• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2004 ಬಿ ಸಿ

By Staff
|
  • ರವಿ ಕಲ್ಮಠ್‌

only_kalmath@hotmail.com

Ravi Kalmathಏನ್ರೀ, ಹೆದರಿಬಿಟ್ಟ್ರಾ, ಇದೇನಪ್ಪಾ ಯಾವ್ದೋ ಓಬೀರಾಯನ ಕಾಲ (ಕ್ರಿಸ್ತ ಶಕ ಪೂರ್ವ) ದ ಕಥೆಯೋ ಏನೋ ಎಂದು ? ನೀವೇನೂ ಹೆದರಿಕೊಳ್ಳುವ ಅಗತ್ಯ ಇಲ್ಲ ಎಂದು ನಿಮಗೆ ಭರವಸೆ ನೀಡುವೆ (‘ಮಯೂರ’ ಸಿನೆಮಾದಲ್ಲಿ ಅಣ್ಣಾವ್ರು ‘ನಾನಿರುವುದೆ ನಿಮಗಾಗಿ’ ಎಂದು ಉಲಿದಂತೆ) ! ಏನೂ ಹೆದರಬೇಡಿ.

ಈ ಲೇಖನ ಭಾರತೀಯ ಪ್ರಾಚ್ಯ ಸಂಶೋಧನೆ ಇಲಾಖೆಯವರು ಕೋಟ್ಯಾಂತರ ರುಪಾಯಿ ಖರ್ಚು ಮಾಡಿ (ಅಮೇರಿಕಾ ದೇಶವು ಇರಾಕಿನ ಮರಳಿನಲ್ಲಿ ಸುರಿದಂತೆ!) ಅಯೋಧ್ಯೆಯ ರಾಮ ಮಂದಿರದ ಸ್ಥಳದಲ್ಲಿ ರಾಮ ಮಂದಿರ ಇತ್ತೋ ಅಥವಾ ಇಲ್ಲವೋ ಎಂದು ಸಂಶೋಧನೆ (?) ಮಾಡಿ ಸಿದ್ಧಪಡಿಸಿದ (ಎಂಥಾ ಭಯಂಕರ ನಿದ್ರಾರೋಗವಿದ್ದವರಿಗೂ ನಿಮಿಷ ಮಾತ್ರದಲ್ಲೇ ಸುದೀರ್ಘ ನಿದ್ದೆ ಬರಿಸುವಂತಹ ಭಯಂಕರ) ವರದಿ ಅಲ್ಲ ಎಂದು ವಿಷದೀಕರಿಸಬಯಸುವೆ. 2004 ರಲ್ಲಿ ಬುಷ್‌ (ಬಿ) ಮತ್ತು ಕ್ಲಿಂಟನ್‌ (ಸಿ) ಅವರ ನಡುವೆ ನಡೆದ ಸಂವಾದವೇ ಈ ಶೀರ್ಷಿಕೆಗೆ ಕಾರಣ. ಇನ್ನು ವಿಷಯಕ್ಕೆ ಬರೋಣವೇ....

2004 ನಲ್ಲಿ ಬುಷ್‌ ಮತ್ತು ಕ್ಲಿಂಟನ್‌ ಒಂದು ಮೇಜವಾನಿ (ಅಥವ ಮೋಜುವಾನಿ!) ಅಂದರೆ dinnerನಲ್ಲಿ ಭೇಟಿಯಾದರು. 2-3 ಪೆಗ್‌ ಇಳಿಸಿದ ಮೇಲೆ (ಅಂದರೆ, ಅವರ ಆತ್ಮ ಮತ್ತು ಪರಮಾತ್ಮ ಒಂದಾದ ಮೇಲೆ) ಗಳಸ್ಯ ಕಂಠಸ್ಯ ಮಿತ್ರರಂತೆ, ಅರ್ಥಾತ್‌ ಲಂಗೋಟಿ ಗೆಳೆಯರಂತೆ ಹರಟೆ ಹೊಡೆಯಲು ಪ್ರಾರಂಭಿಸಿದರು. ಕ್ಲಿಂಟನ್‌ ಬಾಲ್ಯದಲ್ಲಿ ಲಂಗೋಟಿ(ಯನ್ನಾದರೂ!!) ಧರಿಸುತ್ತಿದ್ದನೋ ಇಲ್ಲವೋ ಎನ್ನುವ ವಿಷಯ ನಿಮ್ಮ ಊಹೆಗೆ ಬಿಟ್ಟಿದ್ದು! ನೀವೇನಾದರೂ ಅಹುದು ಎಂದಲ್ಲಿ ನಿಮ್ಮ ಮೇಲೆ ಸಾವಿರಾರು ಮಾನಹಾನಿ ಮೊಕದ್ದಮೆಗಳು ಬೀಳಬಹುದು ಎಂದು ಈಗಲೇ ಎಚ್ಚರಿಸುತ್ತಿದ್ದೇನೆ.

ಬುಷ್‌ ಅವತ್ತು ಬಹಳ ದುಖದಲ್ಲಿದ್ದ - ಅಮೇರಿಕೆಯ ಸ್ಟಾಕ್‌ ಮಾರ್ಕೆಟ್ನಲ್ಲಿ ದುಡ್ಡು ಹಾಕಿ ಪರದಾಡುತ್ತಿರುವ ಪ್ರಜೆಗಳಂತೆ. ಒಂದೇ ಸಮ ನಿಟ್ಟುಸಿರು ಬಿಡುತ್ತಿದ್ದ - Enron ದಿವಾಳಿ ಎದ್ದಾಗ ಕೆಲಸ ಮತ್ತು ಹಣ ಕಳೆದುಕೊಂಡು (ಹಣಾನೂ ಹೋಯ್ತು, ಗುಣಾನೂ ಹೋಯ್ತು ಎಂದು..) ಏದುಸಿರು ಬಿಟ್ಟ ಕೆಲಸಗಾರರಂತೆ.

ಮೇಜವಾನಿಯಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದ ಮಾಯಾಂಗನೆಯರ ಮೋಡಿಯಲ್ಲಿ ಮೈ ಮರೆತ ಕ್ಲಿಂಟನ್‌ಗೆ ಬುಷ್‌ ಮೇಲೆ ಅಷ್ಟು ಗಮನ ಇರಲಿಲ್ಲ. ಆದರೆ ಯಾವಾಗ ಬುಷ್‌ Allen Greenspanನಂತೆ ಜೋರಾಗಿ ಅಲವತ್ತುಕೊಳ್ಳಲು ಶುರು ಮಾಡಿದನೋ ಆಗ ಕ್ಲಿಂಟನ್‌ ಬುಷ್‌ ಕಡೆಗೆ ತಿರುಗಿ ನೋಡಿ ‘ಯಾಕೋ, ಅಮೇರಿಕೆಯ ಅಧ್ಯಕ್ಷನಾಗಿ ಅಳುತ್ತಿದ್ದೀಯಲ್ಲೋ ಅಯೋಗ್ಯ’ ಎಂದು ನಯವಾಗಿ ಅವನನ್ನು ಗದರಿದ. Insider Trading ಮೊಕದ್ದಮೆಯಲ್ಲಿ ಮೊದಲು ಮೌನ ವ್ರತ ಧರಿಸಿ ನಂತರ ಬಾಯಿ ಬಿಟ್ಟ ಸ್ಯಾಮ್‌ ವಕ್ಸಾಲ್‌ನಂತೆ ಆಗ ಬುಷ್‌ ಬಾಯಿ ತೆರೆದ. ‘ನಾನು ಏನೋ ಮಾಡಲು ಹೋದೆ.. ಆದರೆ ಏನೋ ಆಗಿ ಹೋಯಿತಲ್ಲ’ ಎಂದು.

‘ಈಗ ಅಂಥದ್ದು ಏನಾಯ್ತು ಎಂದು ಹೀಗೆ ಬಿಕ್ಕುತ್ತಿದ್ದೀಯ, outsourcing ಕಾರಣಕ್ಕೆ ಕೆಲಸದಿಂದ Out ಆದ ಅಮೇರಿಕನ್‌ಗಳಂತೆ ?’ ಎಂದು ಕ್ಲಿಂಟನ್‌ ಬುಷ್ನನ್ನು ಕೇಳಿದ. ‘ನನ್ನ popularity rating ಈಗ ಬರೀ 45% ಇದೆ. ಈಗ ಒಂದು ವರ್ಷದ ಮೊದಲು ಅದು 90% ಇತ್ತು’ ಎಂದು ಬುಷ್‌ ಅಳಲು ಶುರು ಮಾಡಿದ. ‘ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳಬೇಡ ಎಂದು ಮೊದಲೇ ನಿನಗೆ ಎಚ್ಚರಿಕೆ ಕೊಟ್ಟಿರಲಿಲ್ವ ನಾನು?’ ಎಂದು ಕ್ಲಿಂಟನ್‌ ಅವನಿಗೆ ಚುಚ್ಚಿದ. ‘ನನಗೆ ಏನೂ ಅರ್ಥ ಆಗ್ತಾ ಇಲ್ಲ. ಸ್ವಲ್ಪ ಬಿಡಿಸಿ ಹೇಳು ಮಾರಾಯ’ ಎಂದು ಬುಷ್‌ ಗೋಗರೆದ.

‘ಲೋ ಬೇಕೂಫ, ನಿಮ್ಮ ಅಪ್ಪ ಕೂಡ ಇರಾಕ್‌ ಮೇಲೆ ಯುದ್ಧ ಮಾಡಿ ಹೆಸರು, ಹಣ, ಕುರ್ಚಿ ಎಲ್ಲ ಕಳೆದುಕೊಂಡಿದ್ದ. ಅವರನ್ನು ನೋಡಿಯಾದರೂ ನಿನಗೆ ಬುದ್ಧಿ ಬರಲಿಲ್ಲವೇ ?’ ಎಂದು ಕ್ಲಿಂಟನ್‌ ಅವನಿಗೆ ದಬಾಯಿಸಿದ.

‘ಅದು ಒಂದು ದೊಡ್ಡ ಕಥೆ. ಈ ತಪ್ಪೆಲ್ಲ ಬಾಲಿವುಡ್‌ ಸಿನೆಮಾಗಳದು’ ಎಂದು ಬುಷ್‌ ಶುರು ಮಾಡಿದ :

‘‘ನನಗೆ ಮೊದಲಿನಿಂದಲೂ ಬಾಲಿವುಡ್‌ ಚಿತ್ರಗಳನ್ನು ನೋಡುವ ಹವ್ಯಾಸ ಜಾಸ್ತಿ. 80 ಪ್ರತಿಶತ ಚಿತ್ರಗಳಲ್ಲಿ ಮಗ ಅಥವಾ ಹೆಂಡತಿ ಅಥವಾ ತಮ್ಮ, ಅಥವಾ ತಂಗಿ ತಮ್ಮ ಬಂಧುಗಳ ಹತ್ಯೆಯ ಅಥವಾ ಅವರಿಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುವುದನ್ನೇ ತೋರಿಸುತ್ತಾರೆ. ಹೀಗಿರುವಾಗ ನಾನು ಆ ಸುಳ್ಳುಗಾರ ಸದ್ದಾಮ್‌ ನಮ್ಮ ಅಪ್ಪನಿಗೆ ಮಾಡಿದ ಅವಮಾನವನ್ನು ಹೇಗೆ ತಾನೆ ಮರೆಯಲು ಸಾಧ್ಯ? ಅವನನ್ನು ಹೇಗಾದರೂ ಸರಿ ಮಟ್ಟ ಹಾಕಬೇಕು ಎಂದು ತೀರ್ಮಾನ ಮಾಡಿದೆ. ಸದ್ದಾಮ್‌ನನ್ನು ಎತ್ತಿ ಕಟ್ಟಿ ಬಲಶಾಲಿಯಾಗಿ ಮಾಡಿದ್ದೇ ಅಮೇರಿಕೆಯಲ್ಲವೆ, ಆದ್ದರಿಂದ ನಾವೇ ಅವನನ್ನು ಮಟ್ಟ ಹಾಕಿ ಪ್ರಪಂಚಕ್ಕೆ ದೊಡ್ಡ ಉಪಕಾರ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾಯಿತು. ನನ್ನ ಎಲ್ಲ advisers (ದುಷ್ಟ ಚತುಷ್ಟಯ) ಗಳಿಗೆ ಹೇಳಿದೆ ‘ಸದ್ದಾಮ್‌ ಮೇಲೆ ಯುದ್ಧ ಮಾಡೋಣ. ಯಾವುದಾದರೂ ಒಳ್ಳೇ ನೆಪ ಹುಡುಕಿ ಎಂದು. ಆಗ ಕಳ್ಳನಿಗೊಂದು ಪಿಳ್ಳೆ ನೆಪ ಎನ್ನೋ ಹಾಗೆ Weapons of Mass Destruction (Deception??) (WMD) ಎನ್ನುವ ಪದ ಹುಟ್ಟು ಹಾಕಿದೆವು.

