ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಯೋವ’ ಪದದ ಇಂಗ್ಲಿಷ್‌ ಕಾಗುಣಿತತಿಳಿಸಿರಿ!

By Staff
|
Google Oneindia Kannada News

Krishna Sastry
* ಕೃಷ್ಣಶಾಸ್ತ್ರಿ, ಸೀಡರ್‌ ಫಾಲ್ಸ್‌, ಅಯೋವಾ

ಇತ್ತೀಚೆಗೆ ನನ್ನ ಸ್ನೇಹಿತನೊಬ್ಬ ಬೆಂಗಳೂರಿನಿಂದ ಫೋನ್‌ ಮಾಡಿದ್ದ. ಅವನ ಮಗನಿಗೆ ಅಮೆರಿಕಾದ ವಿಶ್ವವಿದ್ಯಾಲಯವೊಂದರಲ್ಲಿ ಸೀಟ್‌ ಸಿಕ್ಕಿದೆ, ಹಾಗೂ ಅದಕ್ಕಿಂತ ಹೆಚ್ಚಾಗಿ ಅಮೆರಿಕನ್‌ 'ವೀಸಾ!" ಭಾಗ್ಯ ದೊರಕಿದೆ ಎಂದು ಅತಿ ಹೆಮ್ಮೆಯಿಂದ ತಿಳಿಸಿದ. ನಂತರ ವಿಶ್ವವಿದ್ಯಾಲಯದ ಗುಣಮಟ್ಟ, ಕೀರ್ತಿಯ ವಿಷಯ ಪ್ರಸ್ತಾಪಿಸಿದ. ಅಲ್ಲಿ ಓದಿದರೆ ಮುಂದೆ ಕೆಲಸ ಸಿಕ್ಕುವ ಭರವಸೆ ಇದೆಯೇ ? ಹವಾಮಾನ ಹೇಗಿರುತ್ತೆ? ಮಗ ಚಿಕ್ಕವನು-ಅಸಾಧ್ಯ ಛಳಿಯೇ, ಊಟಕ್ಕೆ ಅನುಕೂಲತೆಗಳೇನು, ಇತ್ಯಾದಿ ತಂದೆತಾಯಿಗಳ ಸ್ವಾಭಾವಿಕ ಕುತೂಹಲ ತವಕ ಪ್ರಶ್ನೆಗಳ ಸುರಿಮಳೆ ಬಿತ್ತು.

ಎಲ್ಲ ತಂದೆತಾಯಿಗಳ, ಹಾಗೂ ಅವರ ಮಕ್ಕಳ ಕನಸನ್ನು ನನಸು ಮಾಡಿಸುವ ಉದ್ದೇಶದಿಂದ, ಅಮೆರಿಕಾದ ಎಲ್ಲ ವಿಶ್ವವಿದ್ಯಾಲಯಗಳೂ ಒಳ್ಳೆಯ ಗುಣಮಟ್ಟವನ್ನು ಹೊಂದಿದೆ ಎಂದು ಹೇಳಿದೆ. ಆದರೆ ಉದ್ಯೋಗದ ಭರವಸೆ ಕೊಡುವುದು ಕಷ್ಟ, ಅದು ಅವರವರ ಅದೃಷ್ಟ ಎಂದು ತಿಳಿಸಿ, ಯಾವ ವಿಶ್ವವಿದ್ಯಾಲಯದಲ್ಲಿ ಸೀಟ್‌ ಸಿಕ್ಕಿದೆ ಎಂದು ಕೇಳಿದೆ.

ಐ. ಓ. ಡಬ್ಲು. ಎ ವಿಶ್ವವಿದ್ಯಾಲಯದಲ್ಲಿ ಸೀಟ್‌ ಸಿಕ್ಕಿದೆ. ಅದು ನಿಮ್ಮೂರಿಗೆ ಎಷ್ಟು ದೂರ ಎಂದು ಕೇಳಿದ. ಮನಸ್ಸಿನಲ್ಲೇ ಯಾವುದಪ್ಪಾ ಈ ಹೆಸರನ್ನೇ ಕೇಳದ ' ಓಕೋಬೋಜೀ" ವಿಶ್ವವಿದ್ಯಾಲಯ (Okoboji ಕನ್ನಡದ ಓಬೀರಾಯ ನ ನೆನಪು ಬರುತ್ತೆ ಅಲ್ವೇ!) ಅಂತ ಯೋಚಿಸಿದೆ. ಅಯೋವ ರಾಜ್ಯದಲ್ಲಿ ' ಓಕೋಬೋಜೀ" ಎಂಬ ದೊಡ್ಡ ಸರೋವರ ಇದೆ. ಬೇಸಿಗೆಯಲ್ಲಿ ಸಾವಿರಾರು ಜನರು ಅಲ್ಲಿಗೆ ಹೋಗಿ ವಾರಾಂತ್ಯಗಳನ್ನು ಅಲ್ಲಿಯ ವಿಶ್ರಾಮ ಧಾಮಗಳಲ್ಲಿ ಕಳೆಯುತ್ತಾರೆ. ಅಲ್ಲಿಯ ಚಾಲೂಕ್‌ ವ್ಯಾಪಾರಿಗಳು ಸಂಚಾರಿ ಜನರ ಹಣದ ಸುಲಿಗೆ ಮಾಡಲು ಹಲವಾರು ವಿಧಾನಗಳನ್ನು ಬಳಸುತ್ತಾರೆ. ಟಿ-ಷರ್ಟ್‌ ನ ಹುಚ್ಚು ಹಿಡಿಯದ ಅಮೆರಿಕನ್‌ ಮಕ್ಕಳು ಇದ್ದಾರೆಯೇ! ಅವರಿಗೋಸ್ಕರವಾಗಿಯೇ OKOBOJI University, A Place To Relax (ಓಕೋಬೋಜೀ ವಿಶ್ವವಿದ್ಯಾಲಯ, 'ಒಂದು ವಿಶ್ರಾಂತಿ ಧಾಮ") ಎಂಬ ನಾಮಧೇಯದ ಟಿ-ಷರ್ಟ್‌ಗಳನ್ನು ಮಾರುತ್ತಾರೆ. ಆ ಟಿ-ಷರ್ಟ್‌ ನ ನೆನಪು ಬಂತು. ನಂತರ, ಅಯೋವಾದ ಗಾಂಪ ಜನರ ಹಿಂದೆ ಹೇಳುವ ' ಇವನೆಲ್ಲೋ ಓಕೋಬೋಜೀ ಯ ವಿದ್ಯಾರ್ಥಿ ಇರಬೇಕು" ಎಂಬ ಹೇಳಿಕೆಯೂ ಮೊಳಗುಟ್ಟಿತು. ಆದರೆ ಐ. ಓ. ಡಬ್ಲು. ಎ ಪದ ವಿಶ್ಲೇಷಣೆ ಹೊಳೆಯಲಿಲ್ಲ. ವಿಚಾರಿಸಿ ತಿಳಿಸುತ್ತೇನೆ, ಯಾವುದೋ ಹೊಸ ವಿಶ್ವವಿದ್ಯಾಲಯ ಇರಬೇಕು; ಇಲ್ಲಿ ಸಣ್ಣ ಸಣ್ಣ ಊರುಗಳಲ್ಲೂ ಒಂದು ಕಾಲೇಜ್‌ ಇರುತ್ತದೆ ಎಂದು ತಪ್ಪಿಸಿಕೊಂಡೆ.

ನಂತರ ನನ್ನ ಪ್ರೊಫೆಸರ್‌ ಸ್ನೇಹಿತನೊಬ್ಬನಿಗೆ ಫೋನ್‌ ಮಾಡಿ, ಈ ' ಐ. ಓ. ಡಬ್ಲು. ಎ" ವಿಶ್ವವಿದ್ಯಾಲಯ ಎಲ್ಲಿದೆ ಎಂದು ವಿಚಾರಿಸಿದೆ. ಅವನೂ ಸಾಕಷ್ಟು ತಲೆ ಕೆಡಿಸಿಕೊಂಡ. ಅವನ ಹತ್ತಿರ ಅಮೆರಿಕಾದ ಎಲ್ಲ ವಿಶ್ವವಿದ್ಯಾಲಯದ ಅಮರಕೋಶ ಇತ್ತು. ಅದರಲ್ಲಿ ಹುಡುಕಿದ. ತಕ್ಷಣ ಜ್ಞಾನೋದಯವಾದವನಂತೆ, ರೀ! ಅದು ನಮ್ಮ ' ಅಯೋವಾ ವಿಶ್ವವಿದ್ಯಾಲಯ" ಕಣ್ರೀ; ನೀವು ' ಐ. ಓ. ಡಬ್ಲು. ಎ" ಅಂತ ಹೇಳಿದ್ರಿ, ನಾನು ಕಕ್ಕಾಬಿಕ್ಕಿ ಆದೆ. ಅದು ನಮ್ಮ 'ಅಯೋವಾ"ದ ಇಂಗ್ಲಿಷ್‌ ಕಾಗುಣಿತ ಅಂತ ಹೇಳಿ ನಕ್ಕ! ನಮ್ಮ ಗಾಂಪತನಕ್ಕೆ ನಾವೇ ಮರುಳಾದೆವು. ಈ ಇಂಗ್ಲಿಷ್‌ ಭಾಷೆಯ ಕಾಗುಣಿತ, ವ್ಯಾಕರಣಕ್ಕೆ ಶಾಪ ಹಾಕಿದೆವು.

A Symbol for speed but, not at the cost of qualityಮಾರನೇ ದಿನ ಬೆಂಗಳೂರಿನ ನನ್ನ ಸ್ನೇಹಿತನಿಗೆ ಫೆನ್‌ ಮಾಡಿ ವಿಚಾರ ತಿಳಿಸಿದೆ. ' ಅಯೋವ " ಅನ್ನುವ ಪದಕ್ಕೆ ಇಂಗ್ಲಿಷ್‌ನಲ್ಲಿ 'AYOVA ಎಂದು ಬರೆಯಬೇಕು, ಆದರೆ ಯಾವುದೋ ಇಂಗ್ಲಿಷ್‌ ಪ್ರಾಣಿ ಅದನ್ನು ಐ. ಓ. ಡಬ್ಲು. ಎ 'IOWA" ಎಂಬ ಕಾಗುಣಿತ ಬರೆದು ಅಧ್ವಾನ ಮಾಡಿ, ಎಲ್ಲರ ತಲೇನೂ ತಿಂತಾ ಇದಾನೆ ಅಂತ ಸಮಜಾಯಿಸಿ ಹೇಳಿದೆ.

ನನ್ನ ಊರು ಅಯೋವ : ಅಯೋವ ವಿಶ್ವವಿದ್ಯಾಲಯ ನಮ್ಮ ಮನೆಗೆ 80 ಮೈಲಿ ದೂರ ಇದೆ. ಒಳ್ಳೆ ಸ್ಕೂಲ್‌, ಹೆಸರುವಾಸಿ, ಕಳಿಸು ನಿನ್ನ ಮಗನ್ನ ಅಂತ ಹೇಳಿದೆ. ಅದಕ್ಕೆ ನನ್ನ ಸ್ನೇಹಿತ ' ನನ್ನ ಮಗ ಇಲ್ಲಿ ಇಂಜನಿಯರಿಂಗ್‌ ಕಾಲೇಜ್‌ನಲ್ಲಿ ಓದಿದಾನೆ, ಅಲ್ಲಿಯ ಸ್ಕೂಲ್‌ಗೆ ಯಾಕೆ ಕಳಿಸಬೇಕು ? " ಅಂದ. ಅಮೆರಿಕಾದಲ್ಲಿ ಕಾಲೇಜಿನ ತರಗತಿಗಳನ್ನು ಸ್ಕೂಲ್‌ ಎಂದು ಕರೆಯುವುದು ವಾಡಿಕೆ ಮಾರಾಯಾ ಅಂತ ವಿವರಿಸಿದೆ.

1980 ರ ದಶಕದಲ್ಲಿ ಪ್ರೊ.ಯು.ಆರ್‌.ಅನಂತಮೂರ್ತಿ ಯವರು ಇದೇ ಸ್ಕೂಲಿನಲ್ಲೇ ( ಅಯೋವಾ ವಿಶ್ವವಿದ್ಯಾಲಯ) ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸುವ ಪ್ರಯತ್ನ ಆಗ ಇಲ್ಲಿ ನಡೆದಿತ್ತು. ಈ ಯೋಜನೆಯನ್ನು ಪೂರೈಸಲು 10 ಲಕ್ಷ ಡಾಲರ್‌ ಸಂಗ್ರಹಿಸಬೇಕಾಗಿತ್ತು. ಕೇವಲ 80,000 ಡಾಲರ್‌ ಹಣ ಸೇರಿಸಲು ಬೆವರಿಳಿದಿತು. ಈಗ ವರ್ಷಕ್ಕೊಮ್ಮೆ ಕನ್ನಡದ ಒಬ್ಬ ಲೇಖಕಕರನ್ನು ಕರೆಸಿ, 2 ತಿಂಗಳು ಇಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದಾರೆ ಎಂಬ ಮಾತು ಕೇಳಿಬರುತ್ತದೆ. ಅದೇನೇ ಇರಲಿ, ವಿಶ್ವವಿದ್ಯಾಲಯವು ಆಗಾಗ್ಗೆ ಪ್ರಕಟಿಸುವ 'ಪುಣ್ಯಕೋಟಿ" ಎಂಬ ಕನ್ನಡ ಸಂಚಿಕೆಯನ್ನು ತಿರುವಿಹಾಕಿದ ನೆನಪು.

ಮುಸುಕಿನ ಜೋಳ, ಸೋಯಾಬೀನ್‌ ಸಮೃದ್ಧಿಯಾಗಿ ಬೆಳೆಯುವ ಅಯೋವಾ ರಾಜ್ಯದ ಜನಸಂಖ್ಯೆ ಕೇವಲ 30 ಲಕ್ಷ. ಆದರೆ ಇಲ್ಲಿರುವ ಕನ್ನಡದವರ ಕುಟುಂಬ ಕೇವಲ 200 ಇರಬಹುದು. ಅಂತರ್ಯುದ್ಧದಲ್ಲಿ ನಿರಾಶ್ರಿತರಾಗಿದ್ದ ಪೂರ್ವ ಯೂರೋಪಿನ ಬಾಸ್ನಿಯಾದೇಶದ 2,000 ಕುಟುಂಬಗಳನ್ನು ಇಲ್ಲಿಗೆ ಕರೆತಂದು ಅಮೆರಿಕನ್‌ ಸರ್ಕಾರ ಪುನರ್ವಸತಿ ನೀಡಿದೆ. ಇದೇ ರೀತಿ ವಿಯಟ್ನಾಮ್‌, ಕಾಂಬೋಡಿಯಾ, ಲಾವೋಸ್‌ ದೇಶದ ನಿರಾಶ್ರಿತರಿಗೂ ಇದು ಮನೆಯಾಗಿದೆ.

ಅಮೆರಿಕದ ಕೆಲಸ ಮಾಡುವ ಒಟ್ಟು ಜನಸಂಖ್ಯೆಯ ಕೇವಲ 2% ಮಾತ್ರ ವ್ಯವಸಾಯದಲ್ಲಿ ನಿರತರಾಗಿದ್ದಾರೆ. (ಭಾರತದಲ್ಲಿ ಈ ಸಂಖ್ಯೆ 70% ) ಇದಕ್ಕೆ ಮುಖ್ಯ ಕಾರಣ ಅಮೆರಿಕ ವ್ಯವಸಾಯದಲ್ಲಿ ಅಪಾರ ಯಂತ್ರೋಪಕರಣಗಳ ಬಳಕೆ. 400 ಅಶ್ವಶಕ್ತಿಯ ಉಳುವಯಂತ್ರಗಳು (ಟ್ರಾಕ್ಟರ್‌ಗಳು), ಒಂದೇ ಯಂತ್ರವು ದಿನಕ್ಕೆ 200 ಎಕರೆ ಫಸಲನ್ನು ಕಟಾವುಮಾಡಿ ಕಣಜಕ್ಕೆ ತುಂಬುವ ಸಾಧನಗಳು(ಕಾಂಬೈನ್ಸ್‌), ಹುಲ್ಲನ್ನು ಕತ್ತರಿಸಿ ಕಂತೆ ಮಾಡಿ ಮೆದೆ ಹಾಕುವ ಯಂತ್ರಗಳು, ಈ ರೀತಿಯ ಎಲ್ಲ ನಮೂನೆಯ ವ್ಯವಸಾಯಕ್ಕೆ ಅನುಕೂಲಮಾಡುವ ಯಂತ್ರಗಳ ಉತ್ಪಾದನೆ, ಹಾಗೂ ರೈತ ಬಾಂಧವರ ದೇಹಶ್ರಮವನ್ನು ಕಡಿಮೆ ಮಾಡುವುದರಲ್ಲಿ ವಿಶ್ವವಿಖ್ಯಾತ ಜಾನ್‌ ಡೀರ್‌ ಕಂಪೆನಿ ಅಗ್ರಗಣ್ಯವಾಗಿದೆ. ಅಯೋವಾ ರಾಜ್ಯದಲ್ಲೇ ಇವರ ಹತ್ತು ಕಾರ್ಖಾನೆಗಳಿವೆ. 'ಹಾರುವ ಜಿಂಕೆಯ" ಗುರುತಿನ ಹಸಿರು ಬಣ್ಣದ ಯಂತ್ರಗಳನ್ನು ಇವರು ಪ್ರಪಂಚದ ಎಲ್ಲೆಡೆ ತಯಾರಿಸುತ್ತಾರೆ. ಪ್ರಪಂಚದಾದ್ಯಂತ 45,000 ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಅಮೆರಿಕದ ವ್ಯವಸಾಯದ ಯಂತ್ರಗಳ ಮಾರುಕಟ್ಟೆಯಲ್ಲಿ ಇವರು 70% ಭಾಗವನ್ನು ಪಡೆದು ಅಗ್ರಜರಾಗಿದ್ದಾರೆ. ಇವರ ಘೋಷಣೆ ಬಹಳ ಆಕರ್ಷಣೀಯವಾಗಿದೆ: 'ಜಿಂಕೆಯಂತೆ ಇನ್ನಾರೂ ಓಡುವುದಿಲ್ಲ" (Nothing Runs like a Deere) ಈ ಕಂಪೆನಿಯ ಸಂಸ್ಥಾಪಕ 150 ವರ್ಷಗಳ ಹಿಂದೆ ಹೇಳಿದ್ದ ಧ್ಯೇಯವಚನದ ಪಾಲನೆ ಇಂದೂ ನಡೆಯುತ್ತಿದೆ. 'ನಾನು ಎಂದೂ ನನ್ನ ಹೆಸರನ್ನು ನನ್ನಲ್ಲಿರುವ ಶ್ರೇಷ್ಠತನ ಇಲ್ಲದಿರುವ ಸಾಮಗ್ರಿಯದಮೇಲೆ ಛಾಪಿಸುವುದಿಲ್ಲ" (I will never put my name on a product that does not have in it the best that is in me).

ನಾಗರೀಕತೆಯ ಎಲ್ಲ ಅನುಕೂಲತೆಗಳಿದ್ದರೂ, ಯುವ ಪೀಳಿಗೆಯವರ ಮನಸೆಳೆಯುವ ಆಕರ್ಷಕ ಮೋಜಿನ ಸ್ಥಳಗಳ ಕೊರತೆಯ ಕಾರಣ, ಕಾಲೇಜು ವಿದ್ಯಾಭ್ಯಾಸ ಮಾಡಿದ ನಂತರ ಅವರು ಅಯೋವಾದಿಂದ ದೊಡ್ಡ ಪಟ್ಟಣಗಳಿಗೆ ವಲಸೆ ಹೋಗುತ್ತಾರೆ. ಇದನ್ನು ಕಡಿಮೆಮಾಡಲು ರಾಜ್ಯದ ಗವರ್ನರ್‌ ಕೆಲವು ಸಲಹೆಗಳನ್ನು ಜಾರಿಮಾಡಿದ್ದಾರೆ. ಇಲ್ಲಿಯ ವಿಶ್ವವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೆಲಸದ ಆದ್ಯತೆ, ವರಮಾನ ತೆರಿಗೆಯ ರಿಯಾಯಿತಿ, ಇತ್ಯಾದಿ.

ನಾವು ನಮ್ಮವರು : ಪ್ರತಿ ವರ್ಷವೂ ಭಾರತ ಮತ್ತು ಕರ್ನಾಟಕದಿಂದ ಹಲವಾರು ಸಂಗೀತ, ನಾಟಕ, ನೃತ್ಯ ತಂಡಗಳು ಅಮೆರಿಕಾಕ್ಕೆ ಪ್ರವಾಸ ಮಾಡಿ ಮುಖ್ಯ ನಗರಗಳಿಗೆ ಭೇಟಿ ಕೊಟ್ಟು ಪ್ರದರ್ಶನ ನೀಡುತ್ತವೆ. ಸುತ್ತ ಮುತ್ತಲಿನ ಭಾರತೀಯರು 200-300 ಮೈಲಿ ಕಾರಿನಲ್ಲಿ ಪ್ರಯಾಣ ಮಾಡಿ ಕಾರ್ಯಕ್ರಮ ವೀಕ್ಷಿಸಲು ಹೋಗುತ್ತಾರೆ. ಕನ್ನಡ ಲೇಖಕರು, ಕವಿಗಳು, ಪತ್ರಿಕೋದ್ಯಮಿಗಳು, ಸಮಾಜ ಸೇವಕರು ಮುಂತಾದವರೂ ಸಹ ಅಮೆರಿಕಾದಲ್ಲಿರುವ ಹಲವಾರು ಕನ್ನಡ ಸಂಘಗಳ ಆಮಂತ್ರಣದ ಮೇಲೆ ಹೋಗಿ ಅಲ್ಲಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಆದರೆ ಅಯೋವಾ ರಾಜ್ಯದಲ್ಲಿ ಯಾವ ಕನ್ನಡ ಸಂಘವೂ ಇಲ್ಲದ ಕಾರಣ ಅಹ್ವಾನವಿಲ್ಲದೆ ಯಾರೂ ಬರುವುದಿಲ್ಲ. ಆದರೆ ಇತ್ತೀಚೆಗೆ ಅಮೆರಿಕಾದ ಹಲವಾರು ರಾಜ್ಯದ ಉತ್ಸಾಹಿ ಕನ್ನಡ ಪ್ರೇಮಿಗಳು ಒಟ್ಟಾಗಿ ಸೇರಿ, ಕರ್ನಾಟಕದ ಬಹುಮುಖ ಪ್ರತಿಭೆಯ ವಿದ್ವಾಂಸರನ್ನು ಅಹ್ವಾನಿಸಿ, ಅವರಿಗೆ ಅಮೆರಿಕಾದ ವಿವಿಧ ರಾಜ್ಯಗಳ ಪ್ರವಾಸಮಾಡುವ ಹಾಗೂ ಅಮೆರಿಕನ್ನಡಿಗರ ಪ್ರೀತಿ ವಿಶ್ವಾಸಗಳ ಪರಿಚಯ ಮಾಡಿಕೊಡುವ ಉದ್ದೇಶದಲ್ಲಿ ಸಫಲರಾಗಿದ್ದಾರೆ.

ಅಮೆರಿಕನ್ನಡಿಗರ ಆಮಂತ್ರಣದಿಂದ ಇತ್ತೀಚೆಗೆ ಬಂದಿದ್ದ ಮೂರು ಪ್ರಮುಖ ಗೌರವಪೂರ್ಣ ಅತಿಥಿಗಳ ಜೊತೆ ಕೆಲವು ದಿನಗಳ ಕಾಲ ಕಳೆಯುವ ಸುವರ್ಣಾವಕಾಶ ನನಗೆ ದೊರಕಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X