ಥೈ ಪೂಸಮ್ : ಕನ್ನಡತಿ ಕಂಡಂತೆ ತಮಿಳರ ಹಬ್ಬ
ದೇವಸ್ಥಾನದಲ್ಲಿ ಸ್ವಲ್ಪ ಬಿಡುವಾಗಿ ಕೂತಿದ್ದ ಒಬ್ಬ ಅರ್ಚಕರನ್ನು ಕಂಡು, ಇದರ ಬಗ್ಗೆ ಸ್ವಲ್ಪ ತಿಳಿಸುವಿರಾ ಎಂದು ಕೇಳಿದೆ. ಅವರು ಹೇಳಿದ್ದು- ಇದು ಹೆಚ್ಚು ತಮಿಳುನಾಡಿನಲ್ಲಿ ಆಚರಿಸಲ್ಪಡುತ್ತದೆ. ಕಾರ್ತಿಕೇಯನನ್ನು ಕ್ಷಮಾಪಣೆ ಕೇಳಿ, ಪ್ರಾಯಶ್ಚಿತ ಮಾಡಿಕೊಂಡು, ನಮ್ಮ ಕೃತಜ್ಞತೆಯನ್ನು ತೋರುವ ದಿನ. ಈ ಹಬ್ಬ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಸೌರಮಾನ ಮಾಸದ ಪುಷ್ಯಾ ನಕ್ಷತ್ರ ಅಥವಾ ಪೂರ್ಣಿಮೆ ದಿನಗಳಲ್ಲಿ ಬರುತ್ತದೆ. ಹರಕೆಯಲ್ಲಿ ಹಲವು ಬಗೆ. ಕಾವಡಿಗಳನ್ನು ಹೊರುವುದೂ ಒಂದು ಹರಕೆ.
ಈ ಕಾವಡಿಗಳನ್ನು ಹೊರುವವರು ಹಲವು ನಿಯಮಗಳನ್ನು ಪಾಲಿಸುತ್ತಾರೆ. ಬ್ರಹ್ಮಚರ್ಯ, ಸಾತ್ವಿಕ ಆಹಾರ. ಧೂಮಪಾನ ನಿಷೇಧ, ಕುಡಿತಕ್ಕೆ ರಜೆ, ಹಲವರು ಮೌನ ಆಚರಿಸುತ್ತಾರೆ. ಇವರಲ್ಲಿ ಹಲವರು ಕಾವಿ ಬಟ್ಟೆ, ಕೈಯಲ್ಲಿ ಜೋಳಿಗೆ ಹಿಡಿದು, ಅಕ್ಕಿ, ಹಾಲು, ಗಂಧ ಇವುಗಳನ್ನು ಭಿಕ್ಷಾರೂಪದಲ್ಲಿ ಸ್ವೀಕರಿಸುತ್ತಾರೆ. ಈ ವೇಷ ಶಿವನಿಗೆ ಪ್ರೀತಿಯಂತೆ.
ಇಲ್ಲಿನ ಶ್ರೀನಿವಾಸ ದೇಗುಲದಿಂದ ಹೊರಟು ಶ್ರೀದಂಡಾಯುಧಪಾಣಿ ದೇಗುಲದವರೆಗೆ (ಸುಮಾರು ನಾಲ್ಕು ಕಿ.ಮೀ) ವರೆಗೆ ಕಾವಡಿ, ಹಾಲಿನ ಕೊಡಗಳನ್ನು ಹೊತ್ತು ಬರಿಗಾಲಿನಲ್ಲಿ ನಡೆಯುತ್ತಾರೆ.
ಇಷ್ಟಕ್ಕೇ ಬಿಡದೆ ಆತನನ್ನು ಇದರ ಐತಿಹ್ಯವೇನು, ಇದಕ್ಕೊಂದು ದಂತ ಕಥೆ ಇದೆಯೇ ಎಂದು ಕೇಳಿದೆ. ಶಿವ ತನ್ನ ಮನದನ್ನೆಗೆ ಒಂದು ದಿವ್ಯ ಮಂತ್ರ ಉಪದೇಶಿಸುತ್ತಿದ್ದ. ಇದನ್ನು ಕದ್ದುಕೇಳಿದ ಬಾಲಕ ಸುಬ್ರಮಣ್ಯ. ಈ ತಪ್ಪಿಗೆ ಪಾರ್ವತಿ ಮಗನಿಗೆ ಶಿಕ್ಷೆಯನ್ನಿತ್ತಳು. ಮಾಡಿದ ತಪ್ಪಿಗೆ ಷಣ್ಮುಗ ತಿರುಪ್ಪರನ್ಕುನ್ರಮ್ ಎಂಬಲ್ಲಿ ತಪಃಗೈದು ಪ್ರಾಯಶ್ಚಿತ ಮಾಡಿಕೊಂಡನಂತೆ. ಈತನ ತಪಕ್ಕೆ ಮೆಚ್ಚಿ ಶಿವ ಪಾರ್ವತಿಯರು ಥೈ ಮಾಸದ ಪೂಸ (ಮಾಘ ಮಾಸ, ಪುಷ್ಯಾ ನಕ್ಷತ್ರ, ಹುಣ್ಣಿಮೆಯ ಆಸುಪಾಸು) ನಕ್ಷತ್ರದ ದಿನ ನಿನಗೇ ಮೀಸಲು ಎಂದು ವರವನ್ನಿತ್ತರಂತೆ. ಈ ದಿನವೇ ಥೈ ಪೂಸಮ್. ಈ ದಿನ ಸುಬ್ರಮಣ್ಯನನ್ನು ತೊಂದರೆ ನಿವಾರಣೆಗಾಗಿ ಬೇಡಿಕೊಂಡು ಕಾವಡಿಗಳನ್ನು ಎತ್ತಿ ಹರಕೆ ಸಲ್ಲಿಸುತ್ತಾರೆ.
ನೀಂಗ ತಮಿಳ್ ಕಡೆಯಾದ, ಎಂದೂರು ಉಂಗಳದ್ (ನೀವು ತಮಿಳಿನವರಲ್ಲವೇ, ಯಾವ ಊರು ನಿಮ್ಮದು) ಎಂಬ ಅವರ ಪ್ರಶ್ನೆಗೆ ಉತ್ತರಿಸಿ ಇಷ್ಟು ಹೊತ್ತು ಆಸ್ಥೆಯಿಂದ ಮಾಹಿತಿಗಳನ್ನು ತಿಳಿಸಿದ ಅರ್ಚಕರಿಗೆ ಕೈಮುಗಿದು, ಕೃತಜ್ಞತೆಯನ್ನು ತಿಳಿಸಿ ಮನೆಗೆ ನಡೆದೆ. ಹಬ್ಬದ ಸಂಭ್ರಮ ಮನಸ್ಸಿನಲ್ಲಿ ತುಂಬಿಕೊಂಡಿತ್ತು .












Click it and Unblock the Notifications