ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತವಲ್ಲದ ಭೂತಗಳು

By Staff
|
Google Oneindia Kannada News
  • ಎಂ.ಆರ್‌. ದತ್ತಾತ್ರಿ
    ಷೆಲ್‌ ಬುಲವರ್ಡ್‌, ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
M.R.Dattathri, The authorಅಮೆರಿಕೆಯ ಪತ್ರಿಕೆಗಳಲ್ಲಿ ‘ಡಿಯರ್‌ ಅಬ್ಬಿ’ ಎನ್ನುವುದು ಒಂದು ಜನಪ್ರಿಯವಾದ ಅಂಕಣ. ಅಬ್ಬಿ ಎಂಬ ಹೆಂಗಸು ಓದುಗರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ. ಜೀವನಕ್ಕೆ ಹತ್ತಿರವಾದ ಪ್ರಶ್ನೆಗಳಿಗೆ ಜೀವನಕ್ಕೆ ಹತ್ತಿರವಾದ ಉತ್ತರಗಳು. ಇದಕ್ಕೊಂದು ಇತಿಹಾಸವಿದೆ. ಸುಮಾರು ನಲ್ವತ್ತೈದು ವರ್ಷಗಳ ಹಿಂದೆ ಸ್ಯಾನ್‌ ಫ್ರಾನ್ಸಿಸ್ಕೋ ನಗರದ ಪತ್ರಿಕೆಯಾಂದು ಅಂಕಣ ಒಂದನ್ನು ಪ್ರಾರಂಭಿಸಲು ಯೋಜನೆ ಹಾಕಿತ್ತು. ಸಾಮಾನ್ಯ ಮನುಷ್ಯನಿಗೆ ಅವನ ದೈನಂದಿನ ಸಮಸ್ಯೆಗಳು ದೊಡ್ಡದಾಗಿ ಕಾಣುತ್ತವೆ. ಉದಾಹರಣೆಗೆ ಕಾಸ್ಮಿಕ್‌ ಕಿರಣಗಳ ರಹಸ್ಯವನ್ನು ಬೇಧಿಸುವುದಕ್ಕಿಂತಾ ಮಗನೋ ಮಗಳೋ ಶಾಲೆಯಲ್ಲಿ ಮಕ್ಕಳ ಜೊತೆ ಬೆರೆಯುತ್ತಿಲ್ಲ ಎನ್ನುವುದು ದೊಡ್ಡ ಸಮಸ್ಯೆ. ‘‘ನನಗೆ ಮನೆಯಂಗಳದಲ್ಲಿ ಹೂದೋಟವೊಂದನ್ನು ಎಬ್ಬಿಸುವ ಉತ್ಸಾಹವಿದೆ. ಆದರೆ ನನ್ನ ಗಂಡನಿಗೆ ಸರಿಕಾಣುತ್ತಿಲ್ಲ ಇದು. ಅವನನ್ನು ಇದಕ್ಕೆ ಹೇಗೆ ಒಪ್ಪಿಸುವುದು?’’ ಎನ್ನುವುದು ಮಂಗಳ ಗ್ರಹದಲ್ಲಿ ಜೀವಿಗಳಿವೆಯೇ ಇಲ್ಲವೇ ಎನ್ನುವುದಕ್ಕಿಂತಾ ಬಹಳ ವೈಯಕ್ತಿಕವಾಗಿ ಹತ್ತಿರವಾದದ್ದು. ಸಾಮಾನ್ಯ ಪ್ರಶ್ನೆಗಳು ಸಾಮಾನ್ಯ ಉತ್ತರಗಳನ್ನು ಬಯಸುತ್ತವೆ. ಹಾಗಾಗಿ ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಸೈಕಾಲಜಿ ಪ್ರೊಫೆಸರ್‌ ಬೇಕಿಲ್ಲ. ಬದಲಾಗಿ ಜನಸಾಮಾನ್ಯರ ನಡುವೆ ಬೆರೆತು ಪ್ರತಿದಿನವೂ ಈ ತರಹದ ಸಮಸ್ಯೆಗಳನ್ನು ಎದುರಿಸುವ ಒಬ್ಬ ಸಾಮಾನ್ಯ ಗೃಹಿಣಿ ಸಾಕು ಎಂದು ನಗರದಲ್ಲಿದ್ದ ಪಾಲಿನ್‌ ಫಿಲ್ಲಿಪ್ಸ್‌ ಎಂಬ ಗೃಹಿಣಿಗೆ ಉತ್ತರಿಸುವ ಜವಾಬ್ಧಾರಿಯನ್ನು ವಹಿಸಿತು. ‘ಅಬ್ಬಿ’ ಎನ್ನುವ ಹೆಸರಿನಲ್ಲಿ ಆಕೆ ಬರೆಯಲಾರಂಭಿಸಿದ ಈ ಅಂಕಣ ಅದೆಷ್ಟು ಪ್ರಸಿದ್ಧವಾಯಿತೆಂದರೆ ಅಮೆರಿಕೆಯ ಬಹುತೇಕ ಪ್ರಮುಖ ಪತ್ರಿಕೆಗಳೆಲ್ಲವೂ ಈ ಅಂಕಣವನ್ನು ಪ್ರಕಟಿಸುತ್ತವೆ. ಸಾಮಾನ್ಯ ಜ್ಞಾನದ ಉತ್ತರಗಳು. ಆದರೆ ಗೊತ್ತಿದೆಯಲ್ಲಾ ‘ಕಾಮನ್‌ ಸೆನ್ಸ್‌ ಈಸ್‌ ನಾಟ್‌ ಕಾಮನ್‌’ ಎನ್ನುವ ಮಾತು.

ಅಬ್ಬಿಯ ಈ ಕಾಲಂನಲ್ಲಿ ಒಮ್ಮೆ ಒಂದು ಪ್ರಶ್ನೆ ಹೀಗೆ ಕಾಣಿಸಿಕೊಂಡಿತ್ತು. ಗಂಡನಿಂದ ವಿಚ್ಛೇದನ ಪಡೆದು ತನ್ನ ಹದಿವಯಸ್ಸಿನ ಮಗಳೊಂದಿಗೆ ಜೀವಿಸುತ್ತಿರುವ ಈಕೆ ಅಷ್ಟೇ ವಯಸ್ಸಿನ ಮಗಳನ್ನು ಹೊಂದಿರುವ ವಿಧುರನೊಂದಿಗೆ ಪ್ರೀತಿ ಮೊಳೆತು ಮದುವೆಯಾಗಿದ್ದಾಳೆ. ವಿಚ್ಛೇದನ ಮತ್ತು ಮರು ಮದುವೆಗಳು ಅಮೆರಿಕಾದಲ್ಲಿ ಬಹುಸಾಮಾನ್ಯ. ಬಹಳಷ್ಟು ಸಂಸಾರಗಳಲ್ಲಿ ವಯಸ್ಸಿಗೆ ಬಂದ ಮಕ್ಕಳು ಹೀಗೆ ದಿಢೀರನೆ ಬಂದ ಅಮ್ಮ ಅಥವಾ ಅಪ್ಪನನ್ನು ಅಮ್ಮ ಅಪ್ಪನೆಂಬ ವಾತ್ಸಲ್ಯದಲ್ಲಿ ಅಪ್ಪಿಕೊಳ್ಳುವುದಿಲ್ಲ. ಅಮ್ಮ ಅಪ್ಪನೆಂದು ಕೂಡ ಕರೆಯದೆ ಅವರ ಹೆಸರಿಡಿದು ಕೂಗುವ ಪರಿಪಾಟವೂ ಸಾಮಾನ್ಯವಾಗಿದೆ. ಇವಳ ವಿಷಯದಲ್ಲಿ ಸಮಸ್ಯೆ ಅಷ್ಟೊಂದು ಭೀಕರವಾಗಲಿಲ್ಲ. ಇಬ್ಬರು ಹೆಣ್ಣುಮಕ್ಕಳೂ ಒಬ್ಬರನ್ನೊಬ್ಬರು ಇಷ್ಟಪಟ್ಟರು, ಹೊಂದಿಕೊಂಡರು. ಅವನ ಮಗಳು ಇವಳನ್ನು ಅಮ್ಮ ಎಂದಳು. ಇವಳ ಮಗಳು ಅವನನ್ನು ಅಪ್ಪ ಎಂದಳು. ಇವಳೂ ಕೂಡ ಮಲ ಮಗಳನ್ನು ಭೇದವೆಣಿಸದೆ ಪ್ರೀತಿಸುತ್ತಾಳೆ. ಈಗ ಬಂದಿರುವುದು ಒಂದು ಚಿಕ್ಕ ಸಮಸ್ಯೆ.

ಮಲ ಮಗಳು (ಅವನ ಮಗಳು) ತನ್ನ ಕೋಣೆಯಲ್ಲಿ ಗತಿಸಿಹೋದ ಅಮ್ಮನ ಒಂದು ಭಾವಚಿತ್ರವನ್ನು ದೊಡ್ಡದಾಗಿ ಹಾಕಿಕೊಂಡಿದ್ದಾಳೆ. ಮಗಳ ಕೋಣೆಗೆ ಈಕೆ ಹೋದಾಗಲೆಲ್ಲಾ ಇವಳ ಕಣ್ಣುಗಳು ಫೋಟೋದಲ್ಲಿ ಫ್ರೇಮಾಗಿ ಕುಳಿತಿರುವ ಸವತಿಯ ಕಣ್ಣುಗಳೊಂದಿಗೆ ಬೆರೆಯುತ್ತವೆ. ಗುಂಗುರು ಕೂದಲಿನ, ಮುಗ್ಧ ನಗುವಿನ ಗತಿಸಿದ ಸುಂದರಿ ತನ್ನ ಅಗಲ ಕಣ್ಣುಗಳಿಂದ ಎಕ್ಸ್‌ ರೇ ಬಿಟ್ಟು ಇವಳ ಹೃದಯದ ಕೋಣೆ ಕೋಣೆಗಳನ್ನು ಹುಡುಕಿದಂತೆ ಅನ್ನಿಸುತ್ತದೆ. ‘ಇದು ನನ್ನದು ಜಾಗ, ನೀನೇನು ಮಾಡುತ್ತಿದ್ದಿ ಇಲ್ಲಿ’ ಎಂದು ಪಿಸುಗುಟ್ಟಿದಂತಾಗುತ್ತದೆ. ಇದಕ್ಕೇನು ಮಾಡಬೇಕು? ನನ್ನ ಸ್ವಂತ ಮಗಳು ಅವಳ ಕೋಣೆಯಲ್ಲಿ ತನ್ನ ಅಸಲಿ ಅಪ್ಪನ ಫೋಟೋವನ್ನು ಹಾಕಿಕೊಂಡಿಲ್ಲ. ಇವಳೇಕೆ ತನ್ನ ಗತಿಸಿದ ಅಮ್ಮನ ಚಿತ್ರವನ್ನು ದಿನಾ ನೋಡಬೇಕು ಹಾಗು ನಾನೂ ನೋಡುವಂತೆ ಮಾಡಬೇಕು? ಇದಕ್ಕೇನು ಪರಿಹಾರ?

ಭೂತವಲ್ಲದ ಭೂತ

ಅಬ್ಬಿ ಬಹಳ ಬುದ್ಧಿವಂತೆ. ಈ ತರಹದ ಅನೇಕ ಸಮಸ್ಯೆಗಳನ್ನು ಅನೇಕ ರೂಪಗಳಲ್ಲಿ ಕೇಳಿದವಳು. ಅವಳಿಗೆ ಗೊತ್ತು ಇದು ಭೂತವಲ್ಲದ ಭೂತ, ನಿರಾಕಾರ ಭೂತ, ತನ್ನಲ್ಲಿಯೇ ಕುಳಿತು ಹೊರಗಿನವರಂತೆ ಎದೆ ಬಗೆದು ನೋಡುವ ಭೂತ, ಮನದಿಂದ ಹೊರಹಾರಿ ಮನೆಯೆಲ್ಲಾ ಸುತ್ತಾಡಿ ಸವತಿಯ ಕಣ್ಣುಗಳಲ್ಲಿ ಮತ್ತೊಂದು ಮನೆ ಮಾಡಿಕೊಂಡಿರುವ ಭೂತ. ಆ ಭಾವಚಿತ್ರವನ್ನು ಅಲ್ಲಿಂದ ತೆಗೆಯುವಂತೆ ಅವಳ ಬಲಮಗಳಿಗೆ ಹೇಳಿದರೆ...? ಏನೂ ಆಗುವುದಿಲ್ಲ. ಭೂತ ಈಗ ಸವತಿಯ ಕಣ್ಣುಗಳನ್ನು ಬಿಟ್ಟು ಬಲಮಗಳ ಮನಸ್ಸನ್ನು ಹೊಕ್ಕುತ್ತದೆ. ‘ತಾಯಿಯಲ್ಲದ ತಾಯಿ’ಯನ್ನು ಸಂಶಯಿಸುವ ಕಣ್ಣುಗಳನ್ನು ಕೊಡುತ್ತದೆ. ಅಮ್ಮ ಎಂದು ಕರೆಯುತ್ತಿರುವವಳು ಹೆಸರಿಡಿದು ಕರೆಯಬಹುದು!

