ವಿಜಯಪುರದಲ್ಲಿ ಹಳ್ಳಕ್ಕೆ ಉರುಳಿದ ವ್ಯಾನ್; ಅಜ್ಜಿ ಮೊಮ್ಮಗಳ ಸಾವು
ವಿಜಯಪುರ, ಮಾರ್ಚ್ 5: ಓಮ್ನಿ ವ್ಯಾನ್ ಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದು ವ್ಯಾನ್ ಗುಂಡಿಗೆ ಉರುಳಿ ಬಿದ್ದು ಅಜ್ಜಿ, ಮೊಮ್ಮಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಲ್ಹಾರ ಬಳಿ ಜರುಗಿದೆ.
ಕೊಲ್ಹಾರ ಪಟ್ಟಣದ ಯುಕೆಪಿ ವೃತ್ತದಲ್ಲಿ ನಡೆಯುತ್ತಿರುವ ಅಂಡರ್ ಪಾಸ್ ಕಾಮಗಾರಿಗೆಂದು ಗುಂಡಿ ತೋಡಲಾಗಿತ್ತು. ಬುಧವಾರ ತಡರಾತ್ರಿ ಮುಂದೆ ಹೊರಟಿದ್ದ ಓಮ್ನಿ ವ್ಯಾನ್ ಗೆ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಈ ಸಂದರ್ಭ ವ್ಯಾನ್ ಉರುಳಿಬಿದ್ದಿದೆ. ಘಟನೆಯಲ್ಲಿ ಓಮ್ನಿ ವ್ಯಾನ್ ನಲ್ಲಿದ್ದ ಅಜ್ಜಿ ಮೊಮ್ಮಗಳು ಚಾಂದಬೀ ಅಂಗಡಿ (45) ಹಾಗೂ ಮಹೀರಾಬಾನು ದೊಡಮನಿ (3) ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ನಾಲ್ವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಚಾಲಕ, ಕ್ಲೀನರ್ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಬಸ್ ವಶಕ್ಕೆ ಪಡೆದಿದ್ದಾರೆ. ಈ ಒಂದು ಅವಘಡಕ್ಕೆ ಅಂಡರ್ ಪಾಸ್ ಅವೈಜ್ಞಾನಿಕ ಕಾಮಗಾರಿಯೇ ಕಾರಣವೆಂದು ಸಾರ್ವಜನಿಕರು ದೂರಿದ್ದಾರೆ. ಕೊಲ್ಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications