• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಬರಿಯಾಗಿ ಭ್ರಮರಿ

By Staff
|
  • ಉಷಾ ವಸ್ತಾರೆ ಮತ್ತು ಪ್ರವೀಣ್‌ ಶಿವಶಂಕರ್‌

2004 - 2005 ಪು.ತಿ.ನ ಅವರ ಜನ್ಮ ಶತಾಬ್ದಿಯ ಪುಣ್ಯ ಸಂವತ್ಸರ. ಈ ಸಂದರ್ಭಕ್ಕೆ ತಕ್ಕ ಹಾಗೆ ಅವರ ಮಗಳಾದ ಪದ್ಮಾ ರಂಗಾಚಾರ್‌ ಮನೆಯಲ್ಲಿ 12/04/2004ರಂದು, ಮನೆಯ ಲಿವಿಂಗ್‌ ರೂಮಿನಲ್ಲೇ, ಒಂದು ವಿನೂತನ ನೃತ್ಯ ಪ್ರದರ್ಶನದ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದರ ಅಂಗವಾಗಿ ಉದ್ಯಾವರ ಮಾಧವ ಆಚಾರ್ಯರ ಮಗಳಾದ ಕಲಾವಿದೆ ಭ್ರಮರಿ ಶಿವಪ್ರಕಾಶ್‌, ಸೇಡಿಯಾಪು ಕೃಷ್ಣ ಭಟ್‌ ಅವರ ಕೃತಿ ‘ಶಬರಿ ಅಥವಾ ಪುಣ್ಯ ಲಹರಿ’ ಎಂಬ ಕಥನ ಕವನವನ್ನು ನೃತ್ಯ ರೂಪಕದ ರೀತಿಯಲ್ಲಿ ಅಭಿನಯಿಸಿ ಪ್ರದರ್ಶಿಸಿದರು. ಅದನ್ನು ನೋಡಿ ಆನಂದಿಸುವ ಸುಯೋಗ ನಮ್ಮದಾಯಿತು.

ಉದ್ಯಾವರ ಮಾಧವ ಆಚಾರ್ಯರು ಪು.ತಿ.ನ. ಅವರಿಗೆ ಬಹಳ ಪರಿಚಿತರಾಗಿದ್ದು ಅವರ ಬಗ್ಗೆ ಗುರುಭಾವನೆಯನ್ನು ತಳೆದವರು. ಆ ಮಹಾಕವಿಯ ಪ್ರೀತ್ಯರ್ಥವಾಗಿ ಈ ಕಾಣಿಕೆಯನ್ನು ಸಲ್ಲಿಸಲು ಅವರು ಮುಂದೆ ಬರಲು, ಈ ಕಾರ್ಯಕ್ರಮವು ಪು.ತಿ.ನರವರ ಜನ್ಮ ಶತಾಬ್ದಿಯ ಅಂಗವಾಗಿ ಅನಾಗಸವಾಗಿ ಏರ್ಪಟ್ಟಿತು. ಉದ್ಯಾವರ ಮಾಧವ ಆಚಾರ್ಯರ ಮತ್ತು ಮಗಳು ಕಲಾವಿದೆ ಭ್ರಮರಿಯ ಈ ವಿಶಿಷ್ಟ ಪ್ರಾಯೋಗಿಕ ನೃತ್ಯ ಕಾರ್ಯಕ್ರಮವು (ರಂಗವಿಲ್ಲದಿದ್ದರೂ) ಹೃದಯಸ್ಪರ್ಶಿಯಾಗಿತ್ತು ಮತ್ತು ಅತ್ಯಂತ ಯಶಸ್ವಿಯಾಗಿತ್ತೆಂಬುದರಲ್ಲಿ ಎರಡನೆಯ ಮಾತಿಲ್ಲ.

Dr. Rangachar introducing Sri. Udayavara Madava Acharyaಉದ್ಯಾವರ ಮಾಧವ ಆಚಾರ್ಯರು ಸುಮಾರು 25ಕ್ಕೂ ಮೀರಿದ ಶ್ರೇಷ್ಠ ದರ್ಜೆಯ ಯಕ್ಷಗಾನಗಳ ಮತ್ತು ನೃತ್ಯ ರೂಪಕಗಳ ಅಳವಡಿಕೆಗಳನ್ನು ಮಾಡಿದ್ದಾರೆ. ಇವುಗಳಲ್ಲಿ ಪ್ರಮುಖವಾಗಿ ರವೀಂದ್ರನಾಥ ಟಾಗೋರರ ‘ಚಿತ್ರಾಂಗದೆ’, ಪು.ತಿ.ನ ಅವರ ‘ಸತ್ಯಾಯನ ಹರಿಶ್ಚಂದ್ರ’, ಕು.ವೆಂ.ಪು. ಅವರ ‘ಶ್ರೀ ರಾಮಾಯಣ ದರ್ಶನಂ’, ಬಿ.ಎಂ.ಶ್ರೀ ಅವರ ‘ಅಶ್ವತ್ಥಾಮನ್‌’, ದಾಸ ಸಾಹಿತ್ಯದ ‘ಹನುಮ-ಭೀಮ-ಮಧ್ವ’, ವಾದಿರಾಜರ ‘ರುಕ್ಮಿಣೀಶ ವಿಜಯ’, ಬನ್ನಂಜೆಯವರ ‘ಮತ್ತೆ ರಾಮನ ಕಥೆ’, ಶಂಕರಾಚಾರ್ಯರ ‘ಸೌಂದರ್ಯ ಲಹರಿ’, ಗೋವಿಂದ ಪೈಯವರ ‘ಹೆಬ್ಬೆರಳು’, ಶಿವರಾಮ ಕಾರಂತರ ‘ಮುಕ್ತ ದ್ವಾರ’, ಮುಂತಾದವು ಇವರಿಗೆ ಕೀರ್ತಿಯನ್ನು ತಂದು ಕೊಟ್ಟಿವೆ, ಮತ್ತು ಇವರ ಸಾಧನೆಗೆ ಸಾಕ್ಷಿಯಾಗಿ ನಿಂತಿವೆ.

ಕಾರ್ಯಕ್ರಮವು ಸುಸೂತ್ರವಾಗಿ ನಡೆಯುವಂತೆ ನಾಟ್ಯ ಗಣಪತಿಯ ಪ್ರಾರ್ಥನೆಯಿಂದ ಪ್ರಾರಂಭವಾಯಿತು. ಈ ಕಾರ್ಯಕ್ರಮದ ಒಂದು ಮುಖ್ಯವಾದ ವಿಶೇಷವೆಂದರೆ ಅದರ ಭಾಷೆ. ಸಾಮಾನ್ಯವಾಗಿ ಭರತನಾಟ್ಯದ ಹಾಡುಗಳ ಭಾಷೆ ತಮಿಳು ತೆಲುಗುಗಳಲ್ಲಿ ಮುಳುಗಿಹೋಗಿದೆಯೆಂದು ನಮಗನಿಸಿದೆಯಲ್ಲವೆ? ಆದರೆ ಈ ಕಥಾನಕದ ಭಾಷೆ ಕನ್ನಡ. ಪ್ರತಿಯಾಬ್ಬನಿಗೂ ಅರ್ಥವಾಗುವಂತಿತ್ತು. ಭಾಷೆ ತಿಳಿಯದವರು ಬಹಳಷ್ಟು ಬಾರಿ ಕೇವಲ ನರ್ತನ ಮತ್ತು ಅಭಿನಯದ ಆಧಾರದ ಮೇರೆಗೆ ಅರ್ಥೈಸಿಕೊಳ್ಳಬೇಕಾಗುತ್ತದೆ. ಆದರೆ ಈ ನೃತ್ಯ ಪ್ರದರ್ಶನದಲ್ಲಿ ಅದು ಕಷ್ಟಕರವಾಗೇನೂ ಇರಲಿಲ್ಲ. ಭಾಷೆಯಷ್ಟೇ ಸಮರ್ಥವಾಗಿ ಅಭಿನಯವೂ ಕೂಡ ಅರ್ಥಮಾಧ್ಯಮವಾಗಿ ಮೂಡಿ ಬಂದಿತ್ತು.

Dancer Bhramari as Shabariಭಾಷೆ ಮತ್ತು ನೃತ್ಯಾಭಿನಯಕ್ಕೆ ಹೊಂದಿಕೊಂಡಂತೆ ಈ ಕಾರ್ಯಕ್ರಮದಲ್ಲಿ ಕಿರೀಟಪ್ರಾಯವಾಗಿದ್ದದ್ದು ಸಂಗೀತ. ಸಕಲ ಪಕ್ಕ ವಾದ್ಯಗಳು ಒಂದಕ್ಕೊಂದು ಪೂರಕವಾಗಿ ಹೊಮ್ಮಿಸಿದ ನಾದ ತರಂಗ ಮನಸ್ಸಿನಲ್ಲಿ ಇನ್ನೂ ಅನುರಣಿಸುತ್ತಿದೆ. ಹಾಡುಗಾರಿಕೆ ಕರ್ಣಗಳಿಗೆ ಹಿತವಾಗಿದ್ದು, ಕಥೆಯ ಸಂಗತಿಗಳಿಗೆ ಚೆನ್ನಾಗಿ ಒಗ್ಗಿತ್ತು. ಆಯಾ ಸಂದರ್ಭಕ್ಕೆ ಹೊಂದಿಕೊಂಡಂತೆ ಮೃದಂಗ, ತಾಳ, ಚಂಡೆಗಳ ಉಪಯೋಗ, ಅಭಿನಯಕ್ಕೆ ಹೊಂದಿಕೊಂಡು, ಅವುಗಳ ತೀವ್ರತೆಯನ್ನು ಹೆಚ್ಚಿಸಿ ಪ್ರೇಕ್ಷಕರ ಹೃದಯವನ್ನು ತಟ್ಟಿತು. ಸಾಹಿತ್ಯ ಹಾಗೂ ಸಂದರ್ಭಗಳಿಗನುಗುಣವಾಗಿ ರಾಗಗಳನ್ನು ಆರಿಸಿ ಸ್ವರ ಮತ್ತು ತಾಳಗಳ ಸಂಯೋಜನೆ ಮಾಡಿ ಅದನ್ನು ಕ್ರಿಯಾತ್ಮಕಗೊಳಿಸಿದವರು ಮಾಧವ ಆಚಾರ್ಯರು ಮತ್ತು ಚಂದ್ರಶೇಖರ್‌ ಕೆದಿಲಾಯರು. ರಾಗಶಕ್ತಿಯನ್ನು ಸಾಹಿತ್ಯಕ್ಕೆ ಸರಿಯಾಗಿ ಹೊಂದಿಸಿ ನಡೆಸಿರುವುದು ಇವರ ಕಲಾವಂತಿಕೆಯ ಕುರುಹು. ನಾಟ ರಾಗದಿಂದ ಪ್ರಾರಂಭಗೊಂಡು ಬೇಹಾಗ್‌, ಕಲಾವತಿ, ಮಾಂಡ್‌, ಹಿಂದೋಳ, ಆಭೇರಿ, ಬೃಂದಾವನ, ಸಾರಂಗ, ಚಂದ್ರಕೌನ್ಸ್‌, ಕಾಮಪ್ರಭ, ಚಕ್ರವಾಕ, ಚಾಂದ್‌, ಭೋಪಾಲ್‌, ಹಂಸಾನಂದಿ, ರೇವತಿ, ಮೋಹನ, ದೇಸ್‌, ಅಮೃತವರ್ಷಿಣಿ, ಕಲ್ಯಾಣಿ, ಆನಂದ ಭೈರವಿ ಹೀಗೆ ವಿವಿಧ ರಾಗಗಳನ್ನು ಹಣೆದಿದ್ದಾರೆ. ಭಾವಕ್ಕೆ ಹೊಂದಿಕೊಂಡು ರಾಗ ಸಂಯೋಜನೆ ಮಾಡಿರುವುದು ಎದ್ದು ಕಾಣುತ್ತದೆ. ಸಿಂಧುಭೈರವಿ ರಾಗವನ್ನು ದೈನ್ಯತೆ ಹಾಗು ರೌದ್ರ ರಸಗೆಳೆರಡರಲ್ಲಿಯೂ ಅಳವಡಿಸಿಕೊಂಡಿರುವುದು ಇವರ ಸಂಗೀತ ಹಾಗೂ ಭಾವಾಭಿನಯದ ಮೇಲಿನ ಪ್ರಭುತ್ವವನ್ನು ಮೆರೆಸುತ್ತದೆ. ರಾಗ ಸಂಯೋಜನೆಯಷ್ಟೇ ಪ್ರಧಾನ ಸ್ಥಾನವನ್ನು ಸಾಹಿತ್ಯಕ್ಕೆ ಕೊಟ್ಟಿರುವುದು ಮತ್ತೊಂದು ವೈಶಿಷ್ಟ್ಯ. ಹಾಡಿನ ಸ್ಪಷ್ಟತೆಯಂತೂ ಎದ್ದು ತೋರುವಂಥದು. ಭಾವಗೀತೆಯಲ್ಲಿ ಹೆಸರುವಾಸಿಯಾದ ಚಂದ್ರಶೇಖರ್‌ ಕೆದಿಲಾಯರು ಈ ಗೀತನಾಟಕಕ್ಕೆ ಹಾಡಿರುವುದು ಇದಕ್ಕೆ ಕಾರಣ. ಕೆಲವೆಡೆ ತಾಳರಹಿತ ಭಾವಪೂರ್ಣವಾದ ಸಂಗೀತದ ಜೊತೆ ಮೇಳವಿಸಿಕೊಂಡ ಸೂಕ್ತ ಸಾಹಿತ್ಯದ ಬುನಾದಿಯ ಮೇಲೆ ನಿಂತ ಅಭಿನಯ ಕೌಶಲವು ಇದರಲ್ಲಿನ ಅತಿಶಯ. ಹೀಗೆ ಹಾಡಿನ ಸಾಹಿತ್ಯ, ಸೂಕ್ತ ರಾಗ ಸಂಯೋಜನೆಯಿಂದ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿರುವುದನ್ನು ಕಾಣಬಹುದು.

Dancer Bhramari as Shabariನೃತ್ಯ ಸಂಯೋಜನೆ ಮೂಲತಃ ಸಮೂಹ ನೃತ್ಯಾಭಿನಯಕ್ಕೆ ಮಾಡಿದ್ದಾಗಿತ್ತು. ಇಂಥ ಸಂದರ್ಭದಲ್ಲಿ ಏಕೈಕ ನೃತ್ಯ ಕಲಾವಿದ ಅಷ್ಟೂ ಪಾತ್ರಗಳ ಅಭಿನಯವನ್ನು ಮಾಡುವುದು ಕಷ್ಟ ಸಾಧ್ಯವಾದದ್ದು. ಕಥೆ ಶಬರಿಯದ್ದೇ ಆದರೂ, ಅದರಲ್ಲಿ ಆಕೆಯಲ್ಲದೆ, ಆಕೆಯ ಸಖಿಯರು, ಭಿಲ್ಲರೊಡೆಯನಾದ ಆಕೆಯ ತಂದೆ, ಮದುಮಗ, ಸಂಬಂಧಿಕರು, ರಾಮ, ಲಕ್ಷ್ಮಣ, ಸೀತೆ, ಶೂರ್ಪನಖಿ, ರಾವಣ, ಮಾರೀಚ, ಮಹರ್ಷಿಗಳು, ಇವರಲ್ಲದೆ ಪ್ರಕೃತಿ ಸಹಜವಾದ ಕಾಡು, ನದಿ, ಪ್ರಾಣಿ, ಪಕ್ಷಿಗಳು, ಮುಂತಾದ ಹೇರಳ ಪಾತ್ರಗಳ ಬಳಕೆಯಾಗಿದೆ. ಸಮೂಹ ನೃತ್ಯಾಭಿನಯದಲ್ಲಿ ಪ್ರತಿಯಾಂದು ಪ್ರಾತ್ರಕ್ಕೂ ನಿರ್ದಿಷ್ಟವಾದ ನೃತ್ಯ ಕಲಾವಿದರಿರುತ್ತಾರೆ, ಆಯಾ ಪಾತ್ರಕ್ಕೆ ಸಂಬಂಧ ಪಟ್ಟ ಭಾವಗಳಿರುತ್ತವೆ. ಆದರೆ, ಪ್ರಸ್ತುತ ಕಾರ್ಯಕ್ರಮದಲ್ಲಿ ಇದೆಲ್ಲವನ್ನೂ ಭ್ರಮರಿ ಒಬ್ಬಳೇ ನಿರ್ವಹಿಸಬೇಕಿತ್ತು. ಊಹಿಸಲೂ ಕಷ್ಟವಾದ ಈ ಕೆಲಸವನ್ನು ಅತ್ಯಂತ ಸಹಜವಾಗಿ, ಭ್ರಮರವೊಂದು ಹೂವಿಂದ ಹೂವಿಗೆ ಹಾರುವಂತೆ, ಭ್ರಮರಿ ಪಾತ್ರಗಳ ನಡುವೆ ಲೀಲಾಜಾಲವಾಗಿ ಕ್ರಮಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ ನಾಟ್ಯ ಕಲಾವಿದರಿಗೆ ಒಂದು ಪಾತ್ರದ ಭಾವಕ್ಕೂ, ಮತ್ತೊಂದು ಪಾತ್ರದ ಭಾವಕ್ಕೂ, ಅದರಲ್ಲೂ ವ್ಯತಿರಿಕ್ತವಾದ ಭಾವಗಳಿದ್ದಾಗ, ಇಂತಹ ಕ್ರಮಣ ಬಹು ಕಷ್ಟವಾಗುತ್ತದೆ. ಆದರೆ ಭ್ರಮರಿ ಇದನ್ನೂ ನಿರರ್ಗಳವಾಗಿ ಸಾಧಿಸಿದರು. ಉದಾಹರಣೆಗೆ, ಶಬರಿಯ ಮದುವೆಯ ಸಂದರ್ಭದಲ್ಲಿ ಆಕೆಯ ಸಂಬಂಧಿಕರು ಔತಣಕ್ಕಾಗಿ ಹಿತ್ತಿಲ ಪ್ರಾಣಿಗಳನ್ನು ಕೊಲ್ಲುವ ಸನ್ನಿವೇಶ ಬರುತ್ತದೆ. ಒಂದೆಡೆ ಶಬರಿಯ ಪಾತ್ರವೊಂದರಲ್ಲಿಯೇ ಈ ಪ್ರಾಣಿ ಹತ್ಯೆಯನ್ನು ಕಂಡು ಆಶ್ಚರ್ಯ, ಆಘಾತ, ದುಃಖ, ಹಾಗೂ ಬೀಭತ್ಸ ಭಾವನೆಗಳು ಒಂದಾದ ಮೇಲೊಂದರಂತೆ ಬರುತ್ತಿದ್ದರೆ, ಆ ಪ್ರಾಣಿಗಳ ಚೀರಾಟ, ಹೃದಯ ವಿದ್ರಾವಕ ಪರಿಸ್ಥಿತಿ, ಏತನ್ಮಧ್ಯೆ ಇತರ ಭಿಲ್ಲರ ಕ್ರೌರ್ಯ, ಅಟ್ಟಹಾಸ, ಇಷ್ಟೂ ಭಾವಗಳನ್ನು ಲೀಲಾಜಾಲವಾಗಿ ಅಭಿನಯಿಸಿದರು ಭ್ರಮರಿ. ಹೀಗೆ, ಸುಮಾರು ಒಂದೂವರೆ ಘಂಟೆಗಳ ಕಾಲ ನಡೆದ ತಮ್ಮ ಕಾರ್ಯಕ್ರಮದಲ್ಲಿ ಅವರು ನವರಸಗಳನ್ನೂ ಪ್ರೇಕ್ಷಕರಿಗೆ ತೃಪ್ತಿಯಾಗುವಂತೆ ಬಡಿಸಿದರು. ಶಬರಿಯು ತನ್ನ ಸಖಿಯರೊಂದಿಗೆ ಮದುವೆಯ ತಯಾರಿಯಲ್ಲಿರುವ ಸಂದರ್ಭದ ಹಾಸ್ಯ, ಶೃಂಗಾರ ರಸಗಳು, ವನ್ಯ ಮೃಗಗಳಲ್ಲಿ ಅವಳಿಗಿದ್ದ ಪ್ರೀತಿ, ಕರುಣೆಗಳು, ಅವುಗಳ ಹತ್ಯೆಯನ್ನು ಕಂಡು ಅವಳಲ್ಲಿ ಆದ ಭಯ, ಬೀಭತ್ಸ ದುಃಖದ ಅನುಭವಗಳು, ಮದುವೆಯೇ ಬೇಡವೆಂಬ ದಿಟ್ಟ ನಿರ್ಧಾರ, ಹೀಗೆ ಪ್ರತಿಯಾಂದು ಸನ್ನಿವೇಶದಲ್ಲೂ ಅದಕ್ಕೆ ಉಚಿತವಾದ ಭಾವವು ಅವರಿಂದ ಹೊಮ್ಮಿತು.

Smt. Padma Rangachar thanking the artistesಈ ಕಥನ ಕವನದ ಬಗ್ಗೆ ಗಮನಿಸಬೇಕಾದ ಅಂಶವೆಂದರೆ ಸೇಡಿಯಾಪು ಕೃಷ್ಣ ಭಟ್ಟರು ಶಬರಿಯನ್ನು ನೂತನ ದೃಷ್ಟಿಯಿಂದ ನೋಡಿರುವ ರೀತಿ. ನಮಗೆ ತಿಳಿದ ಮಟ್ಟಿಗೆ ಶಬರಿಯನ್ನು ಪರಿಸರವಾದಿಯಂತೆ ಚಿತ್ರಿಸಿರುವುದು ಇದೇ ಮೊದಲ ಬಾರಿ. ಅವಳ ಈ ಪರಿಸರವಾದೀ ಮನೋಭಾವವನ್ನು ಎರಡು ದೃಷ್ಟಾಂತಗಳಿಂದ ತೋರಿಸಿದ್ದಾರೆ. ಒಂದು ಶಬರಿ ನಾಗಸಂಪಿಗೆ ಹೂವನ್ನು ಕೊಯ್ಯುವ ಸಂದರ್ಭದಲ್ಲಿ ಆಕೆಗೆ ಮತ್ತೆ ನೆನಪಾಗುವ ಆ ಮೂಕ ಪ್ರಾಣಿಗಳ ಆರ್ತನಾದ, ಹಾಗು ಅವಳು ಕೊಯ್ಯದೆ ಉದುರಿದ ಹಣ್ಣುಗಳನ್ನೇ ತಿನ್ನುವ, ಮತ್ತು ಮಣ್ಣಿಗೆ ಬಿದ್ದ ಹೂಗಳನ್ನು ಮಾತ್ರ ಆರಿಸಿ ಎತ್ತಿಕೊಳ್ಳುವ ಸಂದರ್ಭ. ಈ ರೀತಿ ಶಬರಿಯನ್ನು ಪರಿಸರವಾದಿಯಂತೆ ಕಂಡಿರುವುದು ಅದ್ವಿತೀಯವಾಗಿದೆ.

ಹರೆಯದ, ಸರಳ ಹೃದಯದ, ಮುಗ್ಧೆ ಷೋಡಶಿ ಶಬರಿ, ಶ್ರೀ ರಾಮನ ಬರುವಿಕೆಯನ್ನೇ ನಿರೀಕ್ಷಿಸುತ್ತ ಅವಳಲ್ಲಾಗುವ ಪರಿವರ್ತನೆಗಳನ್ನು ಇವರು ಅಭಿನಯಿಸಿದ ರೀತಿ ಹೇಳಿಕೆಗೆ ಸಿಗದು. ಅವನ ನಾಮ ಜಪದಿಂದಲೇ ತಲ್ಲೀನಳಾಗಿ, ನಿರ್ಮಲಳಾಗಿ ಪರಿಶುದ್ಧಳಾಗುತ್ತಾಳೆ. ರಾಮ ಬಂದಾಗಲಂತೂ, ಬಾಗಿದ ದೇಹದ, ಕ್ಷೀಣಗೊಂಡ

ದೃಷ್ಟಿಯ ಶಬರಿ ಬಿದ್ದಿದ್ದ ಹಣ್ಣುಗಳನ್ನು ಆರಿಸಿ, ಒರೆಸಿ, ಮೊದಲು ತಾನು ರುಚಿನೋಡಿ ಆಮೇಲೆ ರಾಮನಿಗೆ ತಿನ್ನಿಸುವ ದೃಶ್ಯವಂತೂ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ. ನಿರ್ಮಲ ಹೃದಯದ ಶಬರಿ ತಾನು ರಾಮನಲ್ಲಿ ಲೀನವಾಗುವುದಲ್ಲದೆ ನಮ್ಮನೆಲ್ಲ ಆ ರಸವಾಹಿನಿಯಲ್ಲಿ ತೇಲುವಂತೆ ಮಾಡಿದ ಮಹಾಶಕ್ತಿ ಭ್ರಮರಿಯಲ್ಲಿತ್ತು ಎಂದರೆ ತಪ್ಪಾಗಲಾರದು.

ಇಲ್ಲಿ ಈ ನೃತ್ಯ ಕಾರ್ಯಕ್ರಮದ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಬೇಕಾದದ್ದು ಮುಖ್ಯ. ಉದ್ಯಾವರ ಮಾಧವ ಆಚಾರ್ಯರು ನೂತನವಾಗಿ ಪ್ರಯೋಗ ಮಾಡಿದಂತಹ ಈ ಕಕ್ಷ ನೃತ್ಯ ಕಾರ್ಯಕ್ರಮದಲ್ಲಿ ನಿಯಮಿತ ಪ್ರೇಕ್ಷಕರ ಮುಂದೆ ಸಾಮೂಹಿಕ ನೃತ್ಯ ರೂಪಕವನ್ನು ಮಾರ್ಪಡಿಸಿ, ಒಬ್ಬರೇ ಕಲಾವಿದರಿಂದ ಇಂಥ ಕಥನ ಕವನಗಳ ನಿರೂಪಣೆ ನಡೆಸುವುದೇ ಇದರ ಪ್ರಮುಖ ಛಾಪು. ಇದರ ವಿಶೇಷತೆಗಳನ್ನು ಇಲ್ಲಿ ಹೇಳದೇ ಹೋದರೆ, ಒಂದು ಪರಿಪೂರ್ಣವಾದ ವಿಮರ್ಶೆ ಇದಾಗುವುದಿಲ್ಲ. ಈ ಪ್ರಕಾರದ ಒಂದು ಅತ್ಯಂತ ಮುಖ್ಯವಾದ ಅಂಶವೆಂದರೆ, ಪ್ರೇಕ್ಷಕರಿಗೂ ಕಲಾವಿದೆಗೂ ನಡುವೆ ಇದ್ದ ನಿಕಟತೆ. ದೊಡ್ಡ ಸಭಾಂಗಣಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಇಂತಹ ಅನುಭವ ಸಿಗುವುದಿಲ್ಲ. ಇಂತಹ ನಿಕಟತೆಯಿಂದ ಪ್ರೇಕ್ಷಕರೂ ಕಲಾವಿದೆಯೂ ಭಾವದಲ್ಲಿ ಏಕವಾಗಿ ಸಂದರ್ಭೋಚಿತವಾದ ಅವಳ ಉಸಿರಾಟದ ಏರಿಳಿತಗಳಲ್ಲಿ ನಮ್ಮ ಉಸಿರಾಟವೂ ಕೂಡ ಏರಿಳಿದು, ಪಾತ್ರದ ಭಾವೋತ್ಕೃಷ್ಟತೆಯನ್ನು ಅನುಭವಿಸುವುದು ಸಾಧ್ಯವಾಯಿತು. ಈ ನಿಕಟತೆ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿದೆ ಎಂದರೆ, ಕಲಾವಿದೆಯ ಗೆಜ್ಜೆ ನಾದದಿಂದಲೇ ಶೊಲ್ಲು ಕಟ್ಟಿಯ ಲಯ, ಕೈ ಬಳೆಗಳ ಕಲಕಲ ಕೇಳುತ್ತಿತ್ತು. ಆ ನಾದ ತರಂಗಗಳಲ್ಲಿ ನಾವೂ ತೇಲಿ ಭಾವೋನ್ಮಾದಗಳನ್ನು ಅನುಭವಿಸಿದೆವು.

ಇದೆಲ್ಲಕ್ಕೂ ಕಿರೀಟಪ್ರಾಯವಾಗಿ ಪ್ರೌಢ ನೃತ್ಯ ಸಂಯೋಜನೆಯನ್ನು ಮಾಡಿರುವವರು ಭ್ರಮರಿ. ಇದಕ್ಕೆ ರಂಗ ನೃತ್ಯ ಸಂಯೋಜಿಸಿದವರು ಉದ್ಯಾವರ ಮಾಧವ ಆಚಾರ್ಯರು. ಎಲ್ಲಾ ಪಾತ್ರಗಳನ್ನೂ, ಭಿಲ್ಲರಿಂದ ಹಿಡಿದು ಮೃಗ ಪಕ್ಷಿಗಳೆಲ್ಲವನ್ನೂ ಶಾಸ್ತ್ರೀಯ ನೃತ್ಯದ ಚೌಕಟ್ಟಿನಲ್ಲಿ ಬಿಂಬಿಸಿರುವ ಭ್ರಮರಿಯ ಶೈಲಿ ಅದ್ಭುತವಾಗಿದೆ. ಎಲ್ಲಿಯೂ ಕಥೆಯ ಹರಿವು ಹಾದಿ ತಪ್ಪದೆ, ಸಂಗೀತದಲ್ಲೂ ರಸಾಭಾಸವಾಗದೆ ಸಾಗಿ ಬಂದಿದೆ. ಇದನ್ನು ಪ್ರಧಾನವಾಗಿ ಗಮನಿಸಬಹುದಾದದ್ದು ರೂಪಕದ ಮಧ್ಯದಲ್ಲಿ ಶಬರಿಯು ವೃದ್ಧಳಾಗುತ್ತಿರುವ ಸಮಯದಲ್ಲಿ, ಸಾಹಿತ್ಯ ರಹಿತ ಸ್ವರ-ಲಯ-ವಿನ್ಯಾಸ ರಂಜಿತ ನೃತ್ಯಾಭಿನಯದಿಂದ ಶ್ರೀ ರಾಮ, ಲಕ್ಷ್ಮಣ, ಸೀತೆಯರು ಪಂಚವಟಿಯಲ್ಲಿ ಇರುವಾಗ ನಡೆಯುವ ಘಟನಾವಳಿಗಳ ದರ್ಶನ ಮಾಡಿಸುವಾಗ. ಆ ಸಂದರ್ಭದಲ್ಲಿ ಲಕ್ಷ್ಮಣನಿಂದ ಪರ್ಣಕುಟೀರದ ನಿರ್ಮಾಣ, ಶೂರ್ಪನಖಿಯ ಮಾನಭಂಗ, ರಾವಣ ಮಾರೀಚರ ಆಗಮನ, ಮಾಯಾಮೃಗದ ಬೇಟೆ, ಸೀತಾಪಹರಣ, ಜಟಾಯುವಿನ ಮರಣ, ಮುಂತಾದ ಸಂಗತಿಗಳನ್ನು ಸಂಕ್ಷಿಪ್ತವಾಗಿ, ಆದರೆ ಪ್ರಭಾವಶಾಲಿಯಾಗಿ ನಿರೂಪಿಸಿದ್ದಾರೆ. ಇದರ ಮತ್ತೊಂದು ವಿಶೇಷವೇನೆಂದರೆ ಕಥನ ಕವನಗಳನ್ನು ನೃತ್ಯ ರೂಪಕಕ್ಕೆ ಸಮರ್ಪಕವಾಗಿ ಹೊಂದುವಂತೆ ಅಳವಡಿಸಿಕೊಂಡಿರುವುದು. ಹೊರನಾಡ ಕನ್ನಡಿಗರಿಗೆ ಚಿರ ಪರಿಚಿತರಾದ ಧನಂಜಯ ದಂಪತಿಗಳ ಮತ್ತು ಸಿ.ವಿ. ಚಂದ್ರಶೇಖರ್‌ ದಂಪತಿಗಳ ಸರಿಸಮಾನರಾಗಿ, ನೃತ್ಯ ರೂಪಕ ನಿರ್ಮಾಣ ಮಾಡುವುದರಲ್ಲಿ ಮಾಧವ ಆಚಾರ್ಯರು ಮತ್ತು ಭ್ರಮರಿ ಯಶಸ್ವಿಯಾಗಿದ್ದಾರೆ.

ಒಟ್ಟಿನಲ್ಲಿ ಮಾಧವ ಆಚಾರ್ಯರು ಮತ್ತು ಭ್ರಮರಿ ‘ಪುಣ್ಯಲಹರಿ’ ಕಥನ ಕವನವನ್ನು ನೂತನ ಪ್ರಾಯೋಗಿಕ ವೈಶಿಷ್ಟ್ಯಗಳಿಂದ ತುಂಬಿದ ನೃತ್ಯ ರೂಪಕವನ್ನಾಗಿಸಿ, ಸಾಹಿತ್ಯ-ಸಂಗೀತ-ನೃತ್ಯಗಳ ತ್ರಿವೇಣಿ ಸಂಗಮದ ಪುಣ್ಯ ಲಹರಿಯಲ್ಲಿ ಕನ್ನಡಾಭಿಮಾನಿಗಳನ್ನು ಮೀಯಿಸಿ ಪುನೀತರನ್ನಾಗಿಸಿದರು. ನಾವಾದರೋ ಮುಗ್ಧ ಷೋಡಶಿ ಶಬರಿಯ ನವೋಲ್ಲಾಸದಿಂದ, ದಿಟ್ಟ ಶಬರಿಯ ಸಂಕಲ್ಪದೊಡನೆ, ಆಕೆಯು ತಪೋ ಭಾವದೊಂದಿಗೆ ದೇಹವನ್ನೇ ಕರ್ಪೂರವನ್ನಾಗಿ ಶ್ರೀ ರಾಮನಿಗೆ ಅರ್ಪಿಸಿದ ಪರಿಯಲ್ಲಿ ರಸಾನುಭವದ ಉತ್ಕೃಷ್ಟಾವಸ್ಥೆಗೆ ಏರಿದೆವು.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X