• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎನ್‌ಆರ್‌ಐ ಚಿಂತೆ-ಚಿಂತನ

By Staff
|
  • ಶ್ರೀನಿವಾಸ ಭಟ್‌. ಎಸ್‌, ಲಾಸ್‌ಏಂಜಲಿಸ್‌

ಊರಿಗೊಂದು ಹೆಸರು, ಮಗುವಿಗೊಂದು ಹೆಸರು, ಅಷ್ಟೇಕೆ ಸಾಕಿದ ಪ್ರಾಣಿಗೂ ಮುದ್ದಾದ ಒಂದು ಹೆಸರು!

ನಮ್ಮ ಸಂಸ್ಕೃತಿಯಲ್ಲಿ ನಾಮಕರಣ ಮಾಡುವಾಗ ವ್ಯಾವಹಾರಿಕ ಹೆಸರಿನ ಜೊತೆಗೆ ಹಲವು ಹೆಸರುಗಳನ್ನಿಡುತ್ತಾರೆ; ಹುಟ್ಟಿದ ದಿನ, ವಾರ, ನಕ್ಷತ್ರ, ಗೋತ್ರಗಳಿಗನುಗುಣವಾಗಿ. ಇದರ ಉದ್ದೇಶ ಒಂದೇ, ಮನುಷ್ಯನ/ವಸ್ತುವಿನ ಅಸ್ತಿತ್ವವನ್ನು ಗುರುತಿಸಿ ಸಂಭೋದಿಸುವ ಸಲುವಾಗಿ. ಅಂತೆಯೇ ಜಾತಿಗೊಂದು, ಗುಂಪಿಗೊಂದು, ದೇಶಕ್ಕೊಂದು ಹೆಸರು. ಹೊರನಾಡ ಕನ್ನಡಿಗರ ಬರವಣಿಗೆ/ಸಾಹಿತ್ಯಾಭಿರುಚಿ ಇತ್ತೀಚಿಗೆ ಜಾಸ್ತಿಯಾಗತೊಡಗಿದಾಗ ಅದಕ್ಕೊಂದು ಹೆಸರಿಟ್ಟರು: -ಎನ್‌. ಆರ್‌. ಐ. ಸಾಹಿತ್ಯ. ನಮ್ಮದೂ ಕನ್ನಡ ಸಾಹಿತ್ಯವೇ, ಅದಕ್ಕೆ ಎನ್‌. ಆರ್‌. ಐ. ಎಂಬ ವಿಶೇಷ ನಾಮಾಂಕಿತವೇಕೆಂದು ಕೆಲವರ ಅಭಿಪ್ರಾಯ. ಅದೇನೆ ಇರಲಿ.

ಬಹಳ ವರ್ಷಗಳಿಂದ ಕರ್ನಾಟಕದಿಂದ ಹೊರಗಿದ್ದು, ನೆಲಸಿದ ನಾಡಿನ ನೀರನ್ನು ಕುಡಿದು, ಸುತ್ತಮುತ್ತಲಿನ ವಾತಾವರಣದಲ್ಲಿ ಬಾಳಿ ಬದುಕಿ, ಮಾತ್ರಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು, ಇಲ್ಲಿನ ಸಮಸ್ಯೆಗಳನ್ನು, ಸ್ಪಂದನಗಳನ್ನು ಚಿತ್ರಿಸುವುದನ್ನು ಅನಿವಾಸಿ ಕನ್ನಡಿಗರ ಬರಹಗಳಲ್ಲಿ ನಾವು ಕಾಣಬಹುದು. ಕಥೆ, ಕವನ, ವೈಚಾರಿಕ ಲೇಖನಗಳನ್ನು ಬರೆಯುವ ಎನ್‌.ಆರ್‌. ಐಗಳು ರಜೆಯಲ್ಲಿ ತಾಯ್ನಾಡಿಗೆ ಮರಳಿದಾಗ, ಅಲ್ಲಿನ ಹೆಸರಾಂತ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ತಮ್ಮ ಪುಸ್ತಕ/ಕೆಸೆಟ್‌/ಕೆಸೆಟ್‌/ಸಿಡಿಗಳನ್ನು ಬಿಡುಗಡೆ ಮಾಡುವುದು ನಿಜಕ್ಕೂ ಸಂತಸದ ಸುದ್ದಿ.

ಕೆಲವೊಮ್ಮೆ ಕರ್ನಾಟಕದ ಉದಯೋನ್ಮುಖ ಸಾಹಿತಿಗಳಿಗೂ ಕೈಗೆಟುಕದ ವೇದಿಕೆ, ಚಪ್ಪಾಳೆಗಳ ಹೂಮಳೆ ಎನ್‌.ಆರ್‌.ಐ. ಸಾಹಿತಿಗಳಿಗೆ ದೊರೆತರೆ ಆಶ್ಚರ್ಯವೇನಿಲ್ಲ. ಅಂತೆಯೇ ಇವರ ಡಂಗುರಗಳಿಗೆ ಅಸಮಾಧಾನ ವ್ಯಕ್ತಪಡಿಸುವವರೂ ಒಂದೆರಡು ಮಂದಿ ಇದ್ದಾರು.. ಅದು ಮಾನವ ಸಹಜ. ಮುಖ್ಯವಾಗಿ ಕರ್ನಾಟಕದಲ್ಲಿರುವ ಸಾಹಿತಿಗಳನ್ನು, ಅವರ ಸಾಹಿತ್ಯ/ಪ್ರತಿಭೆ ಯನ್ನು ಎನ್‌. ಆರ್‌. ಐ. ಸಾಹಿತಿಗಳೊಡನೆ ಒಂದೇ ತಕ್ಕಡಿಯಲ್ಲಿ ತೂಕಹಾಕುವುದು ಸರಿಯೇ ? ಅದರ ಅವಶ್ಯಕತೆ ಇದೆಯೇ? ಇದರ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಯಬೇಕು.

ಕರ್ನಾಟಕದಿಂದ ಬರುವ ಹೆಸರಾಂತ ಸಾಹಿತಿಗಳು ಒಂದೋ ಎರಡೋ ವಾರಗಳಿದ್ದು, ಹೆಚ್ಚೆಂದರೆ ಒಂದೆರಡು ತಿಂಗಳಿದ್ದು, ವಾರಾಂತ್ಯದ ಸಂತೋಷಕೂಟಗಳಲ್ಲಿನ ಅನುಭವಗಳನ್ನೋ, ಕಷ್ಟಪಟ್ಟು ಕೆಲವೇ ದಿನಗಳನ್ನು ಬಿಡುವು ಮಾಡಿಕೊಂಡು ಸಂಬಂಧಿಕರು ತೋರಿಸುವ ಪ್ರೇಕ್ಷಣೀಯ ಸ್ಥಳಗಳ ವಿವರಗಳನ್ನೊಳಗೊಂಡ ಲೇಖನಗಳನ್ನು ಬರೆಯುವುದು ರೂಢಿ. ಖುದ್ದಾಗಿ ದೇಶ ನೋಡದವರಿಗೆ ಇಂತವರ ಲೇಖನಗಳು ದೂರಪ್ರದೇಶದ ಚಿತ್ರಣವನ್ನು ಕೊಡುತ್ತಿದ್ದವು. ಇತ್ತೀಚಿಗೆ ಚಲನಚಿತ್ರ ಹಾಗು ದೂರದರ್ಶನ ಮಾಧ್ಯಮಗಳು ಅನಿವಾಸಿ ಭಾರತೀಯರ ಜೀವನ ಚಿತ್ರಣವನ್ನು ಪ್ರದರ್ಶಿಸಲು ಪ್ರಾರಂಭಮಾಡಿದವು. ಅವುಗಳು ತಮ್ಮದೇ ಆದ ವ್ಯಾಪಾರಿ ಸೂತ್ರದ ಚೌಕಟ್ಟಿನಡಿಯಲ್ಲಿ ಜನಿಸಿದವುಗಳೇ ಹೊರತು ನೈಜತೆಗೆ ಕನ್ನಡಿಗಳಲ್ಲ. ಆದರೆ ಎನ್‌. ಆರ್‌. ಐ. ಸಾಹಿತಿಗಳು ಇದಕ್ಕೊಂದು ಹೊಸ ಆಯಾಮವನ್ನೇ ಕೊಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ, ಅಗತ್ಯವೂ ಹೌದು. ಜೀವನದ ಹೆಚ್ಚಿನ ಹಾಗೂ ಮಹತ್ತರ ದಿನಗಳನ್ನು ಕರ್ನಾಟಕದ ಹೊರಗೆ ಕಳೆದು, ಸ್ವಂತ ದೃಷ್ಟಿಯಲ್ಲಿ ನೋಡಿ, ಖುದ್ದಾಗಿ ಅನುಭವಿಸಿದ-ಅನುಭವಿಸುತ್ತಿರುವ ಈ ಚಿತ್ರಣಗಳು ತೀರ ಭಿನ್ನವಾಗಿರುತ್ತವೆ, ಸಹಜವೂ ಆಗಿರುತ್ತವೆ.

