಲು ಬೇಕಾದ ಅಧಿಕಾರ ಮತ್ತು ಅದಕ್ಕೆ ಅವಶ್ಯಕವಾದ ರಾಜಕಾರಣ, ಜನಸೇವೆಗಿಂತ ಹೆಚ್ಚಾಗಿ ಉದ್ಯೋಗದ ಕಾರಣದಿಂದ ಭ್ರಷ್ಟರನ್ನು, ಅನೈತಿಕತೆ ಉಳ್ಳವರನ್ನು ಆಕರ್ಷಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇದ್ದ ಪ್ರಾಮಾಣಿಕತೆ, ಆದರ್ಶ ಆ ಜನಾಂಗದೊಂದಿಗೇ ಕಾಣೆಯಾಗಿದೆ. ತ್ರಿಪುರಾದ ಮಾಜಿ ಮುಖ್ಯಮಂತ್ರಿಯಾಬ್ಬ ನಿವೃತ್ತಿಯ ನಂತರ ಪುಸ್ತಕದಂಗಡಿ ತೆರೆದು ದುಡಿಯುತ್ತಿದ್ದ ಎನ್ನುವುದು, ನಮ್ಮಲ್ಲಿನ ಮಾ.ಮು. ನಿಜಲಿಂಗಪ್ಪನಂತವರು ಅಂಚೆಪತ್ರ ದುಬಾರಿಯಾಗಿದ್ದಕ್ಕೆ ವಿಷಾದಿಸುತ್ತ, ಸ್ವತಃ ಕಾರನ್ನು ಮೈಂಟೆನ್‌ ಮಾಡಲಾಗದೆ ಬೇರೆಯವರ ಕಾರಿನಲ್ಲಿ ಸಭೆ ಸಮಾರಂಭಗಳಿಗೆ ಹೋಗುತ್ತಿದ್ದರು ಎನ್ನುವಂತಹುದು ಹಾಸ್ಯಾಸ್ಪದವಾಗಿ, ಹತ್ತಿಪ್ಪತ್ತು ವರ್ಷಗಳ ರಾಜಕೀಯ ಬಲದಿಂದ ಮುಖ್ಯಮಂತ್ರಿ ಆಗುವ ಹೊತ್ತಿಗೆ ಕೋಟ್ಯಾಂತರ ರೂಪಾಯಿಗಳ ಒಡೆಯರಾಗುವುದು ಅಲಿಖಿತ ನಿಯಮ ಎನ್ನುವಂತಾಗುತ್ತದೆ. ಸರ್ಕಾರದ ಅನ್ನದಾಸೋಹ ಕಾರ್ಯಕ್ರಮ ರಾಜಕಾರಣಿಯ ಸಂಸ್ಥೆಯ ಮೂಲಕ ನಡೆದು ಅವನ ವೈಯುಕ್ತಿಕ ಶ್ರಮ ಮತ್ತು ದುಡ್ಡು ಎಂಬಷ್ಟು ಪ್ರಚಾರ ಪಡೆಯುತ್ತದೆ. ಮಂತ್ರಿಯಾಬ್ಬ ರಾಜಾರೋಷವಾಗಿ- ಬಿಟ್ಟಿ ಬೇಡ, ದುಡ್ಡು ತೆಗೆದುಕೊಂಡು ವೋಟ್‌ ಹಾಕು ಎನ್ನುವುದು ಯಾವುದೇ ಪ್ರತಿಭಟನೆಯಿಲ್ಲದೆ ಪ್ರಕಟವಾಗುತ್ತದೆ. ಸರ್ಕಾರಿ ಯೋಜನೆಗಳು ಆಡಳಿತ ಪಕ್ಷದ ಕಾರ್ಯಕರ್ತರು ಮೇಯುವ ಹುಲ್ಲುಗಾವಲುಗಳಾಗುತ್ತವೆ.

ಈ ಬದಲಾದ ಪರಿಸ್ಥಿತಿಯಲ್ಲಿ ಸಣ್ಣ ಚರಂಡಿ, ರಸ್ತೆ ಮಾಡಿಸುವುದರಿಂದ ಹಿಡಿದು ನೂರಾರು ಕೋಟಿ ರೂಪಾಯಿಗಳ ಆಲಮಟ್ಟಿ ಮೇಲ್ದಂಡೆ ಕೆಳದಂಡೆ ಕಾಲುವೆಗಳ ಆಳವಿಸ್ತಾರಗಳುದ್ದಕ್ಕೂ ಭ್ರಷ್ಟಾಚಾರ ವ್ಯಾಪಿಸುತ್ತದೆ. ಹಳ್ಳಿ ಪಟ್ಟಣಗಳಲ್ಲಿ ವರ್ಷೇವರ್ಷ ಈ ಪುಡಾರಿಗಳ ನವ, ಸುಲಭ ಶ್ರೀಮಂತಿಕೆಯ ಕತೆಗಳೇ ಹರಡುತ್ತವೆ. ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಬೆರಳೆಣಿಕೆಯಷ್ಟು ಜನ ಸಣ್ಣಮನೆಯಿಂದ ಬಂಗಲೆಗೂ, ಬಂಗಲೆಯವರು ಅರಮನೆಗಳಿಗೂ ಏರುತ್ತಾರೆ. ಇವೆಲ್ಲವುಗಳಿಂದಾಗಿ ಆಗಬೇಕಾದ ಕೆಲಸ ಸಮಯಕ್ಕೆ ಸರಿಯಾಗಿ ಮುಕ್ತಾಯವಾಗದೆ ಲಾಲಬಹದೂರರು ಮಾಡಿದ ಗುದ್ದಲಿಪೂಜೆ ಸುವರ್ಣ ಮಹೋತ್ಸವ ಆಚರಿಸಿಕೊಂಡರೂ ಆ ಕೆಲಸ ನೆಲಮಟ್ಟದಲ್ಲಿಯೇ ಇರುತ್ತದೆ. ವೆಚ್ಚ ಏರುತ್ತದೆ. ಜಮೀನು ಕಳೆದುಕೊಂಡವರಿಗೆ ಪರಿಹಾರ ಬರುವಷ್ಟರಲ್ಲಿ ಹಣದುಬ್ಬರದಿಂದ ಆ ದುಡ್ಡಿಗೆ ಬೆಲೆಯೇ ಹೋಗಿರುತ್ತದೆ. ಕೆರೆಗಳಲ್ಲಿ ಹೂಳು ತುಂಬುತ್ತದೆ. ಬೆಂಗಳೂರಿನಲ್ಲಿ ವಾರಕ್ಕೊಮ್ಮೆ ನಲ್ಲಿಗಳಲ್ಲಿ ನೀರುಬರುತ್ತದೆ. ರಸ್ತೆ ಒಂದು ವರ್ಷಕ್ಕೆ ಮಂಗಳನ ಅಂಗಳವಾಗುತ್ತದೆ. ಲೋಡ್‌ಶೆಡ್ಡಿಂಗ್‌ ಎನ್ನುವುದು ವರ್ಷಪೂರ್ತಿಯ ಸಂಗಾತಿಯಾಗುತ್ತದೆ. ಅತೃಪ್ತಿಯೆನ್ನುವುದು ಜನರಲ್ಲಿ ಸಮಾನವಾಗಿ ಮನೆ ಮಾಡುತ್ತದೆ.

