ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ಣನ ತಿರುಗು ಬಾಣಕ್ಕೆ ವೇದ ವ್ಯಾಸರ ಶಮನಾಸ್ತ್ರ

By Staff
|
Google Oneindia Kannada News

ಪ್ರವೇಶ: ದ್ರೌಪದಿ

ದ್ರೌಪದಿ: ಕರ್ಣ! ನೀನು ರಣರಂಗಕ್ಕೆ ಧೀರನಂತೆ ಬಂದು ಹೋರಾಡಿದರೂ, ಇದೀಗ ಸಾಯುವಕ ಾಲದಲ್ಲಿ ನಿನ್ನ ಜೀವನವನ್ನೆಲ್ಲಾ ಮರುಕಳಿಸಿ ನೆನಪಿಸಿಕೊಂಡು, ಅಳುತ್ತಿದ್ದೀಯಲ್ಲಾ. ನನಗೆ ಬಂದ ಕಷ್ಟಗಳು ನಿನ್ನ ದುಷ್ಟ ಮನಸ್ಸಿಗೆ ಏನು ತಿಳಿಯುವುದು! ಅಬಲೆಯಾದ ನನ್ನ ವಸ್ತ್ರಾಪಹರಣ ಮಾಡುವುದಕ್ಕೆ ನಾನೇನು ತಪ್ಪು ಮಾಡಿದ್ದೆ? ದುರುಳರಾದ ದುರ್ಯೋಧನ - ದುಶ್ಯಾಸನರ ಪರವಾಗಿ ನಿಂತು ಪರಸ್ತ್ರೀಯಾದ ನನ್ನನ್ನು ಅವಮಾನಿಸಿ, ಛೇಡಿಸಿ, ಕಾಮುಕ ಕೋತಿಮನದ ಹುಚ್ಚನಂತೆ ಆಟವಾಡಿದ್ದು ನೆನಪಿದೆಯೇ ಈಗ ಯುದ್ಧದಲ್ಲಿ ಸೋತು ಉರುಳಿ ಬಿದ್ದುಕೊಂಡಿರುವ ಕೀಳು ಮನಸ್ಸಿಗೆ? ಅಧಮನಾದ ನಿನಗೆ ಆದಂತೆ ನಿನ್ನ ‘ಸ್ವಾಮಿ’ ಆ ಖಳನಿಗೂ ಸದ್ಯದಲ್ಲಿಯೇ ಸಾವು ಬರಲಿದೆ.

ಕುಂತಿ: ದ್ರೌಪದಿ! ನಿನ್ನ ದುಖ, ಸಿಟ್ಟು, ಸೇಡು ಎಲ್ಲವೂ ಹೆಂಗಸಾದ ನನಗೆ ಅರ್ಥವಾಗುತ್ತದೆ, ಮಗಳೇ. ಆದರೆ, ನಿನ್ನ ಅಣ್ಣ, ಪಾಂಡವರ ಪಕ್ಷಪಾತಿ ಶ್ರೀ ಕೃಷ್ಣನು ಮೊದಲೇ ಹೇಳಿದ ಹಾಗೆ, ಇದಕ್ಕೆಲ್ಲಾ ವ್ಯಾಸರೆ ಕಾರಣರಲ್ಲವೆ?

ವ್ಯಾಸ: ದ್ರೌಪದಿ! ನಿನಗೆ ವಸ್ತ್ರಾಪಹರಣ ಮಾಡುವ ದುರ್ಮನಸ್ಸನ್ನು ಕೌರವರು ಪ್ರದರ್ಶಿಸಿದರೂ ನಿನಗೆ ನಿಜವಾಗಿಯೂ ವಸ್ತ್ರಾಪಹರಣವಾಗಲಿಲ್ಲ. ಈ ಘಟನೆಗಳಲ್ಲಿ ನಾನು ಓದುಗರಿಗೆ ಸಮಾಜದ ಹುಳುಕುಗಳನ್ನೂ, ಮನುಷ್ಯನ ಮನಸ್ಸಿನ ದುರ್ಬಲ ಶಕ್ತಿಗಳನ್ನೂ, ಕ್ಲಿಷ್ಟವಾದರೂ ಸನ್ನಿವೇಶಗಳ ಉಪಯೋಗಿಸಿ ಹೇಳುವ ಪ್ರಯತ್ನ ಮಾಡಿದ್ದೇನೆ. ಯಾವಾಗಲೂ, ಎಲ್ಲ ರೀತಿಯಲ್ಲೂ ಸಹನೆಯುಳ್ಳವನೂ, ಧರ್ಮವನ್ನು ಪಾಲಿಸುವ ಧರ್ಮರಾಯನೂ ಜೂಜಾಡುವ ಚಂಚಲತೆಗೆ ದಾಸನಾದುದರಿಂದ ತನ್ನದೆಲ್ಲವನ್ನೂ, ತಮ್ಮಂದಿರದೆಲ್ಲವನ್ನೂ, ಕೊನೆಗೆ ಹೆಂಡತಿಯನ್ನೂ ಪಣಕ್ಕಿಟ್ಟು ಕಳೆದುಕೊಳ್ಳುವ ಸ್ಥಿತಿಗೆ ಬಂದುಬಿಡುತ್ತಾನೆ. ಹೊರನೋಟಕ್ಕೆ ಸಣ್ಣ ತಪ್ಪೆಂದು ಕಂಡರೂ ಮನುಷ್ಯನ ಯಾವ ದುರ್ಬಲತೆಯಾದರೂ ಅದರಿಂದ ಬಹಳ ದೊಡ್ಡ ಹಾನಿಯಾಗಬಹುದೆಂಬುದನ್ನು ತೋರಿಸುವ ಘಟನೆ ಇದು. ಉಪ್ಪು ತಿಂದ ಮನೆಯನ್ನು ಎದುರುಹಾಕಿಕೊಳ್ಳಲು ದ್ರೋಣ, ಭೀಷ್ಮಾದಿಗಳೂ ಹೆದರಿ ಸ್ವಲ್ಪ, ಸ್ವಲ್ಪ ಮಾತ್ರ ಪ್ರತಿಭಟಿಸಿದರು. ಗೌರವಿತ ಆಚಾರ್ಯನಾಗಲೀ, ವಯಸ್ಸಿನಲ್ಲಿ ಹಿರಿಯವರಾಗಲೀ ಸಮಾಜವನ್ನು ಸಂಪೂರ್ಣವಾಗಿ ಪ್ರತಿಭಟಿಸುವುದು ಕಡಿಮೆ. ಇಂತಹವರು ಎಲ್ಲ ಸಮಾಜದಲ್ಲೂ ಇರುತ್ತಾರೆ. ದುಷ್ಟ ಶಕ್ತಿಗಳನ್ನು ಮುಖಾಮುಖಿ ಎದುರಿಸುವುದಕ್ಕೆ ಸಜ್ಜನರೂ, ಶಕ್ತಿಶಾಲಿಗಳೂ ಮೀನ-ಮೇಷ ಎಣಿಸುತ್ತಾರೆ.

ದ್ರೌಪದಿ! ನನ್ನ ಕಥೆಯನ್ನು ಈ ಸಮಯದಲ್ಲಿ ಮುಂದುವರಿಸುವ ದಾರಿ ಕಾಣಲಿಲ್ಲ. ಜೊತೆಗೆ ನಿನ್ನನ್ನು ನಗ್ನಳಾಗಿ ಮಾಡಿಬಿಡುವುದನ್ನು ನಿಲ್ಲಿಸಲು ಶ್ರೀ ಕೃಷ್ಣನ ಮಾಯೆಯನ್ನು ಇಲ್ಲಿ ಉಪಯೋಗಿಸಿಕೊಂಡೆ.

ದ್ರೌಪದಿ: ನನ್ನ ಮಹಾವೀರ ಪತಿಗಳಿಂದ ಕೌರವರೆಲ್ಲರಿಗೂ ನರಕದ ಬಾಗಿಲು ತೆಗೆದುಕೊಂಡು ಕಾದಿದೆ!

ದುರ್ಯೋಧನ: ದ್ರೌಪದಿ ! ನೀನೇಕೆ ವ್ಯಥಾ ಕನಸನ್ನು ಈ ಹಗಲಿನಲ್ಲಿ, ರಣರಂಗದಲ್ಲಿ ಕಾಣುತ್ತಿದ್ದೀಯೆ? ನಿನ್ನ ವಸ್ತ್ರಾಪಹರಣದ ಮನೋರಂಜನೆಯನ್ನು ನೋಡುತ್ತಿದ್ದ ನಾವು, ಮೀಸೆಯ ಮೇಲೆ ಕೈಹಾಕಿ ಅಟ್ಟಹಾಸದಿಂದ ನಿನ್ನ ಆ ಸೌಂದರ್ಯದ ಬೆಡಗನ್ನು ಮನತಣಿಸಿಕೊಳ್ಳುತ್ತಾ ನೋಡುತ್ತಿರುವಾಗ, ಆ ನಿನ್ನ ಗಂಡಂದಿರು ಏನೂ ಮಾಡಲಾಗದ ಹೇಡಿಗಳಂತೆ ಬಾಲ ಮುದುರಿಕೊಂಡು ಸುಮ್ಮನೆ ಮಿಕ - ಮಿಕ ನೋಡುತ್ತಿದ್ದರಲ್ಲವೆ! ಆ ಅಡುಗೆ ಭಟ್ಟನ ಮಾತನ್ನೇಕೆ ತಂದು ನಿನ್ನ ನಾಲಿಗೆಯನ್ನು ನೋಯಿಸಿಕೊಳುತ್ತಿದ್ದೀಯೆ ದಿಗಂಬರ ಸುಂದರಿ? (ದೊಡ್ಡ ಅಟ್ಟಹಾಸ ಹಾಕುತ್ತಾನೆ)

ಪ್ರವೇಶ: ಭೀಮ

ಭೀಮ: ಎಲವೋ ಅಧಮಾಧಮ! ನಾನು ಅಡುಗೆ ಭಟ್ಟನಾಗಿದ್ದಾಗ, ನನ್ನ ಪ್ರೀತಿಯ ಹೆಂಡತಿಯಾದ ದ್ರೌಪದಿಯನ್ನು ಛೇಡಿಸಿ, ಕೆರಳಿಸಿ ಕಾಮಾಂಧನಾಗಿ ಅರಮನೆಯಲ್ಲೆಲ್ಲಾ ಹಿಂಬಾಲಿಸುತ್ತಿದ್ದ ಆ ಕೀಚಕನನ್ನು ಹೇಗೆ ಕೊಂದೆ ಎನ್ನುವುದು ನಿನಗೆ ಗೊತ್ತೋ! ದುರ್ಯೋಧನ ನೀನು ಧೈರ್ಯವಂತನಾದರೆ ಇದೀಗಲೇ ಬಾ ! ನಿನ್ನನ್ನು ಜಟ್ಟಿ ಕಾಳಗದಲ್ಲಿ, ಪಲ್ಟಿಹಾಕಿಸಿ, ಕೆಳಗುರುಳಿಸಿ, ಜಗತ್ಪ್ರಸಿದ್ಧವಾದ ನನ್ನ ಪಟ್ಟಿನಲ್ಲಿ ನೇಣುಹಾಕಿ ಒಂದೂ ಉಸಿರು ದಕ್ಕದಂತೆ ಮಾಡಿಬಿಡುತ್ತೇನೆ.

ನನ್ನ ಪ್ರೀತಿಯ ಪುತ್ರ ಘಟೋತ್ಕಚನನ್ನು ಸಾಯಿಸಿದ ಆ ಕರ್ಣನನ್ನು ಈ ಕಾಲಭೈರವನ ತುಳಿತದಲ್ಲಿ ಮೆಟ್ಟಿ ಕುಣಿದು ನಾಟ್ಯವಾಡುತ್ತೇನೆ.

ಕೃಷ್ಣ : ಜಗತ್‌ ಜಟ್ಟಿ ಭೀಮ! ಸಾವಧಾನ. ಮುಂದೆ ಆಗುವ ಭಾರತ ಯುಧ್ಧವನ್ನು ಈಗಲೇ ಮುಗಿಸಿ ಬಿಡಲು ಸಾಧ್ಯವೇ! ಇದರ ಸೃಷ್ಟಿ ಕರ್ತ, ದಿವ್ಯ ಜ್ಞಾನಿಯಾದ ವೇದ ವ್ಯಾಸರು ನಡೆಸಿದಂತೆ ಮಹಾಭಾರತ ವೆಲ್ಲವೂ ಸಾಗಬೇಕಲ್ಲವೆ! :-) :-)

ವ್ಯಾಸ: (ಕೃಷ್ಣನು ನಗುವ ಧಾಟಿಯಲ್ಲೇ ನಕ್ಕು) ಕೃಷ್ಣ ! ನೀನು ಬೇರೆಯಲ್ಲ ನಾನು ಬೇರೆಯಲ್ಲ; ಸಮಯಕ್ಕೆ ಒಂದು ಉಪಾಯವನ್ನು ಹೂಡುವೆಯಲ್ಲಾ !

ಕರ್ಣ: ಮಹಾವೀರನಾದ ನನ್ನ ಹಣೆ ಬರಹದ ಪ್ರಕಾರ ನಾನು ಸೂತ ಪುತ್ರನಾಗಿ ಜೀವನಪೂರ್ತಿ ಅವಹೇಳನ ಮಾಡಿಸಿಕೊಳ್ಳಬೇಕಾಯಿತಲ್ಲಾ . ನನ್ನ ದುಃಖ ಯಾರಿಗೂ ಅರ್ಥವಾಗಲಾರದು.

ಪ್ರವೇಶ: ಏಕಲವ್ಯ

ಏಕಲವ್ಯ: ನಿನ್ನ ದುಃಖ ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ ಕರ್ಣ. ಬೇಡರವನಾದ ನನಗೆ ಬಿಲ್ಲುವಿದ್ಯೆ, ಶಸ್ತ್ರ ಪಾಠಗಳನ್ನು ಹೇಳಿಕೊಡುವುದಿಲ್ಲ ಎಂದು ನನ್ನನ್ನು ಕನಿಕರವಿಲ್ಲದೆ ಹಿಂತಿರುಗಿಸಿ ಕಳಿಸಿಬಿಟ್ಟ ದ್ರೋಣರ ಬಗ್ಗೆ ನನಗೂ ಬಹಳ ಬೇಸರವಾಯಿತಲ್ಲವೆ. ಹುಟ್ಟಿನಿಂದ ಬೇಡನಾದ ನನಗೆ ಬಿಲ್ಲುವಿದ್ಯೆಯನ್ನು ನೈಜವಾಗಿ ಕಲಿಯಬಲ್ಲ ಸೌಭಾಗ್ಯ - ಸಂಪ್ರದಾಯಗಳು ರಕ್ತಗತವಾಗಿ ಬಂದದ್ದು ಎನ್ನುವುದನ್ನು ತೋರಿಸಿಕೊಡಲು ಗುರುವಿನ ಪ್ರತಿಮೆಯೇ ಸಾಕ್ಷಿಯಾಯಿತು. ಕರ್ಣ! ಆದರೆ, ಬಿಲ್ಲುವಿದ್ಯಕ್ಕೇ ಅತಿ ಅವಶ್ಯಕವಾದ ನನ್ನ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ಕೊಡಲು, ನನ್ನ ಕಣ್ಣಿನ ರೆಪ್ಪೆಯನ್ನು ಕೂಡ ಮಿಟುಕಿಸದೆ ಒಂದೇ ಹೊಡೆತದಲ್ಲಿ ಕತ್ತರಿಸಿ ಗುರುಗಳ ಪಾದದಲ್ಲಿಟ್ಟಾಗ, ಪ್ರಪಂಚದ ಧನಸ್‌-ಶಾಸ್ತ್ರ ಪಾರಂಗತರನ್ನೆಲ್ಲಾ ಮಿಂಚಿ ಗೆದ್ದ ಸಂತಸದ ಅನುಭವವಾಯ್ತು.

ಕರ್ಣ! ನಿನ್ನ ಪರಿಸ್ಥಿತಿ ನನಗೆ ಅರ್ಥವಾಗುವಷ್ಟು ಇನ್ಯಾರಿಗೂ ತಿಳಿಯಲಾರದು.

ವ್ಯಾಸ: ಕರ್ಣನು ಸೂತಪುತ್ರನೆಂದೂ, ಪಾಂಡವರು ಮತ್ತು ಕೌರವರುಗಳು ರಾಜ ಪುತ್ರರೆಂದೂ ನಂಬಿ ದ್ರೋಣ ಮೊದಲಾದ ಶಸ್ತ್ರಾಚಾರ್ಯರುಗಳು ನನ್ನ ಕಥೆಯಲ್ಲಿ ಕರ್ಣನನ್ನು ಅಲ್ಲಗಳೆದರು. ಇದನ್ನು ಸ್ವಲ್ಪ ಯೋಚಿಸಿನೋಡು ಕರ್ಣ. ಈ ಆಚಾರ್ಯರುಗಳು ಮೊದಲಿಗೆ ಬ್ರಾಹ್ಮಣರು; ರಾಜಾಶ್ರಯವಿಲ್ಲದೆ ಅವರ ವಿದ್ಯೆಯನ್ನು ಇನ್ಯಾರಿಗಾದರೂ ಹೇಳಿಕೊಟ್ಟರೆ ಅವರ ಹೆಚ್ಚುಗಾರಿಕೆ ಸಫಲವಾದೀತೇ? ತಮಗೆ ಅವಕಾಶವನ್ನು ಕೊಟ್ಟ ರಾಜನ ಪುತ್ರರಿಗೆ ಅವರ ಜೀವನ, ಅವರ ಉದ್ಯೋಗ ಮೀಸಲಾಗಿಟ್ಟಿದ್ದರು. ಆದ ಕಾರಣವೇ, ಅವರು ತಮ್ಮ ಆಶ್ರಯದಾತರಿಗೆ ಮುಡುಪಾಗಿಟ್ಟುಕೊಂಡಿದ್ದ ನಿಷ್ಠೆಯನ್ನು ಇತರರಿಗೆ ಹಂಚುವುದಕ್ಕೆ ಹಿಂಜರಿದರು. ನಮ್ಮ ಕಾಲದಲ್ಲಿ ಕೂಡ ಉದ್ಯೋಗಗಳು ಹುಟ್ಟಿದ ಜಾತಿಯನ್ನೇ ಅನುಸರಿಸುತ್ತಿದ್ದವು; ಹಾಗಂದ ಮಾತ್ರಕ್ಕೆ, ಈ ಸಂಪ್ರದಾಯದಿಂದ - ಕುರುಡೆನ್ನೀ, ಸಮಾಜದ ಕುಂದುಕೊರತೆ ಹಾಗೂ ಅನ್ಯಾಯವೆನ್ನೀ - ರಾಜರಿಗೆ, ಕ್ಷತ್ರಿಯ ಕುಲದವರಿಗೆ ಮೀಸಲಾಗಿದ್ದ ಉದ್ಯೋಗವೆಂದು ಸನ್ನಿವೇಶಗಳಮೂಲಕ ಅವಹೇಳನ ಮಾಡುವ ಕಾರಣದಿಂದ ಕಥೆಯಲ್ಲಿ ಬರೆದೆ. ಇಲ್ಲಿನ ತಮಾಷೆ ಏನೆಂದರೆ, ಓದುಗರಿಗೆಲ್ಲಾ ಕರ್ಣನು ಸೂತನಲ್ಲ ಎಂದು ಗೊತ್ತಿದೆ; ಪಾತ್ರಗಳಿಗೆ ಮಾತ್ರ ಗೊತ್ತಿಲ್ಲ!

ಏಕಲವ್ಯನ ಕಥೆಯಲ್ಲಿಯೂ ಅಷ್ಟೆ: ಕ್ಷತ್ರಿಯ ಯುವಕನಾಗಿ, ದ್ರೋಣರಂತಹ ಅದ್ವಿತೀಯ ಆಚಾರ್ಯರಿಂದ ಕಲಿತ, ಇವನಿಗೆ ಸಮಾನರಾದ ಬಿಲ್ಲುಗಾರರು ಎಲ್ಲಿಯೂ ಇಲ್ಲ ಎಂದು ಅಹಂಕಾರದಲ್ಲಿ ಮುಳುಗಿದ್ದ ಅರ್ಜುನನಿಗೆ ಕಣ್ಣು ತೆರೆಸಲು ಅಳವಡಿಸಿದ ಕಥೆ; ವಿದ್ಯೆಯು ಮನಸನ್ನು ಕೇಂದ್ರೀಕರಿಸಿದ ಎಲ್ಲರಿಗೂ ಪ್ರಾಪ್ತವೆನ್ನುವ ದೃಷ್ಟಾಂತವನ್ನು ಏಕಲವ್ಯನನ್ನು ಕೇಂದ್ರೀಕರಿಸಿ ಓದುಗರಿಗೆ ತಿಳಿಸಿ ಹೇಳಿದ ಕಥೆ.

ಈ ದೃಷ್ಟಾಂತ ಧ್ಯೇಯದ ಕಥೆಯಲ್ಲಿ ದ್ರೋಣರು ಏಕಲವ್ಯನನ್ನು ಗುರುದಕ್ಷಿಣೆ ಕೇಳಿದಾಗ ಅವರ ಸ್ವಾರ್ಥದ ಹುಳುಕು ಪ್ರಪಂಚಕ್ಕೇ ಕಂಡುಬರುತ್ತದೆ. ಈ ಕಥೆಯಲ್ಲಿ ಮೊದಲಿನಿಂದ ಕೊನೆಯವರೆಗೂ ನಿರ್ಮಲ ಮನಸ್ಸನ್ನು ಉಳಿಸಿಕೊಳ್ಳುವವನು ಏಕಮಾತ್ರ ಪಾತ್ರದ ಏಕಲವ್ಯ; ಇಂತಹ ಅದ್ವಿತೀಯ ಬಿಲ್ಲುಗಾರನ ಮುಂದೆ, ಅರ್ಜುನನೂ ದ್ವಿತೀಯನಾಗಿಬಿಡುತ್ತಾನೆ; ಆಚಾರ್ಯರೂ ಕೂಡ ಅಲ್ಪರಾಗಿಬಿಡುತ್ತಾರೆ.

ಏಕಲವ್ಯನು ಹುಟ್ಟಿನಿಂದ ಬೇಡ. ಬೇಡನ ವೃತ್ತಿ ಬೇಟೆಯಾಡುವುದು; ಇದು ಇವನಿಗೂ, ಇವನ ಸಂಸಾರ ಪಾಲನೆಗೂ ಅತ್ಯವಶ್ಯಕ. ಆದರೆ, ಬೇಡನು ತನ್ನ ಕೆಲಸಕ್ಕೆ ಸಾಕಷ್ಟು ಬಿಲ್ಲುವಿದ್ಯೆಯನ್ನು ಕಲಿತಿದ್ದರೆ ಸಾಕು. ಪ್ರಪಂಚದಲ್ಲಿ ಎಲ್ಲರನ್ನೂ ಮೀರಿಸಿ ಬಿಲ್ಲುಗಾರ ನಾಗಬೇಕಾಗಿಲ್ಲ. ಇವನಿಗೆ ಯಾವ ಗುರುವೂ ಬೇಕಾಗಿಲ್ಲ. ಇವನಲ್ಲಿ ರಕ್ತಗತವಾಗಿ ಬಂದ ಪ್ರವೃತ್ತಿಯಾದ ಬಿಲ್ಲುಗಾರಿಕೆ ತನಗೆ ತಾನೇ ವ್ಯಕ್ತವಾಗುತ್ತದೆ. ಇವನಿಗೆ ಮನಸ್ಸನ್ನು ಕೇಂದ್ರೀಕರಿಸಲು ದ್ರೋಣರ ಪ್ರತಿಮೆ ಒಂದು ನೆಪವಾದ ಧ್ಯೇಯ ಮೂರ್ತಿ. ಜನ್ಮ ಸಹಜವಾದ ಬಿಲ್ಲುಗಾರ ಏಕಲವ್ಯ. ಇವನ ಮುಂದೆ ಎಲ್ಲರೂ ಸಾಮಾನ್ಯರು.

ಕರ್ಣ: ನನಗೆ ಕಪಟಿ ಕೃಷ್ಣ, ತಾಯಿ ಕುಂತಿ, ಇಂದ್ರ ಇವರುಗಳು ಅನ್ಯಾಯ ಮಾಡುತ್ತಿರುವಾಗ, ನನ್ನ ತಂದೆಯಾದ ಸೂರ್ಯ ದೇವನು ನನ್ನ ಪತನಕ್ಕೆ ಪ್ರೀತಿಯಿಂದ ಅಡ್ಡಬಂದು ನನ್ನನ್ನು ಉಳಿಸಿಕೊಳ್ಳಬಹುದಾಗಿತ್ತಲ್ಲವೆ?

ಪ್ರವೇಶ: ಸೂರ್ಯ

ಸೂರ್ಯ: ಅಳಬೇಡ, ಕಣ್ಣೀರಿಡಬೇಡ ಕರ್ಣ!

ಕರ್ಣ: ಇಂದ್ರನು ತನ್ನ ನೆಚ್ಚಿನ ಮಗನಾದ ಅರ್ಜುನನ ಜಯಕ್ಕೋಸ್ಕರ ನನ್ನಿಂದ ವರದ ನೆವದಲ್ಲಿ ನನ್ನ ಜೀವವನ್ನೇ ಸಾಯುವ ಮುಂಚೆಯೇ ಕಿತ್ತುಕೊಂಡು ಹೋಗಿಬಿಟ್ಟ. ನೀನೇಕೆ ಅಂತಹ ಪುತ್ರವಾತ್ಸಲ್ಯವನ್ನು ನನಗೆ ತೋರಲಿಲ್ಲ ?

ಸೂರ್ಯ: ಪುತ್ರಾ! ನೀನು ದಾನಶೂರನೆಂಬ ಹೆಸರಿಗೆ ತಕ್ಕಂತೆ ಕೇಳಿದ್ದನ್ನು, ಕೊಂಚವೂ ಹಿಂಜರಿಯದೆ, ಒಂದು ಮಿಂಚು ಹೊಳೆಯುವ ಕ್ಷಣಮಾತ್ರವೂ ಹಾರಿಹೋಗದಂತೆ, ನಿಂತಲ್ಲೇ ತರ್ಪಣ ಬಿಟ್ಟು ಕೊಡಲು ಹೋದಾಗ, ನಾನು ಬೇಡಿ, ಬೇಡಿ ‘ಬೇಡ ಮಗು’, ’ದುಡುಕಬೇಡ ಕಂದ’, ನಿನ್ನ ಪ್ರಾಣವನ್ನೇ ತರ್ಪಣ ಕೊಡಬೇಡ’ ಎಂದೆಲ್ಲಾ ಹೇಳಿ, ಕೂಗಿ, ಅಗ್ನಿಹೃದಯದ ನಾನೂ ಒಂದು ಹನಿ ಕಣ್ಣೀರು ಬಿಟ್ಟಿದ್ದನ್ನು ಕಂಡೂ, ನೀನು ನಿನ್ನ ದಾನವನ್ನು ಪೂರ್ತಿ ಮಾಡಿದೆಯಲ್ಲವೇ?

ವ್ಯಾಸ: ಕರ್ಣ! ನೀನು ಮಾಡಿದ ದಾನಗಳಬಗ್ಗೆ ಬೇಸರಪಡುವ ಕಾರಣವಿಲ್ಲ; ಕುಂತಿ! ನೀನು ಕೂಡ ನಿನ್ನ ಪುತ್ರನ ದಾನಗಳಿಗೆ ನೊಂದುಕೊಳ್ಳಬೇಕಾಗಿಲ್ಲ. ಕರ್ಣನು ಅತಿಪರಾಕ್ರಮಿ. ಬಿಲ್ಲುವಿದ್ಯೆಯಲ್ಲಿ ಅರ್ಜುನನ ಸಮಾನವಾಗಿಯೂ ಯುಧ್ಧ ಮಾಡಬಲ್ಲವನು. ಅದಕ್ಕಿಂತ ಹೆಚ್ಚಾಗಿ, ಸಾರಥಿಯಾದ ಶಲ್ಯನು ಅವನನ್ನು ತ್ಯಜಿಸಿದರೂ, ರಥವನ್ನು ತಾನೆ ನಡೆಸಿಕೊಂಡು, ಯುದ್ಧವನ್ನು ಮುಂದುವರಿಸಿದ ಅಸಮಾನ ವೀರ. ಗಾಂಢೀವಿಯೆಂದು ಹೆಸರಾದ ಅರ್ಜುನನೂ ಕೂಡ ಕರ್ಣನನ್ನು ಸೋಲಿಸಲಾಗಲೇ ಇಲ್ಲ. ತನ್ನ ಕರ್ಣಕುಂಡಲಗಳನ್ನೂ, ವಜ್ರಕವಚವನ್ನೂ ಒಂದು ಕಣ್ಣೂ ಮಿಟುಕಿಸದೆ ದಾನಮಾಡಿದರೂ ಅವನಿಗೆ ಸೋಲುಬರಲಿಲ್ಲ. ಕರ್ಣನನ್ನು ನ್ಯಾಯದಲ್ಲಿ ಸೋಲಿಸುವ, ಕೊಲ್ಲುವ ಸಾಧ್ಯತೆಯಿಲ್ಲವೆಂದಲೇ, ಕೃಷ್ಣನು ಅರ್ಜುನನಿಗೆ ಅಶಸ್ತ್ರನಾಗಿ, ರಥವನ್ನು ಮೇಲೆತ್ತಲು ಎರಡು ಕೈ-ಭುಜಗಳನ್ನೂ, ತನ್ನ ಪೂರ್ತಿ ದೇಹವನ್ನೂ ಕೊಟ್ಟಿರುವಾಗ ಮಾತ್ರ ಕೊಲ್ಲುವ ಅವಕಾಶವಿದೆಯೆಂದು ಸ್ಪಷ್ಟವಾಗಿ ಹೇಳುತ್ತಾನೆ. ಕವಿಯಾದ ನಾನು ಕರ್ಣನ ಮಹತ್ವಗಳನ್ನು ನಿರ್ದೇಶಿಸಲು ಇಷ್ಟೆಲ್ಲವನ್ನು ಕಥೆಯಲ್ಲಿ ಅಳವಡಿಸಬೇಕಾಯ್ತು.

ಕರ್ಣ! ನಿನಗೆ ಈಗ ಒಂದು ಗುಟ್ಟನ್ನು ಹೇಳುತ್ತೇನೆ ಕೇಳು. (ಗುಟ್ಟು ಹೇಳುವವರ ಧಾಟಿಯಲ್ಲಿ ಕರ್ಣನ ಕಿವಿಯೋಳಗೆ ಹೇಳಿದರೂ, ಸಭೆಯ ಎಲ್ಲರಿಗೂ ಚೆನ್ನಾಗಿ ಕೇಳುವಂತೆ ಗುಸು ಗುಸು ಧ್ವನಿಯಲ್ಲಿ ಹೇಳುತ್ತಾನೆ) ನಿನ್ನ ತಂದೆ ಸೂರ್ಯನಲ್ಲ; ನಿನ್ನ ತಾಯಿ ಕುಂತಿಯೂ ಅಲ್ಲ; ನಿನ್ನ ತಂದೆ, ತಾಯಿ ಎರಡೂ ನಾನೆ. ನನ್ನ ಕಲ್ಪನಾ ಲೋಕದಲ್ಲಿ ಜನಿಸಿದ ನಿನ್ನನ್ನು ಕಥೆಯು ನಡೆದ ಹಾಗೂ ಪೋಷಿಸಿ ಬೆಳೆಸಿದ ಮಾತಾ ಪಿತೃವೂ ನಾನೆ. ನಿನಗೊಬ್ಬನಿಗೇ ಅಲ್ಲ; ಮಹಾಭಾರತದ ಕಥೆಯ ಎಲ್ಲ ಪಾತ್ರಗಳನ್ನೂ, ಕಥೆಯಲ್ಲಿ ನನ್ನ ಅನುಕೂಲಕ್ಕಾಗಿ ದೇವರುಗಳೆನಿಸಿ ಕೊಂಡ ಗಣೇಶ, ಕೃಷ್ಣ, ಹನುಮಂತ ಮೊದಲಾದವರನ್ನೂ ಸೇರಿಸಿಬಿಟ್ಟಿದ್ದೇನೆ. ಎಲ್ಲಕ್ಕೂ ಹೆಚ್ಚಾಗಿ, ನನ್ನ ಪಾತ್ರವನ್ನೇ ನನ್ನ ಕಥೆಯಲ್ಲಿ ಹುಟ್ಟಿಸಿ, ನನಗೆ ನಾನೇ ‘ಜನ್ಮ ದಾತ’ ನಾಗಿದ್ದೇನೆ! ಈ ಕಾರಣದಿಂದಲೇ ಮಹಾಭಾರತವನ್ನು ಮೊದಲಿನಿಂದ ಕೊನೆಯವರೆಗೂ ಓದುಗರು ನಂಬಿಕೊಂಡಿದ್ದಾರೆ. ನಿನ್ನ ಪಾತ್ರವೂ, ನನ್ನ ಕಥೆಯ ಎಲ್ಲ ಪಾತ್ರಗಳೂ, ಸನ್ನಿವೇಶಗಳೂ ಸಮಾಜದಲ್ಲಿ ಅಜರಾಮರವಾಗಿ ಉಳಿದಿರುವುದು ಆಕಾರಣದಿಂದಲೇ.

‘ಒಂದು ಊರಿನಲ್ಲಿ ರಾಜ, ರಾಣಿಯರಿದ್ದರು, ಅವರಿಗೆ ಸಮಯಕ್ಕೆ ಸರಿಯಾಗಿ ಲಕ್ಷಣವಾದ ಮಕ್ಕಳು ಹುಟ್ಟಿ, ಎಲ್ಲರೂ ಒಳ್ಳೆಯವರಾಗಿ ಬೆಳೆದು, ಯಾರೂ, ಯಾರ ಜೊತೆಯೂ ಜಗಳವನ್ನಾಡದೆ ಸದಾ ಸುಖವಾಗಿದ್ದರು. ರಾಜ್ಯದಲ್ಲಿ ಯಾವಾಗಲೂ ಎಲ್ಲರೂ ನಗುನಗುತ್ತಾ, ಮಾದರಿ ಸಮಾಜವಾಗಿ ಬಾಳುತ್ತಿದ್ದರು’ (ಈ ಸಮಯಕ್ಕೆ ಪಾತ್ರಧಾರಿಗಳೆಲ್ಲರೂ ತೂಕಡಿಸಿ ಗೊರಕೆ ಹೊಡಯಲಾರಂಭಿಸಿರುತ್ತಾರೆ!) ಎಂದು ನಾನು ಕಥೆ ಬರೆದಿದ್ದರೆ ಓದುಗರಿರಲಿ, ಸಭಿಕರಿರಲಿ, ನನ್ನ ಪಾತ್ರಗಳೇ ನನ್ನ ಕಥೆಯನ್ನು ಕೇಳಲಾಗದೆ ನನ್ನ ಮುಂದೆಯೇ ತೂಕಡಿಸಿ ಗೊರಕೆ ಹೊಡೆದು ಬಿಡುತ್ತಿದ್ದರು. (ಈಗ ಎಲ್ಲ ಪಾತ್ರಧಾರಿಗಳೂ ಬೇಕಂತಲೇ ನಿದ್ದೆಬಂದವರ ಹಾಗೆ ನಟಿಸುತ್ತಿದ್ದರೋ ಎಂಬಂತೆ, ಎದ್ದು ಯಥಾ ಸ್ಥಿತಿಗೆ ಬರುತ್ತಾರೆ.)

