• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೌಚ : ಛೀ.... ಗಲೀಜು.... ಎನ್ನುವ ಮುನ್ನ...

By Staff
|

ಶೌಚ- ಛೀ ಏನಿದು ಎಂದು ನಗಬೇಡಿ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದು ಅವಿಭಾಜ್ಯ ಅಂಗ. ಯಾರ ಕಾಟವಿಲ್ಲದೆ ಮಾನವ ದಿನವೂ ಕಳೆಯುವ ಕೆಲವೇ ಕ್ಷಣಗಳು ಅದೂ Total Privacy. ಇದಕ್ಕೆ ಭಾರತದಲ್ಲಿ ಎಷ್ಟು ಮಂದಿಗೆ ಈ ಅವಕಾಶಗಳು ಲಭ್ಯ? ಇದಕ್ಕೂ ನಮ್ಮಲ್ಲಿ ಕೊರತೆಯೇ? ಈ ಟೋಟಲ್‌ ಪ್ರೈವೆಸಿ ಎಲ್ಲರಿಗೂ ಏಕಿಲ್ಲ ? ಇದಕ್ಕೆ ಕಾರಣ ಯಾರು? ಭಾರತದಲ್ಲಿ ಕಾಡುವ ಬಡತನವೇ, ಸರಕಾರವೇ ಅಥವಾ ಸಾರ್ವಜನಿಕರೇ.........

ಅರಬ್ಬೀ ಸಮುದ್ರದ ತಟದಲ್ಲಿರುವ ಮಾಯಾನಗರಿ ಮುಂಬೈನಲ್ಲಿ ಜನ ಸಮುದ್ರ. ಎಲ್ಲೆಡೆಯೂ ಗಿಜಿಗಿಜಿ ಜನ. ಹಗಲಿರುಳೆನ್ನದೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಇಲ್ಲಿ ಚಕಚಕನೆ ಕೆಲಸ ಮಾಡುವ ಜನ ಜಂಗುಳಿ. ಧಾರಾವಿಯ ಕೊಳಚೆ ಪ್ರದೇಶ ಇಲ್ಲಿದೆ. ರೊಕ್ಕವಿಲ್ಲದವ, ರೊಕ್ಕವಿದ್ದವನ ನೆಲೆ ಮುಂಬೈ. ರೈಲ್ವೆ, ಬಸ್‌ ನಿಲ್ದಾಣಗಳಲ್ಲಿ, ಬೀದಿಗಳಲ್ಲಿ, ಹೋಟೆಲ್‌ಗಳಲ್ಲಿ ಕಣ್ಣು ಹಾಯಿಸಿದಲ್ಲಿ ಕಾಣುವುದು ಬರೀ ತಲೆಗಳು. ಇಲ್ಲಿಗೆ ಭಾರತದ ಮೂಲೆಮೂಲೆಗಳಿಂದ ರೈಲು, ಬಸ್‌ ಸಂಪರ್ಕ. ಇಲ್ಲಿನ ಅಂತರರಾಷ್ಟೀಯ ವಿಮಾನ ನಿಲ್ದಾಣದಿಂದ ಪ್ರಪಂಚದ ಎಲ್ಲೆಡೆಗೆ ದಿನ ನಿತ್ಯ ವಿಮಾನಗಳು ಭಾರತೀಯರೇ ಅಲ್ಲದೆ ವಿದೇಶಿ ಪ್ರಯಾಣಿಕರನ್ನು ಹೊತ್ತು ತರುತ್ತವೆ. ಒಟ್ಟಿನಲ್ಲಿ ಎಲ್ಲ ದಾರಿಗಳೂ ಮುಂಬಯಿ ಕಡೆಗೆ.

ಮುಂಜಾನೆಯ ಮುಂಬೈಗೆ ಹೊತ್ತು ತರುವ ವಿಮಾನಗಳ ಪ್ರಯಾಣಿಕರು ಮುಂಬೈ ಹತ್ತಿರ ಬರುತ್ತಿದ್ದಂತೆ ವಿಮಾನದ ಶಟರ್‌ ಮುಚ್ಚುತ್ತಾರೆ. ರೈಲಿನಲ್ಲಿ ಪಯಣಿಸುವ ಯಾತ್ರಿಕರು ಕಿಟಕಿಯ ಹೊರಗೆ ನೋಡಿ ಮುಖ ಸಿಂಡರಿಸಿಕೊಳ್ಳುತ್ತಾರೆ. ಇದೇಕೆಂದು ನಿಮಗೆ ಗೊತ್ತೇ?

ಬೆಳಗಿನ ಉದಯ ರವಿ ಮೂಡುತ್ತಿದ್ದಂತೆ ಉದರದ ಹೊಲಸನ್ನು ಹೊರಚೆಲ್ಲಲು ಜಾಗವಿಲ್ಲದೆ ರೈಲು ಹಳಿಗಳ ಉದ್ದಕ್ಕೂ ಸಾಲಾಗಿ ಕುಳಿತು ಬಹಿರ್ದೆಶೆ ಮಾಡುವವರ ದರ್ಶನ ಕಂಡು ಹೊಟ್ಟೆ ತೊಳೆಸಿ ವಾಂತಿ ಮಾಡುವವರು ಹಲವರು, ಥೂ ಎಂದು ಉಗುಳಿ ಶಾಪ ಹಾಕುವರು ಇನ್ನೂ ಹಲವರು. ಅಯ್ಯೋ ಛೀ ಎಂದು ಅಸಹ್ಯ ಪಟ್ಟುಕೊಳ್ಳುವವರು ಕೆಲವರು. ದಿನ ನಿತ್ಯ ಪ್ರಯಾಣಿಸುವ ಯಾತ್ರಿಕರು ತಮ್ಮ ಕರ್ಮ ಫಲದಿಂದ ‘ಪುನರ್‌ ದರ್ಶನ ಪ್ರಾಪ್ತಿ ರಸ್ತು’’ ಎಂಬ ವರ ಪಡೆದಿದ್ದಾರೆ.

ಇದರಲ್ಲಿ ಪಾಪ ಯಾರ ತಪ್ಪೂ ಇಲ್ಲ ಬಿಡಿ. ನೋಡುವವರಿಗೆ ಸಂಕಟ, ಬಹಿರ್ದೆಶೆಗೆ ಕುಳಿತವನಿಗೆ ಸಮಾಧಾನ. ಪ್ರಕೃತಿಯ ಕರೆಯನ್ನು ಮನ್ನಿಸುವುದು ಮಾನವನ ಸಹಜ ಧರ್ಮ.

ಮುಂಬೈ ನಗರದ ಎಲ್ಲಾ ಕೇರಿ ಕೇರಿಗಳಲ್ಲು ಶೌಚಾಲಯವೇನೋ ಇದೆ. ಲೆಕ್ಕದ ಪ್ರಕಾರ ಹೇಳುವುದಾದರೆ, ಸಾವಿರ ಮಂದಿಗೆ ಹನ್ನೆರಡು ಶೌಚಾಲಯ. ದಿನ ಬೆಳಿಗ್ಗೆ ಅಲ್ಲಿ ನೀರಿನ ಡಬ್ಬ ಹಿಡಿದು ನಿಲ್ಲುವ ಜನಗಳ ಸಾಲು. ಆದರೆ, ದಿನವೆಲ್ಲಾ ಕಾದರೂ ನಿಂತವನ ಸರದಿ ಬರುವುದೇ ಇಲ್ಲ. ಸರದಿಯಲ್ಲಿ ನಿಂತವನಿಗೆ ಕಾದು ಕಾದು ಎಲ್ಲಾ ರಂಧ್ರಗಳೂ ಲೂಸ್‌. ಪ್ರಕೃತಿಯ ಕರೆ ತಡೆಯಲಾದೀತೆ? ಯಾರು ಏನು ಬೇಕಾದರೂ ನೋಡಿಕೊಳ್ಳಲಿ, ಮುಖ ದರುಶನ ಕೊಡಬಾರದೆಂದು ಮೂತಿಗೆ ಟವಲ್‌ ಹೊದ್ದು ದೇಹಭಾಧೆ ತೀರಿಸಿಕೊಳ್ಳುತ್ತಾನೆ. ಉಳ್ಳವರು ಶೌಚಾಲಯಕ್ಕೆ ಹೋಗುವರು, ನಾನೇನು ಮಾಡಲಮ್ಮಾ ಎಂದು ಭೂತಾಯಿಯ ಮೊರೆಹೋಗುತ್ತಾನೆ. ಇದು Natures Call.

ಈ ಬಹಿರಂಗ ಬಹಿರ್ದೆಶೆಯನ್ನು ಕಾಣಲು ಮುಂಬಯಿಗೇ ಹೋಗಬೇಕೆಂದಿಲ್ಲ. ಭಾರತದಾದ್ಯಂತ ಎಲ್ಲಾ ಪ್ರದೇಶಗಳಲ್ಲೂ ಮುಂಜಾನೆ ಇದೇ ಪರಿ. ಸೌಲಭ್ಯ ವಂಚಿತರ ಪ್ರಕಾರ ಇದೇ ಸರಿ! ನಗರಗಳಲ್ಲಿ ಇದು ಯೂನಿಫಾರ್‌ಂ ತರಹ ಒಂದೇ ರೀತಿ. ಬೆಳಗಾದ ಮೇಲೆ ಜನ ಸಂಚಾರ ಇರುತ್ತದೆ. ಆದರೆ ಪುಣ್ಯಕ್ಷೇತ್ರಗಳಲ್ಲಿ, ಹಳ್ಳಿಗಳಲ್ಲಿ, ನದಿ, ಕೆರೆ, ಭಾವಿ ಇರುವೆಡೆಯಲ್ಲಿ, ಬಯಲು ಪ್ರದೇಶಗಳಲ್ಲಿ ಇದಕ್ಕೆ ವೇಳೆಯ ಪರಿಧಿ ಇಲ್ಲ. ಎಲ್ಲದ್ದಕ್ಕೂ ಸ್ವತಂತ್ರ ಬಯಸುವ ನಾವು ಮುಕ್ತ ವಾತಾವರಣಗಳಲ್ಲಿ ಪ್ರಕೃತಿಯ ಕರೆಗೆ ಓಗೊಡುವುದು ತಪ್ಪೇನಿಲ್ಲ ಅಲ್ಲವೇ? ಈ ವಿಷಯದಲ್ಲಿ ಬಹು ಜನ ಸಮ್ಮತ, ಒಮ್ಮತ. ಬಯಲಿರುವುದೇ ಬಹಿರ್ದೆಶೆಗಾಗಿ.

ಭಾರತದ ಎಲ್ಲೆಡೆಗಳಲ್ಲಿ ಇರುವ ಸಾರ್ವಜನಿಕ ಶೌಚಾಲಯಗಳೂ ರೋಗಗಳ ಕೊಂಪೆ. ಎಲ್ಲಾ ಬಸ್‌, ರೈಲು ನಿಲ್ದಾಣಗಳಲ್ಲಿ, ದೊಡ್ದ ದೊಡ್ಡ ಕೇರಿಗಳಲ್ಲಿ ಶೌಚಾಲಯದ ವ್ಯವಸ್ಥೆ ಇದೆ. ಹಲವೆಡೆಗಳಲ್ಲಿ ಅದು ಬರೀ ನಾಮಕಾವಸ್ಥೆ. ಕೆಲವೆಡೆಗಳಲ್ಲಿ ದೊಡ್ಡ ಬೀಗ ಜಡಿದಿರುತ್ತದೆ. ಇನ್ನೂ ಕೆಲವೆಡೆಗಳಲ್ಲಿ ಅಲ್ಲಿ ರಾತ್ರಿಯ ಹೊತ್ತು ವ್ಯಭಿಚಾರ, ಮದ್ಯಪಾನಗಳ ಅಡ್ಡಗಳಾಗಿ ಮಾರ್ಪಡುತ್ತವೆ. ಆದರೂ ಯಾರೂ ಚಕಾರ ಎತ್ತುವುದಿಲ್ಲ. ಪ್ರಶ್ನಿಸಿ ಪ್ರಯೋಜನವೂ ಇಲ್ಲ.

ಅದೃಷ್ಟವಶಾತ್‌ ಲಾಟರಿ ಹೊಡೆದಂತೆ ಶೌಚಾಲಯ ತೆರೆದಿದ್ದು ಒಳಗೆ ಕಾಲಿಟ್ಟವರಿಗೆ ನರಕ ದರ್ಶನ. ವಾಸನೆ, ದುರ್ನಾತ, ಹೊಲಸು ತುಂಬಿದ ಈ ಜಾಗಕ್ಕೆ ಭೇಟಿ ಕೊಡುವವರಿಗೆ ಯಮಗುಂಡಿಗೆ ಬೇಕು. ಹಾಗೂ ಧೈರ್ಯ ಮಾಡಿ, ಪರಿಸರ ಮಾಲಿನ್ಯದ ನಿಗಾ ವಹಿಸುವವರಿಗೆ ನೀರಿನ ಬಳಕೆಯ ಅಭಾವ. ಕುಡಿಯುವ ನೀರೀಗೇ ಬವಣೆ ಇದ್ದಲ್ಲಿ ತೊಳೆದುಕೊಳ್ಳಲು ನೀರು ಎಲ್ಲಿಂದ ಬರಬೇಕು.

‘ನಲ್ಲಿ’ ಎಂಬುದು ಶೌಚಾಲಯದಲ್ಲಿ ಅಲಂಕಾರ ಸಾಮಗ್ರಿ- ಮುರಿದಿರುತ್ತದೆ ಅಥವಾ ಗಾಳಿ ಬಿಡುತ್ತದೆ. ಎಲ್ಲವೂ ಸರಿ ಇದ್ದು ನೀರು ಬಂದರೂ ಶೌಚ ಮಾಡಿದವನಿಗೆ ನೀರು ಹಾಕಬೇಕು ಎನ್ನುವ ವ್ಯವಧಾನವಿಲ್ಲ . ನನ್ನ ಕೆಲಸ ಆಯಿತು, ಬೇಕಾದರೆ ಇನ್ನೊಬ್ಬರು ನೀರು ಹಾಕಿಕೊಳ್ಳಲಿ ಎಂಬ ಧೋರಣೆ. ನೀರು ಸುರಿದರೆ ಸುರಿಯಲಿ ಅಪ್ಪನ ಮನೆಯ ಗಂಟೇನು? ದುಡ್ಡು ಕಟ್ಟಬೇಕೇ, ಸರಕಾರದ ಸ್ವತ್ತು ತಾನೆ ಎಂಬ ನಿರ್ಲಕ್ಷ್ಯ.

ಹಲವು ಜಾಗಗಳಲ್ಲಿ ಸುಲಭ್‌ ಶೌಚಾಲಯದ ವ್ಯವಸ್ಥೆಯಿದೆ. ಸಾರ್ವಜನಿಕರ ಉಪಯೋಗಕ್ಕಾಗೇ ಇವನ್ನು ಕಟ್ಟಿದ್ದಾರೆ. ತಕ್ಕ ಮಟ್ಟಿಗೆ ಶುಚಿತ್ವವನ್ನೂ ಕಾಪಾಡಿಕೊಂಡು ಬಂದಿದ್ದಾರೆ. ಅದೂ ಪುಣ್ಯಕ್ಷೇತ್ರಗಳಲ್ಲಿ, ದೊಡ್ಡ ದೊಡ್ಡ ನಗರಗಳಲ್ಲಿ, ಹೆಚ್ಚು ಜನಸಂದಣಿಯ ಪ್ರದೇಶಗಳಲ್ಲಿ ದೇಹಬಾಧೆ ತೀರಿಸಿಕೊಳ್ಳಲು, ಸಾರ್ವಜನಿಕರಿಗಾಗಿಯೇ ನಿರ್ಮಿಸಿ, ವ್ಯವಸ್ಥಿತ ರೀತಿಯಲ್ಲಿ ಶುಚಿತ್ವ ಕಾಪಾಡಿಕೊಂಡು ನಡೆಸುತ್ತಿರುವ ಈ ಸುಲಭ್‌ ಸಂಸ್ಥೆಯ ಶ್ರಮ ಅತ್ಯಂತ ಶ್ಲಾಘನೀಯ. ಶುಚಿ, ದುರ್ನಾತ ಹೊಡೆಯದಿರಲು ನೀರು, ಫೆನಾಯಿಲ್‌ ಹಾಕಿ ತೊಳೆಯುತ್ತಾರೆ. ಮೇಲ್ವಿಚಾರಕರೂ ನಿಗಾ ವಹಿಸುತ್ತಾರೆ. ಸ್ವಚ್ಛತೆಗಾಗಿ, ನೀರಿನ ಹಣದ ಪಾವತಿಗಾಗಿಯೋ, ಸ್ವಯಂ ಸೇವಕರಿಗಾಗಿಯೋ ಇಲ್ಲಿ ಹಣ ಸಂದಾಯ ಮಾಡಬೇಕು. ಅದೂ ಕೇವಲ ಎಂಟಾಣೆ ಅಥವಾ ಒಂದು ರೂ.

ಸುಲಭ್‌ ಶೌಚಾಲಯಕ್ಕೆ ಶುಲ್ಕ ತೆರಲೂ ಹಿಂದುಮುಂದು ನೋಡುವವರೂ ಇಲ್ಲದಿಲ್ಲ . ದುಡ್ಡು ತೆತ್ತು ದೇಹಭಾಧೆ ತೀರಿಸಿಕೊಳ್ಳಬೇಕೆ ಎಂಬ ಪ್ರಶ್ನೆ ಕೆಲವರಿಗೆ ತಲೆದೋರಿದರೆ, ಇನ್ನು ಹಲವರಿಗೆ ಅಯ್ಯೋ ಇದಕ್ಕೆ ಯಾಕೆ ದುಡ್ಡು ಎಂಬ ಚಿಂತೆ. ಎದುರಿಗೇ ದೊಡ್ಡ ಬಯಲಿಲ್ವಾ ಅಲ್ಲೇ ಕೂತ್ಕೊಂಡು ಮಾಡು ಎಂದು ಮಕ್ಕಳಿಗೆ ತಾಕೀತು. ಯಾಕ್ರೀ ಸುಲಭ್‌ಗೆ ಎಂಟಾಣೆ ಕೊಡಬೇಕು ಎಂದು ಮೂಗು ಮುರಿಯುವವರು ಕೆಲವರು. ಇದೆಲ್ಲಾ ಬೇಡವೆಂದು ಮೋಟು ಗೋಡೆ, ಮರ, ಪೊದೆ, ಗಿಡಗಳಿಗೆ ಶರಣು ಹೊಡೆದು ಪ್ರಾಣಿಗಳಂತೆ ಯೋಚಿಸುವವರು ಹಲವರು. ಹಣ ಕೊಡಬೇಕಾದವರ ಸ್ಥಿತಿ ಹೀಗೆ.

ಪಾಪ ಬಡವರು ಏನು ಮಾಡಿಯಾರು. ಶೌಚ ಕಟ್ಟುವ ಖರ್ಚಿನಲ್ಲಿ ತಲೆಗೆ ಒಂದು ಸೂರು ಕಂಡಾರು ಇಲ್ಲ ನಾಲ್ಕಾರು ತಿಂಗಳು ಊಟ ಉಂಬಾರು. ಭಿಕ್ಷುಕರಿಗೆ ಹೊಟ್ಟೆಗೇ ಹಿಟ್ಟಿಲ್ಲ ಇನ್ನು ಶೌಚಕ್ಕೆ ಎಲ್ಲಿ ಹಣ. ಅವರು ಮೊರೆ ಹೋಗುವುದು ಬಿಟ್ಟೀ ಸರ್ವೀಸ್‌- ಮರ, ಗಿಡ, ಪೊದೆ, ಬಯಲು, ನದಿ, ಕೆರೆ ತೀರ ಅಥವಾ ಮೋಟುಗೋಡೆಗಳು.

ಊರಿಂದೂರಿಗೆ ಪ್ರವಾಸ ಮಾಡುವವರಿಗೆ, ಮುದುಕರಿಗೆ, ಯಾತ್ರಾರ್ಥಿಗಳಿಗೆ, ಪುಣ್ಯ ಕ್ಷೇತ್ರಗಳಲ್ಲಿ ದೇಹಭಾಧೆ ತೀರಿಸಿಕೊಳ್ಳುವ ಪಾಡು ದೊಡ್ಡ ಸಮಸ್ಯೆಯೇ ಸರಿ. ಯಾತ್ರೆ, ರಥೋತ್ಸವ, ಜಾತ್ರೆ ನಡೆಯುವ ಜಾಗಗಳಲ್ಲಿ ಹಣವಿದ್ದವರು ಹೋಟೆಲ್‌ಗಳಲ್ಲಿ ತಂಗುತ್ತಾರೆ. ಎಲ್ಲರಿಗೂ ಹೋಟೆಲ್‌ಗಳಲ್ಲಿ ತಂಗಲು ಸಾಧ್ಯವೇ? ಧರ್ಮಶಾಲೆ, ಛತ್ರ ಎಂದು ಕೆಲವರು ಹೋಗುತ್ತಾರೆ. ಏನೂ ಇಲ್ಲದವರು ಇದ್ದಲ್ಲೇ ಶಿವ ಎಂದು ಮೈದಾನ, ಬಯಲುಗಳಲ್ಲಿ ಬೀಡು ಬಿಡುತ್ತಾರೆ. ಯಾತ್ರಿಕರು ಮತ್ತೆ ಮೊರೆಹೋಗುವುದು ಮರ, ಗಿಡ, ಬಯಲು, ನದಿ. ಇನ್ನೂ ಹಲವರಿಗೆ ಹೇಳಿಕೊಳ್ಳಲಾಗದಂತ ಅನೇಕ ಸಮಸ್ಯೆಗಳು.

ಇನ್ನು ಹೆಂಗಸರ ಪಾಡು ದೇವರಿಗೇ ಪ್ರೀತಿ. ಗಂಡಸರಾದರೋ ಮರದ ಸಂದಿಯಲ್ಲೋ, ಮೈದಾನಗಳ ಮೂಲೆಯಲ್ಲೋ, ಗೋಡೆಗಳ ಬಳಿಯಲ್ಲೋ ತಮ್ಮ ದೇಹಬಾಧೆ ತೀರಿಸಿಕೊಳ್ಳುತ್ತಾರೆ. ಹೆಂಗಸರೇನು ಮಾಡಬೇಕು? ಬಹಿರಂಗವಾಗಿ ಯಾರ ಬಳಿಯೂ ಹೇಳಿಕೊಳ್ಳಲಾಗದ ಅನೇಕ ಸಮಸ್ಯೆಗಳು, ತೊಂದರೆಗಳು. ಇದರ ಬಗ್ಗೆ ನಮ್ಮಲ್ಲಿ ಯಾರಾದರೂ ಯೋಚಿಸಿದ್ದಾರೆಯೇ? ಗಂಡು ಪ್ರಪಂಚಕ್ಕೆ ಹೆಂಗಸರ ಸಮಸ್ಯೆಗಳು ಅರ್ಥವಾಗುವುದೇ?

ಇಪ್ಪತ್ತು/ಮೂವತ್ತು ವರುಷಗಳ ಹಿಂದೆ ಹೆಣ್ಣು ಮಕ್ಕಳು ಋತುಮತಿಯಾದಲ್ಲಿ, ಮುಟ್ಟಿನ ಮೂರು ದಿನಗಳಲ್ಲಿ ಶಾಲೆಗೆ ರಜ ಹಾಕುತ್ತಿದ್ದರು. ಅಂದಿನ ಅಧ್ಯಾಪಕರುಗಳೂ ಇದಕ್ಕೆ ಏನೂ ಹೇಳುತ್ತಿರಲಿಲ್ಲ. ಅದು ಅಂದಿನ ಕಾಲ. ಇಂದು ಹೆಣ್ಣುಮಕ್ಕಳು ಹಾಗೆ ಮಾಡಲು ಸಾಧ್ಯವಿಲ್ಲ. ಇಂದಿನ ಶಿಕ್ಷಣ, ವಿದ್ಯಾಭ್ಯಾಸ, ಯೋಚಿಸುವ ರೀತಿ, ಪರಿಸರ ಎಲ್ಲವೂ ವಿಭಿನ್ನ. ಹಲವು ವಿಷಯಗಳಲ್ಲಿ ಹೆಣ್ಣು ಗಂಡಸರಿಗೆ ಸರಿ ಸಮನಾಗಿದ್ದಾಳೆ. ಕಾಲ ಬದಲಾಗಿದೆ. ಆದರೆ ಅದಕ್ಕೆ ತಕ್ಕಂತೆ ಹೆಣ್ಣು ಮಕ್ಕಳಿಗೆ ಶೌಚ, ಮುಟ್ಟಿನ ದಿನಗಳಲ್ಲಿ, ಗರ್ಭಿಣಿಯಾದಾಗ, ಮೊಲೆ ಹಾಲು ಉಣಿಸುವಾಗ ಪ್ರೈವೆಸಿ ಇದೆಯೇ?

ಈಗಂತೂ ಕೆಲಸದ ನಿಮಿತ್ತ ಹೆಂಗಸರು ಒಬ್ಬೊಬ್ಬರೇ ರಾತ್ರಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಾರೆ. ರಾತ್ರಿ ಒಂದು ಹೊತ್ತಿನಲ್ಲಿ, ಊರ ಹೊರಗಡೆ ದೇಹಬಾಧೆ ತೀರಿಸಲು ಡ್ರೈವರ್‌ ಬಸ್‌ ನಿಲ್ಲಿಸುತ್ತಾರೆ. ಗಂಡಸರು ಸರ ಸರನೆ ಇಳಿದು ಮರಗಳ ಹಿಂದೆ ಓಡುತ್ತಾರೆ. ಒಬ್ಬಳೇ ಹೆಣ್ಣು ಪ್ರಯಾಣಿಸುತ್ತಿದ್ದಲ್ಲಿ ಕತ್ತಲಿನಲ್ಲಿ ಆಕೆ ಯಾರ ಮೊರೆ ಹೋಗಬೇಕು. ಡ್ರೈವರಿಗಾಗಲೀ ಅಥವಾ ಕಂಡಕ್ಟರ್‌ ಬಳಿಯಾಗಲೀ ಹೇಳಲು ಸಾಧ್ಯವೇ?

ಮಗುವನ್ನು ಹೆತ್ತು ಹದಿನೈದು ದಿನಗಳಿಗೇ ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ಹೋಗುವ ಎಷ್ಟೋ ಜನ ತಾಯಂದಿರಿದ್ದಾರೆ. ಕಚೇರಿಗಳಲ್ಲಾಗಲೀ, ಶಾಪಿಂಗ್‌ ಮಾಲ್‌ಗಳಲ್ಲಾಗಲೀ, ಬಸ್‌/ರೈಲು ನಿಲ್ದಾಣಗಳಲ್ಲಾಗಲೀ ಮಗುವಿಗೆ ಎದೆ ಹಾಲು ನೀಡುವ ತಾಯಂದಿರ ಬವಣೆ ಎಷ್ಟು ಜನರಿಗೆ ಅರ್ಥವಾದೀತು. ಹಾಲೂಡಿಸುವ ತಾಯಂದಿರ ಎದೆಯ ದರುಶನ ಪಡೆವ ಕಾಮುಕರಿಗೇನು ಕಮ್ಮಿ ಇಲ್ಲ.

ಈಗಂತೂ ಬಹಳ ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಹಿಂದೆ ಹದಿಮೂರರಿಂದ ಹದಿನಾರು ವರುಷದ ಒಳಗೆ ಋತುಚಕ್ರ ಆರಂಭವಾಗುತ್ತಿತ್ತು. ಇಂದು ಅದು ಒಂಬತ್ತು ಹತ್ತು ವರುಷಗಳಿಗೆ ಇಳಿದಿದೆ. ಉಷ್ಣ ವಲಯದಲ್ಲಿ ಇರುವ ಹುಡುಗಿಯರು ಬಲು ಬೇಗ ಕೌಮಾರ್ಯವನ್ನು ದಾಟುತ್ತಾರೆ.

ಹೆಣ್ಣು ಮಕ್ಕಳು ಇಂತಹ ಸೂಕ್ಷ್ಮ ಸಮಯದಲ್ಲಿ ಮಾನಸಿಕವಾಗಿ ದೈಹಿಕವಾಗಿ ದುರ್ಬಲಳು. ಅವಳಿಗೆ ಏಕಾಂತ, ಸ್ವಚ ಪರಿಸರ ಬೇಕು. ನಿರ್ಭೀತಿಯಿಂದ ಯಾವ ಅಳುಕು ಇಲ್ಲದೆ, ತಕ್ಕ ವ್ಯವಸ್ಥೆ ಮಾಡಿಕೊಳ್ಳುವ ಅವಕಾಶ ವಾತಾವರಣ ಬೇಕು. ಅಂತಹ ಪರಿಸರ ನಮ್ಮ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಸೃಷ್ಟಿಸುವ ಕಾಲ ಎಂದು ಬರುವುದು? ಪಟ್ಟಣಗಳಲ್ಲಿ ಓದುತ್ತಿರುವ ಮಕ್ಕಳಿಗೆ ಶಾಲೆಗಳಲ್ಲಿ ಶೌಚಾಲಯಗಳು ಇವೆ. ಖಾಸಗೀ ಶಾಲೆಗಳಲ್ಲಿ ಋತುಮತಿಯಾದ ಸಂದರ್ಭಗಳಲ್ಲಿ ಶಿಕ್ಷಕರು ತಾಯಿ, ಅಕ್ಕನಾಗಿ ನಿಂತು ಧೈರ್ಯಕೊಟ್ಟು, ಸ್ಯಾನಿಟರಿ ನ್ಯಾಪ್‌ಕಿನ್‌ಗಳ ವ್ಯವಸ್ಥೆಗಳನ್ನು ಕೂಡ ಮಾಡಿಕೊಡುತ್ತಾರೆ. ಕೆಲವು ತಾಯಂದಿರು, ಶಿಕ್ಷಕರೂ ಪ್ರವರ್ಧಮಾನಕ್ಕೆ ಬರುವ ಹೆಣ್ಣುಮಕ್ಕಳಿಗೆ ಹಲವು ವಿಷಯಗಳನ್ನು ತಿಳಿಯಪಡಿಸುತ್ತಾರೆ. ಹಳ್ಳಿಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲು ಸಾಧ್ಯವೇ? ಅಲ್ಲಿನ ಹೆಣ್ಣುಮಕ್ಕಳ ಪಾಡಿನ ಬಗ್ಗೇ ಯಾರಾದರೂ ಯೋಚಿಸಿದ್ದಾರೆಯೇ?

ಕೆಲವು ಹಳ್ಳಿಗಳಲ್ಲಿ ಶಾಲೆಗೆ ಕಟ್ಟಡವೇ ಇರುವುದಿಲ್ಲ, ಇನ್ನು ಶೌಚಾಲಯ ಎಲ್ಲಿ ಬರಬೇಕು? ಶಾಲೆ ಎಂದು ಒಂದು ಕಟ್ಟಡವಿದ್ದರೂ ಶೌಚಾಲಯದ ವ್ಯವಸ್ಥೆಯೇ ಇರುವುದಿಲ್ಲ, ಅಕಸ್ಮಾತ್‌ ಇದ್ದರೆ ಅದು ಮುರಿದು ಬೀಳುವ ಸ್ಥಿತಿ. ಸರಕಾರಿ ಶಾಲೆಗಳಲ್ಲಿ ವರ್ಗಾವಣೆಗಳು ಬೇರೆ. ಹೆಣ್ಣು ಮಕ್ಕಳ ಶಾಲೆಯಲ್ಲಿ ಬರೀ ಮಾಸ್ತರುಗಳು ಇದ್ದಲ್ಲಿ ಹದಿಮೂರು ಹದಿನಾಲ್ಕು ವರುಷದ ಹೆಣ್ಣು ಮಕ್ಕಳು ಯಾರ ಬಳಿ ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ಈಗಂತೂ ಹಳ್ಳಿ, ಗುಡ್ಡ, ಗಾಡುಗಳಲ್ಲಿ ಕೂಡ ಮರ, ಗಿಡ, ಪೊದೆ ಮಾಯವಾಗಿ ಎಲ್ಲೆಡೆ ಕಾಂಕ್ರೀಟ್‌ ರಾಕ್ಷಸನ ಆಕ್ರಮಣ. ದೇಹಭಾಧೆ ತೀರಿಸಿಕೊಳ್ಳಲು ಮೋಟುಗೋಡೆಯ ನೆರವೂ ಇಲ್ಲದೆ ಕತ್ತಲನ್ನೇ ಆಶ್ರಯಿಸಿರುವ ಹೆಣ್ಣುಮಕ್ಕಳ ಅಳಲು ಎಷ್ಟು ಜನರಿಗೆ ಅರ್ಥವಾದೀತು?

ಭಾರತಕ್ಕೆ ಭೇಟಿಯಿಡುವ ಲಕ್ಷಾಂತರ ವಿದೇಶಿಯರ ಮೊದಲ ದೂರು ‘ಪೀಪಲ್‌ ಶಿಟ್‌ ಇನ್‌ ಥೆ ಓಪನ್‌, ಇಟ್‌ ಈಸ್‌ ಡಿಸ್‌ಗಸ್ಟಿಂಗ್‌ ಟು ಸೀ’. ಅವರಿಗೇನು ನಮಗೂ ಅಸಹ್ಯವೇ? ಅವರು ಬಾಯಿ ಬಿಟ್ಟು ಒದರಿದರೆ, ನಾವು ಕಂಡು ಅನುಭವಿಸಿದರೂ ಮೌನಕ್ಕೆ ಶರಣು ಹೋಗುತ್ತೇವೆ.

ನಮ್ಮಲ್ಲಿ ಶುಚಿತ್ವ ಇಲ್ಲ. ಶೌಚಾಲಯಗಳ ವ್ಯವಸ್ಥೆ ಇಲ್ಲ. ಇದು ಅಕ್ಷರಶಃ ಸತ್ಯ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ? ಇದು ಕಲಿಕಾಲ. ನಾಯಿ ಬಾಲ ಡೊಂಕು. ಯಾವ ಸರಕಾರವೇ ಬರಲಿ, ಯಾರೇ ಪದವಿ ಸ್ವೀಕರಿಸಲಿ ಶೌಚಾಲಯಗಳ ವ್ಯವಸ್ಥೆ ಮಾತ್ರ ನಮ್ಮಲ್ಲಿ ತಟಸ್ಥ. ಇತ್ತ ಕಡೆ ಗಮನ ಹರಿಸುವಿರಾ ಎಂದು ಯಾರಾದರೂ ಶೌಚಾಲಯಗಳತ್ತ ಕೈ ತೋರಿದರೆ ಮೂಗೇನೂ ಕಣ್ಣೂ ಮುಚ್ಚಿಕೊಳ್ಳುತ್ತಾರೆ. ಅದಕ್ಕೆ ಮುಕ್ತಿ ಎಂದೋ ಶಿವನೇ ಬಲ್ಲ.!

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಗಲದಾದ ರಸ್ತೆಗಳ ನಿರ್ಮಾಣ, ಎಲ್ಲೆಲ್ಲೂ ಫ್ಲೈ ಓವರ್‌ಗಳು, ಎತ್ತರದ ಇಮಾರತ್ತುಗಳು ತಲೆ ಎತ್ತಿವೆ. ಅದಕ್ಕೆ ಅಂಟಿಕೊಂಡಂತೇ ಕೊಳಗೇರಿಗಳೂ ತಲೆ ಎತ್ತುತ್ತವೆ. ಏನೀ ವಿಪರ್ಯಾಸ. ಪರಿಸರ ಮಾಲಿನ್ಯ ಎಂದು ಕೂಗಿ ಹೇಳುವವರು ಈ ಮಾಲಿನ್ಯಗಳ ಕೊಂಪೆಯತ್ತ ಗಮನ ಹರಿಸಿದರೆ ಒಳ್ಳೆಯದು.

ಶೌಚಾಲಯ ಕಟ್ಟಲು ಲಕ್ಷಗಟ್ಟಲೆ ಹಣವೇನೂ ಬೇಕಾಗುವುದಿಲ್ಲ. ಎಲ್ಲಕ್ಕೂ ಸರಕಾರ ಎಂದು ಕಾಯಬೇಕಾಗಿಲ್ಲ. ಭಾರತದಲ್ಲಿ ಇರುವ ಹಲವಾರು ಶ್ರೀಮಂತ ಉದ್ಯಮಿಗಳು ವೈಯುಕ್ತಿಕ ಹಣ ನೀಡಿ ಸಹಾಯಮಾಡಬಹುದು. ಶುಚಿತ್ವ, ಪರಿಸರ ಮಾಲಿನ್ಯ, ಶೌಚ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸಿ, ಓದು, ಬರಹವಿಲ್ಲದೆ ಅಲೆಯುವ ಕೆಲವರಿಗೆ ಕೆಲಸ ಕೊಡಬಹುದು. ಸುಲಭ್‌ ನಂತೆ ಇನ್ನೂ ಹಲವು ಸಂಘ-ಸಂಸ್ಥೆಗಳು ಮುಂದೆ ಬಂದು ಶೌಚಾಲಯಗಳನ್ನು ಕಟ್ಟಿ ಅದರ ವೆಚ್ಚವನ್ನು ಭರಿಸಬಹುದು. ಇರುವ ಶೌಚಾಲಯಗಳಲ್ಲಿ ಶುಚಿ ಮತ್ತು ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಿ, ಕೆಲಸಗಾರರನ್ನು, ಮೇಲ್ವಿಚಾರಕರನ್ನು ನೇಮಿಸಬಹುದು. ತದನಂತರ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ದಂಡ ವಿಧಿಸಬೇಕು.

ಇಂದು ವಿಜ್ಞಾನ, ಐ.ಟಿ., ಮಿಸ್ಸೈಲ್‌, ರಿಸರ್ಚ್‌ ಎಂದು ಹಲವು ವಿಷಯಗಳಲ್ಲಿ ಪ್ರಗತಿ ಪಥದತ್ತ ಮುನ್ನಡೆಯುತ್ತಾ ಹೆಮ್ಮಿಯಿಂದ ಬೀಗುವ ನಾವು ಭಾರತೀಯರು ಶುಚಿತ್ವ ಮತ್ತು ಶೌಚಾಲಯದ ವ್ಯವಸ್ಥೆಗಳಲ್ಲಿ ತಲೆ ತಗ್ಗಿಸಬೇಕಾದ ವಿಷಯ. ಅದೇಕೋ ಬಡವ, ಭಿಕ್ಷುಕ, ಶಾಲೆ, ಶೌಚಾಲಯಗಳ ವಿಷಯಗಳಲ್ಲಿ ಮಾತ್ರ ಯಥಾಸ್ಥಿತಿ. ಕಾಲ ಅಲ್ಲಿ ನಿಂತಿದೆ.

ಪಂಡಿತ ಜವಹರಲಾಲ್‌ ನೆಹರೂ ಅವರು The day everyone of us gets a toilet to use, I shall know that our country has reached the pinnacle of progress ಎಂದು ಕನಸು ಕಂಡಿದ್ದರು. ಅವರ ಅಂದಿನ ಕನಸು ಇಂದಿಗೂ ಕನಸಾಗೇ ಉಳಿದಿದೆ. ಈ ಕನಸನ್ನು ನನಸಾಗಿಸುವ ಹೊಣೆ ಪ್ರತಿಯಾಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯ ಅಲ್ಲವೇ?

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more