ಜನ ನಿಶ್ಯಬ್ದವಾಗಿ ಆಗಾಗ ಅಧಿಕಾರಸ್ಥ ರಾಜಕಾರಣಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಅಲೆಯಲ್ಲಿ ಕೆಲಸಗಾರರು, ಪ್ರಾಮಾಣಿಕರಿಗು ವಿಶ್ರಾಂತಿ ನೀಡುತ್ತಾರೆ. ಇವೆಲ್ಲವುಗಳ ಮಧ್ಯೆಯೂ ಜೀವನ ಮಟ್ಟ ಸುಧಾರಿಸುತ್ತದೆ. ಮೂಲಭೂತ ಸೌಲಭ್ಯಗಳಿಗೆ ದಕ್ಷಿಣದ ಎರಡೂ ರಾಜ್ಯಗಳು ಆ ಪೂರ್ವದ ರಾಜ್ಯಗಳಿಗಿಂತ ಹೆಚ್ಚು ಹಣವನ್ನು ವಿನಿಯೋಗಿಸುತ್ತಾರೆ. ಯೋಜನೆಗಳು ಹೆಚ್ಚಾಗುತ್ತವೆ. ಜನ ಹೆಚ್ಚುಹೆಚ್ಚು, ತಕ್ಷಣವೇ ಬಯಸುತ್ತಾರೆ. ಎಲ್ಲರೂ ಬೇಕೆನ್ನುತ್ತಾರೆ. ಎಲ್ಲವನ್ನೂ ಎಲ್ಲರನ್ನೂ ತೃಪ್ತಿಪಡಿಸಲಾಗದ ಸರ್ಕಾರಗಳು ನಾಲ್ಕೈದು ವರ್ಷಗಳಿಗೊಮ್ಮೆ ಬದಲಾಗುತ್ತಿರುತ್ತವೆ.

ಇವೆಲ್ಲದರ ಮಧ್ಯೆ ಇಲ್ಲಿ ಬೆಳೆಯಬೇಕಾದದ್ದು ಪ್ರಾಮಾಣಿಕತೆ ಮತ್ತು ಅನೈತಿಕ ಮಾರ್ಗಗಳಿಂದ ದುಡ್ಡು ಮಾಡಬಾರದು ಎಂಬ ಶಿಸ್ತು . ನಾಯಕನಾದವನು ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೆ ಅಧಿಕಾರ ಉಳಿಸಿಕೊಳ್ಳುವುದು ಇಲ್ಲವೆ ಮರಳಿ ಪಡೆಯುವುದು ಕಷ್ಟವೇನೂ ಅಲ್ಲ. ಬ್ರಹ್ಮಚಾರಿ ನವೀನ್‌ ಪಟ್ನಾಯಕ್‌ ಅಧಿಕಾರ ಉಳಿಸಿಕೊಂಡಿದ್ದಕ್ಕೆ ಅದೂ ಒಂದು ಕಾರಣ. ಜನಪ್ರತಿನಿಧಿಗಳು ಮಕ್ಕಳಿಗೆ ಒಳ್ಳೆಯ ಕಾರಣಗಳಿಗೆ ಆದರ್ಶವಾಗುವಷ್ಟು ಎತ್ತರಕ್ಕೆ ಬೆಳೆದಾಗ ಯೋಜನೆಗಳಿಗೆ ಅರ್ಥ ಬಂದು ಅಭಿವೃದ್ಧಿ ವೇಗವಾಗಿ ಬೆಳೆಯುತ್ತದೆ. ಭ್ರಷ್ಟಾಚಾರ ಕಮ್ಮಿಯಾಗುತ್ತದೆ.

ಕರ್ನಾಟಕದಲ್ಲಿಯಂತೂ ಇಷ್ಟು ದುಡ್ಡು ಅಭಿವೃದ್ಧಿ ಕಾರ್ಯಗಳಿಗೆ ಮಿಕ್ಕುತ್ತಿದೆ ಎನ್ನುವುದೇ ಒಂದು ಹೆಮ್ಮೆ. ಅದು ಇನ್ನೂ ಬೆಳೆಯಬೇಕು. ಹಿಂದಿನ ಸರ್ಕಾರ ಕೈಗೊಂಡ ಜನಪರ ಕಾರ್ಯಗಳನ್ನು, ಸ್ತ್ರೀಶಕ್ತಿಯಂತಹ ಯೋಜನೆಗಳನ್ನು ಮುಂದುವರಿಸಬೇಕು. ಆಡಳಿತದಲ್ಲಿ ಪಾರದರ್ಶಕತೆ, ನೌಕರರಲ್ಲಿ ವೃತ್ತಿಪರತೆ ಬೆಳೆಸಬೇಕು ಮತ್ತು ಸರ್ಕಾರವೆನ್ನುವುದು ಉದ್ಯೋಗ ನೀಡುವ ಏಜೆನ್ಸಿಯಾಗದೆ ಜನರ ಕ್ರಿಯಾಶಕ್ತಿ ಬೆಳೆಸುವ ಮಾರ್ಗದರ್ಶಿ ಮತ್ತು ಪ್ರೋತ್ಸಾಹಕನಾಗಬೇಕು. ಯೋಜನೆಗಳು ಕೇವಲ ಆಡಳಿತ ಪಕ್ಷದ ಕಾರ್ಯಕರ್ತರ ಲಾಭಕ್ಕೆ ಎನ್ನುವುದು ಕೊನೆಗೊಳ್ಳಬೇಕು.

ಈ ಸಲ ನಮ್ಮಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಅಷ್ಟೇ ಯೋಗ್ಯತೆಯ, ಹೋರಾಟದಿಂದ ಜನಪರ ಕಾಳಜಿಯಿಂದ ಮೇಲೆ ಬಂದ ಇತರರೂ ಬಹಳಷ್ಟು ಜನ ಇದ್ದಾರೆ. ಆದ್ದರಿಂದ ನಮ್ಮಲ್ಲಿ ಒಂದು ರೀತಿಯ ಸಾಮೂಹಿಕ ನಾಯಕತ್ವ. ಮತ್ತೆ ನಜೀರಸಾಬರಂತಹ ಕೆಲಸಗಾರ ಇವರಿಂದ ಹೊರಹೊಮ್ಮುವುದು ಕಷ್ಟವೇನೂ ಅಲ್ಲ. ಹಣಕಾಸಿನ ಸ್ಥಿತಿಯೂ ಉತ್ತಮವಾಗೇ ಇದ್ದು ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಸಾಧ್ಯವೇನೂ ಅಲ್ಲ. ಆಂಧ್ರದ ಸದ್ಯದ ಮುಖ್ಯಮಂತ್ರಿ ಕಳೆದ ಒಂದೆರಡು ವರ್ಷಗಳಿಂದ ಜನರೊಂದಿಗೆ ಒಡನಾಡಿದಷ್ಟೇ ಉತ್ಸಾಹದಿಂದ, ನೂರಾರು ದಿನಗಳ ಪಾದಯಾತ್ರೆಗಳಿಗೆ ಉಪಯೋಗಿಸಿದ ಶಕ್ತಿಯನ್ನೇ ರಾಜ್ಯ ಕಟ್ಟಲೂ ಉಪಯೋಗಿಸಿದರೆ ಪತ್ರಿಕೆಗಳಿಂದಲೇ ಅಲ್ಲ ಜನರಿಂದಲೂ ನಂಬರ್‌ ಒನ್‌ ಎನ್ನಿಸಿಕೊಳ್ಳುವುದು ಕಷ್ಟವಲ್ಲ. ಇಲ್ಲದ್ದಿದ್ದಲ್ಲಿ ಮಾಜಿ ನಂಬರ್‌ ಒನ್‌ಗಳಂತೆ ಇವರೂ ಚುನಾವಣೆ ಸೋಲುವ ಮಾ.ಮು.ಗಳಾಗಿ ದಾಖಲಾಗುತ್ತಾರೆ. ಅದು ಅವರನ್ನು ಗೆಲ್ಲಿಸಿದ ಮತದಾರರ ದುರ್ದೈವವಾಗುತ್ತದಷ್ಟೆ .

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Number One Chief ministers, Voters and tragedy of Democracy : Ravi Krishna Reddy writes a commentary on Elections-2004
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more