ವಿಜಯಪುರ; ಹಾಡಹಗಲೇ ಪಾಲಿಕೆ ಸದಸ್ಯೆ ಪತಿ ಹತ್ಯೆ
ವಿಜಯಪುರ, ಮೇ 06; ಕರ್ನಾಟಕ ವಿಧಾನಸಭೆ ಚುನಾವಣೆಗೆ 4 ದಿನಗಳು ಬಾಕಿ ಇರುವಾಗಲೇ ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿದೆ. ಮಹಾನಗರ ಪಾಲಿಕೆ ಸದಸ್ಯೆಯ ಪತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆಯಾದ ವ್ಯಕ್ತಿ ಕಾಂಗ್ರೆಸ್ ಪರವಾಗಿ ಪ್ರಚಾರದಲ್ಲಿ ತೊಡಗಿದ್ದ.
ಕೊಲೆಯಾದ ವ್ಯಕ್ತಿಯನ್ನು ಹೈದರ್ ಅಲಿ ನದಾಫ್ ಎಂದು ಗುರುತಿಸಲಾಗಿದೆ. ವಿಜಯಪುರ ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯೆ ನಿಶಾತ್ ಪತಿ ಹೈದರ್ ಅಲಿ ನದಾಫ್ ಮೇಲೆ ಶನಿವಾರ ದುಷ್ಕರ್ಮಿಗಳ ಗುಂಪು ಚಂದಾಪುರ ಕಾಲೋನಿಯಲ್ಲಿ ಗುಂಡಿನ ದಾಳಿ ನಡೆಸಿದೆ.

ಹಾಡಹಗಲೇ ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ನಡೆದ ಘಟನೆಯಿಂದಾಗಿ ಜನರು ಬೆಚ್ಚಿ ಬಿದ್ದಿದ್ದಾರೆ. ಶನಿವಾರ ಬೆಳಗ್ಗೆ ಹೈದರ್ ಅಲಿ ನದಾಫ್ ಮೇಲೆ ಈ ದಾಳಿಯಾಗಿದೆ. ದುಷ್ಕರ್ಮಿಗಳು ಪರಾರಿಯಾಗಿದ್ದು, ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಹೈದರ್ ಅಲಿ ನದಾಫ್ ರಸ್ತೆಯಲ್ಲೇ ಸಾವನ್ನಪ್ಪಿದ್ದಾರೆ.
ವಿಜಯಪುರ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಹತ್ಯೆ ನಡೆದಿದ್ದು ಏಕೆ? ಎಂದು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಹುಡುಕಾಟವನ್ನು ಆರಂಭಿಸಿದ್ದಾರೆ.

ಕರ್ನಾಟಕದಲ್ಲಿ ಮೇ 10ರ ಬುಧವಾರ ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಮತದಾನ ನಡೆಯಲಿದೆ. ಮೇ 13ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಿದ್ದು, ಅವರು ಸಹ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಗುಂಡಿನ ದಾಳಿ ನಡೆದಿದೆ.
ಕಾಂಗ್ರೆಸ್ ಪರವಾಗಿ ಪ್ರಚಾರ; ಹೈದರ್ ಅಲಿ ನದಾಫ್ ಪತ್ನಿ ನಿಶಾತ್ ವಾರ್ಡ್ ನಂಬರ್ 18ರಿಂದ ಪಕ್ಷೇತ ಅಭ್ಯರ್ಥಿಯಾಗಿ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಹೈದರ್ ಅಲಿ ನದಾಫ್ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರು. ಇವರು ರೌಡಿ ಶೀಟರ್ ಸಹ ಆಗಿದ್ದು, ಹಳೇ ವೈಷಮ್ಯದ ಹಿನ್ನಲೆಯಲ್ಲಿ ಹತ್ಯೆ ನಡೆದಿದೆಯೇ? ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೈದರ್ ಅಲಿ ನದಾಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲನಗರ ಪೊಲೀಸ್ ಠಾಣೆಯಲ್ಲಿ ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಶೀಘ್ರವೇ ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications