ಬೆಂಗ್ಳೂರಲ್ಲಿ ವಿಶ್ವದ ಎತ್ತರದ ಟವರ್ ಕಟ್ಟೋದ್ಯಾಕೆ ಅಂದ್ರೆ...
ಬಹಳ ದಿನಗಳಿಂದ ಸುಬ್ಬನ ಜೊತೆ ಮಾತನಾಡಿಲ್ಲವೆಂದು ಸುಬ್ಬನ ನಂಬರ್ ಡಯಲ್ ಮಾಡತೊಡಗಿದೆ. ಇವನ ಜೊತೆ ಅವಾಗಾವಾಗ ಮಾತಾಡದಿದ್ರೆ ಒಂದು ರೀತಿ ಪ್ರಾಪಂಚಿಕ ವಿಷಯಗಳ ಬಗ್ಗೆಯೇ ಹೊಸ ರೀತಿಯ ವಿಷಯಾವಲೋಕನವೇ ತಪ್ಪಿಹೋದಂತಾಗೋದು ಗ್ಯಾರಂಟಿ, ಅದೂ ಅಲ್ದೇ ಅವ ಅಮೇರಿಕದಿಂದ ಹೋದ ಮೇಲೆ ಇದೇ ಮೊದಲು ಡೀಟೈಲ್ ಆಗಿ ಮಾತಾಡುತ್ತಿರುವುದನ್ನು ನೆನೆದು ಅವನನ್ನು ಇಷ್ಟುದಿನವಾದರೂ ಒಮ್ಮೆಯೂ ಕಾಲ್ ಮಾಡದ ನನ್ನ ದುಸ್ಥಿತಿಯ ಬಗ್ಗೆ ಮರುಕ ಪಡುತ್ತಾ ಫೋನ್ ಎತ್ತಿಕೊಂಡ ಅವನನ್ನು ‘ಏನೋ, ಹೆಂಗಿದಿಯಾ?' ಎಂದೆ. ‘ಓಹೊಹೋ, ನೀನಾ. ಏನೋ ಸಮಾಚಾರ? ಬಾಳ ದಿನಾ ಆಯ್ತಲ್ಲಾ ಮಾತಾಡಿ, ಇವತ್ತಾದರೂ ನಿಂಗ್ ಸ್ವಲುಪ ಟೈಮ್ ಸಿಕ್ತಲ್ಲಪ್ಪಾ ನಮ್ಮಂತೋರ್ ನೆನಪ್ ಮಾಡಿಕ್ಯಳಕೆ?' ಅಂದ.
‘ಏನಿಲ್ಲ ಕಣೋ, ಎಲ್ಲಾ ಮಾಮೂಲಿ, ನೀನೇನಾದ್ರೂ ಲೆಟ್ರು-ಗಿಟ್ರೂ ಬರೀತಿಯೇನೋ ಅಂತಾ ಕಾಯ್ತಿದ್ದೆ, ನಿನ್ನ ಅಮೇರಿಕಾ ಪ್ರವಾಸ ಕಥನದ ಬಗ್ಗೆ ಬರೀತಾ ಕುಂತಿದ್ಯಲ್ಲಾ, ಅದರ ಕಥೆ ಏನಾಯ್ತು?' ಅಂದೆ.
‘ಏ, ಬಿಡೋ. ಎಲ್ಲೀ ಪ್ರವಾಸ, ಎಲ್ಲೀ ಕಥನ! ಅದು ಬರೀಬೇಕು ಅಂತಾ ಅವಾಗಾವಾಗ ಕುಂತು ಬರೆದಿದ್ದು ಒಂದು ನಲವತ್ತು ಪುಟಾ ಆಗಿರಬೋದು, ಪ್ರತೀ ಪ್ಯಾರಾದಾಗೂ ಒಬ್ಬರಲ್ಲಾ ಒಬ್ಬರಿಗೆ ಬೈಯೋ ನನ್ನ ಕಥನ ಯಾವಾನಾದ್ರೂ ಕೊಂಡು ಓದ್ತಾನಾ ಅನ್ನಿಸಿ, ನಾನೇ ಒಂದು ಬದೀಗೆ ಎಸೆದೀದೀನಿ. ಇನ್ನು ಲೆಟ್ರು ಬರೀ ಬೇಕು ಅಂತ ಇದ್ದೆ, ಹದಿನೈದು ರೂಪಾಯಿ ಸ್ಟ್ಯಾಂಪ್ ಹಚ್ಚಿ ಈ ಕಾಲದಾಗ ಯಾವಾನಾದ್ರೂ ಲೆಟ್ರು ಬರೀತಾನಾ? ಇನ್ನು ಲೆಟ್ರು ಬರೆದ್ರೂ ಅದನ್ನ ನೀನು ಹೆಂಗ್ ಓದ್ತಿ , ನಿನ್ನ ಆಟ್ಟಿಟ್ಯೂಡ್ ನಂಗೊತ್ತಿಲ್ವಾ? ಅದಕ್ಕೆ ಆ ಕೆಲ್ಸನೂ ಅಲ್ಲಿಗೇ ನಿಂತಿತು. ಅದಿರ್ಲಿ, ನೀನ್ ಹೆಂಗಿದೀ? ನಿನ್ನ ಬಾಸಿಣಿ (ಲೇಡೀ ಬಾಸ್) ಹೆಂಗಿದ್ದಾಳೆ? ರೊಕ್ಕ-ಗಿಕ್ಕ ಸರಿಯಾಗಿ ಕೊಟ್ಳೋ ಇಲ್ವೋ? ಬೋನಸ್-ಗೀನಸ್ ಅಂತ ಬಾಳ ತಲೆಕೆಡಿಸಿಕೊಂಡಿದ್ದಿ!' ಅಂತ ಪ್ರಶ್ನೆಗಳ ಮಳೆಗರೆದ.
‘ಥುತ್ ನಿನ್ನ, ವಾರದಾǚಗ ಒಂದು ದಿನನಾದ್ರೂ ನನ್ನ ಬಾಸಿನ ವಿಚಾರ ಮರೆಯೋಣ ಅಂದ್ರೆ, ಅವುಳನ್ನ್ಯಾಕಪ್ಪ ನಮ್ಮ ಮಾತಿನ ಮಧ್ಯೆ ತರ್ತೀಯಾ? ಅದೇನಿದ್ರೂ ಮಂಡೇ ಥ್ರೂ ಫ್ರೈಡೇನೇ ಚೆಂದ ನೋಡು! ಸುಬ್ಬು, ನಿನ್ನ ಹತ್ರ ಮಾತಾಡೋದು ಬಾರೀ ಇದೇ, ತುಂಬಾ ದಿನಾ ಆಯ್ತು, ಪುರುಸೊತ್ತೈತೋ ಇಲ್ವೋ?'
‘ಗುರೂ, ನಮ್ಮ ದೇಶದಾಗೆ, ಎಲ್ಲರ ಹತ್ರನೂ ಟೈಮೈತಿ, ಅದೊಂದೇ ನಮ್ಮ ಆಸ್ತಿ !'
‘ಅದೇ ಇನ್ನೊಂದೆರಡು ದಿನಗಳಲ್ಲಿ ಎಲೆಕ್ಷನ್ ನಡೀತಾ ಇದೆಯಲ್ಲಾ , ಅದರ ಬಗ್ಗೆ ಹೇಳು, ಅದರಲ್ಲೂ ನಮ್ಮ ಸೊರಬಾ ತಾಲ್ಲೂಕು, ಶಿವಮೊಗ್ಗದಲ್ಲಿ ಏನು ನಡೀತಾ ಇದೆ ಅಂತ?'
