• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿಯಲ್ಲಿ ಸಂಕ್ರಾಂತಿ ಹಬ್ಬ ವೈಭವದಾಚರಣೆ

By Staff
|

ಸಂಕ್ರಾಂತಿಯ ಸಂಭ್ರಮವು ಬಾಲ್ಯದಲ್ಲಿ, ತವರುನಾಡಿನಲ್ಲಿ, ವಿಶೇಷವಾಗಿ ಉತ್ತರಕರ್ನಾಟಕದಲ್ಲಿ ಹೇಗಿರುತ್ತಿತ್ತು ಎಂದು ಕಾವೇರಿಯ ಪ್ರಪ್ರಥಮ ಅಧ್ಯಕ್ಷೆ ವಿಮಲಾ ಚನ್ನಬಸಪ್ಪ ಮೆಲುಕು ಹಾಕಿದರು. ಅವರ ಮಾತುಗಳ ನಂತರ ಇನ್ನೊಬ್ಬ ಕಾವೇರಿ ಹಿರೀಕ ಕೃಷ್ಣಮೂರ್ತಿಯವರು ಮಾತಾಡಿ ಇತ್ತೀಚೆಗೆ ದಿವಂಗತರಾದ ಕರ್ನಾಟಕ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಹಾಗೆಯೇ ಕಾವೇರಿ ಕುಟುಂಬದ ಹಿರಿತಲೆ ಪ್ರೇಮಾ ರಾಧಾಕೃಷ್ಣನ್‌ ಅವರು ದೈವಾಧೀನರಾದ ವಿಷಯವನ್ನೂ ಸಭೆಗೆ ತಿಳಿಸಿ, ಅಗಲಿದ ಆತ್ಮಗಳಿಗೆ ಚಿರಶಾಂತಿ ಕೋರುತ್ತ ಒಂದು ನಿಮಿಷದ ಮೌನಪ್ರಾರ್ಥನೆಯಾಂದಿಗೆ ಗೌರವ ಸಲ್ಲಿಸಲಾಯಿತು. ಪ್ರೇಮಾ ರಾಧಾಕೃಷ್ಣನ್‌ ಅದೆಷ್ಟು ಆತ್ಮೀಯವಾಗಿ ‘ಕಾವೇರಿ’ ಮತ್ತು ಕನ್ನಡ ಸಮುದಾಯದ ಅಭ್ಯುದಯಕ್ಕಾಗಿ ಶ್ರಮಿಸಿದ್ದರು ಎಂಬುದನ್ನು ಕೃಷ್ಣಮೂರ್ತಿ ಭಾವುಕರಾಗಿ ನೆನೆದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದು, ನೆಕ್ಸ್ಟ್‌ ಐಟಂ ‘ವಂದೇ ಮಾತರಂ’ ಡ್ಯಾನ್ಸ್‌. ಧ್ವಜ ಹಿಡಿದ ಭರತಮಾತೆಗೆ (ಶಶಿಕಲಾ ಕುಲಕರ್ಣಿ) ವಿವಿಧ ವಯಸ್ಸಿನ ಮಕ್ಕಳಿಂದ ಸಂಗೀತನೃತ್ಯ ನಮನ. ಇದರ ಕೊರಿಯೋಗ್ರಾಫರ್ಸ್‌ ಸಂಧ್ಯಾ ರಾಜಶೇಖರ್‌ ಮತ್ತು ಅಖಿಲಾ ಸುಧೀಶ್‌. ಯುವ ವಿಭಾಗದ ನೃತ್ಯಪಟುಗಳು ಅಖಿಲ್‌, ಅರ್ಪಿತ್‌ ಮತ್ತು ಸಂದೇಶ್‌. ಡಾನ್ಸ್‌ ಮುಗಿದ ಮೇಲೆ ತೆರೆ ಎಳೆಯುವುದನ್ನು ಮರೆತದ್ದರಿಂದ ಮಕ್ಕಳೆಲ್ಲ ಸ್ಟೇಜ್‌ನಿಂದ ನಿರ್ಗಮಿಸಿದರೂ ಎತ್ತರದ ಸ್ಟೂಲ್‌ ಮೇಲೆ ನಿಶ್ಚಲವಾಗಿ ನಿಂತಿದ್ದ ಭಾರತಮಾತೆ ಹಾಗೆಯೇ ಸ್ವಲ್ಪಹೊತ್ತು ನಿಲ್ಲಬೇಕಾಗಿ ಬಂತು. ತನ್ಮೂಲಕ ಸಭಿಕರಿಗೆ ಸ್ವಲ್ಪ ಬೋನಸ್‌ ಮನರಂಜನೆ :-) ಅಂದಹಾಗೆ ಇದೇ ‘ವಂದೇ ಮಾತರಂ’ ಸಂಗೀತ ನೃತ್ಯ ಮುಂದಿನ ಶನಿವಾರ ವಾಷಿಂಗ್‌ಟನ್‌ನಲ್ಲಿ ನಡೆಯುವ ‘ಭಾರತ ಗಣರಾಜ್ಯ’ ದಿನಾಚರಣೆಯ ದೊಡ್ಡ ಕಾರ್ಯಕ್ರಮದಲ್ಲಿ ಕರ್ನಾಟಕದ/ಕನ್ನಡದ ಪ್ರತಿನಿಧಿ ಆಗಲಿದೆ.

ಟೀಚರ್‌ ಕೈಯಲ್ಲಿ ಬೆತ್ತ ?

Kaveri kannadigas celebrate Swarna Sankranthi‘ಅ ಆ ಇ ಈ ಕನ್ನಡದ ಅಕ್ಷರಮಾಲೆ...’ ಹಾಡಿಗೆ, ಒಂದೊಂದೇ ಅಕ್ಷರ ಬರೆದ ಫಲಕಗಳನ್ನು ಹಿಡಿದುನಿಂತಿದ್ದ ಪುಟ್ಟ ಮಕ್ಕಳಿಂದ ಅಭಿನಯವನ್ನು ಮಾಡಿಸಿದ ‘ಟೀಚರ್‌’ ಅನಿತಾ ಕುಲಕರ್ಣಿಯವರ ಕೈಯಲ್ಲಿ ಬೆತ್ತವೂ ಇತ್ತು ! ಅಲ್ಲೇ ತೂಗುಹಾಕಿದ್ದ ‘ಕನ್ನಡ ವರ್ಣಮಾಲೆ’ ಚಾರ್ಟಲ್ಲಿ ಅಕ್ಷರಗಳನ್ನು ತೋರಿಸಲು ‘ಪಾಯಿಂಟರ್‌’ ಆಗಿ ಅದರ ಬಳಕೆಯೇ ಹೊರತು ಮಕ್ಕಳ ಮೇಲೆ ಪ್ರಹಾರಕ್ಕಲ್ಲ ಎಂದು ಭಾವಿಸೋಣ; ಏಕೆಂದರೆ ಅಮೆರಿಕದಲ್ಲಿ ಟೀಚರ್‌ ಬಿಡಿ, ಹೆತ್ತವರು ಕೂಡ ಮಕ್ಕಳಿಗೆ ಹೊಡೆಯುವುದು ಅಪರಾಧ!

ಅಕ್ಷರಮಾಲೆ ನೃತ್ಯದ ನಂತರದ ಕಾರ್ಯಕ್ರಮ ತೇಜಸ್‌ ಸುರೇಶ್‌, ಶ್ರವಣ್‌ ಮತ್ತು ಮಿಥುನ್‌ ಸುರೇಶ್‌ - ಇವರಿಂದ ತಬಲಾ ವಾದನ. ರೂಪಕ್‌ ತಾಳದ ಒಂದೆರಡು ‘ಕಾಯ್ದಾ’ಗಳು. ಕಳೆದ ವರ್ಷ ದೀಪಾವಳಿ ಸಮಯದಲ್ಲಿ ಶ್ವೇತಭವನದಲ್ಲಿ ತಬಲಾವಾದನ ಕಾರ್ಯಕ್ರಮ ನೀಡಿದ ಪ್ರತಿಭಾನ್ವಿತ ಬಾಲಕ ತೇಜಸ್‌, ಕಾವೇರಿ ಮಾಜಿ ಅಧ್ಯಕ್ಷ ಸುರೇಶ ರಾಮಚಂದ್ರರ ಸುಪುತ್ರ. ಮಿಥುನ್‌, ತೇಜಸ್‌ನ ಅನುಜ; ಶ್ರವಣ್‌ ಇನ್ನೊಬ್ಬ ಸಹಪಾಠಿ. ಒಟ್ಟಿನಲ್ಲಿ ತ್ರಿಮೂರ್ತಿಗಳ ತಬಲಾ ‘ಕರಾಮತ್ತು’ ಕರ್ಣಾನಂದಕರ.

ಸುಗ್ಗಿಯ ಕುಣಿತ

ಸಂಕ್ರಾಂತಿ ಹಬ್ಬ ಸುಗ್ಗಿಯ ಸಂಭ್ರಮದ ಪ್ರತೀಕ. ಅದಕ್ಕೆಂದೇ ಸುಗ್ಗಿ-ಹುಗ್ಗಿ ಸಂಕ್ರಾಂತಿಯ ಜೋಡಿಪದಗಳು. ಸುಗ್ಗಿ ಕುಣಿತದ ಹಾಡಿಗೆ ಮಕ್ಕಳಿಂದ ಸಮೂಹ ನೃತ್ಯವನ್ನು ನಿರ್ದೇಶಿಸಿದವರು ಅನಿತಾ ರಾವ್‌. ಬಳಿಕ ಶೀಲಾ ಕುಮಾರ್‌ ಕೊರಿಯೋಗ್ರಾಫಿಯಲ್ಲಿ ಇನ್ನೊಂದು ಸಮೂಹನೃತ್ಯ ‘ವಚನದಲ್ಲಿ ನಾಮಾಮೃತ ತುಂಬಿ’. ಪ್ರತಿಭಾವಂತ ಬಾಲಕಿ ಮೋಹಕ ಮಾರಿಸ್ಸಾ ಳಿಂದ ಶಾಸ್ತ್ರೀಯ ನೃತ್ಯದ ಮತ್ತೊಂದು ಪ್ರಸ್ತುತಿ.

ಶೀಲಾ ಕುಮಾರ್‌ ಅವರದೇ ನಿರ್ದೇಶನದಲ್ಲಿ ‘ಭಾಗ್ಯದ ಬಳೆಗಾರ’ ಸಮೂಹ ನೃತ್ಯ (ಮಹಿಳೆಯರು ಮತ್ತು ‘ಬಳೆಗಾರ’ನ ಪಾತ್ರದಲ್ಲಿ ರಾಜೀವ್‌ ಪೌಲ್‌) ಕೂಡ ಚೆನ್ನಾಗಿ ಮೂಡಿಬಂದು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುವುದರಲ್ಲಿ ಸಫಲವಾಯಿತು.

ಜೈ ಜವಾನ್‌ ಜೈ ಕಿಸಾನ್‌ ಜೈ ಪೋಸ್ಟ್‌ಮ್ಯಾನ್‌ !

ಒಂದಾದಮೇಲೊಂದು ಸಮೂಹನೃತ್ಯಗಳಿಂದ ಅಜೀರ್ಣವಾಗದಂತೆ ನೋಡಿಕೊಂಡವರು ‘ಮಂಗಮ್ಮನ ಪ್ರೇಮ ಪತ್ರ’ ಪ್ರಹಸನವನ್ನಾಡಿದ ಡಾ। ರವಿ ಹರಪ್ಪನ ಹಳ್ಳಿ ಮತ್ತು ಅನಿತಾ ಕುಲಕರ್ಣಿ. ಪ್ರಹಸನದಲ್ಲಿ ಪೋಸ್ಟ್‌ಮ್ಯಾನ್‌ನದು ಒಂದೇ ಗೋಗರೆತ - ತನ್ನ ವೃತ್ತಿಯ ಬಗ್ಗೆ ಸಾಹಿತ್ಯದಲ್ಲಿ, ರಾಜಕೀಯ ಘೋಷಣೆಗಳಲ್ಲಿ ಇದುವರೆಗೂ ಪ್ರಸ್ತಾಪವೇ ಆಗಿಲ್ಲ. ಅದು ಅನ್ಯಾಯ. ಲಾಲ ಬಹಾದೂರ್‌ ಶಾಸ್ತ್ರಿಯವರ ಸ್ಲೋಗನ್‌ ಸಹಿತ ಜವಾನರಿಗೆ, ಕಿಸಾನರಿಗಷ್ಟೇ ಸೀಮಿತವಾಗಿದೆ. ‘ಜೈ ಪೋಸ್ಟ್‌ಮಾನ್‌...’ ಯಾಕಿಲ್ಲ ಅದರಲ್ಲಿ ? ಎಂದು. ಚುರುಕು ಸಂಭಾಷಣೆಯ ಉತ್ತಮ ಪ್ರಹಸನ.

ಇನ್ನೊಂದು ಸ್ಕಿಟ್‌ ‘ಖೆಡ್ಡ’ (The ditch). ಇಂಗ್ಲಿಷ್‌ ಭಾಷೆಯಲ್ಲಿ ಇದನ್ನು ಆಡಿ ತೋರಿಸಿದವರು ಸೌರಭ್‌ ಪಲಿವಾಲ್‌ ನೇತೃತ್ವದ ಯುವಕಲಾವಿದರು ಜಾನ್‌ ಹಾಪ್‌ಕಿನ್ಸ್‌ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು. ಹಾಸ್ಯಮಯ ಸಂಭಾಷಣೆ, ಪ್ರಸ್ತುತ ಜನಜೀವನ ಶೈಲಿಗೆ ಹಿಡಿದ ಕನ್ನಡಿ, ಸಮಾಜಸೇವೆಗೆ ಪ್ರೇರಣೆ ನೀಡಲು ಬೀದಿನಾಟಕದ ರೂಪದಲ್ಲಿ ಪ್ರಸ್ತುತಿ - ಇವೆಲ್ಲ ಜಸ್ಟಿಫಿಕೇಷನ್ಸ್‌ ಇದ್ದರೂ ‘ಕನ್ನಡ ಸಂಘದ’ ಕಾರ್ಯಕ್ರಮದಲ್ಲಿ ಇಂಗ್ಲಿಷ್‌ ಡ್ರಾಮಾ ನೋಡಲು (ಅದೂ ಕನ್ನಡೇತರ ಕಲಾವಿದರದ್ದು) ಯಾಕೆ ಅಷ್ಟು ದೂರದಿಂದ ನಾವೆಲ್ಲ ಬರಬೇಕು... ಎಂದು ಕೆಲ ಕನ್ನಡ-ಕಟ್ಟಾಭಿಮಾನಿಗಳು ದೂರುವುದೂ, ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಎಂದು ಆಯೋಜಕರು ಇಂಗ್ಲಿಷ್‌ ಕಾರ್ಯಕ್ರಮಗಳನ್ನು ತೂರುವುದೂ - ಇದು ತಪ್ಪದೇ ನಡೆದುಕೊಂಡು ಬಂದದ್ದೇ. ಏನೂ ಮಾಡೊಕಾಗೊಲ್ಲ :-)

ಕಾವೇರಿ ಸಮಿತಿಯ ಯೋಜನೆಗಳ ಪರಿಚಯ

ಕಾವೇರಿ ಯುವಸಮಿತಿ ಆಯ್ಕೆಯಾಗಿದ್ದು ಸಂದೇಶ್‌ ಶ್ರೀನಿವಾಸ ರಾವ್‌ ಅದರ ಅಧ್ಯಕ್ಷ. ತೇಜಸ್‌ ಸುರೇಶ್‌, ಸಂದೇಶ್‌ ರಾವ್‌, ಮನು ಅಂಜನಪ್ಪ ಮತ್ತು ಕ್ರಿಸ್ಟಲ್‌ ಗೌಡ ಇತರ ಪದಾಧಿಕಾರಿಗಳು. ಸಮಿತಿಯ ಪರಿಚಯವನ್ನು ಯುತ್‌-ಕೋಆರ್ಡಿನೇಟರ್‌ ಸುಜಯಾ ದೇಸಾಯಿ ಮತ್ತು ಅಧ್ಯಕ್ಷ ಹರೀಶ್‌ ಹಿರೇಮಠ್‌ ಮಾಡಿಕೊಟ್ಟರು. ವರ್ಜೀನಿಯಾ ಮತ್ತು ಮೇರಿಲ್ಯಾಂಡ್‌ನಲ್ಲಿ ಅನುಕ್ರಮವಾಗಿ ಅನಿತಾ ರಾವ್‌ ಮತ್ತು ಮಾಯಾ ಹರಪ್ಪನಹಳ್ಳಿಯವರ ನೇತೃತ್ವದಲ್ಲಿ ಕನ್ನಡ ತರಗತಿಗಳ ಆರಂಭದ ಸಿಹಿಸುದ್ದಿಯನ್ನೂ ಸಭೆಗೆ ತಿಳಿಸಲಾಯಿತು.

ಹಬ್ಬದೂಟದ ಸವಿ

ವೇದಿಕೆಯ ಕಾರ್ಯಕ್ರಮಗಳಿಂದ ಸಾಕಷ್ಟು ಮನತಣಿಸಿಕೊಂಡ ನಂತರ ಸಂಕ್ರಾಂತಿ ಸ್ಪೆಷಲ್‌ ಸುಗ್ರಾಸ ಭೋಜನ ಕೂಡ ಹಬ್ಬದ ವಾತಾವರಣಕ್ಕೆ ಕಳೆಕೊಟ್ಟಿತು. ಬಿಸಿಬೇಳೆಭಾತ್‌, ಹುಗ್ಗಿ (‘ಪೊಂಗಲ್‌’ ಎಂಬ ತಮಿಳು ಪದ ಯಾಕೆ ಉಪಯೋಗಿಸಬೇಕು, ಕನ್ನಡದಲ್ಲೇ ಹೇಳೋಣ), ಕೋಸಂಬರಿ, ಮೊಸರನ್ನ ಸವಿಯುತ್ತ ಸೌಹಾರ್ದವಾಗಿ ಹರಟೆಹೊಡೆಯುತ್ತ ಆನಂದಿಸಿದ ಮಂದಿ ಮನೆಗೆ ತೆರಳುವ ಮೊದಲು ಮಾತ್ರ ಕಾರ್‌ ಮೇಲೆ ಒಂದಿಂಚಿನಷ್ಟು ಬಿದ್ದಿದ್ದ ಹಿಮವನ್ನು ತೆಗೆದು ಅತಿಜಾಗರೂಕವಾಗಿ ಡ್ರೈವ್‌ ಮಾಡಿಕೊಂಡು ಹೋಗಬೇಕಾಯಿತು.

ಈ ವರ್ಷದ ಕಾವೇರಿ ಸಮಿತಿಯ ‘ಓಪನಿಂಗ್‌ ಪರ್ಫಾರ್ಮೆನ್ಸ್‌’ ಭರ್ಜರಿಯಾಗಿಯೇ ಆಯಿತೆನ್ನಬೇಕು. (ವೀರೇಂದ್ರ ಸೆಹ್‌ವಾಗ್‌, ತೆಂಡುಲ್ಕರ್‌ ಕ್ರಿಕೆಟಲ್ಲಿ ಮೊದಲ ವಿಕೆಟ್‌ಗೇ ರನ್‌ ಪೇರಿಸಿದಂತೆ). ಆದರೆ ಇದು ‘ಆರಂಭ ಶೂರತ್ವ’ ಆಗದೆ ವರ್ಷದ ಕೊನೆತನಕವೂ ಮುಂದುವರೆಯಬೇಕಾದರೆ:

  • ಈ ಕಾರ್ಯಕ್ರಮದಂತೆಯೇ ಹೆಚ್ಚುಹೆಚ್ಚು ಮಕ್ಕಳಿಗೆ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮುಂದುವರಿಯಬೇಕು. ಸಮೂಹ ಗಾನಗಳು, ನೃತ್ಯಗಳು ಇದ್ದಾಗ ಭಾಗವಹಿಸುವ ಮಕ್ಕಳು, ಅವರ ಹೆತ್ತವರು, ಹಿತೈಷಿಗಳು ಕಡ್ಡಾಯವಾಗಿ ಬರುವುದರಿಂದ ಒಟ್ಟು ಹಾಜರಾತಿ ಹೆಚ್ಚುತ್ತದೆ.
  • ಪ್ರಕಟಿತ ವೇಳೆಗೆ ಸರಿಯಾಗಿ (ಅಚ್ಚ ಅಮೆರಿಕನ್‌ ಶೈಲಿಯಲ್ಲಿ) ಕಾರ್ಯಕ್ರಮದಾರಂಭ. ಮೊನ್ನೆ ಗಡಿಯಾರದಲ್ಲಿ ಸರಿಯಾಗಿ ಐದು ಗಂಟೆ ತೋರಿದಾಗ ವೇದಿಕೆಯಲ್ಲಿ ಪ್ರಾರ್ಥನೆ ಮೊಳಗಿದ್ದು ರೋಚಕ ಅನುಭವ. ಪ್ರಾಯಶಃ ಕಾವೇರಿ ಇತಿಹಾಸದಲ್ಲೇ ಅಪರೂಪದ ಘಟನೆ. ಕೀಪ್‌ ಅಪ್‌ ದಿಸ್‌ ಟೈಂ ಕಾನ್ಷಿಯಸ್‌ನೆಸ್‌!
  • ಸುಜಾತ್‌ ಶಿವಣ್ಣ ಅವರಂಥ ಸ್ಪಷ್ಟ ಉಚ್ಚಾರದ ಮಧುರ ಧ್ವನಿಯವರಿಂದ ‘ಕಾರ್ಯಕ್ರಮ ನಿರ್ವಹಣೆ’. ಒಂದು ಐಟಂ ಮುಗಿದು ಇನ್ನೊಂದು ಆರಂಭವಾಗುವ ಮೊದಲ ‘ನಿರ್ವಾತ’ವನ್ನು ಸೂಕ್ತ, ಸಂದರ್ಭೋಚಿತ ಹಾಡು, ನಗೆಹನಿ ಇತ್ಯಾದಿಯಿಂದ ಫಿಲ್‌ಅಪ್‌ ಮಾಡಿದ್ದು ಒಳ್ಳೆಯ ಅಂಶ.
  • ಪ್ರಸಕ್ತ ಅಧ್ಯಕ್ಷ ಹರೀಶ್‌ ಹಿರೇಮಠ್‌ ತನ್ನ ಎಂದಿನ ‘ಮೈಕ್‌ ವ್ಯಾಮೋಹ’ವನ್ನು ಮನೆಯಲ್ಲೇ ಬಿಟ್ಟುಬಂದದ್ದು ತುಂಬ ಮಂದಿಗೆ ಸಮಾಧಾನವಾಯಿತು. ಇದೂ ಹೀಗೇ ಮುಂದುವರೆಯಲಿ.
  • ಸಮಿತಿಯ ಸದಸ್ಯರೆಲ್ಲ ಈ ಕಾರ್ಯಕ್ರಮ ತಯಾರಿಯಲ್ಲಿ (ಅದೂ 17 ದಿನಗಳ ಅಲ್ಪಾವಧಿಯಲ್ಲಿ) ತೋರಿದ ಉತ್ಸಾಹ, ಮೈ ಮುರಿದು ದುಡಿದ ಚೈತನ್ಯ ವರ್ಷವಿಡೀ ಮುಂದುವರಿಯಬೇಕು.

ಅಷ್ಟಾದರೆ, ‘ಕಾವೇರಿ’ಯ ಇತಿಹಾಸದಲ್ಲಿ 2004 ಕೂಡ ಸ್ವರ್ಣಾಕ್ಷರಗಳಲ್ಲಿ ಮೂಡುತ್ತದೆ. ಹಾಗಾಗಲೆಂದು ಹಾರೈಸೋಣ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X