ಈ ಸಲ ಕರ್ನಾಟ ದೇಷದ ಸಿ-ಎಮ್ಮು ಯಾರಪ್ಪ ಆಗ್ತಾರ ?
- ಸುನೀಲ್, ಡೆನ್ವರ್, ಕೊಲರಾಡೊ
[email protected]
‘ನೋಡಪ್ಪಾ, ಈ ಸಲ ಅಂತೂ ಕರ್ನಾಟಕ ಅಸ್ಸೆಂಬ್ಲಿ ಅನ್ನೋದು ಮಸಾಲಿ ಮಂಡಕ್ಕಿ ಆಗೋದದ. ಯಾರು ಸಿ-ಎಮ್ಮು ಅನ್ನೋದು ದೇವ್ರಿಗೂ ಗೊತ್ತಿಲ್ಲ.’
‘ಬೆಂಗ್ಳೂರು ಸಿಂಗಾಪುರ ಮಾಡಿರೋ ಕೃಷ್ಣ ಮತ್ತ ಸಿ-ಎಮ್ಮು ಆಗಂಗಿಲ್ಲೇನು ?’ ಅಂತ ಕೇಳಿದ್ದಕ್ಕ ಅಂದ - ‘ಈ ಫ್ಲೈ-ಓವರ್ ಕೃಷ್ಣ , ಮದ್ದೂರು ಬಿಟ್ಟು ಬೆಂಗ್ಳೂರಾಗ ಎಲೆಕ್ಷನ್ ನಿಂತಾಗ, ಎಲ್ಲಾರ್ಗೂ ಅನ್ಸೇದ, ಮತ್ತ ಕೃಷ್ಣ ಆಗಂಗಿಲ್ಲ ಅಂತ. ಮೊದಲ್ನೇದು ಕಾಂಗ್ರೆಸ್ಸು ಗೆಲ್ಲೋದೆ ಅನುಮಾನ, ಇನ್ನ ಕಾಂಗ್ರೆಸ್ಸು ಗೆದ್ರೂ ಕೃಷ್ಣ ಸಿ-ಎಮ್ಮು ಆಗೂದಿಲ್ಲ. ಪೂಜಾರಿ, ಷರೀಫು, ಖರ್ಗೆ, ಧರಂಸಿಂಗು ಎಲ್ಲಾ ಕಾಯ್ಕಾಂಡು ಕೂತಾರ ಕೃಷ್ಣಂಗ ಟಾಂಗು ಕೊಡ್ಲಿಕ್ಕೆ. ಕೃಷ್ಣ, ಕಾಂಗ್ರೆಸ್ಸು ಮೋಸ್ಟ್ಲಿ ಗಾನ್ ಅಪ್ಪ ’
‘ಹಂಗಾರ ಬೀಜೆಪಿಗ ಚಾನ್ಸ್ ಅದ ಏನು? ಬೀಜೆಪಿ ಬಂದ್ರ ಯಾರು ಸಿ-ಎಮ್ಮು ?’
‘ಬರೇ ವಾಜಪೇಯಿ ಅಜ್ಜನ ಹೆಸರಿಂದ ಬೀಜೆಪಿಯವ್ರು ಸಿ-ಎಮ್ಮು ಆಗೋದು ಭಾಳ ಕಠಿಣ ಅದ. ಬೀಜೆಪಿ ಮೆಜಾರಿಟಿ ಬಂದ್ರೂನು ಸಿ-ಎಮ್ಮು ಯಾರು ಅನ್ನೋದು ಖಾಯಂ ಇಲ್ಲ. ಅನಂತ್ಕುಮಾರು ಮತ್ತ ಯಡಿಯೂರಪ್ಪ ರೇಸ್ನಾಗ ಮುಂದಿದ್ದಾರ. ಬಂಗಾರಪ್ಪ ಚಾನ್ಸ್ ಹೊಡದ್ರೂ ಹೊಡೀಭೌದು. ಬೀಜೆಪಿನೂ ಮೋಸ್ಟ್ಲಿ ಗಾನ್ ಅಪ್ಪ’
‘ಹಂಗಾರ ಗೌಡ್ರ ದಳಕ್ಕ ಚಾನ್ಸ್ ಅದ ಏನು? ದಳ ಬಂದ್ರ ಯಾರು ಸಿ-ಎಮ್ಮು ?’
‘ದಳ ಬಂದ್ರ ಎಲ್ಲಾರು ಸಿಧ್ರಾಮಯ್ಯನ ಹೆಸರು ಹೇಳ್ಯಾರ. ಆದರ ದಳ ಬಂದ್ರ, ದೇವೇಗೌಡ್ರೇ ಸಿ-ಎಮ್ಮು ಆಗಭೌದು. ಪೀ-ಎಮ್ಮು ಇದ್ದವ್ರು ಸಿ-ಎಮ್ಮು ಆಗಿ ರೆಕಾರ್ಡು ಮಾಡಭೌದು. ಇಲ್ಲಾಂದ್ರ ಗೌಡ್ರ ಮಕ್ಕಳಂತೂ ರೆಡಿ ಕೂತಾರ. ಆ ಅದ್ರ ದಳ ಆಲ್ಸೊ ಮೋಸ್ಟ್ಲಿ ಗಾನ್ ಅಪ್ಪ’
‘ಹಂಗಾರ ಇನ್ನು ಯಾರು ಉಳದ್ರೋ?’
‘ನನ್ನ ಕೇಳಿದ್ರ ವಾಟಾಳ್ ನಾಗ್ರಾಜ ಸಿ-ಎಮ್ಮು ಆಗ್ತಾನ!’.
‘ಆಧೆಂಗೋ ?’
‘ಮತ್ತ ಯಾರಿಗೂ ಮೆಜಾರಿಟಿ ಇಲ್ಲೇನಪ್ಪ. ಮೂರು ದೊಡ್ಡ ಪಾರ್ಟಿಗೂ 60-60 ಸೀಟು ಸಿಕ್ಕು, ಸಿ-ಎಮ್ಮು ಚೇರು ಅಂದ್ರ ಮ್ಯುಸಿಕಲ್ ಚೇರು ಆಗ್ತದ ನೋಡು! ಇಂಥಾ ಸಿಚುಏಷನ್ನಾಗ ವಾಟಾಳ್ ನಾಗ್ರಾಜನಂಥಾ ಸಿಂಗಲ್ಲು ಸೀಟು ಪಾರ್ಟಿಯವ್ರದ್ದ ಚಾನ್ಸು. ಹಲ್ಲಿಗಳಿಗೆ ಕರೆಂಟು ಹೊಡಸೋ, ಹೆಂಡದ ದೊರೆ ನಂಬರ್ ವನ್, ಟಿಪ್ಪು ಖಡ್ಗಧಾರಿ, ಜನತಾ ಪಕ್ಷದ ವಿಜಯ್ ಮಲ್ಯನೂ ಚಾನ್ಸು ಹೊಡೀಭೌದು. ಹೆಂಡದ ದೊರೆ ನಂಬರ್ ಟು, ಅರಸು ಸಂಯುಕ್ತ ಪಕ್ಷದ ಖೋಡೆನೂ ಚಾನ್ಸು ಹೊಡೀಭೌದು. ಇನ್ನ ನ್ಯೂಸ್ ಪೇಪರ್ ಕಿಂಗು, ಕನ್ನಡನಾಡು ಪಾರ್ಟಿ, ವಿಜಯ್ ಸಂಕೇಶ್ವರ್ ಚಾನ್ಸು ಹೊಡೀಭೌದು. ಇಷ್ಟು ದಿನ ಹೆಸರು ಕೇಳ್ದೇ ಇರೋ ಸಿದ್ಧಪ್ಪ ಮೆಣಸಿನಕಾಯಿನೂ ಸಿ-ಎಮ್ಮು ಆಗಭೌದು, ಒಂದಿಬ್ರು ಎಮ್ಮೆಲ್ಲೆ ಖರೀದಿ ಮಾಡಿದ್ರ!!! ಒಟ್ಟು ಭರ್ಜರಿ ಹಾರ್ಸ್ ಟ್ರೇಡಿಂಗ್ ಅನ್ತೂ ಖಾಯಂ ಅಗೋದು ಅದ’
‘ಯಾರರ ಗೆಲ್ಲಲಿ. ಒಟ್ಟು ಐದು ವರ್ಷ ಸರ್ಕಾರ ಕೊಡಲಿ. ಟ್ಯಾಕ್ಸ್ ದುಡ್ಡು ಎಲ್ಲಾ ಎಲೆಕ್ಶನ್ನಿಗೆ ಹಾಳಾಗ್ದೆ ಇರ್ಲಿ’ ಅನ್ತ ಹೇಳಿ ಫೊನೆ ಇಟ್ಟರ, ನನ್ನ ಮುದ್ದಿನ ಮಡದಿ ‘ಸಿಗೋ ಒಂದು ವೀಕೆಂಡು ಹಿಂಗ ಹಾಳು ಮಾಡೋದ ?’ ಅಂತ ಮೂಗು ಮುರಿಯೋದ !












Click it and Unblock the Notifications