‘ಎಲೆಕ್ಷನ್ ಅಂದ್ರೆ ಅದೇ ಮಾಮೂಲಿ ಕಣೋ. ಇಂತಾ ಬಿರು-ಬಿರು ಬೇಸಿಗೆನ್ಯಾಗೂ ಹಣದ ಹೊಳೆ ಹರೀತಾನೇ ಐತಿ! ಈ ಸರ್ತಿ ಬಿಜೆಪಿದು ಬಾರೀ ಅಲೆನಪ್ಪಾ, ಕಳೆದಸಾರಿ ನಮ್ಮ ರಾಜ್ಯದಾಗ ಎಡಿಯೂರಪ್ಪಾ, ಈಶ್ವರಪ್ಪಾ ಅವರೆಲ್ಲಾ ಕೂಸುಟ್ಟೋಕೆ ಮುಂಚೆ ಕುಲಾವಿ ಹೊಲೆಸ್‌ಕೊಂಡು ಮುಖ್ಯಮಂತ್ರಿ ಆದಂಗೆ ಕನ್ಸು ಕಾಣ್ತಿದ್ದರಲ್ಲಾ, ಈ ಸರ್ತಿ ಅದಕ್ಕಿಂತ ಒಂದು ಪಟ್ಟು ಹೆಚ್ಚು ನೋಡು. ಅದರಾಗೂ ಈ ಸಲಿ ನಮ್ಮ ಬಂಗಾರೀ (ಬಂಗಾರಪ್ಪನವರಿಗೆ ಸುಬ್ಬ ಪ್ರೀತಿಯಿಂದ ಇಟ್ಟ ಹೆಸರು) ಬೇರೆ ಜಂಪ್ ಮಾಡಿದ ಮ್ಯಾಗೆ ಏನಾಗುತ್ತೋ ಯಾರು ಕಂಡೋರು? ಒಟ್ನಲ್ಲಿ ಕಾಂಗ್ರೆಸ್‌ನ್ಯಾಗೆ ಜನರೇ ಇಲ್ಲದಂಗ್ ಆಗಿ ಹೋಗೈತಿ!'
‘ಅಲ್ಲೋ, ಈ ರಾಜ್ಯ-ರಾಷ್ಟ್ರದ ರಾಜಕಾರಣದಾಗ, ಜನಗೋಳು, ಬಂಗಾರೀ ಮನೇನೆ ಮುರುದರಂತೆ, ಈಗ ಅಣ್ಣಾ-ತಮ್ಮನ್ನೇ ಎದುರಾ ಬದುರಾ ಕಟ್ಟ್ಯಾರಂತೆ?'
‘ಥೂ ನಿನ್ನ, ಈ ಮನೇ ಮುರುಕರ ಮಾತು ನೀನಾದ್ರೂ ನಂಬಲ್ಲ ಅಂದುಕೊಂಡಿದ್ನಲ್ಲೋ. ಬದುಕು ಅಂದ್ರೆ, ನೀನು ಇಂಟರನೆಟ್‌ನ್ಯಾಗೆ ಓದೋ ಪ್ರಜಾವಾಣೀ ಅಷ್ಟೇ ಅಲ್ಲ ತಿಳಕೋ! ಅಣ್ಣಾ-ತಮ್ಮಾ, ಕುಟುಂಬ ಕಲಹ ಇವೆಲ್ಲಾ ನಾಟ್ಕದ ಮತ್ತೊಂದು ಹಂತ ಅಷ್ಟೇ, ಈಗ ಸೊರಬಾನೇ ತಗಾ, ಅಲ್ಲೀ ಯಾವಾಗಿಂದ್ಲೂ ನಮ್ಮ ಬಂಗಾರೀ-ಅವನ ಕಡೇರೇ ಗೆಲ್ಲೋರು ಹೊದಿಲ್ಲೋ? ಈಗ ಅವನೂ-ಅವನ ಮಗನೂ ಬಿಜೆಪಿ ಸೇರಿ ಕಂಡ್ರೆ, ಇನ್ನು ಕಾಂಗ್ರೆಸ್‌ನಿಂದ ಯಾರಾದ್ರೂ ಸೊರಬ ಗೆದ್ರು ಅಂತ ಇಟಗೋ, ಅವನ ಸಾಮ್ರಾಜ್ಯನೇ ಹೋತಲ್ಲ. ಅದಕ್ಕೇ ಸಿಂಪಲ್ ಆಗಿ ಅಪ್ಪ ಬಿಜೆಪಿ - ಒಂದು ಮಗ ಕಾಂಗ್ರೆಸ್, ಮತ್ತೊಂದು ಮಗ ಬಿಜೆಪಿ, ಎತ್ಲಾಗೋದ್ರೂ ಸೊರಬಾ ಅವನದ್ದೇ ಆತಲ್ಲ, ಹೆಂಗೆ?'
‘ವಾವ್, ಇದು ಯಾರ್ದೋ ಅನಾಲಿಸೀಸ್ಸು, ನಂಗಿದು ಹೊಳೀಲೇ ಇಲ್ಲ'
‘ನಮ್ಮೂರ್ನಾಗೆ ಯಾವ್ದೇ ಜೋಕುಮಾರನ್ನ ಕೇಳಿದ್ರೂ, ಈ ವಿಷ್ಯ ಮಾತ್ರ ಗ್ಯಾರಂಟಿ!'
‘ಹಂಗಂದ್ರೆ, ಈಗಿನ ಕಾಲ್ದಾಗೇನಾದ್ರೂ ಧೃತರಾಷ್ಟ್ರನ ವಂಶಸ್ಥರ್ಯಾರಾದ್ರೂ ಇದ್ರೆ, ನೂರು ಮಕ್ಕಳನ್ನೂ ಐವತ್ತು ಸಂಸ್ಥಾನದಲ್ಲಿ ನಿಲ್ಲಿಸಿ, ಇಡೀ ಏರಿಯಾನೇ ಕಂಟ್ರೋಲ್‌ನಲ್ಲಿ ಇಟ್ಟುಗೋತಿದ್ದ ಅನ್ನು'
ಆ ಕಡೆಯಿಂದ ಸುಬ್ಬ ಜೋರಾಗಿ ನಗತೊಡಗಿದ ‘ಅದೂ ಖರೇನೇ ಅನ್ನು, ಹಂಗಾಗಲಿಲ್ಲ, ನಮ್ಮ್ ಜನಗೋಳ್ ಪುಣ್ಯಾ!'
‘ಇನ್ನು ಶಿವಮೊಗ್ಗಾದಿಂದ ಯಾರು ನಿಂತ್ಯಾರೆ, ಏನ್ ಕಥೆ?'
‘ಅಲ್ಲೂ ಬಂಗಾರೀದೇ ಹಾವಳಿ, ಅನಂತಮೂರ್ತಿ ನಿಂತಗಬೇಕು ಅಂತ ಮಾಡಿದ್ದ, ಏನೋ ತಪ್ಪಿ ಹೋಗಿ ಈಗ ಸಿನಿಮಾ ನಟ ದೊಡ್ಡ ಹೊಟ್ಟೆ ದೊಡ್ಡಣ್ಣ, ಆಯನೂರು ಮಂಜು ನಿಂತಾರೆ. ಈ ಬಂಗಾರೀ ಜಂಪ್ ಮಾಡಿದ್ದರ ಫಲವಾಗೀ ಆ ಈಶ್ವರಪ್ಪನ ಕಥೆ ಗೋǚವಿಂದ.'
ಎಲೆಕ್ಷನ್‌ನಿಂದ ಇರಾಕ್ ಕಡೆಗೆ ಮಾತು ಬದಲಿಸಿದೆ.
‘ಈ ಇರಾಕ್ ಬಗ್ಗೆ ಏನಂತಾರೆ ನಮ್ಮ ಜನ ?'
‘ಇನ್ನೇನಂತಾರೆ, ಈ ಬುಷ್-ಬ್ಲೇರ್‌ಗಳಿಗೆ ತಲೆ ಸರೀ ಇಲ್ಲ, ಸುಮ್ಮಕ್ಕಿದ್ದ ದೇಶದಾಗೆ ಅದ್ವಾನ ಎಬ್ಬಿಸಿ, ಈಗ ಇಂಗ್ ತಿಂದ ಮಂಗ್ಯಾನಂಗ್ ಮಾಡಕ್‌ಹತ್ಯಾರೆ. ಅಲ್ಲೂ (ಅಮೇರಿಕದಲ್ಲೂ) ಎಲೆಕ್ಷನ್ ಅಂತಲ್ಲಪ್ಪಾ, ಬುಷ್ ಏನರ ಗೆಲ್ಲಂಗ್ ಕಾಣ್ತಾನೇನು?'
‘ಈಗಿನ ಪೋಲ್ ನೋಡಿದ್ರೆ ಗೆಲ್ಲಲ್ಲ ಅನ್ಸುತ್ತೆ, ಇವಾಗ್ಲೇ ಏನೂ ಹೇಳಕ್ಕಾಗಲ್ಲ, ಇನ್ನೂ ಟೈಮಿದೆ. ನಾನು ಇಲ್ಲಿ ಓಟೂ ಮಾಡಲ್ಲ , ಮಾಡಂಗೂ ಇಲ್ಲ , ಅದರ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಿಲ್ಲ. ಅದೂ ಅಲ್ದೇ ಸದ್ದಾಮ ಸಿಕ್ಕ ಮೇಲಾದ್ರೂ ಮಾರ್ಕೆಟ್ ಸುಸ್ಥಿತಿಗೆ ಬರುತ್ತೇ ಅಂದ್ರೆ, ಅದೂ ಹಿಂದೆ-ಹಿಂದೆ ಹೋಗ್ತಾ ಇದೆ'
‘ನೀನೇನೇ ಹೇಳು, ಅಮೇರಿಕದವರ ದೃಷ್ಟಿನಲ್ಲಿ, ಸದ್ದಾಮನಿಗಿಂತ ಅವನ ಮಕ್ಕಳೇ ವಾಸೀ ಬಿಡು! ಅವನ ಮಕ್ಳು ಸಿಕ್ಕು ಸತ್ತ ದಿನ ಮಾರ್ಕೆಟ್ ಒಂದು ಇನ್ನೂರ್ ಪಾಯಿಂಟ್ ಆದ್ರೂ ಮ್ಯಾಕೆ ಹೋಗಿತ್ತು, ಸದ್ದಾಮ ಹೋಗಿ-ಹೋಗೀ ವಿಕೇಂಡಿನ್ಯಾಗೆ ಸಿಗಬೇಕಾ? ಮಾರ್ಕೆಟ್ ಕಮಕ್ ಅನ್ಲಿಲ್ಲಾ, ಕಿಮಕ್ ಅನ್ಲಿಲ್ಲಾ, ತುಂಜಾ ಜನ ಶಾಪ ಹಾಕಿದ್ದಾರೂ ಅನ್ನು...'
‘ಏ ಬಿಡೋ, ನಿಂದ್ ಯಾವಾಗಿದ್ರೂ ಒಂಥರಾ ವಕ್ರ ತರ್ಕ.'
‘ಹೆ, ಹಂಗಲ್ಲೋ, ನಿಮ್ಮ ಅಮೇರಿಕನ್ ಮಾರ್ಕೆಟ್ ಹಣೇಬರಾನೇ ಅಷ್ಟು, ಕೆಲವು ಕಡೆ ಜನ ಸತ್ರೆ ಮ್ಯಾಕ್ ಹೋಕತಿ, ಇನ್ನು ಕೆಲವು ಕಡೆ ಜನ ಬದುಕಿದ್ರೆ ಕೆಳಗ್ ಬೀಳ್ತತಿ!...'
‘ಅದಿರ್ಲಿ, ಇನ್ನೂ ಒಂದು ವಿಷ್ಯಾನಪ್ಪಾ, ನಮ್ಮ ಬೆಂಗ್ಳೂರ್ನಾಗೂ ಅದೇನೋ ವಿಶ್ವದ ಎತ್ತರದ ಟವರ್ ಕಟ್ತಾರಂತೆ! ಅದೂ ಆ ಹಳೆ ಜೈಲು ಇದ್ದ ಜಾಗದಾಗೆ, ನಿಜಾನಾ?'
‘ಹೌದು, ಹೌದು. ಅದು ನಮ್ಮ ವಿಗ್ನೇಶನ (ವಿಗ್ ಹಾಕೋ ಎಸ್. ಎಂ. ಕೃಷ್ಣರ ಅಡ್ಡ ಹೆಸರು) ಕೃಪೆ! ಸುಮ್ಕೇ ದುಡ್ಡು ಖರ್ಚು ಮಾಡೋಕೊಂದು ದಾರಿ, ಈ ನಾಕೂವರೆ ವರ್ಷಗಳಲ್ಲಿ ಬೆಂಗ್ಳೂರನ್ನ ಸಿಂಗಪುರ ಮಾಡಿದ್ದು ಸಾಲದು ಅಂತ ಇದೊಂದು ಕೊಡುಗೆ!!'
‘ಹಂಗನ್ನ ಬೇಡೋ, ಈಗಾಗ್ಲೇ ಪ್ರಪಂಚದಲ್ಲಿ ನಮ್ಮ ಬೆಂಗ್ಳೂರಿಗೂ ಒಂದು ಸ್ಥಿತಿ-ಗತೀ ಇದೆ, ಅದಿನ್ನೂ ಬೆಳೆಯುತ್ತೆ...' ನನ್ನ ಮಾತನ್ನ ಮಧ್ಯದಲ್ಲೇ ತುಂಡು ಮಾಡಿ,
‘ಆ ಟವರ್ ಕಟ್ಟೋ ಬಗ್ಗೆ ನನ್ನದೊಂದು ಥಿಯರಿ ಇದೆ, ನೀನು ಬಯ್ಯಾಲ್ಲಾಂದ್ರೆ ಹೇಳ್ತೀನಿ,' ನನ್ನ ಉತ್ತರಕ್ಕೂ ಕಾಯದೇ,
‘ಈಗ ಬಿಪಿಓ ಅನ್ನೋ ಹೆಸರಲ್ಲಿ ಅಮೇರಿಕಾದ ಕೆಲ್ಸಾನೆಲ್ಲಾ ಇಲ್ಲಿಗೆ ತರಾಕ್ ಶುರು ಮಾಡ್ಯಾರಲ್ಲ, ಈ ಟವರ್ ಕಟ್ಟೋದೂ ಅದೇ ಉದ್ದೇಶಕ್ಕೆ ನೋಡು, ಅರ್ಥ ಆಯ್ತಾ ?'
‘ಇಲ್ಲ, ನೀನು ಸರಿಯಾಗಿ ಬಿಡಿಸಿ ಹೇಳದಿದ್ರೆ, ಬೇತಾಳನ ತಲೆಯ ಹಾಗೆ ನಿನ್ನ ತಲೆಯೂ ಸಿಡಿದು ನೂರು ಚೂರಾಗಿ ಹೋಗಲಿ!...'
‘ನೋಡೋ, ಈ ಅಮೇರಿಕದ ಎತ್ತರ ಬಿಲ್ಡಿಂಗ್ ಮ್ಯಾಲೆ ಬಿನ್ ಲಾಡೆನ್‌ನ ಕಣ್ಣಿದೆಯೋ ಇಲ್ವೋ? ಈಗ ನಮ್ಮ ದೇಶದಾಗೆ ಎಲ್ಲರಿಗಿಂತ ಎತ್ತರದ ಟವರ್ ಕಟ್ಟಿದರೆ, ಲಾಡೆನ್ ಅಂತ ಮನೆ ಹಾಳರ ವಕ್ರ ದೃಷ್ಟಿಯೆಲ್ಲಾ ಇದರ ಮ್ಯಾಗೆ ಬೀಳೋದ್ರಿಂದ ಅಮೇರಿಕದೋರಿಗೆ ಪ್ರಾಬ್ಲಂ ಕಮ್ಮೀ ಆದಂಗಾತಲ್ಲ !' ಎಂದು ಗಹಗಹಿಸಿ ನಗತೊಡಗಿದ.
ನಾನೂ ನಗುತ್ತಾ ‘ಅದ್ಸರಿ, ಆ ಟವರನ್ನು ಜೈಲಿರುವ ಜಾಗದಲ್ಲೇ ಕಟ್ಟೋ ಉದ್ದೇಶ...'
‘ಅದೂ ಬಾಳ ಸಿಂಪಲ್ಲು, ನಮ್ಮ ರಾಜ್ಯದಾಗೆ ಕರೆಂಟಿನ ಪ್ರಾಬ್ಲಂ ಅಂತೂ ನಿಂಗೆ ಗೊತ್ತಿರೋದೇ. ಈ ಎತ್ತರದ ಟವರ್ ಮ್ಯಾಲೆ ಜನ ಲಿಫ್ಟ್‌ನಲ್ಲಿ ಹೋಗ್ತಾರೆ ಅಂತ ಇಟ್ಟುಗೋ, ಅಗೇನಾದ್ರೂ ಕರೆಂಟ್ ಹೋದ್ರೆ, ಇನ್ನು ಅದೋ ಬರೋ ತಂಕಾ ಅವರಿಗೆ ಜೈಲುವಾಸವೇ ಗತಿ, ಅತ್ಲಾ ಕಡೆ ಜೈಲು ಕಿತಗೊಂಡು ಹೋದ್ರೂ ಅಲುಪ-ಸ್ವಲುಪಾನಾದ್ರೂ ಜನ ಜೈಲಿನ ಗ್ನಾಪ್ಕಾ ಇಟ್ಕಳ್ಳೀ ಅಂತ ಕಟ್ತಿರಬೋದು ಅನ್ನೋದು ನನ್ನ ತಿಳುವಳಿಕೆ!'
‘ಹ್ಞೂ , ಆ ಟವರ್ರಿನ ಹೆಸರೇನಿಡಬಹುದು ಅಂತ ?'
‘ಐಫೆಲ್ಲ್ ಟವರ್ ಅಂತ ಹೆಸರಿಡೋಕೆ ಇದು ಭಾರತ ಕಣಯ್ಯಾ, ನಮ್ಮ ದೇಶದಾಗೆ ಅಂಥಾ ಆರ್ಕಿಟೆಕ್ಟ್‌ಗಳೂ ಇಲ್ಲ , ಇದ್ರೂ ಅವರ ಹೆಸರನ್ನು ಇಡೋಷ್ಟು ದೊಡ್ಡ ಬುದ್ಧಿ ನಮಗಂತೂ ಬರಂಗಿಲ್ಲ . ‘ಕೆತಗರಹಳ್ಳಿ ರಾಮಣ್ಣ ಟವರ್' ಅಂತ ನನ್ನ ಜೀವಮಾನದಾಗೆ ಒಂದೂ ಟವರ್ ಬರಲ್ಲ ಬಿಡು. ಕಾಂಗ್ರೆಸ್‌ನೋರು ಅಧಿಕಾರಕ್ಕೆ ಬಂದ್ರೆ ರಾಜೀವ ಗಾಂಧೀ, ಸೋನಿಯಾ ಗಾಂಧೀ, ಇಂದಿರಾ ಗಾಂಧೀ ಅಂತ ಹೆಸರಿಡ್ತಾರೆ. ಇನ್ನು ಬಿಜೆಪಿನೋರು ಬಂದ್ರೆ ವಾಜಪೇಯಿ, ಅಡ್ವಾಣಿ, ಹೆಡಗೇವಾರ್ ಅಂತ ಇಡ್ತಾರೆ. ನನ್ನ ಆಸೆ ಏನಪ್ಪ ಅಂದ್ರೆ, ಜನ್ತಾದಳ ಅಧಿಕಾರಕ್ಕೆ ಬಂದು, ಆ ರಾಮ್‌ಕೃಷ್ಣ ಹೆಗಡೆ ಹೆಸರೋ, ಇಲ್ಲಾ ರೈತಸಂಘದೋರು ಬಂದು ಆ ಪ್ರೊಪೆಸರ್ ಹೆಸರೋ ಇಟ್ರೂ ಸಾಕು ಅನ್ನಂಗಾಗಿದೆ. ನನ್ನ ಮಾತು ಯಾರು ಕೇಳ್ತಾರೆ ಬಿಡು, ಆ ದೇವನಹಳ್ಳಿ ವಿಮಾನ ನಿಲ್ದಾಣದ ಹೆಸರಿನ ಕಥೆ ಬಗ್ಗೆ ನಿಂಗೊತ್ತಲ್ಲಾ , dont get me started on that!
ಮಧ್ಯೆ ಕಾಲಿಂಗ್ ಕಾರ್ಡು ಮುಗೀತಾ ಬಂತು ಅಂತ ಗೊತ್ತಾದದ್ದರಿಂದ, ‘ಅದಿರ್ಲಿ, ಈ ಕಾರ್ಡು ಕಟ್ಟಾಗತ್ತೆ, ಮತ್ತೆ ಈ ಕಡೆ ಯಾವಾಗ ಬರ್ತೀಯಾ' ಅಂದೆ.
‘ನಾನು ಬರೋದಿರಲಿ, ನನಗೇನು ಕಮ್ಮಿ ? 10 ವರ್ಷ ವೀಸಾ ಕೊಟ್ಯಾರೆ, ಸ್ಪಾನ್ಸರ್ ಮಾಡೋರು ಇರೋವರೆಗೂ ನನಗೇನೂ ತೊಂದ್ರೆ ಇಲ್ಲ , ನೀನು ಯಾವಾಗಂತೀ ಆವಾಗ! ಅದಿರ್ಲಿ ನೀನು ಯಾವಾಗ ಈ ಕಡೆ ಪರ್ಮನೆಂಟಾಗಿ ಬರ್ತಿಯೋ, ಇವತ್ತೋ ನಾಳಿನೋ ಅಂದುಕೋತ ಗಿರಕಿ ಹೊಡಿತಿದ್ಯಲ್ಲಾ ? ನಿನ್ನ ಕಥಿ ಹೇಳು ? ಮುಂದಿನ ವರ್ಷ, ಅದರ ಮುಂದಿನ ವರ್ಷ ಅಂತ ಸುಮ್ನೇ...' ಎನ್ನುವಾಗ ಕಾಲ್ ಕಟ್ಟಾಯಿತು.