ಮತ ಎಣಿಕೆ ಕೇಂದ್ರಗಳಿಗೆ ಮುತ್ತಿಗೆ ಹಾಕಿದ ಟ್ರಂಪ್ ಬೆಂಬಲಿಗರು
ವಾಷಿಂಗ್ಟನ್, ನವೆಂಬರ್ 5: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಡೆಟ್ರಾಯಿಟ್ ಮತ್ತು ಫೀನಿಕ್ಸ್‌ಗಳಲ್ಲಿನ ಮತ ಎಣಿಕೆ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಗೆಲುವಿನ ಸನಿಹ ಸಾಗುತ್ತಿರುವಂತೆಯೇ, ಬ್ಯಾಲೆಟ್‌ಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
'ಮತ ಎಣಿಕೆ ನಿಲ್ಲಿಸಿ' ಎಂದು ಟ್ರಂಪ್ ಬೆಂಬಲಿಗರು ಡೆಟ್ರಾಯಿಟ್‌ನಲ್ಲಿ ಘೋಷಣೆ ಕೂಗಿದರೆ, ಫೀನಿಕ್ಸ್‌ನಲ್ಲಿ 'ಕದಿಯುವುದನ್ನು ನಿಲ್ಲಿಸಿ' ಎಂದು ಕೂಗಿದರು. ಮತದಾನ ಮತ್ತು ಮತಪತ್ರ ಎಣಿಕೆಯ ಪ್ರಕ್ರಿಯೆಗಳಲ್ಲಿ ಬಹುದೊಡ್ಡ ಸಮಸ್ಯೆಗಳಿವೆ. ಮುಖ್ಯವಾಗಿ ಮೇಲ್ ಇನ್ ಮತಗಳಲ್ಲಿ ಮೋಸ ನಡೆದಿದೆ. ಮತಗಳನ್ನು ಕದಿಯಲಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ವಿವಿಧ ರಾಜ್ಯಗಳಲ್ಲಿ ಮತ ಎಣಿಕೆ ವಿರುದ್ಧ ಕಾನೂನು ಸಮರವನ್ನೂ ಆರಂಭಿಸಿದ್ದಾರೆ. ಅದರ ಬೆನ್ನಲ್ಲೇ ಈ ಪ್ರತಿಭಟನೆಗಳು ನಡೆಯುತ್ತಿವೆ.
ಟ್ರಂಪ್ ಅವರ ಚಿತ್ರವಿರುವ ಮುಖವಾಡಗಳನ್ನು ತೊಟ್ಟ ಪ್ರತಿಭಟನಾಕಾರರು, ಮರಿಕೊಪಾ ಕೌಂಟಿಯ ಚುನಾವಣಾ ಕೇಂದ್ರದ ಪಾರ್ಕಿಂಗ್ ಸ್ಥಳದಲ್ಲಿ ಜಮಾಯಿಸಿದರು. ಅರಿಜೋನಾದಲ್ಲಿ ಟ್ರಂಪ್ ಎದುರು ಬೈಡೆನ್ ಜಯಗಳಿಸಿದ್ದಾರೆ ಎಂದು ಘೋಷಿಸಿದ ಫಾಕ್ಸ್ ನ್ಯೂಸ್ ವಿರುದ್ಧ ಕಿಡಿಕಾರಿದರು. ಫಾಕ್ಸ್ ನ್ಯೂಸ್ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ವರದಿಗಳನ್ನು ಬಿತ್ತರಿಸುತ್ತಿತ್ತು.

'ಈ ಚುನಾವಣೆಯನ್ನು ಕದಿಯಲು ನಾವು ಬಿಡುವುದಿಲ್ಲ' ಎಂದು ಅರಿಜೋನಾದ ಟ್ರಂಪ್ ಬೆಂಬಲಿಗರು ಘೋಷಣೆ ಕೂಗಿದರು.












Click it and Unblock the Notifications