ಭೂತ ವನ್ನು ಓಡಿಸುವುದು ಹೇಗೆ? ‘‘ಕಾಲರಾಯನ ಮೇಲೆ ಭಾರಹಾಕಿ ಇದ್ದಂತೆಯೇ ಮುಂದುವರಿ. ಇನ್ನೂ ಹೆಚ್ಚು ಪ್ರೀತಿಸುವುದನ್ನು ಕಲಿ, ನಿನ್ನ ಸವತಿಯನ್ನು ಕೂಡ’’ ಎಂದು ಮಹಾತ್ಮ ಗಾಂಧಿಯಂತೆ, ಏಸುಕ್ರಿಸ್ತನಂತೆ, ಗೌತಮ ಬುದ್ಧನಂತೆ ಚುಟುಕು ಉತ್ತರದಲ್ಲಿ ಅಬ್ಬಿ ಮುಗಿಸಿದಳು.

ಈ ಪ್ರಶ್ನೆ ಉತ್ತರಗಳು ಸಂದು ಆಗಲೇ ಒಂದು ವರ್ಷದ ಮೇಲಾಯಿತು. ಅವರ ಮನೆಯಿಂದ ಭೂತೋಚ್ಛಾಟನೆ ಆಯಿತೇ? ಭೂತವನ್ನು ಓಡಿಸಲು ಅಸಾಮಾನ್ಯ ಎದೆಗಾರಿಕೆ ಬೇಕು!

*

ಸೀತಾರಾಮಯ್ಯನವರು ಹುಟ್ಟು ಕುರುಡರು. ಆದರೆ ಕಣ್ಣಿನಿಂದ ಕಳೆದುಕೊಂಡದ್ದನ್ನು ಬೇರೆ ಸಾವಿರ ವಿಧದಲ್ಲಿ ಗಳಿಸಿಕೊಳ್ಳುವಷ್ಟು ಚುರುಕುಮತಿಯವರು. ಸೂಕ್ಷ್ಮ ಮನಸ್ಸಿನವರೂ ಕೂಡ. ಶಾಸ್ತ್ರೀಯ ಸಂಗೀತಕ್ಕೆ ಹೇಳಿಮಾಡಿಸಿದಷ್ಟು ಮಟ್ಟಿನ ಕಂಠ. ವೃತ್ತಿಯಲ್ಲಿ ಹೈಸ್ಕೂಲ್‌ ಒಂದರಲ್ಲಿ ಸಂಗೀತ ಶಿಕ್ಷಕರು.

ಸೀತಾರಾಮಯ್ಯನವರಿಗೆ ಒಬ್ಬರೇ ಆಪ್ತ ಸ್ನೇಹಿತರು. ಅದು ರಾಘಣ್ಣ. ರಾಘಣ್ಣನವರು ಹತ್ತಿರದ ಪ್ರೈಮರಿ ಶಾಲೆಯಲ್ಲಿ ಉಪಾಧ್ಯಾಯರು. ಸೀತಾರಾಮಯ್ಯನವರ ವಯಸ್ಸಿನವರೇ. ವೇದಕ್ಕೆ ಸಂಬಂಧಿಸಿದಂತೆ, ಗೀತೆಗೆ ಸಂಬಂಧಿಸಿದಂತೆ, ವೈರಾಗ್ಯಕ್ಕೆ ಸಂಬಂಧಿಸಿದಂತೆ, ಸಂಗೀತಕ್ಕೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಾಘಣ್ಣನವರು ಹತ್ತಿರದ ಅರಳೀಕಟ್ಟೆಯ ಮೇಲೆ ಕುಳಿತು ಸೀತಾರಾಮಯ್ಯನವರಿಗಾಗಿ ಓದುತ್ತಾರೆ. ಬರೀ ಅಷ್ಟೇ ಅಲ್ಲದೆ ಆಗಾಗ ಚರ್ಚೆಗೆ ತೊಡಗುತ್ತಾರೆ. ಮುಸ್ಸಂಜೆ ಕರಗಿ ಕತ್ತಲೆ ಮೂಡುವ ತನಕ ಹೀಗೇ ಸಾಗುತ್ತದೆ.

ಪುರಸಭೆಗಾಗಿ ಚುನಾವಣೆ ಬಂತು. ರಾಘಣ್ಣನ ತಮ್ಮನೂ ಚುನಾವಣೆಗೆ ನಿಂತಿದ್ದಾನೆ. ಅಷ್ಟಾಗಿ ರಾಜಕೀಯ ಹೊಂದದ ರಾಘಣ್ಣ ಮತ್ತು ಸೀತಾರಾಮಯ್ಯನವರ ಚರ್ಚೆಯಲ್ಲಿ ಚುನಾವಣೆಯ ವಿಷಯ ಬಂದಿಲ್ಲ.

ಓಟಿನ ದಿನ ಬಂತು. ಬೆಳಗ್ಗೆಯೇ ರಾಘಣ್ಣ ಸೀತಾರಾಮಯ್ಯನವರ ಮನೆಗೆ ಬಂದರು. ‘ನಡೆಯಿರಿ, ನಿಮ್ಮನ್ನು ಓಟಿನ ಬೂತಿಗೆ ಕರೆದುಕೊಂಡು ಹೋಗುತ್ತೇನೆ’ ಎಂದರು. ರಾಘಣ್ಣನ ಭುಜದ ಮೇಲೆ ಕೈಯಿಟ್ಟು ಸೀತಾರಾಮಯ್ಯನವರು ಮತದಾನ ಕೇಂದ್ರಕ್ಕೆ ಬಂದರು. ಕುರುಡರಾದ ಸೀತಾರಾಮಯ್ಯನವರ ಸಹಾಯಕ್ಕೆ ಓಟುಹಾಕುವ ಬೂತಿನ ತನಕವೂ ರಾಘಣ್ಣನವರು ಬರಬೇಕಾಯಿತು. ಮತಪತ್ರವನ್ನು ಕೈಯಲ್ಲಿ ಹಿಡಿದು ಅಭ್ಯರ್ಥಿಗಳ ಹೆಸರುಗಳನ್ನು ರಾಘಣ್ಣ ಓದಿದರು. ಸೀತಾರಾಮಯ್ಯ ಒಂದು ಕ್ಷಣ ಯೋಚನೆಯಲ್ಲಿ ನಿಂತರು. ಸರ್ಕಾರಿ ಕಛೇರಿಯಲ್ಲಿ ಹಣದ ಆಪಾದನೆ ಹೊತ್ತು ಕೆಲಸ ಕಳೆದುಕೊಂಡು ಪುಂಡನಾಗಿ ಅಲೆಯುತ್ತಿರುವ ರಾಘಣ್ಣನವರ ತಮ್ಮನಿಗಿಂತಾ, ಪದವೀಧರನಾಗಿ, ಜನರಿಗಾಗಿ ಉತ್ಸಾಹದಲ್ಲಿ ಕೆಲಸ ಮಾಡಲು ಕಾಯುತ್ತಿರುವ ಹಾಗು ಹತ್ತಿರದ ಗ್ರಂಥಾಲಯಕ್ಕೆ ಬ್ರೈಲ್‌ ಲಿಪಿಯ ಪುಸ್ತಕಗಳನ್ನು ತರಿಸುವ ಆಶ್ವಾಸನೆಯಿತ್ತಿರುವ ಶಿವೇಗೌಡನಿಗೆ ಓಟು ಹಾಕುವುದು ಯುಕ್ತವೆನಿಸಿತು. ಶಿವೇಗೌಡನಿಗೆ ಓಟುಹಾಕಿ ಎಂದರು. ರಾಘಣ್ಣ ಹಾಗೆಯೇ ಆಗಲಿ ಎಂದರು. ಓಟು ಹಾಕಿದ ‘ಟಪ್‌’ ಶಬ್ದ ಸೀತಾರಾಮಯ್ಯನವರಿಗೆ ಕೇಳಿತು.

ಸೀತಾರಾಮಯ್ಯನವರ ಮನಸ್ಸಿನಲ್ಲಿ ಒಂದು ಸಣ್ಣ ಗಾಳಿ ಎದ್ದಿತು. ರಸ್ತೆಯ ಬದಿಯ ಮಣ್ಣನ್ನು ಹಾರಿಸುತ್ತದಲ್ಲಾ ಅಂತಹ ಗಾಳಿ. ಆಪ್ತ ಸ್ನೇಹಿತನಾದ ರಾಘಣ್ಣ ಏನೆಂದುಕೊಂಡರೋ? ಅವರ ತಮ್ಮನೇನಾದರೂ ಒಂದು ಮತದ ಅಂತರದಲ್ಲಿ ಸೋತರೆ ಅವರು ನನ್ನನ್ನು ಕ್ಷಮಿಸಿಯಾರೇ? ಸಣ್ಣಗಾಳಿ ಅಷ್ಟಕ್ಕೇ ನಿಲ್ಲದೆ ಮತ್ತೂ ಜೋರಾಯಿತು. ಶಿವೇಗೌಡರಿಗೆ ಓಟುಹಾಕಿ ಎಂದಾಗ ಶಿವೇಗೌಡನಿಗೆ ಹಾಕದೆ ತನ್ನ ತಮ್ಮನಿಗೆ ಹಾಕಿರಬಹುದಲ್ಲ ರಾಘಣ್ಣ? ಹಾಗೇನಾದರೂ ಆಗಿ ಶಿವೇಗೌಡನೇನಾದರೂ ಒಂದು ಮತದಲ್ಲಿ ಸೋತರೆ ರಾಘಣ್ಣನನ್ನು ಕ್ಷಮಿಸಬಹುದೇ? ಯಾರನ್ನು ಕೇಳುವುದು? ಕೇಳುವುದಾದರೂ ಹೇಗೆ ರಾಘಣ್ಣನನ್ನು? ವಿಶ್ವಾಸದ ಮೇಲೆ ನಿಂತಿರುವ ಸ್ನೇಹ ಇಂತಹ ಒಂದು ಪ್ರಶ್ನೆಯಿಂದ ಕುಸಿಯುವುದಿಲ್ಲವೇ? ಹೇಳುವಂತಿಲ್ಲ, ಕೇಳುವಂತಿಲ್ಲ, ಒಳಗೆ ಮಾತ್ರ ಗೆದ್ದಲ ಗೂಡು!

ಸೀತಾರಾಮಯ್ಯನವರಿಗೆ ಹೊಕ್ಕಿರುವ ಭೂತವನ್ನು ಓಡಿಸುವುದು ಹೇಗೆ? ಆಫ್ರಿಕಾದ ಒಂದು ಬುಡಕಟ್ಟಿನ ಜನ ನೀವು ಎದುರು ಬಂದು ‘ಹಲ್ಲೋ’ ಎಂದು ಹೇಳಿ ಮುಂದೆ ಹೊರಟರೆ ಅಷ್ಟಕ್ಕೇ ಬಿಡುವುದಿಲ್ಲವಂತೆ. ನಿಮ್ಮ ಮುಖ ನೋಡಿ ನೀವು ಚಿಂತಿತರಾಗಿದ್ದೀರೆಂದು ಕಂಡರೆ ನಿಮ್ಮ ಕೈಗಳನ್ನು ಬಲವಾಗಿ ಹಿಡಿದುಬಿಡುತ್ತಾರಂತೆ. ನೀವು ನಿಮ್ಮ ಸಮಸ್ಯೆಯನ್ನು ಅವರೆದುರು ಹೇಳುವತನಕ ಅವರ ಉಕ್ಕಿನ ಕೈಗಳು ನಿಮ್ಮ ಕೈಗಳನ್ನು ಬಿಡುವುದಿಲ ್ಲ! ಅಲ್ಲಿಗೆ ಕಳುಹಿಸೋಣವೇ ಇವರನ್ನು?

ಆಫ್ರಿಕಾಕ್ಕೆ ಕಳುಹಿಸುವುದು ವೃಥಾ ಖರ್ಚು. ಅಬ್ಬಿಗೆ ಬರೆಯೋಣವೇ? ಇಂತಹ ಸಮಸ್ಯೆಗೆ ಉತ್ತರಿಸದೆ ಯಾವುದಕ್ಕೆ ಉತ್ತರಿಸಿಯಾಳು? ಪೇಪರು, ಪೆನ್ನು ತನ್ನಿ ಮತ್ತೆ....

ಒಂದು ನಿಮಿಷ ತಡೆಯಿರಿ...ಏನೆಂದು ಬರೆಯುವುದು?..ಇಲ್ಲೇನಾದರೂ ಸಮಸ್ಯೆ ಇದೆಯಾ ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X