Yadagiri: ಯಾದಗಿರಿಯ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಸ್ಕ್ಯಾನಿಂಗ್ ಸಮಸ್ಯೆ: ಸಾಲುಗಟ್ಟಿ ನಿಂತ ರೋಗಿಗಳು..
ಯಾದಗಿರಿ ಜುಲೈ 2: ಸ್ಕ್ಯಾನಿಂಗ್ ಸಮಸ್ಯೆ ನಾಳೆ ಬನ್ನಿ... ಎಂದು ಯಾದಗಿರಿಯ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಪದೇ ಪದೇ ಹೇಳಿ ಅಲೆದಾಡಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ರೋಗಿಗಳು ಸ್ಕ್ಯಾನಿಂಗ್ ಸೆಂಟರ್ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಕಾದ ಬಳಿಕ ಸ್ನ್ಯಾನಿಂಗ್ ಸಮಸ್ಯೆಯಿಂದಾಗಿ ವಾಪಾಸ್ಸಾಗುತ್ತಿರುವುದು ಕಂಡು ಬಂದಿದೆ. ಯಾದಗಿರಿಯ ಜಿಲ್ಲಾಸ್ಪತ್ರೆಯನ್ನು ಹೊಸದಾಗಿ ನಿರ್ಮಾಣ ಮಾಡಲಾದರೂ ಸಹ ಹಳೆಯ ಆಸ್ಪತ್ರೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲೂ ಸ್ಕ್ಯಾನಿಂಗ್‌ಗಾಗಿ ರೋಗಿಗಳು ಹೊಸ ಆಸ್ಪತ್ರೆಯಿಂದ ಹಳೆ ಆಸ್ಪತ್ರೆಗೆ ಅಲೆದಾಡಬೇಕಾಗಿದೆ.

ಮೊದಲು ಹೊಸ ಆಸ್ಪತ್ರೆಯಲ್ಲಿ ವೈದ್ಯರ ಬಳಿ ಚೀಟಿ ಬರೆಸಿಕೊಳ್ಳಬೇಕು. ನಂತರ ಹಳೆಯ ಆಸ್ಪತ್ರೆಯಿಂದ ಹೊಸ ಜಿಲ್ಲಾಸ್ಪತ್ರೆಗೆ ಸರಿಸುಮಾರು ಎಂಟು ಕಿ.ಮೀ ದೂರ ಹೋಗಬೇಕು. ಸ್ಕ್ಯಾನಿಂಗ್‌ಗಾಗಿ ರೋಗಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅದರಲ್ಲೂ ಸುಮಾರು ಎಂಟು ಕಿ.ಮೀ ದೂರದಲ್ಲಿ ಅಲೆದಾಡಬೇಕು.
ಸ್ಕ್ಯಾನಿಂಗಾದ್ರೂ ಸಲೀಸಾಗಿ ಆಗುತ್ತೆ ಅಂದುಕೊಂಡರೆ ಅಲ್ಲೂ ಕೂಟ ನೂರೆಂಟು ಸಮಸ್ಯೆಗಳನ್ನು ಹೇಳಿ ರೋಗಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಕೆಲವೊಮ್ಮೆ ಮಷೀನ್ ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತದೆ. ಇದರಿಂದಾಗಿ ರೋಗಿಗಳನ್ನು ಗಂಟೆಗಟ್ಟಲೆ ಕಾಯಿಸಿ ವಾಪಾಸ್ ಕಳುಹಿಸಲಾಗುತ್ತದೆ.

ಮರು ದಿನ ರೋಗಿಗಳನ್ನು ಕರೆದುಕೊಂಡು ಬಂದ ಸಂಬಂಧಕರು, ಮಕ್ಕಳು, ವಯಸ್ಸಾದವರು ಆಸ್ಪತ್ರೆ ಮುಂದೆ ಗಂಟೆಗಟ್ಟಲೆ ಕಾಯಬೇಕು. ಮತ್ತೊಂದು ಕಥೆ ಅಂದರೆ ಇಲ್ಲಿರುವ ಸ್ಕ್ಯಾನಿಂಗ್ ಮಾಡುವ ಸಿಬ್ಬಂದಿ ರಜೆ ತೆಗೆದುಕೊಂಡರೆ ಮುಗಿತು ಕಥೆ. ಇದರಿಂದ ಸ್ಕ್ಯಾನಿಂಗ್ ಮಾಡುವುದು ಕೂಡ ಬಂದ್ ಆಗಿ ಬಿಡುತ್ತದೆ. ಹೀಗಾಗಿ ನಿತ್ಯ ಹೆಚ್ಚಿನ ಸಂಜ್ಯೆಯಲ್ಲಿ ರೋಗಿಗಳು ವೈದ್ಯರಿಗಿಂತ ಸ್ಕ್ಯಾನಿಂಗ್ ಸೆಂಟರ್ ಮುಂದೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಚೀಟಿ ಬರೆದುಕೊಟ್ಟು ಮೂರು ದಿನ ಕಳೆದ ಬಳಿಕವೂ ಸ್ಕ್ಯಾನಿಂಗ್ ಮಾಡಿಸುವುದು ಕಷ್ಟವಾಗಿದೆ.
ಸ್ಕ್ಯಾನಿಂಗ್ ಬಂದ್ ಆದರೆ ರೋಗಿಗಳು ಎಂಟು ಕಿಲೋ ಮೀಟರ್ ಬಂದು ವಾಪಸ್ ಹೋಗಬೇಕು. ಇದರಿಂದ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಸಿಬ್ಬಂದಿ ವಾಪಸ್ ಬಂದಾಗ ಹಾಗೂ ಸ್ಕ್ಯಾನಿಂಗ್ ಸರಿಯಾಗಿ ಕೆಲಸ ಮಾಡಿದಾಗ ರೋಗಿಗಳ ಸಂಖ್ಯೆ ಸೆಂಟರ್ ಬಳಿ ಹೆಚ್ಚಾಗಿರುತ್ತದೆ. ಗಂಟೆಗಟ್ಟಲೆ ಕಾದ ಬಳಿಕ ಸ್ಕ್ಯಾನಿಂಗ್ ಮಾಡಲಾಗುತ್ತದೆ.
ಕೆಲವೊಮ್ಮೆ ನಿತ್ಯ ಸ್ಕ್ಯಾನಿಂಗ್ ಸೆಂಟರ್ ಬಳಿ ಬಂದು ಹೋಗಬೇಕಾದ ಸ್ಥಿತಿ ಇದ್ದರೂ ಇಲ್ಲಿನ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ರೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರೋಗಿಯೊಬ್ಬರು, 'ಮೂರು ದಿನಗಳ ಹಿಂದೆ ನಾನು ಸ್ಕ್ಯಾನಿಂಗ್ ಮಾಡಿಸಲು ಬಂದಿದ್ದೆ. ಈಗಲೂ ನಿತ್ಯ ಬರುತ್ತಿದ್ದೇನೆ ಆದರೆ ಸ್ಕ್ಯಾನಿಂಗ್ ಸಿಬ್ಬಂದಿ ದಿನಕ್ಕೊಂದು ಸಮಸ್ಯೆ ಹೇಳಿ ಕಳುಹಿಸುತ್ತಿದ್ದಾರೆ. ಮೂರು ದಿನ ಕಳೆದರೂ ಸ್ಕ್ಯಾನಿಂಗ್ ಆಗುತ್ತಿಲ್ಲ. ಮಕ್ಕಳು, ವಯಸ್ಸಾದವರು, ಗರ್ಭಿಣಿ ಮಹಿಳೆಯರು ನಿತ್ಯ ಪರದಾಡುವಂತಾಗಿದೆ' ಎಂದು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಬಡವರಿಗಾಗಿ ತೆರೆದ ಇಂತಹ ಜಿಲ್ಲಾಸ್ಪತ್ರೆಗಳು ಬಡವರ ರಕ್ತ ಹೀರುತ್ತಿರುವುದು ಸುಳ್ಳಲ್ಲ.












Click it and Unblock the Notifications