"ನಕಲಿ ಪತ್ರಕರ್ತರು, ಯುಟೂಬ್ ಚಾನೆಲ್ ಗಳ ಮೇಲೆ ಸೂಕ್ತ ಕ್ರಮ"
ವಿಜಯಪುರ, ಡಿಸೆಂಬರ್ 7: ಸುಳ್ಳು ಮಾಹಿತಿ ಅಥವಾ ನೈಜತೆಯನ್ನು ತಿರುಚಿ ಸುದ್ದಿ ಬಿತ್ತರಿಸುವ ನಕಲಿ ಪತ್ರಕರ್ತರು ಹಾಗೂ ಅನುಮತಿ ಇಲ್ಲದ ಯುಟ್ಯೂಬ್ ಚಾನೆಲ್ ಗಳ ಮೇಲೆ ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನೆಟವರ್ಕ್ (ರೆಗ್ಯೂಲೆಶನ್) ಆಕ್ಟ್ 1995ರನ್ವಯ ಮೇಲ್ವಿಚಾರಣೆಗಾಗಿ ರಚಿಸಲಾದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, "ನಕಲಿ ಪತ್ರಕರ್ತರು ಹಾಗೂ ಯುಟ್ಯೂಬ್ ಚಾನೆಲ್ ಗಳ ಮೇಲೆ ನಿಗಾವಹಿಸಲಾಗುವುದು. ಕೆಲವು ನಕಲಿ ಪತ್ರಕರ್ತರು ಸರ್ಕಾರಿ ಸಭೆ-ಸಮಾರಂಭ ಹಾಗೂ ಸಚಿವರು ಸೇರಿದಂತೆ ಗಣ್ಯರ ಪತ್ರಿಕಾಗೋಷ್ಠಿಗೆ ಬರುತ್ತಿರುವುದು ಸರ್ಕಾರಿ ಕೆಲಸಕ್ಕೆ ಅಡೆ ತಡೆ ಉಂಟಾಗಿದೆ, ನೈಜ ಪತ್ರಕರ್ತರಿಗೂ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.
ನಕಲಿ ಪತ್ರಕರ್ತರ ಹಾವಳಿ ತಪ್ಪಿಸಲು ಅಧಿಕೃತ ಪತ್ರಕರ್ತರಿಗೆ ಬಾರ್ ಕೋಡ್ ನಮೂದಿಸಿದ ಐಡಿ ಕಾರ್ಡ್ ನೀಡುವ ಆಲೋಚನೆ ಇದ್ದು, ಅಧಿಕೃತ ಪತ್ರಕರ್ತರ ಪಟ್ಟಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರು ಒದಗಿಸಬೇಕು ಎಂದು ತಿಳಿಸಿದರು.

ಕೇಬಲ್ ಚಾನೆಲ್ ಗಳಲ್ಲಿ ಹಾಗೂ ಉಪಗ್ರಹ ಚಾನೆಲ್ ಗಳಲ್ಲಿ ಮೇಲ್ಕಂಡ ಆಕ್ಷೇಪಾರ್ಹ ಕಾರ್ಯಕ್ರಮ ಪ್ರಸಾರವಾದಲ್ಲಿ ಸಾರ್ವಜನಿಕರು ದೂರು ನೀಡಬಹುದು. ಜೊತೆಗೆ ಅನುಮತಿ ಇಲ್ಲದ ಯೂಟ್ಯೂಬ್ ಚಾನೆಲ್ ಗಳು ಲೋಗೋ ಬಳಸುವಂತಿಲ್ಲ. ನಕಲಿ ಪತ್ರಕರ್ತರು, ಹಣ ವಸೂಲಿ, ಅಕ್ರಮ ಚಟುವಟಿಕೆ ನಡೆಸುವ ಬಗ್ಗೆ ಗಮನಕ್ಕೆ ಬಂದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.












Click it and Unblock the Notifications