Get Updates
Get notified of breaking news, exclusive insights, and must-see stories!

Yadgir elections: ‘ಕೈ’ ಭದ್ರಕೋಟೆ ಯಾದಗಿರಿಯಲ್ಲಿ ಕಮಲದ ಬಾವುಟ; ಯಾದಗಿರಿಯನ್ನು ಮತ್ತೆ ವಶಪಡಿಸಿಕೊಳ್ಳುತ್ತಾ ಕಾಂಗ್ರೆಸ್‌?

ಯಾದಗಿರಿ.. 2009ರಲ್ಲಿ ಕರ್ನಾಟಕದಲ್ಲಿ ಉದಯವಾದ ನೂತನ ಜಿಲ್ಲೆ.. ಅವಿಭಜಿತ ಕಲಬುರಗಿ ಜಿಲ್ಲೆಯಿಂದ ಹೊರಬಂದು ಕರ್ನಾಟಕದ 30ನೇ ಜಿಲ್ಲೆಯಾಗಿ ರಚನೆಯಾಯಿತು. ಈ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ ಅಂದರೆ ಯಾದಗಿರಿ ವಿಧಾನಸಭಾ ಕ್ಷೇತ್ರ. ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಈ ಕ್ಷೇತ್ರ ಬರುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜಕೀಯವಾಗಿ ಮಹತ್ವ ಹೊಂದಿದ ಕ್ಷೇತ್ರವಾಗಿದೆ. ಮೊದಲು ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಕ್ಷೇತ್ರ ಸದ್ಯ ಬಿಜೆಪಿ ತೆಕ್ಕೆಯಲ್ಲಿದ್ದು, ಇಲ್ಲಿ ಜೆಡಿಎಸ್‌ ಅಷ್ಟಕ್ಕಷ್ಟೇ.

ಈ ಕ್ಷೇತ್ರದಲ್ಲಿ ಭೀಮಾ ನದಿ ಹರಿದು ಹೋಗಿದ್ದು, ಪ್ರಮುಖವಾಗಿ ತೊಗರಿ ಹಾಗೂ ಭತ್ತವನ್ನು ಬೆಳೆಯಲಾಗುತ್ತದೆ. ಅದಕ್ಕಾಗಿಯೇ ಯಾದಗಿರಿ ಜಿಲ್ಲೆಯನ್ನು ತೊಗರಿಯ ನಾಡು ಎಂದು ಕರೆಯುತ್ತಾರೆ. ಸಿಮೆಂಟ್‌, ಬಟ್ಟೆ, ಲೇಥರ್‌ ಮತ್ತು ಕೈಗಾರಿಕೆಗೆ ಅಗತ್ಯವಿರುವ ರಾಸಾಯನಿಕಗಳ ತಯಾರಿಕೆಗೆ ಹೆಸರುವಾಸಿಯಾಗಿದ್ದು, ಕರ್ನಾಟಕದ ಪ್ರಮುಖ ಕೈಗಾರಿಕಾ ಕ್ಷೇತ್ರವಾಗಿದೆ. ಯಾದಗಿರಿ ಐತಿಹಾಸಿಕವಾಗಿಯೂ ಪ್ರಮುಖವಾಗಿದ್ದು, ಯಾದವ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಹಿಂದೆ ಯಾದವಗಿರಿ ಎಂದು ಕರೆಯಲ್ಪಡುತ್ತಿದ್ದ ನಗರ ಕಾಲ ಕ್ರಮೇಣ ಯಾದಗಿರಿಯಾಗಿ ಬದಲಾಯ್ತು. ನಗರದಲ್ಲಿ ದೊಡ್ಡ ಕೋಟೆಯಿದ್ದು, ಪಟ್ಟಣದ ಪಕ್ಕವೇ ಬಡಾ ತಲಾಬ್‌ ಎಂಬ ಬೃಹತ್‌ ಕೆರೆ ಕೂಡ ಇದೆ. ಕ್ಷೇತ್ರದ ತುಂಬಾ ಹರಿಯುವ ಭೀಮಾ ನದಿ ಕೃಷಿಗೆ ಪೂರಕವಾಗಿದೆ.

yadagir constituency map

ಇದೇ ಕ್ಷೇತ್ರ ಜಿಲ್ಲಾ ಕೇಂದ್ರವಾಗಿರುವ ಕಾರಣ ಇಲ್ಲಿಯೇ ಮೆಡಿಕಲ್‌ ಕಾಲೇಜು ಇದೆ. ಈ ಕ್ಷೇತ್ರದಲ್ಲಿ 1967ರಿಂದಲೂ ಎರಡು ಕುಟುಂಬಗಳದ್ದೇ ಪ್ರಾಬಲ್ಯ ಇದೆ. ಮುದ್ನಾಳ್‌ ಕುಟುಂಬ ಹಾಗೂ ಮಾಲಕರೆಡ್ಡಿ ನಡುವೆಯೇ ಕ್ಷೇತ್ರದಲ್ಲಿ ಪೈಪೋಟಿ ಇದೆ.

ಕ್ಷೇತ್ರದ ರಾಜಕೀಯ ಹಿನ್ನೆಲೆ

ಯಾದಗಿರಿ ಕ್ಷೇತ್ರಕ್ಕೆ ಇದುವರೆಗೂ 15 ಚುನಾವಣೆಗಳು ನಡೆದಿದ್ದು, 7 ಬಾರಿ ಕಾಂಗ್ರೆಸ್‌ ಗೆದ್ದಿದ್ದರೆ, 5 ಬಾರಿ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 2 ಬಾರಿ ಜನತಾ ಪಕ್ಷ ಗೆದ್ದಿದ್ದು, ಕಳೆದ ಬಾರಿ ಇಲ್ಲಿ ಬಿಜೆಪಿ ಖಾತೆ ತೆರೆದಿದೆ. ಯಾದಗಿರಿಯಿಂದ 5 ಬಾರಿ ಗೆಲುವಿನ ಸವಿ ಕಂಡಿದ್ದ ಕಾಂಗ್ರೆಸ್‌ನ ಡಾ ಎಬಿ ಮಾಲಕರೆಡ್ಡಿ ಅವರು ಸದ್ಯ ಕಾಂಗ್ರೆಸ್‌ ಬೇಡ ಅಂತಾ ಬಿಜೆಪಿಗೆ ಬಂದಿದ್ದಾರೆ. ಇವರು 1989, 1994, 1999, 2008 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಕಂಡಿದ್ದರು.

bjp jds congress logos

ಸದ್ಯ ಶಾಸಕರಾಗಿರುವ ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ್‌ ಅವರು, ಇದೇ ಕ್ಷೇತ್ರದಲ್ಲಿ ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಿಶ್ವನಾಥ್‌ ರೆಡ್ಡಿ ಮುದ್ನಾಳ್‌ ಅವರ ಪುತ್ರರಾಗಿದ್ದಾರೆ. ವಿಶ್ವನಾಥ್‌ ರೆಡ್ಡಿ ಮುದ್ನಾಳ್‌ ಅವರು 1967, 1972, 1983, 1985ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಸ್ವತಂತ್ರವಾಗಿ ಆಯ್ಕೆಯಾಗಿದ್ದರೆ, ಎರಡು ಬಾರಿ ಜನತಾ ಪಕ್ಷದ ಉರಿಯಾಳು ಆಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಮುದ್ನಾಳ್‌ ಕುಟುಂಬಕ್ಕೆ ಸೇರಿದ್ದ ವೀರ ಬಸವಂತ ರೆಡ್ಡಿ ಮುದ್ನಾಳ್‌ ಅವರು 2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಜಯ ಗಳಿಸಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವೆಂಕಟರೆಡ್ಡಿ ಮುದ್ನಾಳ್‌ ಗೆಲುವು ಸಾಧಿಸುವ ಮೂಲಕ ಬಿಜೆಪಿ ಇಲ್ಲಿ ಖಾತೆ ತೆರೆಯಿತು.

2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವೆಂಕಟರೆಡ್ಡಿ ಮುದ್ನಾಳ್‌ ಅವರು, 62,227 ಮತಗಳನ್ನು ಪಡೆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಬಿ ಮಾಲಕರೆಡ್ಡಿ ಅವರು 49,346 ಮತಗಳನ್ನು ಪಡೆದರು. ಈ ಮೂಲಕ ವೆಂಕಟರೆಡ್ಡಿ ಮುದ್ನಾಳ್‌ ಅವರು 12,881 ಮತಗಳ ಮೂಲಕ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ಗುರುಮಿಠಕಲ್‌ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿದ್ದ ವೆಂಕಟರೆಡ್ಡಿ ಗೆಲುವು ಕಾಣುವಲ್ಲಿ ವಿಫಲವಾಗಿದ್ದರು.

Yadgir Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ವೆಂಕಟ ರೆಡ್ಡಿ ಮುದ್ನಾಳ್ (ಬಿಜೆಪಿ ) 62,227 ಡಾ. ಎ ಬಿ ಮಾಲಕರೆಡ್ಡಿ (ಕಾಂಗ್ರೆಸ್ ) 49,346
2013 ಡಾ. ಎ ಬಿ ಮಾಲಕರೆಡ್ಡಿ (ಕಾಂಗ್ರೆಸ್ ) 40,434 ವೀರ್ ಬಸಂತರೆಡ್ಡಿ (ಕೆಜೆಪಿ ) 31,330
2008 ಡಾ. ಎ ಬಿ ಮಾಲಕರೆಡ್ಡಿ (ಕಾಂಗ್ರೆಸ್) 36,348 ಡಾ ವೀರಬಸ್ವಂತ್ ರೆಡ್ಡಿ ( ಬಿಜೆಪಿ) 31,812

ಟಿಕೆಟ್‌ ಆಕಾಂಕ್ಷಿಗಳು ಯಾರು?

ಯಾದಗಿರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಅವರಿಗೆ ಬಹುತೇಕ ಟಿಕೆಟ್‌ ಫಿಕ್ಸ್‌ ಆಗಿದೆ. ಆದರೂ, ಮಾಜಿ ಶಾಸಕ ಹಾಲಿ ಶಾಸಕರ ಸಹೋದರ ಡಾ ವೀರ ಬಸವರೆಡ್ಡಿ ಮುದ್ನಾಳ್‌ ಕೂಡ ಟಿಕೆಟ್‌ ರೇಸ್‌ನಲ್ಲಿದ್ದಾರೆ. ಅದಲ್ಲದೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲ ರೆಡ್ಡಿ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇನ್ನೂ, ಕಾಂಗ್ರೆಸ್‌ನಿಂದ 18 ಜನ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಚನ್ನಾರೆಡ್ಡಿ ಪಾಟೀಲ್‌ ತುನ್ನೂರು, ಮರಿಗೌಡ ಹುಲ್ಕಲ್‌, ಡಾ ಭೀಮಣ್ಣ ಮೇಟಿ ಮತ್ತು ಮಾಜಿ ಸಚಿವ ಹಾಗೂ ಸದ್ಯ ಬಿಜೆಪಿಯಲ್ಲಿರುವ ಮಾಲಕರೆಡ್ಡಿ ಅವರ ಪುತ್ರಿ ಡಾ ಅನುರಾಗ ಮಾಲಕರೆಡ್ಡಿ ಆಕಾಂಕ್ಷಿಗಳಾಗಿದ್ದಾರೆ. ಪಕ್ಕದ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದರೂ ಯಾದಗಿರಿಯಲ್ಲಿ ಜೆಡಿಎಸ್‌ನ ಯಾವುದೇ ಪ್ರಭಾವ ಕಂಡುಬರುವುದಿಲ್ಲ.

venkata reddy mudnal mla

ಜಾತಿ ಲೆಕ್ಕಾಚಾರ!

ಒಟ್ಟು 2,31,116 ಮತದಾರರ ಪೈಕಿ ಲಿಂಗಾಯತ ರೆಡ್ಡಿ ಜನಾಂಗದ್ದೇ ಈ ಕ್ಷೇತ್ರದಲ್ಲಿ ಪಾರುಪತ್ಯ. ಉಳಿದಂತೆ, ಲಿಂಗಾಯತರು, ಅಲ್ಪಸಂಖ್ಯಾತರು, ದಲಿತರು, ಹಾಲುಮತಸ್ಥರು, ಕಬ್ಬಲಿಗರು, ಪರಿಶಿಷ್ಟಪಂಗಡದ ಮತಗಳು ಅಭ್ಯರ್ಥಿಯ ಗೆಲುವಲ್ಲಿ ಮಹತ್ತರ ಪಾತ್ರ ವಹಿಸಲಿವೆ. ಜೊತೆಗೆ, ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವಿಶೇಷವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+