ಹುಟ್ಟಿನಿಂದ ಬಂದ ಸಂಸ್ಕೃತಿಯನ್ನು ಕಳಚಿ ಹೊಸದೊಂದನ್ನು ಅಳವಡಿಸಿಯೋ, ಅಥವಾ ಎರಡರ ಸಮ್ಮಿಶ್ರಣದಿಂದ ಉದ್ಭವಿಸುವ ಮೂರನೆಯದನ್ನು ರೂಢಿಸಿಕೊಂಡು ಮುಂದಿನ ಪೀಳಿಗೆಗದನ್ನು ಪರಿಚಯಿಸುವುದರಲ್ಲಿ ಪಡುವ ಕಷ್ಟ, ಸಿಗುವ ತೃಪ್ತಿ, ಮಾನಸಿಕ ತೊಳಲಾಟಗಳನ್ನು ಎನ್‌. ಆರ್‌. ಐ. ಸಾಹಿತಿಗಳು ನೈಜವಾಗಿ ಚಿತ್ರಿಸಬಲ್ಲರು. ಇತರರ ಪ್ರಯತ್ನಗಳೇನಿದ್ದರೂ ದೂರದಲ್ಲಿ ಕುಳಿತು ನಡೆಸಿದ ಮೌಲ್ಯ ಮಾಪನ, ಲಾಭ-ನಷ್ಟದ ಲೆಕ್ಕಾಚಾರಗಳಾಗಬಹುದೇ ಹೊರತು ಹೃದಯದ ಮಿಡಿತಗಳಾಗಲಾರದು.

ಎನ್‌. ಆರ್‌. ಐ. ಸಾಹಿತ್ಯಕ್ಕೆ ಇದೇರೀತಿ ಪ್ರಚಾರ ಪೋಷಣೆ ಕರ್ನಾಟಕದಲ್ಲಿ ಮುಂದೂ ದೊರೆಯಲಿ. ಹೊರನಾಡ ಕನ್ನಡಿಗರು ಅದನ್ನು ನೋಡಿ ಎನ್‌. ಆರ್‌. ಐ. ಸಾಹಿತಿಗಳನ್ನು ಗುರುತಿಸಿ, ಅವರ ಸಾಹಿತ್ಯವನ್ನು ಓದಿ ಪ್ರೋತ್ಸಾಹಿಸಲಿ ಎಂದು ಆಶಿಸಬೇಕಿದೆ. ಈ ದಿಶೆಯಲ್ಲಿ ಇಲ್ಲಿನ ಕನ್ನಡ ಕೂಟಗಳು ತಮ್ಮ ಕಾರ್ಯಕ್ರಮಗಳಲ್ಲಿ, ಕರೆಯೋಲೆಗಳಲ್ಲಿ, ವಾರ್ಷಿಕ ಸಂಚಿಕೆಗಳಲ್ಲಿ ಸಮಯಾವಕಾಶ ಮತ್ತು ಪ್ರೋತ್ಸಾಹ ಕೊಡುವುದು ಅತಿ ಅಗತ್ಯ.

ಲಾಸ್‌ ಏಂಜಲೀಸ್‌ನಲ್ಲಿ ಡಾ. ನಾಗಐತಾಳರ ನೇತೃತ್ವದಲ್ಲಿ ಸಾಹಿತ್ಯಾಸಕ್ತರ ಪೋಷಣೆಗಾಗಿ ಇತ್ತೀಚಿಗೆ ಸ್ಥಾಪಿತವಾದ ಅಂಜಲಿಯಂತಹ ಸಂಸ್ಥೆಗಳ ಪಾತ್ರವೂ ಹಿರಿದು. ಡಾ. ಚಂದ್ರಶೇಖರ್‌, ಶ್ರೀಮತಿ ಅಲಮೇಲು ಅಯ್ಯಂಗಾರ್‌, ಮತ್ತು ಶ್ರೀಮತಿ ಸಂಧ್ಯಾ ರವೀಂದ್ರನಾಥ್‌ ಅವರ ಕೃತಿಗಳನ್ನು ಗುರುತಿಸಿ, ಸನ್ಮಾನ ಮಾಡಿದ ಅಂಜಲಿ ಇತರ ಸಂಘ ಸಂಸ್ಥೆಗಳಿಗೆ ದಾರಿದೀಪವಾಗಲಿ ಎಂದು ಹಾರೈಸೋಣ.

ಈ ಸಂದರ್ಭದಲ್ಲಿ ಹೊರನಾಡ ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುವಲ್ಲಿ ಸಕ್ರಿಯವಾಗಿ ದುಡಿಯುತ್ತಿರುವ ಕನ್ನಡ ಪೋರ್ಟಲ್ಗಳನ್ನು ಮರೆಯುವಂತಿಲ್ಲ. ಇಂತಹ ಅಂತರ್ಜಾಲ ಪತ್ರಿಕೆಗಳನ್ನು ಉತ್ತೇಜಿಸುವುದು ಎಲ್ಲ ಕನ್ನಡಿಗರ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more