ಮತ್ತೆ ಗರ್ಜಿಸಿದ ಸಿಂಹ
ಬೆಂಗಳೂರು : ಎಂಟು ವರ್ಷಗಳ ದೀರ್ಘ ಅವಧಿಯ ಮೌನದ ನಂತರ ರಂಗನಿರ್ದೇಶಕ ಸಿ.ಆರ್. ಸಿಂಹ ಮತ್ತೆ ನಿರ್ದೇಶನದ ನೇಗಿಲು ಹಿಡಿದಿದ್ದಾರೆ. ಅವರನ್ನು ರಂಗಭಮಿಗೆ ಎಳೆದು ತಂದ ನಾಟಕ ಗಿರೀಶ್ ಕಾರ್ನಾಡ್‌ರ ‘ಅಗ್ನಿ ಮತ್ತು ಮಳೆ’.
ಸಿಂಹ ಅವರೀಗ ‘ವೇದಿಕೆ’ ರಂಗ ತಂಡದಲ್ಲಿ ಅಗ್ನಿ ಮತ್ತು ಮಳೆ ನಾಟಕವನ್ನು ಪ್ರದರ್ಶನಕ್ಕೆ ತಯಾರು ಮಾಡುತ್ತಿದ್ದಾರೆ. ಅಭ್ಯಾಸ ತೀವ್ರ ಗತಿಯಲ್ಲಿ ಸಾಗಿದೆ. ಯಾಕೆಂದರೆ ಜೂನ್ 19ರಿಂದ ಬೆಂಗಳೂರಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ಈ ನಾಟಕ ಪ್ರದರ್ಶನವನ್ನು ವೇದಿಕೆ ರಂಗ ತಂಡದವರು ಪ್ರದರ್ಶಿಸಲಿದ್ದಾರೆ.
ರಂಗಭೂಮಿ ಕಲಾವಿದನಾಗಿ ಕಾರ್ನಾಡರ ನಾಟಕ ‘ಅಗ್ನಿ ಮತ್ತು ಮಳೆ’ ಯನ್ನು ನಿರ್ದೇಶಿಸುವ ನನ್ನ ಕನಸು ಬಹು ಹಿಂದಿನದು. ಈಗ ಅದು ಕೈಗೂಡುತ್ತಿದೆ, ಖುಷಿಯಾಗುತ್ತಿದೆ ಎಂದು ತಮ್ಮ ಪುನರಾಗಮನದ ಬಗ್ಗೆ ಸಿಂಹ ಹೇಳುತ್ತಾರೆ. ಕನಸು ನನಸಾಗಲು ಇಷ್ಟೊಂದು ತಡವೇಕಾಯ್ತು ? ಎಂದು ಕೇಳಿದರೆ- ಸರಿಯಾದ ಉತ್ಸಾಹೀ ತಂಡ ಸಿಗಬೇಕಲ್ಲಾ , ಹೇಳಬೇಕೆಂದರೆ ಈಗ ಕಾಲ ಕೂಡಿ ಬಂದಿದೆ. 18ರಿಂದ 25ರೊಳಗಿನ ವಯಸ್ಸಿನ ಚುರುಕು ಕಲಾವಿದರ ದಂಡು ಸಿಕ್ಕಿದೆ. ಅವರ ಸಾಮರ್ಥ್ಯ, ಪ್ರತಿಭೆಗಳು ಜೂನ್19ರಂದು ಬೆಳಕಿಗೆ ಬರಲಿವೆ ಎನ್ನುತ್ತಾರೆ. ಸಿಂಹ ಹೇಳುವ ಹಾಗೆ, ಈ ನಾಟಕ ಮಹಾಭಾರತದ ಒಂದು ಸಣ್ಣ ತುಂಡು. ವರುಣದೇವನಿಗಾಗಿ ನಡೆಸಿದ ಏಳು ವರ್ಷಗಳ ಅವಧಿಯ ದೀರ್ಘ ತಪಸ್ಸು , ತ್ಯಾಗದ ಕಥೆ.
ಕನ್ನಡ ನಾಟಕವನ್ನು ಮೊದಲು ವಿದೇಶಕ್ಕೆ ಕೊಂಡು ಹೋದವರು
ರಂಗಭೂಮಿ ವಲಯದಲ್ಲಿ ಸಿ.ಆರ್. ಸಿಂಹ ಹೆಸರು ಚಿರ ಪರಿಚಿತ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹಲವು ನಾಟಕಗಳನ್ನು ನಿರ್ದೇಶಿಸಿ, ಪಾತ್ರಗಳಿಗೆ ತಾವೂ ಜೀವ ತುಂಬಿದವರು. ನರಸಿಂಹ ಅವರು ರಚಿಸಿದ ನಾಟಕ ಟಿ.ಪಿ. ಕೈಲಾಸಂ , ಸಿ.ಆರ್. ಸಿಂಹ ಅವರ ಏಕ ವ್ಯಕ್ತಿ ಪ್ರದರ್ಶನ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ವಿದೇಶಗಳಲ್ಲಿ ಪ್ರದರ್ಶಿತವಾದ ಪ್ರಥಮ ಕನ್ನಡ ನಾಟಕ ಎಂಬ ಹೆಗ್ಗಳಿಕೆಯಾಂದಿಗೆ ಈ ಏಕವ್ಯಕ್ತಿ ಪ್ರದರ್ಶನ ಇತಿಹಾಸ ನಿರ್ಮಿಸಿದೆ.
ಪ್ರಸ್ತು ತ ನಾಟಕಕ್ಕೆ ಉತ್ತಮ ಹಿನ್ನೆಲೆಯಿದೆ. ನಾಟಕದ ಪಾತ್ರಧಾರಿಗಳ ತಂಡ ಇರುವಷ್ಟೇ ಉತ್ತಮವಾಗಿ ರಂಗ ಸಜ್ಜಿಕೆ ಮತ್ತು ತಂತ್ರಗಾರಿಕೆಯಿರುತ್ತದೆ. ರಾಜು ಅನಂತ ಸ್ವಾಮಿ ಹಿನ್ನೆಲೆ ಸಂಗೀತ ಒದಗಿಸುತ್ತಾರೆ. ಋತ್ವಿಕ್ ಸಿಂಹ ಅವರು ಮುಖ್ಯ ಪಾತ್ರಧಾರಿ ಅರವಸುವಾಗಿ ವೇದಿಕೆ ಬರುತ್ತಾರೆ. ಅರ್ಚನಾ ಶ್ಯಾಮ್, ಸುಚಿತ್ರ ಅಲಕಾನಂದ್, ಕೀರ್ತಿ ಭಾನು, ಮತ್ತು ನಂದಕಿಶೋರ್‌ರನ್ನು ಒಳಗೊಂಡ ತಂಡ ಸದ್ಯಕ್ಕೆ ಜೂನ್ 19ನ್ನು ಎದುರುನೋಡುತ್ತಿದೆ.
ಇದರ ಜೊತೆಗೆ ವೇದಿಕೆ ತಂಡಕ್ಕೆ ಇನ್ನೊಂದು ಖುಷಿ. ವೇದಿಕೆ ರಂಗ ತಂಡ ಹುಟ್ಟಿ ಬರುವ ನವೆಂಬರ್‌ಗೆ ಹದಿನೆಂಟು ತುಂಬುತ್ತದೆ. ಆ ಖುಷಿಗೆ ಸಿ.ಆರ್. ಸಿಂಹ ಬರೆದ ‘ನೀನೊಬ್ಬ ಗಾಂಧಿ’ ಮತ್ತು ಋತ್ವಿಕ್ ಸಿಂಹ ಅನುವಾದಿಸಿದ ಪದ್ಮನಾಭನ್ ಅವರ ‘ಹಾರ್ವೆಸ್ಟ್ ’ ನಾಟಕ ಪ್ರದರ್ಶನ ಕಾರ್ಯಕ್ರಮಗಳು ವೇದಿಕೆ ಮುಂದಿವೆ.
ನಿಮಗೆ ಅಗ್ನಿ ಮತ್ತು ಮಳೆ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕಿದ್ದರೆ ಫೋನ್ ಎತ್ತಿಕೊಳ್ಳಿ. 98441-61407 ಅಥವಾ 6724323
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications