ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸಾಯಿ, ಭಾಗ-2 : ನೋಡಿ ಸ್ವಾಮಿ ಅವರ್ರಿರೋದೆ ಹೀಗೆ !

By Staff
|
Google Oneindia Kannada News

ಒಂದು ದಿನ ಇವನ ಅಪ್ಪ, ಅಮ್ಮ, ಇಬ್ಬರು ತಂಗಿ ಅಲ್ಲಿಗೆ ಬಂದಿದ್ದರು. ಮನೆಯಲ್ಲಿ ಹೆಂಡತಿ ಮಗಳ ಜೊತೆಗೆ ಇದ್ದ ಇವನಿಗೆ ಅವರು ಬಂದಿದ್ದು ಮನೆ ತುಂಬಿದಂತಾಗಿತ್ತು. ಮೊದಲ ದಿನ ಎಲ್ಲರೂ ಸಂತೋಷದಿಂದ ಕಳೆದರೆ, ಎರಡನೆ ದಿನ ಸಂತೋಷ ಪಡಲು ಅವರಲ್ಲಿ ಐದು ಜನ ಇರಲಿಲ್ಲ. ಪಟೇಲ್‌ ತನ್ನ ಬೆಳೆಗಳನ್ನು ನೋಡಲು ಮಧ್ಯಾಹ್ನ ಊಟ ಮುಗಿಸಿ ಹೊರಟ, ಮನೆಯಿಂದ ಹೊರಗ ಬಂದೊಡನೆ ಅವನಿಗೆ ಕಾಣಿಸಿದ್ದು ಹಸುಗಳ ಗುಂಪು, ತನ್ನದಲ್ಲದ ಜಾಗದಲ್ಲಿ ಹಾಕಿದ್ದ ಬೆಳೆಗಳನ್ನು ಅವು ತನಿಚ್ಛೆಯಂತೆ ಮೇಯುತ್ತಿದ್ದವು. ಇವನಿಗೆ ತಡೆಯಲಾಗದ ಸಿಟ್ಟು. ಕೈಯಲ್ಲಿ ಬಾಟಲಿ ಇರಲಿಲ್ಲವಾದ್ದರಿಂದ ಗನ್‌ ಇತ್ತು. ಮಸಾಯಿಗಳನ್ನು ಕರೆದು ಅವರಿಗೆ ಮನ ಬಂದಂತೆ ಬೈದ. ಅವರು ಹಸುಗಳನ್ನು ವಾಪಸ್ಸು ಕರೆಯಲಿಲ್ಲ. ಜಗಳ ಜೋರಾಯಿತು. ಸುಮಾರು 15-20 ಮಸಾಯಿಗಳು ಸೇರಿ ಜಗಳದ ಹಬೆ ಮೇಲೇರುತ್ತಿತ್ತು. ಪಟೇಲನಿಗೆ ಗೊತ್ತಿಲ್ಲದೆ ಅವನ ಸಿಟ್ಟು ಅವನಿಂದ ಗುಂಡು ಹಾರಿಸಿತು. ಮಸಾಯಿಯ ಒಂದು ಮಗು ನೆಲದ ಮೇಲೆ ಬಿತ್ತು. ಕೂಗಿದರು ಮಸಾಯಿಗಳು. ಎಲ್ಲಿದ್ದರೋ ಏನೋ, ಸುಮಾರು ಅರ್ಧ ಘಂಟೆಯಲ್ಲಿ ಸೇರಿದರು 500 ಮಸಾಯಿಗಳು. ಒಬ್ಬ ಮಸಾಯಿಯ ಕೂಗು ಸುಮಾರು ಮೂರು ಕಿಲೋ ಮೀಟರ್‌ ತನಕ ಕೇಳಿಸಿತ್ತು. ಬಂದ ಮಸಾಯಿಗಳು ಪಟೇಲನನ್ನು ಹಿಡಿದು ಬಂಧಿಸಿದರು. ಅವನ ಮನೆಗೆ ನುಗ್ಗಿ ಅವರ ಅಪ್ಪ, ಅಮ್ಮ, ಹೆಂಡತಿ ಹಾಗು ಇಬ್ಬರು ತಂಗಿಗೆ ಮನ ಬಂದಂತೆ ಥಳಿಸಿದರು, ಮಗಳು ಮಾತ್ರ ಅವಿತುಕೊಂಡ ಜಾಗದಿಂದ ಕದಲಲಿಲ್ಲ. ಇಬ್ಬರು ತಂಗಿಯರಲ್ಲಿ ಒಬ್ಬಳು ಸತ್ತವಳಂತೆ ಮಲಗಿದಳು. ಸುಮಾರು ನಾಲ್ಕು ಘಂಟೆಗಳ ಕಾಳಗದಲ್ಲಿ ಬದುಕಿದವರು- ಪಟೇಲ್‌, ಅವರ ಮಗಳು ಹಾಗು ಒಬ್ಬ ತಂಗಿ. ಪೋಲಿಸರು ಬಂದು ಮಗುವನ್ನು ಕೊಂದ ಪಟೇಲ್‌ನನ್ನು ಬಂಧಿಸಿದರೇ ಹೊರತು, ಐದು ಕೊಲೆ ಮಾಡಿದ ಮಸಾಯಿಗಳನ್ನು ಮುಟ್ಟುವ ಧೈರ್ಯಕೂಡ ಮಾಡಲಿಲ್ಲ. ಕೊನೆಗೆ ಫಾರ್ಮ್‌ನ ಮ್ಯಾನೇಜರ್‌ ತನ್ನದಲ್ಲದ ತಪ್ಪನ್ನು ಒಪ್ಪಿಕೊಂಡು ಪಟೇಲ್‌ನನ್ನು ಹೊರತಂದ. ನಾಡಿನಲ್ಲಿರುವ ಮಸಾಯಿಗಳನ್ನು ಪೋಲೀಸರು ಮುಟ್ಟಬಹುಯೇ ಹೊರತು, ಕಾಡಿನಲ್ಲಿರುವವರನ್ನು ಅಲ್ಲ !

ಕಾಡಿನ ಮಸಾಯಿಗಳ ಅನೇಕ ಕಥೆಗಳು ನಿಗೂಢವಾಗಿಯೆ ಉಳಿಯುತ್ತವೆ. ಆದರೆ ನಾಡಿನಲ್ಲಿರುವ ಮಸಾಯಿಗಳ ಬಗ್ಗೆ ಎಲ್ಲವೂ ಬಯಲು. ನಾಗರೀಕತೆ ಇರುವ ನಾಡಿನ ಮಸಾಯಿಗಳು ತಮ್ಮದೆ ರೀತಿಯಲ್ಲಿ ಬದುಕುತ್ತಾರೆ. ನಾಡಿನಲ್ಲಿರುವ ಮಸಾಯಿಗಳಲ್ಲಿ ಹೆಚ್ಚಿನವರು ಮಾಡುವ ಕೆಲಸ ಸೆಕ್ಯುರಿಟಿ ಗಾರ್ಡ್‌. ನೋಡಲು ಗಟ್ಟಿ ಮುಟ್ಟಾಗಿರುವ ಮಸಾಯಿಗಳಿಗೆ ಹೇಳಿಮಾಡಿಸಿದ ಕೆಲಸ ಅದು. ನಂಬಿಕೆಯಲ್ಲಿ ಆಫ್ರಿಕಾದ ಇತರ ಜನಾಂಗಗಳಿಗಿಂತ ಮಸಾಯಿಗಳು ಉತ್ತಮರು. ದಾರಿಯಲ್ಲಿ ಹೋಗುವರನ್ನು ತಡೆದು ದೋಚುವವರು ಇದ್ದಾರೆ. ಆದರೆ ಮಸಾಯಿಗಳು ಅಂತಹ ಕೆಲಸ ಮಾಡುವುದು ಕಡಿಮೆ.

ಒಮ್ಮೆ ನಾಲ್ಕು ಜನ ಲ್ಯಾಂಡ್‌ ಕ್ರ್ಯೂಸರ್‌ನಲ್ಲಿ ದರೋಡೆ ಮಾಡಲು ರಾತ್ರಿ ಸುಮಾರು ಎರಡು ಘಂಟೆಗೆ ಬಂದಿದ್ದರು. ನಮ್ಮ ಕಾಂಪೋಂಡ್‌ನಲ್ಲಿ ಮಸಾಯಿ ಸೆಕ್ಯುರಿಟಿ ಗಾರ್ಡ್‌ ಇದ್ದ. ಅವರು ಬಂದಿದ್ದು ಇವನಿಗೆ ಗೊತ್ತಾಯಿತು. ಗೇಟಿನ ಸಣ್ಣ ಕಿಟಕಿ ತೆಗೆದು ನೋಡಿದ. ಲ್ಯಾಂಡ್‌ ಕ್ರ್ಯೂಸರ್‌ನಿಂದ ಇಳಿದು ನಾಲ್ಕು ಜನ ಬರುತ್ತಿದ್ದರು. ತಕ್ಷಣ ಇವನು ಹೊರಗೆ ಹೋಗಿ, ತನ್ನಲ್ಲಿದ್ದ ಬಾಣವನ್ನು ಅವರೆಡೆಗೆ ಬಿಟ್ಟ. ಬರುತ್ತಿದ್ದ ನಾಲ್ಕರಲ್ಲಿ ಇಬ್ಬರನ್ನು ಗಾಯಗೊಳಿಸಿದ. ಎಲ್ಲರೂ ಹೋಗಿ ತಮ್ಮ ಗಾಡಿಯಲ್ಲಿ ಕೂರಬೇಕು, ಅಷ್ಟರೊಳಗೆ ತನ್ನ ಕೈಲಿದ್ದ ಭರ್ಜಿಯನ್ನು ಅವರೆಡೆಗೆ ಎಸೆದ. ಡ್ರೈವರ್‌ ಮುಂದಿನ ಗಾಜನ್ನು ಸೀಳಿ ಹಿಂಬದಿಯ ಬಾಗಿಲನ್ನು ಕೊರೆದು ಕೆಳಗೆ ಬಿದ್ದಿತ್ತು ಅವನ ಭರ್ಜಿ. ಲ್ಯಾಂಡ್‌ ಕ್ರ್ಯೂಸರ್‌ ಎನ್ನುವ ಗಾಡಿ ಎಷ್ಟು ಗಟ್ಟಿ ಎಂದರೆ, ಒಮ್ಮೆ ಸಫಾರಿಗೆ ಹೋಗಿದ್ದ ಲ್ಯಾಂಡ್‌ ಕ್ರ್ಯೂಸರ್‌ ಅನ್ನು ಆನೆ ತಡೆಯಿತು. ಇವರು ಜೋರಾಗಿ ಹಾರ್ನ್‌ ಮಾಡಿದ್ದರಿಂದ ಆನೆಗೆ ಏನು ಮಾಡಲೂ ಗೊತ್ತಾಗದೆ ಹತ್ತಿರ ಬಂದು ಸೊಂಡಲಿನಿಂದ ದಬ್ಬಿತು. ಪುಣ್ಯಕ್ಕೆ, ಆನೆ ಬರುವುದರೊಳಗೆ ಒಳಗೆ ಇದ್ದವರು ಇಳಿದು ಹಿಂದೆ ಇದ್ದ ಮತೊಂದು ಕಾರಿನಲ್ಲಿ ಕುಳಿತು ವಾಪಸ್‌ ಹೊರಟರು. ಆನೆಯಿಂದ ದಬ್ಬಿಸಿಕೊಂಡ ಗಾಡಿ ನಾಲ್ಕು ಬಾರಿ ಮಗುಚಿಬಿದ್ದರೂ ಅದರ ಗಾಜು ಒಡೆದಿರಲಿಲ್ಲ . ಯಾವುದೇ ಭಾಗವು ಜಜ್ಜಿ ಹೋಗಿರಲಿಲ್ಲ. ಅಂಥಹ ಗಟ್ಟಿ ಮುಟ್ಟಾದ ವಾಹನ ಅದು. ಮಸಾಯಿ ಎಸೆದ ಭರ್ಜಿ ಕಾರಿನ ಮುಂಭಾಗದಿಂದ ಹಿಂಭಾಗದವರೆಗೆ ಸೀಳಿ ಹೋಗಿತ್ತೆಂದರೆ, ಅದರ ರಭಸ ಎಷ್ಟಿರಬಹುದೆಂದು ಊಹಿಸಿ. ಮಸಾಯಿ ಎಸೆದ ಭರ್ಜಿಯನ್ನು ನೋಡಿಯೇ ಕಳ್ಳರು ಓಡಿಹೋಗಿದ್ದರು. ಹತ್ತು ಹತ್ತು ಜನ ಕಳ್ಳರನ್ನು ಒಬ್ಬೇ ಒಬ್ಬ ಮಸಾಯಿ ಹೊಡೆದು ಬೀಳಿಸುತ್ತಾನೆ. ಕಳ್ಳರ ಕೈಲಿ ಬಂದೂಕು ಇರಬಾರದು ಅಷ್ಟೆ. ಸೆಕ್ಯುರಿಟಿ ಕೆಲಸ ಮಾಡುವ ಮಸಾಯಿ ತನ್ನ ಹತ್ತಿರ ಬಿಲ್ಲು - ಬಾಣ, ಒಂದು ಭರ್ಜಿ ಹಾಗೂ ಮೂರು ಅಡಿಯ ಚಾಕು (ಫಂಘ ಎಂದು ಅದನ್ನು ಕರೆಯುತ್ತಾರೆ) ವನ್ನು ಯಾವಾಗಲೂ ಇಟ್ಟುಕೊಂಡಿರುತ್ತಾನೆ.

ಹೆಣ್ಣು ಮಸಾಯಿಗಳು ಎಷ್ಟೇ ಬಡವರಾದರೂ ಅವರು ಯಾರ ಮನೆಯಲ್ಲೂ ಕೆಲಸ ಮಾಡುವುದಿಲ್ಲ. ತರಕಾರಿಗಳನ್ನು ಬೆಳೆದು ಮಾರಾಟ ಮಾಡುತ್ತಾರೆ, ಹಣ್ಣುಗಳನ್ನು ಮಾರುತ್ತಾರೆ, ತೋಟಗಳಲ್ಲಿ ಕೆಲಸ ಮಾಡುತ್ತಾರೆ. ಯಾರ ಮನೆಯಲ್ಲೂ ಮನೆಗೆಲಸ ಮಾಡುವುದಿಲ್ಲ. ಗಂಡು ಮಸಾಯಿಗಳಂತೆ ಹೆಣ್ಣು ಮಸಾಯಿಗಳೂ ಕೂಡ ಬಹಳ ಗಟ್ಟಿ ಮುಟ್ಟು.

ಮಸಾಯಿಗಳು ಕಾಲಿಗೆ ಚಪ್ಪಲಿಗಳನ್ನು ಕೊಂಡು ಹಾಕಿಕೊಳ್ಳುವುದಿಲ್ಲ. ದಾರಿಯಲ್ಲಿ ಬಿದ್ದಿರುವ ಟೈರನ್ನು ತಮ್ಮ ಚಾಕುವಿನಲ್ಲಿ ಪಾದದಾಕಾರವಾಗಿ ಕತ್ತರಿಸಿ, ಅದನ್ನು ಹಿಡಿಯಲು ಬೆಲ್ಟನ್ನು ಮಾಡಿಕೊಂಡು, ಕವಾಡಿಸ್‌ ಚಪ್ಪಲಿ ತರಹ ಧರಿಸಿಕೊಳ್ಳುತ್ತಾರೆ. ಮಸಾಯಿಗಳಿರುವ ಕಾಡಿನ ಒಳಕ್ಕೆ ಗೊತ್ತಿಲ್ಲದೆ ಹೋಗುವುದು ಅಪಾಯಕಾರಿ. ಒಮ್ಮೆ ಇಬ್ಬರು ಬಿಳಿಯರು ಬೈಕನ್ನು ತೆಗೆದುಕೊಂಡು ಕಾಡಿನ ಒಳಗೆ ಹೋದರು. ಕಾಡನ್ನು ನೋಡುತ್ತಾ ನೋಡುತ್ತಾ ಅವರಿಗೆ ಆದ ಸಂತೋಷಕ್ಕೆ ಅವರಿಗೆ ಗೊತ್ತಾಗದಷ್ಟು ಒಳಕ್ಕೆ ಹೋಗಿದ್ದರು. ಹೋದವರು ಎರಡು ದಿನವಾದರೂ ಬರಲಿಲ್ಲ ಎಂದು ಪೋಲಿಸರು ಹುಡುಕಲು ಹೊರಟರು. ಪೋಲಿಸರಿಗೆ ಸಿಕ್ಕಿದ್ದು ಆ ಇಬ್ಬರು ಬಿಳಿಯರ ಹೆಣ. ಪ್ರಾಣಿಗಳು ಸಾಯಿಸಿದೆ ಎನ್ನುವುದಾದರೆ, ಅವರ ಮೈ ಮೇಲೆ ಚಾಕುವಿನ ಗುರುತು ಬಿಟ್ಟು ಬೇರೇನು ಇರಲಿಲ್ಲ. ಮನುಷ್ಯರು ಸಾಯಿಸಿದ್ದಾರೆ ಎನ್ನುವುದಾದರೆ ಬಿಳಿಯರ ಜೇಬಿನಲ್ಲಿ ಸುಮಾರು ಡಾಲರ್‌ ಇವೆ, ಕೈಯಲ್ಲಿ ವಾಚ್‌ ಇದೆ, ಬೆರಳಿನಲ್ಲಿ ಉಂಗುರ ಇದೆ. ಆಮೇಲೆ ಕಣ್ಣು ತಿರುಗಿದ್ದು ಅವರ ಬೈಕ್‌ ಮೇಲೆ. ಇಬ್ಬರ ಬೈಕ್‌ಗಳು ಬೇರೆ ಬೇರೆ ದಿಕ್ಕಿನಲ್ಲಿ ಬಿದ್ದಿವೆ, ಆದರೆ ಎರಡು ಬೈಕ್‌ನಲ್ಲೂ ಚಕ್ರಗಳಿಲ್ಲ. ಚಕ್ರವನ್ನು ಹುಡುಕಿಕೊಂಡು ಹೋಗುವ ಧೈರ್ಯ ಪೋಲಿಸರಿಗೆ ಬರಲಿಲ್ಲವಾದ್ದರಿಂದ ಎಲ್ಲರ ಯೋಚನೆಗಳು ಅಲ್ಲಿಗೆ ನಿಂತಿತು. ಚಪ್ಪಲಿ ಮಾಡಿಕೊಳ್ಳಲು ಜನರ ಪ್ರಾಣ ತೆಗೆಯುವ ಮಸಾಯಿಗಳ ಮುಂದೆ ನಾಗರೀಕತೆಯ ಪಾಠ ಹೇಳುವರ್ಯಾರು.

ಅವರನ್ನು ಕೊಲೆ ಮಾಡಿದ ಮಸಾಯಿ ಒಮ್ಮೆ ಸಿಕ್ಕಿದ್ದ. ಅವನು ಹೇಳಿದ್ದು - ‘ನಮಗೆ ಚಪ್ಪಲಿ ಮಾಡಿಕೊಳ್ಳಲು ಟೈರ್‌ ಬೇಕು. ಕೇಳಿದರೆ ಯಾರು ಕೊಡುತ್ತಾರೆ? ಬಹಳ ಸಲ ಕೇಳಿದ್ದೇವೆ, ಯಾರು ಕೊಟ್ಟಿರಲಿಲ್ಲ. ಆದುದರಿಂದ ಈ ಸಾರಿ ಯಾರಾದರೂ ಬಂದರೆ, ಕೇಳುವುದೇ ಬೇಡ. ಅವರಿಗೆ ಹೊಡೆದು ತೆಗೆದುಕೊಳ್ಳೋಣ ಎಂದು ಯೋಚಿಸಿದ್ದೆವು. ಈ ಇಬ್ಬರು ಬಿಳಿಯರು ನಮಗೆ ಹೊಡೆಯಲು ಬಂದರು, ನಮ್ಗೆ ಹೊಡೆಯುವುದು ಎಂದರೆ ಏನು? ಅದಕ್ಕೆ ಹೊಡೆಯಲು ಅವರೇ ಇರಬಾರದು ಎಂದು ಹಾಗೆ ಮಾಡಿದೆವು’.

ಇವರಿಗೆ ದುಡ್ಡಿನ ಆಸೆ ಇಲ್ಲ , ದುರಾಸೆ ಇಲ್ಲ. ತಿನ್ನಲು ಬೇಕಾದಾಗ ತಿನ್ನುವುದನ್ನು ಪಡೆದುಕೊಳ್ಳುವ ಯೋಚನೆ, ಚಪ್ಪಲಿ ಬೇಕಾದಾಗ ಅದರ ಯೋಚನೆ. ತಮಗೆ ಏನು ಬೇಕೊ ಅದನ್ನು ಮಾತ್ರ ಪಡೆದುಕೊಳ್ಳುವ ತವಕ. ಅವರಿಗೆ ಬೇಕಾದುದ್ದನ್ನು ಪಡೆದುಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಇವರೇ ಮಸಾಯಿಗಳು. ಇವರಿಗಿನ್ಯಾರು ಸಾಟಿಯಾದಾರು?


ಮಸಾಯಿ- ಭಾಗ 1
ಸಿಂಹ ಕೊಂದು ರಕ್ತ ಲೇಪಿಸಿ ಕೊಂಡಾತನೇ ‘ಮಸಾಯಿ’!


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X