ಸದ್ದಾಮ್‌ ತನ್ನ ಅರಮನೆಯ ಗೋಡೆಗಳ ಮೇಲೆಲ್ಲ ಸುಂದರವಾದ ತೈಲಪಟಗಳ ಬದಲು missilesಗಳನ್ನು ನೇತು ಹಾಕಿದ್ದಾನೆ ಎಂದೆಲ್ಲ ಸುಳ್ಳು ಸುದ್ದಿ ಹಬ್ಬಿಸಿದೆವು. ಬಡಪಾಯಿ ಸದ್ದಾಮ್‌ ಇರಾನಿನ ಮೇಲೆ ಕಾರಣ, ಸಫಲತೆಯಿಲ್ಲದೆ ಸೆಣಸಿ (ತಮ್ಮ ಮತ ಚಲಾವಣೆಯಿಂದ ಪರಿಸ್ಥಿತಿಯಲ್ಲಿ ಏನೂ ಸುಧಾರಣೆಯಾಗುವುದಿಲ್ಲವೆಂದು ಗೊತ್ತಿದ್ದರೂ ಬೆಳಿಗ್ಗೆಯಿಂದ ಮತಗಟ್ಟೆಯಲ್ಲಿ ನಿಂತು ಸುಸ್ತಾಗಿದ್ದ ಮತದಾರನಂತೆ) ಸುಸ್ತಾಗಿದ್ದ. ಅದೂ ಅಲ್ಲದೇ ನಮ್ಮಪ್ಪ ಕೂಡ ಇರಾಕಿನ ಮೇಲೆ ಆಕ್ರಮಣ ಮಾಡಿ ಅವನ್ನು ಹಲಾಲ್‌ ಬಕ್ರಿಯಂತೆ ಸಾಯಲು ಬಿಟ್ಟಿದ್ದ. ಇಷ್ಟಾದರೂ ನನ್ನ ಸೇಡಿನ ತೃಷೆ ಹಿಂಗಿರಲಿಲ್ಲ. ಸದ್ದಾಮ್‌ ಬಳಿ 45 ನಿಮಿಷಗಳಲ್ಲಿ ಪ್ರಪಂಚವನ್ನೇ ಧ್ವಂಸಗೊಳಿಸುವಂಥ ಅಣು, ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳ ಅಪಾರ ಸಂಗ್ರಹವಿದೆ ಹಾಗೂ ಅವನು ಒಂಟೆಗಳ ಮೇಲೆ ಸಾಗಿಸುವ ಆ ಅಸ್ತ್ರಗಳನ್ನು ಅಮೇರಿಕಾ ಮತ್ತು ಬ್ರಿಟನ್‌ ಮೇಲೆ ಉಡಾಯಿಸಲು ಉತ್ಸುಕನಾಗಿದ್ದಾನೆ ಎಂದು ನಮಗೆ ಖಚಿತ ಮಾಹಿತಿ ಇದೆ ಎಂದು (ದಿವಾಳಿ ಏಳುವ ಮೂರು ವಾರ ಮೊದಲು ಎನ್ರಾನ್‌ ಕಂಪನಿಯ ಆರ್ಥಿಕ ಭವಿಷ್ಯ ಸುಭದ್ರವಾಗಿದೆ ಎಂದು ಅದರ ಸಿಇಓ ಹೇಳಿದಂತೆ!) ಹೇಳಿದೆವು. ಶೋಲೇ ಸಿನೆಮಾದ ಗಬ್ಬರ್‌ಸಿಂಗ್‌ ಸದ್ದಾಮ್‌ನ ಹೋಲಿಕೆಯಲ್ಲಿ ಒಂದು ಇರುವೆಯಂತೆ ಎಂದು ಎಲ್ಲರಿಗೂ ಮನದಟ್ಟು ಮಾಡಿದೆವು. ವಿಶ್ವಸಂಸ್ಥೆಯ ವಿರೋಧವಿದ್ದರೂ ಇರಾಕಿನ ಮೇಲೆ ಯುದ್ಧ ಮಾಡಿದೆವು. ನಂತರ ಏನಾಯಿತು ಎಂದು ಎಲ್ಲರಿಗೂ ಗೊತ್ತೇ ಇದೆ. ನನಗೆ Nobel Prize ಸಿಗುತ್ತದೆ ಎಂದು ಕನಸು ಕಂಡಿದ್ದೆ. ಆದರೆ ನಾನು ಬರುವ ಚುನಾವಣೆಯಲ್ಲಿ ಸೋತು ನನಗೆ ಬರೀ No bell Prize ಸಿಗಬಹುದು’’ ಎಂದು ಬುಷ್‌ ನಿಟ್ಟುಸಿರು ಬಿಟ್ಟ.

ಬುಷ್‌ನನ್ನು ಸಾಂತ್ವನಗೊಳಿಸಲು ಕ್ಲಿಂಟನ್‌ ಅವನ ಲೋಟಕ್ಕೆ ಇನ್ನೊಂದು ಪೆಗ್ಗು ಸುರಿದ. ಸ್ವಲ್ಪ ಸುಧಾರಿಸಿಕೊಂಡ ಮೇಲೆ ಬುಷ್‌ ಅವನನ್ನು ಕೇಳಿದ ‘ನನಗೆ ಒಂದು ಸಂದೇಹ. ನಾನು ಸುಂದರಿಯರ ಸಂಗ ಮಾಡಿಲ್ಲ ಹಾಗೂ ಪರನಾರಿಯ/ರ ಪಾತಿವ್ರತ್ಯ ಭಂಗ ಮಾಡಲಿಲ್ಲ. ಆದರೂ ನನ್ನನ್ನು ಜನ ಹೀಗಳೆಯುತ್ತಿದ್ದಾರೆ. ನೀನು ಮೋನಿಕಾ ಜೊತೆ ಮೋಜು ಮಾಡಿ ಹಲವಾರು ಹುಡುಗಿಯರ ಜೀವನ ಹಾಳು ಮಾಡಿದರೂ, ನಿನ್ನ ಜನಪ್ರಿಯತೆ ಅಷ್ಟೊಂದು ಜಾಸ್ತಿ ಇರಲು ಕಾರಣವೇನು? ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನೀನು ಇಷ್ಟೊಂದು ಪ್ರಸಿದ್ಧ ನಾಯಕನಾಗಿರುವ ರಹಸ್ಯವೇನು?’

ಆಗ ಕ್ಲಿಂಟನ್‌ ಲೋಕಸಭಾ ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ಗೆದ್ದ ಪುಢಾರಿಯಂತೆ ನಗುತ್ತ ಹೇಳಿದ- ‘ನಾನು ಬರೀ ಹಲವು ಹುಡುಗಿಯರ ಜೀವನದೊಂದಿಗೆ ಆಟವಾಡಿದೆ. ಆದರೆ ನೀನು, ಎಲ್ಲ ಅಮೇರಿಕನ್‌ ಜನರ ಜೀವನದೊಂದಿಗೆ ಆಟವಾಡಿದೆ. ನಿನ್ನ ಕಾರ್ಪೊರೇಟ್‌ ಖದೀಮರ ಕೈಯಲ್ಲಿ ಖಜಾನೆಯನ್ನು ಕೊಟ್ಟೆ ಹಾಗೂ ಅವರು ಜನರಿಗೆ ಕೈಗೆ ಕರಟವನ್ನು, ತೊಡಲು ಕೌಪೀನವನ್ನು ಕೊಟ್ಟರು. ನಾನು ಬರೀ ಹಲವು ಹೆಂಗಸರ ಭವಿಷ್ಯ ಹಾಳು ಮಾಡಿದೆ. ನೀನು ಎಲ್ಲ ಪ್ರಜೆಗಳ ಜೀವನ ಕುಲಗೆಡಿಸಿದೆ’ ಎಂದು ಬುಷ್ಷನಿಗೆ ಭೂತ ಬಿಡಿಸಿದ.

ಬುಷ್ನಿಗೆ ಏರಿದ್ದ ಅಮಲೆಲ್ಲ ಇಳಿದು ಹೋಯಿತು. ‘ಅದು ಸರಿ. ನೀನು ಅಧ್ಯಕ್ಷನಾಗಿದ್ದರೆ ಸದ್ದಾಮ್ನಿಗೆ ಹೇಗೆ ಬುದ್ಧಿ ಕಲಿಸುತ್ತಿದ್ದೆ’ ಎಂದು ಬುಷ್‌ ಕ್ಲಿಂಟನ್‌ ಗೆ ಕೇಳಿದ. ಆಗ ಕ್ಲಿಂಟನ್‌ ಮುಗ್ಯಾಂಬೋ ತರಹ ನಗುತ್ತ , ‘ನಾನು ಯುದ್ಧ ಮಾಡುವ ಬದಲು ಇರಾಕ್‌ಗೆ ಒಂದು ವಾರದ ಭೇಟಿ ನೀಡುತ್ತಿದ್ದೆ. ಆ ಸಮಯದಲ್ಲಿ ಸದ್ದಾಮ್‌ನ ಪಟ್ಟ ರಾಣಿಯ ಮೇಲೆ ನನ್ನ ಮೋಹನಾಸ್ತ್ರ ಪ್ರಯೋಗಿಸಿ ಸದ್ದಾಮ್‌ನ ಬಳಿ ಯಾವುದೇ ವಿನಾಶಕಾರಿ ಅಸ್ತ್ರಗಳಿಲ್ಲ ಎಂದು ಖಚಿತ ಮಾಡಿಕೊಳ್ಳುತ್ತಿದ್ದೆ. ಸದ್ದಾಮ್‌ನ ರಾಣಿಯರನ್ನು ಕೈವಶ ಮಾಡಿಕೊಂಡು ಅವರ ಆತಿಥ್ಯವನ್ನು ಮನಸಾರೆ ಸವಿಯುತ್ತಿದ್ದೆ. ನನ್ನ ಕೆಲಸವಾದ ತಕ್ಷಣ ಇರಾಕಿನಿಂದ ಜಾಗ ಖಾಲಿ ಮಾಡುತ್ತಿದ್ದೆ. ತನ್ನ ಪತ್ನಿಯರೇ ತನಗೆ ದ್ರೋಹ ಬಗೆದ ಸುದ್ದಿ ತಿಳಿದ ನಂತರ ಅವಮಾನ ತಾಳದೆ ಸದ್ದಾಮ್‌ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದ. ಹಾವೂ ಸಾಯುತ್ತಿತ್ತು ಹಾಗೂ ಕೋಲೂ ಮುರಿಯುತ್ತಿರಲಿಲ್ಲ. ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತಿದ್ದೆ’ ಎಂದು ನುಡಿದ.

ಹಿಂದಿ ಸಿನೆಮಾದ ಕೊನೆಯ ರೀಲಿನಲ್ಲಿ ಮನಪರಿವರ್ತನೆಯಾದ ಖಳನಾಯಕನು ಮಾಡುವಂತೆ ಬುಷ್‌ ಕ್ಲಿಂಟನ್‌ಗೆ ಸಾಷ್ಟಾಂಗ ನಮಸ್ಕಾರ ಮಾಡಿದ.

Post Your Views

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X