(ಇಲ್ಲಿ ಸಭಿಕರು ತಮ್ಮ ಪ್ರಶ್ನೆಗಳನ್ನು ನೇರವಾಗಿಯೂ, ಯಾವುದಾದರೂ ಪಾತ್ರದ ಪರವಾಗಿಯಾದರೂ ಕೇಳಬಹುದು.)

ವ್ಯಾಸ: (ಪಾತ್ರಗಳ ಕಡೆಗೆಲ್ಲಾ ಒಂದು ಸಾರಿ ನೋಡಿ, ನಂತರ ಸಭಿಕರ ಕಡೆಗೆಲ್ಲಾ ನೋಡಿ) ಕರ್ಣ! ಒಟ್ಟಿನಲ್ಲಿ ಯೋಚನೆ ಮಾಡಿನೋಡು: ಕರ್ಣನು ಸಾವನ್ನಪ್ಪಿದರೂ, ಸೋಲಲಿಲ್ಲ; ಅವನು ದಾನ ಮಾಡಿದ್ದು ಕರ್ಣಕುಂಡಲಗಳನ್ನಲ್ಲ, ವಜ್ರ ಕವಚವನ್ನಲ್ಲ, ತೊಟ್ಟ ಬಾಣವನ್ನು ಮತ್ತೆ ತೊಡದ ಮಾತಲ್ಲ; ಹೆತ್ತ ತಾಯಿಗೇ ತನ್ನ ಜೀವವನ್ನು ವಾಪಸ್ಸು ಕೊಟ್ಟ ಅಪೂರ್ವ ಕುಮಾರ. ತನ್ನ ಪ್ರಾಣವನ್ನೇ ದಾನ ಮಾಡಿ, ತನ್ನ ತಮ್ಮನ ಕೈಯಲ್ಲೇ ಸಾಯಲು ಸಿಧ್ಧನಾದ ಅಜರಾಮರ. ಕರ್ಣಾ! ನೀನು ಸಾಯಲೇ ಇಲ್ಲ; ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ನೀನು ಈಗಲೂ, ಸಾವಿರಾರು ವರ್ಷಗಳಿಂದ ಓದುಗರ ಮನದಲ್ಲಿ ರಾರಾಜಿಸುತ್ತಿರುವ, ಸಾಹಿತ್ಯದ ಚರಿತ್ರೆಯಲ್ಲಿಯೇ ಸೂರ್ಯ ದೇವನಂತೆ ಪ್ರತಿಕ್ಷಣವೂ ಪ್ರಜ್ವಲಿಸುತ್ತಿರುವ ಏಕಮಾತ್ರ ವಿಭಿನ್ನ ಪಾತ್ರ.

ಯಾವುದೇ ಸಾಹಿತ್ಯದಲ್ಲಾಗಲೀ ಪಾತ್ರಗಳು ಪ್ರತಿದಿನವೂ ಓದುಗನೊಂದಿಗೆ ಮಾತನಾಡುತ್ತವೆ; ಘಟನೆಗಳೂ ಕೂಡ ಪ್ರತಿ ಓದುಗನ ಮನಸ್ಸಿನ ಕಣ್ಮುಂದೆ ಕುಣಿದು ನಡೆಯುತ್ತಿರುತ್ತವೆ. ಈ ರೀತಿಯಲ್ಲಿ ಸಾಹಿತಿಯೂ ತನ್ನ ಮನಸ್ಸಿಲ್ಲಿ, ಕಲ್ಪನೆಯ ಅಲೆಯಲ್ಲಿ ತೇಲಿಬಂದ ದೃಶ್ಯಗಳ ಉತ್ಸವವನ್ನು ಚೊಕ್ಕವಾಗಿ ಹಿಡಿದು ಕುಶಲತೆಯ ಬರಹದಿಂದ ಕಥೆ ಹೇಳಿ ಊಹೆಯ ಪ್ರಪಂಚವನ್ನು ನಿಜವೆನಿಸುವ ಕಥಾರಂಗದಲ್ಲಿ ಪ್ರತಿಷ್ಠಾಪನೆ ಮಾಡುತ್ತಾನೆ.

ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತುವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಯನ್ನು ಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವ ಸಮಯದಲ್ಲಿ ಲೇಖಕನಿಗೂ, ಓದುವ ಸಮಯದಲ್ಲಿ ಓದುಗರಿಗೂ ಮನರಂಜನೆಯನ್ನು ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.

ಅಂತ್ಯ ಪರದೆ ನಿಧಾನವಾಗಿ ಮುಚ್ಚುತ್ತದೆ

ಸದ್ಯದಲ್ಲೇ, ಈ ಧಾಟಿಯಲ್ಲಿ ಸಾಮೂಹಿಕ ಸಾಹಿತ್ಯ ರಚನೆಯ ಒಂದು ಮಾದರಿಯನ್ನೂ ಸಿದ್ಧಗೊಳಿಸುತ್ತಿದ್ದೇವೆ. ಇದರಲ್ಲಿ ಓದುಗರಾದ ನೀವೆಲ್ಲರೂ ಭಾಗವಹಿಸಬಹುದು. ನಿಮಗೆ ಆಸಕ್ತಿಯಿದ್ದಲ್ಲಿ, ಮೂರ್ತಿಯಾಡನೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ: [email protected]

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X