ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಜಿ.ಎಸ್‌.ಎಸ್‌. ಕಾವ್ಯದಲ್ಲಿ ವಿಡಂಬನೆಯ ಸೊಗಸು

By Staff
|
Google Oneindia Kannada News

*ಎಸ್‌.ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

Dr. G.S. Shivarudrappaಕನ್ನಡದ ಖ್ಯಾತ ಕವಿ ಪ್ರೊಫೆ ಸರ್‌ ಜಿ.ಎಸ್‌. ಶಿವರುದ್ರಪ್ಪ ಅವರ 5 ದಶಕಕ್ಕೂ ಹೆಚ್ಚಿನ ಅವಧಿಯ ಸಾಹಿತ್ಯ ಕೃಷಿಯ ಬಗ್ಗೆ ಆಲೋಚಕರು ಹಲವಾರು ದೃಷ್ಟಿಕೋನಗಳಿಂದ ತಮ್ಮ ತಮ್ಮ ವಿಚಾರ ಲಹರಿಗಳನ್ನು ಯಥೇಷ್ಟವಾಗಿ ಹರಿಬಿಟ್ಟಿದ್ದಾರೆ ; ನಾನು ಇಲ್ಲಿ ಅವರ ಕವನಗಳಲ್ಲಿ ವಿಡಂಬನೆಯ ಅಂಶಗಳನ್ನೂ , ವಿಡಂಬನಾತ್ಮಕ ಕವನಗಳಲ್ಲಿ ಹಾಸ್ಯಪ್ರಜ್ಞೆಯ ಸಿದ್ಧಿಯನ್ನೂ ಗುರುತಿಸಲು ಪ್ರಯತ್ನಿಸುತ್ತೇನೆ.

ಮೊದಲು, ನಗುವಿನ ಚಹರೆಗಳನ್ನು ಪಟ್ಟಿ ಮಾಡೋಣ, ಬೇರೆ ಕವಿಗಳ ಬರಹಗಳಿಂದ ಉದಾಹರಣೆಯ ಮುತ್ತುಗಳನ್ನು ಪೋಣಿಸುತ್ತಾ : ನಗುವುದು ಸಹಜ ಧರ್ಮ. ಸರಿಯಾಗಿ, ಸಾಮಾನ್ಯವಾಗಿ ಇರಬೇಕಾದ ಹಾಗೆ ಇಲ್ಲವೆಂದು ತೋರಿದಾಗ ನೋಡಿದವರಿಗೆ, ಕೇಳಿದವರಿಗೆ ಉಕ್ಕಿ ಬರುವ ಪ್ರತಿಕ್ರಿಯೆ ನಗು. ಹಾಗೆ ಏನೋ ಊನವಿದೆ ಎಂದು ಎತ್ತಿ ತೋರಿಸುವುದೇ ‘ಅಣಕು’. ಸಾಧಾರಣವಾಗಿ ‘ಅಣಕು’ ಕೇಳುಗರನ್ನ, ನೋಡುಗರನ್ನ, ಓದುಗರನ್ನ ಕೆಲಕಾಲ ನಗಿಸಿ, ಸಂತೋಷಪಡಿಸಿ ಮರೆಯಾಗುತ್ತದೆ. ಇಂಥದರ ಬಗ್ಗೆ ತಿರಸ್ಕಾರವಾಗಲೀ ಅವಹೇಳನವಾಗಲೀ ಏನೂ ಇರುವುದಿಲ್ಲ .

ಚುಚ್ಚು ಭಾವನೆ ಏನೂ ಇರದ ಇಂಥ ‘ಅಣಕವಾಡು’ (ಪ್ಯಾರಡಿ) ಎಲ್ಲ ಭಾಷೆಗಳ ಸಾಹಿತ್ಯದಲ್ಲಿ ಸಾಮಾನ್ಯ. ‘ ವ್ಯಂಗ್ಯ ’ ಇದಕ್ಕೆ ಭಿನ್ನ . ‘ಗುಣ’ಗಳ ಜೊತೆಗೆ ‘ದೋಷ’ವನ್ನೂ ಎತ್ತಿ ತೋರಿಸುವ ಪ್ರವೃತ್ತಿ ಇದರ ಲಕ್ಷಣ. (ಸಂಸ್ಕೃತದಲ್ಲಿ ‘ ವ್ಯಂಗ್ಯ’ ಎಂದರೆ ಬೇರೊಂದು ಅರ್ಥ ಇದೆ. ಅಲ್ಲಿ , ಮೇಲುನೋಟಕ್ಕೆ ತೋರುವುದಲ್ಲದೆ, ಇನ್ನೊಂದನ್ನೂ ಸೂಚಿಸುವುದೇ ವ್ಯಂಗ್ಯ! ಆದರೆ, ಕನ್ನಡದಲ್ಲಿ ‘ ವ್ಯಂಗ್ಯ’ಕ್ಕೆ ಬಳಕೆಯಲ್ಲಿರುವ ಅರ್ಥ ಇಂಗ್ಲೀಷಿನ ‘ಐರನಿ’ ಎಂಬಂತೆ !). ನಾವು ಇತರರಲ್ಲಿ , (ಕೆಲವೊಮ್ಮೆ ನಮ್ಮಲ್ಲಿಯೇ) ಕಾಣುವ ತಪ್ಪನ್ನೋ ಕೊರತೆಯನ್ನೋ ಭೂತಗನ್ನಡಿ ಹಿಡಿದು ನೋಡಿ, ‘ಇದು ಸರಿಯೇ?’ಎಂದು ಪ್ರಶ್ನಿಸುವ ದಾರಿ ‘ವ್ಯಂಗ್ಯ’ದ್ದು .

ಈ ದಾರಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಆ ಓರೆಕೋರೆಗಳನ್ನು ಬಣ್ಣ ಹಚ್ಚಿ ಸಿಂಗರಿಸಿ, ಬೇಕಿದ್ದರೆ ಹಿಗ್ಗಿಸಿ, ತಪ್ಪು ಮಾಡಿದವರನ್ನು ನಗೆಪಾಟಲಿಗೆ ಗುರಿಪಡಿಸಿ, ಕೆಲವೊಮ್ಮೆ ಚುಚ್ಚಿ , ಕೊಚ್ಚಿ ತಮ್ಮ ತಪ್ಪನ್ನು ಅವರು ತಿದ್ದಿ ಕೊಳ್ಳುವ ಹಾಗೆ ಮಾಡುವುದು- ‘ವಿಡಂಬನೆ’ಯ ಗುರಿ. ಇಂಗ್ಲೀಷಿನ ‘ಸೆಟೈರ್‌’ ಇದಕ್ಕೆ ಪರ್ಯಾಯ ಪದ. ಬರೀ ದೋಷಾರೋಪಣೆಯೇ ಅಲ್ಲ , ಮೂದಲಿಕೆಯಷ್ಟೇ ಅಲ್ಲ , ಸತ್ಯನಿಷ್ಠೆ , ಪರಿಹಾರದ ಸೂಚನೆ ವಿಡಂಬನೆಯ ಗುಣಗ್ರಾಮಗಳು !

ಇಂಗ್ಲೀಷಿನ ‘ಸೆಟೈರ್‌’ ಕನ್ನಡದಲ್ಲಿ ‘ಶತಾರಿ’ ಆಯಿತು. ವಿಡಂಬಿಸಿದವನಿಗೆ/ಳಿಗೆ ‘ಶತ’ ಅಂದರೆ ನೂರು ಜನ, ‘ಅರಿ’ ಎಂದರೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಎಂಬ ಸೂಚ್ಯಾರ್ಥ ಈ ಪದದಲ್ಲಿ ಅಡಗಿರುವುದನ್ನು ಗಮನಿಸಿ. ‘ಶತಾರಿ’ಯನ್ನು ಬಳಕೆಗೆ ತಂದ ಜಿ.ಪಿ.ರಾಜರತ್ನಂ ಅವರ ಈ ಪದ್ಯ ನೆನಪಿಸಿಕೊಳ್ಳಿ:

‘ಕಳ್ಪು, ಕಾವ್ಯದ ಮಸಿಯ ಕುಡಿಕೆಯ
ಟಿಲ್ಟು ಮಾಡುವ ಮೊದಲು ಹಾವಿನ
ಬೆಲ್ಟು ಹಾಕಿದ ಗಣಪನನು ಹಾಡುವುದು ನಮ್ಮವರ।
ಫಾಲ್ಟು, ಮೀರಿದರೆ ಇದನು ಸಿವಿಯರ್‌
ಜೋಲ್ಟು ತಪ್ಪದು, ಸತ್ಯ, ಥಂಡರ್‌
ಬೋಲ್ಟು ಬಿದ್ದಂತೆಂದು ; ದೇರ್ಫೋರ್‌ ಗಣಪತಿಯ ನೆನೆವೆ।।’

ಓದಲು ಸ್ವಲ್ಪ ಕಷ್ಟವಾಯಿತೇ ? ಈಗ ನೋಡಿ :

Cult ಉ ಕಾಬ್ಯದ ಮಸಿಯ ಕುಡಿಕೆಯ
Tilt ಉ ಮಾಡುವ ಮೊದಲು ಹಾವಿನ
Belt ಉ ಹಾಕಿದ ಗಣಪನನು ಹಾಡುವುದು ನಮ್ಮವರ ।
Fault ಉ, ಮೀರಿದರೆ ಇದನು Severe
Jolt ಉ ತಪ್ಪದು, ಸತ್ಯ! Thunder
Bolt ಉ ಬಿದ್ದಂತೆ ಎಂದು, Therefore
ಗಣಪತಿಯ ನೆನೆವೆ!
(ಜಿ.ಪಿ.ರಾಜರತ್ನಂ, ಪುರುಷ ಸರಸ್ವತಿ)

ಇಲ್ಲಿ , ಸ್ವಲ್ಪ ಪೂರ್ವಕಥೆ ಹೇಳಿದರೆ ಉತ್ತಮವೇನೋ : ಹಿಂದೆ, ಒಂದಾನೊಂದು ಕಾಲದಲ್ಲಿ , ಕನ್ನಡದಲ್ಲಿ ಕಾವ್ಯ ರಚನೆ ಹೇಗಿತ್ತು ಎಂದರೆ, ಸಂಪ್ರದಾಯ ಶರಣತೆ ಕಣ್ಣಿದ್ದೂ ಕವಿಗಳನ್ನು ಕುರುಡಾಗಿಸಿತ್ತು ; ಪುಂಖಾನುಪುಂಖವಾಗಿ ಕ್ಲಿಷ್ಟ ಸಂಸ್ಕೃತ ಪದಗಳನ್ನ ‘ಮಣಿ- ಪ್ರವಾಳ’ ಶೈಲಿಯಲ್ಲಿ ಕೋದು, ಪೋಣಿಸಿ, ಔಷಧಿಗೇನೋ ಎಂಬಂತೆ ಅಲ್ಲೊಂದು ಇಲ್ಲೊಂದು ಕನ್ನಡ ಪದ (ಕ್ರಿಯಾಪದ?)ವನ್ನು ಬಳಸಿ, ಕಾವ್ಯವೆಂದರೆ ಇದೇನೇ ಎಂಬ ಭ್ರಮೆಯಲ್ಲಿ ಕನ್ನಡಿಗರು ಮುಳುಗಿದ್ದ ಕಾಲ ಒಂದಿತ್ತು ! ನವೋದಯ ಕವಿಗಳಿಗೂ ಈ ಶೈಲಿಯಿಂದ ತಪ್ಪಿಸಿಕೊಳ್ಳಲು ಕಷ್ಟವಾಗುತ್ತಿತ್ತು . ಉದಾಹರಣೆಗೆ ನೋಡಿ :

ಸುದೀರ್ಘ ಪ್ರಾಲಂಭ ಪ್ರಸೃತ ವಿಟಪಂ ಪಾದಮಹೋ।
ಪ್ರಸೂನ ಪ್ರದ್ಯೋತಂ ಗಗನ ಪರಿಕರ್ಮ ಪ್ರಚಲಿತಂ ।
ಸರಂ ಜ್ಯೋತಿಯ್ಯಾಸನ ಸುಪಿಹಿತಂ ಪಾಲಕಮನಂ।
ವನಂ ನಮ್ಮಾತಿಥ್ಯಕ್ಕನುಮತಿಸಿ ಬಂದಂತಿದೆ, ಸಖ !।।

ಪ್ರಾಸಕ್ಕೆ ಮಹತ್ವ ಅತಿಯಾಗಿ ಇತ್ತು ; ಛಂದಸ್ಸಿನ ಕಟ್ಟಲೆ ಬಿಗಿಯಾಗಿ ಉಸಿರು ಕಟ್ಟುತ್ತಿತ್ತು !


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X