ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಷ್ಯಾದಿಚ್ಛೇತ್‌ ಪರಾಜಯಂ... ಅಥವಾ, ಮಿತ್ರರಿಗೆ ಪಂಗನಾಮ?

By Staff
|
Google Oneindia Kannada News
  • ಡಾ। ಶ್ರೀವತ್ಸ ದೇಸಾಯಿ; ಡೋಂಕಾಸ್ಟರ್‌, ಯುಕೆ
ಒರ್ಲಾಂಡೋದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನಕ್ಕೆ ಹಾಸ್ಯಪಟುದ್ವಯ ಅ ರಾ ಮಿತ್ರ ಮತ್ತು ಕೃಷ್ಣೇಗೌಡರು ಬಂದಿದ್ದ ವಿಷಯ ನೋಡಿದೆ. ಓದುತ್ತಿದ್ದಂತೆ, ಅ ರಾ ಮಿತ್ರರನ್ನು ನಾನು ಇಲ್ಲಿ ಇಂಗ್ಲೇಂಡ್‌ನಲ್ಲಿ ನಾಲ್ಕು ವರ್ಷಗಳ ಹಿಂದೆ ಭೇಟಿಯಾಗಿದ್ದು ನೆನಪಿಗೆ ಬಂತು. ನನ್ನ ನೆನಪುಗಳನ್ನು ಬರಹಕ್ಕಿಳಿಸುವುದಕ್ಕೆ ಇನ್ನೊಂದು ಕಾರಣವೆಂದರೆ, ನಾನಿನ್ನೂ ಕಳೆದ ವಾರದ ‘ಪಂಗನಾಮ’ ವಿಚಿತ್ರಾನ್ನದ ಗುಂಗಿನಲ್ಲೇ ಇರೋದು ಅಂದರೂ ಭಾರಿ ತಪ್ಪೇನಲ್ಲ!

ಇರಲಿ, ಮಿತ್ರರೊಂದಿಗೆ ನನಗಾದ ಅನುಭವ ಕೇಳಿ.

Prof A R Mitraನಾನು ಮೊದಲ ಬಾರಿ ಅ ರಾ ಮಿತ್ರರನ್ನು ಕಂಡದ್ದು, ಕೇಳಿದ್ದು 2000 ರಲ್ಲಿ , ಇಲ್ಲಿ ಮಿಲ್ಲೆನಿಯಂ ಕಾರ್ಯಕ್ರಮಕ್ಕೆ ಅವರು ಬಂದಾಗ. ಹೊಟ್ಟೆ ಹುಣ್ಣಾಗುವಂತೆ ಮಾತಾಡಿದವರಿಗೆ ಸ್ಟಾಂಡಿಂಗ್‌ ಓವೇಷನ್‌ ಕೊಟ್ಟು ಮತ್ತೆ ರಾತ್ರಿ ಊಟವಾದ ಮೇಲೆ ಇನ್ನೊಂದು ಒಬ್ಬೆ ಹಾಸ್ಯದ ತುತ್ತಿಗೆ ಕೇಳಿಕೊಂಡೆವು. ರಾತ್ರಿ ಅಲ್ಲೇ ಹೋಟೇಲಿನಲ್ಲಿ ತಂಗಿದ್ದರು. ಮರುದಿನ ಬೆಳಗಿನ ಜಾವ ಸಿಕ್ಕರು. ನಮ್ಮ ಧಾರವಾಡದಲ್ಲಿ ‘ಆರಾಮ್‌’ ಶಬ್ದವನ್ನು ‘ಓಕೇ’ ಎಂಬ ಅರ್ಥದಲ್ಲೇ ಹೆಚ್ಚಾಗಿ ಬಳಸುತ್ತೇವೆ. ಹೋಟೇಲು ಸೌಕರ್ಯ ಅನುಕೂಲ ಹೇಗಿತ್ತೇನೋ ಎಂದು ‘ನೆನ್ನೆ ರಾತ್ರಿ ಆರಾಮಿತ್ರಾ?’ ಎಂದು ಕೇಳಿದೆ. ‘ಓಹೋ, ನಾನೇ, ಇಂದು ಬೆಳಿಗ್ಗೆನೂ ನಾನು ಅ ರಾ ಮಿತ್ರನೇ’ ಎಂದ ಹಾಗಾಯಿತು!

‘ಹೆಸರಿನಲ್ಲಿ ಶತ್ರು (ಉದಾ; ಶತ್ರುಘ್ನ) ಕೇಳಿದ್ದೇನೆ, ಮಿತ್ರ ಅಪರೂಪವಲ್ಲವೆ? ಉತ್ತರ ಭಾರತದ ಅಡ್ಡಹೆಸರು ಮಿತ್ರಾ ಬಿಟ್ಟರೆ’ ಎಂದು ನನ್ನ ಅಜ್ಞಾನದ ಸ್ಫೋಟ ಮಾಡಿದೆ. ‘ಮಿತ್ರ ಎಂದರೆ ಸೂರ್ಯನ ಹೆಸರು. ನನ್ನ ತಂದೆ ಇಟ್ಟ ಹೆಸರು’ ಎಂದು ಬೆಳಕು ಚೆಲ್ಲಿದಾಗ ಸೂರ್ಯನ ಪ್ರಕಾಶದ ಅಲ್ಟ್ರಾ ವಯೋಲೇಟ್‌ ಕಿರಣದಲ್ಲಿ ಬ್ಯಾಕ್ಟೀರಿಯ ಮಾಯವಾದಂತೆ ನಾಚಿಕೆಯಿಂದ ಕರಗಿ ಹೋದೆ.

2003ರಲ್ಲಿ...

Krishnegowdaಎರಡನೆಯ ಸಲ ಮಿತ್ರ ಇಲ್ಲಿ ನಮ್ಮೂರಿಗೆ ಬಂದರು. ಬರುತ್ತ, ಹರಿಹರೇಶ್ವರರು ‘ಕಿಂದರ ಜೋಗಿ’ ಎಂದು ವರ್ಣಿಸಿದ ಕೃಷ್ಣೇಗೌಡರನ್ನು ಜೊತೆಗೆ ಕರೆದು ತಂದರು. ಅವರ ಪರಿಚಯ ಮಾಡಿಸುವಾಗ ಸಭಿಕರನ್ನುದ್ದೇಶಿಸಿ ‘ನೋಡಿ, ಕಳೆದ ಸಲ ನನ್ನನ್ನು ಮೆಚ್ಚಿದಿರಿ, ಚೆನ್ನಾಗಿ ನೋಡಿಕೊಂಡಿರಿ ಎಂದು ಈ ಕೃಷ್ಣೇಗೌಡರನ್ನು ಕರೆದುಕೊಂಡು ಬಂದೆ. ನಿಮಗೆ ಇವರ ಪರಿಚಯ ಇಲ್ಲವೆಂದು ಕಾಣುತ್ತದೆ’ ಎಂದರು. ಗೌಡರು ನಮ್ಮನ್ನು ನಿರಾಸೆ ಮಾಡಲಿಲ್ಲ. ತಮ್ಮ ವಾಗ್ಝರಿಯಲ್ಲಿ ಎಲ್ಲರನ್ನೂ ಕೊಚ್ಚಿಕೊಂಡು ಹೋದರು. ಕರತಾಡನ ಗಡುಚಿಕ್ಕಿತ್ತು. ಮಿತ್ರರಿಗೇ ದಿಗಿಲಾಯಿತು. ನಂತರ ಹೇಳಿದರು: ‘ನೋಡ್ರೆಪ್ಪ, ಕಳೆದ ಸಲ ನನ್ನನ್ನು ಆದರಿಸಿದ್ದಕ್ಕೆ ಈ ಕೃಷ್ಣೇಗೌಡನನ್ನು ಕರೆತಂದೆ. ಮುಂದಿನಸಲ ಅವನನ್ನು ಕರೆಸುವಾಗ ನನ್ನನ್ನೂ ಮರೆಯದೆ ಕರೆಸಿ. ಅವನೊಬ್ಬನನ್ನೇ ಕರೆದು ನನಗೆ ಪಂಗನಾಮ ಹಾಕಬೇಡಿ!’

ಕೋರಾ ಕಾಗಜ್‌

ಯಾಕೋ ಕೆಲ ದಿನಗಳಿಂದ ಕಿವಿಯಲ್ಲಿ ಆ ಹಾಡು ಗುನುಗುನಿಸುತ್ತಿದೆ ಒಂದೇಸವನೆ:

ಕೋರಾ ಕಾಗಜ್‌ ಥಾ ಯೇ ಮನ್‌ ಮೇರಾ
ಲಿಖ್‌ ದಿಯಾ ನಾಮ್‌ ಉಸ್‌ ಪೇ ತೇರಾ...

ಅದನ್ನೇ ಕೆಳಗೆ ‘ಪಂಗೀಕರಿಸಿ’ದ್ದೇನೆ:

ಸಾಫ್‌-ಸುತರಾ ಥಾ ಮಾಥಾ ಮೇರಾ
ಉಸ್ಪೇ ಲಿಖ್‌ ದಿಯಾ ತೂ ನೇ ಪಂಗನಾಮ್‌ ಪೂರಾ...!


ಪೂರಕ ಓದಿಗೆ-
ಒರ್ಲಾಂಡೊ ಸಮ್ಮೇಳನಕ್ಕೆ ಪ್ರೊ। ಅ.ರಾ,ಮಿತ್ರ
ವಿಶ್ವಕನ್ನಡ ಸಮ್ಮೇಳನದಲ್ಲಿ ಪ್ರೊ। ಕೃಷ್ಣೇಗೌಡ
ಟಾಂಪಾದಲ್ಲಿ ರಾಗಿಯ ತಾಂಪೂ ಬಾಳ್ಕ ಮೆಣ್ಸಿನ ಕಂಪೂ...


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X