ಸುರಪುರ ಬಿಜೆಪಿ ಅಭ್ಯರ್ಥಿ ಪರ ನನ್ನ ಹೆಸರಿನಲ್ಲಿ ಸುಳ್ಳು ಹೇಳಿ ಮತಯಾಚನೆ: ಸಿದ್ದರಾಮಯ್ಯ
ಬೆಂಗಳೂರು, ಮೇ 01: ಕರ್ನಾಟಕ ಯಾದಗಿರಿ ಸುರಪುರ ವಿಧಾನಸಭಾ ಉಪ ಚುನಾವಣೆ ನಡೆಯಲಿದೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ರಾಜೂಗೌಡಗೆ ನನ್ನ ಬೆಂಬಲ ಇದೆ ಎಂದು ಸುಳ್ಳು ಹೇಳಿ ಮತ ಕೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿ ಕಾರಿದರು.
ಸುರಪುರ ವಿಧಾನಸಭೆ ಮತ್ತು ರಾಯಚೂರು ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ನಡೆದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜೂಗೌಡ ಅವರಿಗೆ ನನ್ನ (ಸಿದ್ದರಾಮಯ್ಯ) ಬೆಂಬಲ ಇದೆ ಎಂದು ಹೇಳಿ ಜನರ ಬಳಿ ಮತ ಕೇಳುತ್ತಿದ್ದಾರೆ ಎನ್ನುವ ಸಂಗತಿ ನನ್ನ ಕಿವಿಗೆ ಬಿದ್ದಿದೆ. ಇದು ಅಪ್ಪಟ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

ನೀರು ಕುಡಿದಷ್ಟೇ ಸಲೀಸಾಗಿ ಸುಳ್ಳು ಹೇಳುತ್ತಾರೆ
ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಕೇಂದ್ರ ಗೃಹ ಸಚಿವ ಅಮತ್ ಶಾ ಹಾಗೂ ರಾಜೂಗೌಡನವರೆಗೂ ಎಲ್ಲರೂ ಸುಳ್ಳುಗಳ ಸರದಾರರು. ಮನುಷ್ಯರು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಸುಳ್ಳುಗಳನ್ನು ಇವರು ನೀರು ಕುಡಿದಷ್ಟೆ ಸಲೀಸಾಗಿ ಹೇಳುತ್ತಾರೆ. ಇವರ ಸುಳ್ಳುಗಳನ್ನು ನಂಬಿ ಹತ್ತತ್ತು ವರ್ಷ ಮೋಸ ಹೋಗಿದ್ದು ಸಾಕು. ಇನ್ನೂ ಎಷ್ಟು ವರ್ಷ ಕೇಂದ್ರ ಬಿಜೆಪಿಯ ಸುಳ್ಳುಗಳಿಗೆ ಮೋಸ ಹೋಗುತ್ತೀರಿ ಎಂದು ಹೇಳಿದರು.
ಲೋಕಸಭೆಯಲ್ಲೂ ಬಿಜೆಪಿಗೆ ಸೋಲು: ಸಿಎಂ ಭವಿಷ್ಯ
ಕರ್ನಾಟಕ ಲೋಕಸಭಾ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಕೇಂದ್ರ ಬಿಜೆಪಿ ನಾಯಕರೇ ಮಾಡಿರುವ ಸಮೀಕ್ಷೆಯಲ್ಲೇ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಮಾಹಿತಿ ಬಹಿರಂಗವಾಗಿದೆ.

ಬಿಜೆಪಿ 200 ಸೀಟು ಗೆದ್ದರೆ ಹೆಚ್ಚು
ಅವರೆ ನಡೆಸಿರುವ ಸಮೀಕ್ಷೆ ಪ್ರಕಾರ ರಾಷ್ಟ್ರಮಟ್ಟದಲ್ಲಿ ಬಿಜೆಪಿ 200 ಸೀಟು ಗೆದ್ದರೆ ಹೆಚ್ಚು ಎನ್ನುವಂತಹ ಸ್ಥಿತಿ ಇದೆ. ಹೀಗಾಗಿ ಪ್ರಧಾನಿ ಮೋದಿಯವರು ಸೋಲಿಗೆ ಹೆದರಿದ್ದಾರೆ ಎಂದು ಅವರು ಆರೋಪಿಸಿದರು. ಕೇಂದ್ರ ಗೃಹ ಸಚಿವ ರಾಜುಗೌಡ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಈ ಸುಳ್ಳುಗಳಿಗೆ ಮರುಳಾಗಬೇಡಿ ಎಂದರು.
ರಾಯಚೂರು ಲೋಕಸಭೆ ಮತ್ತು ಸುರಪುರ ವಿಧಾನಸಭೆ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಬೇಕು ಎನ್ನುವುದು ನನ್ನ ಗುರಿ. ನನ್ನ ಗುರಿಯನ್ನು ನೀವೆಲ್ಲಾ ನಿಮ್ಮ ಗುರಿಯಾಗಿ ತೆಗೆದುಕೊಂಡು, ನನ್ನ ಕೈಗಳಿಗೆ ಬಲತುಂಬಿ ಎಂದು ಕೈಮುಗಿದು ಮನವಿ ಮಾಡುತ್ತೇನೆ ಎಂದು ಸುರಪುರ ಮತದಾರಲ್ಲಿ ಅವರು ಮನವಿ ಮಾಡಿದರು.
ಸಿದ್ದರಾಮಯ್ಯ ಅವರು ಆಶೀರ್ವಾದ ಮಾಡುವಂತೆ ಕೋರುತ್ತಿದ್ದಂತೆ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಸೇರಿದಂತೆ ಮತದಾರರು ಸಿಎಂ ಪರ ಘೋಷಣೆ ಕೂಗಿದರು.












Click it and Unblock the Notifications